ಹೆಸರಲ್ಲೇನಿದೆ?

“ಮಾಧ್ವರೊಳಗೆ ಗಂಡು ಮಗುಗೆ ಹೆಸರಿಡಬೇಕು ಅಂದರೆ ಇಲ್ಲಾ ವಿಷ್ಣುಸಹಸ್ರನಾಮದಿಂದ ಒಂದು ಹೆಸರು ಇಡ್ತೀರಾ, ಇಲ್ಲಾ ಅಂದರೆ ಹನುಮಂತನ ಹೆಸರು ಇಡ್ತೀರಾ.. ನನಗಂತೂ ಯಾವತ್ತು ವಿಷ್ಣುಸಹಸ್ರನಾಮದ ‘ಭೋತಭವ್ಯಭವತ್ಪ್ರಭುಃ’ ಅನ್ನೋ ಹೆಸರು ಬಹಳ ಇಷ್ಟ ಆಗಿತ್ತು..” ಅಂತ ನನ್ನ ಗೆಳೆಯ ಹೇಳ್ತಿದ್ದರೆ, ಹೌದಲ್ಲವಾ ಹಾಗೇ ‘ಭಾರಭೃತ್ ಅಂತ ಹೆಸರು ಇಟ್ಟರೆ ಹ್ಯಾಗಿರತ್ತೆ?’ ಅಂತ ನಾನೂ ಕೇಳಿದ್ದೆ.

ಈ ಮಾತುಕತೆ ಆಗಿದ್ದು ನನ್ನ ಮಗ ಹುಟ್ಟಲು ಇನ್ನೂ ಮೂರೋ ನಾಲ್ಕೋ ತಿಂಗಳು ಉಳಿದಿದ್ದಾಗ ಒಂದು ದಿನ ಊಟಕ್ಕೆ ಭೆಟ್ಟಿಯಾಗಿದ್ದ ಮಂಜು ಮತ್ತು ನನ್ನ ನಡುವೆ.  ಮಂಜು ಹೇಳಿದ್ದು ನಿಜವೇ. ನಮ್ಮ ಮನೆಯಲ್ಲೇ ನಮ್ಮ ದೊಡ್ಡಪ್ಪ, ಅಪ್ಪ ಹಾಗೂ ಚಿಕ್ಕಪ್ಪಂದಿರು ತಮ್ಮ ಚೊಚ್ಚಲು ಗಂಡು ಮಕ್ಕಳಿಗೆ ಇಟ್ಟಿರುವದು ಹನುಮಪ್ಪನ ಹೆಸರುಗಳನ್ನೇ. ನಮ್ಮಪ್ಪನ ದೊಡ್ಡಪ್ಪನ ಮಗ ಕೂಡ ತಮ್ಮ ಹಿರಿಯ ಮಗನಿಗೆ ಇಟ್ಟದ್ದು ಹನುಮಪ್ಪನ  ಹೆಸರನ್ನೇ. ಹಾಗೆ ನೋಡಿದ್ರೆ ನಮ್ಮ ತಾತ ಮತ್ತು ಅವರ ಅಣ್ಣ ತಮ್ಮ ಮೊದಲ ಗಂಡು ಮಕ್ಕಳಿಗೆ ಹನುಮಪ್ಪನ ಹೆಸರಿಟ್ಟಿಲ್ಲ. ಮಂತ್ರಾಲಯದ ರಾಯರ ಸೇವೆ ಮಾಡಿದ್ದ ತಾತ ರಾಯರ ಹೆಸರನ್ನೇ ತಮ್ಮ ಮೊದಲ ಮಗನಿಗೆ ಇಟ್ಟರೆ ಅವರಣ್ಣ ತಮ್ಮ ಅಪ್ಪನ ಹೆಸರನ್ನು ಇಟ್ಟಿದ್ದಾರೆ.

What’s in a name? that which we call a rose
By any other name would smell as sweet;
– William Shakespeare

ಅಂತ ಶೇಕ್ಸಪಿಯರ್ ಹೇಳಿದಂತೆ ಹೆಸರಿನಲ್ಲೇನಿದೆ ಆಲ್ವಾ? ಮನುಷ್ಯರಿಗೆ ಹೆಸರು ಏನಿದ್ದರೆ ಏನು? ಏನೋ ಒಂದು ಹೆಸರು. ಮೊದಲೆಲ್ಲ ಕಲ್ಲಪ್ಪ, ಕಲ್ಲವ್ವ, ಗುಂಡಪ್ಪ, ಗುಂಡವ್ವ, ಅಡಿವೆಪ್ಪ, ಅಡಿವೆಮ್ಮ ಅಂತೆಲ್ಲ ಹೆಸರಿಡತಿದ್ದರು. ಸಂಸ್ಕೃತ ನಿಘಂಟು ನೋಡಿ, ಮನೇಕಾ ಗಾಂಧಿಯ ಇಂಡಿಯನ್ ನೇಮ್ಸ್ ಪುಸ್ತಕ ನೋಡಿ, ಇಂಟರ್ನೆಟ್ಟೆಲ್ಲ ಜಾಲಾಡಿಸಿ ಹೆಸರಿಡೋ ಹುಕಿ ಈಗ. ಯಾವುದೇ ಮೂಲದಿಂದ ಹೊಸತೊಂದು ಹೆಸರು ಸಿಕ್ಕರೆ ತುಂಬ ಖುಷಿ! ನನ್ನ ಭಾವ ಮೈದನ ಅವನ ಮಗನಿಗೆ ಹೆಸರಿಡೋ ಕಾಲಕ್ಕೆ ‘ದೃಷ್ಟದ್ಯುಮ್ನನ ಶಂಖದ ಹೆಸರು ಬಹಳ ಚೆನ್ನಾಗಿದೆ ಅಂತೆ, ಆದರೆ ಎಲ್ಲೂ ಸಿಗ್ತಾ ಇಲ್ಲಾ ಆ ಹೆಸರು’ ಅಂತ ಬಹಳಷ್ಟು ಹುಡುಕಾಡಿದ್ದ.

ನಾವು ಮನುಷ್ಯರಿಗೆ ಹೆಸರಿಡಲಿಕ್ಕೆ, ದೇವರ ಹೆಸರು ಇರಲಿ ಅಂತ ಅವುಗಳನ್ನ ಹುಡುಕಿದರೆ, ದೇವರಿಗೆ ಯಾರು ಹೆಸರಿಟ್ಟವರು? ಅತಗ ಅಪ್ಪ ಇಲ್ಲ ಅಮ್ಮ ಇಲ್ಲ. ದಾಸರು ‘ನಿನ್ನಂಥ ಸ್ವಾಮಿ ಎನಗುಂಟು ನಿನಗಿಲ್ಲ, ನಿನ್ನಂಥ ತಂದೆ ಎನಗುಂಟು ನಿನಗಿಲ್ಲ’ ಅಂತ ಹೇಳ್ತಾ ‘ನಿನ್ನರಸಿ ಲಕ್ಷ್ಮಿ ಎನ್ನ ತಾಯಿ ನಿನ್ನ ತಾಯಿಯ ತೋರೋ’ ಅಂತ ಹಾಡೇ ಮಾಡಿದ್ದಾರಲ್ಲವೆ? ಅಂಥಾದ್ದರಲ್ಲಿ ಸಾವಿರಗಟ್ಟಲೆ ಹೆಸರುಗಳನ್ನ ಯಾರಿಟ್ಟರು?

ವಿಷ್ಣು ಸಹಸ್ರನಾಮದ ಆರಂಭದೊಳಗ ಕ್ಲೂ ಕೊಡುತ್ತಾರೆ  ಭೀಷ್ಮಾಚಾರ್ಯರು. ‘ಯಾನಿ ನಾಮಾನಿ ಗೌಣಾನಿ ವಿಖ್ಯಾತಾನಿ ಮಹಾತ್ಮನಃ।  ಋಷಿಭಿಃ ಪರಿಗೀತಾನಿ ತಾನಿ ವಕ್ಷ್ಯಾಮಿ ಭೋತಯೇ॥’ ಅಂತ. ಗೌಣಾನಿ ಎಂದರೆ ಗೌಣ ಅಥವಾ ಲೆಕ್ಕಕ್ಕಿಲ್ಲದ್ವು ಅಂತಲ್ಲ ಮತ್ತೆ. ಗೌಣ ನಾಮ ಅಂದರ ಗುಣಗಳ ಹೆಸರುಗಳು ಅಂತ. ಗುಣಗಳನ್ನು ಕಂಡ ಭಕ್ತರು, ಋಷಿಗಳು, ಮಹಾತ್ಮರು ಕಂಡ, ಹಾಡಿದ ಗುಣಗಳು, ಅವುಗಳಿಗೆ ಅವರಿಟ್ಟ ಹೆಸರುಗಳು ಅವು. ದೇವರ ಗುಣ ರೂಪ ಮತ್ತು ಕ್ರಿಯೆಗಳಲ್ಲಿ ಯಾವ ವ್ಯತ್ಯಾಸವೂ ಇಲ್ಲವಂತೆ.

ಇದೇ ವಿಷಯನ್ನ ವಾದಿರಾಜರು ರುಕ್ಮಿಣೀಶ ವಿಜಯದಲ್ಲಿ ಸ್ವಾರಸ್ಯಕರವಾಗಿ ತಿಳಿಸ್ತಾರೆ. ಚತುರ್ಭುಜನಾಗಿ, ಶಂಖ, ಚಕ್ರ, ಗದಾ, ಪದ್ಮಧಾರಿಯಾಗಿ ದರ್ಶನ ಕೊಟ್ಟು ಆಶೀರ್ವದಿಸಿ, ಮುಂದೆ ಏನು ಮಾಡಬೇಕು ಎನ್ನುವದನ್ನ ಹೇಳಿ, ನಂತರ ತಮ್ಮ  ಮಡಿಲ ಮಗುವಾದ ಕೃಷ್ಣನಿಗೆ ತಾಯಿ ತಂದೆಗಳು ನಾವು ಎಂದು ಲೋಕ ಕರೆಯುವದರಿಂದ, ಹಾಗೇ ಪ್ರಸಿದ್ಧರಾಗಿಬಿಡುವದರಿಂದ ಪಾಪ ಬರುವುದೇನೋ ಎಂದು ದೇವಕಿ, ವಸುದೇವರಿಗೆ ಹೆದರಿಕೆಯಾಯಿತಂತೆ.  ಆ ಹೆದರಿಕೆಗೆ ಕಾರಣವಿಲ್ಲ ಎಂದು ವಾದಿರಾಜರು ಹೇಳುವದು,

ಯ ಏಷ ಪುತ್ಸಂಜ್ಜ್ಞಿತ ನಾರಕಸ್ಥಾನ್
ಜನಾನ್ ಸ್ವನಾಮ ಸ್ಮರಣೇನ ಪಾತಿ
ಸ ದೃಷ್ಟಿಗಃ ಸನ್ವಸುದೇವ ಪತ್ನ್ಯಾಃ
ಕಥಂ ನ ಪುತ್ರಃ ಶತಪತ್ರನೇತ್ರಃ
(ಪುನ್ನಾಮ ನರಕದಿಂದ ಪಾರು ಮಾಡುವವನು ಪುತ್ರ. ಯಾವ ಈ ಶ್ರೀಕೃಷ್ಣನು ಪುನ್ನಾಮ ನರಕದಲ್ಲಿ ನರಳುವ ಜನರನ್ನು ತನ್ನ ನಾಮಸ್ಮರಣೆಯಿಂದ ಸಂರಕ್ಷಿಸುತ್ತಾನೋ, ಈ ಕಮಲದಂತೆ ವಿಶಾಲನಯನನಾದ ಅದೇ ಶ್ರೀಕೃಷ್ಣನು ಕಣ್ಣಿಗೆ ಕಾಣಿಸಿಕೊಂಡ ಮೇಲೆ ವಸುದೇವ ಪತ್ನಿಗೆ ಹೇಗೆ ಪುತ್ರನಾಗಲಾರನು?)

ಯದೀಯ ರೂಪಂ ಪ್ರಕಟೀಕರೋತಿ
ಪಿತಾ ಸ ತಸ್ಯೇತಿ ಹಿ ವೇದವಾದಃ
ತಥಾ ವಿಧಸ್ಯಾನಕದುಂದುಭೇಸ್ತ
ತ್ಪಿತೃತ್ವಮಪ್ಯಸ್ತು ನ ತೇನ ಹಾನಿಃ
(“ಯಾವನು ಯಾವನ ಸ್ವರೂಪವನ್ನು ಪ್ರಕಟಮಾಡುತ್ತಾನೆಯೋ ಅವನು ಅವನಿಗೆ ತಂದೆಯು” ಎಂಬುದಾಗಿ ವೇದ ಸಾರುತ್ತದೆ. ಅದರಂತೆ ಶ್ರೀಕೃಷ್ಣನ ಸ್ವರೂಪವನ್ನು ಪ್ರಕಟಿಸುವ ಆನಕದುಂದುಭಿಗೆ (ವಸುದೇವನಿಗೆ) ಶ್ರೀಕೃಷ್ಣನ ಪಿತ್ರತ್ವವೂ ಇರಲಿ. ಅದರಿಂದ ಯಾವ ಹಾನಿಯೂ ಇಲ್ಲ)

ಮನುಷ್ಯರಿಗೆ ದೇವರ ಹೆಸರು ಯಾಕಿಡೋದು? ಏನೋ ಛಂದ ಅನಿಸಿತು ಅಂತ, ಇಷ್ಟ ದೇವರು ಅಂತ, ಆಯಾ ದೇವರ ಹೆಸರು ಇಡೋದು. ಅಥವಾ ಆ ಹೆಸರು ಇಟ್ಟುಕೊಂಡ ಮುನ್ನಿನ ದೊಡ್ಡವರ ತರಹ ಗುಣವಂತ/ಗುಣವಂತೆ ಆಗಲಿ ಮಗು, ಅವರ ಆಶೀರ್ವಾದವಿರಲಿ, ಅವರ ಸ್ಮರಣೆಯೂ ಇರಲಿ, ಅನ್ನೋ ಉದ್ದೇಶದಿಂದಲೂ ಇಡಬಹುದು. ನಾರಾಯಣ ಎನ್ನುವ ಹೆಸರಿಟ್ಟ ಅಜಾಮಿಳ ಕಡೆಗಾಲಕ್ಕೆ ನಾರಾಯಣನನ್ನು ಕರೆದು ಸದ್ಗತಿ ಪಡೆದ ಕತೆ ಪ್ರಸಿದ್ಧವೇ ಇದೆಯಲ್ಲವೇ?

ಹಾಗೆ ಇಡುವ ಹೆಸರುಗಳಲ್ಲೂ ಹೊಸ ಹೊಸ ಹೆಸರಿರಲಿ, ವಿಶೇಷ ಹೆಸರಿರಲಿ ಅನ್ನೋದಕ್ಕೆ ಒತ್ತು ಇತ್ತೀಚೆಗೆ ಸಿಗ್ತಾ ಇದೆ ಅಂತ ಅನಿಸಬಹುದು. ನಮ್ಮಮ್ಮಂಗೆ ಒಬ್ಬರು ಕೇಳಿದ್ದರಂತೆ, ‘ಅಲ್ಲರೀ ವೈನೀ ನಿಮ್ಮ ಹೆಸರು ಮತ್ತ ನಿಮ್ಮ ಮನಿಯವರ ಹೆಸರು ಎರಡೂ ವಿಶೇಷ ಅವ, ಆದರ ಯಾಕ ನಿಮ್ಮ ಮಕ್ಕಳಿಗೆ ನೀವು ಕಾಮನ್ ಹೆಸರು ಇಟ್ಟೀರಿ?’ ಅಂತ. ಪಾಪ ಹಿಂಗೆಲ್ಲ ವಿಚಾರನೇ ಮಾಡಿರದಿದ್ದ ನಮ್ಮಮ್ಮಗ ಏನು ಹೇಳಬೇಕು ಅಂತ ತಿಳಿಯಲೇ ಇಲ್ಲವಂತೆ.

ನಮ್ಮಮ್ಮ ಹುಟ್ಟಿದಾಗ ಅವರ ಅಪ್ಪ, ಅಮ್ಮ ಬೇರೆ ಯಾವುದೋ ಹೆಸರಿಟ್ಟದ್ದರಂತೆ. ಆದರಂತೆ ಅದೇ ಸಮಯಕ್ಕೆ ಕುಕನೂರಿನಲ್ಲಿ ಎಲ್ಲರೂ ಗೌರವಿಸುವ ರಂಗಣ್ಣ ಮಾಸ್ತರು ‘ಸುಕನ್ಯಾ’ ಅಂತ ನಾಟಕ ಬರದಿದ್ದರಂತೆ. ಆ ಕಾರಣದಿಂದ ‘ಇಕಿಗೆ ಸುಕನ್ಯಾ ಹೆಸರನ್ನೇ ಇಡಿ’ ಅಂತ ಅವರು ಹೇಳಿ ಸುಕನ್ಯಾ ಅನ್ನೋ ಹೆಸರನ್ನು ಇಡಿಸಿದರು. ನಮ್ಮಪ್ಪಗೆ ಅವರಪ್ಪ, ಅಮ್ಮ ಇಟ್ಟ ಹೆಸರು ಇಂದಿರೇಶ ಅಂತ. ಅದಕ್ಕೇನು ಹಿನ್ನೆಲೆ ಅಂತ ಗೊತ್ತಿಲ್ಲ. ಇವರು, ಮಕ್ಕಳಾದ ನಮಗೆ ಅನಿಲ, ವಿದ್ಯಾ, ಬದರಿ ಅಂತ ಸಾಮಾನ್ಯ ಅನಿಸೋ ಹೆಸರಿಟ್ಟುಬಿಟ್ಟೆವಲ್ಲ ಅಂತ ಸ್ವಲ್ಪ ಹಳಹಳಿ ಆಯ್ತು ಅನಸ್ತದ ಅಮ್ಮಗ. ತಮಾಷೆ ಅಂದರ ನನಗ ಹೆಣ್ಣುಕೊಟ್ಟ ಮಾವ ಅಂದರೆ ನನ್ನ ಹೆಂಡತಿ ಅಪ್ಪನೂ ‘ಹೀಗೆ ಏನೋ ಪಲ್ಲವಿ ಅನ್ನೋ ಹೆಸರು ಇಕಿ ಹುಟ್ಟಿದಾಗ ಚೊಲೋ ಹೆಸರು ಅಂತ ಇಟ್ಟುಬಿಟ್ವಿರಿ ಈಗೇನು ಅದು ಕಾಮನ್ ಹೆಸರಾಗಿಬಿಟ್ಟದ!’ ಅಂತ ಅಂದಿದ್ದರು. ಅದೂ ನಿಜವೇ. ಒಂದು ಕಾಲಕ್ಕೆ ವಿಶೇಷ ಅನಿಸಿತು ಅಂತ ಎಲ್ಲಾರೂ ಅದೇ ಹೆಸರಿಟ್ಟರೆ ಅದರ ವಿಶೇಷತೆ ಕಳೆದು ಸಾಮಾನ್ಯ  ಅನಿಸಲಿಕ್ಕೆ ಶುರು ಆಗೇ ಬಿಡುತ್ತದೆ ಅಲ್ಲವೇ?

‘ಬದರಿ ನಾರಾಯಣ’ ಅಂತ ಎರಡೆರಡು ಹೆಸರು ಹೊಂದಿರುವ ನನ್ನ ತಮ್ಮ ಸ್ಪೇಷಲ್ಲಾಗಿದ್ದ ತಾತನಿಗೆ. ತಾವು ಮಾಡಿ ಬಂದ ಬದರಿ ಯಾತ್ರೆಯನ್ನು ಮತ್ತು ‘ನಾರಾಯಣ’ ಹೆಸರಿನಿಂದ ತಮ್ಮ ತಂದೆಯ ನೆನಪನ್ನೂ ತರುತ್ತಾನೆ ಎನ್ನುವ ಕಾರಣಕ್ಕೆ ತಾತನ ಮುದ್ದಿನ ಮೊಮ್ಮಗನಾಗಿದ್ದ 🙂 ಇನ್ನು ತಂಗಿ ವಿದ್ಯಾಳೂ ಒಮ್ಮೆ ‘ನನ್ನ ಹೆಸರು ನೋಡಿ ಎಲ್ಲಾರ ನೋಟ್ ಬುಕ್ಕಿನ ಮೇಲೂ ಇರ್ತದ’ ಅಂತ ಚಾಷ್ಟಿ ಮಾಡಿದ್ದಳು. ನನ್ನ ಹೆಸರಿನ ಬಗ್ಗೆ ನನಗೇನೂ ತಕರಾರಿದ್ದಿಲ್ಲ. ಅನಿಲ ಅಂದರೆ ಗಾಳಿ, ವಾಯು ಹಾಗೂ  ಹನುಮಪ್ಪನ ಹೆಸರು ಅನ್ನೋದು ಬಿಟ್ಟರೆ ಹೆಚ್ಚೇನೂ ಗೊತ್ತಿರಲಿಲ್ಲ ಆದರೆ. ಕೆಲವಾರು ವರ್ಷಗಳ ಹಿಂದೆ ಈಶಾವಾಸ್ಯ ಉಪನಿಷತ್ತಿಗೆ ರಾಘವೇಂದ್ರ ಸ್ವಾಮಿಗಳ ಭಾಷ್ಯದ ಕನ್ನಡ ಅನುವಾದವನ್ನು ಓದುತ್ತಿರುವಾಗ ಈ ಹೆಸರಿನ ಅರ್ಥ ತಿಳಿದು ಖುಷಿಯಾಯಿತು. ‘ಅನಿಲನಾದ, ಅಕಾರಶಬ್ದವಾಚ್ಯನಾದ ಪರಬ್ರಹ್ಮನೇ ನೀಲ ಎಂದರೆ ನಿಲಯನ, ಆಶ್ರಯನಾಗಿ ಉಳ್ಳ, ಒಟ್ಟಿನಲ್ಲಿ ಪರಮೇಶ್ವರಾಶ್ರಿತನಾದ ವಾಯು’ ಎನ್ನುವ ಅರ್ಥವಂತೆ ಅನಿಲ ಎನ್ನುವ ಹೆಸರಿಗೆ. ಇದನ್ನೇ ದಾಸರ ಸುಳಾದಿಯೊಂದರಲ್ಲಿ ವಾಯುವನ್ನು ಕುರಿತು ಹೇಳುವ ಮಾತು ‘ಹರಿಯ ವಿಹಾರಕ್ಕೆ ಆವಾಸನೆನಿಸುವಿ’ ಅಂತ.

ಮಗನ ಹೆಸರಿನಿಂದ  ಶುರು ಮಾಡಿ ಎಷ್ಟೆಲ್ಲ ಬರೆದೆ, ಆದರೆ ಮಗನಿಗೆ ಇಟ್ಟ ಹೆಸರಿನ ಹಿನ್ನೆಲೆ ತಿಳಿಸಲಿಲ್ಲ ಇನ್ನೂ! ಇನ್ನೂ ಏನೆಲ್ಲಾ ವಿಷಯ ಬರೆಯಬಹುದು ಈ ಹೆಸರುಗಳ ಸುತ್ತ. ಇರಲಿ, ಅದನ್ನೂ ಒಂದಿಷ್ಟು ಹೇಳಿ ಈ ನಾಮ ಪುರಾಣಕ್ಕೆ ಮಂಗಳ ಹಾಡುವೆ.

ಮಗ ಹುಟ್ಟುವದಕ್ಕೂ ಬಹಳ ಮುನ್ನ ಹರಿಕಥಾಮೃತಸಾರದಲ್ಲಿ ‘ಪಾಹಿ ಕಲ್ಕಿ ಸುತೇಜ ದಾಸನೆ..’ ಎಂದು ನೂರು ಋಜುಗಣಸ್ಥರ ಹೆಸರು ಹೇಳುತ್ತಾ ಅವರನ್ನು ಪ್ರಾರ್ಥಿಸುವ ಸಂಧಿಯಲ್ಲಿ ಬಂದ ಹೆಸರು ಸುವೀರ. ಬಹುಶಃ ಅದನ್ನು ಹಾಗೇ ಓದಿ ಬಿಟ್ಟಿರುತ್ತಿದ್ದೆ. ಆದರೆ ಅವತ್ತು ಪ್ರತಿ ನುಡಿಗೆ ಪ್ರಭಂಜನಾಚಾರ್ಯರು ಬರೆದ ಅರ್ಥವನ್ನೂ ಓದುತ್ತಿದ್ದೆ. ಅಲ್ಲಿ ಅವರು ತಿಳಿಸಿದ ಅರ್ಥ, ‘ಕೈಗೊಂಡ ಕಾರ್ಯವನ್ನು ನಿಯಮೇನ ಪೋರೈಸುವದರಿಂದ ಸುವೀರ.’ ಹೆಚ್ಚಾಗಿ ಬರೀ ಆರಂಭಶೋರನಾದ ನನಗೆ, ಶುರು ಮಾಡಿದ್ದನ್ನು ನೇಮದಿಂದ ಮುಗಿಸುವ ಸುವೀರ ಹೆಸರು ಬಹಳ ಚನ್ನಾಗಿದೆ ಅನಿಸಿ ತಲೆಯಲ್ಲಿ ಉಳಿದಿತ್ತು. ಅದನ್ನೇ ನಮ್ಮಪ್ಪನಿಗೂ ಹೇಳಿದ್ದೆ. ಮಗ ಹುಟ್ಟುತ್ತಾನೆ ಎಂದು ಗೊತ್ತಾದಾಗ ನನ್ನ ತಲೆಗೆ ಬಂದ ಹೆಸರು ಇದೇ. ಜೊತೆಗೆ ‘ಮಯೂಖ’ ಎನ್ನುವ ಹೆಸರೂ ಇಡಬಹುದು ಅಂತ ಅನಿಸಿತ್ತು. ‘ಹಿಡದ ಕೆಲಸ ಮುಗಿಸೋ ಅಂಥವ’ ಅನ್ನೋ ಅರ್ಥದ ಜೊತೆಗೆ, ವಿಷ್ಣು ಸಹಸ್ರನಾಮದಲ್ಲಿ ಬರುವ ಹೆಸರು ಮತ್ತು ಋಜುಗಣದವರ ಹೆಸರು ಅನ್ನೂ ಕಾರಣಕ್ಕೆ ಕೊನೆಗೂ ಗೆದ್ದದ್ದು ಸುವೀರನೇ.

ಹಿಂಗೆ ಹೆಸರಿಟ್ಟೆ ಅಂತ ತಿಳಿಸಿದ ಮೇಲೆ ಅದೇ ಮಂಜು ಹೇಳಿದ್ದು ನಿನ್ನ ಮಗ ಬೆಂಗಾಲದ ಕಡೆಗೇನಾದ್ರೂ ಹೋದರೆ ಸುಬೀರ್ ಆಗ್ತಾನಲ್ಲೋ ಅಂತ 🙂 ಆಮೇಲೆ ನೋಡಿದ್ರೆ ಅಭಿಮಾನ್ ಸಿನೆಮಾದಲ್ಲಿ ಅಮಿತಾಭ್ ಬಚ್ಚನ್ ಹೆಸರು ಅದೇ, ಸುಬೀರ್ ಕುಮಾರ್!! ‘ಇರಲಿ, ಯಾಕಿರವಲ್ದ್ಯಾಕ’ 🙂

ಹೆಸರಿಟ್ಟು ಐದು ವರ್ಷಗಳಾದವು ಇವತ್ತಿಗೆ. ಮಗನಿಗೆ ಹುಟ್ಟು ಹಬ್ಬದ ಶುಭಾಶಯಗಳು. ‘ಚಿರಂಜೀವಿಯಾಗೆಲವೊ ಚಿಣ್ಣ ನೀನು’ ಎನ್ನುವ ವಿಜಯದಾಸರ, ಗುರು ಹಿರಿಯರ, ಹರಿವಾಯುಗುರುಗಳ ಆಶೀರ್ವಾದ, ಅನುಗ್ರಹವಿರಲಿ ಅವನ ಮೇಲೆ. ಅಮ್ಮ ಅಪ್ಪಂದಿರದ್ದೂ ಸೇರಿದಂತೆ ಯಾವ ಕೆಟ್ಟ ದೃಷ್ಟಿ ತಾಕದಿರಲಿ. ಉತ್ತರೋತ್ತರ ಅಭಿವೃದ್ಧಿಯಾಗಲಿ ಎನ್ನುವ ಹಾರೈಕೆಯೊಂದಿಗೆ, ಜಗನ್ನಾಥದಾಸರ ಹರಿಕಥಾಮೃತಸಾರದ ಶ್ವಾಸ ಸಂಧಿಯ ಈ ನುಡಿಯಿಂದ ಬೇಸರದೆ ಹಂಸ ಮಂತ್ರ ಜಪ ಮಾಡಿಸುವ ಶ್ವಾಸ ದೇವಗೆ, ಅವನಂತರ್ಯಾಮಿ ಶ್ರೀಹರಿಗೆ ವಂದನೆ.  ‘ಯಸ್ಮಿನ್ನಪೋ ಮಾತರಿಶ್ವಾ ದದಾತಿ..’

ಭಾರತೀಶನು ಘಳಿಗೆಯೊಳು ಮು
ನ್ನೂರರವತ್ತುಸಿರ ಜಪಗಳ
ತಾ ರಚಿಸುವನು ಸರ್ವಜೀವರೊಳಗಿರ್ದು ಬೇಸರದೆ।
ಕಾರುಣಿಕ ಅವರವರ ಸಾಧನ
ಪೂರಯಿಸಿ ಭೂ ನರಕ ಸ್ವರ್ಗವ
ಸೇರಿಸುವ ಸರ್ವಜ್ಞ ಸಕಲೇಷ್ಟಪ್ರದಾಯಕನು ॥
– ಜಗನ್ನಾಥದಾಸರ ಹರಿಕಥಾಮೃತಸಾರ, ಶ್ವಾಸ ಸಂಧಿ, ಪದ್ಯ ೧

Advertisements

ಅಲ್ಕೆಮಿಸ್ಟನೂ, ಗುರಿ ಸಾಧನೆಯ ಹಾದಿಯೂ…

ಪೌಲೋ ಕೊಯ್ಲೋನ ಅಲ್ಕೆಮಿಸ್ಟ್ ಕಥೆ ಓದಿದೆ ಈ ವಾರ. ಸರಳವಾದ ಕಥೆ ಓದುತ್ತಿದ್ದಂತೆ ನಮ್ಮದೇ ನೆಲದ ಹಲವು ಕಥೆಗಳನ್ನು ನೆನಪಿಸಿತು. ಡೆಸ್ಟಿನಿ ಅಥವಾ ನಿಜವಾದ ನೆಲೆಯನ್ನು ಹುಡುಕುವವರು ದಾರಿಯಲ್ಲಿ ಬರುವ ಎಡರುಗಳಿಗೆ ಹೆದರುವದಿಲ್ಲ, ಅವರ ಆತ್ಮ ಸ್ಥೈರ್ಯ ದೊಡ್ಡದು, ಎಂತಹ ಪರೀಕ್ಷೆಯ ಗಳಿಗೆಯಲ್ಲೂ ಅವರು ಕಂಗೆಡುವದಿಲ್ಲ. ಹುಡುಕಾಟದ ಹಾದಿಯ ಶಕುನಗಳನ್ನು ಗ್ರಹಿಸುತ್ತಾರೆ. ತಮ್ಮ ಎದೆಯಾಳದ ಧ್ವನಿಯನ್ನು ಯಾವಾಗಲೂ ಕೇಳುತ್ತಾರೆ, ಅದರಂತೆ ನಡೆಯುತ್ತಾರೆ. ತಮ್ಮ ಹತ್ತಿರ ಭವಿಷ್ಯದೊಳಗೆ ಇಣುಕುವ ಯಂತ್ರವಿದ್ದರೂ ಅದರ ನೆರವನ್ನು ಪಡೆಯುವದಿಲ್ಲ ಬದಲಿಗೆ ತಮ್ಮದೇ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ಈ ಗುಣಗಳಿಗೆ ದೇಶ ಕಾಲಗಳ ಎಲ್ಲೆ ಇಲ್ಲ. ಇವುಗಳಲ್ಲಿ ಕೆಲವು ಅಲ್ಕೆಮಿಸ್ಟಿನ ಸಾಂಟಿಯಾಗೋಗೆ ಸ್ವಾಭಾವಿಕವಾಗಿ ಬಂದಿರುತ್ತವೆ, ಇನ್ನು ಕೆಲವನ್ನು ಕಲಿಯುತ್ತಾನೆ ಹಾಗೂ ಅನುಭವಿಸುತ್ತಾನೆ. ಕನಸಿನಲ್ಲಿ ಕಂಡ ನಿಧಿಗಾಗಿ ಅವನು ಮರುಭೂಮಿಯನ್ನು ದಾಟಿ, ಈಜಿಪ್ತಿನ ಪಿರಮಿಡ್ಡುಗಳನ್ನು ಹುಡುಕಿಕೊಂಡು ಹೋಗಬೇಕು. ಅವನು ನಿಜವಾಗಿಯೂ ಏನನ್ನಾದರೂ ಬಯಸಿದರೆ ಅದನ್ನು ದೊರಕಿಸಿಕೊಡಲು ಇಡೀ ವಿಶ್ವವೇ ಸಂಚು ಹೂಡುತ್ತದೆ ಎನ್ನುವದನ್ನು ಬೇರೆ ಬೇರೆಯವರಿಂದ ಕೇಳಿದ್ದಾನೆ, ಅವನ ದಾರಿಯಲ್ಲಿನ ಶಕುನಗಳೂ ಅವನಿಗೆ ಅದನ್ನೇ ಹೇಳುವಂತಿವೆ (ಆ ಶಕುನಗಳನ್ನೂ ಅದಕ್ಕೋಸ್ಕರವೇ ಆ ದೇವರು ಇಟ್ಟಿದ್ದಾನೆ ಎಂದೂ ಅನಿಸಿದೆ ಅವನಿಗೆ). ತನ್ನ ನಿಜವಾದ ನೆಲೆಯನ್ನು ಅವನು ಹುಡುಕಬೇಕು. ಆ ದಾರಿಯಲ್ಲಿ ಅವನನ್ನು ನಡೆಸುವ ಕೈ ಎಲ್ಲವನ್ನೂ ಬರೆದ ಕೈ. ಅವನು ಹಾಕುವ ಪ್ರತಿ ಹೆಜ್ಜೆ ಹಾಗೂ ಪ್ರತಿ ಹೆಜ್ಜೆಯ ಅನುಭವ ಅವನವೆ.

ಸಾಂಟಿಯಾಗೋ ಒಬ್ಬ ಅಲ್ಕೆಮಿಸ್ಟ್, ಅವನಿಗೆ ತನ್ನನ್ನು ತಾನು ಗಾಳಿಯನ್ನಾಗಿ ಪರಿವರ್ತಿಸಿಕೊಳ್ಳಲು ಬರುತ್ತದೆ ಎಂದು ನಿಜವಾದ ಅಲ್ಕೆಮಿಸ್ಟ್ ಹೇಳಿದಾಗ ಸಾಂಟಿಯಾಗೋನ ಎದೆಯಲ್ಲಿ ತಲ್ಲಣ. ಮತ್ತೊಂದು ಪರೀಕ್ಷೆಯ ಗಳಿಗೆ. ಅಲ್ಕೆಮಿಸ್ಟನ ಮಾತನ್ನು ಅನುಸರಿಸಿ ಕಳೆದ ಏಳೆಂಟು ದಿನಗಳಲ್ಲಿ ತನ್ನ ಎದೆಯಾಳದ ಮಾತುಗಳನ್ನು ಕೇಳುವದನ್ನು ಕಲಿತಿದ್ದಾನೆ. ತನ್ನ ಹೃದಯದ ತುಡಿತವನ್ನು ಅರಿತಿದ್ದಾನೆ. ತಾನು ಬಯಸುವದಕ್ಕೂ ತನ್ನ ಹೃದಯ ಬಯಸುವದಕ್ಕೂ ನಡುವೆ ಕಂದರಗಳಿಲ್ಲ. ಅವೆರಡೂ ಒಂದೇ ಆದಂತಿವೆ. ಆದರೂ ಅವನಿಗೆ ಮನುಷ್ಯನಿಂದ ಗಾಳಿ ಹೇಗಾಗಬೇಕು ಎಂದು ಗೊತ್ತಿಲ್ಲ. ೩ ದಿನಗಳ ಅವಕಾಶದಲ್ಲಿ ಗಾಳಿಯಾಗಿ ತೋರಿಸದಿದ್ದರೆ, ಈ ಮರುಭೂಮಿಯಲ್ಲಿ ತಮ್ಮನ್ನು ಹಿಡಿದು ಹಾಕಿದವರು ಕೊಂದು ಬಿಡುತ್ತಾರೆ! ಜೊತೆಗೆ ಆ ಅಲ್ಕೆಮಿಸ್ಟ್ ಬೇರೆ ಹೇಳಿದ್ದಾನೆ ಯಾರಾದರೂ ಸಾಯುವುದಿದ್ದರೆ ಅದು ನೀನು ಮಾತ್ರ, ನನಗಾಗಲೇ ಗೊತ್ತು ಹೇಗೆ ಗಾಳಿಯಾಗಬೇಕು ಎಂದು.

ಕಡೆಗೆ ಮೂರನೇ ದಿನ ಬಂದಾಗ ಎಲ್ಲರೆದುರು ಅವನೊಂದು ಮರಳು ದಿನ್ನೆ ಏರುತ್ತಾನೆ. ನಿಧಾನವಾಗಿ ತನ್ನ ಹೃದಯದ ಜೊತೆಗೆ ಬೆಳೆಸಿಕೊಂಡ ಅವಿನಾಭಾವ ಸಂಬಂಧವನ್ನುಪಯೋಗಿಸಿ, ವಿಶ್ವದ ಆತ್ಮವನ್ನು ತಲುಪ ಬಯಸುತ್ತಾನೆ. ಅದೇ ಅಲ್ಕೆಮಿಸ್ಟ್ ಹೇಳಿದ, “ಒಂದು ಮರಳಿನ ಕಣವನ್ನು ಕುರಿತು ಧ್ಯಾನಿಸಿ ಅದನ್ನರಿತರೂ ನೀನು ವಿಶ್ವ ರಹಸ್ಯವನ್ನೇ ಅರಿಯುವೆ” ಎನ್ನುವ ಮಾತಿನಿಂದ ಪ್ರಭಾವಿತನಾದಂತೆ ಅನನ್ಯವಾಗಿ ಆ ಮರುಭೂಮಿಯ ಮರಳಿನೊಡನೆ ’ಮಾತನಾಡುತ್ತಾನೆ’. ನನಗೆ ಗಾಳಿಯಾಗುವದನ್ನ ಹೇಳಿಕೊಡು ಎಂದು ಕೇಳುತ್ತಾನೆ. ಮರಳು ತಿರುಗಿ ಮಾತನಾಡುತ್ತದೆ! ನನಗೆ ಗೊತ್ತಿಲ್ಲ ಮನುಷ್ಯನನ್ನು ಹೇಗೆ ಗಾಳಿಯನ್ನಾಗಿ ಮಾಡಬಹುದು ಎಂದು, ಬೇಕಿದ್ದರೆ ಗಾಳಿಯನ್ನೇ ಕೇಳು ಅದು ನನ್ನನ್ನೂ ಹಾರಿಸಿಕೊಂಡು ಹೋಗುತ್ತದೆ ಎನ್ನುತ್ತದೆ. ಹುಡುಗ ಈಗ ಗಾಳಿಯೊಡನೆ ಮಾತನಾಡುತ್ತಾನೆ. ಗಾಳಿಯೂ ಹೇಳುತ್ತದೆ ನನಗೆ ಗೊತ್ತಿಲ್ಲ ಮನುಷ್ಯನನ್ನು ಗಾಳಿಯನ್ನಾಗಿಸುವದು. ನಾನು ಗಾಳಿ ಅಷ್ಟೆ. ನನಗೂ ಮೇಲಿನವನು ಸೂರ್ಯ ಬೇಕಿದ್ದರೆ ಅವನನ್ನೇ ಕೇಳು. ಹುಡುಗನ ಧ್ಯಾನ ಹೆಚ್ಚಿದಂತೆ, ಹುಡುಗ ಸೂರ್ಯನನ್ನು ಹುಡುಕಿಕೊಂಡು ಹೋದಂತೆ, ಸೂರ್ಯನನ್ನು ಮತ್ತೆ ಮತ್ತೆ ಕೇಳಿದಂತೆ ಗಾಳಿ ಜೋರಾಗಿ ಬೀಸುತ್ತದೆ. ಮರಳ ಕಣಗಳನ್ನು ತೂರುತ್ತದೆ. ಹುಡುಗ ಸೂರ್ಯನೆಡೆಗೆ ನೇರವಾಗಿ ನೋಡಲು ಅನುಕೂಲವಾಗಲಿ, ಅವನ ಕಣ್ಣುಗಳಿಗೆ ಕಷ್ಟವಾಗದಿರಲಿ ಎಂದು ಮತ್ತಷ್ಟು ಮರಳಿನ ಕಣಗಳನ್ನು ತೂರುತ್ತದೆ. ಬೀಸು ಗಾಳಿಯಲ್ಲಿ, ತೂರುವ ಮರಳು ಕಣಗಳಲ್ಲಿ, ಸಾಂಟಿಯಾಗೋನ ಅನನ್ಯ ಹುಡುಕಾಟದಲ್ಲಿ ನಮ್ಮನ್ನು ತನ್ಮಯರನ್ನಾಗಿಸಿಬಿಡುವ ಭಾಗ ಇದು. ಇದನ್ನ ಓದುತ್ತಿದ್ದಂತೆ ನನ್ನ ಮನಸ್ಸಿನಲ್ಲಿ ಅನುರಣಿಸಿದ್ದು ಈಶಾವಾಸ್ಯದ ಈ ಶ್ಲೋಕ,

ಪೂಷನ್ ಏಕರ್ಷೇ ಯಮ ಸೂರ್ಯ ಪ್ರಾಜಾಪತ್ಯ
ವ್ಯೂಹ ರಶ್ಮೀನ್ ಸಮೂಹ ತೇಜೋ ಯತ್ತೇ
ರೂಪಮ್ ಕಲ್ಯಾಣತಮಮ್ ತತ್ತೇ ಪಶ್ಯಾಮಿ
ಯೋಸಾವಸೌ ಪುರುಷಃ ಸೋsಹಮಸ್ಮಿ

(ಚಿನ್ನದ ತಳಿಕೆಯಲ್ಲಡಗಿಸಿದ ಸತ್ಯವನ್ನು ಕಾಣಬೇಕು,
ನಿನ್ನ ತೇಜೋರಾಶಿಯನ್ನು ತಗ್ಗಿಸು, ನಿನ್ನ ಕಲ್ಯಾಣಮಯ ರೂಪವನ್ನು ಕಾಣಬೇಕು.
ನನ್ನಲ್ಲಿರುವ ರೂಪಗಳೂ ಅವೇ)

ಸಾಂಟಿಯಾಗೋನ ಅನನ್ಯ ಪ್ರಾರ್ಥನೆ ಫಲಿಸುತ್ತದೆ. ವಿಶ್ವದ ಆತ್ಮವನ್ನು ಕಾಣುತ್ತಾನೆ. ತಾನೂ ಅದರಿಂದಲೇ ಬಂದದ್ದರ ಅರಿವಾಗುತ್ತದೆ. ಜೊತೆಗೆ ತನಗೂ ಪವಾಡಗಳನ್ನು ಮಾಡಲು ಬರುವದೂ ತಿಳಿಯುತ್ತದೆ!

ಸೂರ್ಯನಿಗೆದುರಾಗಿ ನಿಂತಂತೆ ಕಾಣುವ ಪುಟ್ಟ ಮರದ ಚಿತ್ರ ತೆಗೆದದ್ದು ಹ್ಯಾಮಿಲ್ಟನ್ ಬೆಟ್ಟದ ಮೇಲೆ

ಸೂರ್ಯನಿಗೆದುರಾಗಿ ನಿಂತಂತೆ ಕಾಣುವ ಪುಟ್ಟ ಮರದ ಚಿತ್ರ ತೆಗೆದದ್ದು ಹ್ಯಾಮಿಲ್ಟನ್ ಬೆಟ್ಟದ ಮೇಲೆ

ಅವನನ್ನು ಪಿರಮಿಡ್ಡುಗಳ ತನಕ ಬಿಡಲು ಬಂದ ಅಲ್ಕೆಮಿಸ್ಟ್ ಹೇಳುತ್ತಾನೆ, “ನಿನ್ನ ಗಮ್ಯ ಇನ್ನೇನೂ ದೂರವಿಲ್ಲ. ಆದರೆ ನೆನಪಿರಲಿ ವ್ಯಕ್ತಿಯೊಬ್ಬ ಅವನ ನಿಜವಾದ ನೆಲೆಯನ್ನು ತಲುಪುವ ಹಾದಿಯಲ್ಲಿ ಹಲವಾರು ಪರೀಕ್ಷೆಗಳೆನ್ನುದುರಿಸಬೇಕಾಗುತ್ತದೆ. ಗುರಿ ಹತ್ತಿರವಾದಂತೆ ಪರೀಕ್ಷೇಗಳೂ ತೀಕ್ಷ್ಣವಾಗುತ್ತವೆ.” ಇಲ್ಲಿಯವರೆಗೂ ಸಾಂಟಿಯಾಗೋನ ಕತೆಯನ್ನು ಓದುತ್ತ ಬರುತ್ತಿದ್ದಂತೆ ಇಲ್ಲಿ ಒಮ್ಮಿಂದೊಮ್ಮೆಲೆ ದೇವುಡು ಅವರ ಮಹಾಬ್ರಾಹ್ಮಣ ವಿಶ್ವಾಮಿತ್ರನನ್ನು ಕಂಡಂತಾಯಿತು. ಒಂದರ ಮೇಲೊಂದು ಪರೀಕ್ಷೆಗಳನ್ನೆದುರಿಸಿಯೂ ಗೆದ್ದ ಕೌಶಿಕ ವಿಶ್ವಾಮಿತ್ರನಾಗುತ್ತಾನೆ. ಅವನ ಪರೀಕ್ಷೆಗಳು ಹಾಗೇ, ಗುರಿ ಹತ್ತಿರವಾದಂತೆಲ್ಲ ಹೆಚ್ಚು ಕಠಿಣವಾದಂತಹವು. ಇಲ್ಲಿ ವಿಶ್ವಾಮಿತ್ರನೇಕೆ ನೆನಪಾಗಬೇಕು ? ಸಾಂಟಿಯಾಗೋ ಹುಡುಕುತ್ತಿದ್ದದ್ದು ಒಂದು ನಿಧಿ ಅಷ್ಟೆ. ವಿಶ್ವಾಮಿತ್ರನೋ ಬ್ರಹ್ಮ ಋಷಿ ಆಗಬೇಕು, ಇನ್ನೊಬ್ಬ ವಸಿಷ್ಠ ಆಗಬೇಕು ಎಂದು ಹೊರಟವ. ’ಗಾಯತ್ರಿ ಮಂತ್ರ ದೃಷ್ಟಾರ’ ಎನ್ನುವ ವಿಶ್ವಾಮಿತ್ರನ ಹಿರಿಮೆಯನ್ನು ಕೇಳುತ್ತ ಬಂದ ನನಗೆ ಸಾಂಟಿಯಾಗೋನ ನಿಧಿಯ ಹುಡುಕಾಟ ಕ್ಷುಲ್ಲಕ ಅನಿಸಬೇಕಲ್ಲವೆ? ಆದರೂ ನೆನಪಾಯಿತೆಂದರೆ ಇದು ಸಾಧಿಸಿದ ಗುರಿಯಿಂದಾಗಿ ನೆನಪಾದದ್ದಲ್ಲ. ಗುರಿ ಸಾಧಿಸುವವರ ಪಯಣದ ಅರಿವಿನಿಂದ ನೆನಪಾದದ್ದು. ಇಬ್ಬರ ಕತೆಯೂ ಹೇಳುವದು ಗುರಿ ತಲುಪಲು ಶ್ರಮಿಸುವ ವ್ಯಕ್ತಿಯ ಬಗ್ಗೆ. ಅವರ ದಾರಿಯ ಬಗ್ಗೆ, ಆ ದಾರಿಯಲ್ಲಿ ನಡೆಯುವಾಗ ಅವರು ತೋರುವ ಸ್ಥೈರ್ಯದ ಬಗ್ಗೆ. ಅವರ ಗುರಿ ಸಾಧನೆ ಆಗಲು ವಿಶ್ವ ಹೂಡುವ ಸಂಚಿನ ಬಗ್ಗೆ. ಆಷ್ಟೇ ಅಲ್ಲ, ನಿಧಿಯ ಅನ್ವೇಷಣೆಗೆ ಹೊರಟ ಹುಡುಗನಿಗೆ ಅಲ್ಕೆಮಿಯೂ ಒಲಿಯಿತಲ್ಲ, ಅವನೂ ಒಂದು ರೀತಿಯಲ್ಲಿ ವಿಶ್ವಾಮಿತ್ರನೇ ಆಗಿಬಿಟ್ಟ ಹಾಗಾದರೆ! ವಿಶ್ವಾಮಿತ್ರ ನೆನಪಾದದ್ದರಲ್ಲೇನೂ ಆಶ್ಚರ್ಯವಿಲ್ಲ ಅಲ್ಲವೆ ?

ಸಾಂಟಿಯಾಗೋನ ಕತೆ ನೆನಪಿನಲ್ಲುಳಿಯಬೇಕು. ಅದರಲ್ಲಿಯ ಗಾಜಿನ ಸಾಮಾನುಗಳ ಅಂಗಡಿಯವನ ಪ್ರವೃತ್ತಿಯ ಕಡೆಗೆ ಹೋಗದೆ ಗುರಿ ಮುಟ್ಟಲು ನಿರಂತರ ಪರಿಶ್ರಮ ಪಡುವ ಕಡೆ ಹೋಗಬೇಕು. ಕತೆಯ ಆರಂಭದಲ್ಲೇ ಬರುವ ಕತೆಯೊಳಗಿನ ಕತೆ ಹೇಳುವಂತೆ ಜೀವನದಲ್ಲಿ ನಿಜವಾದ ಸುಖ ಸಿಗುವದು ವಿಲಾಸಗಳತ್ತ ಮನಸ್ಸು ಹೋಗಿ ಅವನ್ನು ಅನುಭವಿಸುವಾಗಲೂ ನಮ್ಮ ಜವಾಬ್ದಾರಿಗಳ ಬಗ್ಗೆ ಎಚ್ಚರವಿದ್ದಾಗ. ನಮ್ಮ ಜೀವನದ ನಿಜವಾದ ಗುರಿಯ ಸಾಧನೆಯೆ ದೊಡ್ಡ ಜವಾಬ್ದಾರಿ!