ಎರಡು ಪದ, ಮೂರು ಪುಸ್ತಕ, ಒಂದಷ್ಟು ಲಿಂಕು, ಪುರಂದರದಾಸರ ಪುಣ್ಯದಿನಕ್ಕೆ…

ದಾಸರ ಪದಗಳ ಭಜನೆಗಳನ್ನ ಕೇಳುವದು ಮತ್ತು ಅವುಗಳಲ್ಲಿ ಭಾಗವಹಿಸುದು ನನಗೆ ಬಹಳ ಇಷ್ಟವಾಗುತ್ತದೆ. ಯಾವಾಗಿನಿಂದ ಇದು ಶುರುವಾಯಿತು ಅನ್ನುವದು ನೆನಪಿನಲ್ಲಿಲ್ಲ, ಆದರೆ ಈ ಅಭಿರುಚಿ ಬೆಳೆಯಲಿಕ್ಕೆ ಚಿಕ್ಕಂದಿನ ರಜಾ ದಿನಗಳಲ್ಲಿ ನಮ್ಮ ಅಮ್ಮನ ತವರೂರು ಕುಕನೂರಿಗೆ ಹೋದಾಗ ಅಲ್ಲಿ ಪ್ರತಿ ಗುರುವಾರ ಸಂಜೆ ನಡಯುತ್ತಿದ್ದ ಭಜನೆ ಬಹಳ ಮುಖ್ಯ ಪಾತ್ರವಹಿಸಿರಬೇಕು ಅನಿಸುತ್ತದೆ. ನಮ್ಮ ಅಜ್ಜಿ ತಾತರ ಮನೆಯಲ್ಲಿ ರಾಯರ (ರಾಘವೇಂದ್ರ ಸ್ವಾಮಿಗಳ) ಬೃಂದಾವನವಿದ್ದದ್ದರಿಂದ, ಪ್ರತಿ ಗುರುವಾರ ಬೆಳಗಿನ ಹೊತ್ತು ಗಂಡಸರೆಲ್ಲ ಸೇರಿ ರಾಯರ ಅಷ್ಟೋತ್ತರ ಪಾರಾಯಣ ಮಾಡಿದರೆ ಸಂಜೆಗೆ ಹೆಂಗಸರು ಭಜನೆ ಮಾಡುತ್ತಿದ್ದರು. ಇವೆರಡು ಚಿತ್ರಗಳು ಯಾವತ್ತೂ ಮರೆಯುವದಿಲ್ಲ.ಆ ದಿನಗಳಲ್ಲಿ ಭಜನೆಗಳಲ್ಲಿ ಕೇಳಿದ ‘ನಮಃ ಪಾರ್ವತಿ ಪತಿ ನುತ ಜನ ಪರ namO ವಿರೂಪಾಕ್ಷ’, ‘ಪವಮಾನ ಪವಮಾನ ಜಗದ ಪ್ರಾಣ’, ಮೊದಲಾದ ಹಾಡುಗಳು ಇವತ್ತೂ ಆ ನೆನಪುಗಳನ್ನು ತರುತ್ತವೆ.

ಭಜನೆಗಳಲ್ಲಿ  ಪಾಲ್ಗೊಳ್ಳಲು ಇಲ್ಲಿ ಅಮೆರಿಕದಲ್ಲೂ ಸಾಧ್ಯವಾದದ್ದು ‘ಶ್ರೀ ವ್ಯಾಸ ಭಜನಾ ಮಂಡಳಿ’ಯ ಸಂಪರ್ಕವಾದ ನಂತರ. ಪ್ರತೀ ಏಕಾದಶಿಗೊಮ್ಮೆ, ಹಬ್ಬ ಹರಿದಿನಗಳಂದು, ದಾಸರ ಪುಣ್ಯ ತಿಥಿಗಳಂದು, ಹೀಗೆ ಅವಕಾಶವಾದಗಲೆಲ್ಲ ನಡೆಯುವ ಭಜನೆಗಳಲ್ಲಿ ಪಾಲ್ಗೊಂಡು ಬಹಳ ಖುಷಿಪಟ್ಟಿದ್ದೇನೆ. ಪ್ರತೀ ಬಾರಿಯೂ ಭಾಗವಹಿಸಲು ಆಗದಿದ್ದರೂ, ಅವಕಾಶವಾದಾಗ ತಪ್ಪಿಸುವದಿಲ್ಲ. ಇವತ್ತು ಪುರಂದರ ದಾಸರ ಪುಣ್ಯ ದಿನದ ನಿಮಿತ್ತ ಇದ್ದ ಭಜನೆಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಈಗ ಅದೇ ನೆಪದಲ್ಲಿ ಭಜನೆಯ ಬಗ್ಗೆ ನಾಲ್ಕು ಮಾತು ಬರೆಯುತ್ತಿರುವೆ. ಈ ಭಜನೆಗಳಲ್ಲಿ ಎಷ್ಟೋ ಹೊಸ ಹಾಡುಗಳನ್ನು ಕೇಳಿದ್ದೇನೆ. ಮೊದಲ ಬಾರಿಗೆ ಇಷ್ಟವಾದವು ಎಷ್ಟೋ ಹಾಡುಗಳು. ಎರಡು ವಾರಗಳ ಹಿಂದೆ ವೈಕುಂಠ ಏಕಾದಶಿ ನಿಮಿತ್ತದ ಭಜನೆಯಲ್ಲಿ ಪುರಂದರ ದಾಸರ ಒಂದು ಪದವನ್ನು ಕೇಳಿದೆ. ಅದು ಎಷ್ಟು ಇಷ್ಟವಾಯಿತೆಂದರೆ, ಹಾಡಿನ ಪುಸ್ತಕದಲ್ಲಿ ಆ ಪುಟದ ಚಿತ್ರವನ್ನು ಫೋನಿನ ಕ್ಯಾಮರಾದಲ್ಲಿ ಸೆರೆಹಿಡಿದು ತಂದೆ. ಆ ಹಾಡು ಇದು (ಫೋಟೋದಿಂದ ಟೈಪಿಸದೆ ಗೂಗಲಿಸಿದಾಗ ಇಲ್ಲಿ  ಸಿಕ್ಕಿದ್ದನ್ನು ಪೇಸ್ಟಿಸಿದೆ 🙂 ),

ಕನಸು ಕಂಡೇನ ಮನದಲಿ ಕಳವಳಗೊಂಡೇನ ||ಪ||
ಏನ ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ ||ಅ.ಪ||
ಪೋನ್ನದ ಕಡಗನಿಟ್ಟು ತಿಮ್ಮಯ್ಯ  ತಾ | ಪೋಲ್ವನಾಮವನಿಟ್ಟು |
ಅಂದುಗೆ ಘಲುಕೆನ್ನುತಾ ಎನ್ನಮುಂದೆ | ಬಂದು ನಿಂತಿದ್ದನಲ್ಲೇ ||೧||
ಮಕರ ಕುಂಡಲನಿಟ್ಟು ತಿಮ್ಮಯ್ಯ  ತಾ | ಕಸ್ತೂರಿ ತಿಲಕನಿಟ್ಟು |
ಗೆಜ್ಜೆ ಘಲುಕೆನುತಾ ಸ್ವಾಮಿ ತಾ | ಬಂದು ನಿಂತಿದ್ದನಲ್ಲೇ ||೨||
ಮುತ್ತಿನ ಪಲ್ಲಕ್ಕಿ ಯತಿಗಳು | ಹೊತ್ತು  ನಿಂತಿದ್ದರಲ್ಲೇ |
ಛತ್ರಚಾಮರದಿಂದ ರಂಗಯ್ಯನ | ಉತ್ಸವ ಮೂರುತಿಯ ||೩||
ತಾವರೆ ಕಮಲದಲಿ  ಕೃಷ್ಣಯ್ಯ ತಾ | ಬಂದು ನಿಂತಿದ್ದನಲ್ಲೇ |
ವಾಯುಬೊಮ್ಮಾದಿಗಳು ರಂಗಯ್ಯನ | ಸೇವಯ ಮಾಡುವರೆ ||೪||

ನವರತ್ನ ಕೆತ್ತಿಸಿದ | ಸ್ವಾಮಿ ಎನ್ನ | ಹೃದಯಮಂಟಪದಲ್ಲಿ |
ಸರ್ವಾಭರಣದಿಂದ ಪುರಂದರ | ವಿಠಲನ ನೋಡಿದೆನೇ ||೫||

*************************
ಪುರಂದರದಾಸರ ಜೀವನ ಕತೆಯನ್ನು ಹೇಳುತ್ತಾ, ಅವರ ಅನುಗ್ರಹಕ್ಕಾಗಿ ಪ್ರಾರ್ಥನೆ ಮಾಡುವ ವಿಜಯದಾಸರ ಈ ಹಾಡು ಬಹಳ ಇಷ್ಟ.
ಗುರು ಪುರಂದರ ದಾಸರೇ ನಿಮ್ಮ ಚರಣ ಕಮಲವ ನಂಬಿದೆ ||ಪ||
ಗರುವ ರಹಿತನ ಮಾಡಿ ಎನ್ನನು ಪೊರೆವ ಭಾರವು ನಿಮ್ಮದೇ ||ಅ.ಪ||
ಒಂದು ಅರಿಯದ ಮಂದಮತಿ ನಾ | ನಿಮ್ಮದು ನಿಮ್ಮನು ನಂಬಿದೆ |
ಇಂದಿರೇಶನ ಪಾದ ತೋರಿಸೋ ತಂದೆ ಮಾಡೆಲೋ ಸತ್ಕ್ರುಪೆ ||೧||
ಮಾರಜನಕನ ಸನ್ನಿಧಾನದಿ | ಸಾರಗಾಯನ ಮಾಡುವ |
ನಾರದರೆ ಈ ರೂಪದಿಂದಲಿ ಕೋರೆ ದರುಶನ ತೋರಿದೆ ||೨||
ಪುರಂದರಾಲಯ ಘಟ್ಟದೊಳು ನೀ | ನಿರುತ ಧನವ ಗಳಿಸಲು |
ಪರಮ ಪುರುಷನು ವಿಪ್ರನಂದದಿ | ಕರವ ನೀಡಿ ಯಾಚಿಸೆ ||೩||
ಪರಮ ನಿರ್ಗುಣ ಮನವನರಿತು | ಸರುವ ಸೂರಿಯ ಗಯಿಸಿದ |
ಅರಿತು ಮನದಲಿ ಜರಿದು ಭವಗಳ | ತರುಣಿ ಸಹಿತ ಹೊರ ಹೊರಟನೆ ||೪||
ಅಜಭವಾದಿಗಳರಸನಾದ | ವಿಜಯವಿಠಲನ ಧ್ಯಾನಿಪ |
ನಿಜ ಸುಜ್ಞಾನವ ಕೊಡಿಸ ಬೇಕೆಂದು | ಭಜಿಪೆನೋ ಕೇಳ್ ಗುರುವರ ||೫||
ಹಂಸಾನಂದಿ ಅವರು ಪುರಂದರದಾಸರು ಪುರಂದರಗಡದವರು ಹೌದೆ ಅಲ್ಲವೇ ಎಂಬುದರ ಕುರಿತು ಚಿಕ್ಕ ಟಿಪ್ಪಣಿಯನ್ನೂ ಮತ್ತು ಅದರ ಜೊತೆಗೆ ಮೂಗುತಿ ಪ್ರಕರಣವನ್ನು  ತಮ್ಮ ಕಲ್ಪನೆಯಲ್ಲಿ ಒಳ್ಳೆಯ ಕತೆಯಾಗಿ ಹೆಣೆದದ್ದನ್ನೂ ಹಾಕಿದ್ದನ್ನು ನೋಡಿದೆ. ಸೊಗಸಾಗಿದೆ ಮಾಹಿತಿ ಮತ್ತು ಕತೆ. ಅದನ್ನ ಇಲ್ಲಿ ((ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ ….) ಓದಬಹುದು.
*******************************
ಹರಿದಾಸರ ಬಗ್ಗೆ ಆಸಕ್ತಿ ಮೂಡಿಸಿದ ಮೊದಲ ಪುಸ್ತಕ ಬೇಲೂರು ಕೇಶವ ದಾಸರ ‘ಕರ್ನಾಟಕ ಭಕ್ತ ವಿಜಯ’. ಅದರಲ್ಲಿ ಹರಿದಾಸ ಪರಂಪರೆಗೆ ಪೋಷಕರಾದ ಯತಿಗಳ ಮತ್ತು ಹರಿದಾಸರುಗಳ ಜೀವನ ಕಥನವನ್ನು ಬಹಳಷ್ಟು ಬಾರಿ ಓದಿದ್ದೇನೆ. ಇವತ್ತಿಗೂ ಮನಸ್ಸು ವ್ಯಗ್ರವಾದಾಗ ಅದನ್ನು ಹಿಡಿದು ಅದರಲ್ಲಿ ಯಾವುದೇ ದಾಸರ, ಯತಿಗಳ ಕತೆ ಓದಿದರೂ ಮತ್ತೆ ಮನಸ್ಸಿಗೆ ಹಿತವಾಗುತ್ತದೆ.
ಅದಾದ ಮೇಲೆ ಬಹಳಷ್ಟು ಹಿಡಿಸಿದ್ದು ಬನ್ನಂಜೆ ಗೋವಿಂದಾಚಾರ್ಯರ ಪ್ರವಚನವೊಂದರ ಪುಸ್ತಕ ರೂಪ ‘ಪುರಂದರೋಪನಿಷತ್’. ಪುರಂದರ ದಾಸರ ಒಂದು ಪದ ‘ಏಳು ನಾರಾಯಣ‘ವನ್ನು ಎಳೆ ಎಳೆಯಾಗಿ ಬಿಡಿಸಿ, ಅದರ ಆಧ್ಯಾತ್ಮಿಕ ಅರ್ಥದ ಹೊಳಹನ್ನು ತೋರಿಸಿ, ಪುರಂದರ ದಾಸರ ಸಾಹಿತ್ಯವನ್ನು ವ್ಯಾಸತೀರ್ಥರು ಪುರಂದರೋಪನಿಷತ್ ಎಂದು ಯಾಕೆ ಕರೆದಿದ್ದರು ಎಂಬುದನ್ನು ಬಹಳ ಚನ್ನಾಗಿ ತಿಳಿಸಿದ ಪುಸ್ತಕವದು. ಮತ್ತೆ ಮತ್ತೆ ಓದಬೇಕು ಅನಿಸುವ ಪುಸ್ತಕ.
*******************************
ಪುರಂದರ ದಾಸರ ಪದಗಳ ಬಗ್ಗೆ ಓದಿದ ವಿಶಿಷ್ಟ ಪುಸ್ತಕ ಡಾ| ಎಚ್ ಎನ್ ಮುರಳೀಧರ ಅವರ ‘ತಂಬೂರಿ ಮೀಟಿದವ’. ಪುರಂದರದಾಸರ ಪದಗಳನ್ನು ಈ ನೋಟದಲ್ಲಿ ನೋಡುವ ಪ್ರಯತ್ನವೊಂದು ಖಂಡಿತವಾಗಿಯೂ ಬೇಕಿತ್ತು. ಪದಗಳಲ್ಲಿ ಬರುವ ಹಲವು ವಿಧವಾದ ಪಲ್ಲವಿಗಳನ್ನು ಇವರು ವಿಂಗಡಿಸಿದ ರೀತಿ, ಪದಗಳ ಛಂದಸ್ಸು, ಶೈಲಿಗಳ ಚಿಂತನೆ, ಪದಗಳಲ್ಲಿ ಬಳಕೆಯಾದ ಅಡು ಮಾತು, ಹೀಗೆ ಹಲವು ಬಗೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದ ರೀತಿ ಬಹಳ ಹಿಡಿಸಿತು. ದಾಸರ ಪದಗಳನ್ನು ಇವರು ದೇಸೀ ಅಭಿವ್ಯಕ್ತಿ ಸ್ವರೂಪದ ಹಿನ್ನೆಲೆಯಲ್ಲಿ ನೋಡುವ ನೋಟ ಬಹು ವಿಶಿಷ್ಟವಾಗಿದೆ. ಈ ಪುಸ್ತಕದ ಪರಿವಿಡಿ ನೋಡಿ ಪುಸ್ತಕವನ್ನು ಕೊಂಡಿದ್ದೆ. ಇದನ್ನ ಒಂದು ಬಾರಿ ಓದಿ ಮುಗಿಸುವದು ನನಗಾಗುವದಿಲ್ಲ. ನಿಧಾನವಾಗಿ ಅವಕಾಶವಾದಂತೆ ಒಂದೊಂದೇ ಅಧ್ಯಾಯಗಳನ್ನು ಓದುತ್ತಿರುವೆ.
Advertisements

ಗುರು ಶಿಷ್ಯರು – ಎರಡು ಕತೆಗಳು

ಬಣ್ಣದ ಪೆನ್ಸಿಲ್ಲಿನಿಂದ ಸರ ಸರನೆ ಜಾಮೆಟ್ರಿ ಆಕಾರಗಳನ್ನು ಹಾಳೆಯ ಮೇಲೆ ಬಿಡಿಸುತ್ತ ಹೋದಂತೆ ಸ್ವಲ್ಪ ಹೊತ್ತಿನಲ್ಲೆ ಅಲ್ಲಿ ಪ್ರತ್ಯಕ್ಷವಾಗುತ್ತಿದ್ದ ಬೆಕ್ಕಿನ ಆಕಾರವನ್ನು ಕಂಡ ಕೂಡಲೆ, ಆ ಚಿತ್ರವನ್ನು ಬಿಡಿಸಲು ಮುಗ್ಗರಿಸುತ್ತಿದ್ದ ಮಗುವಿನ ಮುಖದಲ್ಲಿ ಏನನ್ನೋ ಕಂಡುಕೊಂಡ ಹೊಳಪು! ನಾಲ್ಕನೇತ್ತೆಯ ಕ್ರಾಫ್ಟ್ಸ್ ಟೀಚರ್ ಆಗಿದ್ದ ಮಿಸ್ ಸೋಫಿ ಕಲಿಸುತ್ತಿದ್ದದ್ದೇ ಹಾಗೆ, ಮಾತಿನ ತಂಟೆಗೇ ಹೋಗದೆ! ಅಂಥದ್ದೇ ಹೊಳಪನ್ನು ಕಾಣುವ ಪ್ರಸಂಗ ಮುಂದೆ ಮತ್ತೊಮ್ಮೆ ಒದಗಿ ಬಂದಿತ್ತು. ಅವನಾಗ ಪಿಯಾನೊ ಕಲಿಯುತ್ತಿದ್ದ. ಕಾರಣಾಂತರದಿಂದ ಒಮ್ಮೆ ಅವನಿಗೆ ಕಲಿಸುತ್ತಿದ್ದ ಟೀಚರ್ ಬದಲು ಇನ್ನೊಬ್ಬರ ಬಳಿಗೆ ಹೋಗ ಬೇಕಾಗಿ ಬಂತು. ಅವರೋ ಆಗ ಅತಿ ಪ್ರಸಿದ್ಧ ಟೀಚರ್. ಸಾಮಾನ್ಯ ವಿದ್ಯಾರ್ಥಿಗಳಿಗೆ ಅವರು ಕಲಿಸುತ್ತಲೇ ಇರಲಿಲ್ಲ. ಅತಿ ಪ್ರತಿಭಾವಂತರಿಗೆ ಮಾತ್ರ ಅವರಿಂದ ಕಲಿಯುವ ಅದೃಷ್ಟ ಇತ್ತು. ಅಂತಹವರ ಹತ್ತಿರ ಅದು ಹೇಗೋ ಈತ ಹೋಗಿ ಕೂತಿದ್ದ! ಆಗ ಅವರು ಇನ್ನೊಬ್ಬ ವಿದ್ಯಾರ್ಥಿನಿಗೆ ಹೇಳಿ ಕೊಡುತ್ತಿದ್ದರು. ಅವಳು ಬಹಳ ಚನ್ನಾಗಿ ಪಿಯಾನೋ ನುಡಿಸುತ್ತಾಳೆ, ಮುಂದೊಮ್ಮೆ ಸ್ಟಾರ್ ಆಗುತ್ತಾಳೆ, ಅವಳನ್ನು ಸ್ಟಾರ್ ಮಾಡುವದಕ್ಕಾಗೇ ಈ ಟೀಚರ್ ಅವಳಿಗೆ ಹೇಳಿ ಕೊಡುತ್ತಿರುವದು ಎಂದು ಹಲವರು ಹೇಳಿದ್ದನ್ನು ಕೇಳಿದ್ದ. ಅವತ್ತು ಅವಳು ನುಡಿಸುತ್ತಿದ್ದದ್ದು ಒಂದು ಕ್ಲಿಷ್ಟವಾದ ಕೃತಿಯನ್ನ. ಅವನ ತಕ್ಕಮಟ್ಟಿನ ತಿಳುವಳಿಕೆಗೂ ಅವಳು ನುಡಿಸಿದ್ದು ತಾಂತ್ರಿಕವಾಗಿ ಅದ್ಭುತವಾಗಿತ್ತು ಎಂದು ತಿಳಿದಿತ್ತು. ಅದರ ಮೌಲ್ಯ ಮಾಪನ ಮಾಡುತ್ತ ಆ ಶಿಕ್ಷಕನೋ ’ನೀನು ಕೇಳಿದಂತೆ ಇದನ್ನ ನುಡಿಸಿಲ್ಲ, ನೀನು ಹೇಗೆ ಕೇಳಿಸಿತು ಅಂದು ಕೊಂಡೆಯೋ ಹಾಗೆ ನುಡಿಸಿದೆ. ಈಗ ಇದನ್ನ ನಾನು ಹೇಗೆ ಕೇಳಿದೆ ಹಾಗೆ ನುಡಿಸುತ್ತೇನೆ ಕೇಳು. ಆಗ ಬಹುಷಃ ನಿನಗೆ ಗೊತ್ತಾಗಬಹುದು’. ಇಷ್ಟು ಹೇಳಿ ಅವನು ನುಡಿಸಲಾರಂಭಿಸಿದ. ಅವನು ನುಡಿಸುತ್ತ ಹೋದಂತೆ ಒಂದು ಘಟ್ಟದಲ್ಲಿ ಅದೇ ಹೊಳಪು ಅವಳ ಮುಖದ ಮೇಲೆ, ಮಿಸ್ ಸೋಫಿಯ ವಿದ್ಯಾರ್ಥಿಗಳ ಮುಖದಲ್ಲಿ ಕಂಡಂಥದ್ದು!

***

ಗುರುಗಳು ಹೇಳಿ ಕೊಟ್ಟ ರಾಗದಲ್ಲಿ ತಾನ ನುಡಿಸುವದನ್ನ ಎಡೆ ಬಿಡದೆ ಅಭ್ಯಾಸ ಮಾಡಿದ್ದ ಶಿಷ್ಯ ಅದನ್ನು ಗುರುಗಳ ಮುಂದೆ ನುಡಿಸಿದಾಗ ಅವರಿಂದ ಭೇಷ್ ಎನಿಸಿಕೊಳ್ಳುತ್ತೇನೆ ಅಂದುಕೊಂಡಿದ್ದ. ಆದರೆ ನಿರ್ಭಾವುಕರಾಗಿ ಕೇಳಿದ ಗುರುಗಳು ’ಅಭ್ಯಾಸ ಸಾಲದು’ ಎನ್ನುತ್ತಾ ಎದ್ದು ಹೋದರು! ಶಿಷ್ಯನೂ ಸಾಮಾನ್ಯನಲ್ಲ ಮತ್ತೆ ಅಭ್ಯಾಸ ಮುಂದುವರೆಸಿದ. ಮರುದಿನ ಮತ್ತೆ ಗುರುಗಳ ಮುಂದೆ ನುಡಿಸಿದ. ಮತ್ತೆ ಅದೇ ಮಾತು ಗುರುಗಳಿಂದ. ಸಿಟ್ಟು ಬಂದರೂ ಏನೂ ಮಾಡುವಂತಿಲ್ಲ. ಮತ್ತೆ ಅಭ್ಯಾಸ ಮಾಡಿದ. ಆದರೆ ಅದೇ ಕತೆ! ಎರಡು ಮೂರು ದಿನ ಇದೇ ನಡೆಯಿತು. ಕೊನೆಗೆ ಶಿಷ್ಯನಿಗೆ ಬೇಸರವಾಯಿತು. ’ಇನ್ನೆಷ್ಟು ಸಾಧನೆ ಮಾಡಬೇಕೋ ನಾ ಬೇರೆ ಕಾಣೆ’ ಎಂದುಕೊಂಡ ಮನಸ್ಸಿನಲ್ಲೇ. ಶಿಷ್ಯನ ಎದೆಯಾಳದ ಮಾತು ಗುರುವಿಗೆ ಕೇಳಿಸಿತೇನೋ ಎಂಬಂತೆ ಹೇಳಿದರು, ’ಯಾರಲ್ಲಿ ? ಆ ಮೂಲೆಯಲ್ಲಿರುವ ವೀಣೆ ತಾ ಇಲ್ಲಿ.’ ವೀಣೆ ತಂದಿಡುವಷ್ಟರಲ್ಲಿ ಶಿಷ್ಯನಿಗೆ ಹೇಳಿದರು, ’ಶೇಷಣ್ಣ, ಕುಳಿತುಕೋ ಇಲ್ಲಿ. ಸಾಧನೆ ಎಂದರೆ ಏನೆಂದು ತಿಳಿದೆ ? ಅದೇ ತಾನಗಳನ್ನು ನಾನು ನುಡಿಸುತ್ತೇನೆ ಕೇಳು. ನಿನ್ನ ಸಾಧನೆ ಸಾಕೋ ಸಾಲದೋ ಎಂಬುದು ನಿನಗೇ ಅರ್ಥವಾಗುತ್ತದೆ.’ ಅವರು ನುಡಿಸಿದ ತಾನಗಳನ್ನು ಕೇಳುತ್ತ ಶಿಷ್ಯನ ಕಣ್ಣಲ್ಲಿ ನೀರು. ಎದ್ದು ನಿಂತು ಸೊಂಟ ಕಟ್ಟಿ ಸಾಷ್ಟಾಂಗ ಪ್ರಣಾಮ ಮಾಡಿಬಿಟ್ಟ ಗುರುವಿಗೆ!

***

ಮೊದಲ ಕತೆ ಓದಿದ್ದು ಪೀಟರ್ ಡ್ರಕರನ ನೆನಪುಗಳ ಮಾಲೆಯಾದ ’Adventures of A Bystander’ ಎನ್ನುವ ಪುಸ್ತಕದಲ್ಲಿ. ತನ್ನ ನಾಲ್ಕನೇ ತರಗತಿಯ ಇಬ್ಬರು ಶಿಕ್ಷಕಿಯರು ಹೇಗೆ ತನ್ನ ಮೇಲೆ ಪ್ರಭಾವ ಬೀರಿದರು ಎಂದು ಹೇಳುತ್ತ ಈ ಕತೆಯನ್ನು ಉಲ್ಲೇಖಿಸುತ್ತಾನೆ. ’ಮಿಸ್ ಎಲ್ಸಾ ಆಂಡ್ ಮಿಸ್ ಸೋಫಿ’ ಎನ್ನುವ ಈ ಅಧ್ಯಾಯವನ್ನು ಪ್ರತಿ ಶಿಕ್ಷಕನೂ ಓದಬೇಕು ಅನಿಸುತ್ತದೆ ನನಗೆ.

ಎರಡನೇ ಕತೆ ವೀಣೆಯ ಮೇರು ಸಾಧಕ ವೀಣೆ ಶೇಷಣ್ಣನವರ ಜೀವನದ್ದು. ವಾಸುದೇವಾಚಾರ್ಯರು ಬರೆದ ’ನಾ ಕಂಡ ಕಲಾವಿದರು’ ಪುಸ್ತಕದಲ್ಲಿ ಓದಿದ್ದು. ಸಂಗೀತ ಕ್ಷೇತ್ರದ ದಿಗ್ಗಜರ ಜೀವನದ ಅಮೂಲ್ಯ ಕ್ಷಣಗಳನ್ನು ಒಂದೆಡೆ ಸೇರಿಸಿದ ಈ ಪುಸ್ತಕ ಸೊಗಸಾಗಿದೆ. ನನಗೆ ಸಂಗೀತ ಗೊತ್ತಿಲ್ಲ. ಇದರಲ್ಲಿ ಕತೆಗಳ ಆಸ್ವಾದನೆಗೆ ಅದರಿಂದ ತೊಡಕಾಗಿಲ್ಲ ಆದರೆ ಸಂಗೀತದ ಜ್ಞಾನವಿದ್ದಿದ್ದರೆ ಇದರಲ್ಲಿಯ ಕತೆಗಳು ಇನ್ನೂ ಹೆಚ್ಚಿನ ಸ್ತರದಲ್ಲಿ ತಟ್ಟುತ್ತಿದ್ದವೇನೋ ಅನಿಸಿದ್ದು ಸುಳ್ಳಲ್ಲ.

ಈ ಎರಡು ಕತೆಗಳಲ್ಲಿ ದೇಶ ಕಾಲಗಳನ್ನು ಮೀರಿದ ಸಾಮ್ಯತೆ ಇದೆ ಅನಿಸಿತು. ಒಂದೇ ಕಡೆ ಎರಡನ್ನೂ ಇಡಬೇಕೆನಿಸಿತು.

( ಮೇಲೆ ಹೇಳಿದ ಎರಡೂ ಪುಸ್ತಕಗಳೂ ಅದ್ಭುತವಾಗಿವೆ. ಓದುವ ಹವ್ಯಾಸವಿದ್ದವರು ಸಿಕ್ಕರೆ ಬಿಡದೆ ಓದಿ 🙂 )