ಶ್ರವಣ

ಶ್ರವಣಂ ಕೀರ್ತನಂ ವಿಷ್ಣೋಃ ಸ್ಮರಣಂ ಪಾದಸೇವನಂ|
ಅರ್ಚನಂ ವಂದನಂ ದಾಸ್ಯಂ ಸಖ್ಯಮಾತ್ಮ ನಿವೇದನಂ||

ನವವಿಧ ಭಕ್ತಿಗಳನ್ನ ಹೇಳುವ ಈ‌ ಶ್ಲೋಕವನ್ನ ಹಿರಿಯರೊಬ್ಬರು ಬಹಳ ಹಿಂದೆ ಬರೆದುಕೊಟ್ಟಿದ್ದರು. ಇದರ ಜೊತೆಗೆ ಪ್ರತಿಯೊಂದು ವಿಧದ ಭಕ್ತಿಗೂ ಹೆಸರಾದ ಒಬ್ಬೊಬ್ಬರ ಹೆಸರನ್ನೂ‌  ಬರೆದುಕೊಟ್ಟಿದ್ದರು. ನನ್ನ ಒಂದೂವರೆ ವರ್ಷದ ಮಗನ ಕೈಗೆ ನಿಲುಕುವಂತೆ ಇಟ್ಟಿದ್ದ ಪುಸ್ತಕಗಳ ಕಡೆ ಅವನ ಆಸಕ್ತಿ ಹೆಚ್ಚಾಗಿ, ಪುಸ್ಕ್ತಕಗಳ ಕಟ್ಟು  ಸಡಿಲವಾಗತೊಡಗಿದ್ದರಿಂದ ಅವಕ್ಕೆಲ್ಲ ಇನ್ನೊಂದು ಎತ್ತರದ ಸ್ಥಳದಲ್ಲಿ ಜಾಗ ಮಾಡುವಾಗ ಆ ಹಿರಿಯರು ಬರೆದು ಕೊಟ್ಟಿದ್ದ ಚೀಟಿ ಸಿಕ್ಕಿತು. ಹೇಗಿದ್ದರೂ ನವರಾತ್ರಿ ಆರಂಭವಾಗಿದೆ, ಈಗಾಗಲೇ ಎರಡು ದಿನಗಳು ಆಗಿ ಹೋಗಿದ್ದರೂ ಇವತ್ತು ಶ್ರವಣವನ್ನಾದರೂ‌ ಉಲ್ಲೇಖಿಸಬೇಕು ಅನಿಸಿತು.

ಒಂದು ವಾರದ ಜೀವನ ಮಾತ್ರ ಬಾಕಿ ಇರುವದು ಎಂದು ತಿಳಿದಾಗ ಉಳಿದ ಆಯುಷ್ಯವನ್ನ ವ್ಯರ್ಥ ಕಳೆಯದೆ ದೇವರ ಗುಣ ಕಥನವನ್ನ ಕೇಳುತ್ತ ಕಳೆಯಬೇಕು ಎಂದು ನಿರ್ಧರಿಸಿ ಅದರಂತೆ ಗಂಗಾ ತಟದಲ್ಲಿ ಶುಕ ಮುನಿಯಿಂದ ನಿರಂತರ ಪ್ರವಚನ ಕೇಳಿದ ಪರೀಕ್ಷಿತ ರಾಜನೇ ಹರಿ ಕಥಾ ಶ್ರವಣಕ್ಕೆ  ಹೆಸರಾದವನು. ಸಾವು ಬರುವದು ಅಂತ ಅಳಲಿಲ್ಲ, ರಾಜನಾದ ನನಗೇ ಶಾಪವೇ ಅಂತ ಸಿಟ್ಟಿಗೇಳಲಿಲ್ಲ, ಇದ್ದ ಸಮಯವನ್ನ ಸಾರ್ಥಕವಾಗಿ ಕಳೆಯುವದು ಹೇಗೆ ಎನ್ನುವದರ ಕಡೆಗೆ ಮಾತ್ರ ಗಮನ ಹರಿಸಿದ. ಅವನ ಹೆಸರೇ ಪರೀಕ್ಷಿತ, ಹುಟ್ಟುವಾಗಲೇ ಎಲ್ಲವನ್ನೂ‌ ಬೆರಗುಗಣ್ಣಿನಿಂದ ಪರೀಕ್ಷೆ ಮಾಡುವಂತೆ ನೋಡುತ್ತಿದ್ದನಂತೆ, ಅದಕ್ಕಾಗೇ ಪರೀಕ್ಷಿತ ಅಂತ ಹೆಸರಾಯಿತಂತೆ. ಗರ್ಭದಲ್ಲಿದ್ದಾಗಲೇ ಅಶ್ವತ್ಥಾಮನ ಬ್ರಹ್ಮಾಸ್ತ್ರಕ್ಕೆ ಗುರಿಯಾಗಿ ಕೃಷ್ಣನಿಂದ ಉಳಿದಾತ, ಕಡೆಗಾಲಕ್ಕೆ ಆ ಕೃಷ್ಣನ ಕಥೆಯನ್ನೇ ಕೇಳಿ ಆನಂದಿಸಿದಾತ.

ಶ್ರವಣದ ಬಗ್ಗೆ ಜಗನ್ನಾಥ ದಾಸರು ಹರಿಕಥಾಮೃತ ಸಾರದ ೨ನೇ ಸಂಧಿ (ಕರುಣಾ ಸಂಧಿ) ಯಲ್ಲಿ ಹೀಗೇ‌ ಹೇಳುತ್ತಾರೆ,

ಶ್ರವಣ ಮನಕಾನಂದವೀಹುದು
ಭವಜನಿತ ದುಃಖಗಳ ಕಳೆವುದು
ವಿವಿಧ ಭೋಗಗಳಿಹಪರಂಗಳಲಿತ್ತು ಸಲಹುವುದು||
ಭುವನ ಪಾವನನೆನಿಪ ಲಕುಮೀ
ಧವನ ಮಂಗಳ ಕಥೆಯ ಪರಮೋ
ತ್ಸವದಿ ಕಿವಿಗೊಟ್ಟಾಲಿಪುದು ಭೂಸುರರು ದಿನ ದಿನದಿ||

ವಿಜಯ ದಾಸರ ‘ಪವಮಾನ ಪವಮಾನ ಜಗದ ಪ್ರಾಣ’ ಹಾಡಿನಲ್ಲಿ ಹನುಮಂತನನ್ನ ಶ್ರವಣ ಮೊದಲಾದ ನವ ವಿಧ ಭಕ್ತಿಗಳನ್ನ ತವಕದಿಂದ ಕೊಡು ಎಂದು ಕೇಳುತ್ತಾರೆ. ಕೇಳುವವರಿಗೆ ಯಾವಾಗ ದೊರಕೀತು ಎನ್ನುವ ತವಕ ಇರುವದೇನೂ ಆಶ್ಚರ್ಯವಲ್ಲ, ಆದರೆ ಇಲ್ಲಿ ದಾಸರು ಆ ಪವಮಾನನಿಗೆ ತವಕದಿಂದ ಕೋಡು, ಬೇಗ ಕೋಡು ಅಂತ ಕೇಳ್ತಾ ಇದ್ದಾರೆ. ನನ್ನಮ್ಮನ ಬಾಯಲ್ಲಿ ಈ‌ ಹಾಡನ್ನ ಬಹಳಷ್ಟು  ಬಾರಿ ಕೇಳಿದ್ದೇನೆ. ಇಲ್ಲಿ ಈ‌ ಹಾಡಿನ ಸಾಹಿತ್ಯ ಇದೆ ಮತ್ತು ಯೂ ಟ್ಯೂಬಿನ ಲಿಂಕ್ ಕೂಡ ಇದೆ.

Advertisements