ಶ್ರೀ ದುರ್ಗಾ ಸುಳಾದಿ

ರಾಗ ಭೈರವಿ – ಧ್ರುವತಾಳ

ದುರ್ಗಾ ದುರ್ಗೆಯೆ ಮಹಾ ದುಷ್ಟ ಜನ ಸಂಹಾರೆ
ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ
ದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮ
ಭರ್ಗಾದಿಗಳಿಗೆಲ್ಲ ಗುಣಿಸಿದರೂ
ಸ್ವರ್ಗ ಭೂಮಿ ಪಾತಾಳ ಸಮಸ್ತ ವ್ಯಾಪುತ ದೇವಿ
ವರ್ಗಕ್ಕೆ ಮೀರಿದ ಬಲು ಸುಂದರಿ
ದುರ್ಗಣದವರ ಬಾಧೆ ಬಹಳವಾಗಿದೆ ತಾಯಿ
ದುರ್ಗತಿಹಾರೆ ನಾನು ಪೇಳುವದೇನು
ದುರ್ಗಂಧವಾಗಿದೆ ಸಂಸೃತಿ ನೋಡಿದರೆ
ನಿರ್ಗಮ ನಾ ಕಾಣೆನಮ್ಮ ಮಂಗಳಾಂಗೆ
ದುರ್ಗೆ ಹೇ ದುರ್ಗೆ ಮಹಾ ದುರ್ಗೆ ಭೂ ದುರ್ಗೆ ವಿಷ್ಣು-
ದುರ್ಗೆ ದುರ್ಜಯೆ ದುರ್ಧಷೆ ಶಕ್ತಿ
ದುರ್ಗ ಕಾನನ ಗಹನ ಪರ್ವತ ಘೋರ ಸರ್ಪ
ಗರ್ಗರ ಶಬ್ದ ವ್ಯಾಘ್ರ ಕರಡಿ ಮೃತ್ಯು
ವರ್ಗ ಭೂತ ಪ್ರೇತ ಪೈಶಾಚಿ ಮೊದಲಾದ
ದುರ್ಗಣ ಸಂಕಟ ಪ್ರಾಪ್ತವಾಗೆ
ದುರ್ಗಾ ದುರ್ಗೆ ಎಂದು ಉಚ್ಚಸ್ವರದಿಂದ
ನಿರ್ಗಳಿತನಾಗಿ ಒಮ್ಮೆ ಕೂಗಿದರೂ
ಸ್ವರ್ಗಾಪವರ್ಗದಲ್ಲಿ ಹರಿಯೊಡನೆ ಇದ್ದರೂ
ಸುರ್ಗಣ ಜಯ ಜಯವೆಂದು ಪೊಗಳುತಿರೆ
ಕರ್ಗಂಳಿಂದಲಿ ಎತ್ತಿ ಸಾಕುವ ಸಾಕ್ಷಿ ಭೂತೆ
ನೀರ್ಗುಡಿದಂತೆ ಲೋಕಲೀಲೆ ನಿನಗೆ
ಸ್ವರ್ಗಂಗಾಜನಕ ನಮ್ಮ ವಿಜಯವಿಠ್ಠಲನಂಘ್ರಿ
ದುರ್ಗಾಶ್ರಯ ಮಾಡಿ ಬದುಕುವಂತೆ ಮಾಡು

ಮಟ್ಟ ತಾಳ

ಅರಿದರಾಂಕುಶ ಶಕ್ತಿ ಪರಶು ನೇಗಿಲು ಖಡ್ಗ
ಸರಸಿಜ ಗದೆ ಮುದ್ಗರ ಚಾಪ ಮಾರ್ಗಣ
ವರ ಅಭಯ ಮುಸಲ ಪರಿ ಪರಿ ಆಯುಧವ
ಧರಿಸಿ ಮೆರೆವ ಲಕುಮಿ ಸರಸಿಜ ಭವ ರುದ್ರ
ಸರುವ ದೇವತೆಗಳ ಕರುಣಾಪಾಂಗದಲ್ಲಿ
ನಿರೀಕ್ಷಿಸಿ ಅವರವರ ಸ್ವರೂಪ ಸುಖ ಕೊಡುವ
ಸಿರಿಭೂಮಿದುರ್ಗಾ ಸರ್ವೋತ್ತಮ ನಮ್ಮ ವಿಜಯವಿಠ್ಠಲನಂಘ್ರಿ
ಪರಮ ಭಕುತಿಯಿಂದ ಸ್ಮರಿಸುವ ಜಗಜ್ಜನನಿ

ತ್ರಿವಿಡಿ ತಾಳ

ಸ್ತುತಿ ಮಾಡುವೆ ನಿನ್ನ ಕಾಳಿ ಮಹ ಕಾಳಿ ಉ-
ನ್ನತ ಬಾಹು ಕರಾಳವದನೆ ಚಂದಿರ ಮುಖೆ
ಧೃತಿ ಶಾಂತಿ ಬಹುರೂಪೆ ರಾತ್ರಿ ರಾತ್ರಿ ಚರಣೆ
ಸ್ಥಿತಿಯೆ ನಿದ್ರಾ ಭದ್ರೆ ಭಕ್ತವತ್ಸಲೆ ಭವ್ಯೆ
ಚತುರಷ್ಟ ದ್ವಿ ಹಸ್ತೆ ಹಸ್ತಿ ಹಸ್ತಿ ಗಮನೆ ಅ-
ದ್ಭುತ ಪ್ರಬಲೆ ಪ್ರವಾಸೆ ದುರ್ಗಾರಣ್ಯವಾಸೆ
ಕ್ಷಿತಿಭಾರಹರಣೆ ಕ್ಷೀರಾಬ್ಧಿತನಯೆ ಸ-
ದ್ಗತಿ ಪ್ರದಾತೆ ಮಾಯಾ ಶ್ರೀಯೆ ಇಂದಿರೆ ರಮೆ
ದಿತಿಜಾತ ನಿಗ್ರಹೆ ನಿರ್ಧೂತ ಕಲ್ಮಷೆ
ಪ್ರತಿಕೂಲಭೇದೆ ಪೂರ್ಣಬೋಧೆ ರೌದ್ರೆ
ಅತಿಶಯ ರಕ್ತ ಜಿಹ್ವಾಲೋಲೆ ಮಾಣಿಕ್ಯಮಾಲೆ
ಜಿತಕಾಮೆ ಜನನ ಮರಣ ರಹಿತೆ ಖ್ಯಾತೆ
ಘೃತಪಾತ್ರ ಪರಮಾನ್ನ ತಾಂಬೂಲ ಹಸ್ತೆ ಸು-
ವ್ರತೆ ಪತಿವ್ರತೆ ತ್ರಿನೇತ್ರೆ ರಕ್ತಾಂಬರೆ
ಶತಪತ್ರನಯನೆ ನಿರುತಕನ್ಯೆ ಉದಯಾರ್ಕ-
ಶತಕೋಟಿ ಸನ್ನಿಭೆ ಹರಿಯಾಂಕಸಂಸ್ಥೆ
ಶ್ರುತಿತತಿನುತೆ ಶುಕ್ಲ ಶೋಣಿತರಹಿತೆ ಅ-
ಪ್ರತಿಹತೆ ಸರ್ವದಾ ಸಂಚಾರಿಣಿ ಚತುರೆ
ಚತುರ ಕಪರ್ದಿಯೆ ಅಂಭ್ರಣಿ ಹ್ರೀ
ಉತ್ಪತ್ತಿ ಸ್ಥಿತಿ ಲಯಕರ್ತೆ ಶುಭ್ರಶೋಭನ ಮೂರ್ತೇ
ಪತಿತಪಾವನೆ ರನ್ನೆ ಸರ್ವೌಷಧಿಯಲ್ಲಿದ್ದು
ಹತ ಮಾಡು ಕಾಡುವ ರೂಗಂಗಳಿಂದ (ದು/ಗಳನು?*)
ಕ್ಷಿತಿಯೊಳು ಸುಖದಲ್ಲಿ ಬಾಳುವ ಮತಿ ಇತ್ತು
ಸತತ ಕಾಯಲಿ ಬೇಕು ದುರ್ಗೆ ದುರ್ಗೆ
ಚ್ಯುತದೂರ ವಿಜಯವಿಠ್ಠಲರೇಯನ ಪ್ರಿಯೆ
ಕೃತಾಂಜಲಿಯಿಂದಲಿ ತಲೆ ಬಾಗಿ ನಮಿಸುವೆ

ಅಟ್ಟತಾಳ

ಶ್ರೀಲಕ್ಷ್ಮಿ ಕಮಲಾ ಪದ್ಮಾ ಪದ್ಮಿನಿ ಕಮ-
ಲಾಲಯೆ ರಮಾ ವೃಷಾಕಪಿ ಧನ್ಯಾ ವೃದ್ಧಿ ವಿ-
ಶಾಲಾ ಯಜ್ಞಾ ಇಂದಿರೆ ಹಿರಣ್ಯ ಹರಿಣಿ
ವಾಲಯ ಸತ್ಯ ನಿತ್ಯಾನಂದ ತ್ರಯಿಸುಧಾ
ಶೀಲೆ ಸುಗಂಧಿ ಸುಂದರಿ ವಿದ್ಯಾ ಸುಶೀಲೆ
ಸುಲಕ್ಷಣದೇವಿ ನಾನಾ ರೂಪಗಳಿಂದ ಮೆರೆವ ಮೃತ್ಯುನಾಶೆ
ವಾಲಗ ಕೊಡು ಸಂತರ ಸನ್ನಿಧಿಯಲ್ಲಿ
ಕಾಲಕಾಲಕ್ಕೆ ಎನ್ನ ಭಾರವಹಿಸುವ ತಾಯಿ
ಮೇಲು ಮೇಲು ನಿನ್ನ ಶಕ್ತಿ ಕೀರ್ತಿ ಬಲು
ಕೇಳಿ ಕೇಳೀ ಬಂದೆ ಕೇವಲ ಈ ಮನ
ಘಾಳಿಯಂತೆ ಪರದ್ರವ್ಯಕ್ಕೆ ಪೋಪುದು
ಏಳಲ ಮಾಡದೆ ಉದ್ಧಾರವ ಮಾಡುವ
ಕೈಲಾಸಪುರದಲ್ಲಿ ಪೂಜೆಗೊಂಬ ದೇವಿ
ಮೂಲಪ್ರಕೃತಿ ಸರ್ವ ವರ್ಣಾಭಿಮಾನಿನಿ
ಪಾಲಸಾಗರಶಾಯಿ ವಿಜಯವಿಠ್ಠಲನೊಳು
ಲೀಲೆ ಮಾಡುವ ನಾನಾಭರಣೆ ಭೂಷಣೆ ಪೂರ್ಣೆ

ಆದಿತಾಳ
ಗೋಪಿನಂದನೆ ಮುಕ್ತೆ ದೈತ್ಯ ಸಂತತಿಗೆ ಸಂ-
ತಾಪವ ಕೊಡುತಿಪ್ಪ ಮಹಾ ಕಠೋರ ಉಗ್ರ-
ರೂಪ ವೈಲಕ್ಷಣೆ ಅಜ್ಞಾನಕ್ಕಭಿಮಾನಿನಿ
ತಾಪತ್ರಯವಿನಾಶೆ ಓಂಕಾರೆ ಹೂಂಕಾರೆ
ಪಾಪಿ ಕಂಸಗೆ ಭಯ ತೋರಿದೆ ಬಾಲ ಲೀಲೆ
ವ್ಯಾಪುತೆ ಧರ್ಮ ಮಾರ್ಗ ಪ್ರೇರಣೆ ಅಪ್ರಾಕೃತೆ
ಸ್ವಾಪದಲ್ಲಿ ನಿನ್ನ ನೆನೆಸಿದ ಶರಣನಿಗೆ
ಅಪಾರವಾಗಿದ್ದ ವಾರಿಧಿಯಂತೆ ಮಹಾ
ಆಪತ್ತು ಬಂದಿರಲು ಹಾರಿ ಪೋಗೋವು ಸಪ್ತ
ದ್ವೀಪನಾಯಿಕೆ ನರಕ ನಿರ್ಲೇಪೆ ತಮೋಗುಣದ
ವ್ಯಾಪಾರ ಮಾಡಿಸಿ ಭಕ್ತ ಜನಕೆ ಪುಣ್ಯ
ಸೋಪಾನ ಮಾಡಿ ಕೊಡುವ ಸೌಭಾಗ್ಯವಂತೆ ದುರ್ಗೆ
ಪ್ರಾಪುತವಾಗಿ ಎನ್ನ ಮನದಲಿ ನಿಂದು ದುಃಖ-
ಕೂಪದಿಂದಲಿ ಎತ್ತಿ ಕಡೆ ಮಾಡು ಜನ್ಮಂಗಳನು
ಸೌಪರ್ಣಿ ಮಿಗಿಲಾದ ಸತಿಯರು ನಿತ್ಯ ನಿನ್ನ
ಆಪಾದ ಮೌಳಿ ತನಕ ಭಜಿಸಿ ಭವ್ಯರಾದರು
ನಾ ಪೇಳುವದೇನು ಪಾಂಡವರ ಮನೋಭೀಷ್ಟೆ
ಈ ಪಂಚ ಭೌತಿಕದಲ್ಲಿ ಆವ ಸಾಧನ ಕಾಣೆ
ಶ್ರೀಪತಿನಾಮ ಒಂದೇ ಜಿಹ್ವಾಗ್ರದಲ್ಲಿ ನೆನೆವ
ಔಪಾಸನೆ ಕೊಡು ರುದ್ರಾದಿಗಳ ವರದೆ
ತಾಪಸ ಜನಪ್ರಿಯ ವಿಜಯವಿಠ್ಠಲ ಮೂರ್ತಿಯ
ಶ್ರೀಪಾದಾರ್ಚನೆ ಮಾಳ್ಪಾ ಶ್ರೀಭೂದುರ್ಗಾವರ್ಣಾಶ್ರಯೆ

ಜತೆ

ದುರ್ಗೆ ಹಾ ಹೇ ಹೋ ಹಾ ದುರ್ಗೆ ಮಂಗಳ ದುರ್ಗೆ
ದುರ್ಗತಿ ಕೊಡದಿರು ವಿಜಯವಿಠ್ಠಲನ ಪ್ರಿಯೆ

ವಿಜಯದಾಸರ ಈ ದುರ್ಗಾ ಸುಳಾದಿಯೇ ಇರಬೇಕು ನಾನು ಮೊದಲು ಕೇಳಿದ ಸುಳಾದಿ. ನಮ್ಮಮ್ಮ ಇದನ್ನ ಹೇಳುತ್ತಿದ್ದ ನೆನಪಿದೆ. ಆಗಿನ್ನೂ ಸುಳಾದಿ ಅಂದರೆ ಏನು ಅಂತ ಗೊತ್ತಿರಲಿಲ್ಲ. ನಮ್ಮಮ್ಮನೂ ಹೇಳ್ತಾ ಇದ್ದದ್ದು ಬಹುಶಃ ಈ ಸುಳಾದಿಯನ್ನ, ಜೊತೆಗೆ ಜಗನ್ನಾಥದಾಸರ ‘ದುರಿತವನ ಕುಠಾರ’ ಎಂದು ಶುರುವಾಗುವ ನರಸಿಂಹ ಸುಳಾದಿ ಮತ್ತು ವಿಜಯದಾಸರ ಧನ್ವಂತ್ರಿ ಸುಳಾದಿಗಳನ್ನ ಮಾತ್ರ, ಅಥವಾ ಅವಷ್ಟೆ ನನ್ನ ನೆನಪಿನಲ್ಲಿ ಉಳಿದಿರುವದೇನೊ.

ಮುಂದೆ ನಮ್ಮಮ್ಮ ಮತ್ತು ಅಪ್ಪ ಇಬ್ಬರಿಗೂ ಸುಳಾದಿಗಳಲ್ಲಿ ಆಸಕ್ತಿ ಹುಟ್ಟಿ, ಅವುಗಳನ್ನ ಹೇಳಿಕೊಳ್ಳಲು ಮತ್ತು ತಿಳಿಸಿಕೊಡಲು ಹಿರಿಯರಾದ ವೆಂಕಟರಾಯರು, ರಾಘಣ್ಣ ಅವರು, ಶ್ರೀನಿವಾಸರಾಯರು, ಜಯಪ್ಪ ಅವರು ಮತ್ತು ವೆಂಕಮ್ಮ ಮಾಮಿ ಅವರ ಸಂಪರ್ಕ ಬರುವಷ್ಟರಲ್ಲಿ ನಾನು ಮನೆಯಿಂದ ಹೊರಬಿದ್ದು ಇಂಜಿನಿಯರಿಂಗಿಗೆ ಅಂತ ಹಾಸ್ಟೆಲ್ ಸೇರಿದ್ದೆ, ಅದರ ನಂತರ ಕೆಲಸಕ್ಕೆ ಅಂತ ಬೆಂಗಳೂರು, ಸ್ಯಾನ್ ಹೋಸೆ ಸೇರಿದ್ದಾಯಿತು. ಅದೆಲ್ಲದರ ಮಧ್ಯದಲ್ಲಿ ಆಗಾಗ ಮನೆಗೆ ಹೋದಾಗ ದೊರಕಿದ ಸಂಪರ್ಕದಲ್ಲಿ ಆಗಾಗ ಸುಳಾದಿಗಳನ್ನ ಕೇಳುತ್ತಿದ್ದೆ. ಅಪ್ಪ ಅಮ್ಮರು ಹೇಳುವ ವಿಷಯಗಳಿಂದ ಅವುಗಳ ಬಗ್ಗೆ ಆಸಕ್ತಿ ಮೂಡುತ್ತಿತ್ತು. ಆದರೂ ಅವುಗಳನ್ನ ಹೇಳಿಕೊಳ್ಳಬೇಕು ಅಂತ ಅನ್ನಿಸಿರಲಿಲ್ಲ. ಸಾಕಷ್ಟು ಚರಣಗಳನ್ನುಳ್ಳ, ದೊಡ್ಡದಾಗಿ ಕಾಣುತ್ತಿದ್ದ ಸುಳಾದಿಗಳನ್ನ ಯಾರಾದರೂ ಹೇಳುತ್ತಿದ್ದರೆ ಕೇಳುತ್ತಿದ್ದೆ ಅಷ್ಟೆ. ಕೆಲವು ಸುಳಾದಿಗಳು ಸ್ವಲ್ಪ ಮಟ್ಟಿಗಾದರೂ ನೆನಪಿನಲ್ಲಿ ಉಳಿಯತೊಡಗಿದ್ದು ರಾಯಚೂರು ಶೇಷಗಿರಿದಾಸರು ಹಾಡಿದ ‘ಪಂಚರತ್ನ ಸುಳಾದಿ’ಗಳ ಕ್ಯಾಸೆಟ್ಟನ್ನು ಕೊಂಡು ತಂದದ್ದು ಮತ್ತು ಆ ಕ್ಯಾಸೆಟ್ಟನ್ನ ಕಾರಿನಲ್ಲಿ ಇಟ್ಟುಕೊಂಡು ಸಾಕಷ್ಟು ಸಾರಿ ಕೇಳಿದ ಮೇಲೆ. ಇಷ್ಟಾದರೂ ಸುಳಾದಿಗಳ ಪ್ರಪಂಚದ ಒಂದು ಇಣುಕು ನೋಟವನ್ನಷ್ಟೇ ಇಲ್ಲಿಯವರೆಗೆ ನೋಡಿದ್ದು. ಆದಷ್ಟು ಆದಾಗ ಓದುತ್ತ ಇರಬೇಕು.

ಅಮ್ಮನ ಬಾಯಿಯಲ್ಲಿ ದುರ್ಗಾ ಸುಳಾದಿಯನ್ನ ಕೇಳುತ್ತಿದ್ದಾಗ ಅದರ ಕೊನೆಗೆ ಜತೆಯಲ್ಲಿ ಬರುವ ದುರ್ಗೆ ಹಾ ಹೇ ಹೋ ಹಾ ಎನ್ನುವದನ್ನ ಕೇಳಿ ಮೊದಮೊದಲು ಆಶ್ಚರ್ಯವಾಗುತ್ತಿತ್ತು. ಈಗಿನ ಆಶ್ಚರ್ಯವೆಂದರೆ, ಇಷ್ಟು ವರ್ಷಗಳ ನಂತರವೂ ನನಗೆ ಅದರ ಅರ್ಥ ತಿಳಿದಿಲ್ಲ! ‘ಹಿ’ ಎನ್ನುವದು ಲಜ್ಜಾ ಬೀಜ ಅಥವಾ ಲಕ್ಷ್ಮೀಯನ್ನ ಧ್ಯಾನಿಸುವ ಅಕ್ಷರ ಎಂದು ಕೇಳಿರುವೆ. ರಾಯರ ಸ್ತೋತ್ರದ ಕೊನೆಯಲ್ಲಿ ಬರುವ ‘ಸಾಕ್ಷೀ ಹಯಾಸ್ಯೋsತ್ರ ಹೀ’ ಎಂಬ ರಾಘವೇಂದ್ರ ಸ್ವಾಮಿಗಳ ಆಶೀರ್ವಚನಕ್ಕೆ ‘ಲಕ್ಷ್ಮೀ ಹಯವದನರೇ ಸಾಕ್ಷಿ’ ಎಂದರ್ಥವಂತೆ. ಈ ಸುಳಾದಿಯಲ್ಲಿ ಬರುವ ‘ಹಾ ಹೇ ಹೋ ಹಾ’ ಎಂಬುವು ದುರ್ಗೆಯನ್ನ ಸೂಚಿಸುವಂತಹವೇ?

ಅದೊಂದೇ ಪ್ರಶ್ನೆಯಲ್ಲ, ಇನ್ನೂ ಹಲವು ಪ್ರಶ್ನೆಗಳಿವೆ,
೧. ಈ ಸುಳಾದಿಯ ಪ್ರತಿ ಚರಣಕ್ಕೆ ಬಳಸಿದ ತಾಳಕ್ಕೂ, ಆ ಚರಣದಲ್ಲಿ ವ್ಯಕ್ತಪಡಿಸಿದ ಭಾವಕ್ಕೂ ಇರುವ ಸಂಬಂಧವೇನು? ಮೊದಲ ಚರಣದಲ್ಲಿ ದುರ್ಗೆಯ ಮಹತ್ವದ ವಿಚಾರವಿದೆ, ಲೋಕಲೀಲೆಯೆಂಬುದು ಅವಳಿಗೆ ನೀರುಕುಡಿದಷ್ಟು ಸುಲಭ ಎನ್ನುತ್ತಾರೆ. ದುರ್ಗಂಧವಾದ ಸಂಸೃತಿ(ಹುಟ್ಟು ಸಾವಿನ ಸಂಸಾರ)ಯಿಂದ, ಬರುವ ಆಪತ್ತುಗಳಿಂದ ರಕ್ಷಿಸಿ ಸ್ವರ್ಗದ ಗಂಗೆಯ ತಂದೆಯಾದ ವಿಜಯವಿಠ್ಠಲನ ಆಶ್ರಯ ಮಾಡಿಕೊಂಡು ಬದುಕುವಂತೆ ಮಾಡು ಎಂದು ಪ್ರಾರ್ಥಿಸುತ್ತಾರೆ. ಈ ಚರಣಕ್ಕೆ ಬಳಸಿದ ಧ್ರುವ ತಾಳ ಇಲ್ಲಿನ ಭಾವವನ್ನ ಹೇಗೆ ಕಟ್ಟಿ ಕೊಡುತ್ತದೆ? ಅದೇ ರೀತಿ ಉಳಿದ ಚರಣಗಳಲ್ಲಿ ವ್ಯಕ್ತವಾಗುವ ಭಾವಗಳನ್ನ ಆಯಾ ಚರಣಗಳ ತಾಳಗಳು ಹೇಗೆ ಉದ್ದೀಪಿಸುತ್ತವೆ?

೨. ಮೊದಲ ಚರಣದ ಕೊನೆಯೆರಡು ಸಾಲುಗಳಲ್ಲಿ ಬರುವ ವಿಜಯವಿಠ್ಠಲನಂಘ್ರಿ ದುರ್ಗಾಶ್ರಯ ಮಾಡಿ ಬದುಕುವಂತೆ ಮಾಡು ಎನ್ನುವದನ್ನ, ವಿಜಯವಿಠ್ಠಲನ ಪಾದವನ್ನು ದುರ್ಗೆ ನಿನ್ನ ಮೂಲಕ ಆಶ್ರಯಿಸುವಂತೆ ಮಾಡಿ ಬದುಕಿಸು ಎಂದು ಅರ್ಥ ಮಾಡುವದೋ ಅಥವಾ ವಿಜಯವಿಠ್ಠಲನಂಘ್ರಿದುರ್ಗ (ಅಥವಾ ಅವನ ಪಾದಕಮಲದ ಊರು, ವೈಕುಂಠ) ಎಂಬ ಅರ್ಥ ಬರುವುದೋ? ಇಲ್ಲಾ ಎರಡೂ ತರಹ ಅರ್ಥೈಸಬಹುದೊ?

೩. ಎರಡನೇ ಚರಣದಲ್ಲಿ ಹೇಳಿರುವದು ಅಂಭೃಣೀಸೂಕ್ತದ ವಿಷಯವಿದ್ದಂತೆ ತೋರುತ್ತದೆ. ಅದರ ಜೊತೆಗೆ ಬರುವ ದೇವಿಯ ನಾನಾ ವಿಧದ ಆಯುಧಗಳ ಉಲ್ಲೇಖ ಬರೀ ದುರ್ಗಾ ರೂಪಕ್ಕೆ ಸಂಬಂಧಪಟ್ಟವೋ ಅಥವಾ ಶ್ರೀ, ಭೂ, ದುರ್ಗಾ ಎಂಬ ಮೂರು ರೂಪಗಳಿಗೂ ಸಂಬಂಧಪಟ್ಟವೋ?

೪. ಮೂರನೇ ಚರಣದಲ್ಲಿ, ಹೆಚ್ಚಿನ ಪುಸ್ತಕಗಳಲ್ಲಿ ನೋಡಿದಂತೆ ಮತ್ತು ನಾನು ಕೇಳಿದಂತೆ ಹೆಚ್ಚಿನ ಪಾರಾಯಣದಲ್ಲಿ, ‘ಸರ್ವೌಷಧಿಯಲಿದ್ದು ಹತ ಮಾಡು ಕಾಡುವ ರೋಗಂಗಳಿಂದ’ ಎನ್ನುವ ಸಾಲಿದೆ. ಇದು ಅರ್ಥ ಸರಿ ಹೋಗುವದಿಲ್ಲ ಅಲ್ಲವೆ? ಒಂದು ಪುಸ್ತಕದಲ್ಲಿ ‘ಸರ್ವೌಷಧಿಯಲಿದ್ದು ಹತ ಮಾಡು ಕಾಡುವ ರೋಗಂಗಳನು’ ಎಂದಿರುವದನ್ನ ನೋಡಿದ್ದೇನೆ. ಇತ್ತೀಚೆಗೆ ಅನಿಸುತ್ತಿರುವದು ಇದು ಬಹುಶಃ ‘ಸರ್ವೌಷಧಿಯಲಿದ್ದು ಹತ ಮಾಡು ಕಾಡುವ ರೋಗಂಗಳಿಂದು’ ಎಂದಿರಬಹುದೇ ಎಂದು.

೫. ಕೊನೆಯ ಚರಣದಲ್ಲಿ ಬರುವ ‘ನಾ ಪೇಳುವದೇನು ಪಾಂಡವರ ಮನೋಭೀಷ್ಟೆ’ ಎಂಬುದಕ್ಕೆ ಅರ್ಥವೇನು? ಕುರುಕ್ಷೇತ್ರ ಯುದ್ಧಕ್ಕೆ ಮೊದಲು ಅಕ್ಷೋಹಿಣಿ ಸೈನ್ಯ ಬೇಡ ‘ಕೃಷ್ಣನೇ ನಮ್ಮೆಡೆಗಿರಲಿ’ ಎಂದ ಅರ್ಜುನನ ಮಾತಿನ ಮೂಲಕ ವ್ಯಕ್ತವಾದ ಮನೋಭಿಷ್ಟೆಯೇ? ಅಥವಾ ಇನ್ನಾವುದಾದರೂ ಪ್ರಸಂಗವನ್ನ ಇಲ್ಲಿ ಸೂಚಿಸುತ್ತಿರುವರೋ?

೬. ‘ಈ ಪಂಚ ಭೌತಿಕದಲ್ಲಿ ಆವ ಸಾಧನ ಕಾಣೆ’ ಎಂದೇಕೆ ಹೇಳುತ್ತಿರುವರು? ‘ಮಾನವ ಜನ್ಮ ದೊಡ್ಡದು'(ಪುರಂದರದಾಸರು), ‘ಸಾಧನಕೆ ಬಗೆಗಾಣೆನೆನ್ನಬಹುದೆ'(ವಿಜಯದಾಸರು), ‘ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು'(ಜಗನ್ನಾಥದಾಸರು) ಮುಂತಾದ ಬೇರೆ ಬೇರೆ ಪದಗಳಲ್ಲಿ ವ್ಯಕ್ತವಾಗುವ ಭಾವಕ್ಕೂ ಇಲ್ಲಿ ವ್ಯಕ್ತವಾದ ಭಾವಕ್ಕೂ ವ್ಯಾತ್ಯಾಸವೆನಿಸುವದೆ? ನನಗೇ ತೋಚುವ ಸಮಾಧಾನವೆಂದರೆ ವ್ಯತ್ಯಾಸವಿಲ್ಲ, ಪಂಚಭೌತಿಕದ ಸಾಧನೆಯ ನಿರಾಕರಣ ಅದಕ್ಕಿಂತಲೂ ಉತ್ತಮವಾದ, ‘ಅಂತಕಾಲೇ ವಿಶೇಷತಃ’ ಎನ್ನುವ ಹರಿನಾಮ, ಶ್ರೀಪತಿಯ ನಾಮ ನಾಲಿಗೆಯ ಉಳಿಯುವಂತಹ ಸಾಧನೆಗೋಸ್ಕರ ಎನ್ನುವದು. ಈ ಸಾಲು ’ಪಾಂಡವರ ಮನೋಭೀಷ್ಟ’ವನ್ನ ಸೂಚಿಸುತ್ತಿದೆಯೆ?

ಇಷ್ಟೆಲ್ಲ ಪ್ರಶ್ನೆಗಳು ಪ್ರತಿ ಬಾರಿ ಓದುವಾಗಲೂ ಕಾಡುವದಿಲ್ಲ, ಬೇರೆ ಬೇರೆ ಸಂದರ್ಭಗಳಲ್ಲಿ ಅನಿಸಿದವುಗಳಿವು. ಒತ್ತಟ್ಟಿಗಿರಲಿ ಎಂದು ಇಲ್ಲಿ ಬರೆದಿರುವೆ.

ಶ್ರೀದುರ್ಗಾ ದೇವಿಯ ಈ ಸುಳಾದಿಯನ್ನ ಓದಿದಾಗ ಮನಸ್ಸು ಪ್ರಸನ್ನವಾಗುತ್ತದೆ. ನಾಲ್ಕನೇ ಚರಣದ ‘ಶ್ರೀ ಲಕ್ಷ್ಮೀ ..’ ಎಂದು ಶುರುವಾಗಿ ಹೇಳುವ ಲಕ್ಷ್ಮಿಯ ೨೪ ರೂಪಗಳನ್ನ ಹೇಳುವಾಗ ಇವು ೨೪ ತತ್ವಾಭಿಮಾನಿ ದೇವತೆಗಳಲ್ಲಿ ಅಡಕವಾದ ೨೪ ಲಕ್ಷ್ಮೀನಾರಾಯಣರ ರೂಪಗಳಲ್ಲಿನ ಲಕ್ಷ್ಮೀ ರೂಪಗಳಲ್ಲವೇ ಅಂತ ನೆನಪಾಗುತ್ತದೆ. ಅವುಗಳ ಜೊತೆಗಿನ ನಾರಾಯಣ ರೂಪ ಹಾಗೂ ಆಯಾ ರೂಪಗಳಿಂದ ಅನುಗ್ರಹಿತರಾಗುವ ತತ್ವಾಭಿಮಾನಿಗಳ ಸ್ಮರಣೆಯೂ ಆದರೆ ಎಷ್ಟು ಚನ್ನಾಗಿರುತ್ತದೆ ಅನಿಸುತ್ತದೆ.

ವಿಜಯದಶಮಿಯ ದಿವಸ ದುರ್ಗಾ ದೇವಿಯ, ಶ್ರೀ ಹರಿಯ ಪ್ರಾರ್ಥನೆ ವಿಜಯದಾಸರ ದುರ್ಗಾ ಸುಳಾದಿಯ ಮೂಲಕ. ದಾಸರಾಯರ, ಗುರುಗಳ,ಭಾರತಿವಾಯು ದೇವರ, ಲಕ್ಷ್ಮೀನಾರಾಯಣರ ಅನುಗ್ರಹ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುವೆ.

[ವಿಜಯದಶಮಿಗೆ ಬರೆದದ್ದು ಹಾಕಿರಲಿಲ್ಲ. ಇವತ್ತು ಹಾಕುತ್ತಿರುವೆ]

Advertisements

ಎರಡು ಪದ, ಮೂರು ಪುಸ್ತಕ, ಒಂದಷ್ಟು ಲಿಂಕು, ಪುರಂದರದಾಸರ ಪುಣ್ಯದಿನಕ್ಕೆ…

ದಾಸರ ಪದಗಳ ಭಜನೆಗಳನ್ನ ಕೇಳುವದು ಮತ್ತು ಅವುಗಳಲ್ಲಿ ಭಾಗವಹಿಸುದು ನನಗೆ ಬಹಳ ಇಷ್ಟವಾಗುತ್ತದೆ. ಯಾವಾಗಿನಿಂದ ಇದು ಶುರುವಾಯಿತು ಅನ್ನುವದು ನೆನಪಿನಲ್ಲಿಲ್ಲ, ಆದರೆ ಈ ಅಭಿರುಚಿ ಬೆಳೆಯಲಿಕ್ಕೆ ಚಿಕ್ಕಂದಿನ ರಜಾ ದಿನಗಳಲ್ಲಿ ನಮ್ಮ ಅಮ್ಮನ ತವರೂರು ಕುಕನೂರಿಗೆ ಹೋದಾಗ ಅಲ್ಲಿ ಪ್ರತಿ ಗುರುವಾರ ಸಂಜೆ ನಡಯುತ್ತಿದ್ದ ಭಜನೆ ಬಹಳ ಮುಖ್ಯ ಪಾತ್ರವಹಿಸಿರಬೇಕು ಅನಿಸುತ್ತದೆ. ನಮ್ಮ ಅಜ್ಜಿ ತಾತರ ಮನೆಯಲ್ಲಿ ರಾಯರ (ರಾಘವೇಂದ್ರ ಸ್ವಾಮಿಗಳ) ಬೃಂದಾವನವಿದ್ದದ್ದರಿಂದ, ಪ್ರತಿ ಗುರುವಾರ ಬೆಳಗಿನ ಹೊತ್ತು ಗಂಡಸರೆಲ್ಲ ಸೇರಿ ರಾಯರ ಅಷ್ಟೋತ್ತರ ಪಾರಾಯಣ ಮಾಡಿದರೆ ಸಂಜೆಗೆ ಹೆಂಗಸರು ಭಜನೆ ಮಾಡುತ್ತಿದ್ದರು. ಇವೆರಡು ಚಿತ್ರಗಳು ಯಾವತ್ತೂ ಮರೆಯುವದಿಲ್ಲ.ಆ ದಿನಗಳಲ್ಲಿ ಭಜನೆಗಳಲ್ಲಿ ಕೇಳಿದ ‘ನಮಃ ಪಾರ್ವತಿ ಪತಿ ನುತ ಜನ ಪರ namO ವಿರೂಪಾಕ್ಷ’, ‘ಪವಮಾನ ಪವಮಾನ ಜಗದ ಪ್ರಾಣ’, ಮೊದಲಾದ ಹಾಡುಗಳು ಇವತ್ತೂ ಆ ನೆನಪುಗಳನ್ನು ತರುತ್ತವೆ.

ಭಜನೆಗಳಲ್ಲಿ  ಪಾಲ್ಗೊಳ್ಳಲು ಇಲ್ಲಿ ಅಮೆರಿಕದಲ್ಲೂ ಸಾಧ್ಯವಾದದ್ದು ‘ಶ್ರೀ ವ್ಯಾಸ ಭಜನಾ ಮಂಡಳಿ’ಯ ಸಂಪರ್ಕವಾದ ನಂತರ. ಪ್ರತೀ ಏಕಾದಶಿಗೊಮ್ಮೆ, ಹಬ್ಬ ಹರಿದಿನಗಳಂದು, ದಾಸರ ಪುಣ್ಯ ತಿಥಿಗಳಂದು, ಹೀಗೆ ಅವಕಾಶವಾದಗಲೆಲ್ಲ ನಡೆಯುವ ಭಜನೆಗಳಲ್ಲಿ ಪಾಲ್ಗೊಂಡು ಬಹಳ ಖುಷಿಪಟ್ಟಿದ್ದೇನೆ. ಪ್ರತೀ ಬಾರಿಯೂ ಭಾಗವಹಿಸಲು ಆಗದಿದ್ದರೂ, ಅವಕಾಶವಾದಾಗ ತಪ್ಪಿಸುವದಿಲ್ಲ. ಇವತ್ತು ಪುರಂದರ ದಾಸರ ಪುಣ್ಯ ದಿನದ ನಿಮಿತ್ತ ಇದ್ದ ಭಜನೆಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಈಗ ಅದೇ ನೆಪದಲ್ಲಿ ಭಜನೆಯ ಬಗ್ಗೆ ನಾಲ್ಕು ಮಾತು ಬರೆಯುತ್ತಿರುವೆ. ಈ ಭಜನೆಗಳಲ್ಲಿ ಎಷ್ಟೋ ಹೊಸ ಹಾಡುಗಳನ್ನು ಕೇಳಿದ್ದೇನೆ. ಮೊದಲ ಬಾರಿಗೆ ಇಷ್ಟವಾದವು ಎಷ್ಟೋ ಹಾಡುಗಳು. ಎರಡು ವಾರಗಳ ಹಿಂದೆ ವೈಕುಂಠ ಏಕಾದಶಿ ನಿಮಿತ್ತದ ಭಜನೆಯಲ್ಲಿ ಪುರಂದರ ದಾಸರ ಒಂದು ಪದವನ್ನು ಕೇಳಿದೆ. ಅದು ಎಷ್ಟು ಇಷ್ಟವಾಯಿತೆಂದರೆ, ಹಾಡಿನ ಪುಸ್ತಕದಲ್ಲಿ ಆ ಪುಟದ ಚಿತ್ರವನ್ನು ಫೋನಿನ ಕ್ಯಾಮರಾದಲ್ಲಿ ಸೆರೆಹಿಡಿದು ತಂದೆ. ಆ ಹಾಡು ಇದು (ಫೋಟೋದಿಂದ ಟೈಪಿಸದೆ ಗೂಗಲಿಸಿದಾಗ ಇಲ್ಲಿ  ಸಿಕ್ಕಿದ್ದನ್ನು ಪೇಸ್ಟಿಸಿದೆ 🙂 ),

ಕನಸು ಕಂಡೇನ ಮನದಲಿ ಕಳವಳಗೊಂಡೇನ ||ಪ||
ಏನ ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ ||ಅ.ಪ||
ಪೋನ್ನದ ಕಡಗನಿಟ್ಟು ತಿಮ್ಮಯ್ಯ  ತಾ | ಪೋಲ್ವನಾಮವನಿಟ್ಟು |
ಅಂದುಗೆ ಘಲುಕೆನ್ನುತಾ ಎನ್ನಮುಂದೆ | ಬಂದು ನಿಂತಿದ್ದನಲ್ಲೇ ||೧||
ಮಕರ ಕುಂಡಲನಿಟ್ಟು ತಿಮ್ಮಯ್ಯ  ತಾ | ಕಸ್ತೂರಿ ತಿಲಕನಿಟ್ಟು |
ಗೆಜ್ಜೆ ಘಲುಕೆನುತಾ ಸ್ವಾಮಿ ತಾ | ಬಂದು ನಿಂತಿದ್ದನಲ್ಲೇ ||೨||
ಮುತ್ತಿನ ಪಲ್ಲಕ್ಕಿ ಯತಿಗಳು | ಹೊತ್ತು  ನಿಂತಿದ್ದರಲ್ಲೇ |
ಛತ್ರಚಾಮರದಿಂದ ರಂಗಯ್ಯನ | ಉತ್ಸವ ಮೂರುತಿಯ ||೩||
ತಾವರೆ ಕಮಲದಲಿ  ಕೃಷ್ಣಯ್ಯ ತಾ | ಬಂದು ನಿಂತಿದ್ದನಲ್ಲೇ |
ವಾಯುಬೊಮ್ಮಾದಿಗಳು ರಂಗಯ್ಯನ | ಸೇವಯ ಮಾಡುವರೆ ||೪||

ನವರತ್ನ ಕೆತ್ತಿಸಿದ | ಸ್ವಾಮಿ ಎನ್ನ | ಹೃದಯಮಂಟಪದಲ್ಲಿ |
ಸರ್ವಾಭರಣದಿಂದ ಪುರಂದರ | ವಿಠಲನ ನೋಡಿದೆನೇ ||೫||

*************************
ಪುರಂದರದಾಸರ ಜೀವನ ಕತೆಯನ್ನು ಹೇಳುತ್ತಾ, ಅವರ ಅನುಗ್ರಹಕ್ಕಾಗಿ ಪ್ರಾರ್ಥನೆ ಮಾಡುವ ವಿಜಯದಾಸರ ಈ ಹಾಡು ಬಹಳ ಇಷ್ಟ.
ಗುರು ಪುರಂದರ ದಾಸರೇ ನಿಮ್ಮ ಚರಣ ಕಮಲವ ನಂಬಿದೆ ||ಪ||
ಗರುವ ರಹಿತನ ಮಾಡಿ ಎನ್ನನು ಪೊರೆವ ಭಾರವು ನಿಮ್ಮದೇ ||ಅ.ಪ||
ಒಂದು ಅರಿಯದ ಮಂದಮತಿ ನಾ | ನಿಮ್ಮದು ನಿಮ್ಮನು ನಂಬಿದೆ |
ಇಂದಿರೇಶನ ಪಾದ ತೋರಿಸೋ ತಂದೆ ಮಾಡೆಲೋ ಸತ್ಕ್ರುಪೆ ||೧||
ಮಾರಜನಕನ ಸನ್ನಿಧಾನದಿ | ಸಾರಗಾಯನ ಮಾಡುವ |
ನಾರದರೆ ಈ ರೂಪದಿಂದಲಿ ಕೋರೆ ದರುಶನ ತೋರಿದೆ ||೨||
ಪುರಂದರಾಲಯ ಘಟ್ಟದೊಳು ನೀ | ನಿರುತ ಧನವ ಗಳಿಸಲು |
ಪರಮ ಪುರುಷನು ವಿಪ್ರನಂದದಿ | ಕರವ ನೀಡಿ ಯಾಚಿಸೆ ||೩||
ಪರಮ ನಿರ್ಗುಣ ಮನವನರಿತು | ಸರುವ ಸೂರಿಯ ಗಯಿಸಿದ |
ಅರಿತು ಮನದಲಿ ಜರಿದು ಭವಗಳ | ತರುಣಿ ಸಹಿತ ಹೊರ ಹೊರಟನೆ ||೪||
ಅಜಭವಾದಿಗಳರಸನಾದ | ವಿಜಯವಿಠಲನ ಧ್ಯಾನಿಪ |
ನಿಜ ಸುಜ್ಞಾನವ ಕೊಡಿಸ ಬೇಕೆಂದು | ಭಜಿಪೆನೋ ಕೇಳ್ ಗುರುವರ ||೫||
ಹಂಸಾನಂದಿ ಅವರು ಪುರಂದರದಾಸರು ಪುರಂದರಗಡದವರು ಹೌದೆ ಅಲ್ಲವೇ ಎಂಬುದರ ಕುರಿತು ಚಿಕ್ಕ ಟಿಪ್ಪಣಿಯನ್ನೂ ಮತ್ತು ಅದರ ಜೊತೆಗೆ ಮೂಗುತಿ ಪ್ರಕರಣವನ್ನು  ತಮ್ಮ ಕಲ್ಪನೆಯಲ್ಲಿ ಒಳ್ಳೆಯ ಕತೆಯಾಗಿ ಹೆಣೆದದ್ದನ್ನೂ ಹಾಕಿದ್ದನ್ನು ನೋಡಿದೆ. ಸೊಗಸಾಗಿದೆ ಮಾಹಿತಿ ಮತ್ತು ಕತೆ. ಅದನ್ನ ಇಲ್ಲಿ ((ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ ….) ಓದಬಹುದು.
*******************************
ಹರಿದಾಸರ ಬಗ್ಗೆ ಆಸಕ್ತಿ ಮೂಡಿಸಿದ ಮೊದಲ ಪುಸ್ತಕ ಬೇಲೂರು ಕೇಶವ ದಾಸರ ‘ಕರ್ನಾಟಕ ಭಕ್ತ ವಿಜಯ’. ಅದರಲ್ಲಿ ಹರಿದಾಸ ಪರಂಪರೆಗೆ ಪೋಷಕರಾದ ಯತಿಗಳ ಮತ್ತು ಹರಿದಾಸರುಗಳ ಜೀವನ ಕಥನವನ್ನು ಬಹಳಷ್ಟು ಬಾರಿ ಓದಿದ್ದೇನೆ. ಇವತ್ತಿಗೂ ಮನಸ್ಸು ವ್ಯಗ್ರವಾದಾಗ ಅದನ್ನು ಹಿಡಿದು ಅದರಲ್ಲಿ ಯಾವುದೇ ದಾಸರ, ಯತಿಗಳ ಕತೆ ಓದಿದರೂ ಮತ್ತೆ ಮನಸ್ಸಿಗೆ ಹಿತವಾಗುತ್ತದೆ.
ಅದಾದ ಮೇಲೆ ಬಹಳಷ್ಟು ಹಿಡಿಸಿದ್ದು ಬನ್ನಂಜೆ ಗೋವಿಂದಾಚಾರ್ಯರ ಪ್ರವಚನವೊಂದರ ಪುಸ್ತಕ ರೂಪ ‘ಪುರಂದರೋಪನಿಷತ್’. ಪುರಂದರ ದಾಸರ ಒಂದು ಪದ ‘ಏಳು ನಾರಾಯಣ‘ವನ್ನು ಎಳೆ ಎಳೆಯಾಗಿ ಬಿಡಿಸಿ, ಅದರ ಆಧ್ಯಾತ್ಮಿಕ ಅರ್ಥದ ಹೊಳಹನ್ನು ತೋರಿಸಿ, ಪುರಂದರ ದಾಸರ ಸಾಹಿತ್ಯವನ್ನು ವ್ಯಾಸತೀರ್ಥರು ಪುರಂದರೋಪನಿಷತ್ ಎಂದು ಯಾಕೆ ಕರೆದಿದ್ದರು ಎಂಬುದನ್ನು ಬಹಳ ಚನ್ನಾಗಿ ತಿಳಿಸಿದ ಪುಸ್ತಕವದು. ಮತ್ತೆ ಮತ್ತೆ ಓದಬೇಕು ಅನಿಸುವ ಪುಸ್ತಕ.
*******************************
ಪುರಂದರ ದಾಸರ ಪದಗಳ ಬಗ್ಗೆ ಓದಿದ ವಿಶಿಷ್ಟ ಪುಸ್ತಕ ಡಾ| ಎಚ್ ಎನ್ ಮುರಳೀಧರ ಅವರ ‘ತಂಬೂರಿ ಮೀಟಿದವ’. ಪುರಂದರದಾಸರ ಪದಗಳನ್ನು ಈ ನೋಟದಲ್ಲಿ ನೋಡುವ ಪ್ರಯತ್ನವೊಂದು ಖಂಡಿತವಾಗಿಯೂ ಬೇಕಿತ್ತು. ಪದಗಳಲ್ಲಿ ಬರುವ ಹಲವು ವಿಧವಾದ ಪಲ್ಲವಿಗಳನ್ನು ಇವರು ವಿಂಗಡಿಸಿದ ರೀತಿ, ಪದಗಳ ಛಂದಸ್ಸು, ಶೈಲಿಗಳ ಚಿಂತನೆ, ಪದಗಳಲ್ಲಿ ಬಳಕೆಯಾದ ಅಡು ಮಾತು, ಹೀಗೆ ಹಲವು ಬಗೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದ ರೀತಿ ಬಹಳ ಹಿಡಿಸಿತು. ದಾಸರ ಪದಗಳನ್ನು ಇವರು ದೇಸೀ ಅಭಿವ್ಯಕ್ತಿ ಸ್ವರೂಪದ ಹಿನ್ನೆಲೆಯಲ್ಲಿ ನೋಡುವ ನೋಟ ಬಹು ವಿಶಿಷ್ಟವಾಗಿದೆ. ಈ ಪುಸ್ತಕದ ಪರಿವಿಡಿ ನೋಡಿ ಪುಸ್ತಕವನ್ನು ಕೊಂಡಿದ್ದೆ. ಇದನ್ನ ಒಂದು ಬಾರಿ ಓದಿ ಮುಗಿಸುವದು ನನಗಾಗುವದಿಲ್ಲ. ನಿಧಾನವಾಗಿ ಅವಕಾಶವಾದಂತೆ ಒಂದೊಂದೇ ಅಧ್ಯಾಯಗಳನ್ನು ಓದುತ್ತಿರುವೆ.

ತುಂಗಭದ್ರೆಯ ಪ್ರವಾಹದಲ್ಲಿ ಚೀಕಲಪರವಿ, ವಿಜಯದಾಸರ ಊರು …

ವಿಜಯ ದಾಸರ ಊರು ಚೀಕಲಪರವಿ, ಅಲ್ಲಿಯ ಅಶ್ವತ್ಥ ಕಟ್ಟೆ, ನರಸಿಂಹ ದೇವರು, ವಿಜಯದಾಸರ ಮನೆಗಳನ್ನ ಕೆಲವು ವರ್ಷಗಳ ಹಿಂದೆ ನೋಡಿದ್ದೆ. ವಿಜಯದಾಸರ ಮನೆಯ ಜಾಗ ಎತ್ತರದ ಮೇಲಿದೆ. ಅಲ್ಲಿಂದ ಎಷ್ಟೋ ದೂರದಲ್ಲಿದೆ ಅನಿಸಿದ್ದ ತುಂಗಭದ್ರೆ ಅವರ ಮನೆ ಮೆಟ್ಟಿಲಿಗೆ ಬಂದಿತ್ತಂತೆ. ಅಶ್ವತ್ಥ ಕಟ್ಟೆ ಯೇನು, ಆ ಅಶ್ವತ್ಥ ಮರದ ತುದಿ ಮಾತ್ರ ಹೊರಗೆ ಕಾಣುವಷ್ಟು ನೀರು ಬಂದಿತ್ತಂತೆ ಅಂತ ನನ್ನ ತಮ್ಮ ಫೋನಿನಲ್ಲಿ ಹೇಳಿದಾಗ ನಂಬಲಿಕ್ಕೇ‌ ಆಗಲಿಲ್ಲ. ಅಲ್ಲಿಯ ಪ್ರತ್ಯಕ್ಷ ಅನುಭವದ ಬರಹ ಗಿರಿ ದಾಸ ಬರೆದು ಕಳಿಸಿದ್ದನ್ನ ಓದಿದಾಗಲೇ ಪರಿಸ್ಥಿತಿ ಎಷ್ಟು ಗಂಭೀರವಾಗಿತ್ತು ಎನ್ನುವದು ತಿಳಿಯಿತು. ೨೦ ಆಳು ನೀರು ಮುತ್ತಿದರೆ ಪರಿಸ್ಥಿತಿ ಹೇಗಿರಬಹುದು ಅನ್ನುವದನ್ನ ಕಲ್ಪಿಸಿಕೊಳ್ಳುವದೂ ಹೆದರಿಕೆ ಹುಟ್ಟಿಸುತ್ತದೆ.

ಗಿರಿ ದಾಸ್ ಬರಹ ಇಲ್ಲಿ ಕೆಳಗಿದೆ (ಇಲ್ಲಿ ಹಾಕುವ ಬಗ್ಗೆ ತಿಳಿಸಿರುವೆ, ಅವರ ಅಭ್ಯಂತರವಿರಲಿಕ್ಕಿಲ್ಲ ಅಂದುಕೊಂಡಿರುವೆ).

———- Forwarded message ———-
From: Giri das <giri.das@….>
Date: 2009/10/16
Subject: ಹಿಂದೆಂದು ಕಂಡರಿಯದ ಆಶ್ವಿಜ ಶುದ್ಧ ದ್ವಾದಶಿ….
To: MadhwaYuvaParishat@yahoogroups.com, nilaya@yahoogroups.com

ಶ್ರೀ ವಿಜಯದಾಸರು ಹುಟ್ಟಿದ , ವಾಸಿಸಿದ ತುಂಗಭದ್ರೆಯ ತಟದಲ್ಲಿದ್ದ ಚೀಕಲಪರವಿ ಕ್ಷೇತ್ರ ಜಲಪ್ರಳಯದ ಭೀತಿ ಅನುಭವಿಸಿದ ಪ್ರತ್ಯಕ್ಷ ಅನುಭವ . (–ಶ್ರೀ ವಿಜಯದಾಸರ ವಂಶಿಕರಾದ ಶ್ರೀ ಚೀಕಲಪರವಿ ಜಗನ್ನಾಥ ದಾಸರಿಂದ ತಿಳಿದದ್ದು ) ಏಕಾದಶಿ ಸಂಜೆಯಿಂದ ತುಂಗೆ ತನ್ನ ಪ್ರವಾಹವನ್ನು ಚುರುಕು ಗೊಳಿಸಿ ,ದ್ವಾದಶಿಯಂದು ಚೀಕಲಪರವಿ ಗ್ರಾಮವನ್ನು ಸಂಪೂರ್ಣ ಜಾಲವ್ರುವುತ್ತ ಗೊಳಿಸಿ, ತನ್ನ ತಟದಲ್ಲಿದ್ದ ಶ್ರೀ ನರಸಿಂಹ ದೇವರ ಕಟ್ಟೆ ಜೊತಿಗೆ ಇಡಿ ಊರನ್ನು ಆಪೋಶನ ಮಾಡಿದಳು.

ಎಂದೆಂದೂ ಕಂಡರಿಯದ ಸುಮಾರು ಇಪ್ಪತ್ತು ಆಳು ನೀರು ನಮ್ಮ ಊರನ್ನು ಆವರಿಸಿದಾಗ ಆಗುವ ಅನುಭವ ಮಾತಿನಲ್ಲಿ ಹೇಳುವುದು ಕಷ್ಟವೇ ಸರಿ. ತುಂಗಭದ್ರೆ ಇಂದ ಕೂಗಳತೆಯ ದೂರದಲ್ಲಿ ಇದ್ದ ಚೀಕಲಪರವಿ ಸಂಪೂರ್ಣ ಜಲಾವ್ರುತ್ತವಾಗಿ ಶ್ರೀ ಅಶ್ವಥ ನರಸಿಂಹ ದೇವರ ಕಟ್ಟೆ ಮತ್ತು ಪಕ್ಕದಲ್ಲಿರುವ ಕಲ್ಯಾಣ ಮಂಟಪ ನೀರಿನಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದವು.ಶ್ರೀ ವಿಜಯದಾಸರ ಮನೆ ಊರಿನ ದಿಬ್ಬದ ಮೇಲೆ ಇರುವುದರಿಂದ ಕೆಲವರು ಶ್ರೀ ವಿಜಯದಾಸರ ಮನೆಯಲ್ಲಿ (ನಮ್ಮ ಮನೆಯಲ್ಲಿ ) ಆಶ್ರಯ ಪಡೆಯಬೇಕಾಯಿತು. ದ್ವಾದಶಿ ಪ್ರತಿ ಕ್ಷಣಕ್ಕೂ ನೀರಿನ ಮಟ್ಟ ಏರುತ್ತ, ಎಲ್ಲರು ತಮ್ಮ ಜೀವವನ್ನು ಕೈಯಲ್ಲ್ಲಿ ಹಿಡಿದುಕೊಂಡು ಕುಳಿತಿರುವಾಗ ಮನೆಗಳು ಬೀಳುವುದು ಶುರುವಾಯಿತು.ಒಂದರ ಮೆಲೊಂದಂತೆ ಮಣ್ಣಿನ ಮನೆಗಳು ಹಾಗು ಕೆಲ ಗಚ್ಚಿನ ಮನೆಗಳು ಬೀಳತೊಡಗಿದವು. ನಮ್ಮ ರೈತರು ಅದಾಗಲೇ ತಮ್ಮ ಮನೆಗಳನ್ನು ತೊರೆದು ನಮ್ಮ ಮನೆಯಲ್ಲಿ ತಮ್ಮ ಜಾನುವಾರು ಹಾಗು ಕೆಲ ಸಾಮಾನುಗಳ ಸಮೇತ ಆಶ್ರಯ ಪಡೆದರು. ದ್ವಾದಶಿ ದಿನ ಮುಂಜಾನೆ ಸುಮಾರು ಎರಡು ಆಳಸ್ಟು ಇರುವ ನೀರು ರಾತ್ರಿ ಆಗುವ ಹೊತ್ತಿಗೆ ನಮ್ಮ ಮನೆಯ ಹದಿನೈದು ಮೆಟ್ಟಿಲುಗಳು ಏರಿ ಇನ್ನು ಐದು ಮೆಟ್ಟಿಲುಗಳು ಅಸ್ಟೇ ಬಾಗಿಲಿಗೆ ಬರುವುದು ಬಾಕಿ ಉಳಿದಿತ್ತು.ಆ ರಾತ್ರಿ ಕಳೆಯುವುದು ಪ್ರತಿ ನಿಮಿಷವು ಒಂದು ಯುಗವಾಗಿಬಿಟ್ಟಿತು. ನಾವು ನಿರಂತರ ದೇವರ ಭಜನೆ ಹಾಗು ಶ್ರೀ ದಾಸರ ಸ್ಮರಣೆ ಮಾಡುತ್ತಾ ರಾತ್ರಿ ಕಳೆಯುತ್ತಿದ್ದೆವು. ದಿಬ್ಬದ ಮೇಲೆ ಇರುವ ಜನರೆಲ್ಲ ಪರಸ್ಪರ ಸಂಪರ್ಕದಿಂದ ಹಾಗು ಸಹಕಾರದಿಂದ ಧೈರ್ಯ ಕೊಂಡುಕೊಳ್ಳಲು ಪ್ರಯತ್ನಿಸುತ್ತಿದ್ದರು .ಏಕಾದಶಿ ದಿನದಿಂದಲೇ ಮೊಬೈಲ್ ಸಂಪರ್ಕ ಕಳೆದು ಹೋಗಿದ್ದರಿಂದ ಊರು ಅಕ್ಷರಸಹ ದ್ವೀಪವಾಗಿ ಹೋಗಿತ್ತು. ಎಲ್ಲರು ಜೀವವನ್ನು ತಮ್ಮ ಕೈಯಲ್ಲಿ ಹಿಡಿದು ಶ್ರೀ ವಿಜಯರಾಯರ ಹಾಗು ಶ್ರೀ ನರಸಿಂಹ ದೇವರ ಪ್ರಾರ್ಥನೆ ಮಾಡುತ್ತಾ ಇದ್ದರು. ಊರಿನಲ್ಲಿ ಮನೆಗಳು ನಿರಂತರವಾಗಿ ಬೀಳ ತೊಡಗಿದ್ದು ಹಸುಗುಸುಗಳು, ಬಾಣನ್ತಿಯರ ಪರದಾಟ ನೋಡುವುದು ಹೃದಯ ವಿದ್ರಾವಕ ಘಟನೆ, ಯಾವೊದೋ ಒಂದು ಮನೆ ಬಿದ್ದು ಮುದುಕಿ ಸತ್ತು ಹೋಗಿದ್ದಳು, ಜನರು ತಮ್ಮ ಜಾನುವಾರುಗಳನ್ನು ಕಳೆದುಕೊಂಡು ಪರಿತಪಿಸುತ್ತಿದ್ದರು,ಹುಲ್ಲಿನ ಬಣವಿಗಳು ನೀರಿನಲ್ಲಿ ಹರಿದು ಹೋಗಿ ಇದ್ದ ಜಾನುವಾರುಗಳು ಮೇವಿಗೆ ಪರಿತಪಿಸುತ್ತಿದ್ದವು. ನಾವು ಯಾವಾಗಲು ನೋಡಿದ ಸೌಮ್ಯವಾಗಿ ಹರಿಯುವ ತುಂಗೆ ಇವತ್ತು ದೊಡ್ಡ ಸಮುದ್ರದಂತೆ ತನ್ನ ಇಕ್ಕೆಲಗಳಲ್ಲಿ ಇದ್ದ ಸಮಸ್ತ ಊರುಗಳನ್ನು ಮುಳುಗಿಸಿ ಜಲ ಪ್ರಳಯದ ಭೀತಿ ಹುಟ್ಟಿಸಿ ಮುನ್ನುಗ್ಗುತಿದ್ದಳು. ನೀರು ನಮ್ಮ ಮನೆಯ ತನಕ ಅಥವಾ ಮನೆಯ ಮೇಲೆ ಬಂದರೆ ಹೇಗೆ , ಶ್ರೀ ದಾಸರಾಯರ ಅಮೂಲ್ಯ ಆಸ್ತಿಗಳಿಗೆ ಎನೂ ಆಗಬಾರದು ಎಂದು ಮೊದಲು ದೇವರ ಮನೆಯನ್ನು ಭದ್ರವಾಗಿ ಬೀಗದಿಂದ ಮುಚ್ಚಿ ಅದಕ್ಕೆ ನೀರಿನಿಂದ ತೊಂದರೆ ಆಗದಂತೆ ವ್ಯವಸ್ಥೆ ಮಾಡಿದೆವು.
ಮೊದಲು ಒಂದು ತಾಸಿಗೆ ಒಂದು ಮೆಟ್ಟಿಲು ಏರುತಿದ್ದ ನೀರು ಕ್ರಮೇಣ ಒಂದುವರೆ ತಾಸಿಗೆ ಒಂದು ಮೆಟ್ಟಿಲು ಏರುವುದು ಶುರು ವಾಯಿತು. ಆಗ ಸ್ವಲ್ಪ ಬೆಳಗಾಗುವವರೆಗೆ ನೀರು ಶ್ರೀ ವಿಜಯದಾಸರ ಮನೆಯ ಒಳಗಡೆ ಬರುವುದಿಲ್ಲ ಎಂಬುದೂ ಖಾತ್ರಿ ಆಯಿತು.
ಊರಿನ ಕೆಲ ಪ್ರಮುಖರು ,ತ್ರಯೋದಶಿ ಮುಂಜಾನೆ 6-7 ಘಂಟೆಗೆ ಬೋಟೂಗಳು ಬಂದು ಎಲ್ಲ ನಿರಾಶ್ರಿತರನ್ನು ಒಣ ಪ್ರದೇಶಕ್ಕೆ ಕರೆದೋಯ್ಯುತ್ತವೆ ಎಂದು ಪ್ರಚಾರ ಮಾಡಿದರು, ಆಗ ಕೂಡ ಸ್ವಲ್ಪ ಧೈರ್ಯ ಬಂದಿತು.ಮುಂಜಾನೆ 9 ಘಂಟೆ ಸುಮಾರಿಗೆ ಎರೆಡೆರಡು ತಾಸಿಗೆ ಒಂದೊಂದು ಮೆಟ್ಟಿಲು ನೀರು ಇಳಿಯುವುದು ಜನರಲ್ಲಿ ಧ್ಯರ್ಯ ಬಂದು ಬೋಟೂಗಳು ಬರುವುದು ಸ್ವಲ್ಪ ತಡವಾದರೂ ಸಾಮಾಧಾನದ ನಿಟ್ಟುಸಿರು ಬಿಟ್ಟರು. ಕೊನೆಗೆ ಒಂದು ಗಂಟೆಗೆ ಬಂದ ಬೋಟೂಗಳು , ಆದಸ್ಟು ಜನರನ್ನು ಒಣ ಪ್ರದೇಶಕ್ಕೆ ಕರೆದು ಕೊಂಡು ಹೋಗಿ ಬಿಟ್ಟು ಮರುದಿನ ಮುಂಜಾನೆ ಕೂಡ ತಮ್ಮ ಕೆಲಸಗಳಲ್ಲಿ ಅವಿರತವಾಗಿ ತೊಡಗಿಸಿಕೊಂಡಿದ್ದವು. ಮೂರು ದಿನದಲ್ಲಿ , ನೀರಿನ ಪ್ರವಾಹ ಸಂಪುರ್ಣ ಇಳಿದರು, ಊರಿನಲ್ಲಿ ಸತ್ತ ಜಾನುವಾರುಗಳಿಂದ ಹೊಲಸು ವಾಸನೆ ಉಂಟಾಗಿ,ಸಾಂಕ್ರಾಮಿಕ ರೋಗದ ಭೀತಿ ಇಂದ ನಾವುಗಳು ಊರು ಬಿಡಬೇಕಾಯಿತು.ಊರಿನಲ್ಲಿ ಈಗ ಹದಿನೈದು ದಿನ ಕಳೆದರು ,ಕುಡಿಯುದಕ್ಕೆ ಸ್ವಚ್ಹ ನೀರುಇಲ್ಲ, ಕರ್ರೆಂಟಿನ ಮಾತಂತೂ ಕೇಳವೇ ಬೇಡಿ. ಶ್ರೀ ವಿಜಯ ದಾಸರ ಮನೆ, ನೀರಿನ ರಭಸಕ್ಕೆ, ತಳಗಿನ ಪಾಯದ ಮಣ್ಣೆಲ್ಲ ಕೊಚ್ಹಿ ಹೋಗಿ , ಎರಡು ಭಾಗವಾಗಿ ಸೀಳಿ ಹೋಗಿದೆ. ಇನ್ನು ನೀರಿನಿಂದ ರಕ್ಷಿಸಲು ಕಟ್ಟಿದ್ದ ಕೋಟೆ ಗೋಡೆ ಸಂಪೂರ್ಣ ವಾಗಿ ಬಿದ್ದು ಹೋಗಿದೆ.ಅದ್ರಷ್ಟವಷಾತ್, ಶ್ರೀ ವಿಜಯದಾಸರು ಪೂಜಿಸಿದ ಪ್ರತಿಮೆಗಳು ಹಾಗು ಅವರು ಕಾಶಿ ಇಂದ ತಂದ ಸಾಣೆಕಲ್ಲು ಹಾಗು ಕೆಲ ಅಪರೂಪದ ಪುಸ್ತಕಗಳನ್ನು ಯಾವುದೇ ಧಕ್ಕೆಯಾಗದಂತೆ ದೇವರು ಕಾಪಾಡಿದ್ದಾನೆ. ಊರಿನಲ್ಲಿ ಹಾಗು ಶ್ರೀ ವಿಜಯ ದಾಸರ ಮನೆ (ನಮ್ಮ ಮನೆ)ಯಲ್ಲಿ ಯಾವಾಗಲೋ ಕಟ್ಟಿದ್ದ ಹಗೆಗಳು ಬಿರುಕು ಬಿಟ್ಟು ಕಂದಕಗಳು ಉಂಟಾಗಿವೆ. ತೀವ್ರ ಮಣ್ಣಿನ ಕೊರೆತದಿಂದ ಇಡಿ ಮನೆಯು landslide ನಿಂದ ಬಿದ್ದು ಹೋಗಬಹುದಾದ ಆತಂಕ ಮನೆ ಮಾಡಿದೆ. ಆದರೆ ಬರುವ ವಿಜಯದಾಸರ ಆರಾಧನೆಗೆ ಯಾವುದೇ ಆತಂಕವಿಲ್ಲದೆ ಭಕ್ತರು ಚೀಕಲಪರವಿಗೆ ಬಂದು ಆರಾಧನೆ ಪ್ರಕ್ರಿಯೆಯಲ್ಲಿ ಭಾಗವಹಿಸಲು ನಾವು ಅವಿರತವಾಗಿ ಶ್ರಮಿಸುತ್ತಿದ್ದೇವೆ.ಯಂದಿನಂತೆ ಶ್ರೀ ದಾಸರಾಯರ ಆರಾಧನೆಯನ್ನು ಅತ್ಯಂತ ವೈಭವದಿಂದ ಆಚರಿಸಲು ಸಜ್ಜಾಗಿದ್ದೇವೆ.
-malegiri Das

ಹರಿದಾಸರು ಕಂಡ ಶಿವ – ಶಿವರಾತ್ರಿಗೆ ಶಿವಸ್ಮರಣೆ…

ವಾಮದೇವ ವಿರಿಂಚಿ ತನಯ ಉ
ಮಾಮನೋಹರ ಉಗ್ರ ಧೂರ್ಜಟಿ
ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ
ಕಾಮಹರ ಕೈಲಾಸ ಮಂದಿರ
ಸೋಮಸೂರ್ಯಾನಳವಿಲೋಚನ
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ

ಜಗನ್ನಾಥದಾಸರು ಹರಿಕಥಾಮೃತ ಸಾರದ ನಾಂದಿ ಸಂಧಿಯಲ್ಲಿ ಶಿವನ ಹನ್ನೊಂದು ಹೆಸರುಗಳನ್ನು ಚಮತ್ಕಾರಿಕವಾಗಿ ಹೆಣೆದು ಏಕಾದಶ ರುದ್ರರನ್ನೂ ನೆನಪಿಸಿ ಸದಾ ಸುಮಂಗಳವನ್ನು ಕೊಡು ಎಂದು ಶಿವನನ್ನು ಪ್ರಾರ್ಥಿಸುವ ಪದ್ಯ ಇದು.

ಹರಿದಾಸರೆಲ್ಲ ಹರಿಯ ದಾಸರು, ವೈಷ್ಣವರು. ಆದರೆ ಅವರಲ್ಲಿ ತಮಿಳುನಾಡಿನ ಶೈವ-ವೈಷ್ಣವ ದ್ವೇಶಗಳಲ್ಲಿ ಕಾಣುವ ಶಿವದ್ವೇಶವಿಲ್ಲ. ಬದಲಿಗೆ ಶಿವ ಅವರಿಗೆ ಪರಮ ವೈಷ್ಣವ, ವಾಮದೇವ. ಶಿವ ಮುಕ್ತಿಯನ್ನು ಕೊಡುವವನಲ್ಲ, ಬದಲಿಗೆ ಅವನೇ ಮುಂದೆ ಶೇಷನಾಗಿ ತನ್ನ ಮುಕ್ತಿಯನ್ನು ಹೊಂದುವವ. ಅವನು ನರೋತ್ತಮ, ಉಳಿದವರಿಗೆಲ್ಲ ಮುಕ್ತಿಯ ಹಾದಿಯನ್ನು ತೋರಿಸುವವನೂ ಹೌದು. ಕಾಶಿ ವಿಶ್ವನಾಥ ಜಟಾ ಜೂಟಿಯಾಗಿ ಕಾಶಿಯ ಬೀದಿ ಬೀದಿಗಳಲ್ಲಿ ಸಂಚರಿಸುತ್ತಿರುತ್ತಾನಂತೆ. ಕಾಶಿಯಲ್ಲಿ ಸಾಯುವವರ ಕಿವಿಯಲ್ಲಿ ರಾಮ ಮಂತ್ರವನ್ನು ಜಪಿಸಿ ಅವರನ್ನು ಮುಕ್ತಿ ಪಥದೆಡೆಗೆ ನಡೆಸುತ್ತಾನಂತೆ. ಹರನೊಳಗೆ ನಿಂತು ಪ್ರಳಯವನ್ನು ನಡೆಸುವಾತನೂ ಶ್ರೀ ಹರಿಯೆ. ಬ್ರಹ್ಮಾಂಡದ ಒಳಗೆ ನಡೆಯುವ ಪ್ರಳಯ ಶಿವನ ತಾಂಡವವಾದರೆ, ಬ್ರಹ್ಮಾಂಡದ ಒಳಗೂ ಹೊರಗೂ ಪ್ರಳಯವನ್ನು ಮಾಡುವವ ನರಸಿಂಹ, ಅವನೂ ಸೋಮಸೂರ್ಯಾನಳವಿಲೋಚನನೆ! ಜಗನ್ನಾಥ ದಾಸರು ಅದೇ ಹರಿಕಥಾಮೃತಸಾರದ  ಇನ್ನೊಂದು ಪದ್ಯದಲ್ಲಿ ಸೂಚ್ಯವಾಗಿ ಇದನ್ನು ಹೇಳುತ್ತಾರೆ,

ಜಗವನೆಲ್ಲವ ನಿರ್ಮಿಸುವ ನಾ
ಲ್ಮೊಗನೊಳಗೆ ತಾನಿದ್ದು ಸಲಹುವ
ಗಗನಕೇಶನೊಳಿದ್ದು ಸಂಹರಿಸುವನು ಲೋಕಗಳ
ಸ್ವಗತಭೇದವಿವರ್ಜಿತನು ಸ
ರ್ವಗ ಸದಾನಂದೈಕದೇಹನು
ಬಗೆಬಗೆಯ ನಾಮದಲಿ ಕರೆಸುವ ಭಕುತರನು ಪೊರೆವ

ಗರುಡ ಶೇಷರೊಡನೆ ಶಿವ ಅಹಂಕಾರ ತತ್ವದ ಅಭಿಮಾನಿ. ಆಚಾರ್ಯ ಮಧ್ವರ ತತ್ವವಾದದಲ್ಲಿ ಅಹಂಕಾರದ ಅಳಿವು ಎಂದರೆ ನಾನೇ ಎನ್ನುವ ಯಥಾರ್ಥವಲ್ಲದ ಅಹಂಕಾರದ ಅಳಿವು. ನಾನು ಎನ್ನುವ ತನ್ನತನದ ಅರಿವಿನ ಸಾತ್ವಿಕ ಅಹಂಕಾರ ಯಥಾರ್ಥ ಜ್ಞಾನದ ಕಡೆಗೆ ನಡೆಸುವಂಥದ್ದು. ತನ್ನನ್ನೂ ಸೇರಿದಂತೆ ಸಕಲ ವಿಶ್ವದ ಒಳಗೂ ಹೊರಗೂ ತುಂಬಿದ ತತ್ವದ ಅಚಿಂತ್ಯಾದ್ಭುತ ಮಹಾತ್ಮ್ಯವನ್ನು ಅರಿತು ಅದರಲ್ಲಿ ಮಾಡುವ ಸ್ನೇಹವನ್ನು ಬೆಳೆಸುವಂಥದ್ದು. ವಾದಿರಾಜರು ಈ ಕೆಳಗಿನ ಪದದಲ್ಲಿ ಮಾಧವನನ್ನು ತೋರು ಎಂದು ಬೇಡುವದು ಅದೇ ಅಹಂಕಾರಾಭಿಮಾನಿ ರುದ್ರನನ್ನ. ಮಾಧವನನ್ನೇ ತೋರು ಎಂದೇಕೆ ಕೇಳುತ್ತಾರೆ ಎಂದು ಯೋಚಿಸಿದಾಗ ಹೊಳೆದದ್ದು, ಅಹಂಕಾರ ತತ್ವದ ಅಭಿಮಾನಿ ಲಕ್ಷ್ಮಿ-ನಾರಾಯಣ ರೂಪವೆಂದರೆ ಕಮಲಾ-ಮಾಧವ ರೂಪ ಎಂಬುದು.

ಧವಳ ಗಂಗೆಯ ಗಂಗಾಧರ ಮಹಾಲಿಂಗ ಮಾ
ಧವನ ತೋರೋ ಗುರುಕುಲೋತ್ತುಂಗಾ

ಅರ್ಚಿಸಿದವರಿಗಭೀಷ್ಟವ ಕೊಡುವ
ಹೆಚ್ಚಿನ ಅಘಗಳ ತರಿದು ಬಿಸುಟುವಾ
ದುಶ್ಚರಿತಗಳೆಲ್ಲ ದೂರದಲ್ಲಿಡುವ ನ
ಮ್ಮಚ್ಚುತಗಲ್ಲದ ಅಸುರರ ಬಡಿವಾ

ಮಾರನ ಗೆದ್ದ ಮನೋಹರ ಮೂರ್ತಿ
ಸಾಧು ಸಜ್ಜನರಿಗೆ ಸುರ ಚಕ್ರವರ್ತಿ
ಧಾರುಣಿಯೊಳಗೆ ತುಂಬಿದೆ ನಿಮ್ಮ ಕೀರ್ತಿ
ಮುರಾರಿಯ ತೋರಿಸಯ್ಯ ನಿಮಗೆ ಶರಣಾರ್ಥಿ

ಚನ್ನ ಪ್ರಸನ್ನ ಶ್ರೀ ಹಯವದನನ್ನ
ಅನುದಿನ ನೆನೆವಂತೆ ಮಾಡೊ ನೀ ಎನ್ನ
ಅನ್ಯವಲ್ಲವೊ ನಾನು ಗುರುವೆಂಬೆ ನಿನ್ನ
ಇನ್ನಾದರೂ ತೋರೋ ಧೀರ ಮುಕ್ಕಣ್ಣ

ಅಹಂಕಾರಕ್ಕಭಿಮಾನಿಯಾದ ರುದ್ರದೇವ, ಮನಸ್ ತತ್ವದಭಿಮಾನಿಗಳಾದ ಇಂದ್ರ, ಕಾಮರಿಗಿಂತ ಮೇಲಿನವರು. ಅಂತೆಯೇ ಮನಸ್ಸಿನ ನಿಯಾಮಕರೂ ಹೌದು. ಎಲ್ಲೆಂದರಲ್ಲಿ ಹಾರಾಡುವ ಮನಸ್ಸಿಗೆ ಕಡಿವಾಣ ಹಾಕಿ ಬೇಕಾದಲ್ಲಿ ತೊಡಗಿಸುವವರು. ಅದಕ್ಕೆಂದೇ ಪುರಂದರ ದಾಸರು ’ಸತತ ಗಣನಾಥ ಸಿದ್ಧಿಯನೀವ’ ಎಂದು ಶುರುವಾಗುವ ಈ ಕೆಳಗಿನ ಪದದಲ್ಲಿ ಮಹರುದ್ರದೇವರು ಮುಕ್ತಿ ಪಥಕ್ಕೆ ಮನಸ್ಸು ಕೊಡುವಂಥವರು ಎನ್ನುತ್ತಾರೆ.

ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ
ಮತಿ ಪ್ರೇರಿಸುವಳು ಪಾರ್ವತಿ ದೇವಿ ಮು
ಕುತಿ ಪಥಕೆ ಮನವೀವ ಮಹರುದ್ರ ದೇವರು ಹರಿಭ
ಕುತಿದಾಯಕಳು ಭಾರತೀ ದೇವಿ, ಯು
ಕುತಿ ಶಾಸ್ತ್ರಗಳಲ್ಲಿ ವನಜಸಂಭವನರಸಿ
ಸತ್ಕರ್ಮಗಳ ನಡೆಸಿ ಸುಜ್ಞಾನ ಮತಿ ಇತ್ತು
ಗತಿ ಪಾಲಿಸುವ ನಮ್ಮ ಪವಮಾನನು
ಚಿತ್ತದಲಿ ಆನಂದ ಸುಖವನೀವಳು ರಮಾ
ಭಕ್ತ ಜನರೊಡೆಯ ನಮ್ಮ ಪುರಂದರ ವಿಠ್ಠಲನು
ಸತತ ಇವರಲಿ ನಿಂತು ಈ ಕೃತಿಯ ನಡೆಸುವನು

ಅದೇ ರೀತಿ, ಅತ್ತಿತ್ತ ಹರಿಯದೆ, ಏಕತ್ರವಾಗಿ ತೈಲ ಧಾರೆಯಂತೆ ಮನಸ್ಸನ್ನು ಶ್ರೀಹರಿಯಲ್ಲಿ ಕೊಡು ಎಂದು ವಿಜಯದಾಸರು ಅನನ್ಯವಾಗಿ ಪ್ರಾರ್ಥಿಸುತ್ತಾರೆ

ಕೈಲಾಸ ವಾಸ ಗೌರೀಶ ಈಶ
ತೈಲ ಧಾರೆಯಂತೆ ಮನಸು ಕೊಡು ಹರಿಯಲ್ಲಿ

ಅಹೋ ರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೊ ಮಹದೇವನೆ
ಅಹಿಭೂಷಣನೆ ಎನ್ನವಗುಣಗಳೆಣಿಸದಲೆ
ವಿಹಿತ ಧರ್ಮದಿ ವಿಷ್ಣು ಭಕುತಿಯನು ಕೊಡು ಶಂಭೋ

ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ
ದನುಜ ಗಜ ಮದಹಾರಿ ದಂಡ ಪ್ರಣಮವ ಮಾಳ್ಪೆ
ಮಣಿಸೊ ಈ ಶಿರವ ಸಜ್ಜನ ಚರಣ ಕಮಲದಲಿ ಶಂಭೊ

ಭಾಗೀರಥಿಧರನೆ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೊ ಸಂತತ ಶರ್ವ ದೇವ
ಭಾಗವತ ಜನಪ್ರೀಯ ವಿಜಯವಿಠ್ಠಲನಂಘ್ರಿ
ಜಾಗು ಮಾಡದೆ ಭಜಿಪ ಭಾಗ್ಯವನೆ ಕೊಡು ಶಂಭೊ

ಶಿವನು ಭಕ್ತರ ಮೊರೆಗೆ ಕರಗುವವನು, ಭಕ್ತ ಜನರ ಪರ. ವ್ಯಾಸರಾಯರು ಪಾರ್ವತಿ ಪತಿ ಶಿವನನ್ನು ನುತ ಜನ ಪಾಲನೆಂದು ಹಾಡುತ್ತ ರಮಾರಮಣನಲ್ಲಿ ಅಮಲ ಭಕ್ತಿಯನ್ನು ಕೊಡು ಎಂದು ಬೇಡುತ್ತಾರೆ. ಹಂಪಿಯ ವಿರೂಪಾಕ್ಷನನ್ನೇ ಪ್ರಾರ್ಥಿಸಿದ್ದರೇನೋ ಈ ಪದದಿಂದ.

ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷ
ರಮಾರಮಣನಲ್ಲಮಲಭಕುತಿ ಕೊಡು ನಮೋ ವಿಶಾಲಾಕ್ಷ

ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತರಕ್ಷ
ಫಾಲನೇತ್ರ ಕಪಾಲ ರುಂಡಮಣಿ ಮಾಲಾ ಧೃತ ವಕ್ಷ
ಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷ
ಶ್ರೀಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ

ವಾಸವನುತ ಹರಿದಾಸ ಈಶ ಕೈಲಾಸ ವಾಸ ದೇವ
ದಾಶರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವ
ಭಾಸಿಸುತಿಹುದು ಅಶೇಷ ಜೀವರಿಗೆ ಈಶನೆಂಬ ಭಾವ
ಶ್ರೀಶನಲ್ಲಿ ಕೀಲಿಸು ಮನವ ಗಿರಿಜೇಶ ಮಹಾದೇವ

ಮೃತ್ಯುಂಜಯ ನಿನ್ನುತ್ತಮ ಪದಯುಗ ಭೃತ್ಯನೋ ಸರ್ವತ್ರ
ಹತ್ತಿರ ಕರೆದು ಅಪತ್ಯನಂತೆ ಪೊರೆಯುತ್ತಿರೋ ತ್ರಿನೇತ್ರ
ತೆತ್ತಿಗನಂತೆ ಕಾಯುತ್ತಿಹೆ ಬಾಣನ ಸತ್ಯದಿ ಸುಚರಿತ್ರ
ಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತ್ರಕೃಪಾ ಪಾತ್ರ

ಜಗನ್ನಾಥದಾಸರ ಹರಿಕಥಾಮೃತಸಾರದ ಕಡೆಯ ಸಂಧಿಯ ಪದಗಳಿಂದ ಮಂಗಳಕರನಾದ ಶಿವನನ್ನು ಸ್ಮರಿಸುತ್ತ ಮುಗಿಸುತ್ತೇನೆ. ಎಲ್ಲರಿಗೂ ಶಿವರಾತ್ರಿಯ ಶುಭಾಶಯಗಳು.

ನಂದಿವಾಹನ ನಳಿನಿಧರ ಮೌ
ಳೇಂದು ಶೇಖರ ಶಿವ ತ್ರಿಯಂಬಕ
ಅಂಧಕಾಸುರ ಮಥನ ಗಜಶಾರ್ದೂಲ ಚರ್ಮಧರ
ಮಂದಜಾಸನತನಯ ತ್ರಿಜಗ
ದ್ವಂದ್ಯ ಶುದ್ಧಸ್ಫಟಿಕ ಸನ್ನಿಭ
ವಂದಿಸುವೆನನವರತ ಪಾಲಿಸೋ ಪಾರ್ವತೀರಮಣ

ಫಣಿಫಣಾಂಚಿತಮುಕುಟರಂಜಿತ
ಕ್ವಣಿತಡಮರುತ್ರಿಶೂಲಶಿಖಿ ದಿನ
ಮಣಿ ನಿಶಾಕರ ನೇತ್ರ ಪರಮ ಪವಿತ್ರ ಸುಚರಿತ್ರ
ಪ್ರಣತ ಕಾಮದ ಪ್ರಮಥ ಸುರಮುನಿ
ಗಣ ಸುಪೂಜಿತ ಚರಣಯುಗ ರಾ
ವಣ ಮದವಿಭಂಜನ ಸತತ ಮಾಂಪಾಹಿ ಮಹದೇವ

ದಕ್ಷಯಜ್ಞವಿಭಂಜನನೆ ವಿರು
ಪಾಕ್ಷ ವೈರಾಗ್ಯಾಧಿಪತಿ ಸಂ
ರಕ್ಷಿಸೆಮ್ಮನು ಸರ್ವಕಾಲದಿ ಸನ್ಮುದವನಿತ್ತು
ಯಕ್ಷಪತಿಸಖ ಯಜಿಪರಿಗೆ ಸುರ
ವೃಕ್ಷ ವೃಕದನುಜಾರಿ ಲೋಕಾ
ಧ್ಯಕ್ಷ ಶುಕ ದೂರ್ವಾಸ ಜೈಗೀಷವ್ಯ ಸಂತೈಸು