ಸುಭಾಷಿತ

ಬಹಳ ಹಿಂದೆ ಈ ಸುಭಾಷಿತವನ್ನ ಬರೆದಿಟ್ಟುಕೊಂಡಿದ್ದೆ, ಕಣ್ಣಿಗೆ ಕಾಣೋ ಹಾಗೇ ಇರ್ಲಿ ಅಂತ ಆಫೀಸ್ ಟೇಬಲ್ಲಿನ ಮೇಲೆ ಇಟ್ಟುಕೊಂಡಿದ್ದೆ. ಇವತ್ತು ಅದನ್ನ ಕನ್ನಡಕ್ಕೆ ಅನುವಾದ ಮಾಡಬೇಕು ಅನಿಸ್ತು.

ವಿದ್ಯೆಯಿಪ್ಪುದು ವಿನಯ
ವಿನಯದಿಂ ಬಪ್ಪುದರ್ಹತೆಯು
ಅರ್ಹತೆಯೆ ತಂದಿಪ್ಪುದು ಹಣವ
ಹಣದಿಂದ ಧರ್ಮ ಅದರಿಂದ ಸುಖ

(ವಿದ್ಯಾ ದದಾತಿ ವಿನಯಂ ವಿನಯಾದ್ಯಾತಿ ಪಾತ್ರತಾಂ
ಪಾತ್ರತ್ವಾದ್ಧನಮಾಪ್ನೋತಿ ಧನಾದ್ಧರ್ಮಂ ತತಃ ಸುಖಂ)

ಹಂಸಾನಂದಿ ಅವರು ಮಾಡೊ ಸುಭಾಷಿತಗಳ ಅನುವಾದ ನನಗಂತೂ ಭಾಳಾ ಇಷ್ಟ. ಅವರು ತಮ್ಮ  ಹಂಸನಾದ ಬ್ಲಾಗಿನಲ್ಲಿ ಹಾಕಿದ ಸುಭಾಷಿತಗಳಲ್ಲೆ ಕೆಲವನ್ನ ನಾನೂ ಅನುವಾದ ಮಾಡಿಟ್ಕೊಂಡಿದ್ದೆ. ಒಳ್ಳೊಳ್ಳೆ ಸುಭಾಷಿತಗಳನ್ನ, ಅನುವಾದಗಳನ್ನ ಹಾಕ್ತಿರೋದಕ್ಕೆ ಅವರಿಗೆ ಧನ್ಯವಾದಗಳನ್ನ ಹೇಳ್ತಾ ನನ್ನ ಅನುವಾದಗಳನ್ನ ಹಾಕ್ತಾ ಇದ್ದೇನೆ.

ಸದ್ಗುಣಗಳೆ ದೂತರಾದಾಗ ಸಜ್ಜನರು ದೂರದಲ್ಲಿದ್ದರೇನಾಯ್ತು
ಕೇದಗೆಯ ಕಂಪ ಮೂಸಲು ತಾವೇ ಬಂದಾವು ದುಂಬಿಗಳು

(ಗುಣಾಃ ಕರೋತಿ ದೂತತ್ವಂ ದೂರೇsಪಿ ವಸತಾಂ ಸತಾಂ|
ಕೇತಕೀಗಂಧಮಾಘ್ರಾಯ ಸ್ವಯಮಾಯಾಂತಿ ಷಟ್ಪದಾಃ ||)

ಹುಡುಕಿಟ್ಟಿರಬೇಕು ಹಾದಿ ಒದಗುವ ಕುತ್ತುಗಳೆಣಿಸಿ
ತೋಡುವುದುಂಟೆ ಭಾವಿ ಮನೆ ಹೊತ್ತಿ ಉರಿವಾಗ

(ಚಿಂತನೀಯಾ ಹಿ ವಿಪದಾಂ ಆದೌ ಏವ ಪ್ರತಿಕ್ರಿಯಾ |
ನ ಕೂಪಖನನಂ ಯುಕ್ತಂ ಪ್ರದೀಪ್ತೇ ವಹ್ನಿನಾ ಗೃಹೇ ||)

ಹಣ ಕಸಿವ ಗುರುಗಳು ಸಿಕ್ಕಾರು ಸಾಕಷ್ಟು ಕಲಿವರ
ಮನ ಕಸಿವ ಗುರುಗಳು ವಿರಳ ಲೋಕದೊಳು

ಹೊತ್ತಿಗೆಯಲ್ಲಿನ ಅರಿವು ಮತ್ತೊಬ್ಬರ ಕೈಗಿತ್ತ ಹಣ
ಹೊತ್ತಿಗೆ ಹತ್ತಿರವಿರದಿರೆ ಅದು ಅರಿವಲ್ಲ ಹಣವಲ್ಲ

ಉರಿದು ಬೂದಿಯಾದ ದೇಹ ತಿರುಗಿ ಬರುವದೆ
ಇರುವಾಗ ಸಾಲ ಮಾಡಿದರೂ ಸರಿ ತುಪ್ಪ ಕುಡಿ

(ಭಸ್ಮೀಭೂತಸ್ಯ ದೇಹಸ್ಯ ಪುನರಾಗಮನಂ ಕುತಃ |
ತಸ್ಮಾತ್ ಸರ್ವ ಪ್ರಯತ್ನೇನ ಋಣಂ ಕೃತ್ವಾ ಘೃತಂ ಪಿಬೇತ್ ||)

Advertisements