ಅಪ್ಪಂದಿರ ದಿನಕ್ಕೆ

ದೊಡ್ಡವನಾದ ಮೇಲೆ ಏನಾಗ್ತೀಯ ಅಂತ ಯಾರಾದರೂ ಕೇಳಿದರೆ ನಮ್ಮಪ್ಪನಂತೆ ಲೆಕ್ಚರರ್ ಆಗ್ತೇನೆ ಅಂತ ಹೆಮ್ಮೆಯಿಂದ ಹೇಳ್ತಾ ಇದ್ದೆ. ಮುಂದೆ ಇಂಜಿನಿಯರಿಂಗ್ ಮಾಡಿ ಸಾಫ್ಟವೇರ್ ಕ(ಕು)ಟ್ಟುವ ಕೆಲಸ ಮಾಡುತ್ತಿದ್ದೇನಾದರೂ ಶಿಕ್ಷಕ ವೃತ್ತಿಯ ಬಗೆಗಿನ ಗೌರವಾದರಗಳು ನನ್ನಲ್ಲಿ ಇವತ್ತಿಗೂ ಇದ್ದರೆ ಅದಕ್ಕೆ ನನ್ನಪ್ಪನೇ ಕಾರಣ ಹಾಗೂ ಪ್ರೇರಣೆ. ಯಾವತ್ತೂ ಯಾವದನ್ನೂ ಅತಿಯಾಗಿ ನಮ್ಮ ಮೇಲೆ ಹೇರದೆ, ತಮ್ಮನ್ನು ನಮ್ಮ ಮೇಲೆ ಇಂಪೋಸ್ ಮಾಡದೇ ನಮ್ಮನ್ನು ಬೆಳೆಸಿದ ಅಪ್ಪ ಇಂಥದ್ದನ್ನು ಮಾಡಲೇ ಬೇಕು ಎಂದು ಕಟ್ಟು ನಿಟ್ಟು ಮಾಡಿದ್ದು ಇಲ್ಲವೇ ಇಲ್ಲ ಅನ್ನುವಷ್ಟು ಕಡಿಮೆ. ಯಾಕೆ ಕಟ್ಟು ನಿಟ್ಟಾಗಿ ಬೆಳೆಸಲಿಲ್ಲ ಎಂದು ಒಮ್ಮೊಮ್ಮೆ ಅನಿಸಿದರೂ ಅವರು ಹಾಗೆ ಬೆಳೆಸಿದ್ದರಿಂದಲೇ ನನಗಿವತ್ತು ಮುಕ್ತ ಮನಸ್ಸಿನ ಚಿಂತನೆ ಸಾಧ್ಯವಾಗಿದೆ ಎಂದು ಅನಿಸುವದೂ ಹೌದು.

ಫಿಸಿಕ್ಸ್ ಲೆಕ್ಚರರ್ ಆಗಿದ್ದ ಅಪ್ಪನಿಂದ ಕ್ಲಾಸ್ ರೂಮಿನಲ್ಲಿ ಫಿಸಿಕ್ಸ್ ಕಲಿತಿದ್ದೇನೆ. ಆದರೆ ಫಿಸಿಕ್ಸ್ ಕಲಿಸಿದ್ದಕ್ಕಿಂತ ಹೆಚ್ಚು ನನಪಿನಲ್ಲಿರುವದೊಂದಿದೆ. ಎಂಟೋ ಒಂಭತ್ತನೇಯದೋ ತರಗತಿಯಲ್ಲಿದ್ದಾಗಿನ ಮಾತು. ಅವತ್ತೊಂದು ಮುಂಜಾನೆ ಎದ್ದು ಪ್ರಶ್ನೋತ್ತರಗಳನ್ನು ಓದಿಕೊಳ್ಳುತ್ತಿದ್ದೆ. ಪಾಠಗಳ ಕೊನೆಯಲ್ಲಿದ್ದ ಪ್ರಶ್ನೋತ್ತರಗಳಿಗೆ ಶಾಲೆಯಲ್ಲಿ ಶಿಕ್ಷಕರು ಉತ್ತರ ಬರೆಸುವದೂ, ನಾವು ಅವುಗಳನ್ನ ಉರು ಹೊಡೆಯುವದೂ ಸಾಮಾನ್ಯವಾದ ಅಭ್ಯಾಸ. ಉರು ಹೊಡೆದದ್ದು ಮುಗಿಯಿತು ಅನಿಸಿ ಪುಸ್ತಕ ಮುಚ್ಚಿಡುತ್ತಿದ್ದಾಗ ಬಂದ ಅಪ್ಪ ಒಂದೆರಡು ಪ್ರಶ್ನೆ ಕೇಳಿದರೇನೋ, ಅದರ ನಂತರ ಹೇಳಿದ್ದು, ’ಪುಸ್ತಕ ಓದಬೇಕಪ್ಪ. ಬರೇ ಪ್ರಶ್ನೋತ್ತರ ಘಟ್ಟಿ ಮಾಡಿದರೇನ್ ಬರ್ತದ? ಪಾಠ ಓದಿದರ ಹೆಚ್ಚಿಗೆ ತಿಳೀತದ.’ ತಮಾಷೆಯೆಂದರೆ ಅವರು ಹಾಗೇ ಹೇಳಿದ್ದರಿಂದಲೇ ಪಾಠ ಓದಲು ಪ್ರಯತ್ನ ಪೂರ್ವಕವಾಗಿ ಶುರು ಮಾಡಿದೆನೆ ಅನ್ನುವದು ನೆನಪಿನಲ್ಲಿಲ್ಲವಾದರೂ, ಪ್ರಶ್ನೋತ್ತರಗಳನ್ನಷ್ಟೇ ಓದಿ ಓದಿದ್ದಾಯಿತು ಅಂತ ಅನಿಸುವ ಮನಸ್ಥಿತಿಯಿಂದ ಮುಕ್ತನಾದದ್ದು ಅಪ್ಪನ ಆ ಮಾತಿನಿಂದಲೇ ಅಂತ ಎಷ್ಟೋ ವರ್ಷಗಳ ನಂತರ ಮನವರಿಕೆಯಾಗಿದೆ. ಬಹುಷಃ ಅದಕ್ಕೇ ಆ ಮಾತು ಇವತ್ತಿಗೂ ನೆನಪಿನಲ್ಲಿದೆ. ಅದನ್ನ ಹೇಳಿದ್ದ ಅಪ್ಪನಿಗೇ ನೆನಪಿದೆಯೋ ಇಲ್ಲವೋ ಇವತ್ತು!

ಅಪ್ಪನ ಕೈ ಬರಹ ಬಹಳ ಚಂದ. ಬ್ಲಾಕ್ ಬೋರ್ಡಿನ ಮೇಲೆ ಮುತ್ತು ಪೋಣಿಸಿದಂತೆ ಸರಳ ರೇಖೆಯಲ್ಲಿ ಸಮಾನಾಂತರ ಸಾಲುಗಳಲ್ಲಿ ಬರೆಯುತ್ತಿದ್ದದ್ದು ಇವತ್ತಿಗೂ ನೆನಪಿದೆ. ಅವರ ಅಕ್ಷರಗಳನ್ನ ಅಷ್ಟು ಮೆಚ್ಚಿದರೂ ಅವನ್ನ, ಆ ರೀತಿ ಬರೆಯುವದನ್ನ ಕಲಿತದ್ದು ಕಡಿಮೆ. ಒಂದು ದಿನ ಅವರ ಅಕ್ಷರದಿಂದ ಪ್ರಭಾವಿತನಾದರೆ ಮರುದಿನ ಇನ್ನಾರದೋ ಅಕ್ಷರ ನೋಡಿ ಮೋಹಿತನಾಗುತ್ತಿದ್ದದ್ದು ನನ್ನ ಸ್ವಭಾವ. ಆಗಾಗ ಬದಲಾಗುತ್ತಲೇ ಇದ್ದ ನನ್ನ ಅಕ್ಷರಗಳನ್ನ ನೋಡಿ ಯಾವುದಾದರೂ ಒಂದನ್ನ ಸರಿಯಾಗಿ ಕಲಿ ಅಂತ ಹಲವು ಬಾರಿ ಹೇಳಿದ್ದರು. ಕಡೆಗೊಮ್ಮೆ ನನ್ನ ದೊಡ್ಡಪ್ಪನ ಮುಂದೆ ಅದನ್ನೇ ಹೇಳಿದಾಗ ಅಯಾಚಿತವಾಗಿ ದೊಡ್ಡಪ್ಪ ನನ್ನ ಕಡೆಗೆ ನಿಂತತೆ ’ಅವನ ಮನಸಿಗೆ ಬಂದಂತೆ ಬರೆಯಲಿ ಬಿಡು’ ಅಂತ ಹೇಳಿದ ಮೇಲೆ ಮತ್ತೆ ಅದರ ಬಗ್ಗೆ ಮಾತಾಡಿರಲಿಲ್ಲ. ಆದರೆ ಅಷ್ಟೋತ್ತಿಗಾಗಲೇ ನನಗೂ ಅವರಿವರ ಅಕ್ಷರ ಅನುಸರಿಸುವದು ಬೋರಾಗಿತ್ತೇನೋ, ಮುಂದೆ ಅಷ್ಟಾಗಿ ನಕಲು ಮಾಡಲು ಪ್ರಯತ್ನಿಸಿದ ನೆನಪಿಲ್ಲ. ಬರೆಯುವಾಗ ಕಾಟು ಹೊಡೆದು ಬರೆಯಬಾರದು ಎನ್ನುವ ಅವರ ನಿಯಮವನ್ನು ಮಾತ್ರ ಪಾಲಿಸಲು ಪ್ರಯತ್ನಿಸುತ್ತಿದ್ದೆ.

ಕ್ಯಾಲಿಫೋರ್ನಿಯಾದ ಬೀಚೊಂದರಲ್ಲಿ ಅಪ್ಪ ಅಮ್ಮ

ಕ್ಯಾಲಿಫೋರ್ನಿಯಾದ ಬೀಚೊಂದರಲ್ಲಿ ಅಪ್ಪ ಅಮ್ಮ

ಯಾವುದೋ ಸನ್ನಿವೇಶದಲ್ಲಿ ಅವರ ಮನಸ್ಸಿಗೆ ಬಾರದಿದ್ದದ್ದ ಯಾವುದೋ ವಿಷಯವನ್ನ ಎಲ್ಲರೂ ಮಾಡುತ್ತಾರೆ ಎನ್ನುವ ಕಾರಣ ಕೊಟ್ಟು ನೀವು ಮಾಡಬಹುದು ಎಂದು ಹೇಳ ಹೋದಾಗ ’ಎಲ್ಲಾರೂ ಮಾಡ್ತಾರ ಅಂತ ನಾನೂ ಯಾಕ ಮಾಡಬೇಕು?’ ಎಂದಿದ್ದನ್ನ ಎಂದೂ ಮರೆಯಲಾಗದು. ಎಷ್ಟೋ ಸಂದರ್ಭಗಳಲ್ಲಿ ನಾನು ಮಾಡಬೇಕಾದ್ದನ್ನ ಮಾಡಲು ನೆರವಾಗುವದು ಅದೇ ಮಾತು.

’ನಿಮ್ಮಪ್ಪ ಅಂದರೆ ನಮಗೆಲ್ಲ ಮೆಚ್ಚುಗೆ. ಯಾಕೆಂದರೆ ಅವರು ಎಲ್ಲರನ್ನೂ ಒಂದೇ ರೀತಿ ನೋಡುತ್ತಾರೆ, ಮಾತನಾಡಿಸುತ್ತಾರೆ. ಯಾರು ಎಷ್ಟು ಜಾಣರು, ಎಷ್ಟು ದಡ್ಡರು ಎನ್ನುವ ಅಳತೆಗೋಲಿಲ್ಲದೇ ಎಲ್ಲರೊಡನೆ ವರ್ತಿಸುತ್ತಾರೆ.’ ಬೇರೆ ಬೇರೆಯವರಿಂದ ಈ ಮಾತನ್ನ ಕೇಳಿದ್ದೇನೆ. ಜನರಲ್ಲಿ ಕುಂದು ಕೊರತೆಗಳು ಏನಿದ್ದರೂ ಇರುವ ಒಳ್ಳೆಯ ಗುಣಗಳನ್ನ ಗ್ರಹಿಸಲು ಪ್ರಯತ್ನಿಸಬೇಕು ಎನ್ನುವದರ ಬಗ್ಗೆ ಇತ್ತೀಚೆಗೆ ಅಪ್ಪ ಒಂದೆರಡು ಉದಾಹರಣೆಗಳನ್ನ ಕೊಟ್ಟು ಹೇಳಿದಾಗ ಅಪ್ಪನ ಈ ಸಹಜ ಸ್ವಭಾವವೇ ಅವರನ್ನ ಕಂಡರೆ ಇತರರಿಗೆ ಮೆಚ್ಚುಗೆಯಾಗುವಂತೆ ಮಾಡುತ್ತದೆ ಅನಿಸಿತು.

ಅಪ್ಪ ತನ್ನ ಕೆಲಸದ ಕಡೆಗೆ ತೊರುತ್ತಿದ್ದ ಶಿಸ್ತಿನ ಮುಖವನ್ನ ನಮಗೆ ಯಾಕೆ ಹೆಚ್ಚು ತೋರಿಸಲಿಲ್ಲ ಎನ್ನುವದೊಂದು ಕಂಪ್ಲೇಂಟಿತ್ತು ನನಗೆ. ಹೋದ ವರ್ಷ ಅವರಿಲ್ಲಿಗೆ ಬಂದಾಗ ಕೇಳಿದ್ದೆ. ಉತ್ತರ ಏನು ಹೇಳಿದರೋ ಪೂರ್ತಿ ನೆನಪಿಲ್ಲ ಆದರೆ ನೆನಪಿನಲ್ಲುಳಿದದ್ದು ’ಶಾಲೆಯ ಕೆಲಸವನ್ನ ಮನೆಗೆ ತರಬಾರದು ಎನ್ನುವದೊಂದು ನಿಯಮವನ್ನ ನಾನು ಪಾಲಿಸುತ್ತಿದ್ದೆ.’ ಬಹುಷಃ ಅದೇ ಕಾರಣವಿರಬೇಕು. ನಿತ್ಯ ಮನೆಯಿಂದ ಆಫೀಸಿಗೆ ಲಾಗಿನ್ನಾಗಿ, ಎಷ್ಟೋ ಸಲ ಹಗಲಿರುಳೂ ಮನೆಯಿಂದ ಕೆಲಸ ಮಾಡುವ ನನಗೆ ಅಂಥದ್ದೊಂದು ನಿಯಮವನ್ನ ಪಾಲಿಸಲು ಸಾಧ್ಯವಾಗುವದು ಅದೆಂದಿಗೋ. ಅಪ್ಪನ ಮೇಲಿದ್ದದ್ದು ಅದೊಂದೇ ಕಂಪ್ಲೇಂಟೇನೂ ಅಲ್ಲ. ಬೆಳೆಯುವಾಗ ಸ್ವಾಭಾವಿಕವಾಗಿ ಅಪ್ಪ ಯಾಕೆ ಹೀಗೆ, ಅವರು ಹೀಗೇಕೆ ಮಾಡಲಿಲ್ಲ, ಹಾಗೆ ಇರುತ್ತಿದ್ದರೆ ಚನ್ನಾಗಿತ್ತಲ್ಲ ಎಂದೆಲ್ಲ ಅನಿಸಿದೆ. ಆದರೆ ಈಗ ಹಿಂದಿರುಗಿ ನೋಡುವಾಗ ಅವೆಲ್ಲವುಗಳನ್ನೂ ಮೀರಿ ಅಪ್ಪ ತೋರಿಸಿದ ಕನ್ಸಿಸ್ಟೆನ್ಸಿ ಒದಗಿಸಿದ ವಾತಾವರಣದ ಬಗ್ಗೆ ಮೆಚ್ಚುಗೆಯಾಗುತ್ತದೆ ಹೆಮ್ಮೆಯಾಗುತ್ತದೆ.

ಅಪ್ಪನನ್ನು ನೋಡಿ, ಅವರ ಮಾತು ಕೇಳಿ ಕಲಿತ ಕೆಲವು ಪಾಠಗಳನ್ನ ಅಪ್ಪಂದಿರ ದಿನದಂದು ನೆನಪು ಮಾಡಿಕೊಳ್ಳುತ್ತ ಅವರಿಗೆ ಈ ಅಕ್ಷರ ನಮನ ಒಪ್ಪಿಸುವಾಗ ನನ್ನ ಮಗನೂ ನೆನಪಾಗುತ್ತಾನೆ. ಅಪ್ಪನಾಗಿ ಅವನ ಬಾಳಿಗೆ ಎಂತಹ ಬುನಾದಿ ಹಾಕಬಲ್ಲೆ ಎನ್ನುವ ಪ್ರಶ್ನೆ ಕಾಡುತ್ತದೆ. ನನ್ನಪ್ಪನನ್ನು ನೋಡಿ ನಾನು ಬಹಳಷ್ಟು ಕಲಿತಂತೆ ನನ್ನ ಮಗನೂ ಕಲಿಯುತ್ತಾನೆ. ಯಾವುದೇ ವಿಷಯದಲ್ಲಿ ನನ್ನಪ್ಪನಂತೆ ಕನ್ಸಿಸ್ಟೆನ್ಸಿ ನಾನು ತೋರಬಲ್ಲೆನೇ? ಮಾಡಬೇಕಾದ ಕೆಲಸಗಳನ್ನ ಕ್ಲುಪ್ತವಾಗಿ ಮಾಡುವದರ ಮೂಲಕ, ಅವುಗಳನ್ನ ಮಾಡುವಾಗ ಅಸ್ಪಷ್ಟ ಅಮೂರ್ತವಾಗೇ ಉಳಿದಿವೆ ಅನಿಸಿರುವ ಜೀವನದ ಮೌಲ್ಯಗಳನ್ನ ಒರೆಗೆ ಹಚ್ಚಿ ಮೂರ್ತವನ್ನಾಗಿಸಬಲ್ಲೆನೇ? ಸ್ಪಷ್ಟತೆಯಿಂದ ಮಾತ್ರ ಸರಳತೆ ಸಾಧ್ಯವಾಗುವದಲ್ಲವೆ? ಈ ಪ್ರಶ್ನೆಗಳಿಗೆ ಉತ್ತರವನ್ನ ಮುಂಬರುವ ದಿನಗಳಲ್ಲಿ ಕಂಡುಕೊಳ್ಳಬಹುದಷ್ಟೆ, ಈಗ ಹೀಗೆ ಎಂದು ಹೇಳಲಾಗದು.

Advertisements