ವಾಹ್ ತಾಜ್…

ತಾಜ್ ಮಹಲಿನ ಅಚ್ಚ ಬಿಳಿ ಬಣ್ಣವನ್ನು ಬಿಳಿಯಾಗೇ ಉಳಿಸಲಿಕ್ಕೆ ಅದರ ಸುತ್ತ ತುಳಸಿ ಗಿಡ ಬೆಳೆಸುತ್ತಾರೆ ಎನ್ನುವ ಸುದ್ದಿ ಓದಿದೆ. ತುಳಸಿಯ ಪುಣ್ಯದಿಂದ ಅದರ ಬಣ್ಣ ಉಳಿದರೆ ಒಳ್ಳೆಯದೆ, ಉಳಿಯಲಿ.

೪-೫ ವರ್ಷಗಳ ಹಿಂದೆ ತಾಜ್  ನೋಡಿದ್ದು ನೆನಪಾಯಿತು.

೨೦೦೪ರ ಸೆಪ್ಟೆಂಬರಿನಲ್ಲಿ ನನ್ನ ಹೆಂಡತಿಯ ವೀಸಾಗೋಸ್ಕರ ದೆಹಲಿಗೆ ಹೋಗಬೇಕಾಗಿತ್ತು. ಚೆನ್ನೈ ಅಲ್ಲಿನ ಅಮೇರಿಕನ್ ಕಾನ್ಸುಲೇಟಿನಲ್ಲಿ ವೀಸಾ ಸಂದರ್ಶನ ಸರಳವಾಗಿ ಸಿಗದೇ ಇದ್ದ ಕಾಲ ಅದು. ದೆಹಲಿಗೆ ಹೋಗಲು ಅನುಮತಿ ಕೊಡುತ್ತಿದ್ದದ್ದರಿಂದ ಅಲ್ಲಿಗೇ ಹೋಗಿದ್ದೆವು. ಹಾಗೇ  ಮಥುರಾ, ಆಗ್ರಾವನ್ನೂ ನೋಡಿಕೊಂಡು ಬರಲು ಹೋಗಿದ್ದೆವು. ದೆಹಲಿ ಬಿಸಿಲು ಮತ್ತು ಅಲ್ಲಿಯ ಹ್ಯುಮಿಡಿಟಿಯ ಪರಿಚಯವಿಲ್ಲದವರು ಎ.ಸಿ. ಇಲ್ಲದ ಕಾರನ್ನು ಬುಕ್ ಮಾಡಿ ದುಡ್ಡು ಉಳಿಸಲು ಹೇಳಿದ್ದನ್ನು ಕೇಳಿ ಹಾಗೇ ಮಾಡಿದ್ದು ಎಷ್ಟು ದೊಡ್ಡ ತಪ್ಪಾಗಿತ್ತು!! ದೆಹಲಿಯಿಂದ ಆಗ್ರಾ ತಲುಪುವಷ್ಟರಲ್ಲಿ ಮೈ ಎಲ್ಲ ನೀರಿಳಿದು ಅಂಟಂಟಗಿ ಹೋಗಿತ್ತು. ಮಧ್ಯಾನ್ಹ ೧೨.೩೦ರ ಸುಮಾರಿಗೆ ತಾಜ್ ಮುಂದೆ ಹೋದಾಗ ಅಮರ ಪ್ರೇಮದ ಕುರುಹು, ಭವ್ಯ ತಾಜ ಎಂದೇನೂ ಅನಿಸದೇ, ಓ ಇದೇನಾ ತಾಜ್ ಎಂದಷ್ಟೇ ಅನಿಸಿ ಬಿಟ್ಟಿತ್ತು. ನಾವು ಹೋದ ದಿನ ಷಹಾಜಹಾನನು ಸತ್ತ ದಿನವೆಂದು ಪ್ರವೇಶ ಶುಲ್ಕ ಮಾಫಿ ಇತ್ತು. ಸಾಮಾನ್ಯವಾಗಿ ತೆರೆಯದೇ ಇರುವ ಷಹಾಜಹಾನ ಮುಮ್ತಾಜರ ಗೋರಿಯ ಭಾಗವನ್ನೂ ಅವತ್ತು ತೆರೆದಿದ್ದರು.

ಅವತ್ತಿನ ಅನುಭವವನ್ನು ಈ ಚಿತ್ರಕವನದ ಚಿತ್ರಕ್ಕಾಗಿ ಬರೆದ ಕವನವೊಂದರಲ್ಲಿ ಬರೆದಿದ್ದೆ. ಅದನ್ನು ಹೆಕ್ಕಿ ಹಾಕುತ್ತಿರುವೆ ಇಲ್ಲಿ ಈಗ… (ಚಿತ್ರ: ಚಿತ್ರಕವನದಿಂದ)

ತಾಜ್ ಮಹಲ್ - ಚಿತ್ರಕವನದಿಂದ

ತಾಜ್ ಮಹಲ್ - ಚಿತ್ರಕವನದಿಂದ

ಒಂದಷ್ಟು ಸ್ವಗತಗಳು

ವರ್ಷವೆಷ್ಟುರುಳಿದವೊ ಮುಮ್ತಾಜಳ ಗೋರಿಯಾಗಿ
ಮೂರುನೂರರ ಮೇಲೆ ಹತ್ತಾರಾಗಿರಬೇಕು
ಅಮೃತಶಿಲೆಯ ಬಿಳುಪು ಹೊಳಪು; ಪಚ್ಚೆ
ಹರಳು, ಮುತ್ತು ರತ್ನದ ಕುಸುರಿ ಒನಪು
ಸಿರಿ ಸಂಪತ್ತಿನ ಸೂರೆ ಅದೆಷ್ಟೆ ಇರಲಿ,
ಅರಸನೊಲವಿನ ಆಚ್ಛಾದನೆಯಾಗಿರದಿದ್ದರೆ
ಗೋರಿ ಸುತ್ತಿದ ಬಿಳಿ ಬಟ್ಟೆಯಷ್ಟೆ ತಾನೆ!

ತಾಜ್ ಮಹಲೊ ಇದು ತೇಜೋ ಮಹಾಲಯವೊ
ಗೋರಿ ಮುಮ್ತಾಜಳದ್ದೊ, ಹಿಂದೂ ಇತಿಹಾಸದ್ದೊ
ಕಾಲಗರ್ಭದೊಳಿಣುಕಿ ಹೇಳಬಾರದೆ ಕಂಡವರು
’ಕಮಂಡಲ’ದ ನೀರಿಗೆನ್ನ ತಪವನೆರೆದರೆ ಸಿಕ್ಕೀತೆ
ಇತಿಹಾಸದ ಆ ಪುಟದ ಸತ್ಯ ನನಗೇನಾದರು?

ಹಸಿರು ಹಾಸಿನ ಕೊನೆಗೆ ಹೊಳೆವ ಮಹಲು
ನೀಲಿ ಬಾನ ಬೆಳಗಿರುವ ಪರಿ ನೋಡ
ಚಿತ್ರಕಾರನ ಕೈಚಳಕವೋ ಇದೆ ನಿಜರೂಪವೊ;
ನಂಬಲಾರೆ, ಹಿಂದೊಮ್ಮೆ ಸೆಪ್ಟೆಂಬರಿನಾರ್ದ್ರತೆ,
ಉರಿವ ಸೂರ್ಯ, ಸುರಿವ ಬೆವರಿಗೆ ತೊಯ್ದ
ಅರಿವೆ ಅಂಟಿದ ಮೈ ಜಿಗಿಗೆ ಮನ ರೋಸಿ
’ಇದೇನಾ ತಾಜ್’ ಎಂದಸಡ್ಢೆಯಿಂದಂದದ್ದು
ಇದರ ಮುಂದೆ ನಿಂತೇ ಎಂದು!

Advertisements