ಕೆಂಪೇರಿತಂಬರದಿ

ಈಗೊಂದೆರಡು ದಿವಸಗಳಿಂದ ರಾಯಚೂರು ಶೇಷಗಿರಿ ದಾಸ ಹಾಡಿರುವ ಈ‌ ಹಾಡಿನ ಗುಂಗು ಹಿಡಿದಿದೆ. ಇವತ್ತು ರಾತ್ರಿ ಯಾಕೋ‌ ನಿದ್ದೆಯೂ ಬರ್ತಿಲ್ಲ. ಇರಲಿ ಅಂತ ಕೇಳಿದ್ದನ್ನ ಟೈಪ್ ಮಾಡಿ ಪೋಸ್ಟ್ ಮಾಡ್ತಾ ಇದ್ದೇನೆ. ಈ ಹಾಡಿನ ಕೊನೆಯ ನುಡಿಯಲ್ಲಿರುವ ‘ಶ್ರೀ ಕೃಷ್ಣ’ ಅಂಕಿತ ನೋಡಿದರೆ ಇದು ವ್ಯಾಸರಾಜರದ್ದಿರಬೇಕೇನೋ ಅನಿಸಿದೆ. ಆದರೆ ಶ್ರೀ ಕೃಷ್ಣಕ್ಕೂ ಮುಂಚೆ ಬರುವ ಆನಂದ ವಿಠಲ ಅನ್ನುವದನ್ನ ನೋಡಿದಾಗ ಬೇರೆ ಯಾರದ್ದಾದರೂ ಇರಬಹುದೇನೋ‌ ಅಂತ ಕೂಡ ಅನಿಸಿದೆ. (ಆನಂದ ವಿಠಲ ಅಂಕಿತದಿಂದ ಪದ ರಚಿಸಿದ ದಾಸರು ಯಾರಾದರೂ ಇದ್ದರೆ ಅಂತ ನನಗೆ ಗೊತ್ತಿಲ್ಲ. ಇರುವ ಪುಸ್ತಕಗಳಲ್ಲಿ ಹುಡುಕಿದಾಗ ಸಿಗಲಿಲ್ಲ. ಹೀಗಾಗಿ ‘ಶ್ರೀ ಕೃಷ್ಣ’ ವೇ ಇದರಲ್ಲಿರುವ ಅಂಕಿತ ಮತ್ತು ಈ‌ ಪದ ವ್ಯಾಸರಾಜರದ್ದೇ ಇರಬೇಕು ಅನಿಸಿದೆ. ವ್ಯಾಸರಾಜರದ್ದೇ‌ ಆಗಿದ್ದರೆ ಈ‌ ಪದರಚನೆಯ ಸಂದರ್ಭ ಯಾವುದಿದ್ದರಬಹುದು ಎನ್ನುವ ಕುತೂಹಲವೂ ಶುರುವಾಗಿದೆ. ಯಾರಿಗಾದರೂ ಈ‌ ಪದದ ಬಗ್ಗೆ ಹೆಚ್ಚಿನ ವಿಷಯ ತಿಳಿದಿದ್ದರೆ ದಯವಿಟ್ಟು ತಿಳಿಸಿ.)

ಆನಂದ ವಿಠಲ ದಾಸರ ಬಗ್ಗೆ dvaita.org ನ ಈ ಪುಟದಲ್ಲಿ ಒಂದಷ್ಟು ಮಾಹಿತಿ ದೊರಕಿತು. ಇವರು ಲಿಂಗಸುಗೂರಿನವರಂತೆ. ಇವರ ಹೆಸರು ಕುಲಕರ್ಣಿ ರಾಮ ರಾವ್ ಮತ್ತು ಇವರ ಕಾಲ ೧೮೬೯-೧೯೧೮. ಶ್ರೀ ಗುರು ಜಗನ್ನಾಥ ದಾಸರಿಂದ ಇವರಿಗೆ ದಾಸ ದೀಕ್ಷೆಯಾದದ್ದು. ಇವರ ಬಗ್ಗೆ, ಇವರ ಪದಗಳ ಬಗ್ಗೆ ಇನ್ನಷ್ಟು ಅರಿಯಬೇಕು ಅನಿಸಿದೆ. ಯಾರಿಗಾದರೂ ಗೊತ್ತಿದ್ದರೆ ತಿಳಿಸಿ.

ಕೆಂಪೇರಿತಂಬರದಿ ತಂಪಿಳಿತು* ಸಂಭ್ರಮದಿ
ಕಂಪನಾಗಿದೆ ಚಿತ್ತ ಕಾಯೋ ಕೃಷ್ಣಾ

ಶಶಿ ಮುಖಿ ವಿತ್ತಾಸೆ ಹೇಸಿ ಜೀವನದಾಸೆ
ಮೋಸ ಮಾಡದೆ ಎನ್ನ ಕಾಯೋ ಕೃಷ್ಣಾ
ಪಶುಪತಿ ಸಖ ನಿನ್ನ ಹಸನಾಗಿ ಭಜಿಪಾಸೆ
ವಸುಧೆಯೊಳು ಎನಗಿತ್ತು ಕಾಯೋ‌ ಕೃಷ್ಣಾ

ಊರೊಳಗೆ ವ್ಯಾಪಿಸಿಹ ಘೋರಾಂಧಕಾರವನು
ಪಾರುಗಾಣಿಸಿ ಎನ್ನ ಕಾಯೋ ಕೃಷ್ಣಾ
ಮೇರು ಬೆನ್ನಲಿ ಹೊತ್ತ ಸರಸಿಜೋದ್ಭವ ಜನಕ
ಭಾರವೇ ನಾ ನಿನಗೆ ಕಾಯೋ‌ ಕೃಷ್ಣಾ

ಅನ್ನ ವ್ಯಸನಕ್ಕಾಗಿ ಅನುದಿನವು ಯಾಚಿಸುತ
ಅನ್ಯರಾ ಮನೆ ದ್ವಾರ ಕಾಯ್ದೆ ಕೃಷ್ಣಾ
ದೀನ ರಕ್ಷಕ ನಿನ್ನ ತೋಂಡರೊಳಿರಿಸಯ್ಯ
ದಾನವಾಂತಕಾನಂದ ವಿಠಲ ಶ್ರೀ ಕೃಷ್ಣಾ

ತಂಪಿಳಿತು* – ಈ‌ ಶಬ್ದ ಸರಿಯಾಗಿ ಕೇಳಿಸಿಕೊಂಡೆನಾ ಅಂತ ಅನುಮಾನವೂ ಇದೆ!

Advertisements