ಒಂದೆರಡು ವರ್ಷಗಳ ಹಿಂದಿನ ಮಾತು. ಹಿರಿಯರೊಬ್ಬರು ಮನೆ ಕಟ್ಟಿಸುತ್ತಾ ಇದ್ದರು. ಫೋನಿನಲ್ಲಿ ಅವರೊಡನೆ ಮಾತನಾಡುವಾಗ ಸಹಜವಾಗಿ ಕೇಳಿದೆ, ‘ಎಲ್ಲಿಯ ವರೆಗೆ ಬಂತು ಸರ್ ಮನೆ?’ ಅಂತ. ಅದಕ್ಕೆ ಅವರು ‘ಕುತ್ತಿಗೆ ತನಕ ಬಂದಿದೆ’ ಎಂದು ನಕ್ಕರು. ಮತ್ತೆ ಮುಂದೆ ಅವರು ‘ಅಂದರೆ ಮನೆಗೆ ಬಜೆಟ್ ದಾಟಿ ಖರ್ಚಾಗಿದೆ, ಇನ್ನೂ ಮುಗಿದಿಲ್ಲ. ಇನ್ನೊಂದರ್ಥ..’ ಅಂದ ಕೂಡಲೆ ನಾನು ಮಧ್ಯ ಬಾಯಿ ಹಾಕಿ ಹೇಳಿದೆ, ‘ಹೇಳಿ ನಿಮ್ಮ ಎರಡನೇ ಅರ್ಥ ಹೆಚ್ಚು ಸ್ವಾರಸ್ಯಕರವಾಗಿರುತ್ತದೆ!’ ಅಂತ. ಮತ್ತೆ ಮಾತು ಮುಂದುವರಿಸುತ್ತ ಅವರು ಹೇಳಿದ್ದು, ‘ಮೂರ್ತಿ ಕೆತ್ತುವವರು ಹೇಗೆ ಕೆಲಸ ಮಾಡುತ್ತಾರೆ ಗೊತ್ತಾ? ಮೊದಲು ದೇಹ, ಕೈ ಕಾಲುಗಳನ್ನೆಲ್ಲ ಕೆತ್ತಿ ಮುಗಿಸಿದ ಮೇಲೆ ಮುಖ ಕೆತ್ತುವದು. ಯಾಕೆ ಅಂದರೆ ಮುಖದ ಕೆಲಸ ಸೂಕ್ಷ್ಮವಾದದ್ದು ಮತ್ತು ಅದೇ ಕಾರಣಕ್ಕೆ ಬಹಳ ಸಮಯ ಹಿಡಿಯುವಂಥದ್ದು . ಮನೆಗೆ ಈಗ ಮನೆಯ ಫಾರ್ಮ್ ಬಂದಿದೆ ಆದರೆ ಸೂಕ್ಷ್ಮ ಕೆಲಸಗಳು, ಹೆಚ್ಚಿನ ಸಮಯ ಬೇಡುವ ಕೆಲಸಗಳು ಬೇಕಾದಷ್ಟಿವೆ. ಆ ಅರ್ಥದಲ್ಲಿ ಮನೆ ಕಟ್ಟುವದು ಕುತ್ತಿಗೆ ವರೆಗೆ ಬಂದಿದೆ.’ ಎಂಥ ಸುಂದರ ವಿಚಾರ ಅಲ್ಲವೆ? ‘ಕುತ್ತಿಗೆ ವರೆಗೆ ಬಂದಿದೆ’ ಎನ್ನುವದರ ಅರ್ಥ ಪರ್ಮನೆಂಟಾಗಿ ಬದಲಾಗಿ ಹೋಗಿದೆ ನನ್ನ ಡಿಕ್ಷನರಿಯಲ್ಲಿ!
ಅದೇ ಹಿರಿಯರಿಗೆ ಯಾರೋ ಒಬ್ಬರು ಕೇಳಿದರಂತೆ, ‘ಸಾರ್ ವೈರಾಗ್ಯ ಎಂದರೇನು? ಎಲ್ಲವನ್ನೂ ಬಿಟ್ಟು ಬಿಡುವದಲ್ಲವೆ? ಎಲ್ಲವನ್ನೂ ಬಿಟ್ಟ ಮೇಲೆ ದೇವರನ್ನಾದರೂ ಯಾಕೆ ಹಿಡೀಬೇಕು? ಎಲ್ಲ ಬಿಟ್ಟು ದೇವರನ್ನ ಮಾತ್ರ ಹಿಡಿ ಎನ್ನುವದು ವೈರಾಗ್ಯ ಎಂದು ಹೇಗೆ?’ ಆಗ ಇವರು ಉತ್ತರಿಸಿದ್ದು , ‘ವೈರಾಗ್ಯ ವಿರಾಗದಿಂದ ಬಂದಿದೆ; ವಿರಾಗದ ಸ್ಥಿತಿ ಎಂದರೆ ದೇವರಲ್ಲಿ ವಿಶೇಷ ರಾಗ ಬೆಳೆಸಿಕೊಳ್ಳುವದು ಮತ್ತು ಉಳಿದೆಲ್ಲ ರಾಗಗಳಿಂದ ವಿಮುಖರಾಗುವದು ಅಷ್ಟೇ! ಎಲ್ಲವನ್ನು ಬಿಟ್ಟು ಬಿಡುವದಷ್ಟೇ ಅಲ್ಲ, ದೇವರನ್ನ ಹಿಡಿದುಕೊಂಡು ಉಳಿದದ್ದೆಲ್ಲವನ್ನೂ ಬಿಟ್ಟು ಬಿಡುವದು’
ಹೊಸ ಸಂವತ್ಸರ ‘ವಿಕೃತಿ’ ಬಂದಿದೆ. ಕೃತಿ ವಿಶೇಷದ್ದಾಗಿರಲಿ, ವಿಶಿಷ್ಟದ್ದಾಗಿರಲಿ. ಸಂವತ್ಸರ ಸಂತೋಷಕರವಾಗಿರಲಿ ಎಲ್ಲರಿಗೂ.
(ಚಿತ್ರ: ನನ್ನಮ್ಮ ದಿನವೂ ಹಾಕುವ ರಂಗೋಲಿ. ಇತ್ತೀಚೆಗೆ ಬೆಂಗಳೂರಿಗೆ ಹೋದಾಗ ಫೋಟೊದಲ್ಲಿ ಹಿಡಿದು ತಂದದ್ದು)
(ಈ ಮಾತುಗಳನ್ನ ಹೇಳಿದ ಹಿರಿಯರು ಈ ನನ್ನ ಪೋಸ್ಟ್ ಓದಿ, ವೈರಾಗ್ಯದ ಬಗ್ಗೆ ನಾನು ಮೊದಲು ಬರೆದದ್ದನ್ನ ಅವರು ಬಿಡಿಸಿ ಹೇಳಿದಂತೆ ಇನ್ನಷ್ಟು ಬಿಡಿಸಿ ಬರೆಯಲು ಹೇಳಿದರು. ಹೀಗಾಗಿ ಅದನ್ನು ತಿದ್ದಿ ಬರೆದಿದ್ದೇನೆ)