ಐ ದೇವರ ತೇರು!

“ಜೈ ದೇವ ಜೈ ದೇವ ಜೈ ಮಂಗಳ ಮೂರ್ತಿ…” ಸುಶ್ರಾವ್ಯವಾದ ಸಾಮೂಹಿಕ ಗಾನ ಕೇಳಿಸ್ತಾ ಇತ್ತು. ಜೊತೆಗೆ ಭಜನೆಯ ವಾದ್ಯಗಳು, ತಾಳ-ತಂಬೂರಿಗಳ ನಾದ, ಚಪ್ಪಾಳೆಯಿಡುವ ಸದ್ದು, ನರ್ತನ ಮಾಡುತ್ತ ಭಜನೆ ಮಾಡುತ್ತಿರುವಂತೆ ಗೆಜ್ಜೆಯ ಸದ್ದುಗಳೆಲ್ಲ ತೇಲಿ ಬಂದು ಮನಸ್ಸು ಪ್ರಸನ್ನವಾಯಿತು. ಯಾರಪ್ಪ ಇಲ್ಲಿ ಭಜನೆ ನಡೆಸ್ತಾ ಇರೋವ್ರು ಅಂತ ಅಲ್ಲೇ ಸ್ವಲ್ಪ ದೂರ ಹೆಜ್ಜೆ ಹಾಕಿದ್ರೆ ಒಂದು ಗುಂಪು ರಥೋತ್ಸವ ನಡೆಸ್ತಾ ಇತ್ತು. ಭಕ್ತಿಯಿಂದ ರಥ ಎಳಿತಾ ಇದ್ದಾರೆ, ರಥದ ಮುಂದೆ ಗುಂಪಾಗಿ  ಭಜನೆ ಮಾಡ್ತಾ ಇದ್ದಾರೆ. ಹರ್ಷೋಲ್ಲಾಸದಿಂದ ರಥವನ್ನ ಎಳೀತಾ ಇದ್ದಾರೆ. ಆಗಾಗ ರಥ ನಿಲ್ಲಿಸ್ತಾ ಆರತಿ ಎತ್ತತಾ ಇದ್ದಾರೆ. ‘ಓಹ್ ಇಲ್ಲೇನೂ ನಡೀತಾ ಇದೆ ನೋಡೋಣ, ದೇವರ ಸೇವೆ ಸ್ವಲ್ಪ ನಾನೂ ಮಾಡಬಹುದು’ ಅಂದುಕೊಂಡು ಹತ್ತಿರ ಹೋದೆ.

ಏನಾಶ್ಚರ್ಯ! ಹತ್ತಿರ ಹೋಗಿ ನೋಡಿದ್ರೆ, ಅಲ್ಲಿನ ಗುಂಪಿನಲ್ಲಿ ಇರೋವ್ರ ಹತ್ತಿರ ಯಾವುದೇ ತಾಳ, ತಂಬೂರಿ ಇಲ್ಲ! ಆದ್ರೂ ಸಂಗೀತ ಬರ್ತಾ ಇದೆ! ಇದೇನು ರಥದಲ್ಲೇ ಮ್ಯೂಸಿಕ್ ಸಿಸ್ಟೆಮ್ ಇಟ್ಕೊಂಡಿದಾರ ಅಂದ್ಕೋತಾ ಇನ್ನಷ್ಟು ಹತ್ತಿರ ಹೋಗಿ ನೋಡಿದ್ರೆ ಏನು ಮಜಾ ಅಂತೀರಿ.. ಕೆಲವರು ಅಂಗೈಗೆ ಐ-ಫೋನು ಕಟ್ಕೊಂಡಿದ್ದಾರೆ, ಕೆಲವರು ಕಾಲಿಗೆ, ಕೆಲವರು ಅದಕ್ಕೊಂದು ದಾರ ಹಾಕಿ ಕೊರಳಿಗೆ ಹಾಕ್ಕೊಂಡಿದ್ದಾರೆ. ಒಬ್ಬ ಅದಕ್ಕೆ ಇನ್ನೊಂದೇನೋ ಅಟ್ಯಾಚ್ ಮಾಡಿ ತುಟಿಗೇ ಇಟ್ಕೋಂಡಿದ್ದಾನೆ! ಇವರ ತಾಳ, ತಂಬೂರಿ, ಗೆಜ್ಜೆ, ಕೊಳಲು ಇತ್ಯಾದಿ ಎಲ್ಲ ಸದ್ದು ಐ-ಫೋನಿಂದಾನೇ ಬರ್ತಿದೆ! ಓಹ್ ಇದೇನಿದು ಇಷ್ಟೋಂದು ಇನ್ನೋವೇಟಿವ್ ಆಗಿದೆಯಲ್ಲ ಗುಂಪಿದು ಅಂತ ಇನ್ನಷ್ಟು ಹತ್ತಿರ ಹೋಗ್ತಿದ್ದಂತೆ ಹಾಡು ಇನ್ನೂ ಸ್ಪಷ್ಟವಾಗಿ ಕಿವಿಗೆ ಬಿತ್ತು..

ಐ ದೇವ ಐ ದೇವ ಐ ಮಂಗಳ ಮೂರ್ತಿ
ಐದೋರೋ ಐ ದೇವ ಐಚಕ್ರವರ್ತಿ

ಹ್ಮ.. ಇದೇನು ತಮಾಷೆಯಾಗಿದೆಯಲ್ಲ? ಇವರನ್ನ ನೋಡಿದ್ರೆ ತಮಾಷೆ ಮಾಡ್ತಿದ್ದಂತೇನೂ ಕಾಣಿಸ್ತಾ ಇಲ್ಲ ಅಂತ ಇನ್ನಷ್ಟು ಹತ್ರ ಹೋಗೋಷ್ಟ್ರಲ್ಲಿ.. ಅರೇ ಇದೇನು ರಘು ಕಾಣಿಸ್ತಾ ಇದ್ದಾರೆ ಅಂತ ಹತ್ರ ಹೊದೆ. ಅಷ್ಟರಲ್ಲಿ ಅವರೆ ಹಾಯ್ ಹೇಳಿದ್ರು.. ‘ಬನ್ನಿ ಅನಿಲ್ ಹೇಗಿದ್ದೀರಾ? ಐ-ಫೋನಿದ್ಯಾ? ನೀವೂ ಭಜನೆಗೆ join ಆಗಬಹುದು’ ಅಂದರು. ನಾನು, ‘ಇಲ್ಲಾ.. ನಂದು ಆಂಡ್ತ್ರೂಯ್ಡ್ ಅಂತ ರಾಗ ತೆಗೆದೆ.’ ಅವರು ‘ಓಹ್ ಇರ್ಲಿ ಪರ್ವಾಗಿಲ್ಲ ತೋರ್ಸಿ ಇಲ್ಲಿ’  ಅನ್ನುತ್ತಲೇ  ಹಾಡು ಮುಂದುವರಿಸಿದ್ರು..

ಐಫೋನಲಿ ಐಯ್ಯಾಗಿ ಅಂಡ್ರ್ಯಾಯ್ಡಲು ನೀನಾಗಿ
ಐಪ್ಯಾಡು ನೆಕ್ಸಸ್ಸಿನಲೈದುಂಬಿದೆ ವಯಿನಾಗಿ

ಹಾಗೇ ಹಾಡು ಹಾಡ್ತಾನೇ ಅವರ ಐಫೋನಿಂದ ನನ್ನ ಎಸ್-೩ ಮುಟ್ಟಿದರು.. ಏನಾಶ್ಚರ್ಯ! ಸೊಗಸಾದ ಚಿತ್ರಪಟವೊಂದು ನನ್ನ ಫೋನಿಗೆ ಬಂದುಬಿಟ್ಟಿತು! ಯಾರ ಚಿತ್ರ ಇದು ಅಂತ ಆಶ್ಚರ್ಯವಾಗಿ ರಘುಗೆ ಕೇಳಿದೆ, ‘ಏನ್ ಚಿತ್ರಾರೀ ಇದು ರಘು?’ ಅಂತ ಕೇಳಿದ್ರೆ, ಹಂಗೇ ಒಂದು ಸ್ಮೈಲ್ ಕೊಟ್ಟು ಮತ್ತೆ ಹಾಡು ಮುಂದುವರಿಸ್ತಾ ಹೆಜ್ಜೆ ಹಾಕತೊಡಗಿದರು, ಐ-ತಾಳ ಹಾಕ್ತ..

ಐದೋರಿ ನೀ ಕಾಯ್ದೆ ಆಪಲ್ಲನು ಹಿಂದೆ
ಐದಿಸಿದೆ ಆಂಡ್ರೊಯ್ಡನು ಗೂಗಲ್ಲಿಗೆ ತಂದೆ

ಉಫ್.. ಏನಪ್ಪ ಇದೆಲ್ಲ? ಡಾಟ್ ಕಾಮ್ ಬಸ್ಟ್ ಆಗೋ ಮೊದ್ಲು ಒಂದಷ್ಟು ಸ್ಟಾರ್ಟಪ್ ಶುರುವಾಗಿದ್ವು, “ನೀವು ಪ್ರಪಂಚದ ಯಾವುದೇ ಮೂಲೆಯಿಂದ, ಭಾರತದ ಯಾವುದೇ ದೇವರಿಗೆ ಬೇಕಾದ್ರೂ ಪೂಜೆ ಮಾಡಿಸಿ! ನಮ್ಮ ವೆಬ್ಸೈಟಲ್ಲಿ ಒಂದು ಮನವಿ ಕಳಿಸಿ, ನಿಮ್ಮ ಕ್ರೆಡಿಟ್ ಕಾರ್ಡ್ ಬಳಸಿ, ಆ ದೇವರಿಗೆ ಪೂಜೆ ಮಾಡ್ಸಿ ಪ್ರಸಾದ ಕಳಿಸ್ತೀವಿ” ಅಂತ. ಇದು ಅದರ ಅಡ್ವಾನ್ಸ್ ಸ್ಟೇಜಾ ಮತ್ತೆ.. ಅಂತಾ ಯೋಚ್ನೆ ಮಾಡ್ತಿರಬೇಕಾದ್ರೆ ಭಜನೆ ಮಾಡೋವ್ರು ನಿಂತ್ಕೊಂಡ್ರು, ರಥಾನೂ ನಿಂತಿತು.

ಆವಾಗ್ಲೇ ನೋಡಿದ್ದು ನಾನು ರಥದ ಕಡೆಗೆ.. ಅದರಲ್ಲೇನಿದೆ? ಒಂದು ದೊಡ್ಡ ಸೈಝಿನ ಐ-ಪ್ಯಾಡು.. ಅದರಲ್ಲಿ ನನ್ನ ಫೋನಲ್ಲಿ ರಘು ಹಾಕಿದಂತಾದ್ದೇ ಒಂದು ಪಟ. ಮಿಂಚತಾ ಇದೆ.. ಭಕ್ತಿ ಬರೋ ತರಹಾ ಇದೆ.. ಅಷ್ಟೋತ್ತಿಗೆ ಅಲ್ಲಿ ರಥದಲ್ಲಿ ಕುಳಿತಿದ್ದ ಅರ್ಚಕರು ಕೈಯಲ್ಲಿಯ ಐ-ಗಂಟೆ ಬಾರಿಸಿದರು (ಐ-ಫೋನನ್ನ ಗಂಟೆಯಂತೆ ಅಲ್ಲಾಡಿಸಿ ಗಂಟೆಯ ಸದ್ದು ಬರಿಸಿದರು ಅಂತ ಪ್ರತ್ಯೇಕವಾಗಿಯೇನೂ ಹೇಳ್ಬೇಕಿಲ್ಲ ಅಲ್ವಾ?). ಭಕ್ತಾದಿಗಳೆಲ್ಲ ಹಾಡ್ತಾ ಇದ್ರು..

ಐಸಿರಿಗೆ ಮರುಳಾಗಿ ಐರೂಪಕೆ ಬೆರಗಾಗಿ
eyes ಅರಳಿ ಕಾತರಿಸಿವೆ ನೀ ದಯತೋರೊ

ಐರೂಪವ ತೋರೊ ಐನೋಟವ ಬೀರೊ
ಐರನಿಯೆನಿಸದೆ ಬಾರೋ ಐದಾಸನ ಕಾಯೊ

ಐ ದೇವ ಐ ದೇವ ಐ ಮಂಗಳ ಮೂರ್ತಿ…

ಹಾಗೇ ಹಾಡ್ತಿರಬೇಕಾದ್ರೆ ಅರ್ಚಕರು ಐ-ಆರತಿ ಮಾಡಿದರು. ಆರತೀ ಮುಗೀತಿದ್ದಂತೆ ಎಲ್ಲಾರ ಕಡೆ ‘ಆರತಿ ತೊಗೊಳ್ಳಿ’ ಅಂತ ಅವರ ಐಫೋನ್ ತೋರ್ಸಿದ್ರು. ಎಲ್ಲರೂ ತಮ್ಮ ಐ-ಫೋನ್ ಅವರ ಕಡೆ ತೋರಿಸಿದ್ರು.. ನನಗೇ ಗೊತ್ತಿಲ್ದೆ ನಾನೂ ತೋರಿಸ್ದೆ.. ಏನಾಶ್ಚರ್ಯ! ಅದರಲ್ಲಿ ಅದೇ ಐ-ಆರತಿ, ನನ್ನ ಆಂಡ್ರೋಯ್ಡಿನಲ್ಲೂ ಬಂದಿದೆ! ಎಲ್ಲಾರೂ ಆರತಿಯನ್ನ ತೆಗೆದುಕೊಂಡು ಕಣ್ಣಿಗೊತ್ತಿಕೊಂಡರು. ‘ಆಷ್ಚರ್ಯವತ್ ಪಶ್ಯಂತಿ..’ ಅಂದ್ಕೊಳ್ತಾ ನಾನೂ ಕಣ್ಣಿಗೊತ್ತಿಕೊಂಡೆ!

ಸ್ವಲ್ಪ ಹೊತ್ತಿಗೇ ರಥೋತ್ಸವ ಮುಗೀತು. ಮುಂದೇನು ಅಂತ ನೋಡ್ತಿದ್ದಾಗ ರಘು ಮತ್ತೆ ಹತ್ತಿರ ಬಂದು ಹೇಳಿದ್ರು. ಈಗ ಉತ್ಸವ ಮೂರ್ತಿನ ಒಳಗೆ ತೊಗೊಂಡು ಹೋಗಬೇಕು.. ಆದ್ರೆ ಇದು ಬೇರೆ ಮೂರ್ತಿ ತೆಗೆದುಕೊಂಡು ಹೋದಂತಲ್ಲ.. ಈಗ ರಥದಲ್ಲಿರೋ ಐ-ಪ್ಯಾಡಿಂದ ಅದರಲ್ಲಿರೋ ಪಟನ ಅರ್ಚಕರು ತಮ್ಮ ಐ-ಫೋನಿಗೆ ಕಳಾಕರ್ಷಿಸಿಕೊಳ್ತಾರೆ, ಅವರು ಅಲ್ಲಿಂದ ಹೊರಟು ಒಳಗೆ ಹೋಗ್ತಾ ಹೋಗ್ತಾ ಬೇರೆ ಭಕ್ತರ ಫೋನಿಗೆ ಹಾಕ್ತಾ ಹೋಗ್ತಾರೆ. ನೀವು ಇಲ್ಲೇ ನನ್ನ ಜೊತೇನೇ ಇರಿ, ನನಗೆ ಹೆಂಗಿದ್ರೂ ಸಿಗುತ್ತೆ. ನನ್ನ ಫೋನಿಗೆ ಬಂದ ಕೂಡ್ಲೆ ನಿಮಗೆ ಕೊಡ್ತೀನಿ.. ಆದ್ರೆ ಸ್ವಲ್ಪ ಹುಷಾರು.. ‘ಒಮ್ಮೊಮ್ಮೆ ಅದನ್ನ ಟ್ರಾನ್ಸ್ಫರ್ ಮಾಡ್ತಿದ್ದಂತೆ ಏನೇನೂ ಚಮತ್ಕಾರ ಆಗಿಬಿಡುತ್ತೆ ಅಂತಾರೆ’ ಅಂದರು. ನೋಡೊಣ ಅಂತ ಅವರ ಜೊತೆಗೇ ಇದ್ದೆ. ರಘು ಟರ್ನ್ ಬಂದು ಸ್ವಲ್ಪ ಹೊತ್ತಿಗೆ ಅವರು, ಅನಿಲ್ ಎಲ್ಲಿ ಫೋನ್ ತೋರ್ಸಿ ಅಂದರು. ನಾನು ಸ್ವಲ್ಪ ಅಳುಕುತ್ತಾ ಫೋನ್ ಹಿಡ್ದೆ.

ಅವರು ತೊಗೊಳ್ಳಿ ಅಂದದ್ದೊಂದೆ ನೆನಪು. ಮೈಯೆಲ್ಲ ಬೆವತ ಹಾಗಾಗಿ ಬಿಟ್ಟಿತ್ತು, ಎದೆ ಡವ ಡವ ಅಂತಿತ್ತು, ಬಾಯಿ ಪಸೆ ಆರಿ ಹೋಗಿತ್ತು.. ಏನಾಯ್ತಪ್ಪ ಅಂತ ನೋಡಿದ್ರೆ ನನ್ನ ಮನೇಲಿ, ರಾಕಿಂಗ್ ಚೇರಲ್ಲಿದ್ದೀನಿ! ತೊಡೆ ಮೇಲೆ ಲ್ಯಾಪ್ ಟಾಪಿದೆ. ಎಲ್ಲಾ ಅಯೋಮಯ!

ಏನಪ್ಪ ಇದು ಅಂತ ಯೋಚ್ನೆ ಮಾಡಿದ್ರೆ ನೆನಪಾಯ್ತು.. ಫೈನಾನ್ಸಿಯಲ್ ಟೈಮ್ಸಿನಲ್ಲಿ ‘ಏಪ್ರಿಲ್ ಡೆಂಬೋಸ್ಕಿ’ ಬರೆದ ‘ Valley of God’ ಓದ್ತಾ ಇದ್ದದ್ದು ನೆನಪಾಯ್ತು. ಸಿಲಿಕಾನ್ ವ್ಯಾಲೀಲಿ ದೇವರ ನಂಬೋವ್ರು ಎಷ್ಟು ಜನಾ ಇದಾರೆ, ಚರ್ಚಿಗೆ, ಗುಡಿಗೆ ಹೋದಾಗ ಫೋನಲ್ಲಿ ‘ಚೆಕ್ ಇನ್’ ಮಾಡ್ತಾರೆ.. ಅದೇ ಫೋನಲ್ಲೇ ಬೈಬಲ್ ಆಪ್ಸ್ ಇನ್ಸ್ಟಾಲ್ ಮಾಡಿಕೊಂಡು ಪಾದ್ರಿ ಬೈಬಲ್ ಹೇಳ್ತಿರಬೇಕಾದ್ರೆ ಅದರಲ್ಲೇ ಓದ್ತಾರೆ ಅಂತೆಲ್ಲ ಇದ್ದದ್ದನ್ನ ಓದಿ ಮೊದಲಿಗೆ ಸ್ವಲ್ಪ ಆಶ್ಚರ್ಯಪಟ್ಟು ಆಮೇಲೆ ನಂಬಿದ ದೇವರ ಕೆಲಸಕ್ಕೆ ಉಪಯೋಗವಾಗದೇ ಇದ್ದರೆ ನಾವು ಬಳಸುವ ಟೆಕ್ನಾಲಜಿಯ ಸಾರ್ಥಕತೆಯಾದರೂ ಏನು ಅಂತ ಯೋಚಿಸ್ತಾ ಇದ್ದವನು ಹಾಗೇ ಮುಂದುವರಿದು ನಾವು ಎಷ್ಟೇ ಟೆಕ್ನಾಲಜಿನ ಬಳಸಿದ್ರೂ, ಅದರಲ್ಲಿ ನಾವು ನಂಬಿದ ದೇವರನ್ನ, ದೇವರ ಪುಸ್ತಕಗಳನ್ನ ಇರಿಸಿಕೊಂಡರೂ, ಈ ಟೆಕ್ನಾಲಜಿಯ ಪ್ರೊಡಕ್ಟುಗಳನ್ನ ದೇವರಿಗೆ ಬಳಕೆಗೆ ಅರ್ಪಿಸುವದಿಲ್ಲವಲ್ಲ ಅಂತ ಯೋಚಿಸ್ತಾ ಇದ್ದೆ. ಅದೇ ಕಾರಣಕ್ಕೆ ನಮ್ಮ ದೇವರ ಪಟಗಳಲ್ಲಿ ನಾವು ಪ್ಯಾಂಟು, ಶರಟು ಹಾಕಿಕೊಂಡು, ಗನ್ನು ರಾಕೆಟ್ ಲಾಂಚರುಗಳನ್ನ ಹಿಡಿದ ದೇವರನ್ನ ಕಾಣೋಲ್ಲ. ಪೀತಾಂಬರವನ್ನುಟ್ಟ ದೇವರನ್ನೇ ಕಾಣ ಬಯಸ್ತೀವಿ ಅಂತೆಲ್ಲ ಯೋಚನೆ ಮಾಡ್ತಾ ಹಾಗೇ ನಿದ್ದೆಗೆ ಜಾರಿಬಿಟ್ಟಿದ್ದೆ..

‘ಅಬ್ಬ! ಇದು ಕನಸು ಹಂಗಾರೆ.. ಬದುಕಿದೆ.. ಇನ್ನೂ ಪ್ರಪಂಚ ಅಷ್ಟೊಂದು ಬದಲಾವಣೆ ಆಗಿಲ್ಲ..” ಅಂತ ತೊಡೆ ಮೇಲಿನ ಲ್ಯಾಪ್ ಟಾಪ್ ಸರಿಸಿಟ್ಟು ಮೇಲೆದ್ದು ನೀರು ಕುಡಿದೆ. ಹಾಗೇ ಮತ್ತೆ ರಾಕಿಂಗ್ ಚೇರ್ ಕಡೆ ಬರ್ತಿದ್ದವನಿಗೆ ನನ್ನ ಫೋನ್ ಕಾಣಿಸಿತು. ಅಭ್ಯಾಸಬಲದಿಂದ ಫೋನ್ ಕೈಗೆತ್ತಿಕೊಂಡು ಅದರ ಲಾಕ್ ಸ್ಕ್ರೀನನ್ನ ಸ್ವೈಪ್ ಮಾಡಿ ಅನ್ ಲಾಕ್ ಮಾಡ್ತಿದ್ದಂಗೆ.. “ಹಾ ಇದೇನು, ಐ ದೇವ್ರ ಪಟ.. ಹಿನ್ನೆಲೆಯಲ್ಲಿ ನಿಧಾನಕ್ಕೆ ಬರ್ತಾ ಇದೇ ಅದೇ ಹಾಡು..”

 

ಐ ದೇವ ಐ ದೇವ ಐ ಮಂಗಳ ಮೂರ್ತಿ
ಐದೋರೋ ಐದೊರೆಯೆ ಐಚಕ್ರವರ್ತಿ

ಐಫೋನಲಿ ಐಯ್ಯಾಗಿ ಅಂಡ್ರ್ಯಾಯ್ಡಲು ನೀನಾಗಿ
ಐಪ್ಯಾಡು ನೆಕ್ಸಸ್ಸಿನಲೈದುಂಬಿದೆ ವಯಿನಾಗಿ

ಐದೋರಿ ನೀ ಕಾಯ್ದೆ ಆಪಲ್ಲನು ಹಿಂದೆ
ಐದಿಸಿದೆ  ಆಂಡ್ರೊಯ್ಡನು ಗೂಗಲ್ಲಿಗೆ ತಂದೆ

ಐಸಿರಿಗೆ ಮರುಳಾಗಿ ಐರೂಪಕೆ ಬೆರಗಾಗಿ
eyes ಅರಳಿ ಕಾತರಿಸಿವೆ ನೀ ದಯತೋರೊ

ಐರೂಪವ ತೋರೊ ಐನೋಟವ ಬೀರೊ
ಐರನಿಯೆನಿಸದೆ ಬಾರೊ ಐದಾಸನ ಕಾಯೊ

ಐ ದೇವ ಐ ದೇವ ಐ ಮಂಗಳ ಮೂರ್ತಿ…

(ವಾಕ್ಪಟುಗಳು ಟೋಸ್ಟ್ ಮಾಸ್ಟರ್ಸ್ ಕ್ಲಬ್ಬಿನ ‘ಹಾಸ್ಯ ಭಾಷಣ’ ಸ್ಪರ್ಧೆಯಲ್ಲಿ ಮಾಡಿದ ಭಾಷಣ)

ಚಿತ್ರಃ ಹ್ಯಾಮಿಲ್ಟನ್ ಬೆಟ್ಟದ ಮೇಲಿಂದ ಕಂಡ ಸೂರ್ಯಾಸ್ತದ ಚಿತ್ರವನ್ನ ನಾನೇ ತೆಗೆದದ್ದು. ಆ ಸೂರ್ಯನ ಮೇಲೇ ಈ ತರಹದ ‘i’ ಒಂದನ್ನ ಬರೆದದ್ದೂ ನಾನೇ.

Advertisements