ಹೆಸರಲ್ಲೇನಿದೆ?

“ಮಾಧ್ವರೊಳಗೆ ಗಂಡು ಮಗುಗೆ ಹೆಸರಿಡಬೇಕು ಅಂದರೆ ಇಲ್ಲಾ ವಿಷ್ಣುಸಹಸ್ರನಾಮದಿಂದ ಒಂದು ಹೆಸರು ಇಡ್ತೀರಾ, ಇಲ್ಲಾ ಅಂದರೆ ಹನುಮಂತನ ಹೆಸರು ಇಡ್ತೀರಾ.. ನನಗಂತೂ ಯಾವತ್ತು ವಿಷ್ಣುಸಹಸ್ರನಾಮದ ‘ಭೋತಭವ್ಯಭವತ್ಪ್ರಭುಃ’ ಅನ್ನೋ ಹೆಸರು ಬಹಳ ಇಷ್ಟ ಆಗಿತ್ತು..” ಅಂತ ನನ್ನ ಗೆಳೆಯ ಹೇಳ್ತಿದ್ದರೆ, ಹೌದಲ್ಲವಾ ಹಾಗೇ ‘ಭಾರಭೃತ್ ಅಂತ ಹೆಸರು ಇಟ್ಟರೆ ಹ್ಯಾಗಿರತ್ತೆ?’ ಅಂತ ನಾನೂ ಕೇಳಿದ್ದೆ.

ಈ ಮಾತುಕತೆ ಆಗಿದ್ದು ನನ್ನ ಮಗ ಹುಟ್ಟಲು ಇನ್ನೂ ಮೂರೋ ನಾಲ್ಕೋ ತಿಂಗಳು ಉಳಿದಿದ್ದಾಗ ಒಂದು ದಿನ ಊಟಕ್ಕೆ ಭೆಟ್ಟಿಯಾಗಿದ್ದ ಮಂಜು ಮತ್ತು ನನ್ನ ನಡುವೆ.  ಮಂಜು ಹೇಳಿದ್ದು ನಿಜವೇ. ನಮ್ಮ ಮನೆಯಲ್ಲೇ ನಮ್ಮ ದೊಡ್ಡಪ್ಪ, ಅಪ್ಪ ಹಾಗೂ ಚಿಕ್ಕಪ್ಪಂದಿರು ತಮ್ಮ ಚೊಚ್ಚಲು ಗಂಡು ಮಕ್ಕಳಿಗೆ ಇಟ್ಟಿರುವದು ಹನುಮಪ್ಪನ ಹೆಸರುಗಳನ್ನೇ. ನಮ್ಮಪ್ಪನ ದೊಡ್ಡಪ್ಪನ ಮಗ ಕೂಡ ತಮ್ಮ ಹಿರಿಯ ಮಗನಿಗೆ ಇಟ್ಟದ್ದು ಹನುಮಪ್ಪನ  ಹೆಸರನ್ನೇ. ಹಾಗೆ ನೋಡಿದ್ರೆ ನಮ್ಮ ತಾತ ಮತ್ತು ಅವರ ಅಣ್ಣ ತಮ್ಮ ಮೊದಲ ಗಂಡು ಮಕ್ಕಳಿಗೆ ಹನುಮಪ್ಪನ ಹೆಸರಿಟ್ಟಿಲ್ಲ. ಮಂತ್ರಾಲಯದ ರಾಯರ ಸೇವೆ ಮಾಡಿದ್ದ ತಾತ ರಾಯರ ಹೆಸರನ್ನೇ ತಮ್ಮ ಮೊದಲ ಮಗನಿಗೆ ಇಟ್ಟರೆ ಅವರಣ್ಣ ತಮ್ಮ ಅಪ್ಪನ ಹೆಸರನ್ನು ಇಟ್ಟಿದ್ದಾರೆ.

What’s in a name? that which we call a rose
By any other name would smell as sweet;
– William Shakespeare

ಅಂತ ಶೇಕ್ಸಪಿಯರ್ ಹೇಳಿದಂತೆ ಹೆಸರಿನಲ್ಲೇನಿದೆ ಆಲ್ವಾ? ಮನುಷ್ಯರಿಗೆ ಹೆಸರು ಏನಿದ್ದರೆ ಏನು? ಏನೋ ಒಂದು ಹೆಸರು. ಮೊದಲೆಲ್ಲ ಕಲ್ಲಪ್ಪ, ಕಲ್ಲವ್ವ, ಗುಂಡಪ್ಪ, ಗುಂಡವ್ವ, ಅಡಿವೆಪ್ಪ, ಅಡಿವೆಮ್ಮ ಅಂತೆಲ್ಲ ಹೆಸರಿಡತಿದ್ದರು. ಸಂಸ್ಕೃತ ನಿಘಂಟು ನೋಡಿ, ಮನೇಕಾ ಗಾಂಧಿಯ ಇಂಡಿಯನ್ ನೇಮ್ಸ್ ಪುಸ್ತಕ ನೋಡಿ, ಇಂಟರ್ನೆಟ್ಟೆಲ್ಲ ಜಾಲಾಡಿಸಿ ಹೆಸರಿಡೋ ಹುಕಿ ಈಗ. ಯಾವುದೇ ಮೂಲದಿಂದ ಹೊಸತೊಂದು ಹೆಸರು ಸಿಕ್ಕರೆ ತುಂಬ ಖುಷಿ! ನನ್ನ ಭಾವ ಮೈದನ ಅವನ ಮಗನಿಗೆ ಹೆಸರಿಡೋ ಕಾಲಕ್ಕೆ ‘ದೃಷ್ಟದ್ಯುಮ್ನನ ಶಂಖದ ಹೆಸರು ಬಹಳ ಚೆನ್ನಾಗಿದೆ ಅಂತೆ, ಆದರೆ ಎಲ್ಲೂ ಸಿಗ್ತಾ ಇಲ್ಲಾ ಆ ಹೆಸರು’ ಅಂತ ಬಹಳಷ್ಟು ಹುಡುಕಾಡಿದ್ದ.

ನಾವು ಮನುಷ್ಯರಿಗೆ ಹೆಸರಿಡಲಿಕ್ಕೆ, ದೇವರ ಹೆಸರು ಇರಲಿ ಅಂತ ಅವುಗಳನ್ನ ಹುಡುಕಿದರೆ, ದೇವರಿಗೆ ಯಾರು ಹೆಸರಿಟ್ಟವರು? ಅತಗ ಅಪ್ಪ ಇಲ್ಲ ಅಮ್ಮ ಇಲ್ಲ. ದಾಸರು ‘ನಿನ್ನಂಥ ಸ್ವಾಮಿ ಎನಗುಂಟು ನಿನಗಿಲ್ಲ, ನಿನ್ನಂಥ ತಂದೆ ಎನಗುಂಟು ನಿನಗಿಲ್ಲ’ ಅಂತ ಹೇಳ್ತಾ ‘ನಿನ್ನರಸಿ ಲಕ್ಷ್ಮಿ ಎನ್ನ ತಾಯಿ ನಿನ್ನ ತಾಯಿಯ ತೋರೋ’ ಅಂತ ಹಾಡೇ ಮಾಡಿದ್ದಾರಲ್ಲವೆ? ಅಂಥಾದ್ದರಲ್ಲಿ ಸಾವಿರಗಟ್ಟಲೆ ಹೆಸರುಗಳನ್ನ ಯಾರಿಟ್ಟರು?

ವಿಷ್ಣು ಸಹಸ್ರನಾಮದ ಆರಂಭದೊಳಗ ಕ್ಲೂ ಕೊಡುತ್ತಾರೆ  ಭೀಷ್ಮಾಚಾರ್ಯರು. ‘ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ।  ಋಷಿಭಿಃ ಪರಿಗೀತಾನಿ ತಾನಿ ವಕ್ಷ್ಯಾಮಿ ಭೋತಯೇ॥’ ಅಂತ. ಗೌಣಾನಿ ಎಂದರೆ ಗೌಣ ಅಥವಾ ಲೆಕ್ಕಕ್ಕಿಲ್ಲದ್ವು ಅಂತಲ್ಲ ಮತ್ತೆ. ಗೌಣ ನಾಮ ಅಂದರ ಗುಣಗಳ ಹೆಸರುಗಳು ಅಂತ. ಗುಣಗಳನ್ನು ಕಂಡ ಭಕ್ತರು, ಋಷಿಗಳು, ಮಹಾತ್ಮರು ಕಂಡ, ಹಾಡಿದ ಗುಣಗಳು, ಅವುಗಳಿಗೆ ಅವರಿಟ್ಟ ಹೆಸರುಗಳು ಅವು. ದೇವರ ಗುಣ ರೂಪ ಮತ್ತು ಕ್ರಿಯೆಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲವಂತೆ.

ಇದೇ ವಿಷಯನ್ನ ವಾದಿರಾಜರು ರುಕ್ಮಿಣೀಶ ವಿಜಯದಲ್ಲಿ ಸ್ವಾರಸ್ಯಕರವಾಗಿ ತಿಳಿಸ್ತಾರೆ. ಚತುರ್ಭುಜನಾಗಿ, ಶಂಖ, ಚಕ್ರ, ಗದಾ, ಪದ್ಮಧಾರಿಯಾಗಿ ದರ್ಶನ ಕೊಟ್ಟು ಆಶೀರ್ವದಿಸಿ, ಮುಂದೆ ಏನು ಮಾಡಬೇಕು ಎನ್ನುವದನ್ನ ಹೇಳಿ, ನಂತರ ತಮ್ಮ  ಮಡಿಲ ಮಗುವಾದ ಕೃಷ್ಣನಿಗೆ ತಾಯಿ ತಂದೆಗಳು ನಾವು ಎಂದು ಲೋಕ ಕರೆಯುವದರಿಂದ, ಹಾಗೇ ಪ್ರಸಿದ್ಧರಾಗಿಬಿಡುವದರಿಂದ ಪಾಪ ಬರುವುದೇನೋ ಎಂದು ದೇವಕಿ, ವಸುದೇವರಿಗೆ ಹೆದರಿಕೆಯಾಯಿತಂತೆ.  ಆ ಹೆದರಿಕೆಗೆ ಕಾರಣವಿಲ್ಲ ಎಂದು ವಾದಿರಾಜರು ಹೇಳುವದು,

ಯ ಏಷ ಪುತ್ಸಂಜ್ಜ್ಞಿತ ನಾರಕಸ್ಥಾನ್
ಜನಾನ್ ಸ್ವನಾಮ ಸ್ಮರಣೇನ ಪಾತಿ
ಸ ದೃಷ್ಟಿಗಃ ಸನ್ವಸುದೇವ ಪತ್ನ್ಯಾಃ
ಕಥಂ ನ ಪುತ್ರಃ ಶತಪತ್ರನೇತ್ರಃ
(ಪುನ್ನಾಮ ನರಕದಿಂದ ಪಾರು ಮಾಡುವವನು ಪುತ್ರ. ಯಾವ ಈ ಶ್ರೀಕೃಷ್ಣನು ಪುನ್ನಾಮ ನರಕದಲ್ಲಿ ನರಳುವ ಜನರನ್ನು ತನ್ನ ನಾಮಸ್ಮರಣೆಯಿಂದ ಸಂರಕ್ಷಿಸುತ್ತಾನೋ, ಈ ಕಮಲದಂತೆ ವಿಶಾಲನಯನನಾದ ಅದೇ ಶ್ರೀಕೃಷ್ಣನು ಕಣ್ಣಿಗೆ ಕಾಣಿಸಿಕೊಂಡ ಮೇಲೆ ವಸುದೇವ ಪತ್ನಿಗೆ ಹೇಗೆ ಪುತ್ರನಾಗಲಾರನು?)

ಯದೀಯ ರೂಪಂ ಪ್ರಕಟೀಕರೋತಿ
ಪಿತಾ ಸ ತಸ್ಯೇತಿ ಹಿ ವೇದವಾದಃ
ತಥಾ ವಿಧಸ್ಯಾನಕದುಂದುಭೇಸ್ತ
ತ್ಪಿತೃತ್ವಮಪ್ಯಸ್ತು ನ ತೇನ ಹಾನಿಃ
(“ಯಾವನು ಯಾವನ ಸ್ವರೂಪವನ್ನು ಪ್ರಕಟಮಾಡುತ್ತಾನೆಯೋ ಅವನು ಅವನಿಗೆ ತಂದೆಯು” ಎಂಬುದಾಗಿ ವೇದ ಸಾರುತ್ತದೆ. ಅದರಂತೆ ಶ್ರೀಕೃಷ್ಣನ ಸ್ವರೂಪವನ್ನು ಪ್ರಕಟಿಸುವ ಆನಕದುಂದುಭಿಗೆ (ವಸುದೇವನಿಗೆ) ಶ್ರೀಕೃಷ್ಣನ ಪಿತ್ರತ್ವವೂ ಇರಲಿ. ಅದರಿಂದ ಯಾವ ಹಾನಿಯೂ ಇಲ್ಲ)

ಮನುಷ್ಯರಿಗೆ ದೇವರ ಹೆಸರು ಯಾಕಿಡೋದು? ಏನೋ ಛಂದ ಅನಿಸಿತು ಅಂತ, ಇಷ್ಟ ದೇವರು ಅಂತ, ಆಯಾ ದೇವರ ಹೆಸರು ಇಡೋದು. ಅಥವಾ ಆ ಹೆಸರು ಇಟ್ಟುಕೊಂಡ ಮುನ್ನಿನ ದೊಡ್ಡವರ ತರಹ ಗುಣವಂತ/ಗುಣವಂತೆ ಆಗಲಿ ಮಗು, ಅವರ ಆಶೀರ್ವಾದವಿರಲಿ, ಅವರ ಸ್ಮರಣೆಯೂ ಇರಲಿ, ಅನ್ನೋ ಉದ್ದೇಶದಿಂದಲೂ ಇಡಬಹುದು. ನಾರಾಯಣ ಎನ್ನುವ ಹೆಸರಿಟ್ಟ ಅಜಾಮಿಳ ಕಡೆಗಾಲಕ್ಕೆ ನಾರಾಯಣನನ್ನು ಕರೆದು ಸದ್ಗತಿ ಪಡೆದ ಕತೆ ಪ್ರಸಿದ್ಧವೇ ಇದೆಯಲ್ಲವೇ?

ಹಾಗೆ ಇಡುವ ಹೆಸರುಗಳಲ್ಲೂ ಹೊಸ ಹೊಸ ಹೆಸರಿರಲಿ, ವಿಶೇಷ ಹೆಸರಿರಲಿ ಅನ್ನೋದಕ್ಕೆ ಒತ್ತು ಇತ್ತೀಚೆಗೆ ಸಿಗ್ತಾ ಇದೆ ಅಂತ ಅನಿಸಬಹುದು. ನಮ್ಮಮ್ಮಂಗೆ ಒಬ್ಬರು ಕೇಳಿದ್ದರಂತೆ, ‘ಅಲ್ಲರೀ ವೈನೀ ನಿಮ್ಮ ಹೆಸರು ಮತ್ತ ನಿಮ್ಮ ಮನಿಯವರ ಹೆಸರು ಎರಡೂ ವಿಶೇಷ ಅವ, ಆದರ ಯಾಕ ನಿಮ್ಮ ಮಕ್ಕಳಿಗೆ ನೀವು ಕಾಮನ್ ಹೆಸರು ಇಟ್ಟೀರಿ?’ ಅಂತ. ಪಾಪ ಹಿಂಗೆಲ್ಲ ವಿಚಾರನೇ ಮಾಡಿರದಿದ್ದ ನಮ್ಮಮ್ಮಗ ಏನು ಹೇಳಬೇಕು ಅಂತ ತಿಳಿಯಲೇ ಇಲ್ಲವಂತೆ.

ನಮ್ಮಮ್ಮ ಹುಟ್ಟಿದಾಗ ಅವರ ಅಪ್ಪ, ಅಮ್ಮ ಬೇರೆ ಯಾವುದೋ ಹೆಸರಿಟ್ಟದ್ದರಂತೆ. ಆದರಂತೆ ಅದೇ ಸಮಯಕ್ಕೆ ಕುಕನೂರಿನಲ್ಲಿ ಎಲ್ಲರೂ ಗೌರವಿಸುವ ರಂಗಣ್ಣ ಮಾಸ್ತರು ‘ಸುಕನ್ಯಾ’ ಅಂತ ನಾಟಕ ಬರದಿದ್ದರಂತೆ. ಆ ಕಾರಣದಿಂದ ‘ಇಕಿಗೆ ಸುಕನ್ಯಾ ಹೆಸರನ್ನೇ ಇಡಿ’ ಅಂತ ಅವರು ಹೇಳಿ ಸುಕನ್ಯಾ ಅನ್ನೋ ಹೆಸರನ್ನು ಇಡಿಸಿದರು. ನಮ್ಮಪ್ಪಗೆ ಅವರಪ್ಪ, ಅಮ್ಮ ಇಟ್ಟ ಹೆಸರು ಇಂದಿರೇಶ ಅಂತ. ಅದಕ್ಕೇನು ಹಿನ್ನೆಲೆ ಅಂತ ಗೊತ್ತಿಲ್ಲ. ಇವರು, ಮಕ್ಕಳಾದ ನಮಗೆ ಅನಿಲ, ವಿದ್ಯಾ, ಬದರಿ ಅಂತ ಸಾಮಾನ್ಯ ಅನಿಸೋ ಹೆಸರಿಟ್ಟುಬಿಟ್ಟೆವಲ್ಲ ಅಂತ ಸ್ವಲ್ಪ ಹಳಹಳಿ ಆಯ್ತು ಅನಸ್ತದ ಅಮ್ಮಗ. ತಮಾಷೆ ಅಂದರ ನನಗ ಹೆಣ್ಣುಕೊಟ್ಟ ಮಾವ ಅಂದರೆ ನನ್ನ ಹೆಂಡತಿ ಅಪ್ಪನೂ ‘ಹೀಗೆ ಏನೋ ಪಲ್ಲವಿ ಅನ್ನೋ ಹೆಸರು ಇಕಿ ಹುಟ್ಟಿದಾಗ ಚೊಲೋ ಹೆಸರು ಅಂತ ಇಟ್ಟುಬಿಟ್ವಿರಿ ಈಗೇನು ಅದು ಕಾಮನ್ ಹೆಸರಾಗಿಬಿಟ್ಟದ!’ ಅಂತ ಅಂದಿದ್ದರು. ಅದೂ ನಿಜವೇ. ಒಂದು ಕಾಲಕ್ಕೆ ವಿಶೇಷ ಅನಿಸಿತು ಅಂತ ಎಲ್ಲಾರೂ ಅದೇ ಹೆಸರಿಟ್ಟರೆ ಅದರ ವಿಶೇಷತೆ ಕಳೆದು ಸಾಮಾನ್ಯ  ಅನಿಸಲಿಕ್ಕೆ ಶುರು ಆಗೇ ಬಿಡುತ್ತದೆ ಅಲ್ಲವೇ?

‘ಬದರಿ ನಾರಾಯಣ’ ಅಂತ ಎರಡೆರಡು ಹೆಸರು ಹೊಂದಿರುವ ನನ್ನ ತಮ್ಮ ಸ್ಪೇಷಲ್ಲಾಗಿದ್ದ ತಾತನಿಗೆ. ತಾವು ಮಾಡಿ ಬಂದ ಬದರಿ ಯಾತ್ರೆಯನ್ನು ಮತ್ತು ‘ನಾರಾಯಣ’ ಹೆಸರಿನಿಂದ ತಮ್ಮ ತಂದೆಯ ನೆನಪನ್ನೂ ತರುತ್ತಾನೆ ಎನ್ನುವ ಕಾರಣಕ್ಕೆ ತಾತನ ಮುದ್ದಿನ ಮೊಮ್ಮಗನಾಗಿದ್ದ 🙂 ಇನ್ನು ತಂಗಿ ವಿದ್ಯಾಳೂ ಒಮ್ಮೆ ‘ನನ್ನ ಹೆಸರು ನೋಡಿ ಎಲ್ಲಾರ ನೋಟ್ ಬುಕ್ಕಿನ ಮೇಲೂ ಇರ್ತದ’ ಅಂತ ಚಾಷ್ಟಿ ಮಾಡಿದ್ದಳು. ನನ್ನ ಹೆಸರಿನ ಬಗ್ಗೆ ನನಗೇನೂ ತಕರಾರಿದ್ದಿಲ್ಲ. ಅನಿಲ ಅಂದರೆ ಗಾಳಿ, ವಾಯು ಹಾಗೂ  ಹನುಮಪ್ಪನ ಹೆಸರು ಅನ್ನೋದು ಬಿಟ್ಟರೆ ಹೆಚ್ಚೇನೂ ಗೊತ್ತಿರಲಿಲ್ಲ ಆದರೆ. ಕೆಲವಾರು ವರ್ಷಗಳ ಹಿಂದೆ ಈಶಾವಾಸ್ಯ ಉಪನಿಷತ್ತಿಗೆ ರಾಘವೇಂದ್ರ ಸ್ವಾಮಿಗಳ ಭಾಷ್ಯದ ಕನ್ನಡ ಅನುವಾದವನ್ನು ಓದುತ್ತಿರುವಾಗ ಈ ಹೆಸರಿನ ಅರ್ಥ ತಿಳಿದು ಖುಷಿಯಾಯಿತು. ‘ಅನಿಲನಾದ, ಅಕಾರಶಬ್ದವಾಚ್ಯನಾದ ಪರಬ್ರಹ್ಮನೇ ನೀಲ ಎಂದರೆ ನಿಲಯನ, ಆಶ್ರಯನಾಗಿ ಉಳ್ಳ, ಒಟ್ಟಿನಲ್ಲಿ ಪರಮೇಶ್ವರಾಶ್ರಿತನಾದ ವಾಯು’ ಎನ್ನುವ ಅರ್ಥವಂತೆ ಅನಿಲ ಎನ್ನುವ ಹೆಸರಿಗೆ. ಇದನ್ನೇ ದಾಸರ ಸುಳಾದಿಯೊಂದರಲ್ಲಿ ವಾಯುವನ್ನು ಕುರಿತು ಹೇಳುವ ಮಾತು ‘ಹರಿಯ ವಿಹಾರಕ್ಕೆ ಆವಾಸನೆನಿಸುವಿ’ ಅಂತ.

ಮಗನ ಹೆಸರಿನಿಂದ  ಶುರು ಮಾಡಿ ಎಷ್ಟೆಲ್ಲ ಬರೆದೆ, ಆದರೆ ಮಗನಿಗೆ ಇಟ್ಟ ಹೆಸರಿನ ಹಿನ್ನೆಲೆ ತಿಳಿಸಲಿಲ್ಲ ಇನ್ನೂ! ಇನ್ನೂ ಏನೆಲ್ಲಾ ವಿಷಯ ಬರೆಯಬಹುದು ಈ ಹೆಸರುಗಳ ಸುತ್ತ. ಇರಲಿ, ಅದನ್ನೂ ಒಂದಿಷ್ಟು ಹೇಳಿ ಈ ನಾಮ ಪುರಾಣಕ್ಕೆ ಮಂಗಳ ಹಾಡುವೆ.

ಮಗ ಹುಟ್ಟುವದಕ್ಕೂ ಬಹಳ ಮುನ್ನ ಹರಿಕಥಾಮೃತಸಾರದಲ್ಲಿ ‘ಪಾಹಿ ಕಲ್ಕಿ ಸುತೇಜ ದಾಸನೆ..’ ಎಂದು ನೂರು ಋಜುಗಣಸ್ಥರ ಹೆಸರು ಹೇಳುತ್ತಾ ಅವರನ್ನು ಪ್ರಾರ್ಥಿಸುವ ಸಂಧಿಯಲ್ಲಿ ಬಂದ ಹೆಸರು ಸುವೀರ. ಬಹುಶಃ ಅದನ್ನು ಹಾಗೇ ಓದಿ ಬಿಟ್ಟಿರುತ್ತಿದ್ದೆ. ಆದರೆ ಅವತ್ತು ಪ್ರತಿ ನುಡಿಗೆ ಪ್ರಭಂಜನಾಚಾರ್ಯರು ಬರೆದ ಅರ್ಥವನ್ನೂ ಓದುತ್ತಿದ್ದೆ. ಅಲ್ಲಿ ಅವರು ತಿಳಿಸಿದ ಅರ್ಥ, ‘ಕೈಗೊಂಡ ಕಾರ್ಯವನ್ನು ನಿಯಮೇನ ಪೋರೈಸುವದರಿಂದ ಸುವೀರ.’ ಹೆಚ್ಚಾಗಿ ಬರೀ ಆರಂಭಶೋರನಾದ ನನಗೆ, ಶುರು ಮಾಡಿದ್ದನ್ನು ನೇಮದಿಂದ ಮುಗಿಸುವ ಸುವೀರ ಹೆಸರು ಬಹಳ ಚನ್ನಾಗಿದೆ ಅನಿಸಿ ತಲೆಯಲ್ಲಿ ಉಳಿದಿತ್ತು. ಅದನ್ನೇ ನಮ್ಮಪ್ಪನಿಗೂ ಹೇಳಿದ್ದೆ. ಮಗ ಹುಟ್ಟುತ್ತಾನೆ ಎಂದು ಗೊತ್ತಾದಾಗ ನನ್ನ ತಲೆಗೆ ಬಂದ ಹೆಸರು ಇದೇ. ಜೊತೆಗೆ ‘ಮಯೂಖ’ ಎನ್ನುವ ಹೆಸರೂ ಇಡಬಹುದು ಅಂತ ಅನಿಸಿತ್ತು. ‘ಹಿಡದ ಕೆಲಸ ಮುಗಿಸೋ ಅಂಥವ’ ಅನ್ನೋ ಅರ್ಥದ ಜೊತೆಗೆ, ವಿಷ್ಣು ಸಹಸ್ರನಾಮದಲ್ಲಿ ಬರುವ ಹೆಸರು ಮತ್ತು ಋಜುಗಣದವರ ಹೆಸರು ಅನ್ನೂ ಕಾರಣಕ್ಕೆ ಕೊನೆಗೂ ಗೆದ್ದದ್ದು ಸುವೀರನೇ.

ಹಿಂಗೆ ಹೆಸರಿಟ್ಟೆ ಅಂತ ತಿಳಿಸಿದ ಮೇಲೆ ಅದೇ ಮಂಜು ಹೇಳಿದ್ದು ನಿನ್ನ ಮಗ ಬೆಂಗಾಲದ ಕಡೆಗೇನಾದ್ರೂ ಹೋದರೆ ಸುಬೀರ್ ಆಗ್ತಾನಲ್ಲೋ ಅಂತ 🙂 ಆಮೇಲೆ ನೋಡಿದ್ರೆ ಅಭಿಮಾನ್ ಸಿನೆಮಾದಲ್ಲಿ ಅಮಿತಾಭ್ ಬಚ್ಚನ್ ಹೆಸರು ಅದೇ, ಸುಬೀರ್ ಕುಮಾರ್!! ‘ಇರಲಿ, ಯಾಕಿರವಲ್ದ್ಯಾಕ’ 🙂

ಹೆಸರಿಟ್ಟು ಐದು ವರ್ಷಗಳಾದವು ಇವತ್ತಿಗೆ. ಮಗನಿಗೆ ಹುಟ್ಟು ಹಬ್ಬದ ಶುಭಾಶಯಗಳು. ‘ಚಿರಂಜೀವಿಯಾಗೆಲವೊ ಚಿಣ್ಣ ನೀನು’ ಎನ್ನುವ ವಿಜಯದಾಸರ, ಗುರು ಹಿರಿಯರ, ಹರಿವಾಯುಗುರುಗಳ ಆಶೀರ್ವಾದ, ಅನುಗ್ರಹವಿರಲಿ ಅವನ ಮೇಲೆ. ಅಮ್ಮ ಅಪ್ಪಂದಿರದ್ದೂ ಸೇರಿದಂತೆ ಯಾವ ಕೆಟ್ಟ ದೃಷ್ಟಿ ತಾಕದಿರಲಿ. ಉತ್ತರೋತ್ತರ ಅಭಿವೃದ್ಧಿಯಾಗಲಿ ಎನ್ನುವ ಹಾರೈಕೆಯೊಂದಿಗೆ, ಜಗನ್ನಾಥದಾಸರ ಹರಿಕಥಾಮೃತಸಾರದ ಶ್ವಾಸ ಸಂಧಿಯ ಈ ನುಡಿಯಿಂದ ಬೇಸರದೆ ಹಂಸ ಮಂತ್ರ ಜಪ ಮಾಡಿಸುವ ಶ್ವಾಸ ದೇವಗೆ, ಅವನಂತರ್ಯಾಮಿ ಶ್ರೀಹರಿಗೆ ವಂದನೆ.  ‘ಯಸ್ಮಿನ್ನಪೋ ಮಾತರಿಶ್ವಾ ದದಾತಿ..’

ಭಾರತೀಶನು ಘಳಿಗೆಯೊಳು ಮು
ನ್ನೂರರವತ್ತುಸಿರ ಜಪಗಳ
ತಾ ರಚಿಸುವನು ಸರ್ವಜೀವರೊಳಗಿರ್ದು ಬೇಸರದೆ।
ಕಾರುಣಿಕ ಅವರವರ ಸಾಧನ
ಪೂರಯಿಸಿ ಭೂ ನರಕ ಸ್ವರ್ಗವ
ಸೇರಿಸುವ ಸರ್ವಜ್ಞ ಸಕಲೇಷ್ಟಪ್ರದಾಯಕನು ॥
– ಜಗನ್ನಾಥದಾಸರ ಹರಿಕಥಾಮೃತಸಾರ, ಶ್ವಾಸ ಸಂಧಿ, ಪದ್ಯ ೧

Advertisements

ಮಜ್ಜಿಗೆಯೊಳಗಿನ ಬೆಣ್ಣೆಯಂತೆ…

“ಮಜ್ಜಿಗಿ ಕಟದಾಗ ಬೆಣ್ಣಿ ಹೆಂಗ ಬರತದ ಗೊತ್ತದೇನು ನಿನಗ? ಕಟೆಯೋದನ್ನ ಒಂದು ಹಂತದಾಗ ನಿಲ್ಲಸಿ, ಹೀಂಗ ಮಜ್ಜಗಿ ಒಳಗ ಒಂದು ಚಮಚಾನೋ, ಸಣ್ಣ ಸೌಟೋ ತೊಗೊಂಡು ಕೈ ಆಡಿಸತಾ ಇದ್ದರ, ಒಂದು ಕ್ಷಣದಾಗ ತಟ್ಟನೆ ಬೆಣ್ಣಿ ತೇಲತದ.”

ನಮ್ಮಪ್ಪ ಈ ಮಾತನ್ನ ಆಗಾಗ ಹೇಳ್ತಿರ್ತಾರೆ. ಸಣ್ಣವನಿದ್ದಾಗ ಅಜ್ಜಿ, ಅಮ್ಮ ಕಡಗೋಲಿನಿಂದ ಕಟದು ಮಜ್ಜಿಗೆ ಮಾಡೋದನ್ನ, ಅದರಿಂದ ಬೆಣ್ಣೆ ತೆಗೆದು, ತುಪ್ಪ ಕಾಸೋದನ್ನ ನೋಡಿದ್ದೇನೆ. ದೊಡ್ಡವನಾಗ್ತ ಕಡಗೋಲಿನ ಬದಲಿಗೆ ಮಿಕ್ಸರಿನಲ್ಲಿ ಮಜ್ಜಿಗೆ ಕಟೆಯೋದನ್ನೂ ನೋಡಿದ್ದೇನೆ. ಕಟೆಯೋದನ್ನ ನಿಲ್ಲಿಸಿ ನಿಧಾನಕ್ಕೆ ಒಂದು ಚಮಚವನ್ನ ಅದರಲ್ಲಿ ಆಡಿಸುತ್ತಾ ಮಜ್ಜಿಗೆಯೊಳಗೆ ಬೆಣ್ಣೆ ತೇಲುವದನ್ನೆ ಅಮ್ಮ ಕಾಯುತ್ತಿದ್ದ ನೆನಪೂ ಇದೆ. ಆದರೆ ಸ್ವತಃ ಕೈಯಾಡಿಸಿ ಬೆಣ್ಣೆ ತೇಲುವ ಆ ಕ್ಷಣದ ಅನುಭವವನ್ನ ಯಾವತ್ತೂ ಪಡೆದುಕೊಂಡದ್ದಿಲ್ಲ. ಆ ಗಳಿಗೆಯಲ್ಲಿ ಯಾವ ತರಹದ ಅನುಭವ ತುಂಬಿರಬಹುದು ಎನ್ನುವ ಕುತೂಹಲವಿದೆ. ತಮಾಷೆಯೆಂದರೆ ಆ ಕ್ಷಣದ ಬಗ್ಗೆ ಯೋಚಿಸಿದಾಗ ನೆನಪಾಗುವದು ಸುರತ್ಕಲ್ಲಿನ ದಿನಗಳಲ್ಲಿ ಕಂಡ ಮಳೆ. ಮೋಡ ಕಟ್ಟಿದ ವಾತಾವರಣದಲ್ಲಿ ಮುಂದಿನ ಕ್ಷಣದಲ್ಲಿ ಮಳೆ ಬೀಳುವದು ಎನ್ನುವ ಅರಿವು ಉಂಟಾಗುವದು ಗೊತ್ತಾಗುತ್ತಿತ್ತು. ಆ ಅರಿವು ಕೆಲಸ ಮಾಡಿ ಕೊಡೆ ಬಿಡಿಸುವ ಮೊದಲೇ ಮಳೆ ಹನಿಗಳು ಮೈ ತೊಯ್ಸಿರುತ್ತಿದ್ದವು!

ಪುರಂದರ ದಾಸರ ಹಾಡು ಭಾಗ್ಯದ ಲಕ್ಷ್ಮಿ ಬಾರಮ್ಮ ಕೇಳುವಾಗಲೆಲ್ಲ ನನಗೆ ಅಪ್ಪನ “ಮಜ್ಜಿಗೆಯೊಳಗೆ ಬೆಣ್ಣೆ ತೇಲುವ” ಮಾತು ನೆನಪಾಗುತ್ತದೆ. ಸಜ್ಜನ, ಸಾಧು ಜನರ ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಬಾರಮ್ಮ ಎನ್ನುವ ಸರಳವಾದ ಸಾಲಿನಲ್ಲಿ ಎಷ್ಟೊಂದು ಅರ್ಥಪೂರ್ಣ ಮಾತನ್ನ ಹೇಳಿದ್ದಾರಲ್ಲ ದಾಸರು ಎನ್ನುವ ಬೆರಗು ಮೂಡುತ್ತದೆ. ಥಟ್ಟನೆ ಕಾಣುವ ಬೆಣ್ಣೆಯ ಹಿಂದೆ ಹಾಲು ಕಾಸಿ, ಹೆಪ್ಪು ಹಾಕಿ, ಕೆನೆ ತೆಗೆದು, ಮಜ್ಜಿಗೆ ಕಟೆದ ಪರಿಶ್ರಮವಿದೆ; ತೇಲುವ ಬೆಣ್ಣೆಗಾಗಿ ಕಾಯುವ ಕಾತುರವಿದೆ. ಆ ಬೆಣ್ಣೆಯಿಂದ ಮುಂದೆ ಪಡೆಯುವ ತುಪ್ಪದಂತೆ, ಲಕ್ಷ್ಮಿಯ ಅನುಗ್ರಹದ ಮುಖಾಂತರ, ಮುಂದಿನ ಹೆಜ್ಜೆಯಾಗಿ ನಾರಾಯಣನ ಅನುಗ್ರಹವನ್ನು ಪಡೆಯಬೇಕು ಎನ್ನುವ ಸೂಚನೆಯೂ ಇಲ್ಲಿದೆಯೆ?

ಭಾಗ್ಯದ ಲಕ್ಷ್ಮೀ ಬಾರಮ್ಮ।ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ । ಗೆಜ್ಜೆ ಕಾಲ್ಗಳ ಧ್ವನಿಯ ತೋರುತ
ಸಜ್ಜನ ಸಾಧು ಪೂಜೆಯ ವೇಳೆಗೆ । ಮಜ್ಜಿಗೆಯೊಳಗಿನ ಬೆಣ್ಣೆಯಂತೆ

ಕನಕ ವೃಷ್ಟಿಯ ಕರೆಯುತ ಬಾರೆ । ಮನ ಕಾಮನೆಯ ಸಿದ್ಧಿಯ ತೋರೆ
ದಿನಕರ ಕೋಟಿ ತೇಜದಿ ಹೊಳೆಯುವ । ಜನಕರಾಯನ ಕುಮಾರಿ ಬೇಗ

ಅತ್ತಿತ್ತಗಲದೆ  ಭಕ್ತರ ಮನೆಯಲಿ । ನಿತ್ಯ ಮಹೋತ್ಸವ ನಿತ್ಯ ಸುಮಂಗಲ
ಸತ್ಯವ ತೋರುವ ಸಾಧು ಸಜ್ಜನರ । ಚಿತ್ತದಿ ಹೊಳೆಯುವ ಪುತ್ಥಳಿ ಬೊಂಬೆ

ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು । ಕಂಕಣ ಕೈಯ ತಿರುವುತ ಬಾರೆ
ಕುಂಕುಮಾಂಕಿತೆ ಪಂಕಜ ಲೋಚನೆ । ವೇಂಕಟರಮಣನ ಬಿಂಕದ ರಾಣಿ

ಸಕ್ಕರೆ ತುಪ್ಪದ ಕಾಲುವೆ ಹರಿಸಿ । ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆಯುಳ್ಳ ಅಳಗಿರಿ ರಂಗನ । ಚೊಕ್ಕ ಪುರಂದರ ವಿಠಲನ ರಾಣಿ

ಇತ್ತೀಚೆಗೆ ನನ್ನ ಮಗನಿಗೆ ಈ ಭಾಗ್ಯದ ಲಕ್ಷ್ಮಿ ಪದವನ್ನ ಹಾಡುವ ಕುತೂಹಲ ಮೂಡಿದೆ. ನಾನು ಇಲ್ಲಿಯವರೆಗೆ ಬಹಳಷ್ಟು ಬಾರಿ ಈ ಪದವನ್ನ ಕೇಳಿದ್ದರೂ ಅದರ ನುಡಿಗಳನ್ನ ಅವು ಬರುವ ಕ್ರಮದಲ್ಲಿ ನೆನಪಿಟ್ಟುಕೊಳ್ಳಲು ಪ್ರಯತ್ನ ಪಟ್ಟಿರಲಿಲ್ಲ. ಈಗ ಮಗನ ದೆಸೆಯಿಂದ ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಈ ಪದದಲ್ಲಿ ದಾಸರು ಶ್ರೀಸೂಕ್ತದ ತಿರುಳನ್ನ ಹಿಡಿದಿಟ್ಟಿದ್ದಾರೆಯೇ ನೋಡಬೇಕು ಅಂತ ಅನಿಸಿತು. ಅದೃಷ್ಟವಶಾತ್ ನನ್ನ ಬಳಿಯಲ್ಲಿ ಸಾ.ಕೃ.ರಾಮಚಂದ್ರರಾಯರು ಅರ್ಥ ಸಂಗ್ರಹಿಸಿದ ಶ್ರೀಸೂಕ್ತದ ಪುಸ್ತಕವೂ ಇದ್ದದ್ದರಿಂದ ಅದನ್ನೂ ಓದಿದೆ. ಓದಿಯಾದ ಮೇಲೆ ಶ್ರೀಸೂಕ್ತದ ಬಗ್ಗೆಯೇ ಕೆಲವೊಂದು ಪ್ರಶ್ನೆಗಳು ಹುಟ್ಟಿಕೊಂಡವು. ಸಂಪತ್ತಿಗೋಸ್ಕರ ಮಾತ್ರ ಮಾಡುವ ಯಜ್ಞದಲ್ಲಿ ಸಂಪತ್ತಿನ ಒಡತಿಯಾದ ಲಕ್ಷ್ಮಿಯನ್ನು ಸಂಪತ್ತನ್ನ ಕೊಡು ಎನ್ನುವ ಒಂದೇ ಉದ್ದೇಶದಿಂದಷ್ಟೇ ಅಲ್ಲಿ ಲಕ್ಷ್ಮಿಯ ಉಪಾಸನೆಯನ್ನ ಹೇಳುತ್ತಿದ್ದಾರಲ್ಲ ಅನಿಸಿತು. ಅದರ ಬೆನ್ನಿಗೇ ನೆನಪಾಗಿದ್ದು ಅಂಭೃಣೀ ಸೂಕ್ತ.

ದಾಸ ಸಾಹಿತ್ಯದಲ್ಲಿ ಕೆಲವು ಕಡೆ ಅಂಭೃಣೀ ಸೂಕ್ತದ ಉಲ್ಲೇಖವನ್ನು ಕೇಳಿರುವೆ, ಶ್ರೀಸೂಕ್ತದ ಉಲ್ಲೇಖ ಬಂದಿರಬಹುದಾದರೂ ನಾನು ಕೇಳಿದ ನೆನಪಿಲ್ಲ. ನಾನೇನೂ ಹೆಚ್ಚು ಓದಿಲ್ಲವಾದ್ದರಿಂದ ಶ್ರೀಸೂಕ್ತದ ಬಗ್ಗೆ ಉಂಟಾದ ಅನುಮಾನಗಳನ್ನ ಪರಿಹರಿಸಿಕೊಳ್ಳಬೇಕು ಅಂತ ಅನಿಸಿದಾಗ ಫೋನ್ ಮಾಡಿದ್ದು ವೈದ್ಯರಿಗೆ (ಜಿ. ಶ್ರೀನಿವಾಸ್ ಅವರಿಗೆ). ಅವರು ಮೊದಲಿಗೆ ಹೇಳಿದ್ದು, ಶ್ರೀಸೂಕ್ತ ಮತ್ತು ಪುರುಷಸೂಕ್ತ ಎನ್ನುವ ಪುಸ್ತಕವೊಂದನ್ನ ಬನ್ನಂಜೆ ಅವರು ಬರೆದಿದ್ದಾರೆ, ಅದನ್ನ ತರಿಸಿಕೊಂಡು ಓದು ಅಂತ. ಮುಂದೆ ಹೇಳಿದ್ದು, “ಅಂಭೃಣೀ ಸೂಕ್ತದಲ್ಲಿ ಬ್ರಹ್ಮ ರುದ್ರರನ್ನ ಅವರ ಪಟ್ಟಕ್ಕೇರಿಸುವವಳು ನಾನು, ಅಂತಹ ನನಗೆ ಸ್ವಾಮಿ ನಾರಾಯಣ ಎನ್ನುವದರ ಸ್ಪಷ್ಟ ಉಲ್ಲೇಖವಿದೆ. ಮಧ್ವಾಚಾರ್ಯರ ದ್ವಾದಶಸ್ತೋತ್ರದ ವಿಶ್ವಸ್ಥಿತಿಪ್ರಳಯ ಸರ್ಗಮಹಾವಿಭೂತಿ… ಎಂದು ಶುರುವಾಗುವ ಸ್ತೋತ್ರ, ಈ ಅಂಭೃಣೀ ಸೂಕ್ತದ ವಿಷಯವನ್ನೇ ಹೇಳುತ್ತದೆ. ಲಕ್ಷ್ಮಿಗೆ ಬಲವಿತ್ತ ಹರಿಯ ಕೃಪಾ ಕಟಾಕ್ಷಕ್ಕೆ ನಮಿಸುವೆ ಎನ್ನುತ್ತಾರೆ ಮಧ್ವಾಚಾರ್ಯರು ಅದರಲ್ಲಿ.  ಶ್ರೀಸೂಕ್ತದಲ್ಲಿ ವಿಷ್ಣುವಿನ ಪ್ರಿಯಳೆ ಎಂದೆಲ್ಲ ಲಕ್ಷ್ಮಿಯನ್ನ ಕರೆದು ಪ್ರಾರ್ಥಿಸಿದರೂ, ಅಂಭೃಣೀ ಸೂಕ್ತದಲ್ಲಿ ಬಂದಂತೆ ನಾರಯಣನ ಮಹತ್ವ ಸ್ಪಷ್ಟವಾಗಿ ಬಂದಿಲ್ಲ. ಹಾಗಂತ ಶ್ರೀಸೂಕ್ತ ಕಡಿಮಯಲ್ಲ. ಶ್ರೀಸೂಕ್ತವೂ ಪ್ರಮುಖವಾದದ್ದೇ ಮತ್ತು ಅದನ್ನ ದೇವರ ಪೂಜೆಯ ವೇಳೆಗೆ, ಶಂಖದ ಪೂಜೆ ಮಾಡುವಾಗ ಹೇಳುವ ಪರಿಪಾಠವಿದೆ. ನಿರ್ಮಾಲ್ಯ ವಿಸರ್ಜನೆಯ ವೇಳೆಗೆ ಅಂಭೃಣೀ ಸೂಕ್ತ, ಶಂಖದ ಪೂಜೆಯ ವೇಳೆಗೆ ಶ್ರೀಸೂಕ್ತ ಹೇಳಿ, ಮುಂದೆ ದೇವರ ಪೂಜೆ ಮಾಡುವಾಗ ಪುರುಷಸೂಕ್ತ ಹೇಳುವದು ಕ್ರಮ. ಶ್ರೀಭೂ ಸಮೇತ ನಾರಾಯಣನ ಪೂಜೆ ಎನ್ನುವ ಅರ್ಥದಲ್ಲಿ ಈ ಪೂಜೆಯ ಕ್ರಮವಿದೆ. ಇದು ಮಧ್ವಾಚಾರ್ಯರು ಕೃಷ್ಣಮಂತ್ರದಲ್ಲಿ ..ಸತ್ಯಾಸಮೇತಮಖಿಲಪ್ರದಮಿಂದಿರೇಶಮ್, ರುಕ್ಮಿಣೀ ಸತ್ಯಭಾಮಾ ಸಮೇತ ಕೃಷ್ಣನನ್ನು ಧ್ಯಾನಿಸಬೇಕು ಎಂದು ಹೇಳಿದಂತೆ” ಎಂದರು. ಆ  ಶ್ಲೋಕ ಸಂಕೀರ್ಣಗ್ರಂಥಗಳಲ್ಲಿ ಎಲ್ಲಿದೆ ಎನ್ನುವದನ್ನೂ ಹೇಳಿದರು. ಅದು, ಇಂತಿದೆ,

ಧ್ಯಾಯೇದ್ಧರಿನ್ಮಣಿನಿಭಂ ಜಗದೇಕವಂದ್ಯಂ
ಸೌಂದರ್ಯಸಾರಮರಿಶಂಖವರಾಭಯಾನಿ
ದೋರ್ಭಿ‌ರ್ದಧಾನಮಜಿತಂ ಸರಸಂ ಚ ಭೈಷ್ಮೀ-
ಸತ್ಯಾಸಮೇತಮಖಿಲಪ್ರದಮಿಂದಿರೇಶಮ್

(ಇಂದ್ರನೀಲಮಣಿಯಂತೆ ಶ್ಯಾಮಲ ವರ್ಣ, ಸಮಸ್ತ ಜನರಿಂದಲೂ ವಂದ್ಯ, ಸೌಂದರ್ಯದ ಗಣಿ, ನಾಲ್ಕು ಕೈಗಳಲ್ಲಿ ಚಕ್ರ, ಶಂಖ, ವರ, ಅಭಯಗಳನ್ನು ಧರಿಸಿದ್ದಾನೆ. ಪ್ರೀತಿಯಿಂದ ರುಕ್ಮಿಣೀ ಸತ್ಯಭಾಮೆಯರೊಡಗೂಡಿದ್ದಾನೆ. ಇಂತಹ ಅಜೇಯನಾದ, ಅಭೀಷ್ಟಗಳನ್ನೆಲ್ಲ ಕೈಗೂಡಿಸುವ ಶ್ರೀಕೃಷ್ಣನನ್ನು ಧ್ಯಾನಿಸಬೇಕು – ಅರ್ಥ, ಸಂಕೀರ್ಣ ಗ್ರಂಥಗಳು ಪುಸ್ತಕದಿಂದ)
(ಭೈಷ್ಮೀ ಎಂದರೆ ಭೀಷ್ಮಕನ ಮಗಳು ರುಕ್ಮಿಣಿ ಅಂತಿರಬೇಕು)

ಇದೇ ವಿಷಯವನ್ನು ಮುಂದುವರಿಸಿ ಇನ್ನೂ ಬಹಳಷ್ಟು ಮಾತುಕತೆಯಾಯಿತು. ನಾರಾಯಣನನ್ನ ತಿಳಿದವರು ಅವನನ್ನೇ ನೇರವಾಗಿ ಪ್ರಾರ್ಥಿಸಬಹುದು ಆದರೆ ಅವನ ಅರಿವು ಇನ್ನೂ ಜಿತವಾಗದವರು ನಾರಾಯಣನನ್ನು, ಅವನ ಪರಿವಾರ ಸಮೇತವಾಗಿ ಪ್ರಾರ್ಥಿಸುವದೇ ಸರಿಯಾದ ಕ್ರಮ ಎಂದು ಮಧ್ವಾಚಾರ್ಯರು ಎಷ್ಟು ಚನ್ನಾಗಿ ತಿಳಿಸಿದ್ದಾರೆ ಎನ್ನುವದನ್ನೂ ತಿಳಿಸಿದರು. ಅದೇ ವಿಷಯವಾಗಿ ಒಂದು ಸ್ವಾರಸ್ಯಕರವಾದ ಕತೆಯನ್ನೂ ಹೇಳಿದರು. ಮುಂದೆ ಇನ್ನೊಮ್ಮೆ ಅದರ ಬಗ್ಗೆ ಬರೆಯಬೇಕು. ಅಂತೂ ಇವತ್ತಿನ ಮಾತುಕತೆಯಲ್ಲಿ ಶ್ರೀಸೂಕ್ತದ ಬಗೆಗಿನ ಗೊಂದಲಗಳ ನಿವಾರಣೆಯಾಯಿತು. ಲಕ್ಷ್ಮೀ ನಾರಾಯಣರ ಸ್ಮರಣೆಯಾಯಿತು. ವೈದ್ಯರೇ ಹೇಳಿದಂತೆ ಎಷ್ಟು ಗುರುಹಿರಿಯರ ಕರುಣೆಯ, ಅನುಗ್ರಹದ ಪರಿಣಾಮವೋ ಇದು; ಹೀಗೆ ಅರಿವು ಹೆಚ್ಚಿಸಿಕೊಳ್ಳಲಿಕ್ಕೆ ಅನುಕೂಲವಾಗಿದ್ದು. ಅನಂತ ವಂದನೆಗಳು ಅವರೆಲ್ಲರಿಗೆ.

ಎರಡು ಪದ, ಮೂರು ಪುಸ್ತಕ, ಒಂದಷ್ಟು ಲಿಂಕು, ಪುರಂದರದಾಸರ ಪುಣ್ಯದಿನಕ್ಕೆ…

ದಾಸರ ಪದಗಳ ಭಜನೆಗಳನ್ನ ಕೇಳುವದು ಮತ್ತು ಅವುಗಳಲ್ಲಿ ಭಾಗವಹಿಸುದು ನನಗೆ ಬಹಳ ಇಷ್ಟವಾಗುತ್ತದೆ. ಯಾವಾಗಿನಿಂದ ಇದು ಶುರುವಾಯಿತು ಅನ್ನುವದು ನೆನಪಿನಲ್ಲಿಲ್ಲ, ಆದರೆ ಈ ಅಭಿರುಚಿ ಬೆಳೆಯಲಿಕ್ಕೆ ಚಿಕ್ಕಂದಿನ ರಜಾ ದಿನಗಳಲ್ಲಿ ನಮ್ಮ ಅಮ್ಮನ ತವರೂರು ಕುಕನೂರಿಗೆ ಹೋದಾಗ ಅಲ್ಲಿ ಪ್ರತಿ ಗುರುವಾರ ಸಂಜೆ ನಡಯುತ್ತಿದ್ದ ಭಜನೆ ಬಹಳ ಮುಖ್ಯ ಪಾತ್ರವಹಿಸಿರಬೇಕು ಅನಿಸುತ್ತದೆ. ನಮ್ಮ ಅಜ್ಜಿ ತಾತರ ಮನೆಯಲ್ಲಿ ರಾಯರ (ರಾಘವೇಂದ್ರ ಸ್ವಾಮಿಗಳ) ಬೃಂದಾವನವಿದ್ದದ್ದರಿಂದ, ಪ್ರತಿ ಗುರುವಾರ ಬೆಳಗಿನ ಹೊತ್ತು ಗಂಡಸರೆಲ್ಲ ಸೇರಿ ರಾಯರ ಅಷ್ಟೋತ್ತರ ಪಾರಾಯಣ ಮಾಡಿದರೆ ಸಂಜೆಗೆ ಹೆಂಗಸರು ಭಜನೆ ಮಾಡುತ್ತಿದ್ದರು. ಇವೆರಡು ಚಿತ್ರಗಳು ಯಾವತ್ತೂ ಮರೆಯುವದಿಲ್ಲ.ಆ ದಿನಗಳಲ್ಲಿ ಭಜನೆಗಳಲ್ಲಿ ಕೇಳಿದ ‘ನಮಃ ಪಾರ್ವತಿ ಪತಿ ನುತ ಜನ ಪರ namO ವಿರೂಪಾಕ್ಷ’, ‘ಪವಮಾನ ಪವಮಾನ ಜಗದ ಪ್ರಾಣ’, ಮೊದಲಾದ ಹಾಡುಗಳು ಇವತ್ತೂ ಆ ನೆನಪುಗಳನ್ನು ತರುತ್ತವೆ.

ಭಜನೆಗಳಲ್ಲಿ  ಪಾಲ್ಗೊಳ್ಳಲು ಇಲ್ಲಿ ಅಮೆರಿಕದಲ್ಲೂ ಸಾಧ್ಯವಾದದ್ದು ‘ಶ್ರೀ ವ್ಯಾಸ ಭಜನಾ ಮಂಡಳಿ’ಯ ಸಂಪರ್ಕವಾದ ನಂತರ. ಪ್ರತೀ ಏಕಾದಶಿಗೊಮ್ಮೆ, ಹಬ್ಬ ಹರಿದಿನಗಳಂದು, ದಾಸರ ಪುಣ್ಯ ತಿಥಿಗಳಂದು, ಹೀಗೆ ಅವಕಾಶವಾದಗಲೆಲ್ಲ ನಡೆಯುವ ಭಜನೆಗಳಲ್ಲಿ ಪಾಲ್ಗೊಂಡು ಬಹಳ ಖುಷಿಪಟ್ಟಿದ್ದೇನೆ. ಪ್ರತೀ ಬಾರಿಯೂ ಭಾಗವಹಿಸಲು ಆಗದಿದ್ದರೂ, ಅವಕಾಶವಾದಾಗ ತಪ್ಪಿಸುವದಿಲ್ಲ. ಇವತ್ತು ಪುರಂದರ ದಾಸರ ಪುಣ್ಯ ದಿನದ ನಿಮಿತ್ತ ಇದ್ದ ಭಜನೆಯಲ್ಲಿ ಪಾಲ್ಗೊಳ್ಳಲು ಆಗಲಿಲ್ಲ. ಈಗ ಅದೇ ನೆಪದಲ್ಲಿ ಭಜನೆಯ ಬಗ್ಗೆ ನಾಲ್ಕು ಮಾತು ಬರೆಯುತ್ತಿರುವೆ. ಈ ಭಜನೆಗಳಲ್ಲಿ ಎಷ್ಟೋ ಹೊಸ ಹಾಡುಗಳನ್ನು ಕೇಳಿದ್ದೇನೆ. ಮೊದಲ ಬಾರಿಗೆ ಇಷ್ಟವಾದವು ಎಷ್ಟೋ ಹಾಡುಗಳು. ಎರಡು ವಾರಗಳ ಹಿಂದೆ ವೈಕುಂಠ ಏಕಾದಶಿ ನಿಮಿತ್ತದ ಭಜನೆಯಲ್ಲಿ ಪುರಂದರ ದಾಸರ ಒಂದು ಪದವನ್ನು ಕೇಳಿದೆ. ಅದು ಎಷ್ಟು ಇಷ್ಟವಾಯಿತೆಂದರೆ, ಹಾಡಿನ ಪುಸ್ತಕದಲ್ಲಿ ಆ ಪುಟದ ಚಿತ್ರವನ್ನು ಫೋನಿನ ಕ್ಯಾಮರಾದಲ್ಲಿ ಸೆರೆಹಿಡಿದು ತಂದೆ. ಆ ಹಾಡು ಇದು (ಫೋಟೋದಿಂದ ಟೈಪಿಸದೆ ಗೂಗಲಿಸಿದಾಗ ಇಲ್ಲಿ  ಸಿಕ್ಕಿದ್ದನ್ನು ಪೇಸ್ಟಿಸಿದೆ 🙂 ),

ಕನಸು ಕಂಡೇನ ಮನದಲಿ ಕಳವಳಗೊಂಡೇನ ||ಪ||
ಏನ ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ ||ಅ.ಪ||
ಪೋನ್ನದ ಕಡಗನಿಟ್ಟು ತಿಮ್ಮಯ್ಯ  ತಾ | ಪೋಲ್ವನಾಮವನಿಟ್ಟು |
ಅಂದುಗೆ ಘಲುಕೆನ್ನುತಾ ಎನ್ನಮುಂದೆ | ಬಂದು ನಿಂತಿದ್ದನಲ್ಲೇ ||೧||
ಮಕರ ಕುಂಡಲನಿಟ್ಟು ತಿಮ್ಮಯ್ಯ  ತಾ | ಕಸ್ತೂರಿ ತಿಲಕನಿಟ್ಟು |
ಗೆಜ್ಜೆ ಘಲುಕೆನುತಾ ಸ್ವಾಮಿ ತಾ | ಬಂದು ನಿಂತಿದ್ದನಲ್ಲೇ ||೨||
ಮುತ್ತಿನ ಪಲ್ಲಕ್ಕಿ ಯತಿಗಳು | ಹೊತ್ತು  ನಿಂತಿದ್ದರಲ್ಲೇ |
ಛತ್ರಚಾಮರದಿಂದ ರಂಗಯ್ಯನ | ಉತ್ಸವ ಮೂರುತಿಯ ||೩||
ತಾವರೆ ಕಮಲದಲಿ  ಕೃಷ್ಣಯ್ಯ ತಾ | ಬಂದು ನಿಂತಿದ್ದನಲ್ಲೇ |
ವಾಯುಬೊಮ್ಮಾದಿಗಳು ರಂಗಯ್ಯನ | ಸೇವಯ ಮಾಡುವರೆ ||೪||

ನವರತ್ನ ಕೆತ್ತಿಸಿದ | ಸ್ವಾಮಿ ಎನ್ನ | ಹೃದಯಮಂಟಪದಲ್ಲಿ |
ಸರ್ವಾಭರಣದಿಂದ ಪುರಂದರ | ವಿಠಲನ ನೋಡಿದೆನೇ ||೫||

*************************
ಪುರಂದರದಾಸರ ಜೀವನ ಕತೆಯನ್ನು ಹೇಳುತ್ತಾ, ಅವರ ಅನುಗ್ರಹಕ್ಕಾಗಿ ಪ್ರಾರ್ಥನೆ ಮಾಡುವ ವಿಜಯದಾಸರ ಈ ಹಾಡು ಬಹಳ ಇಷ್ಟ.
ಗುರು ಪುರಂದರ ದಾಸರೇ ನಿಮ್ಮ ಚರಣ ಕಮಲವ ನಂಬಿದೆ ||ಪ||
ಗರುವ ರಹಿತನ ಮಾಡಿ ಎನ್ನನು ಪೊರೆವ ಭಾರವು ನಿಮ್ಮದೇ ||ಅ.ಪ||
ಒಂದು ಅರಿಯದ ಮಂದಮತಿ ನಾ | ನಿಮ್ಮದು ನಿಮ್ಮನು ನಂಬಿದೆ |
ಇಂದಿರೇಶನ ಪಾದ ತೋರಿಸೋ ತಂದೆ ಮಾಡೆಲೋ ಸತ್ಕ್ರುಪೆ ||೧||
ಮಾರಜನಕನ ಸನ್ನಿಧಾನದಿ | ಸಾರಗಾಯನ ಮಾಡುವ |
ನಾರದರೆ ಈ ರೂಪದಿಂದಲಿ ಕೋರೆ ದರುಶನ ತೋರಿದೆ ||೨||
ಪುರಂದರಾಲಯ ಘಟ್ಟದೊಳು ನೀ | ನಿರುತ ಧನವ ಗಳಿಸಲು |
ಪರಮ ಪುರುಷನು ವಿಪ್ರನಂದದಿ | ಕರವ ನೀಡಿ ಯಾಚಿಸೆ ||೩||
ಪರಮ ನಿರ್ಗುಣ ಮನವನರಿತು | ಸರುವ ಸೂರಿಯ ಗಯಿಸಿದ |
ಅರಿತು ಮನದಲಿ ಜರಿದು ಭವಗಳ | ತರುಣಿ ಸಹಿತ ಹೊರ ಹೊರಟನೆ ||೪||
ಅಜಭವಾದಿಗಳರಸನಾದ | ವಿಜಯವಿಠಲನ ಧ್ಯಾನಿಪ |
ನಿಜ ಸುಜ್ಞಾನವ ಕೊಡಿಸ ಬೇಕೆಂದು | ಭಜಿಪೆನೋ ಕೇಳ್ ಗುರುವರ ||೫||
ಹಂಸಾನಂದಿ ಅವರು ಪುರಂದರದಾಸರು ಪುರಂದರಗಡದವರು ಹೌದೆ ಅಲ್ಲವೇ ಎಂಬುದರ ಕುರಿತು ಚಿಕ್ಕ ಟಿಪ್ಪಣಿಯನ್ನೂ ಮತ್ತು ಅದರ ಜೊತೆಗೆ ಮೂಗುತಿ ಪ್ರಕರಣವನ್ನು  ತಮ್ಮ ಕಲ್ಪನೆಯಲ್ಲಿ ಒಳ್ಳೆಯ ಕತೆಯಾಗಿ ಹೆಣೆದದ್ದನ್ನೂ ಹಾಕಿದ್ದನ್ನು ನೋಡಿದೆ. ಸೊಗಸಾಗಿದೆ ಮಾಹಿತಿ ಮತ್ತು ಕತೆ. ಅದನ್ನ ಇಲ್ಲಿ ((ತಂಬೂರಿ ಮೀಟಿದವ.. ಭವಾಬ್ದಿ ದಾಟಿದವ ….) ಓದಬಹುದು.
*******************************
ಹರಿದಾಸರ ಬಗ್ಗೆ ಆಸಕ್ತಿ ಮೂಡಿಸಿದ ಮೊದಲ ಪುಸ್ತಕ ಬೇಲೂರು ಕೇಶವ ದಾಸರ ‘ಕರ್ನಾಟಕ ಭಕ್ತ ವಿಜಯ’. ಅದರಲ್ಲಿ ಹರಿದಾಸ ಪರಂಪರೆಗೆ ಪೋಷಕರಾದ ಯತಿಗಳ ಮತ್ತು ಹರಿದಾಸರುಗಳ ಜೀವನ ಕಥನವನ್ನು ಬಹಳಷ್ಟು ಬಾರಿ ಓದಿದ್ದೇನೆ. ಇವತ್ತಿಗೂ ಮನಸ್ಸು ವ್ಯಗ್ರವಾದಾಗ ಅದನ್ನು ಹಿಡಿದು ಅದರಲ್ಲಿ ಯಾವುದೇ ದಾಸರ, ಯತಿಗಳ ಕತೆ ಓದಿದರೂ ಮತ್ತೆ ಮನಸ್ಸಿಗೆ ಹಿತವಾಗುತ್ತದೆ.
ಅದಾದ ಮೇಲೆ ಬಹಳಷ್ಟು ಹಿಡಿಸಿದ್ದು ಬನ್ನಂಜೆ ಗೋವಿಂದಾಚಾರ್ಯರ ಪ್ರವಚನವೊಂದರ ಪುಸ್ತಕ ರೂಪ ‘ಪುರಂದರೋಪನಿಷತ್’. ಪುರಂದರ ದಾಸರ ಒಂದು ಪದ ‘ಏಳು ನಾರಾಯಣ‘ವನ್ನು ಎಳೆ ಎಳೆಯಾಗಿ ಬಿಡಿಸಿ, ಅದರ ಆಧ್ಯಾತ್ಮಿಕ ಅರ್ಥದ ಹೊಳಹನ್ನು ತೋರಿಸಿ, ಪುರಂದರ ದಾಸರ ಸಾಹಿತ್ಯವನ್ನು ವ್ಯಾಸತೀರ್ಥರು ಪುರಂದರೋಪನಿಷತ್ ಎಂದು ಯಾಕೆ ಕರೆದಿದ್ದರು ಎಂಬುದನ್ನು ಬಹಳ ಚನ್ನಾಗಿ ತಿಳಿಸಿದ ಪುಸ್ತಕವದು. ಮತ್ತೆ ಮತ್ತೆ ಓದಬೇಕು ಅನಿಸುವ ಪುಸ್ತಕ.
*******************************
ಪುರಂದರ ದಾಸರ ಪದಗಳ ಬಗ್ಗೆ ಓದಿದ ವಿಶಿಷ್ಟ ಪುಸ್ತಕ ಡಾ| ಎಚ್ ಎನ್ ಮುರಳೀಧರ ಅವರ ‘ತಂಬೂರಿ ಮೀಟಿದವ’. ಪುರಂದರದಾಸರ ಪದಗಳನ್ನು ಈ ನೋಟದಲ್ಲಿ ನೋಡುವ ಪ್ರಯತ್ನವೊಂದು ಖಂಡಿತವಾಗಿಯೂ ಬೇಕಿತ್ತು. ಪದಗಳಲ್ಲಿ ಬರುವ ಹಲವು ವಿಧವಾದ ಪಲ್ಲವಿಗಳನ್ನು ಇವರು ವಿಂಗಡಿಸಿದ ರೀತಿ, ಪದಗಳ ಛಂದಸ್ಸು, ಶೈಲಿಗಳ ಚಿಂತನೆ, ಪದಗಳಲ್ಲಿ ಬಳಕೆಯಾದ ಅಡು ಮಾತು, ಹೀಗೆ ಹಲವು ಬಗೆಯಲ್ಲಿ ತಮ್ಮ ವಿಚಾರಗಳನ್ನು ಮಂಡಿಸಿದ ರೀತಿ ಬಹಳ ಹಿಡಿಸಿತು. ದಾಸರ ಪದಗಳನ್ನು ಇವರು ದೇಸೀ ಅಭಿವ್ಯಕ್ತಿ ಸ್ವರೂಪದ ಹಿನ್ನೆಲೆಯಲ್ಲಿ ನೋಡುವ ನೋಟ ಬಹು ವಿಶಿಷ್ಟವಾಗಿದೆ. ಈ ಪುಸ್ತಕದ ಪರಿವಿಡಿ ನೋಡಿ ಪುಸ್ತಕವನ್ನು ಕೊಂಡಿದ್ದೆ. ಇದನ್ನ ಒಂದು ಬಾರಿ ಓದಿ ಮುಗಿಸುವದು ನನಗಾಗುವದಿಲ್ಲ. ನಿಧಾನವಾಗಿ ಅವಕಾಶವಾದಂತೆ ಒಂದೊಂದೇ ಅಧ್ಯಾಯಗಳನ್ನು ಓದುತ್ತಿರುವೆ.

ಆ ಕ್ಷಣದಲ್ಲಿ ಹಾರಿ ಹೋದಂತೆ

ಹ್ಯಾಂಗೆ ಬರೆದಿತ್ತೋ ಪ್ರಾಚೀನದಲ್ಲಿ
ಹಾಂಗೆ ಇರಬೇಕು ಸಂಸಾರದಲ್ಲಿ

ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ
ಆ ಕ್ಷಣದಲ್ಲಿ ಹಾರಿ ಹೋದಂತೆ

ನಾನಾ ಪರಿಯಲ್ಲಿ ಸಂತೆ ನೆರೆದಂತೆ
ನಾನಾ ಪಂಥವ ಹಿಡಿದು ಹೋದಂತೆ

ಮಕ್ಕಳಾಡಿ ಮನೆ ಕಟ್ಟಿದಂತೆ
ಆಟ ಸಾಕೆಂದು ಅಳಿಸಿ ಪೋದಂತೆ

ವಸತಿಕಾರನು ವಸತಿ ಕಂಡಂತೆ
ಹೊತ್ತಾರೆ ಎದ್ದು ಹೊರಟು ಹೋದಂತೆ

ಸಂಸಾರ ಪಾಶವ ನೀ ಬಿಡಿಸಯ್ಯ
ಕಂಸಾರಿ ಪುರಂದರವಿಠ್ಠಲರಾಯ

ಪುರಂದರದಾಸರ ಈ ಪದವನ್ನ ವಿದ್ಯಾಭೂಷಣರ ಹಾಡುಗಾರಿಕೆಯಲ್ಲಿ ಮೊದಲ ಸಾರಿ ಕೇಳಿದಾಗಿನಿಂದ ಮನಸ್ಸಿನಲ್ಲಿ ನಿಂತಿದೆ. ಈಗೆರಡು ವಾರಗಳಿಂದ ಮತ್ತೆ ಮತ್ತೆ ನೆನಪಾಗುತ್ತಿದೆ. ಸರಳ ಸುಂದರ ಅನಿಸೋ ಪದ ಹೇಳ್ತಿರೋದಾದರೂ ಏನನ್ನ? ಪ್ರಾಚೀನದಲ್ಲಿ ಅಂದರೆ ಏನು? ವೇದೋಪನಿಷತ್ತುಗಳಲ್ಲಿ ಅಥವಾ ಭಾಗವತಾದಿ ಪುರಾಣಗಳಲ್ಲಿ ಹೇಳಿರುವಂತೆ ಎನ್ನುವ ಅರ್ಥವೇ? ಅಥವಾ ಅವರವರ ಹಣೆ ಬರಹದಂತೆ, ಅವರವರ ಕರ್ಮದ ಕಟ್ಟಿನಂತೆ ಎಂಬರ್ಥವೆ?

’ಈಸಬೇಕು ಇದ್ದು ಜೈಸಬೇಕು’ ಎಂದ ದಾಸರು ಇರುವ ಬಗೆಯನ್ನ ಮತ್ತು ಹೋಗುವ ಬಗೆಯನ್ನೂ ಹೇಳ್ತಾ ಇದ್ದಾರಲ್ಲವೆ ಇಲ್ಲಿ. ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ. ಈ ಕ್ಷಣ ಬಂದು ಕುಳಿತ ಪಕ್ಷಿ ಮುಂದಿನ ಕ್ಷಣ ಮತ್ತೆಲ್ಲೋ ಹಾರಿ ಹೋಗೋದು. ಎಲ್ಲಿಂದ ಬಂತು, ಯಾಕೆ ಬಂತು ಗೊತ್ತಿಲ್ಲ. ಎಲ್ಲಿಗೆ ಹೊರಟಿತು ಗೊತ್ತಿಲ್ಲ. ಕ್ಷಣ, ಅಷ್ಟೇ. ಎಲ್ಲಿಂದಲೋ ಬಂದು ಕೂತ ಪಕ್ಷಿ ತಟ್ಟನೆ ಹಾರಿ ಹೋಗಿಬಿಡುತ್ತದೆ, ಯಾವುದರ ಮುಲಾಜು ಇಲ್ಲದೆ. ಬಂದು ಕೂತಿದ್ದರ ಕುರುಹೂ ಇಲ್ಲದಂತೆ ಹಾರಿ ಹೋಗಿಬಿಡುತ್ತದೆ. ಪ್ರಾಣ ಪಕ್ಷಿಯೂ ಅಷ್ಟೇ ಅಲ್ಲವೆ? ’ಅವ್ಯಕ್ತಾದೀನಿ ಭೂತಾನಿ ಅವ್ಯಕ್ತ ನಿಧನಾನ್ಯೇವ.’ ಹುಟ್ಟುವದಕ್ಕೆ ಮೊದಲು, ಸತ್ತ ಮೇಲೆ, ಎರಡೂ ಅವ್ಯಕ್ತವಾದ ಸ್ಥಿತಿಯೇ. ವ್ಯಕ್ತ ಮಧ್ಯವನ್ನ ಹೇಗೆ ನೋಡಬೇಕು ಹಾಗಾದರೆ?

’ನಾನಾ ಪರಿಯಲ್ಲಿ ಸಂತೆ ನೆರೆದಂತೆ’ ಸಂತೆಯಲ್ಲಿ ನಿರಂತರ ಇರುವದಂತೂ ಸಾಧ್ಯವಿಲ್ಲವಷ್ಟೇ? ಒಂದು ಕಾಲ ಘಟ್ಟದಲ್ಲಿ, ಯಾವ್ಯಾವದೋ ಕಾರಣದಿಂದ, ಏನೇನನ್ನೊ ಕೊಡು-ಕೊಳ್ಳುವದಕ್ಕಾಗಿ ಸಂತೆಯಲ್ಲಿ ನೆರೆದ ಜನರಂತೆಯೇ ಅಲ್ಲವೆ ನಾವೆಲ್ಲ ಈ ಜಗತ್ತಿನಲ್ಲಿ ಬಂದು ಹೋಗುವದು? ’ಋಣಾನುಬಂಧ ರೂಪೇಣ ಪಶುಪತ್ನಿಸುತಾಲಯ.’ ಏನನ್ನ ಕಳೆಯಲು ಈಗ ಕೂಡಿರುವದೋ ಬಲ್ಲವರಾರು? ಕಳೆಯುವವರೆಷ್ಟೋ, ಪಡೆಯುವವರೆಷ್ಟೋ. ಕೊನೆಗೊಮ್ಮೆ ತಮ್ಮ ತಮ್ಮ ದಾರಿ ಹಿಡಿಯುವವರೇ ಎಲ್ಲ.

ಸಂತೆಯಿಂದ ಹೊರಟವರು ಕೊಂಡು ಕೊಂಡ ವಸ್ತುವನ್ನ ಅಥವಾ ಗಳಿಸಿದ ಧನವನ್ನಾದರೂ ಕೊಂಡೊಯ್ಯುತ್ತಾರೆ. ಸಂಸಾರ ಸಂತೆಯಿಂದ ಹೊರಡುವದು ಬರಿಗೈಯಲ್ಲೆ! ಹಾಗಿದ್ದರೂ ಇಲ್ಲಿ ಇದ್ದ ಮೇಲೆ ಸುಮ್ಮನೆ ಇರುವವರಲ್ಲ. ಇದ್ದಷ್ಟು ದಿನ ಜೀವನವನ್ನ ಕಟ್ಟುವವರೇ ಎಲ್ಲ. ಹೊರಡುವ ಹೊತ್ತು ಬಂದಾಗ, ಕಟ್ಟಿದ್ದೆಲ್ಲವನ್ನೂ ಇಲ್ಲಿಯೇ ಬಿಟ್ಟು ಹೋಗಬೇಕು. ಮಕ್ಕಳು ಆಟಕ್ಕಾಗಿ ಮನೆ ಕಟ್ಟಿದಂತೆಯೇ ಇದೂ ಕೂಡ. ಮಕ್ಕಳಾಟದ ಮನೆಯನ್ನ ಆಟ ಸಾಕು ಎಂದು ಅವರೇ ಕೆಡಿಸಿ ಹೋಗುತ್ತಾರೆ. ಬದುಕಿನಲ್ಲಿ ಕಟ್ಟಿದ್ದನ್ನೆಲ್ಲ ಸಾವಿನಲ್ಲಿ ಕೆಡವಬೇಕು ಅಂತಲ್ಲ, ಆದರೆ ಬದುಕಿನಲ್ಲಿ ಕಟ್ಟಿಕೊಂಡವರ ಪಾಲಿಗೆ, ನಮಗಂಟಿಕೊಂಡವರ ಪಾಲಿಗೆ ಎಲ್ಲವೂ ಕೆಟ್ಟು ಹೋದಂತೆಯೇ ತಾನೆ?

ರಾತ್ರಿ ಕಳೆಯಲೊಂದು ಮನೆ ಹುಡುಕುವವರು ಸಿಕ್ಕ ಮನೆಯಲ್ಲಿದ್ದು, ಬೆಳಕು ಹರಿಯುತ್ತಲೆ ಹೊರಟು ಹೋಗುವರಲ್ಲವೆ? ಈ ದೇಹವೂ ಹಾಗೆ, ಜೀವನಿಗೊಂದು ತಾತ್ಕಾಲಿಕ ಮನೆ. ಇವತ್ತು ಇರುವದು ನಿಜ, ನಾಳೆ ಬೆಳಕು ಹರಿಯುತ್ತಲೇ ಇದನ್ನು ಇದ್ದಲ್ಲಿಯೇ ಬಿಟ್ಟು ಹೊರಡುವದೂ ನಿಜ. ಇಂದಿದ್ದು ನಾಳೆ ಬಿಡುವ ದೇಹವನ್ನಷ್ಟೇ ಕುರಿತು ಇಲ್ಲಿ ಹೇಳ್ತಾ ಇರೋದೋ ಅಥವಾ ಇನ್ನೂ ಹೆಚ್ಚಿನದೇನನ್ನೋ ಹೇಳುತ್ತಿದ್ದಾರೋ ಇಲ್ಲಿ? ಬೆಳಕು ಹರಿಯುತ್ತಲೇ ಎದ್ದು ಹೋಗುವ ವಸತಿಕಾರ ಇಲ್ಲಿ ಇದ್ದದ್ದು ರಾತ್ರಿಯೇ ಹಾಗಾದರೆ? ಬೆಳಕು ಹರಿದದ್ದು ಸಾವನ್ನ ಸೂಚಿಸುವದಾದರೂ ಹೇಗೆ? ಸಾಯುವವರಿಗೆಲ್ಲ ಬೆಳಕು ಹರಿಯಿತು ಎನ್ನಬಹುದೆ? ತಿಳಿದವರು ಹೇಳಬೇಕು.

ಸಂಸಾರ ಪಾಶವ ನೀ ಬಿಡಿಸಯ್ಯ ಎನ್ನುವಲ್ಲಿ ಕಂಸಾರಿಯೇ ಬಂದದ್ದು ಬರೀ ಪ್ರಾಸಕ್ಕೋಸ್ಕರವೆ? ಇರಲಿಕ್ಕಿಲ್ಲ. ಸಂಸಾರವನ್ನ ಕಂಸನಿಗೆ ಹೋಲಿಸಿದ್ದಾರೇನೋ ಇಲ್ಲಿ. ತಾನಿದ್ದಷ್ಟು ದಿನವೂ ಕಷ್ಟ ಕೊಟ್ಟವನು ಕಂಸ. ಸಂಸಾರವೂ ಹಾಗೆ ಅಲ್ಲವೇ? ಮತ್ತೆ ಮತ್ತೆ ಮೇಲೇರಿ ಬರುತ್ತದೆ, ಎಷ್ಟು ಕಷ್ಟ ಎನಿಸುತ್ತದೆ. ಸುಖದ ಅಮಲನ್ನೂ ಹತ್ತಿಸುತ್ತದೆ, ಸುಖದ ಹಿಂದೆಯೇ ದುಃಖವನ್ನೂ ಕೊಡುತ್ತದೆ. ಆ ಕಂಸ ಖುದ್ದಾಗಿ ಅಥವಾ ತನ್ನ ಬಂಟರ ಮೂಲಕವಾಗಿ ಮೇಲೇರಿ ಬಂದಂತೆಲ್ಲ ಅವರನ್ನ ಕೊಂದವನಲ್ಲವೇ ಕೃಷ್ಣ? ಅವನೇ ಬೇಕು ಮತ್ತೆ ಈ ಸಂಸಾರದ ಪಾಶದಿಂದ ಬಿಡಿಸಲಿಕ್ಕೆ!

ಪಕ್ಷಿ ಹಾರಿ ಹೋಗುವಾಗಿನ ’ಆ ಕ್ಷಣ’, ಆಗ ಇರಬೇಕಾದ ಮನಸ್ಥಿತಿಯನ್ನೇ ಅಲ್ಲವೇ ಈ ಪದ ಹೇಳುತ್ತಿರೋದು? ಸಂತೆಯಲ್ಲಿ ನಾನಾ ಪರಿಯಲ್ಲಿ ವ್ಯವಹಾರ ಮಾಡಿ ಕೊನೆಗೆ ಅವರಾರೋ ನಾವಾರೋ ಎಂಬಂತೆ ಹೊರಡುವಾಗಲೇ ಆಗಲಿ, ಮಕ್ಕಳು ತಾವೇ ಕಟ್ಟಿದ ಮನೆಯನ್ನ ಕೆಡಿಸಿ ಹೋಗುವಾಗ ಅಥವಾ ರಾತ್ರಿ ಕಳೆದ ಮನೆಯನ್ನ ಬಿಟ್ಟು ಹೋಗುವದರಲ್ಲೇ ಆಗಲಿ ಒಂದು ನಿರ್ಲಿಪ್ತತೆ ಇದೆ. ಸಾವು ಯಾವ ಕ್ಷಣದಲ್ಲಿ ಎರಗುತ್ತದೆ ಎನ್ನುವದು ಗೊತ್ತಿಲ್ಲ. ಬದುಕಿನ ಕ್ಷಣ ಕ್ಷಣದಲ್ಲೂ ಆ ನಿರ್ಲಿಪ್ತತೆ ಬಯಸುವದು ಸಾಯುವ ಆ ಕ್ಷಣದಲ್ಲಿ ಇರಬೇಕಾದ ನಿರ್ಲಿಪ್ತತೆಯನ್ನ ಗಳಿಸಿಕೊಳ್ಳುವದಕ್ಕೋಸ್ಕರವೆ? ಸಾಯುವ ಆ ಕ್ಷಣದಲ್ಲಿ, ಇಲ್ಲಿ ಸಂಸಾರದ ಕಡೆ ಅಭಿಮಾನ ಎಳೆದರೆ ಮತ್ತೆ ಬರುವದು ಇದೇ ಸಂಸಾರಕ್ಕೆ. ಕಡೆಗಾಲಕ್ಕೆ ಕಡವಳನ ನೆನೆ ಎನ್ನುವರಲ್ಲವೆ? ಭಗವದ್ಗೀತೆಯಲ್ಲಿ ಕೃಷ್ಣನೂ ಹೇಳುತ್ತಾನೆ, ’ಕಡೆಗಾಲಕ್ಕೆ ನನ್ನ ನೆನೆದವನು ನನ್ನನ್ನೇ ಹೊಂದುತ್ತಾನೆ’ ಎಂದು. ಮಧ್ವಾಚಾರ್ಯರು ವಂದೇ ವಂದ್ಯಂ ಸದಾನಂದಂ.. ಅಂತ್ಯ ಕಾಲೇ ವಿಶೇಷತಃಎನ್ನುತ್ತಾರೆ.

ಆದರೆ ಆ ಸ್ಮರಣೆ ಬರುವದಾದರೂ ಹೇಗೆ? ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರು ಶಪಥ ಮಾಡಿ ಬ್ರಹ್ಮಚಾರಿಯಾಗಿದ್ದವರು. ತಾವು ಬಯಸದೇ ಸಾವು ಬರದು ಎಂದು ಗೊತ್ತಿದ್ದವರು. ಏನನ್ನೂ ಕಟ್ಟಿಕೊಳ್ಳದೇ ಇದ್ದವರಾದರೂ ರಾಜ್ಯವನ್ನು ಕಾಪಿಡಲು ತಮ್ಮನ್ನೇ ಮುಡಿಪಾಗಿಟ್ಟವರು. ಯುದ್ಧದಲ್ಲಿ ಪಾಂಡವರು ಗೆದ್ದ ಮೇಲೆ ‘ರಾಜ್ಯವೀಗ ಸುರಕ್ಷಿತ’ ಎಂದು ತಮ್ಮ ಜವಾಬ್ದಾರಿಯಿಂದ ಮುಕ್ತರಾದವರು.  ಎಂಟು ನೂರು ವರ್ಷಗಳ ಕಾಲ ನಿರ್ಲಿಪ್ತತೆಯನ್ನ ಪಾಲಿಸಿದವರಲ್ಲವೇ ಅವರು? ಕಡೆಗಾಲಕ್ಕೆ ಆ ಕೃಷ್ಣ ಅವರೆದುರೇ ನಿಂತಿದ್ದರೂ, ಆ ಕ್ಷಣದಲ್ಲಿ ಅವರ ಮನಸ್ಸಿನಲ್ಲಿ ಅವನ ಸ್ಮರಣೆಯಿರಲಿಲ್ಲವಂತೆ. ಅದಕ್ಕಾಗಿ ಮತ್ತೆ ಜನ್ಮವಾಯಿತಂತೆ ಅವರಿಗೆ. ಹಾಗಾದರೆ ಕೃಷ್ಣ ಎದುರಿನಲ್ಲಿದ್ದರಷ್ಟೇ ಸಾಲದು, ಸ್ಮರಣೆಯನ್ನೂ ಅವನೇ ಕೊಡಬೇಕು. ಕೊಟ್ಟು ಸಂಸಾರದಿಂದ ಬಿಡಿಸಬೇಕು. ಕಂಸಾರಿಯೇ ಯಾಕೆ ಬಂದ ಪದದಲ್ಲಿ ಎಂದು ಯೋಚಿಸಿದಾಗ ಹೊಳೆದದ್ದಿಷ್ಟು.

(ಇಂಟರ್ನೆಟ್ಟಿನಲ್ಲೆಲ್ಲಾದರೂ ವಿದ್ಯಾಭೂಷಣರು ಇದನ್ನ ಹಾಡಿದ್ದರ ಲಿಂಕ್ ಸಿಗುವದೇನೋ ಎಂದು ಹುಡುಕಿದಾಗ ಅರ್.ಕೆ.ಶ್ರೀಕಂಠನ್ ಅವರು ಹಾಡಿದ ಲಿಂಕ್ ಸಿಕ್ಕಿತು, ರಸಿಕಾಸ್.ಆರ್ಗ್ ನ ಈ ಕೊಂಡಿಯಲ್ಲಿ.)

ಹರಿದಾಸರು ಕಂಡ ಶಿವ – ಶಿವರಾತ್ರಿಗೆ ಶಿವಸ್ಮರಣೆ…

ವಾಮದೇವ ವಿರಿಂಚಿ ತನಯ ಉ
ಮಾಮನೋಹರ ಉಗ್ರ ಧೂರ್ಜಟಿ
ಸಾಮಜಾಜಿನವಸನ ಭೂಷಣ ಸುಮನಸೋತ್ತಂಸ
ಕಾಮಹರ ಕೈಲಾಸ ಮಂದಿರ
ಸೋಮಸೂರ್ಯಾನಳವಿಲೋಚನ
ಕಾಮಿತಪ್ರದ ಕರುಣಿಸೆಮಗೆ ಸದಾ ಸುಮಂಗಳವ

ಜಗನ್ನಾಥದಾಸರು ಹರಿಕಥಾಮೃತ ಸಾರದ ನಾಂದಿ ಸಂಧಿಯಲ್ಲಿ ಶಿವನ ಹನ್ನೊಂದು ಹೆಸರುಗಳನ್ನು ಚಮತ್ಕಾರಿಕವಾಗಿ ಹೆಣೆದು ಏಕಾದಶ ರುದ್ರರನ್ನೂ ನೆನಪಿಸಿ ಸದಾ ಸುಮಂಗಳವನ್ನು ಕೊಡು ಎಂದು ಶಿವನನ್ನು ಪ್ರಾರ್ಥಿಸುವ ಪದ್ಯ ಇದು.

ಹರಿದಾಸರೆಲ್ಲ ಹರಿಯ ದಾಸರು, ವೈಷ್ಣವರು. ಆದರೆ ಅವರಲ್ಲಿ ತಮಿಳುನಾಡಿನ ಶೈವ-ವೈಷ್ಣವ ದ್ವೇಶಗಳಲ್ಲಿ ಕಾಣುವ ಶಿವದ್ವೇಶವಿಲ್ಲ. ಬದಲಿಗೆ ಶಿವ ಅವರಿಗೆ ಪರಮ ವೈಷ್ಣವ, ವಾಮದೇವ. ಶಿವ ಮುಕ್ತಿಯನ್ನು ಕೊಡುವವನಲ್ಲ, ಬದಲಿಗೆ ಅವನೇ ಮುಂದೆ ಶೇಷನಾಗಿ ತನ್ನ ಮುಕ್ತಿಯನ್ನು ಹೊಂದುವವ. ಅವನು ನರೋತ್ತಮ, ಉಳಿದವರಿಗೆಲ್ಲ ಮುಕ್ತಿಯ ಹಾದಿಯನ್ನು ತೋರಿಸುವವನೂ ಹೌದು. ಕಾಶಿ ವಿಶ್ವನಾಥ ಜಟಾ ಜೂಟಿಯಾಗಿ ಕಾಶಿಯ ಬೀದಿ ಬೀದಿಗಳಲ್ಲಿ ಸಂಚರಿಸುತ್ತಿರುತ್ತಾನಂತೆ. ಕಾಶಿಯಲ್ಲಿ ಸಾಯುವವರ ಕಿವಿಯಲ್ಲಿ ರಾಮ ಮಂತ್ರವನ್ನು ಜಪಿಸಿ ಅವರನ್ನು ಮುಕ್ತಿ ಪಥದೆಡೆಗೆ ನಡೆಸುತ್ತಾನಂತೆ. ಹರನೊಳಗೆ ನಿಂತು ಪ್ರಳಯವನ್ನು ನಡೆಸುವಾತನೂ ಶ್ರೀ ಹರಿಯೆ. ಬ್ರಹ್ಮಾಂಡದ ಒಳಗೆ ನಡೆಯುವ ಪ್ರಳಯ ಶಿವನ ತಾಂಡವವಾದರೆ, ಬ್ರಹ್ಮಾಂಡದ ಒಳಗೂ ಹೊರಗೂ ಪ್ರಳಯವನ್ನು ಮಾಡುವವ ನರಸಿಂಹ, ಅವನೂ ಸೋಮಸೂರ್ಯಾನಳವಿಲೋಚನನೆ! ಜಗನ್ನಾಥ ದಾಸರು ಅದೇ ಹರಿಕಥಾಮೃತಸಾರದ  ಇನ್ನೊಂದು ಪದ್ಯದಲ್ಲಿ ಸೂಚ್ಯವಾಗಿ ಇದನ್ನು ಹೇಳುತ್ತಾರೆ,

ಜಗವನೆಲ್ಲವ ನಿರ್ಮಿಸುವ ನಾ
ಲ್ಮೊಗನೊಳಗೆ ತಾನಿದ್ದು ಸಲಹುವ
ಗಗನಕೇಶನೊಳಿದ್ದು ಸಂಹರಿಸುವನು ಲೋಕಗಳ
ಸ್ವಗತಭೇದವಿವರ್ಜಿತನು ಸ
ರ್ವಗ ಸದಾನಂದೈಕದೇಹನು
ಬಗೆಬಗೆಯ ನಾಮದಲಿ ಕರೆಸುವ ಭಕುತರನು ಪೊರೆವ

ಗರುಡ ಶೇಷರೊಡನೆ ಶಿವ ಅಹಂಕಾರ ತತ್ವದ ಅಭಿಮಾನಿ. ಆಚಾರ್ಯ ಮಧ್ವರ ತತ್ವವಾದದಲ್ಲಿ ಅಹಂಕಾರದ ಅಳಿವು ಎಂದರೆ ನಾನೇ ಎನ್ನುವ ಯಥಾರ್ಥವಲ್ಲದ ಅಹಂಕಾರದ ಅಳಿವು. ನಾನು ಎನ್ನುವ ತನ್ನತನದ ಅರಿವಿನ ಸಾತ್ವಿಕ ಅಹಂಕಾರ ಯಥಾರ್ಥ ಜ್ಞಾನದ ಕಡೆಗೆ ನಡೆಸುವಂಥದ್ದು. ತನ್ನನ್ನೂ ಸೇರಿದಂತೆ ಸಕಲ ವಿಶ್ವದ ಒಳಗೂ ಹೊರಗೂ ತುಂಬಿದ ತತ್ವದ ಅಚಿಂತ್ಯಾದ್ಭುತ ಮಹಾತ್ಮ್ಯವನ್ನು ಅರಿತು ಅದರಲ್ಲಿ ಮಾಡುವ ಸ್ನೇಹವನ್ನು ಬೆಳೆಸುವಂಥದ್ದು. ವಾದಿರಾಜರು ಈ ಕೆಳಗಿನ ಪದದಲ್ಲಿ ಮಾಧವನನ್ನು ತೋರು ಎಂದು ಬೇಡುವದು ಅದೇ ಅಹಂಕಾರಾಭಿಮಾನಿ ರುದ್ರನನ್ನ. ಮಾಧವನನ್ನೇ ತೋರು ಎಂದೇಕೆ ಕೇಳುತ್ತಾರೆ ಎಂದು ಯೋಚಿಸಿದಾಗ ಹೊಳೆದದ್ದು, ಅಹಂಕಾರ ತತ್ವದ ಅಭಿಮಾನಿ ಲಕ್ಷ್ಮಿ-ನಾರಾಯಣ ರೂಪವೆಂದರೆ ಕಮಲಾ-ಮಾಧವ ರೂಪ ಎಂಬುದು.

ಧವಳ ಗಂಗೆಯ ಗಂಗಾಧರ ಮಹಾಲಿಂಗ ಮಾ
ಧವನ ತೋರೋ ಗುರುಕುಲೋತ್ತುಂಗಾ

ಅರ್ಚಿಸಿದವರಿಗಭೀಷ್ಟವ ಕೊಡುವ
ಹೆಚ್ಚಿನ ಅಘಗಳ ತರಿದು ಬಿಸುಟುವಾ
ದುಶ್ಚರಿತಗಳೆಲ್ಲ ದೂರದಲ್ಲಿಡುವ ನ
ಮ್ಮಚ್ಚುತಗಲ್ಲದ ಅಸುರರ ಬಡಿವಾ

ಮಾರನ ಗೆದ್ದ ಮನೋಹರ ಮೂರ್ತಿ
ಸಾಧು ಸಜ್ಜನರಿಗೆ ಸುರ ಚಕ್ರವರ್ತಿ
ಧಾರುಣಿಯೊಳಗೆ ತುಂಬಿದೆ ನಿಮ್ಮ ಕೀರ್ತಿ
ಮುರಾರಿಯ ತೋರಿಸಯ್ಯ ನಿಮಗೆ ಶರಣಾರ್ಥಿ

ಚನ್ನ ಪ್ರಸನ್ನ ಶ್ರೀ ಹಯವದನನ್ನ
ಅನುದಿನ ನೆನೆವಂತೆ ಮಾಡೊ ನೀ ಎನ್ನ
ಅನ್ಯವಲ್ಲವೊ ನಾನು ಗುರುವೆಂಬೆ ನಿನ್ನ
ಇನ್ನಾದರೂ ತೋರೋ ಧೀರ ಮುಕ್ಕಣ್ಣ

ಅಹಂಕಾರಕ್ಕಭಿಮಾನಿಯಾದ ರುದ್ರದೇವ, ಮನಸ್ ತತ್ವದಭಿಮಾನಿಗಳಾದ ಇಂದ್ರ, ಕಾಮರಿಗಿಂತ ಮೇಲಿನವರು. ಅಂತೆಯೇ ಮನಸ್ಸಿನ ನಿಯಾಮಕರೂ ಹೌದು. ಎಲ್ಲೆಂದರಲ್ಲಿ ಹಾರಾಡುವ ಮನಸ್ಸಿಗೆ ಕಡಿವಾಣ ಹಾಕಿ ಬೇಕಾದಲ್ಲಿ ತೊಡಗಿಸುವವರು. ಅದಕ್ಕೆಂದೇ ಪುರಂದರ ದಾಸರು ’ಸತತ ಗಣನಾಥ ಸಿದ್ಧಿಯನೀವ’ ಎಂದು ಶುರುವಾಗುವ ಈ ಕೆಳಗಿನ ಪದದಲ್ಲಿ ಮಹರುದ್ರದೇವರು ಮುಕ್ತಿ ಪಥಕ್ಕೆ ಮನಸ್ಸು ಕೊಡುವಂಥವರು ಎನ್ನುತ್ತಾರೆ.

ಸತತ ಗಣನಾಥ ಸಿದ್ಧಿಯನೀವ ಕಾರ್ಯದಲಿ
ಮತಿ ಪ್ರೇರಿಸುವಳು ಪಾರ್ವತಿ ದೇವಿ ಮು
ಕುತಿ ಪಥಕೆ ಮನವೀವ ಮಹರುದ್ರ ದೇವರು ಹರಿಭ
ಕುತಿದಾಯಕಳು ಭಾರತೀ ದೇವಿ, ಯು
ಕುತಿ ಶಾಸ್ತ್ರಗಳಲ್ಲಿ ವನಜಸಂಭವನರಸಿ
ಸತ್ಕರ್ಮಗಳ ನಡೆಸಿ ಸುಜ್ಞಾನ ಮತಿ ಇತ್ತು
ಗತಿ ಪಾಲಿಸುವ ನಮ್ಮ ಪವಮಾನನು
ಚಿತ್ತದಲಿ ಆನಂದ ಸುಖವನೀವಳು ರಮಾ
ಭಕ್ತ ಜನರೊಡೆಯ ನಮ್ಮ ಪುರಂದರ ವಿಠ್ಠಲನು
ಸತತ ಇವರಲಿ ನಿಂತು ಈ ಕೃತಿಯ ನಡೆಸುವನು

ಅದೇ ರೀತಿ, ಅತ್ತಿತ್ತ ಹರಿಯದೆ, ಏಕತ್ರವಾಗಿ ತೈಲ ಧಾರೆಯಂತೆ ಮನಸ್ಸನ್ನು ಶ್ರೀಹರಿಯಲ್ಲಿ ಕೊಡು ಎಂದು ವಿಜಯದಾಸರು ಅನನ್ಯವಾಗಿ ಪ್ರಾರ್ಥಿಸುತ್ತಾರೆ

ಕೈಲಾಸ ವಾಸ ಗೌರೀಶ ಈಶ
ತೈಲ ಧಾರೆಯಂತೆ ಮನಸು ಕೊಡು ಹರಿಯಲ್ಲಿ

ಅಹೋ ರಾತ್ರಿಯಲಿ ನಾನು ಅನುಚರಾಗ್ರಣಿಯಾಗಿ
ಮಹಿಯೊಳಗೆ ಚರಿಸಿದೆನೊ ಮಹದೇವನೆ
ಅಹಿಭೂಷಣನೆ ಎನ್ನವಗುಣಗಳೆಣಿಸದಲೆ
ವಿಹಿತ ಧರ್ಮದಿ ವಿಷ್ಣು ಭಕುತಿಯನು ಕೊಡು ಶಂಭೋ

ಮನಸು ಕಾರಣವಲ್ಲ ಪಾಪ ಪುಣ್ಯಕ್ಕೆಲ್ಲ
ಅನಲಾಕ್ಷ ನಿನ್ನ ಪ್ರೇರಣೆಯಿಲ್ಲದೆ
ದನುಜ ಗಜ ಮದಹಾರಿ ದಂಡ ಪ್ರಣಮವ ಮಾಳ್ಪೆ
ಮಣಿಸೊ ಈ ಶಿರವ ಸಜ್ಜನ ಚರಣ ಕಮಲದಲಿ ಶಂಭೊ

ಭಾಗೀರಥಿಧರನೆ ಭಯವ ಪರಿಹರಿಸಯ್ಯ
ಲೇಸಾಗಿ ನೀ ಸಲಹೊ ಸಂತತ ಶರ್ವ ದೇವ
ಭಾಗವತ ಜನಪ್ರೀಯ ವಿಜಯವಿಠ್ಠಲನಂಘ್ರಿ
ಜಾಗು ಮಾಡದೆ ಭಜಿಪ ಭಾಗ್ಯವನೆ ಕೊಡು ಶಂಭೊ

ಶಿವನು ಭಕ್ತರ ಮೊರೆಗೆ ಕರಗುವವನು, ಭಕ್ತ ಜನರ ಪರ. ವ್ಯಾಸರಾಯರು ಪಾರ್ವತಿ ಪತಿ ಶಿವನನ್ನು ನುತ ಜನ ಪಾಲನೆಂದು ಹಾಡುತ್ತ ರಮಾರಮಣನಲ್ಲಿ ಅಮಲ ಭಕ್ತಿಯನ್ನು ಕೊಡು ಎಂದು ಬೇಡುತ್ತಾರೆ. ಹಂಪಿಯ ವಿರೂಪಾಕ್ಷನನ್ನೇ ಪ್ರಾರ್ಥಿಸಿದ್ದರೇನೋ ಈ ಪದದಿಂದ.

ನಮಃ ಪಾರ್ವತೀ ಪತಿ ನುತಜನಪರ ನಮೊ ನಮೋ ವಿರೂಪಾಕ್ಷ
ರಮಾರಮಣನಲ್ಲಮಲಭಕುತಿ ಕೊಡು ನಮೋ ವಿಶಾಲಾಕ್ಷ

ನೀಲಕಂಠ ತ್ರಿಶೂಲ ಡಮರು ಹಸ್ತಾಲಂಕೃತರಕ್ಷ
ಫಾಲನೇತ್ರ ಕಪಾಲ ರುಂಡಮಣಿ ಮಾಲಾ ಧೃತ ವಕ್ಷ
ಶೀಲರಮ್ಯ ವಿಶಾಲ ಸುಗುಣ ಸಲ್ಲೀಲ ಸುರಾಧ್ಯಕ್ಷ
ಶ್ರೀಲಕುಮೀಶನ ಓಲೈಸುವ ಭಕ್ತಾವಳಿಗಳ ಪಕ್ಷ

ವಾಸವನುತ ಹರಿದಾಸ ಈಶ ಕೈಲಾಸ ವಾಸ ದೇವ
ದಾಶರಥಿಯ ಔಪಾಸಕ ಸುಜನರ ಪೋಷಿಪ ಪ್ರಭಾವ
ಭಾಸಿಸುತಿಹುದು ಅಶೇಷ ಜೀವರಿಗೆ ಈಶನೆಂಬ ಭಾವ
ಶ್ರೀಶನಲ್ಲಿ ಕೀಲಿಸು ಮನವ ಗಿರಿಜೇಶ ಮಹಾದೇವ

ಮೃತ್ಯುಂಜಯ ನಿನ್ನುತ್ತಮ ಪದಯುಗ ಭೃತ್ಯನೋ ಸರ್ವತ್ರ
ಹತ್ತಿರ ಕರೆದು ಅಪತ್ಯನಂತೆ ಪೊರೆಯುತ್ತಿರೋ ತ್ರಿನೇತ್ರ
ತೆತ್ತಿಗನಂತೆ ಕಾಯುತ್ತಿಹೆ ಬಾಣನ ಸತ್ಯದಿ ಸುಚರಿತ್ರ
ಕರ್ತೃ ಉಡುಪಿ ಸರ್ವೋತ್ತಮ ಕೃಷ್ಣನ ಪೌತ್ರಕೃಪಾ ಪಾತ್ರ

ಜಗನ್ನಾಥದಾಸರ ಹರಿಕಥಾಮೃತಸಾರದ ಕಡೆಯ ಸಂಧಿಯ ಪದಗಳಿಂದ ಮಂಗಳಕರನಾದ ಶಿವನನ್ನು ಸ್ಮರಿಸುತ್ತ ಮುಗಿಸುತ್ತೇನೆ. ಎಲ್ಲರಿಗೂ ಶಿವರಾತ್ರಿಯ ಶುಭಾಶಯಗಳು.

ನಂದಿವಾಹನ ನಳಿನಿಧರ ಮೌ
ಳೇಂದು ಶೇಖರ ಶಿವ ತ್ರಿಯಂಬಕ
ಅಂಧಕಾಸುರ ಮಥನ ಗಜಶಾರ್ದೂಲ ಚರ್ಮಧರ
ಮಂದಜಾಸನತನಯ ತ್ರಿಜಗ
ದ್ವಂದ್ಯ ಶುದ್ಧಸ್ಫಟಿಕ ಸನ್ನಿಭ
ವಂದಿಸುವೆನನವರತ ಪಾಲಿಸೋ ಪಾರ್ವತೀರಮಣ

ಫಣಿಫಣಾಂಚಿತಮುಕುಟರಂಜಿತ
ಕ್ವಣಿತಡಮರುತ್ರಿಶೂಲಶಿಖಿ ದಿನ
ಮಣಿ ನಿಶಾಕರ ನೇತ್ರ ಪರಮ ಪವಿತ್ರ ಸುಚರಿತ್ರ
ಪ್ರಣತ ಕಾಮದ ಪ್ರಮಥ ಸುರಮುನಿ
ಗಣ ಸುಪೂಜಿತ ಚರಣಯುಗ ರಾ
ವಣ ಮದವಿಭಂಜನ ಸತತ ಮಾಂಪಾಹಿ ಮಹದೇವ

ದಕ್ಷಯಜ್ಞವಿಭಂಜನನೆ ವಿರು
ಪಾಕ್ಷ ವೈರಾಗ್ಯಾಧಿಪತಿ ಸಂ
ರಕ್ಷಿಸೆಮ್ಮನು ಸರ್ವಕಾಲದಿ ಸನ್ಮುದವನಿತ್ತು
ಯಕ್ಷಪತಿಸಖ ಯಜಿಪರಿಗೆ ಸುರ
ವೃಕ್ಷ ವೃಕದನುಜಾರಿ ಲೋಕಾ
ಧ್ಯಕ್ಷ ಶುಕ ದೂರ್ವಾಸ ಜೈಗೀಷವ್ಯ ಸಂತೈಸು