ತ್ರಿಕೂಟದ ಗಜೇಂದ್ರ, ಅವನ ಬಿಡುಗಡೆ

(ಇಂಟರ್ನೆಟ್ಟಿನಲ್ಲಿ ಇನ್ನೊಂದೆಡೆ ಹಿಂದೂಗಳ ಇನ್ನೊಂದು ಇತಿಹಾಸ ಎಂಬ ಪುಸ್ತಕದ ಬಗ್ಗೆ ವೆಂಡಿ ಡೊನಿಗರ್ ಸಂದರ್ಶನವನ್ನ ಓದಿ ನಗಬೇಕೋ ವ್ಯಥೆ ಪಡಬೇಕೋ ತಿಳಿಯಲಿಲ್ಲ. ರಾಮ, ಸೀತೆಯನ್ನ ಯಾಕೆ ಬಿಟ್ಟ ಎನ್ನುವದಕ್ಕೆ ಅವಳು ಊಹಿಸುವ ಕಾರಣ ಅತ್ಯದ್ಭುತ, ಗೀತೆಯ ಸಂದೇಶವನ್ನ ಅವಳು ಗ್ರಹಿಸಿದ ಪರಿಯೂ ಅಷ್ಟೇ, ಅದ್ಭುತ! ಬೇವು ಕುಡಿದಂತೆ ನಾಲಿಗೆಯೆಲ್ಲ ಕಹಿ ಕಹಿ. ಇತ್ತೀಚೆಗೆ ಕೇಳಿದ ಬನ್ನಂಜೆ ಅವರ ಉಪನ್ಯಾಸದ ಬಗ್ಗೆ ಒಂದೆರಡು ಮಾತು ಬರೆದು ಸಿಹಿ ಮಾಡಿಕೊಳ್ಳುವ ಪ್ರಯತ್ನ)

ಬನ್ನಂಜೆ ಗೋವಿಂದಾಚಾರ್ಯರ ಪ್ರವಚನಗಳನ್ನ ಕೇಳೋದು ನನಗಿಷ್ಟ. ಭಗವದ್ಗೀತೆಯ ಮೊದಲ ಅಧ್ಯಾಯದ ಮೊದಲ ೧೮ ಶ್ಲೋಕಗಳ ಸ್ವಾರಸ್ಯವನ್ನ ಅವರ ಉಪನ್ಯಾಸದಲ್ಲಿ ಕೇಳಿಯೇ ಸವಿಯಬೇಕು. ೧೮ ಹೇಗೆ ಜಯ, ಮಹಾಭಾರತ ಜಯದ ಕತೆ ಹೇಗೆ, ಆ ೧೮ ಶ್ಲೋಕಗಳಲ್ಲಿ ಹೇಗೆ “ಈ ಪಾಂಡವರ ಪಾಳೆಯದ ೧೧ ಯೋಧರನ್ನೂ ಹಾಗೂ ಆ ತನ್ನ ಪಾಳೆಯದಲ್ಲಿ ತನಗಾಗಿ ಸಾಯ ಬಂದಿರುವ ೭ ಯೋಧರನ್ನೂ’ ದುರ್ಯೋಧನ ಹೆಸರಿಸುತ್ತಾನೆ, ಅವೇ ಹೆಸರುಗಳನ್ನೇ ಯಾಕೆ ತೆಗೆದುಕೋಳ್ಳುತ್ತಾನೆ, ಎಲ್ಲದರ ವಿವರಣೆ ಅಧ್ಬುತ. ವಿವರಣೆಯ ಜೊತೆ ಜೊತೆಗೆ ನಮ್ಮ ಸಂಸ್ಕೃತಿಯ, ನಮ್ಮ ನೆಲದ ಕೃತಿಗಳನ್ನ ಇನ್ನೊಬ್ಬರು ಮಾಡಿದ ಅನುವಾದಗಳ ಮೂಲಕ ಓದುವ ಪರಿಸ್ಥಿತಿ ಬಂದೊದಗಿದ್ದರ ಬಗೆಗಿನ ಚಾಟಿ ಏಟಿನ ಮಾತುಗಳು ಸ್ವಾರಸ್ಯಕರವಾಗಿರುತ್ತವೆ :).

ನಿನ್ನೆ ಹಿರಿಯರೊಬ್ಬರು ಬನ್ನಂಜೆಯವರ ’ಗಜೇಂದ್ರ ಮೋಕ್ಷ ಚಿಂತನೆ’ ಉಪನ್ಯಾಸ ಚನ್ನಾಗಿದೆ ಅಂತ ಹೇಳಿದರು. ಬನ್ನಂಜೆ ಅವರ ಅಂತರಜಾಲದ ಮನೆ ಆನಂದಮಾಲದಲ್ಲಿ ಆ ಉಪನ್ಯಾಸವಿದೆ, ಕೇಳಿದೆ. ಸ್ವಾರಸ್ಯಕರವಾಗಿದೆ. ಗಜೇಂದ್ರ ಮೋಕ್ಷ ಬರೀ ಆನೆಯೊಂದು ಮೊಸಳೆಯ ಕೈಗೆ ಸಿಕ್ಕು ಒದ್ದಾಡಿದ ಕತೆ, ತನ್ನ ಶಕ್ತಿ ಇದ್ದಷ್ಟು ತಾನೆ ಬಿಡಿಸಿಕೊಳ್ಳಲು ಯತ್ನಿಸಿ ಸೋತು ಕೊನೆಗೆ ಅಲ್ಲೇ ಅದೇ ಕೊಳದಲ್ಲೇ ಬೆಳೆದ ಕಮಲವೊಂದನ್ನು ಸೊಂಡಿಲಿನಲ್ಲಿ ಎತ್ತಿ ಹಿಡಿದು ಶ್ರೀಹರಿಗೆ ಅರ್ಪಿಸಿ ಅನನ್ಯವಾಗಿ ಅವನನ್ನ ಪ್ರಾರ್ಥಿಸಿದಾಗ ಗರುಡವಾಹನನಾಗಿ ಬಂದ ವಿಷ್ಣು ಮೊಸಳೆಯನ್ನ ಕೊಂದು ಗಜವನ್ನ ಉಳಿಸಿದ ಕತೆ ಪರಿಚಿತ. ಎಲ್ಲ ಪುರಾಣ ಕತೆಗಳಂತೆ ಇದೂ ಒಂದು ರಮ್ಯ ಕತೆ ಅಷ್ಟೇ ಅನಿಸುವಂಥದ್ದೇ. ಆನೆ ಮಾತನಾಡುವದು, ಸಾವಿರ ವರ್ಷಗಳ ಕಾಲ ಮೊಸಳೆಯೊಂದಿಗೆ ಹೋರಾಡುವದು, ಕೊನೆಗೆ ವಿಷ್ಣು ಗರುಡನ ಮೇಲೆ ಕುಳಿತು ಬರೋದು, ಬಂದು ಚಕ್ರವನ್ನ ಬಿಟ್ಟು ಮೊಸಳೆಯನ್ನ ಕೊಲ್ಲೋದು, ಸತ್ತ ಮೊಸಳೆಯ ಜನ್ಮ ಕಳೆದ ಹುಹು ಗಂಧರ್ವ ಅಲ್ಲಿ ಪ್ರತ್ಯಕ್ಷನಾಗುವದು, ಎಲ್ಲ ಕಲ್ಪನಾ ಲೋಕದ ಕತೆ ಅಲ್ಲವೆ? ಬನ್ನಂಜೆ ಅವರು ಈ ಉಪನ್ಯಾಸದಲ್ಲಿ ಈ ಕತೆಯ ಹಿಂದಿನ ಅಧ್ಯಾತ್ಮವನ್ನ ಸೊಗಸಾಗಿ ವಿವರಿಸುತ್ತಾರೆ.

ಗಜ ಎನ್ನುವದಕ್ಕೆ ಆನೆ ಅನ್ನುವದು ಒಂದು ಅರ್ಥವಾದರೆ  ’ಹುಟ್ಟುತ್ತ ಸಾಯುತ್ತ ಹೋಗವದು’ ಅಥವಾ ಜೀವ ಅನ್ನುವದೂ ಒಂದು ಅರ್ಥವಂತೆ. ಆ ಗಜೇಂದ್ರ ಇದ್ದ ಬೆಟ್ಟ ತ್ರಿಕೂಟ ಎನ್ನುವದು ಪ್ರತೀ ಜೀವನ ಅಜ್ಞಾನ, ಕಾಮ ಮತ್ತು ಕರ್ಮಗಳನ್ನ ಸೂಚಿಸಿದರೆ, ಆ ಬೆಟ್ಟದ ಕಾಡು, ಕಾಡಿನ ಗಿಡಗಂಟೆಗಳು, ಮುಳ್ಳುಗಳು, ಪಕ್ಷಿಗಳ ಸುಮಧುರ ಹಾಡು ಎಲ್ಲವೂ ಹೇಳುವದು ಜೀವನ ಅನುಭವಕ್ಕೆ ಬರುವ ಸುಖ ದುಃಖಗಳು. ಒಟ್ಟಿನಲ್ಲಿ ತ್ರಿಕೂಟ ಬೆಟ್ಟದ ಗಜ ಎಂದರೆ ಜ್ಞಾನ, ಇಚ್ಛೆ, ಕ್ರಿಯೆಗಳುಳ್ಳ ಜೀವ. ಆ ಗಜೇಂದ್ರ ತನ್ನ ಜೊತೆಗಿನ ಹೆಣ್ಣಾನೆಗಳ ಕೂಡಿ ಅಲ್ಲಿ ಮೆರೆದಿದ್ದ, ಅಲ್ಲಿಯ ಎಲ್ಲವೂ ತನ್ನದೇ ಎನ್ನುವಂತೆ. ಅಲ್ಲಿಯ ಸರೋವರದ ನೀರಿನಲ್ಲಿ ತನ್ನ ಜೊತೆಗಾತಿಯರೊಡನೆ ನೀರಾಟ ಆಡಿದ್ದ. ಆನಂದದಿಂದ ಇದ್ದ ಅನ್ನುವಾಗ ಅವನ ಕಾಲು ಹಿಡಿದು ನೀರಿನ ಒಳಗೆಳೆಯತೊಡಗಿದ ಮೊಸಳೆ ನಾನು ನನ್ನದು ಎನ್ನುವ ಮಮಕಾರವನ್ನ. ಪ್ರಾಣ ಹೋಗುವಾಗ ಮಮಕಾರ ಹಿಡಿದೆಳೆಯುತ್ತಿದೆ. ಅದು ಬಿಡುವದಿಲ್ಲ ಇವನೂ ಬಿಡುವದಿಲ್ಲ. ಇವನ ಜೊತೆಗಿನ ಆನೆಗಳೂ ಸಹಾಯ ಮಾಡಲಾರವು. ಜಗ್ಗಾಟ ನಡೆದಿದೆ, ಸಾವಿರ ವರ್ಷ. ಮತ್ತೆ ಮತ್ತೆ ಹುಟ್ಟಿ ಬಂದರೂ ಮಮಕಾರಕ್ಕೆ ಮತ್ತೆ ಮತ್ತೆ ಸಿಕ್ಕಿ ಬೀಳುವದನ್ನ ಈ ಸಾವಿರ ವರ್ಷದ ಹೋರಾಟ ಸೂಚಿಸುವದಂತೆ. ಕಡೆಗೆ ಗಜರಾಜ ಸೋತ. ತನ್ನ ಮೇಲೆ, ತನ್ನ ಸಹಚರರ ಮೇಲೆ ಇದ್ದ ನಂಬಿಕೆಯೆಲ್ಲವೂ ಹೋಯಿತು. ದೇವನೊಬ್ಬನೇ ತನ್ನನ್ನು ಬಿಡಿಸಬಲ್ಲ ಎನ್ನುವದು ಮನವರಿಕೆ ಆಯಿತು. ಆ ದೇವನ ಪ್ರಾರ್ಥನೆ ಮಾಡತೊಡಗಿದ. ಹಿಂದಿನ ಜನ್ಮದಲ್ಲಿನ ಸಂಸ್ಕಾರ ಬಲದಿಂದಲೇ ಅವನಿಗೆ ಪ್ರಾರ್ಥನೆಯೆಡೆಗೆ ಮನಸ್ಸು ಹೊರಳಿತು. ಹಾಗಾದರೆ ಗಜೇಂದ್ರ ಭಾಗವತ ಶ್ಲೋಕದಲ್ಲಿ ಬರೆದಂತೆ ಸಂಸ್ಕೃತದಲ್ಲೇ ಕರೆದನೇ ಎನ್ನುವದು ಪೂರ್ವಪಕ್ಷ. ಆನೆ ಅನನ್ಯವಾಗಿ ಕರೆದದ್ದು ತಿಳಿಯದೇ ಇದ್ದರೆ ಅವನು ದೇವರಾದರೂ ಹೇಗಾದಾನು? ಆನೆ ಪ್ರಾರ್ಥಿಸಿತು, ದೇವ ಬಂದ; ಭಾಗವತದ ಕತೆ ಮನುಷ್ಯರ ತಿಳಿವಿಗಾಗಿ ಹೇಳಿದ್ದು ಎನ್ನುವದು ಸಮಾಧಾನ (ನನಗೆ ತಿಳಿದಂತೆ). ಗಜವನ್ನ ಉಳಿಸಲಿಕ್ಕೆ ಅಜ ಬಂದ. ಹುಟ್ಟು ಸಾವುಗಳುಳ್ಳವನ ಬಿಡುಗಡೆಗೆ ಹುಟ್ಟು ಸಾವಿಲ್ಲದವನ ಆಗಮನ. ಅರಿ(ಶತ್ರು)ಯ ಕೊಲ್ಲಲು ವಿಷ್ಣುವಿನ ಅರಿ(ಚಕ್ರ) ಸಿದ್ಧ. ನಕ್ರ ವಧೆಗಾಗಿ ಚಕ್ರ ಪ್ರಯೋಗ. ಚಕ್ರ ಪ್ರಹಾರಕ್ಕೆ ಸಿಕ್ಕ ಮೊಸಳೆಗೆ ಆದದ್ದು ಪ್ರಾಣಾಂತಿಕ ನೋವೋ ಅಥವಾ ಮೊಸಳೆಯಾಗಿದ್ದ ಗಂಧರ್ವನಿಗೆ ಬಿಡುಗಡೆಯ ಸಂತೋಷವೋ? ಗಜೇಂದ್ರನನ್ನ ಆ ಮೊಸಳೆ ಹಿಡಿದುಕೊಂಡದ್ದು ತನ್ನ ಆಹಾರಕ್ಕಾಗೋ ಅಥವಾ ಶಾಪ ವಿಮೋಚನೆಗಾಗೋ? ಕರೆದವನು ಗಜೇಂದ್ರ ಮೊದಲು ವಿಮೋಚನೆಯಾದದ್ದು ಮೊಸಳೆಗೆ. ದೇವತೆಗಳು ಹೂಮಳೆಗರೆದರು. ಗಜೇಂದ್ರನಿಗೂ ಮುಕ್ತಿಯಾಯಿತು, ಭಗವಂತನ ಸಾರೂಪ್ಯ ಸಿಕ್ಕಿತು. ಶಾಪಗ್ರಸ್ತ ಜೀವರಿಬ್ಬರ ಶಾಪ ವಿಮೋಚನೆ ಆಯಿತು. ಛಂದೋಮಯೇನ ಗರುಡೇನ… ವೇದ ಪ್ರತಿಪಾದ್ಯ ವಿಷ್ಣು (ತಾಪಸ ಮನ್ವಂತರದ ಈ ಕತೆಯಲ್ಲಿ ಬಂದದ್ದು ತಾಪಸ ರೂಪದಲ್ಲೇ) ಬಂದು ಇಬ್ಬರ ಬಿಡುಗಡೆ ಮಾಡಿದ. ಹಾಗಾದರೆ ಗಜೇಂದ್ರ ವೇದ ಮಂತ್ರಗಳಿಂದಲೇ ಪ್ರಾರ್ಥಿಸಿದನೇ?

ಒಟ್ಟಿನಲ್ಲಿ ಗಜೇಂದ್ರನ ಕತೆ ಪ್ರತಿಯೊಂದು ಜೀವದ ಕತೆ. ಪ್ರಾಣ ಹೋಗುವಾದ ಬೇರಾರೂ ಬರುವದಿಲ್ಲ, ಬಂದರೆ ಭಗವಂತನೊಬ್ಬ ಬರಬೇಕು. ಪೂರ್ವಜನ್ಮದ ಸಂಸ್ಕಾರದಿಂದ ಪ್ರಾಣ ಹೋಗುವಾಗ ಭಗವಂತನ ಸ್ಮರಣೆ ಬರಬೇಕು. ಗಜೇಂದ್ರ ಮೋಕ್ಷದ ಸಂದೇಶಗಳೆಂದರೆ, ದೇವರು ಒಬ್ಬ ಕೈಬಿಡುವದಿಲ್ಲ. ಬೇರೆಲ್ಲವೂ/ಬೇರೆಲ್ಲರೂ ಕೈಬಿಟ್ಟಾಗ, ಸಹಾಯಕ್ಕೆ ಒದಗದೇ ಇದ್ದಾಗ, ಅನನ್ಯ ಶರಣಾಗತಿಯಿದ್ದರೆ ದೇವ ಕೈ ಹಿಡಿಯುತ್ತಾನೆ. ಇನ್ನೊಂದು ಸಂದೇಶವೆಂದರೆ ದೇವರು ನಾವಿದ್ದಲ್ಲಿಗೆ ಬರಬೇಕು. ನಮ್ಮ ಮೇಲಿನ ಕರುಣೆಯಿಂದ, ನಮ್ಮ ಉಪಾಸನೆಗೆ ಮೆಚ್ಚಿ ನಾವಿದ್ದಲ್ಲಿಗೆ ಬರಬೇಕು, ಬರುತ್ತಾನೆ.

ಅಂದಹಾಗೆ ಗಜೇಂದ್ರ ಮೋಕ್ಷ ತಮಿಳುನಾಡಿನ ಕತೆಯಂತೆ. ಪಾಂಡ್ಯ ದೇಶದ ಇಂದ್ರದ್ಯುಮ್ನ ಎನ್ನುವ ರಾಜನೇ ಶಾಪಗ್ರಸ್ತನಾಗಿ ಗಜೇಂದ್ರನಾದನಂತೆ. ಆತನೊಬ್ಬ ಶ್ರೇಷ್ಠ ದ್ರಮಿಳ (ತಮಿಳ) ಎನ್ನುತ್ತದೆ ಭಾಗವತದ ಗಜೇಂದ್ರ ಮೋಕ್ಷದ ಉಪಸಂಹಾರ. ಹುಹು ಎಂಬ ಶಾಪಗ್ರಸ್ತ ಗಂಧರ್ವನೇ ಮೊಸಳೆಯಾಗಿರುತ್ತಾನೆ.

ಬನ್ನಂಜೆ ಅವರ ಉಪನ್ಯಾಸದಲ್ಲಿ ಕೇಳಿದ ಗಜೇಂದ್ರ ಮೋಕ್ಷದ ಕತೆಯ ವಿಷಯ ನನಗೆ ತಿಳಿದಂತೆ ಬರೆದಿರುವೆ. ಅಜ-ಗಜ ಶಬ್ದಗಳಿಗೆ ಕೇಳಿದ ಹೊಸ ಅರ್ಥ ಅಜಗಜಾಂತರ ಶಬ್ದಕ್ಕೂ ಹೊಸ ಅರ್ಥ ಕೊಟ್ಟಿದೆ.

ಪುರಾಣ ಕತೆಗಳನ್ನ ಕೇಳುವಾಗ/ಓದುವಾಗ ಪೂರ್ವಪಕ್ಷಗಳೂ, ಪ್ರಶ್ನೆಗಳೂ, ಅಪನಂಬಿಕೆಗಳು ಹುಟ್ಟುವದು ಸ್ವಾಭಾವಿಕ, ಅವು ಹುಟ್ಟದೇ ಇದ್ದರೆ ಆಶ್ಚರ್ಯ! ಮಂಥನ ನಡೆಯಬೇಕು ಮನಸ್ಸಿನಲ್ಲಿ. ಸಮುದ್ರ ಮಥನದಂತೆ ಮನಸ್ಸಿನ ಮಥನದಲ್ಲೂ ಮೊದಲು ವಿಷ ಹುಟ್ಟುವ ಸಂಭವವೇ ಹೆಚ್ಚು. ಗುರುಗಳ, ಆ ದೇವನ ಅನುಗ್ರಹದಿಂದ ಆ ಕಾರ್ಕೂಟಕವನ್ನ ದಾಟಿದರೆ ಮುಂದೆ ಅಮೃತದ ಹಾದಿ. ಪುರಾಣ ಕತೆಗಳನ್ನ ಮಥಿಸುವದೇ ಆದರೆ ಅಮೃತಕ್ಕಾಗಿ ಮಥಿಸಬೇಕು. ನಮ್ಮ ಪೂರ್ವಗ್ರಹಗಳ, ನಮ್ಮ ವಾಸನೆಗಳ ಚೌಕಟ್ಟನ್ನ ಮೀರಿ ಮಥಿಸಬೇಕು, ಅಮೃತ ಸಿಗಬಹುದು.

Advertisements