ದೇವ ಹನುಮ ಶೆಟ್ಟಿ

ಮೊದಲ ಬಾರಿ ಕೇಳಿದಾಗಲೆ ತಮ್ಮೆಡೆಗೆ ಸೆಳೆದುಕೊಂಡ ’ಹ್ಯಾಂಗೆ ಬರೆದಿತ್ತು ಪ್ರಾಚೀನದಲ್ಲಿ’ ಮತ್ತು ’ಎಂದು ಬಂದೀತು ನನ್ನ ಸೇವೆಯ ಪಾಳಿ’ ಬಗ್ಗೆ ಹಿಂದೊಮ್ಮೆ ಬರೆದಿದ್ದೆ. ಅವುಗಳಂತೆ ಮೊದಲ ಬಾರಿಗೆ ಸೆಳೆದ ಇನ್ನೊಂದು ಹಾಡು ಶ್ಯಾಮಸುಂದರ ವಿಠಲ ದಾಸರ ’ದೇವ ಹನುಮ ಶೆಟ್ಟಿ’. ರಾಯಚೂರು ಶೇಷಗಿರಿ ದಾಸ ಹಾಡಿದ ದಾಸರ ಪದಗಳ ಕ್ಯಾಸೆಟ್ ’ಹನುಮಾನ್ ಕೀ ಜೈ’ ಅಲ್ಲಿ ಈ ಹಾಡಿದೆ. ತಮ್ಮ ಊರಾದ ಬಲ್ಲಟಗಿಯ ಹನುಮನನ್ನು ಕುರಿತ ಈ ಹಾಡು ಕೇಳಿದ ಮೇಲೆ ಬಲ್ಲಟಗಿಯ ಹನುಮನನ್ನು ಯಾವಾಗಲಾದರೂ ನೋಡಬೇಕೆನಿಸಿದೆ. ’ಪಾವನ ಚರಿತ ಸಂಜೀವನ ಗಿರಿಧರ’ ಎಂದು ಸಂಜೀವಿನ ಮೂಲಿಕೆಗೆ ಬೆಟ್ಟ ಹೊತ್ತ ಹನುಮನ ಮಹಿಮೆಯೊಡನೆ ಪ್ರಾರಂಭವಾಗುವ ಹಾಡಿನಲ್ಲಿ ಮುಂದೆ ಹನುಮ ಭೀಮ ಮಧ್ವರನ್ನ ಒಂದೊಂದು ನುಡಿಯಲ್ಲಿ ನೆನಪಿಸಿ ಪ್ರಾರ್ಥನೆ ಮಾಡುತ್ತಾರೆ. ಒಂದು ನುಡಿಯಲ್ಲಿ ಅವತಾರ ಸ್ಮರಣೆ ಮತ್ತು ಅದರ ಮುಂದಿನ ನುಡಿಯಲ್ಲಿ ಭಾರತಿಯೊಡನೆ ವಾಯುದೇವರಿಗೆ ಪ್ರಾರ್ಥನೆ ಸ್ವಾರಸ್ಯಕರವಾಗಿದೆ.

ವಾಯುಸ್ತುತಿಯ ’ಮಾತರ್ಮೇ ಮಾತರಿಶ್ವನ್’ಎಂದು ಶುರುವಾಗುವ ನುಡಿಯಲ್ಲಿ ತ್ರಿವಿಕ್ರಮ ಪಂಡಿತರು ನಿತ್ಯ ಊರ್ಜಿತವಾಗುವ ಧೃಡ ಭಕ್ತಿಯನ್ನೂ, ಆ ಮಹಿಮೆಯನ್ನು ವರ್ಣಿಸಲು ಆಶು ಕವಿತ್ವವನ್ನೂ ಗೋವಿಂದನಲ್ಲಿ, ವಾಯುವಿನಲ್ಲಿ ಕೇಳಿದರೆ ಇಲ್ಲಿ ನಿಷ್ಠೆಯಿಂದ ಮನಮುಟ್ಟಿ ಅವನ ಪದ ಥಟ್ಟನೆ ಪಾಡುವ ಶ್ರೇಷ್ಠ ಸುಜನರೊಳಗೆ ತಮ್ಮನ್ನು ಇಡಬೇಕೆಂದು ಶ್ಯಾಮಸುಂದರ ದಾಸರು ಪ್ರಾರ್ಥಿಸುತ್ತಾರೆ.

ಶ್ಯಾಮಸುಂದರರ ಹಾಡುಗಳು ಸುಂದರ. ಆಶು ಕವಿಯಾಗಿದ್ದ ಅವರು ಕೇಳಿದವರಿಗೆ ಕೇಳಿದಾಗ ಹಾಡು ಬರೆದು ಕೊಡುತ್ತಿದ್ದರಂತೆ. ಸಿನೆಮಾ ಹಾಡುಗಳ ಟ್ಯೂನ್ ಮೆಚ್ಚಿಗೆಯಾಯಿತು ಎಂದು ಕೇಳಿದರೆ ಅದಕ್ಕೆ ಹೊಂದುವಂತೆ ದೇವರ ನಾಮ ರಚಿಸಿ ಕೊಡುತ್ತಿದ್ದರು ಎಂದು ಕೇಳಿರುವೆ! ಸತ್ಯನಾರಾಯಣ ವೃತ ಕತೆಯನ್ನು ಒಂದು ಪದವನ್ನಾಗಿ ಬರೆದಿದ್ದಾರೆ. ಲೀಲಾವತಿ ಕಲಾವತಿಯ ಕತೆ ಹಾಡಿನಲ್ಲೂ ಇಳಿದಿದೆ.

ದೇವ ಹನುಮ ಶೆಟ್ಟಿ ಹಾಡನ್ನ ಇಲ್ಲಿ ಕೇಳಬಹುದು

ದೇವ ಹನುಮ ಶೆಟ್ಟಿರಾಯ ಜಗಜಟ್ಟಿ
ಕಾವೋದು ಭಾವಿ ಪರಮೇಷ್ಠಿ

ಪಾವನ ಚರಿತ ಸಂಜೀವನ ಗಿರಿಧರ
ಪಾವಮಾನಿ ಕರುಣಾವಲೋಕನದಿ
ನೀ ವಲಿಯುತಲಿ ಸದಾವಕಾಲ ತವ
ತಾವರೆ ಪದಯುಗ ಸೇವೆಯ ಕರುಣಿಸು

ವಾನರ ಕುಲ ನಾಯಕ
ಜಾನಕಿ ಶೋಕ ಕಾನನ ತೃಣ ಪಾವಕ
ಹೀನ ಕೌರವ ನಾಶಕ
ಸನ್ಮೌನಿ ತಿಲಕ ಆನಂದತೀರ್ಥ ನಾಮಕ

ಶೋಣಿಯೊಳಗೆ ಎಣೆಗಾಣೆ ನಿನಗೆ ಎನ್ನ
ಮಾಣದೆ ಅನುದಿನ ಪಾಣಿ ಪಿಡಿದು ಪೊರೆ
ಸ್ಥಾಣು ಜನಕ ಗೀರ್ವಾಣ ವಿನುತ ಜಗ-
ತ್ಪ್ರಾಣ ರಮಣ ಕಲ್ಯಾಣ ಮೂರುತಿ

ಮರುತ ನಂದನ ಹನುಮ ಪುರಹರ ರೋಮ
ಪರಮ ಪುರುಷ ಶ್ರೀ ಭೀಮ
ಕರುಣಾಸಾಗರ ಜಿತಕಾಮ ಸದ್ಗುಣಭೌಮ
ಪರವಾದಿ ಮತವ ನಿರ್ನಾಮ

ಗಿರಿಸುತ ಪಾಲಕ ಜರಿಜ ವಿನಾಶಕ
ಹರಿಮತ ಸ್ಥಾಪಕ ದುರಿತ ವಿಮೋಚಕ
ಶರಣು ಜನರ ಸುರತರು ಭಾರತಿವರ
ಮರೆಯದೆ ಪಾಲಿಸು ನಿರುಪಮ ಚರಿತ

ದಿಟ್ಟ ಶ್ರೀ ಶ್ಯಾಮಸುಂದರ ವಿಠ್ಠಲ ಕುವರ
ದುಷ್ಟ ರಾವಣ ಮದಹರ
ಜಿಷ್ಣು ಪೂರ್ವಜ ವೃಕೋದರ ರಣರಂಗ ಶೂರ
ಶಿಷ್ಟ ಜನರ ಉದ್ಧಾರ

ನಿಷ್ಠೆಯಿಂದಲಿ ಮನ ಮುಟ್ಟಿ ನಿನ್ನ ಪದ
ಥಟ್ಟನೆ ಪಾಡುವ ಶ್ರೇಷ್ಠ ಸುಜನರೊಳು
ಇಟ್ಟು ಸಲಹೋ ಸದಾ ಸೃಷ್ಟಿ ಮಂಡಲದಿ
ಪುಟ್ಟ ಗ್ರಾಮ ಬಲ್ಲಟಗಿಯ ವಾಸ

ಇಲ್ಲಿ ಬರೆಯುವ ಮುಂಚೆ ನೋಡಿದ ಕೆಲವು ಶಬ್ದಾರ್ಥಗಳು :
ಭಾವಿ ಪರಮೇಷ್ಠಿ – ಭಾವಿ ಬ್ರಹ್ಮ. ಈಗಣ ವಾಯು ಮುಂದೆ ಬ್ರಹ್ಮ ಪದವಿಗೆ ಬರುವಾತ
ಜಿಷ್ಣು = ಅರ್ಜುನನ ಹೆಸರು (ಇಂದ್ರ, ವಿಷ್ಣುವಿನ ಹೆಸರೂ ಹೌದು)
ಸ್ಥಾಣು = ಶಿವನ ಹೆಸರು
ಗಿರಿಸುತ = ಮೈನಾಕ ಇರಬೇಕು, ಹನುಮಂತ ಲಂಕೆಗೆ ಹಾರುವಾಗ ತನ್ನಲ್ಲಿ ವಿಶ್ರಾಂತಿ ತೆಗೆದುಕೊಳ್ಳಲಿ ಎಂದು ಎದ್ದು ನಿಂತ ಬೆಟ್ಟವಲ್ಲವೇ?
ಗೀರ್ವಾಣ ವಿನುತ – ಭಾಷೆಯಭಿಮಾನಿ ಭಾರತಿ ನಮಸ್ಕರಿಸುವ ( ವಾಯು ಬ್ರಹ್ಮ ಪದವಿಗೆ ಬರುವಂತೆ ಭಾರತಿ ಸರಸ್ವತಿಯಾಗುವವಳು
ಜರಿಜ ವಿನಾಶಕ – ಬಹುಷಃ ಜರಾಸಂಧನ ಕೊಂದವನು ಅಂತಿರಬೇಕು. ಹಾಗಿದ್ದರೆ ಗಿರಿಸುತ ಪಾಲಕ, ಜರಿಜ ವಿನಾಶಕ, ಹರಿಮತ ಸ್ಥಾಪಕ ಎಂಬಲ್ಲಿ ಹನುಮ ಭೀಮ ಮಧ್ವ ಅವತಾರಗಳನ್ನು ಸ್ಮರಿಸಿದಂತಾಯಿತು.

Advertisements