ಪ್ರಶ್ನೆಗಳದೊಂದು ಪುಸ್ತಕ

ಮೂರು ವಾರಗಳ ಹಿಂದೆಯೇ ಲೈಬ್ರರಿಯಿಂದ ತಂದು ಓದದೇ ಇಟ್ಟು, ಒಮ್ಮೆ renew ಮಾಡಿಸಿಕೊಂಡ ಪಾಬ್ಲೋ ನೆರೂದನ ಪುಸ್ತಕ ’The Book of Questions’ ಒಂದಷ್ಟು ತಿರುವಿ ಹಾಕಿದೆ ನಿನ್ನೆ. ಬಹಳ ಇಷ್ಟವಾಯಿತು. ನಿಧಾನಕ್ಕೆ ಓದಿಕೊಳ್ಳಬೇಕು. ಅಲ್ಲಿಯ ಕೆಲವು ಪ್ರಶ್ನೆಗಳನ್ನ ಕನ್ನಡದಲ್ಲಿ ಕೇಳಿದರೆ ಹೇಗಿರಬಹುದು ಅನಿಸಿತು, ಇಲ್ಲಿ ಹಾಕಿರುವೆ.

ಮೈ ತುಂಬ ರಂಧ್ರಗಳ ಹೊತ್ತು
ಹಾರುವದದೇಕೋ ಇರುಳಿನ ಟೊಪ್ಪಿ

ಎಂದೋ ಹುಟ್ಟಿದ ಬೂದಿ ಹತ್ತಿರದಲೆ
ಹಾರಿದಾಗ ಏನ ಹೇಳಿತೊ ಬೆಂಕಿಗೆ

ಗ್ರಹಣದ ಮರೆಯಲಿ ಸೂರ್ಯನ
ಶಲಾಕೆಗಳುರಿವದು ಯಾರಿಗಾಗೋ

ಇನ್ನೂ ಒಡೆಯದ ಕಂಬನಿ
ತಡೆದಿರುವದೆ ಪುಟ್ಟ ಕೊಳಗಳಲಿ

ಅಥವ ಕಣ್ಣಿಗೆ ಕಾಣದ ನದಿಗಳೇನೋ
ಅವು, ದುಃಖದ ಕಡೆ ಧಾವಿಸುವವು

Advertisements