ಹೊಸವರ್ಷಕ್ಕೆ…

ಪ್ರತಿವರ್ಷದಂತೆ ಕಳೆದ ೨೦೦೮ ಕೂಡ ಸಿಹಿ-ಕಹಿ ಮಿಶ್ರಣ. ನನ್ನದೇ ಚಿಕ್ಕ ಪರಧಿಯೊಳಗೆ ಈ ವರ್ಷ ಸಿಹಿಯ ಪಾಲು ಸ್ವಲ್ಪ ಹೆಚ್ಚೇ ಅನ್ನಬಹುದೇನೋ :). ಋಣಾನುಬಂಧ ರೂಪೇಣ ಪಶುಪತ್ನಿಸುತಾಲಯ ಅಲ್ಲವೇ ? ಕಳೆದ ವರ್ಷದಲ್ಲಿ ಸುತ ಮತ್ತು ಆಲಯವನ್ನು ಪಡೆದ ಆನಂದ ನನ್ನದಾಗಿದೆ. ಹತ್ತಾರು ವರ್ಷಗಳ ನಂತರ ಅಪ್ಪ ಅಮ್ಮನೊಂದಿಗೆ ೬ ತಿಂಗಳಷ್ಟು ಕಾಲ ಕಳೆದದ್ದು ಖುಷಿ ಕೊಟ್ಟಿದೆ. ಹತ್ತು ವರ್ಷಗಳಲ್ಲಿ ಮೊದಲ ಬಾರಿಗೆ ಅಮೇರಿಕಕ್ಕೆ ಬಂದ ಅಪ್ಪ-ಅಮ್ಮಗೆ ಸುತ್ತಲಿನ ಕೆಲ ಜಾಗ ಬಿಟ್ಟು ಬೇರೇನನ್ನೂ ತೋರಿಸಲಿಕ್ಕಾಗದ ಅಸಮಾಧಾನವೂ ಇದೆ. ಎಷ್ಟೋ ವರ್ಷಗಳ ನಂತರ ದಸರಾ ದೀಪಾವಳಿಗಳನ್ನು ಭಾರತದಲ್ಲಿ ಎಲ್ಲರೊಡನೆ ಆಚರಿಸಿ ತೃಪ್ತಿ ಹಾಗೂ ಅದರ ಜೊತೆಗೆ ಭಾರತದಲ್ಲಿ ಅಷ್ಟು ದಿನ ಇದ್ದರೂ ಭೆಟ್ಟಿಯಾಗಲೇ ಬೇಕು ಎಂದುಕೊಂಡಿದ್ದ ಹಲವರನ್ನು ಮಾತು ಕೂಡ ಆಡಿಸಲಿಕ್ಕಾಗದೇ ಹಾಗೇ ಮರಳಿ ಬಂದದ್ದರ ಬಗ್ಗೇ ಅತೃಪ್ತಿಯೂ ಇದೆ. ೯೦ ಮೀರಿದ ನನ್ನ ತಾತ, ೬ ತಿಂಗಳ ನನ್ನ ಮಗನ ಭೆಟ್ಟಿ, ಅದರಂಗವಾಗಿ ತಾತನಿಗೆ ಹೂವು ಹಾರಿಸಿದ ಸಂಭ್ರಮದ ಜೊತೆಗೆ ಗಟ್ಟಿ ಮನುಷ್ಯ ತಾತನನ್ನು ವಯಸ್ಸು ಅಲ್ಲಾಡಿಸಿ ಮಗುವಿನಂತೆ ಮಾಡಿರುವದೂ ಇದೇ ೨೦೦೮ರಲ್ಲಿ. ವೈಯಕ್ತಿಕವಾಗಿ ಹಲವು ಖುಷಿ ಕೊಟ್ಟ ದಿನಗಳು, ಅದೇ ರೀತಿ ಆರಂಭಿಸಿ ಅರ್ಧಕ್ಕಿಟ್ಟ ಕೆಲಸಗಳೂ ಹಲವು. ಹೊಸವರ್ಷದಲ್ಲಿ ಅವುಗಳನ್ನು ಮತ್ತೆ ಎತ್ತಿಕೊಳ್ಳಬೇಕು.

ಉಳಿದಂತೆ ೨೦೦೮ರ ನೆನಪುಗಳು…

ಕುಸಿದು ಬಿದ್ದ ಷೇರು ಮಾರುಕಟ್ಟೆ, ದಿವಾಳಿಯೆದ್ದ ಬ್ಯಾಂಕುಗಳು, ಗೊಬ್ಬರಕ್ಕಾಗಿ ರೈತರ ಹೋರಾಟ, ಅನವಶ್ಯಕವಾಗಿ ಗೋಲಿಬಾರಿಗೆ ಬಲಿಯಾದವರು, ದೇವರ ಉತ್ಸವಗಳ ನೂಕು ನುಗ್ಗಲಿನಲ್ಲಿ ಸಿಕ್ಕಿ ಸತ್ತವರು, ಬೆಂಗಳೂರು ಸೇರಿದಂತೆ ದೇಶದಲ್ಲಿ ಹಲವು ಕಡೆ ಸಿಡಿದ ಬಾಂಬುಗಳು, ಬಲಿಯಾದ ಅಮಾಯಕರು, ಎಲ್ಲಕ್ಕೂ ಕಲಶಪ್ರಾಯವಾಗಿ, ಭಯೋತ್ಪಾದನೆಯ ಹೊಸ ಅಂಕ ಶುರುವಾದಂತೆ ಕಂಡಲ್ಲಿ ಕಂಡ ಕಂಡವರಿಗೆ ಗುಂಡಿಟ್ಟು ಕೊಂದು ಭಾರತವನ್ನೆಲ್ಲ ತಲ್ಲಣಿಸಿದ ಮುಂಬಯಿ ಘಟನೆ. ಅದನ್ನು ನಾ ಮುಂದು ತಾ ಮುಂದು ಎಂದು ತೋರಿಸಿದ ಮಾಧ್ಯಮಗಳು, ಜಾತಿಭೇದವಿಲ್ಲದಂತೆ ಜನ ಬಲಿ ತೆಗೆದುಕೊಂಡ ಕೃತ್ಯದಿಂದ ದೇಶದಲ್ಲಿ ಕೋಮು ದಂಗೆಯಾಗಬಹುದು ಎಂದೆಲ್ಲ ಬರೆದ ಪತ್ರಿಕೆಗಳು, ಭಾರತ ಪಾಕಿಸ್ತಾನಕ್ಕೆ ಕ್ರಿಕೆಟ್ ಆಡಲು ಹೋಗಲಿಲ್ಲ ಎನ್ನುವದರಿಂದ ಹಿಡಿದು ನಗರೀಕರಣವೇ ಇಂತಹ ಕೃತ್ಯಗಳಿಗೆ ಕಾರಣ ಎನ್ನುವವರೆಗೆ; ಭಾರತ ಪಾಕಿಸ್ತಾನದ ಮೇಲೆ ಯುದ್ಧಕ್ಕೆ ಹೋಗಬೇಕು ಎನ್ನುವದರಿಂದ ಹಿಡಿದು ಭಾರತ ಪಾಕಿಸ್ತಾನವನ್ನೂ ಒಳಗಿನಿಂದಲೇ ಘಾಸಿಗೊಳಿಸಬೇಕು ಎನ್ನುವವರೆಗಿನ ಪರಿಣಿತರ ಹೇಳಿಕೆಗಳು. ಸ್ವತಂತ್ರ ಭಾರತದ ಕಣ ಕಣವನ್ನು ಪರೀಕ್ಷೆಗೊಡ್ಡಿದ ಘಟನೆ ವಿರೋಧಿಸುವಲ್ಲಿ ಮುಂಚೂಣಿಯಲ್ಲಿದ್ದ ಯೋಧರ ಗೋರಿಗಳ ಮೇಲೆ ತಮ್ಮ ಸಾಮ್ರಾಜ್ಯ ಕಟ್ಟಬೇಕೆನ್ನುವ ಮತಿಹೀನ ರಾಜಕಾರಣಿಗಳು, ಎಲ್ಲ ಮಿತಿ ಮೀರಿದ ಮತಾಂತರದ ಚರ್ಚೆಗಳು, ತತ್ಕ್ಷಣದ ಹೊಡೆತ ಬಡಿತಗಳನ್ನು ಮೀರಿ ಸಮಗ್ರವಾಗಿ ಸಮಸ್ಯೆಯ ಇತ್ಯರ್ಥಕ್ಕೆ ಯೋಚಿಸದ so called ಹಿಂದೂ ಸಂಘಟನೆಗಳು, ಅವುಗಳ ಹಿಂಬಾಲಕರು. ಮುಗಿಯುವದೇ ಇಲ್ಲವೇನೋ ಈ ಪಟ್ಟಿ. ಇದರ ಮುಂದೆ, ಭಾರತದಂತರೀಕ್ಷ ಸಾಧನೆಯ ಹೊಸ ಗರಿ – ಚಂದ್ರನತ್ತ ನೆಗೆದ ಇಸ್ರೋ, ಓಲಂಪಿಕ್ಸಿನಲ್ಲಿ ಮೊದಲ ವೈಯಕ್ತಿಕ ಚಿನ್ನ, ಅಮೇರಿಕದಲ್ಲಿ ಬರಾಕ್ ಒಬಾಮಾನ ಗೆಲುವು, ಪ್ರತಿ ಆಟದಲ್ಲೂ ಗೆಲ್ಲಬಹುದು ಎನ್ನುವ ವಿಶ್ವಾಸದಿಂದ ಆಡತೊಡಗಿರುವ ಭಾರತದ ಕ್ರಿಕೆಟ್ ತಂಡ, ಎಲ್ಲ distraction ಮೀರಿ ತಮ್ಮಷ್ಟದ ಸರ್ಕಾರ ಚುನಾಯಿಸುವ ಭಾರತದ ಜನತೆ, ಇತ್ಯಾದಿಯೆಲ್ಲ ಹೊಳಪು ಕಳೆದುಕೊಳ್ಳುತ್ತವೆ ಅನಿಸಿದರೂ ಹೊಸದೊಂದು ವರ್ಷಕ್ಕೆ ಇಂತಹವುಗಳೇ  ಬೆಳಕಿನ ಪುಂಜಗಳಾಗುವವು.

ಈ ಬಾರಿ ಭಾರತದಿಂದ ತಂದ ಪುಸ್ತಕ ‘ಉತ್ಸಾಹಗಾಥಾ’ದ ಮುನ್ನುಡಿಯಲ್ಲಿನ ಆನಂದಕಂದರ ಈ ಮಾತುಗಳು ಹಾಗೂ ಅದೇ ಸಂಕಲದಲ್ಲಿನ “ಏತಕಾಗಿ ಬಂದೆ?” ಎಂಬ ಕವನದ ಕೆಲ ಸಾಲುಗಳೂ ಬರಲಿರುವ ವರ್ಷಕ್ಕೆ ಹುರುಪು ಕೊಡಲಿ ಎನ್ನುವ ಆಶಯದೊಂದಿಗೆ,

“… ಸಾಧಕನಲ್ಲಿ ಉತ್ಸಾಹವೃತ್ತಿ ಅವ್ಯಾಹತವಾಗಿ ಜಾಗೃತವಾಗಿರಬೇಕಾಗುವದು. ಮುಂಗಾರು ಮೋಡಗಳಂತೆ – ಜೀವನದಲ್ಲಿ ಆಗಾಗ ಮುಸುಕುವ – ದುಃಖ ವಿಷಾದ ಪ್ರಸಂಗಗಳಲ್ಲಿ, ನಿರಾಶನಾಗಿ ನಿಷ್ಕ್ರಿಯನಾಗಿ ಕುಳಿತುಕೊಳ್ಳುವದು ಜೀವನ ಸಾಧಕನ ಲಕ್ಷಣವಲ್ಲವೆಂಬುದು ನನ್ನ ಭಾವನೆ. ವಿಷಾದ-ದುಃಖ ಪ್ರಸಂಗಗಳು ಶಾಶ್ವತವಾಗಿ ನಿಲ್ಲುವಂತಹವುಗಳಲ್ಲ; ಮಾನವನು ತನ್ನ ಯುಕ್ತ ಕರ್ತವ್ಯಗಳಿಂದ ಅವುಗಳನ್ನು ಸಹಜವಾಗಿ ಬದಲಿಸಬಲ್ಲನೆಂಬುದು ನನ್ನ ಮನವರಿಕೆಯ ಸಂಗತಿ. ಎಂತಲೇ ನನ್ನ ಹೆಚ್ಚು ಕೃತಿಗಳು ಆಶಾವಾದಿಯ ಉತ್ಸಾಹ ಭಾವವನ್ನು ಚಿತ್ರಿಸುವಂತಹವೇ ಆಗಿರುವವು.”

ಏನ ತಂದಿರುವೆ ನೀನು, ಹೊಸದಿನವೆ,
ಏತಕಾಗಿ ಬಂದೆ?
ಮಾನವತೆಯ ಭೇರಿಯನು ಮೊಳಗಿಸುವ
ತ್ರಾಣ ನಿನ್ನೊಳಿಹುದೇ-ತಂದೆ,
ಏತಕಿಂದು ಬಂದೆ ?

…..

ಕಳೆದ ದಿನಗಳಾ ಬಳಿಯೊಳೆ ನೀನೂ
ಇಳೆಗಿಳಿತಂದಿಹೆಯೋ ?
ತಿಳಿವು ಕಲೆಯ ಬೆಳೆಗಳನೇನಾದರು
ಸಲಿಸಲು ಬಂದಿಹೆಯೋ ?
ನೀನೂ ಹಳದಿನ-ದಂತಿರೆ ಈ ಕ್ಷಣ
ಸಾಗು, ಶರಣು ಎಂಬೆ….
ಏನ ತಂದಿರುವೆ ನೀನು ಹೊಸದಿನವೆ,
ಏತಕಾಗಿ ಬಂದೆ ?

…..

ಕಾಲರಾಯ ಕಿವಿಮಾತನಾವುದನು
ಹೇಳಿ ಕಳುಹಲಿಲ್ಲೆ ?
ಬಾಳೆ ಗೋಳು-ಗೋಳಾದ ಬವಣೆಯನು
ನೋಡು ತೀಳಿವುದಿಲ್ಲೇ!
ಇದಕೆ ಉಪಾಯ — ಇದ್ದರೆ ಗೆಳೆಯ–
ಕರೆವೆ ಬಾರೋ ಮುಂದೆ….
ಏನ ತಂದಿರುವೆ ನೀನು ಹೊಸದಿನವೆ
ಏತಕಾಗಿ ಬಂದೆ

ಜಗವ ಮುಸುಕಿರುವ ಹಗೆಯ ಹುಸಿ ಕವಡ
ತೆಗೆವ ಬಲುಹು ಇಹುದೇ ?
ಮೃಗಗಳನೂ ಹಿಂದೊಗೆವ ಮಾನವರ
ತಿದ್ದುವ ಚಲವಿಹುದೇ ?
ಇದ್ದರೆ ಮಣಿವು — ಇರದಿರೆ ದಣಿವು !
ಏತಕಾಗಿ ಬಂದೆ ?
ಏನ ತಂದಿರುವೆ ನೀನು ಹೊಸದಿನವೆ
ಏತಕಾಗಿ ಬಂದೆ

(ಆನಂದಕಂದರ ಕವನ ಸಂಕಲನ ‘ಉತ್ಸಾಹಗಥಾ’. ೧೯೭೨ರಲ್ಲಿ ಪ್ರಕಟವಾದದ್ದು. ಬೇಂದ್ರೆ ಸಮಕಾಲೀನರೆನಿಸುತ್ತದೆ ಆನಂದಕಂದ ಕಾವ್ಯನಾಮದ ಬೆಟಗೇರಿ ಕೃಷ್ಣಶರ್ಮ ಅವರು. ಸುಮಾರು ೩೦ ಕವನಗಳ ಚಿಕ್ಕ ಸಂಕಲನ ಧಾರವಾಡದ ‘ಪುರಂದರ ಪ್ರಕಟನಾಲಯ’ ದಿಂದ ಪ್ರಕಟವಾಗಿದೆ. ೧ನೇ ಆವೃತ್ತಿಯ ಬೆಲೆ ೩ ರೂಪಾಯಿ)

Advertisements