ಕಲತ್ರವಸ್ತ್ರಕೃತಾಲಯಂ…

ಸಮುದ್ರ ಮಥನದಲ್ಲಿ ಹುಟ್ಟಿದ ಲಕ್ಷ್ಮಿ ನಾರಾಯಣನನ್ನು ವರಿಸಿದ ಮೇಲೆ ಸಮುದ್ರ ರಾಜನ ಪ್ಲ್ಯಾನ್ ಹೀಗಿತ್ತಂತೆ..

ಉನ್ನತ ನವರತ್ನಮಯವಾದ ಅರಮನೆಯ
ಚೆನ್ನೇಮಗಳಿಂದ ವಿರಚಿಸಿ
ತನ್ನ ಅಳಿಯನಿಗೆ ಸ್ಥಿರವಾಗಿ ಮಾಡಿಕೊಟ್ಟ
ಇನ್ನೊಂದು ಕಡೆಯಡಿ ಇಡದಂತೆ ||

– ಶ್ರೀ ವಾದಿರಾಜರ ಲಕ್ಷ್ಮೀ ಶೋಭನ

ಸಮುದ್ರದಲ್ಲೇ ಮನೆ ಮಾಡಿಕೊಂಡು ಇದ್ದ ಮೇಲೆ ನೋಡಿ ಏನಾಯ್ತಂತೆ..

ಪುರಾಪ್ಯಜೇಯೋ ಮುರಜಿತ್ಕಿಲಾತ್ರ
ಪುರೀಂ ವಿಧಾಯಾಭವದತ್ಯಜೇಯಃ
ಮಮೇತ್ಥಮಾಭಾತಿ ಕಲತ್ರವಸ್ತ್ರಕೃತಾ-
ಲಯಂ ಕಃ ಖಲು ಜೇತುಕಾಮಃ
– ಶ್ರೀ ವಾದಿರಾಜರ ರುಕ್ಮಿಣೀಶ ವಿಜಯ ಅಧ್ಯಾಯ ೧೬, ನುಡಿ ೫೯

(ಮೊದಲೇ ಯಾರಿಂದಲೂ ಜಯಿಸಲಶಕ್ಯನಾದ ಮುರವೈರಿಯಾದ ಕೃಷ್ಣನು ಸಮುದ್ರವನ್ನಾಶ್ರಯಿಸಿ ಇನ್ನೂ ಸುತರಾಂ ಜಯಿಸಲಶಕ್ಯನೇ ಆದನು. ನನಗೆ ಹೀಗೆ ತೋರುತ್ತದೆ, ಯಾರು ಹೆಂಡತಿಯ ಸೀರೆಯಲ್ಲೇ ಅಡಗಿರುತ್ತಾರೆಯೋ ಅವರನ್ನು ಯಾವೋನು ಜಯಿಸಲು ಬಯಸುತ್ತಾನೆ.
[ಭೋದೇವಿಯು ವಿಷ್ಣು ಪತ್ನಿ, ಸಮುದ್ರವು ಭೂ ವಸ್ತ್ರದಂತೆ ಪ್ರಸಿದ್ಧಿಯಿಂದ ವಿನೋದೋಕ್ತಿಯನ್ನು ತೋರಿರುತ್ತಾರೆ])

Advertisements

ಹೀಗೊಂದು ಮದುವೆ ಮಾತುಕತೆ…

ವಧುವಿನ ಕಡೆಯವರು : ಲಗ್ನ ಆದ ಮೇಲೆ ನಮ್ಮ ಹುಡುಗಿಗೆ ನಿಮ್ಮ ಹುಡುಗ ಕಷ್ಟದ ಕೆಲಸಗಳನ್ನ ಹೇಳಬಾರದು. ನಾವು ಒಂದು ಪತ್ರ ಬರೆದು ಹಾಕಿದರೆ ಸಾಕು, ಅದನ್ನ ನೋಡಿದ ತಕ್ಷಣ ಹೆಂಡತಿನ್ನ ತವರು ಮನಿಗೆ ಕಳಿಸಿ ಕೊಡಬೇಕು. ಮತ್ತ ಹಂಗ ಅಂತ ಹೇಳಿ ಇನ್ನೊಬ್ಬಕಿನ್ನ ಲಗ್ನ ಆಗಬಾರದು. ನಮ್ಮ ಹುಡುಗಿನ್ನ ಲಗ್ನ ಆದಕೂಡ್ಲೆ ನಮ್ಮನ್ನೆಲ್ಲ ಮರಿಯೋ ಹಾಗಿಲ್ಲ ಮತ್ತೆ. ನಮ್ಮನ್ನೆಲ್ಲ ನೆನಪಿನಲ್ಲಿಟ್ಟುಕೊಂಡಿರಬೇಕು. ಈ ಎಲ್ಲ ನಿಯಮಕ್ಕ ಒಪ್ಪಿದರಷ್ಟೇ ಕಮಲಮುಖಿಯಾದ ನಮ್ಮ ಹುಡುಗಿ ನಿಮ್ಮ ಹುಡುಗನ್ನ ಲಗ್ನ ಆಗಲಿಕ್ಕೆ ಒಪ್ಪುತ್ತಾಳೆ.

ವರನ ಕಡೆಯವರು : ಹೆಣ್ಣು ಮಗಳು ಲಗ್ನ ಮಾಡಿಕೊಂಡು ಬಂದ ಮೇಲೆ ಗೃಹಸ್ಥರಿಗೆ ಉಚಿತವಾದ ಕೆಲಸಗಳನ್ನಂತೂ ಮಾಡಬೇಕು. ನಮ್ಮ ಹುಡುಗನ ಮನೆ ಹದಿನಾಲ್ಕು ಅಂತಸ್ತಿನದ್ದು. ಮಧ್ಯದಲ್ಲಿ ಸಂಪತ್ತಿನ ಆಗರವಾದ ಬಂಗಾರದ ಪರ್ವತ ಇದೆ. ಅಮೂಲ್ಯ ರತ್ನಗಳ ಆಗರವಾದ ಉಪ್ಪು ನೀರಿನ ಸಮುದ್ರವಿದೆ ನಮ್ಮ ಹುಡುಗನದ್ದು. ಇನ್ನು ಹಾಲು, ಮೊಸರು, ತುಪ್ಪ, ಜೇನು ತುಪ್ಪ, ಅಮೃತದಂಥ ಸಿಹಿನೀರಿನ ಸಮುದ್ರಗಳಿವೆ. ಅವುಗಳ ಮಧ್ಯದಲ್ಲಿ ಬೇಕಾದಷ್ಟು ಜಮೀನು, ಅಲ್ಲಿ ರಾಶಿ ರಾಶಿ ಧಾನ್ಯ, ಮಕ್ಕಳು, ಅವರ ಮನೆಗಳು, ಇದಿಷ್ಟನ್ನ ನಿಮ್ಮ ಹುಡುಗಿ ನೋಡಿಕೊಂಡರೆ ಸಾಕು, ಇನ್ನೇನೂ ಹೆಚ್ಚಿನ ಕೆಲಸ ಹೇಳೋದಿಲ್ಲ. ಇವೆಲ್ಲ ಮನೆ ಕೆಲಸ, ಮನೆ ಯಜಮಾನತಿಯೇ ಮಾಡುವಂಥವು. ಬೇರೆಯವರಿಗೆ ಒಪ್ಪಿಸೋದು ಒಳ್ಳೇದಲ್ಲ.

ವಧುವಿನ ಕಡೆ : ಓ, ನಮ್ಮ ಹುಡುಗಿ ಕೋಮಲಾಂಗಿನೇ ಹೌದಾದರೂ ಈ ಎಲ್ಲ ಕೆಲಸಗಳನ್ನ ತನ್ನ ದೃಷ್ಟಿ ತುದಿ ನೋಟದೊಳಗೆ ಮಾಡಿ ಮುಗಿಸುತ್ತಾಳೆ. ನಿಮ್ಮ ಹುಡುಗ ಮಾತ್ರ ನಮ್ಮ ಹುಡುಗಿನ್ನ ಬಿಟ್ಟು ಎಲ್ಲೂ ಒಬ್ಬೊಬ್ಬನೇ ಹೋಗಬಾರದು. ಏಕಾಂತದಲ್ಲೇ ಇರಲಿ, ಸಭೆಯಲ್ಲೇ ಇರಲಿ, ಯಾವಾಗಲೂ ಜೊತೆಯಲ್ಲೇ ಇರಬೇಕು.  ಸ್ನಾನ, ಅಭ್ಯಂಜನ, ಭೋಜನ, ಮೊದಲಾದ ವಿನೋದದ ಆಟಗಳಲ್ಲಿ ನಮ್ಮ ಹುಡುಗಿಗೆ  ಮೊದಲು ತನ್ನೊಂದಿಗೆ ಸಹಕಾರ ಕೊಡಬೇಕು. ಕ್ಷಣ ತಪ್ಪದೇ ಅವನ ಅಂಗಸಂಗ ಸೌಖ್ಯವಿರಬೇಕು, ಇವಳೇ ಭೋಷಣಳಾಗಿ ಮೈಯಲ್ಲಿ ಸದಾ ಅನೇಕ ರೂಪದಿಂದ ಲಗ್ನಳಾಗಿರುವ ಭಾಗ್ಯವೂ ಇರಬೇಕು. ತುಟಿಗಳಲ್ಲಿರುವ ಅಮೃತವನ್ನು ಸದಾ ಇವಳೇ ಸವಿಯುತ್ತಿರಬೇಕು. ಕೊಳಲು ತುಟಿಗೆ ತಗುಲಿದರೆ ಅದರಲ್ಲೂ ಇವಳೇ ಇರಬೇಕು. ಒಟ್ಟು ಪರಮಾಣುವಷ್ಟು ದೇಶದಲ್ಲಾಗಲೀ ಕಾಲದಲ್ಲಾಗಲೀ ಇವಳನ್ನು ಬಿಟ್ಟಿರಬಾರದು..

ಎಲ್ಲದಕ್ಕೂ ಸೈ ಎಂದು ರುಕ್ಮಿಣಿಯನ್ನು ಕೃಷ್ಣ ಮದುವೆ ಮಾಡಿಕೊಂಡನಂತೆ 🙂

(ಶ್ರೀವಾದಿರಾಜರ ರುಕ್ಮಿಣೀಶ ವಿಜಯದ ೧೫ನೇ ಅಧ್ಯಾಯದಿಂದ ಟೈಪಿಸಿದ್ದು)

ಹೆಸರಲ್ಲೇನಿದೆ?

“ಮಾಧ್ವರೊಳಗೆ ಗಂಡು ಮಗುಗೆ ಹೆಸರಿಡಬೇಕು ಅಂದರೆ ಇಲ್ಲಾ ವಿಷ್ಣುಸಹಸ್ರನಾಮದಿಂದ ಒಂದು ಹೆಸರು ಇಡ್ತೀರಾ, ಇಲ್ಲಾ ಅಂದರೆ ಹನುಮಂತನ ಹೆಸರು ಇಡ್ತೀರಾ.. ನನಗಂತೂ ಯಾವತ್ತು ವಿಷ್ಣುಸಹಸ್ರನಾಮದ ‘ಭೋತಭವ್ಯಭವತ್ಪ್ರಭುಃ’ ಅನ್ನೋ ಹೆಸರು ಬಹಳ ಇಷ್ಟ ಆಗಿತ್ತು..” ಅಂತ ನನ್ನ ಗೆಳೆಯ ಹೇಳ್ತಿದ್ದರೆ, ಹೌದಲ್ಲವಾ ಹಾಗೇ ‘ಭಾರಭೃತ್ ಅಂತ ಹೆಸರು ಇಟ್ಟರೆ ಹ್ಯಾಗಿರತ್ತೆ?’ ಅಂತ ನಾನೂ ಕೇಳಿದ್ದೆ.

ಈ ಮಾತುಕತೆ ಆಗಿದ್ದು ನನ್ನ ಮಗ ಹುಟ್ಟಲು ಇನ್ನೂ ಮೂರೋ ನಾಲ್ಕೋ ತಿಂಗಳು ಉಳಿದಿದ್ದಾಗ ಒಂದು ದಿನ ಊಟಕ್ಕೆ ಭೆಟ್ಟಿಯಾಗಿದ್ದ ಮಂಜು ಮತ್ತು ನನ್ನ ನಡುವೆ.  ಮಂಜು ಹೇಳಿದ್ದು ನಿಜವೇ. ನಮ್ಮ ಮನೆಯಲ್ಲೇ ನಮ್ಮ ದೊಡ್ಡಪ್ಪ, ಅಪ್ಪ ಹಾಗೂ ಚಿಕ್ಕಪ್ಪಂದಿರು ತಮ್ಮ ಚೊಚ್ಚಲು ಗಂಡು ಮಕ್ಕಳಿಗೆ ಇಟ್ಟಿರುವದು ಹನುಮಪ್ಪನ ಹೆಸರುಗಳನ್ನೇ. ನಮ್ಮಪ್ಪನ ದೊಡ್ಡಪ್ಪನ ಮಗ ಕೂಡ ತಮ್ಮ ಹಿರಿಯ ಮಗನಿಗೆ ಇಟ್ಟದ್ದು ಹನುಮಪ್ಪನ  ಹೆಸರನ್ನೇ. ಹಾಗೆ ನೋಡಿದ್ರೆ ನಮ್ಮ ತಾತ ಮತ್ತು ಅವರ ಅಣ್ಣ ತಮ್ಮ ಮೊದಲ ಗಂಡು ಮಕ್ಕಳಿಗೆ ಹನುಮಪ್ಪನ ಹೆಸರಿಟ್ಟಿಲ್ಲ. ಮಂತ್ರಾಲಯದ ರಾಯರ ಸೇವೆ ಮಾಡಿದ್ದ ತಾತ ರಾಯರ ಹೆಸರನ್ನೇ ತಮ್ಮ ಮೊದಲ ಮಗನಿಗೆ ಇಟ್ಟರೆ ಅವರಣ್ಣ ತಮ್ಮ ಅಪ್ಪನ ಹೆಸರನ್ನು ಇಟ್ಟಿದ್ದಾರೆ.

What’s in a name? that which we call a rose
By any other name would smell as sweet;
– William Shakespeare

ಅಂತ ಶೇಕ್ಸಪಿಯರ್ ಹೇಳಿದಂತೆ ಹೆಸರಿನಲ್ಲೇನಿದೆ ಆಲ್ವಾ? ಮನುಷ್ಯರಿಗೆ ಹೆಸರು ಏನಿದ್ದರೆ ಏನು? ಏನೋ ಒಂದು ಹೆಸರು. ಮೊದಲೆಲ್ಲ ಕಲ್ಲಪ್ಪ, ಕಲ್ಲವ್ವ, ಗುಂಡಪ್ಪ, ಗುಂಡವ್ವ, ಅಡಿವೆಪ್ಪ, ಅಡಿವೆಮ್ಮ ಅಂತೆಲ್ಲ ಹೆಸರಿಡತಿದ್ದರು. ಸಂಸ್ಕೃತ ನಿಘಂಟು ನೋಡಿ, ಮನೇಕಾ ಗಾಂಧಿಯ ಇಂಡಿಯನ್ ನೇಮ್ಸ್ ಪುಸ್ತಕ ನೋಡಿ, ಇಂಟರ್ನೆಟ್ಟೆಲ್ಲ ಜಾಲಾಡಿಸಿ ಹೆಸರಿಡೋ ಹುಕಿ ಈಗ. ಯಾವುದೇ ಮೂಲದಿಂದ ಹೊಸತೊಂದು ಹೆಸರು ಸಿಕ್ಕರೆ ತುಂಬ ಖುಷಿ! ನನ್ನ ಭಾವ ಮೈದನ ಅವನ ಮಗನಿಗೆ ಹೆಸರಿಡೋ ಕಾಲಕ್ಕೆ ‘ದೃಷ್ಟದ್ಯುಮ್ನನ ಶಂಖದ ಹೆಸರು ಬಹಳ ಚೆನ್ನಾಗಿದೆ ಅಂತೆ, ಆದರೆ ಎಲ್ಲೂ ಸಿಗ್ತಾ ಇಲ್ಲಾ ಆ ಹೆಸರು’ ಅಂತ ಬಹಳಷ್ಟು ಹುಡುಕಾಡಿದ್ದ.

ನಾವು ಮನುಷ್ಯರಿಗೆ ಹೆಸರಿಡಲಿಕ್ಕೆ, ದೇವರ ಹೆಸರು ಇರಲಿ ಅಂತ ಅವುಗಳನ್ನ ಹುಡುಕಿದರೆ, ದೇವರಿಗೆ ಯಾರು ಹೆಸರಿಟ್ಟವರು? ಅತಗ ಅಪ್ಪ ಇಲ್ಲ ಅಮ್ಮ ಇಲ್ಲ. ದಾಸರು ‘ನಿನ್ನಂಥ ಸ್ವಾಮಿ ಎನಗುಂಟು ನಿನಗಿಲ್ಲ, ನಿನ್ನಂಥ ತಂದೆ ಎನಗುಂಟು ನಿನಗಿಲ್ಲ’ ಅಂತ ಹೇಳ್ತಾ ‘ನಿನ್ನರಸಿ ಲಕ್ಷ್ಮಿ ಎನ್ನ ತಾಯಿ ನಿನ್ನ ತಾಯಿಯ ತೋರೋ’ ಅಂತ ಹಾಡೇ ಮಾಡಿದ್ದಾರಲ್ಲವೆ? ಅಂಥಾದ್ದರಲ್ಲಿ ಸಾವಿರಗಟ್ಟಲೆ ಹೆಸರುಗಳನ್ನ ಯಾರಿಟ್ಟರು?

ವಿಷ್ಣು ಸಹಸ್ರನಾಮದ ಆರಂಭದೊಳಗ ಕ್ಲೂ ಕೊಡುತ್ತಾರೆ  ಭೀಷ್ಮಾಚಾರ್ಯರು. ‘ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ।  ಋಷಿಭಿಃ ಪರಿಗೀತಾನಿ ತಾನಿ ವಕ್ಷ್ಯಾಮಿ ಭೋತಯೇ॥’ ಅಂತ. ಗೌಣಾನಿ ಎಂದರೆ ಗೌಣ ಅಥವಾ ಲೆಕ್ಕಕ್ಕಿಲ್ಲದ್ವು ಅಂತಲ್ಲ ಮತ್ತೆ. ಗೌಣ ನಾಮ ಅಂದರ ಗುಣಗಳ ಹೆಸರುಗಳು ಅಂತ. ಗುಣಗಳನ್ನು ಕಂಡ ಭಕ್ತರು, ಋಷಿಗಳು, ಮಹಾತ್ಮರು ಕಂಡ, ಹಾಡಿದ ಗುಣಗಳು, ಅವುಗಳಿಗೆ ಅವರಿಟ್ಟ ಹೆಸರುಗಳು ಅವು. ದೇವರ ಗುಣ ರೂಪ ಮತ್ತು ಕ್ರಿಯೆಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲವಂತೆ.

ಇದೇ ವಿಷಯನ್ನ ವಾದಿರಾಜರು ರುಕ್ಮಿಣೀಶ ವಿಜಯದಲ್ಲಿ ಸ್ವಾರಸ್ಯಕರವಾಗಿ ತಿಳಿಸ್ತಾರೆ. ಚತುರ್ಭುಜನಾಗಿ, ಶಂಖ, ಚಕ್ರ, ಗದಾ, ಪದ್ಮಧಾರಿಯಾಗಿ ದರ್ಶನ ಕೊಟ್ಟು ಆಶೀರ್ವದಿಸಿ, ಮುಂದೆ ಏನು ಮಾಡಬೇಕು ಎನ್ನುವದನ್ನ ಹೇಳಿ, ನಂತರ ತಮ್ಮ  ಮಡಿಲ ಮಗುವಾದ ಕೃಷ್ಣನಿಗೆ ತಾಯಿ ತಂದೆಗಳು ನಾವು ಎಂದು ಲೋಕ ಕರೆಯುವದರಿಂದ, ಹಾಗೇ ಪ್ರಸಿದ್ಧರಾಗಿಬಿಡುವದರಿಂದ ಪಾಪ ಬರುವುದೇನೋ ಎಂದು ದೇವಕಿ, ವಸುದೇವರಿಗೆ ಹೆದರಿಕೆಯಾಯಿತಂತೆ.  ಆ ಹೆದರಿಕೆಗೆ ಕಾರಣವಿಲ್ಲ ಎಂದು ವಾದಿರಾಜರು ಹೇಳುವದು,

ಯ ಏಷ ಪುತ್ಸಂಜ್ಜ್ಞಿತ ನಾರಕಸ್ಥಾನ್
ಜನಾನ್ ಸ್ವನಾಮ ಸ್ಮರಣೇನ ಪಾತಿ
ಸ ದೃಷ್ಟಿಗಃ ಸನ್ವಸುದೇವ ಪತ್ನ್ಯಾಃ
ಕಥಂ ನ ಪುತ್ರಃ ಶತಪತ್ರನೇತ್ರಃ
(ಪುನ್ನಾಮ ನರಕದಿಂದ ಪಾರು ಮಾಡುವವನು ಪುತ್ರ. ಯಾವ ಈ ಶ್ರೀಕೃಷ್ಣನು ಪುನ್ನಾಮ ನರಕದಲ್ಲಿ ನರಳುವ ಜನರನ್ನು ತನ್ನ ನಾಮಸ್ಮರಣೆಯಿಂದ ಸಂರಕ್ಷಿಸುತ್ತಾನೋ, ಈ ಕಮಲದಂತೆ ವಿಶಾಲನಯನನಾದ ಅದೇ ಶ್ರೀಕೃಷ್ಣನು ಕಣ್ಣಿಗೆ ಕಾಣಿಸಿಕೊಂಡ ಮೇಲೆ ವಸುದೇವ ಪತ್ನಿಗೆ ಹೇಗೆ ಪುತ್ರನಾಗಲಾರನು?)

ಯದೀಯ ರೂಪಂ ಪ್ರಕಟೀಕರೋತಿ
ಪಿತಾ ಸ ತಸ್ಯೇತಿ ಹಿ ವೇದವಾದಃ
ತಥಾ ವಿಧಸ್ಯಾನಕದುಂದುಭೇಸ್ತ
ತ್ಪಿತೃತ್ವಮಪ್ಯಸ್ತು ನ ತೇನ ಹಾನಿಃ
(“ಯಾವನು ಯಾವನ ಸ್ವರೂಪವನ್ನು ಪ್ರಕಟಮಾಡುತ್ತಾನೆಯೋ ಅವನು ಅವನಿಗೆ ತಂದೆಯು” ಎಂಬುದಾಗಿ ವೇದ ಸಾರುತ್ತದೆ. ಅದರಂತೆ ಶ್ರೀಕೃಷ್ಣನ ಸ್ವರೂಪವನ್ನು ಪ್ರಕಟಿಸುವ ಆನಕದುಂದುಭಿಗೆ (ವಸುದೇವನಿಗೆ) ಶ್ರೀಕೃಷ್ಣನ ಪಿತ್ರತ್ವವೂ ಇರಲಿ. ಅದರಿಂದ ಯಾವ ಹಾನಿಯೂ ಇಲ್ಲ)

ಮನುಷ್ಯರಿಗೆ ದೇವರ ಹೆಸರು ಯಾಕಿಡೋದು? ಏನೋ ಛಂದ ಅನಿಸಿತು ಅಂತ, ಇಷ್ಟ ದೇವರು ಅಂತ, ಆಯಾ ದೇವರ ಹೆಸರು ಇಡೋದು. ಅಥವಾ ಆ ಹೆಸರು ಇಟ್ಟುಕೊಂಡ ಮುನ್ನಿನ ದೊಡ್ಡವರ ತರಹ ಗುಣವಂತ/ಗುಣವಂತೆ ಆಗಲಿ ಮಗು, ಅವರ ಆಶೀರ್ವಾದವಿರಲಿ, ಅವರ ಸ್ಮರಣೆಯೂ ಇರಲಿ, ಅನ್ನೋ ಉದ್ದೇಶದಿಂದಲೂ ಇಡಬಹುದು. ನಾರಾಯಣ ಎನ್ನುವ ಹೆಸರಿಟ್ಟ ಅಜಾಮಿಳ ಕಡೆಗಾಲಕ್ಕೆ ನಾರಾಯಣನನ್ನು ಕರೆದು ಸದ್ಗತಿ ಪಡೆದ ಕತೆ ಪ್ರಸಿದ್ಧವೇ ಇದೆಯಲ್ಲವೇ?

ಹಾಗೆ ಇಡುವ ಹೆಸರುಗಳಲ್ಲೂ ಹೊಸ ಹೊಸ ಹೆಸರಿರಲಿ, ವಿಶೇಷ ಹೆಸರಿರಲಿ ಅನ್ನೋದಕ್ಕೆ ಒತ್ತು ಇತ್ತೀಚೆಗೆ ಸಿಗ್ತಾ ಇದೆ ಅಂತ ಅನಿಸಬಹುದು. ನಮ್ಮಮ್ಮಂಗೆ ಒಬ್ಬರು ಕೇಳಿದ್ದರಂತೆ, ‘ಅಲ್ಲರೀ ವೈನೀ ನಿಮ್ಮ ಹೆಸರು ಮತ್ತ ನಿಮ್ಮ ಮನಿಯವರ ಹೆಸರು ಎರಡೂ ವಿಶೇಷ ಅವ, ಆದರ ಯಾಕ ನಿಮ್ಮ ಮಕ್ಕಳಿಗೆ ನೀವು ಕಾಮನ್ ಹೆಸರು ಇಟ್ಟೀರಿ?’ ಅಂತ. ಪಾಪ ಹಿಂಗೆಲ್ಲ ವಿಚಾರನೇ ಮಾಡಿರದಿದ್ದ ನಮ್ಮಮ್ಮಗ ಏನು ಹೇಳಬೇಕು ಅಂತ ತಿಳಿಯಲೇ ಇಲ್ಲವಂತೆ.

ನಮ್ಮಮ್ಮ ಹುಟ್ಟಿದಾಗ ಅವರ ಅಪ್ಪ, ಅಮ್ಮ ಬೇರೆ ಯಾವುದೋ ಹೆಸರಿಟ್ಟದ್ದರಂತೆ. ಆದರಂತೆ ಅದೇ ಸಮಯಕ್ಕೆ ಕುಕನೂರಿನಲ್ಲಿ ಎಲ್ಲರೂ ಗೌರವಿಸುವ ರಂಗಣ್ಣ ಮಾಸ್ತರು ‘ಸುಕನ್ಯಾ’ ಅಂತ ನಾಟಕ ಬರದಿದ್ದರಂತೆ. ಆ ಕಾರಣದಿಂದ ‘ಇಕಿಗೆ ಸುಕನ್ಯಾ ಹೆಸರನ್ನೇ ಇಡಿ’ ಅಂತ ಅವರು ಹೇಳಿ ಸುಕನ್ಯಾ ಅನ್ನೋ ಹೆಸರನ್ನು ಇಡಿಸಿದರು. ನಮ್ಮಪ್ಪಗೆ ಅವರಪ್ಪ, ಅಮ್ಮ ಇಟ್ಟ ಹೆಸರು ಇಂದಿರೇಶ ಅಂತ. ಅದಕ್ಕೇನು ಹಿನ್ನೆಲೆ ಅಂತ ಗೊತ್ತಿಲ್ಲ. ಇವರು, ಮಕ್ಕಳಾದ ನಮಗೆ ಅನಿಲ, ವಿದ್ಯಾ, ಬದರಿ ಅಂತ ಸಾಮಾನ್ಯ ಅನಿಸೋ ಹೆಸರಿಟ್ಟುಬಿಟ್ಟೆವಲ್ಲ ಅಂತ ಸ್ವಲ್ಪ ಹಳಹಳಿ ಆಯ್ತು ಅನಸ್ತದ ಅಮ್ಮಗ. ತಮಾಷೆ ಅಂದರ ನನಗ ಹೆಣ್ಣುಕೊಟ್ಟ ಮಾವ ಅಂದರೆ ನನ್ನ ಹೆಂಡತಿ ಅಪ್ಪನೂ ‘ಹೀಗೆ ಏನೋ ಪಲ್ಲವಿ ಅನ್ನೋ ಹೆಸರು ಇಕಿ ಹುಟ್ಟಿದಾಗ ಚೊಲೋ ಹೆಸರು ಅಂತ ಇಟ್ಟುಬಿಟ್ವಿರಿ ಈಗೇನು ಅದು ಕಾಮನ್ ಹೆಸರಾಗಿಬಿಟ್ಟದ!’ ಅಂತ ಅಂದಿದ್ದರು. ಅದೂ ನಿಜವೇ. ಒಂದು ಕಾಲಕ್ಕೆ ವಿಶೇಷ ಅನಿಸಿತು ಅಂತ ಎಲ್ಲಾರೂ ಅದೇ ಹೆಸರಿಟ್ಟರೆ ಅದರ ವಿಶೇಷತೆ ಕಳೆದು ಸಾಮಾನ್ಯ  ಅನಿಸಲಿಕ್ಕೆ ಶುರು ಆಗೇ ಬಿಡುತ್ತದೆ ಅಲ್ಲವೇ?

‘ಬದರಿ ನಾರಾಯಣ’ ಅಂತ ಎರಡೆರಡು ಹೆಸರು ಹೊಂದಿರುವ ನನ್ನ ತಮ್ಮ ಸ್ಪೇಷಲ್ಲಾಗಿದ್ದ ತಾತನಿಗೆ. ತಾವು ಮಾಡಿ ಬಂದ ಬದರಿ ಯಾತ್ರೆಯನ್ನು ಮತ್ತು ‘ನಾರಾಯಣ’ ಹೆಸರಿನಿಂದ ತಮ್ಮ ತಂದೆಯ ನೆನಪನ್ನೂ ತರುತ್ತಾನೆ ಎನ್ನುವ ಕಾರಣಕ್ಕೆ ತಾತನ ಮುದ್ದಿನ ಮೊಮ್ಮಗನಾಗಿದ್ದ 🙂 ಇನ್ನು ತಂಗಿ ವಿದ್ಯಾಳೂ ಒಮ್ಮೆ ‘ನನ್ನ ಹೆಸರು ನೋಡಿ ಎಲ್ಲಾರ ನೋಟ್ ಬುಕ್ಕಿನ ಮೇಲೂ ಇರ್ತದ’ ಅಂತ ಚಾಷ್ಟಿ ಮಾಡಿದ್ದಳು. ನನ್ನ ಹೆಸರಿನ ಬಗ್ಗೆ ನನಗೇನೂ ತಕರಾರಿದ್ದಿಲ್ಲ. ಅನಿಲ ಅಂದರೆ ಗಾಳಿ, ವಾಯು ಹಾಗೂ  ಹನುಮಪ್ಪನ ಹೆಸರು ಅನ್ನೋದು ಬಿಟ್ಟರೆ ಹೆಚ್ಚೇನೂ ಗೊತ್ತಿರಲಿಲ್ಲ ಆದರೆ. ಕೆಲವಾರು ವರ್ಷಗಳ ಹಿಂದೆ ಈಶಾವಾಸ್ಯ ಉಪನಿಷತ್ತಿಗೆ ರಾಘವೇಂದ್ರ ಸ್ವಾಮಿಗಳ ಭಾಷ್ಯದ ಕನ್ನಡ ಅನುವಾದವನ್ನು ಓದುತ್ತಿರುವಾಗ ಈ ಹೆಸರಿನ ಅರ್ಥ ತಿಳಿದು ಖುಷಿಯಾಯಿತು. ‘ಅನಿಲನಾದ, ಅಕಾರಶಬ್ದವಾಚ್ಯನಾದ ಪರಬ್ರಹ್ಮನೇ ನೀಲ ಎಂದರೆ ನಿಲಯನ, ಆಶ್ರಯನಾಗಿ ಉಳ್ಳ, ಒಟ್ಟಿನಲ್ಲಿ ಪರಮೇಶ್ವರಾಶ್ರಿತನಾದ ವಾಯು’ ಎನ್ನುವ ಅರ್ಥವಂತೆ ಅನಿಲ ಎನ್ನುವ ಹೆಸರಿಗೆ. ಇದನ್ನೇ ದಾಸರ ಸುಳಾದಿಯೊಂದರಲ್ಲಿ ವಾಯುವನ್ನು ಕುರಿತು ಹೇಳುವ ಮಾತು ‘ಹರಿಯ ವಿಹಾರಕ್ಕೆ ಆವಾಸನೆನಿಸುವಿ’ ಅಂತ.

ಮಗನ ಹೆಸರಿನಿಂದ  ಶುರು ಮಾಡಿ ಎಷ್ಟೆಲ್ಲ ಬರೆದೆ, ಆದರೆ ಮಗನಿಗೆ ಇಟ್ಟ ಹೆಸರಿನ ಹಿನ್ನೆಲೆ ತಿಳಿಸಲಿಲ್ಲ ಇನ್ನೂ! ಇನ್ನೂ ಏನೆಲ್ಲಾ ವಿಷಯ ಬರೆಯಬಹುದು ಈ ಹೆಸರುಗಳ ಸುತ್ತ. ಇರಲಿ, ಅದನ್ನೂ ಒಂದಿಷ್ಟು ಹೇಳಿ ಈ ನಾಮ ಪುರಾಣಕ್ಕೆ ಮಂಗಳ ಹಾಡುವೆ.

ಮಗ ಹುಟ್ಟುವದಕ್ಕೂ ಬಹಳ ಮುನ್ನ ಹರಿಕಥಾಮೃತಸಾರದಲ್ಲಿ ‘ಪಾಹಿ ಕಲ್ಕಿ ಸುತೇಜ ದಾಸನೆ..’ ಎಂದು ನೂರು ಋಜುಗಣಸ್ಥರ ಹೆಸರು ಹೇಳುತ್ತಾ ಅವರನ್ನು ಪ್ರಾರ್ಥಿಸುವ ಸಂಧಿಯಲ್ಲಿ ಬಂದ ಹೆಸರು ಸುವೀರ. ಬಹುಶಃ ಅದನ್ನು ಹಾಗೇ ಓದಿ ಬಿಟ್ಟಿರುತ್ತಿದ್ದೆ. ಆದರೆ ಅವತ್ತು ಪ್ರತಿ ನುಡಿಗೆ ಪ್ರಭಂಜನಾಚಾರ್ಯರು ಬರೆದ ಅರ್ಥವನ್ನೂ ಓದುತ್ತಿದ್ದೆ. ಅಲ್ಲಿ ಅವರು ತಿಳಿಸಿದ ಅರ್ಥ, ‘ಕೈಗೊಂಡ ಕಾರ್ಯವನ್ನು ನಿಯಮೇನ ಪೋರೈಸುವದರಿಂದ ಸುವೀರ.’ ಹೆಚ್ಚಾಗಿ ಬರೀ ಆರಂಭಶೋರನಾದ ನನಗೆ, ಶುರು ಮಾಡಿದ್ದನ್ನು ನೇಮದಿಂದ ಮುಗಿಸುವ ಸುವೀರ ಹೆಸರು ಬಹಳ ಚನ್ನಾಗಿದೆ ಅನಿಸಿ ತಲೆಯಲ್ಲಿ ಉಳಿದಿತ್ತು. ಅದನ್ನೇ ನಮ್ಮಪ್ಪನಿಗೂ ಹೇಳಿದ್ದೆ. ಮಗ ಹುಟ್ಟುತ್ತಾನೆ ಎಂದು ಗೊತ್ತಾದಾಗ ನನ್ನ ತಲೆಗೆ ಬಂದ ಹೆಸರು ಇದೇ. ಜೊತೆಗೆ ‘ಮಯೂಖ’ ಎನ್ನುವ ಹೆಸರೂ ಇಡಬಹುದು ಅಂತ ಅನಿಸಿತ್ತು. ‘ಹಿಡದ ಕೆಲಸ ಮುಗಿಸೋ ಅಂಥವ’ ಅನ್ನೋ ಅರ್ಥದ ಜೊತೆಗೆ, ವಿಷ್ಣು ಸಹಸ್ರನಾಮದಲ್ಲಿ ಬರುವ ಹೆಸರು ಮತ್ತು ಋಜುಗಣದವರ ಹೆಸರು ಅನ್ನೂ ಕಾರಣಕ್ಕೆ ಕೊನೆಗೂ ಗೆದ್ದದ್ದು ಸುವೀರನೇ.

ಹಿಂಗೆ ಹೆಸರಿಟ್ಟೆ ಅಂತ ತಿಳಿಸಿದ ಮೇಲೆ ಅದೇ ಮಂಜು ಹೇಳಿದ್ದು ನಿನ್ನ ಮಗ ಬೆಂಗಾಲದ ಕಡೆಗೇನಾದ್ರೂ ಹೋದರೆ ಸುಬೀರ್ ಆಗ್ತಾನಲ್ಲೋ ಅಂತ 🙂 ಆಮೇಲೆ ನೋಡಿದ್ರೆ ಅಭಿಮಾನ್ ಸಿನೆಮಾದಲ್ಲಿ ಅಮಿತಾಭ್ ಬಚ್ಚನ್ ಹೆಸರು ಅದೇ, ಸುಬೀರ್ ಕುಮಾರ್!! ‘ಇರಲಿ, ಯಾಕಿರವಲ್ದ್ಯಾಕ’ 🙂

ಹೆಸರಿಟ್ಟು ಐದು ವರ್ಷಗಳಾದವು ಇವತ್ತಿಗೆ. ಮಗನಿಗೆ ಹುಟ್ಟು ಹಬ್ಬದ ಶುಭಾಶಯಗಳು. ‘ಚಿರಂಜೀವಿಯಾಗೆಲವೊ ಚಿಣ್ಣ ನೀನು’ ಎನ್ನುವ ವಿಜಯದಾಸರ, ಗುರು ಹಿರಿಯರ, ಹರಿವಾಯುಗುರುಗಳ ಆಶೀರ್ವಾದ, ಅನುಗ್ರಹವಿರಲಿ ಅವನ ಮೇಲೆ. ಅಮ್ಮ ಅಪ್ಪಂದಿರದ್ದೂ ಸೇರಿದಂತೆ ಯಾವ ಕೆಟ್ಟ ದೃಷ್ಟಿ ತಾಕದಿರಲಿ. ಉತ್ತರೋತ್ತರ ಅಭಿವೃದ್ಧಿಯಾಗಲಿ ಎನ್ನುವ ಹಾರೈಕೆಯೊಂದಿಗೆ, ಜಗನ್ನಾಥದಾಸರ ಹರಿಕಥಾಮೃತಸಾರದ ಶ್ವಾಸ ಸಂಧಿಯ ಈ ನುಡಿಯಿಂದ ಬೇಸರದೆ ಹಂಸ ಮಂತ್ರ ಜಪ ಮಾಡಿಸುವ ಶ್ವಾಸ ದೇವಗೆ, ಅವನಂತರ್ಯಾಮಿ ಶ್ರೀಹರಿಗೆ ವಂದನೆ.  ‘ಯಸ್ಮಿನ್ನಪೋ ಮಾತರಿಶ್ವಾ ದದಾತಿ..’

ಭಾರತೀಶನು ಘಳಿಗೆಯೊಳು ಮು
ನ್ನೂರರವತ್ತುಸಿರ ಜಪಗಳ
ತಾ ರಚಿಸುವನು ಸರ್ವಜೀವರೊಳಗಿರ್ದು ಬೇಸರದೆ।
ಕಾರುಣಿಕ ಅವರವರ ಸಾಧನ
ಪೂರಯಿಸಿ ಭೂ ನರಕ ಸ್ವರ್ಗವ
ಸೇರಿಸುವ ಸರ್ವಜ್ಞ ಸಕಲೇಷ್ಟಪ್ರದಾಯಕನು ॥
– ಜಗನ್ನಾಥದಾಸರ ಹರಿಕಥಾಮೃತಸಾರ, ಶ್ವಾಸ ಸಂಧಿ, ಪದ್ಯ ೧

ಸಂಸಾರ ಪಾಶವ ನೀ ಬಿಡಿಸಯ್ಯ…

ಸಂಸಾರ ಪಾಶವ ನೀ ಬಿಡಿಸಯ್ಯ
ಕಂಸಾರಿ ಪುರಂದರವಿಠ್ಠಲರಾಯ

ಹ್ಯಾಂಗೆ ಬರೆದಿತ್ತೋ ಪ್ರಾಚೀನದಲ್ಲಿ… ಎಂದು ಆರಂಭವಾಗುವ ಪುರಂದರದಾಸರ ಪದದಲ್ಲಿ ಕೊನೆಗೆ “ಸಂಸಾರ ಪಾಶವನ್ನು ಕಂಸಾರಿಯಾದ ನೀನು ಬಿಡಿಸಯ್ಯ” ಎಂದು ಕಂಸಾರಿಯನ್ನೇ ನೆನೆದದ್ದು ಯಾಕೆ? ಕೃಷ್ಣನ, ಹರಿಯ ಇನ್ಯಾವುದೇ ರೂಪವನ್ನು ನೆನೆಯುವ ಬದಲು ಕಂಸಾರಿಯಾಗಿಯೇ ಯಾಕೆ ನೆನೆದರು ಎಂಬ ಪ್ರಶ್ನೆ ಹಿಂದೊಮ್ಮೆ ಬಂದದ್ದು, ಅದರ ಬಗ್ಗೆ ಒಂದಷ್ಟು ಬರೆದದ್ದು ಇಲ್ಲಿವೆ. ಅಲ್ಲಿ ಉಲ್ಲೇಖಿಸದೇ ಇದ್ದ ಇನ್ನೊಂದು ಅಂಶವೆಂದರೆ ‘ಶ್ರೀ ಕೃಷ್ಣಾಷ್ಟೋತ್ತರ ಶತನಾಮಾವಳಿ’ಯಲ್ಲಿಯೂ ‘ಸಂಸಾರವೈರಿ ಕಂಸಾರಿ ಮುರಾರಿರ್ನರಕಾಂತಕಃ’ ಎಂದು ಬರುತ್ತದೆ. ದಾಸರು ಅದನ್ನೇ ತಮ್ಮ ಪದದಲ್ಲೂ ಬಳಸಿದರೆ ಎಂಬ ವಿಚಾರವೂ ಬಂದಿತ್ತು.

ಶ್ರೀ ಸತ್ಯಾತ್ಮತೀರ್ಥರ ಶ್ರೀಮದ್ಭಾಗವತ ಪ್ರವಚನ ಮಾಲಿಕೆಯ ಸಿ.ಡಿ.ಯನ್ನು ಕೇಳುತ್ತಿದ್ದಾಗ ನನಗೆ ಗೊತ್ತಿಲ್ಲದ ಹೊಸ ವಿಷಯ ತಿಳಿಯಿತು. ಕೃಷ್ಣನಿಂದ ಹತನಾದ ಕಂಸ ಅಸುರನಾದ ಕಾಲನೇಮಿಯಂತೆ. ಈ ಕಾಲನೇಮಿ ಕಾಮಕ್ಕೆ ಅಭಿಮಾನಿಯಾದ ಅಸುರನಂತೆ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ಅನಿಸಿದ್ದು, ‘ಧರ್ಮಾsವಿರುದ್ಧೋ ಕಾಮೋsಸ್ಮಿ’ (ಧರ್ಮಕ್ಕೆ ವಿರೋಧವಾಗಿಲ್ಲದ ಕಾಮವು ನಾನು) ಎಂದು ಗೀತೆಯಲ್ಲಿ ಹೇಳುವ ಕೃಷ್ಣ, ಧರ್ಮಕ್ಕೆ ವಿರುದ್ಧವಾದ ಕಾಮವೆಲ್ಲದರ ಅಭಿಮಾನಿಯಾದ ಕಂಸರೂಪಿ ಕಾಲನೇಮಿಯನ್ನು ಕೊಂದ. ನಮ್ಮನ್ನು ಮತ್ತೆ ಮತ್ತೆ ಸಂಸಾರದಲ್ಲಿ ಕೆಡವುವ ಕಾಮದಿಂದ ಪಾರುಮಾಡಿ, ಧರ್ಮಾsವಿರುದ್ಧ ಕಾಮವೆನಿಸುವ ಮುಕ್ತಿಯನ್ನು ಬಯಸಿದಾಗ ಕಂಸಾರಿಯನ್ನೇ ನೆನೆಯಬೇಕಲ್ಲವೆ? ಉನ್ನತಿಯನ್ನೀಯುವ ಕಾಮನೆಗಳು ಧರ್ಮ ವಿರೋಧಿಯಾಗಿರುವದಿಲ್ಲ. ನಿಕೃಷ್ಟವಾದ ಕಾಮನೆಗಳನ್ನು ದಮನ ಮಾಡಿ, ಉನ್ನತಿಯನ್ನು ಸಾಧಿಸುವ ಕಾಮನೆಯ ಪೂರ್ತಿಗಾಗಿ ಕಂಸಾರಿಯನ್ನು ನೆನೆಸಿದ್ದಾರೆ ಪುರಂದರ ದಾಸರು*.

ಅದೇ ಪ್ರವಚನದಲ್ಲಿ ಶ್ರೀಸತ್ಯಾತ್ಮತೀರ್ಥರು ಹೇಳಿದ ಈ ಇನ್ನೊಂದು ಶ್ಲೋಕ, “ಸರಿಯಾದ ಜ್ಞಾನವಿರುವಲ್ಲಿ ಶರಣಾಗಬೇಕು, ಆ ಜ್ಞಾನದಲ್ಲಿ ಸುದೃಢವಾದ ನಂಬಿಕೆಯನ್ನಿಡಬೇಕು, ಆ ನಂಬಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಿರಬೇಕು, ನಂಬಿಕೆ ಅಲುಗಾಡುವಂತಹ ಸಂದರ್ಭ ಬಂದರೆ ತಿಳಿದವರನ್ನು ವಿಚಾರಿಸಿ, ತಿಳಿದುಕೊಂಡದ್ದನ್ನೂ ಮತ್ತು ಅದರ ಬಗೆಗಿನ ನಂಬಿಕೆಗಳನ್ನೂ ಮತ್ತೆ ಜಿತಮಾಡಿಕೊಳ್ಳುತ್ತ ಆಯಾ ಸಂದರ್ಭದ ಸಮನ್ವಯವನ್ನು ಸಾಧಿಸಿಕೊಳ್ಳಬೇಕು” ಎಂದು ಹೇಳಿದ ವೈದ್ಯರ ಮಾತು** ನೆನಪಾಯಿತು, ಮತ್ತೆ ಗಟ್ಟಿಯಾಗಿ ಮನಸ್ಸಿನಲ್ಲಿ ಉಳಿಯಿತು.

ಅದೃಢಂಚ ಹತಂ ಜ್ಞಾನಂ
ಪ್ರಮಾದೇನ ಹತಂ ಶ್ರತಂ
ಸಂದಿಗ್ಧೋಹಿ ಹತಂ ಮಂತ್ರಃ
ವ್ಯಗ್ರಚಿತ್ತೋ ಹತಂ ಜಪಃ

(ಗಟ್ಟಿಗೊಳ್ಳದಿರಲಳಿವುದು ಅರಿವು
ಎಚ್ಚರಗೇಡಿಗುಳಿಯದು ಕೇಳಿದುದು
ಇಬ್ಬಂದಿತನದಲಳಿಯುವುದು ಮಂತ್ರ
ಕಳವಳದ ಮನ ಕಳೆಯುವುದು ಜಪವ)

ಎಲ್ಲವನ್ನೂ ದೇವರ ಪರವಾಗಿ, ಆನಂದತೀರ್ಥರ ತತ್ವವಾದದ ಅರಿವಿನ ಮೂಲಕ ಹರಿ ಪರವಾಗಿ ಸಮನ್ವಯ ಮಾಡಿಕೊಳ್ಳುವದು ಹೇಗೆ ಎನ್ನುವದನ್ನು ನೋಡಬೇಕೆಂದರೆ ಶ್ರೀ ವಾದಿರಾಜರ ‘ಶ್ರೀ ರುಕ್ಮಿಣೀಶ ವಿಜಯ’ ಕೃತಿಯನ್ನು ಮನನ ಮಾಡಬೇಕು ಅಂತ ನನಗನಿಸುತ್ತದೆ. ಇತ್ತೀಚೆಗಷ್ಟೇ ಓದಲು ಶುರು ಮಾಡಿದ ಈ ಕೃತಿಯಲ್ಲಿ ಇನ್ನೂ ಓದಲು ಬಹಳಷ್ಟು ಸರ್ಗಗಳಿವೆ. ಅದರಲ್ಲಿ ಕಂಡುಬರುವ ವಿಷಯ ನಿರೂಪಣೆ, ಕವಿತಾ ಚಾತುರ್ಯ, ಪದಲಾಲಿತ್ಯ, ಬಳಸಿದ ಅಲಂಕಾರಗಳು, ಉತ್ಪ್ರೇಕ್ಷೆಗಳು, ಎಲ್ಲವೂ ಆ ಕೃತಿಯ ಆರಾಧ್ಯ ಮೂರುತಿ ಶ್ರೀ ಕೃಷ್ಣನಲ್ಲೇ ನೆಲೆಯಾಗಿವೆ, ಅವನನ್ನೇ ಆರಾಧಿಸುತ್ತವೆ.

ಟಿಪ್ಪಣಿ  :

* ಬರೆದಾದ ಮೇಲೆ ಇದನ್ನು ವೈದ್ಯರಿಗೆ ಕಳುಹಿಸಿದಾಗ ಅವರು ಸೂಚಿಸಿದ conclusion ಇದು. ಇದರ ಜೊತೆಗೆ ತಮ್ಮ ತಾತನವರು ಹೇಳಿಕೊಳ್ಳುತ್ತಿದ್ದ ಪ್ರಾಣೇಶದಾಸರ ಪದ ‘ಪಾಲಿಸೊ ವೇಂಕಟರೇಯ’ ಎನ್ನುವದರಲ್ಲಿ ‘ಜಾಂಬವತಿನಲ್ಲ’ ಎಂದು ಬರುತ್ತದೆ ಎಂದು ತಿಳಿಸಿದರು. ಅಲ್ಲಿ ‘ಜಾಂಬವತೀನಲ್ಲ’ನೇ ಯಾಕೆ ಬಂದ ಎಂದರೆ ಜಾಂಬವತಿಗೇ ಮೊದಲು ಭಾಗವತವನ್ನು ಉಪದೇಶಿಸಿದ್ದು ಎಂದು ತಿಳಿಸಿದರು. ದಾಸರು ಪದಗಳಲ್ಲಿ ಯಾವುದನ್ನೂ ಸುಮ್ಮ ಸುಮ್ಮನೆ ಹಾಕುವದಿಲ್ಲ, ಶಾಸ್ತ್ರ ಗ್ರಂಥಗಳಲ್ಲಿ, ಇತಿಹಾಸ ಪುರಾಣಗಳಲ್ಲಿ ಉಲ್ಲೇಖಿತವಾದ ವಿಶಿಷ್ಠ ಸಂದರ್ಭಗಳನ್ನ, ದೇವರ ಹೆಸರುಗಳನ್ನ ಸಂದರ್ಭೋಚಿತವಾಗಿ ತಮ್ಮ ಪದಗಳಲ್ಲಿ ಬಳಸಿರುತ್ತಾರೆ. ನಾವು ಜಿಜ್ಞಾಸುಗಳಾಗಿ ವಿಚಾರಿಸಿದಾಗ ಅವುಗಳ ವಿಷಯ ತಿಳಿದರೆ ಖುಷಿಯಾಗುತ್ತದೆ, ದಾಸರ ವಿಸ್ತಾರ ಅರಿವಿನ ಬಗ್ಗೆ, ಆ ಅರಿವನ್ನು ಕನ್ನಡದ ನಾಮಗಳಲ್ಲಿ ಅಡಕವಾಗಿಡುವ ಬಗ್ಗೆ ಮತ್ತಷ್ಟು ಗೌರವ ಮೂಡುತ್ತದೆ.

** ವೈದ್ಯರು ಅವತ್ತು ಹೇಳಿದ ಮಾತಿನ ಯಥಾರ್ಥ ಶಬ್ದಗಳು/ವಾಕ್ಯಗಳು ಇವೇ ಇರಲಿಕ್ಕಿಲ್ಲ. ಆದರೆ ನನ್ನ ನೆನಪಿನಲ್ಲಿ ಉಳಿದ ಆ ಮಾತಿನ ಸಂದೇಶವನ್ನು ಸಂಗ್ರಹವಾಗಿ ಬರೆಯಬೇಕು ಅನಿಸಿದಾಗ ಅವು  ಬಂದದ್ದು ಈ  ರೂಪದಲ್ಲಿ. ಅದಕ್ಕಾಗಿ quote ಹಾಕಿರುವೆ! )

ಇದನ್ನು ಬರೆದು ಪೋಸ್ಟಿಸಿ ಆದ ಬಳಿಕ ಕೇಳಿದ ಶ್ರೀ ಸತ್ಯಾತ್ಮ ತೀರ್ಥರ ಪ್ರವಚನದಲ್ಲಿ ಇನ್ನೊಂದು ವಿಷಯ ತಿಳಿಯಿತು. ವ್ಯಾಸ, ಹಯಗ್ರೀವ ರೂಪಗಳು ಜ್ಞಾನ ಹುಟ್ಟಿಸುವ (ಜ್ಞಾನ ಕೊಡುವ) ರೂಪಗಳಂತೆ. ಪರಶುರಾಮ ರೂಪವು ಜ್ಞಾನವನ್ನು ರಕ್ಷಿಸುವ, ಕಾಪಿಡುವ ರೂಪವಾದರೆ ಕೃಷ್ಣ ರೂಪವು ಜ್ಞಾನಕ್ಕೆ ಬರುವ ವಿಘ್ನಗಳನ್ನು ಸಂಕಷ್ಟಗಳನ್ನು ದೂರಗೊಳಿಸುವ ರೂಪವಂತೆ. ಸಂಸಾರ ಪಾಶವನ್ನು ನೀಗಲು ಕಂಸಾರಿಯನ್ನು ನೆನೆ ಎಂದದ್ದಕ್ಕೆ ಇದೂ ಒಂದು ಕಾರಣವೆನಿಸುತ್ತದೆ ನನಗೆ.

ಧ್ರುವಂ ಸುತಸ್ತೇ ಜಗತಾಂ ನಿಯಂತಾ…

ಕೃಷ್ಣನ ಕತೆಯನ್ನು ಹೇಳುವುದೆಂದರೆ ಕವಿಗಳಿಗೆ ಸುಗ್ಗಿ. ಕೃಷ್ಣನ ಆಕರ್ಷನೆಯೇ ಅಂತಹುದು. ಭಾಗವತದಲ್ಲಿ ವ್ಯಾಸರೇ ಮೇಲ್ಪಂಕ್ತಿಯನ್ನು ಹಾಕಿಕೊಟ್ಟಿದ್ದಾರಲ್ಲವೆ? ಇತ್ತೀಚಿಗೆ ಭಾರತದಿಂದ ಬರುತ್ತಾ ತಂದಿದ್ದ ಶ್ರೀ ವಾದಿರಾಜರ ರುಕ್ಮಿಣೀಶವಿಜಯದ ಶ್ಲೋಕಗಳನ್ನೂ, ಅವುಗಳ ಅರ್ಥಗಳನ್ನೂ ಓದುತ್ತಿದ್ದರೆ ಕೃಷ್ಣನೆಂಬ ಬೆರಗು, ಬಾಲಕೃಷ್ಣನ ಲೀಲೆಗಳ ಕತೆಯನ್ನು ವಾದಿರಾಜರು ಪ್ರತಿ ಪ್ರತಿ ಶ್ಲೋಕದಲ್ಲೂ ಹೇಳುವ, ಕೊಂಡಾಡುವ ಪರಿಗೆ ಮನ ಸೂರೆ ಹೋಗಿದೆ. ಉದಾಹರಣೆಗೆ ಕೆಲವೊಂದು ಶ್ಲೋಕಗಳನ್ನು ಆರಿಸೋಣವೆಂದರೆ ಯಾವುದನ್ನು ಆರಿಸಲಿ, ಯಾವುದನ್ನು ಬಿಡಲಿ ಎಂದು ಗೊಂದಲವಾಗುವಷ್ಟು. ವಾದಿರಾಜರ ಈ ಸುಲಲಿತವಾದ ಶೈಲಿಯ ವಿಷಯ ನಿರೂಪಣೆ, ಇದೂ ಇರಲಿ, ಇದೂ ಇರಲಿ  ಎನ್ನುತ್ತಾ ಎಲ್ಲವನ್ನೂ, ಸಾಧ್ಯವಾದಷ್ಟೆಲ್ಲವನ್ನೂ ಆರಿಸಿಕೋ ಎಂದು ಕರೆಯುತ್ತವೆ. ಈ ಅನಿಸಿಕೆ ಮೊದಲು ಬಂದದ್ದು ‘ಲಕ್ಷ್ಮೀ ಶೋಭಾನವನ್ನು’ ಓದಿದಾಗ. ಈಗ ಅವರದೇ ಆದ ಶ್ರೀ ರುಕ್ಮಿಣೀಶ ವಿಜಯದ ಕೆಲವು ಶ್ಲೋಕಗಳು ಮತ್ತು ಅರ್ಥಗಳು.

(ನನ್ನ ಹತ್ತಿರ ಇರುವ ಪುಸ್ತಕ : ಶ್ರೀ ವಾದಿರಾಜ ಯತಿಪುಂಗವರ ಶ್ರೀ ರುಕ್ಮಿಣೀಶ ವಿಜಯ, ಕನ್ನಡಾನುವಾದ ಸಹಿತ. ಅನುವಾದ ಪಂಡಿತರತ್ನ ಆ. ಭೇಮಸೇನಾಚಾರ್ಯ ಸಂತೇಬಿದನೋರು)

ಸ್ವಭಕ್ತ ಪುಂಜಾರ್ಜಿತಪಾಪವೃಂದಂ
ದಿವಾನಿಶಂ ಯೋ ಹರತಿ ಸ್ಮ ಬಾಲಃ
ಹೃಹೇ ಗೃಹೇ ದುಗ್ಧಮಸಾವಮುಷ್ಣಾ
ತ್ತಥಾ ಹಿ ಕಸ್ತ್ಯಕ್ಷ್ಯತಿ ಸಿದ್ಧವಿದ್ಯಾಂ
(ತನ್ನ ಭಕ್ತರ ಗುಂಪಿನ ಪಾಪವೃಂದವನ್ನು ಅಹೋರಾತ್ರಿಗಳಲ್ಲಿ ಅಪಹರಿಸುವ ಶ್ರೀಹರಿಯು ಬಾಲಕನಾಗಿ ಎಲ್ಲರ ಮನೆಯಲ್ಲಿ ಹಾಲು ಮೊಸರುಗಳನ್ನು ಕದ್ದನು ಎನ್ನುವದು ಅವನ ಸ್ವಭಾವ ಗುಣವೇ ಆಗಿರುತ್ತದೆ. ಸ್ವಭಾವಸಿದ್ಧವಾದ ವಿದ್ಯೆಯನ್ನು ಯಾರು ತಾನೇ ಬಿಡುತ್ತಾರೆ?)

ಹಸ್ತಃ ಕಿಂ ನವನೀತಭಾಜನಮುಖೇನ್ಯಸ್ತಸ್ತ್ವಯಾ ಶ್ರೀಪತೆ
ದೃಪ್ತಪ್ರಸ್ತರಸಂಮಿತಾತಿಕಠಿನಾವಸ್ಥಾಂತರಾಯಾ ಗೃಹೇ
ಯುಕ್ತಾ ನ ಸ್ಥಿತಿರಸ್ಯ ಕೋಮಲಹೃದಸ್ತತ್ತನ್ವೆ ಚಿತ್ತೇ ಮಮ
ಪ್ರೀತ್ಯಾಸ್ಥಾಪಯಿತುಂ ಮೃಗಾಕ್ಷಿ ಮೃದು ನೀತ್ಯುಕ್ತ್ವಾ ಹಸನ್ಪಾತ್ವಸೌ

(ಕೈಯನ್ನು ಬೆಣ್ಣೆಯ ಪಾತ್ರೆಯೊಳಗೇಕಿಟ್ಟಿರುವೆಯೊ ಶ್ರೀಪತಿಯೇ? ತನುಮಧ್ಯಮಳಾದ ಕೃಷ್ಣಸಾರನೇತ್ರಿಯೇ, ಕಲ್ಲಿಗಿಂತಲೂ ಕಠಿಣ ಹೃದಯಳಾದ ನಿನ್ನ ಮನೆಯಲ್ಲಿ ಅತಿ ಮೃದುವಾದ ಈ ಬೆಣ್ಣೆಯು ಇರುವುದು ಉಚಿತವಲ್ಲ. ಅತಿ ಕೋಮಲಚಿತ್ತನಾದ ನನ್ನಲ್ಲಿ ಇಟ್ಟಿರೋಣವೆಂದು ಉತ್ತರಿಸಿ ನಕ್ಕು ಅವಳನ್ನೂ ನಗಿಸಿದ ಶ್ರೀ ಕೃಷ್ಣನು ನಮ್ಮನ್ನು ರಕ್ಷಿಸಲಿ)

ಯಸ್ಯ ಶ್ರೀ ಚರಣಾಂಬುಜೇನ ಶಕಟಃ ಸಂಚೂರ್ಣಿತಾಂಗೋsಭವತ್
ತಸ್ಯಾಂಗೇ ಮೃದುತಾ ನ ಯುಕ್ತಿಸಹಿತೇಕ್ತ್ಯಂ ಮುದಾ ಯೋsವದತ್
ಬಾಲ್ಯೇ ಮಾಮಧಿರೋಪ್ಯ ವಕ್ಷಸಿ ಶಿಶುಂ ಸನ್ನ್ರ್ತಯಂತ್ಯಾಸ್ತವ
ಸ್ಥೂಲೋರೋಜ ಸಮಾಗಮೇನ ತದಿತಿ ಪ್ರೌಢಿಂ ಸ ದದ್ಯಾನ್ಮಮ
(ಯಾರ ಪಾದಕಮಲದಿಂದ ಶಕಟ ಚೂರುಚೂರಾದನೋ, ಅಂತಹ ದೇಹವುಳ್ಳ ನಿನ್ನಲ್ಲಿ ಮೃದುತ್ವವೇ? ಎನ್ನಲು ಶ್ರೀ ಕೃಷ್ಣನು ನಕ್ಕು ‘ಅದು ನನ್ನ ದೋಷವಲ್ಲ, ನಾನು ಕೂಸಾಗಿರುವಾಗ ನನ್ನನ್ನು ನೀನು ಎತ್ತಿಕೊಂಡು ನಿನ್ನ ಎದೆಯ ಮೇಲೆ ಕುಣಿಸುತ್ತಲಿದ್ದಿ. ಆಗ ನಿನ್ನ ಸ್ತನಗಳ ಸಂಸರ್ಗದಿಂದ ನನ್ನ ಕಾಲುಗಳಲ್ಲಿ ಆ ಕಾಠಿಣ್ಯವು ಬಂದಿತು ಎಂದು ಹೇಳಿ ಗೋಪಿಯನ್ನು ಮುಗ್ಧಗೊಳಿಸಿದ ಶ್ರೀ ಕೃಷ್ಣನು ನಮಗೆ ಪ್ರೌಢಿಮೆಯನ್ನು ಕೊಡಲಿ )

ಬಧ್ನಾಮ್ಯದ್ಯ ಭವಂತಮಂಗ ಕಿತವಂ ಸಾಧ್ಯಂ ಕಿಂ ಪ್ರಿಯೇ
ದುಗ್ಧಾನಾಂ ಪರಿರಕ್ಷಣಂ ಕಪಟಸಂನ್ನದ್ಧೇ ನಿಬದ್ಧೇ ತ್ವಯಿ
ಮುಗ್ಧೆ ತ್ವಂ ವಿರಸಾ ಸಮುಜ್ಝಸಿ ಪರಮ ಸ್ನಿಗ್ಧಂ ತನ್ಮಾಂ ತ್ಯಜೇತ್
ಪದ್ಮಾಕ್ಷೀತ್ಯಬಲಾಮುದೀರ್ಯ ವಶಯನ್ ಬುದ್ಧಿಂ ಸ ದದ್ಯಾನ್ಮಮ
(ಈಗ ನನ್ನನ್ನು ಕಟ್ಟಿ ಹಾಕಿ ನಿನಗೇನು ಪ್ರಯೋಜನ ಪ್ರಿಯಳೇ? ಬಹುಕಪಟಿಯಾದ ನಿನ್ನನ್ನು ಕಟ್ಟಿದರೆ ಹಾಲು ಮೊಸರು ಬೆಣ್ಣೆಗಳು ರಕ್ಷಿತವಾಗುವವು. ಮುಗ್ಧೇ! ಈಗ ನೀನು ನನ್ನನ್ನು ಕಟ್ಟಿದರೂ, ಸ್ನೇಹವುಳ್ಳ ಹಾಲು ಮೊಸರುಗಳು ನನ್ನನ್ನು ಎಂದಿಗೂ ಬಿಡುವುದಿಲ್ಲ ಎಂದು ಅವಳನ್ನು ವಶಪಡಿಸಿಕೊಂಡ ಶ್ರೀ ಕೃಷ್ಣನು ನಮಗೆ ಸುಬುದ್ಧಿಯನ್ನು ಕೊಡಲಿ.)
ಇಂಥಾ ಕೃಷ್ಣನ ಬಗ್ಗೆ ಯಶೋದೆಗೆ ದೂರು ಹೇಳಲು ಬಂದವರೇನು ಹೇಳುತ್ತಾರೆ?

ಯದೀದೃಶಂ ಕರ್ಮ ಕರೋಷಿ ಕೃಷ್ಣ
ನ ತರ್ಹಿ ನಂದಸ್ಯ ಸುತಸ್ತ್ವಮನ್ಯಃ
ಇತೀರಿತೇ ಹಂತ ಹಸನ್ಯಶೋದೇ
ಬಹೋನ್ಯನಿಷ್ಟಾನಿ ಸ ನಸ್ತನೋತಿ
(ಇಂಥ ಕೆಲಸ ಮಾಡಿದರೆ ನೀ ನಂದಗೋಪನ ಮನಗನೇ ಅಲ್ಲ, ಇನ್ಯಾರೋ ಎನ್ನುವೆವು ಎಂದರೆ ನಗುತ್ತ ಹೌದು ಎಂದು ನಮಗೆ ಬಹು ಅನಿಷ್ಟಗಳನ್ನು ಮಾಡುತ್ತಾನಮ್ಮ!)

ಇದಂ ಹಿ ದೇವಸ್ಯ ಸಮರ್ಪಣಾರ್ಹ
ಮಿತೀರಿತೇ ತಹ್ರ್ಯಹಮೇವ ದೇವಃ
ಸ ಇತ್ಥಮಾಭಾಷ್ಯ ತದೇವ ಭುಂಕ್ತೇ
ನ ದೇವಿ ಪುತ್ರಸ್ತವ ದೇವಭಕ್ತಃ
(ಇದು ದೇವರ ಸಮರ್ಪಣೆಗೆ ಇಟ್ಟದ್ದು ಎಂದರೆ, ನಾನೇ ದೇವನು ಎನ್ನುತ್ತ ಅದನ್ನೇ ತಿನ್ನುವನಮ್ಮ, ನಿನ್ನ ಮಗ ದೈವಭಕ್ತನಲ್ಲವೇ ಗೋಪಿ)

ಗೃಹೇಗೃಹೇsಯಂ ನವನೀತ ದುಗ್ಧ
ದಧೀನಿ ಸರ್ವಾಣ್ಯಪಹೃತ್ಯ ಭುಂಕ್ತೇ
ತಥಾಪಿ ತೃಪ್ತಿಂ ನ ಸುತಸ್ಯವೈತಿ
ಕಿಮಸ್ಯ ಭೂತಾನಿ ವಸಂತಿ ಕುಕ್ಷೌ
(ಮನೆ ಮನೆಯ ಬೆಣ್ಣೆ ಹಾಲು ಮೊಸರೆಲ್ಲವನಪಹರಿಸಿ ತಿಂದರು ತೃಪ್ತಿಯೇ ಇಲ್ಲದ ಇವನ ಹೊಟ್ಟೆಯೊಳು ಭೂತಗಳು ಇವೆಯೇನೆ?)

ಇಷ್ಟೆಲ್ಲ ಮಾಡಿದರೂ,

ನ ನಿಷ್ಟುರಾ ವಾಕ್ಸಮುದೇತಿ ವಕ್ತ್ರಾತ್
ಕರಶ್ಚನಸ್ತಾಡಯಿತುಂ ಯಶೋದೇ
ವಿಲೋಲನೇತ್ರಂ ತವಪುತ್ರರತ್ನಂ
ಧ್ರುವಂ ಸುತಸ್ತೇ ಜಗತಾಂ ನಿಯಂತಾ
(ಯಶೋದೆ! ನಿನ್ನ ಮಗನಿಗಾಡಲು ನಿಷ್ಟುರ ಮಾತುಗಳೇ ಹೊರಡುವದಿಲ್ಲ. ಹೊಡೆಯಲು ಕೈಯಂತು ಮೊದಲೇ ಏಳುವದಿಲ್ಲ. ಚಲಿಸುವ ನೇತ್ರಗಳ ನಿನ್ನ ಪುತ್ರರತ್ನನು ಸತ್ಯವಾಗಿಯೂ ಜಗತ್ತಿಗೆ ನಿಯಾಮಕನೇ ಅಮ್ಮಾ!)