ಒಂದಷ್ಟು ನ್ಯಾಯ

ಇಂಟರ್ನೆಟ್ಟು, ಬ್ಲಾಗುಗಳಲ್ಲಿ ದೇವರು, ಧರ್ಮ, ಚಾರ್ಲಿ ಚಾಪ್ಲಿನ್ನು, ಅವನ ಧರ್ಮ, ಅವನ ಮೂರ್ತಿ ಸ್ಥಾಪಿಸ್ತೀನಿ ಅಂತ ಹೊರಟವರ ಕರ್ಮ ಎಲ್ಲ ಓದ್ತಾ ಓದ್ತಾ ಹಾಗೇ  ತುಳಸೀವನಕ್ಕೆ ಹೋದಾಗ ಅಲ್ಲಿ ‘ಹ್ಯಾಂಗೆ ಮಾಡಲಯ್ಯ ಕೃಷ್ಣ  ಪೋಗುತಿದೆ ಆಯುಷ್ಯ’ ನೋಡಿ/ಕೇಳಿ ಜ್ಞಾನೋದಯ ಆದಂಗಾಗಿದೆ :). ಹಿಂದೆ ಯಾವಾಗಲೋ ಸಂಸ್ಕೃತ ಕ್ಲಾಸಲ್ಲಿ ಓದಿದ ನ್ಯಾಯಗಳ ನೆನಪಾಯ್ತು, ನೆನಪಾದವನ್ನೊಂದು ಕಡೆ ಬರ್ದಿಟ್ಟರೆ ಒಳ್ಳೇದು. ಮುಂದೆ ಮತ್ತೆ ಮೌಸ್ ಕ್ಲಿಕ್ ಮಾಡಿಕೋತ ಎಲ್ಲೆಂದರಲ್ಲೆ ಹಾರಿ ಹೋಗಿ, ಬೇಕು-ಬೇಡಾದದ್ದೆಲ್ಲ  ಓದ್ತಾ ಸಮಯ  ಸೋರಿ ಹೋಗೋದನ್ನ ತಡಿಲಿಕ್ಕೆ ಉಪಯೋಗ ಆಗಬಹುದು.

siberianbird_yamuna-cropಹಂಸ-ಕ್ಷೀರ ನ್ಯಾಯ : ಹಂಸ ಪಕ್ಷಿಗೆ ಹಾಲು ನೀರು ಬೆರಸಿ ಕೊಟ್ಟರೆ ಹಾಲಷ್ಟೇ ಕುಡುದು ನೀರು ಹಂಗೆ ಬಿಡ್ತದಂತೆ. ಹೌದಾ? ನಾನು ನೋಡಿಲ್ವಲ್ಲ. ಹಂಗ ನೋಡಿದರ ಮನುಷ್ಯರೂ ಹಾಲು ಕುಡಿದು ನೀರು ಬಿಡೋರೆ. ಇನ್ನು ಹಂಸದ್ದೇನು ಸ್ಪೆಷ್ಯಾಲಿಟಿ ? ಛೆ.. ದೇವರು ಇದ್ದಾನೊ ಇಲ್ಲೊ ಎಲ್ಲಿದ್ದಾನ, ಹ್ಯಾಂಗಿದ್ದಾನ, ತರ್ಕ ಮಾಡಿದ್ದನ್ನ ಓದಿದ್ದರ ಪರಿಣಾಮ ಇಷ್ಟೆಲ್ಲ ಪ್ರಶ್ನೆ. ಇರಲಿ. ಹಂಸ ಪಕ್ಷಿ ಹಂಗ ಮಾಡ್ತದೋ ಇಲ್ಲೋ ಗೊತ್ತಿಲ್ಲ, ಆದರ ಈ ವೆಬ್ ದುನಿಯಾದಾಗ ನಾನು ಈಗ ಜರೂರು ಅಂಥ ಕೆಲ್ಸ ಮಾಡಬೇಕಾಗೇದ.

ಸೂಚಿ ಕಟಾಹ ನ್ಯಾಯ : ಹಂಡೆ ಮಾಡಿಕೊಡು ಅಂತ ಕೇಳವ್ರೂ ಮತ್ತ ಸೂಜಿ ಮಾಡಿಕೊಡು ಅಂತ ಕೇಳವ್ರೂ ಒಟ್ಟಿಗೆ ಬಂದ್ರ ಸೂಜಿ ಮಾಡಿಕೊಡೋ ಸಣ್ಣ ಕೆಲಸ ಮುಗಿಸಿ ಆಮ್ಯಾಲೆ ಹಂಡೆ ಮಾಡಿಕೊಡಬಹುದು ಅಂತ ಹೇಳ್ತದಂತ. ಇದನ್ನ ಎಲ್ಲ ವಿಷಯಕ್ಕೂ ಅನ್ವಯಿಸಲಿಕ್ಕೆ ಬರೋದಿಲ್ಲ ಹೌದಲ್ಲೋ ? ಈಗ ಇದು ಒಂದೇ ಪೇಜ್ ಓದಿ ಮುಂದ  ಕೆಲಸ ಮಾಡ್ತಿನೀ ಅಂತ ಅಂದುಕೊಂಡರ ಅದು ಒಂದೇ ಪೇಜಿಗೆ ಮುಗಿಸಲಿಕ್ಕೆ ಯಾವತ್ತರ ಆಗ್ತದೇನು ?  ದಿವಸದಾಗ ಹೆಚ್ಚಿನ ಪಾಲನ್ನ ಹಂಡೆ ಮಾಡಿಕೊಡೊ ಅಂಥ ಕೆಲಸಕ್ಕ (ಅಥವ ಸ್ಟೀಫನ್ ಕೋವಿಯ ಪುಸ್ತಕದ taking care of big rocks ನಂಥ ಕೆಲಸಕ್ಕ)  ಬಳಸಿದರ ಒಳ್ಳೆದು ಅಲ್ವಾ ? ಅದಕ್ಕ ಈ ಸೂಚಿ ಕಟಾಹ ನ್ಯಾಯಾನ ಭಾಳ ಕೇರ್-ಫುಲ್ ಆಗಿ ಬಳಸ್ಬೇಕು.

ಮಾರ್ಜಾಲ ಕಿಶೋರ ನ್ಯಾಯ : ಬೆಕ್ಕು ತನ್ನ ಮರೀನ ತಾನೇ ಬಾಯಾಗ ಕಚ್ಚಿಕೊಂಡು ಹಿಡದು ಅಡ್ಯಾಡತದ, ಅದರ ರಕ್ಷಣಾ ಮಾಡ್ತದ ಹೌದಲ್ಲೋ ? ಇದನ್ನ ದೇವ್ರು  ಕೆಲವು ಸೆಲೆಕ್ಟ್ ಭಕ್ತರನ್ನ ಹೆಂಗ ಕಾಪಾಡ್ತಾನ ಅನ್ನೋದನ್ನ ಹೇಳೋದಕ್ಕ ಬಳಸೋದನ್ನ ಕೇಳೀನಿ. ಉದಾಹರಣೆಗೆ ಧ್ರುವ, ಸಣ್ಣ ಹುಡುಗ ತಪಸ್ಸು ಮಾಡಿ ನಾರಾಯಣನ ಪ್ರತ್ಯಕ್ಷ ಮಾಡಿಕೊಂಡ. ಅವನಿಗೆ ಎಲ್ಲೆಲ್ಲಿ ಬೇಕೋ ಅಲ್ಲಿ ದೇವರು ತಾನೇ ಅವನ ರಕ್ಷಣಾ ಮಾಡಿದ. ಅದೇ ರೀತಿ ಪ್ರಹ್ಲಾದ. ಈ ಇಂಟರ್ನೆಟ್ಟಿಗೆ ಇದನ್ನ ಹೆಂಗ apply ಮಾಡಬಹುದು ? ಬಹುಷಃ ಹೆಂಗ ಅಂದರ ಯಾವ ವಿಷಯದ ಬಗ್ಗೆ ಓದಬೇಕು, ಯಾವುದರ ಬಗ್ಗೆ ಓದಿ ಅಲ್ಲೇ ಮರೀ ಬೇಕು ಮತ್ತು ಯಾವುದರ ಬಗ್ಗೆ ತಲೀ ಕೆಡಿಸಿಕೋ ಬೇಕು ಅನ್ನೋದನ್ನ ಬಹಳ ಜಾಗರೂಕತೆಯಿಂದ ನೋಡಿಕೋ ಬೇಕು.

ಮರ್ಕಟ ಕಿಶೋರ ನ್ಯಾಯ : ಮಂಗ ತನ್ನ ಮರೀನ ಹೆಂಗ ನೋಡಿಕೋತದ ? ಮರೀನೆ ಪಾಪ ಗಟ್ಟಿಯಾಗಿ ತಬ್ಬಿಕೊಂಡು ಹಿಡಕೋ ಬೇಕು ಅಮ್ಮನ್ನ. ಇಲ್ಲಾ ಅಂದರ ಅಮ್ಮ ಒಂದು ಗಿಡದಿಂದ ಇನ್ನೊಂದು ಗಿಡಕ್ಕ ಹಾರೋ ಕಾಲಕ್ಕ ಮರಿ ಬಿದ್ದು ಹೋಗಿ ಬಿಡ್ತದ ಹೌದಲ್ಲೋ ? ಇದನ್ನೂ ದೇವರು ಭಕ್ತರ ನಡುವಿನ ಸಂಬಂಧ ತೋರಿಸಲಿಕ್ಕೆ ಬಳಸ್ತಾರ. ಹೆಚ್ಚಾಗಿ ಎಲ್ಲಾ ಭಕ್ತರೂ ಇದೇ ಕೆಟಗರೀಲಿ ಬರೋದಂತ. ಅವರೇ ಗಟ್ಟಿಯಾಗಿ ಹಿಡಕೋ ಬೇಕು ದೇವರನ್ನ. ಮತ್ತ ಇಲ್ಲಿ ದೇವರನ್ನ ಮಂಗ ಅಂದ್ಯಾ  ಅಂತ ಜಗಳಕ್ಕ ಬರಬೇಡಿ ಪ್ಲೀಸ್ ;). ಈ ನ್ಯಾಯ ಹೆಂಗ apply ಮಾಡೋದು ? ಒಂದು ಕೊಂಬಿ ಇಂದ ಇನ್ನೊಂದಕ್ಕ ಹಾರೋ ಮರ್ಕಟಕ್ಕೂ ಒಂದು ಪೇಜಿಂದ ಇನ್ನೊಂದಕ್ಕೆ ಹಾರೋ ಮನಸ್ಸಿಗೂ ಸಾಮ್ಯ ಇದೆ. ಹಾಗೇ ಹಾರ್ತಾ ಹೋಗೋ ಮನಸ್ಸನ್ನೂ ಗಟ್ಟಿಯಾಗಿ ಹಿಡಿದು ನಮಗೆ ನಿಜವಾಗಿ ಬೇಕಾದ ಕಡೆ ತೊಡಗಿಸಬೇಕು ಅಂತೇನಾದರೂ ತಿಳೀ ಬಹುದೇನೊ.

ಬೀಜ ವೃಕ್ಷ ನ್ಯಾಯ : ಈ ನ್ಯಾಯ ಏನು ಹೇಳ್ತದೆ ಅಂತ ನನಗೆ ಗೊತ್ತಿಲ್ಲ. ಅಕಸ್ಮಾತ್ ಇದೇನಾದರೂ ಬೀಜ ಮೊದಲೊ ಗಿಡ ಮೊದಲೊ ಅನ್ನೋ ವಿಷಯದ ಮೇಲಿಂದಾದ್ರೆ ಇಂಥ ಪ್ರಶ್ನೆಗಳ ಸುತ್ತ ಗಿರಕಿ ಹೊಡೆಯುವ ಬ್ಲಾಗು/ಕಮೆಂಟುಗಳನ್ನ ಆದಷ್ಟು ದೂರದಿಂದಲೆ ನೋಡಿಕೊಂಡು ಇರಬೇಕು ಅಂತ ಇಟ್ಕೋತೀನಿ :).

ನಿಮಗೂ ಇಂಥ ನ್ಯಾಯಗಳು ಇನ್ನಷ್ಟು ಗೊತ್ತಿದರೆ ಹಂಚಿಕೊಳ್ಳಿ.

(ಚಿತ್ರ: ಯಮುನಾ ನದಿಯಲ್ಲಿ ವಿಹರಿಸುವತ್ತಿರುವ ಸೈಬೀರಿಯನ್ ಪಕ್ಷಿ. ನನ್ನ ತಮ್ಮ ಬದರಿ ತೆಗೆದ ಚಿತ್ರ)

Advertisements