ರಾಮನೆಂದರೆ ನೆನಪಾಗುವದು…

ರಾಮನೆಂದರೆ ನೆನಪಾಗುವವು ಪುರಂದರ ದಾಸರ ಶರಣು ಸಕಲೋದ್ಧಾರ ಪದದ ಸಾಲುಗಳು,
ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ
ಆವ ದೇವರಿಗುಂಟು ಬ್ರಹ್ಮಾಂಡದೊಳಗೆ

ಹಾಗೂ,

ಭಾವ ಶುದ್ಧಿಯಲಿ ನೆನೆವ ತನ್ನ ಭಕುತರ ಪೊರೆವ
ಪುರಂದರ ವಿಠಲನೇ ಅಯೋಧ್ಯಾ ರಾಮ

ರಾಮನೆಂದರೆ ನೆನಪಾಗುವದು,
ಹಿಂದೆ ಯಾವಾಗಲೋ ತರಂಗದಲ್ಲಿ ಆರ್ ಗಣೇಶ್ ಬರೆದ ರಾಮನ ಬಗೆಗಿನ ಬರಹದಲ್ಲಿ ಉಲ್ಲೇಖಿಸಿದ್ದ, ‘ಸ್ಮಿತಪೂರ್ವಭಾಷಿ’, ‘ಅಕ್ಲಿಷ್ಟ ಕರ್ಮಣಃ’ ಹಾಗೂ ‘ಅಪರಿಗ್ರಹ’. ನಗುಮೊಗದಿಂದ ತಾನೇ ಮೊದಲು ಮಾತನಾಡಿಸುವ, ಯಾವ ಕೆಲಸವನ್ನೇ ಆದರೂ ಹೂವು ಎತ್ತಿಟ್ಟಂತೆ ಸರಳವಾಗಿ ಮಾಡುವ ಅಕ್ಲಿಷ್ಟಕರ್ಮನಾದ ಹಾಗೂ ಎಂದೂ ಪರರ ವಸ್ತುವನ್ನು ಬಯಸದ, ತೆಗೆದುಕೊಳ್ಳದ ಆದರ್ಶ ವ್ಯಕ್ತಿ ರಾಮ.

ರಾಮನೆಂದರೆ ನೆನಪಾಗುವದು,
‘ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯ ಅಕ್ಲಿಷ್ಟಕರ್ಮಣಃ’ ಎಂದು ಲಂಕೆಯ ಹೆಬ್ಬಾಗಿಲ ಮೇಲೆ ನಿಂತು ಘೋಷಿಸಿದ ಹನುಮಂತನ ಮಾತು. ಹರಿದಾಸರುಗಳಿಗೆ ಹಾದಿ ತೋರಿದ ಮಾತು.

ರಾಮನೆಂದರೆ ನೆನಪಾಗುವದು ಶ್ರೀ ಮಧ್ವಾಚಾರ್ಯರ ದ್ವಾದಶಸ್ತೋತ್ರದ ‘ವಂದೇ ವಂದ್ಯಮ್ ಸದಾನಂದಮ್’ ಸ್ತುತಿಯ ರಾಮ ಸ್ಮರಣೆ,
ಸ್ಮರಾಮಿ ಭವ ಸಂತಾಪ ಹಾನಿದಾಮೃತಸಾಗರಮ್
ಪೋರ್ಣಾನಂದಸ್ಯ ರಾಮಸ್ಯ ಸಾನುರಾಗವಲೋಕನಮ್

ರಾಮನೆಂದರೆ ನೆನಪಾಗುವದು,
ಶ್ರೀ ವಾದಿರಾಜರ ಲಕ್ಷ್ಮೀ ಶೋಭನ ಪದದಲ್ಲಿ ಹರಿಯ ಸರ್ವೋತ್ತಮತ್ವವನ್ನು ಸಿದ್ಧಪಡಿಸಿ, ಅವನೇ ತನಗೆ ಅನುರೂಪನಾದ ವರ ಎಂದು ನಿರ್ಧರಿಸಿದ ಲಕ್ಷ್ಮಿ ಅಜಿತ ನಾಮಕ ಹರಿಯ ಬಳಿಗೆ ಹೋಗಿ ಅವನ ಕೊರಳಿಗೆ ಮಾಲೆ ಹಾಕುವುದನ್ನು ಹೇಳುವ ಸಂದರ್ಭದಲ್ಲಿ ಬಳಸಿದ ಪದ್ಯ,

ಇಂತು ಚಿಂತಿಸಿ ರಮೆ ಸಂತ ರಾಮನ ಪದವ
ಸಂತೋಷ ಮನದಿ ನೆನೆವುತ್ತ
ಸಂತೋಷ ಮನದಿ ನೆನೆವುತ್ತ ತನ್ನ ಶ್ರೀ
ಕಾಂತನಿದ್ದೆಡೆಗೆ ನಡೆದಳು ||

ಲಕ್ಷ್ಮಿಗೆ ಅನುರೂಪನಾದವನು ನಾರಾಯಣನಾದರೆ ಅವನಿಗೆ ಅನುರೂಪಳಾದವಳು ಲಕ್ಷ್ಮಿಯೋಬ್ಬಳೇ ಎಂಬುದನ್ನು ಸೋಚಿಸುವದಕ್ಕೇನೇ ಅಲ್ಲಿ ‘ನಿನ್ನನ್ನು ಬಿಟ್ಟು ಇನ್ನೊಬ್ಬಳನ್ನು ಕಣ್ಣೆತ್ತಿಯೂ ನೋಡುವುದಿಲ್ಲ’ ಎಂದು ಸೀತೆಗೆ ಮಾತು ಕೊಟ್ಟ ‘ಸಂತ ರಾಮನ’ ಮೂಲಕ  ಸೀತಾ ರಾಮರನ್ನು ಸೂಚಿರುವರು ಎಂದು ನನಗನಿಸುತ್ತದೆ.

ರಾಮನೆಂದರೆ ನೆನಪಾಗುವದು ರಾಮ ರಕ್ಷಾ ಸ್ತೋತ್ರದ ನುಡಿ,
ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇ ತು ಜನಕಾತ್ಮಜಾ
ಪುರತೋ ಮಾರುತೀರ್ಯಸ್ಯ ತಂ ವಂದೇ ರಘುನಂದನಂ

ರಾಮನೆಂದರೆ, ವಿಶೇಷವಾಗಿ ರಾಮನವಮಿಯೆಂದರೆ ನೆನಪಾಗುವ ಇನ್ನೊಂದು ಹಾಡು ಕನಕದಾಸರು ರಚಿಸಿದ,  “ಅಂಗಳದೊಳು ರಾಮನಾಡಿದ ಚಂದ್ರ ಬೇಕೆಂದು ತಾ ಹಟ ಮಾಡಿದಾ”..

ರಾಮನವಮಿಯೆಂದರೆ ನೆನಪಾಗುವದು ಅಡಿಗರ ಹುತ್ತಗಟ್ಟಿದ ಚಿತ್ತ ಕೆತ್ತಿದ ಪುರುಷೋತ್ತಮನ ಚಿತ್ರ, ಪಾನಕ ಪನಿವಾರಗಳೊಂದಿಗೆ ಬೆಂಕಿಯುಗುಳುವ ರಾಕೆಟ್ಟು, ಸುಟ್ಟಲ್ಲದೇ ಮುಟ್ಟೆನೆಂಬ ಉಡಾಫೆಯೆನ್ನುವ ರಾಮನವಮಿಯ ದಿವಸಕ್ಕೆ ಕವನವೂ ಕೂಡ.

    *****

ಇತ್ತೀಚೆಗಷ್ಟೇ ಅಷ್ಟಿಷ್ಟು ಕಲಿತಿರುವ ಮಲ್ಲಿಕಾ ಮಾಲೆಯೆಂಬ ಅಕ್ಷರ ವೃತ್ತದಲ್ಲಿ ರಾಮನ ಬಗ್ಗೆ ನೆನಪಿಗೆ ಬರುವ ಕೆಲವು ಮಾತುಗಳನ್ನು ಬಳಸಿ ನಾಲ್ಕು ಸಾಲುಗಳನ್ನು ರಚಿಸಬೇಕು ಅನಿಸಿ ಪ್ರಯತ್ನಿಸಿದಾಗ ಬಂದವು ಈ ಕೆಳಗಿನ ಸಾಲುಗಳು. ಶ್ರೀ ರಾಮಚಂದ್ರನಿಗೆ ಅರ್ಪಿತವು. ರಾಮನವಮಿಯ ಶುಭಾಶಯಗಳು ಎಲ್ಲರಿಗೂ.

ರಾಮಚಂದ್ರನೆ ಚೆಲ್ವ ಮೂರ್ತಿಯೆ ಪಾದ ಪದ್ಮಕೆ ವಂದಿಪೆ
ರಾಮ ನಿನ್ನಯ ನಾಮ ಪೇಳುವೆ ಭಾವ ಶುದ್ಧಿಯ ಬೇಡುವೆ

ರಾಮ ಹೇ ಭವ ತಾಪಹಾರಿಯೆ ಹೇ ಸುಧಾಂಬುಧಿ ದೇವನೇ
ಪ್ರೇಮದಿಂದಲಿ ನೋಡಿ ಕಾಯುವ ಮೊದ ಪೂರ್ಣನೆ ವಂದಿಪೆ

ದುಷ್ಟ ರಾವಣನಂತ್ಯ ಕಾರಣ ವಾಲಿ ಭಂಜನ ದೇವನೇ
ಕ್ಲಿಷ್ಟ ಕಾರ್ಯಗಳೆಲ್ಲ ಮೀರಿದ ಮಂದಹಾಸನೆ ಸಂತನೇ

ನೋಡಿ ಲಕ್ಷ್ಮಣ ರಾಮ ಸೀತೆಯ ಮುಂದೆ ಮಾರುತಿ ಮೂರುತೀ
ಪಾಡಿ ನಾಮದ ಮಾಲೆ ಮಲ್ಲಿಕೆ ರಾಮ ನಿನ್ನನು ಪೂಜಿಪೇ

(*ಸೊದೆ: ಅಮೃತ – ಮಧ್ವಾಚಾರ್ಯರ ‘ಶ್ರೀ  ಕೃಷ್ಣಾಮೃತ ಮಹಾರ್ಣವ’ ಗ್ರಂಥದ ಕನ್ನಡ ಅವತರಣಿಕೆಗೆ ಬನ್ನಂಜೆ ಗೋವಿಂದಾಚಾರ್ಯರು ಇಟ್ಟಿರುವ ಹೆಸರು ‘ಕೃಷ್ಣನೆಂಬ ಸೊದೆಯ ಕಡಲು’ ಅದರ ನೆನಪಿನಿಂದ ಸೊದೆಯನ್ನು ಅಮೃತವೆಂದು ಬಳಸಿರುವೆ )

(ಮಲ್ಲಿಕಾಮಾಲೆಯಲ್ಲಿನ ಈ ಪ್ರಯತ್ನದಲ್ಲಿ ಕೆಲವು ತಪ್ಪುಗಳಾಗಿವೆ. ಅಮೃತಕ್ಕೆ ಸೊದೆ ಎನ್ನುವರು, ಸೋದೆಯಲ್ಲ. ಬನ್ನಂಜೆಯವರು ಇತ್ತ ಹೆಸರನ್ನು ನೆನಪಿದೆ ಎಂದುಕೊಂಡು  ಶಬ್ದವನ್ನು ಬಳಸಿದ್ದು ನನ್ನ ತಪ್ಪು. ಅದು ಸೊದೆಯಾದದ್ದಕ್ಕೆ ಅಲ್ಲಿ ಇರಬೇಕಾದ ಗುರು ತಪ್ಪಿದೆ. ‘ರಾಮ ನೀ ಭವ ತಾಪಹಾರಿಯೆ ಸೊದೆ*ಯಂಬುಧಿ ದೇವನೇ’ – ಇದನ್ನು ಈಗ ತಿದ್ದಲಾಗಿದೆ. ಅದೇ ರೀತಿ ಪಾದಾಂತ್ಯದ ಕೊನೆಯ ಗುರುವೂ ಬಹಳಷ್ಟು ಕಡೆ ತಪ್ಪಿದೆ. ಈ ಎಲ್ಲ ತಿದ್ದುಪಡಿ ಸೂಚಿಸಿದ ಜಿವೆಂ ಅವರಿಗೆ ವಂದನೆಗಳು. ‘ಅಂಗಳದೊಳು ರಾಮನಾಡಿದ’ ಹಾಡು ಪುರಂದರ ದಾಸರದ್ದು ಎಂದು ಬರೆದಿದ್ದೆ ಮೊದಲು, ಆದರೆ ಅದು ಕನಕದಾಸರ ಹಾಡು. ಹಾಡಿನ ಮೊದಲ ಭಾಗವನ್ನಷ್ಟೇ ನೆನಪಿನಲ್ಲಿಟ್ಟುಕೊಂಡದ್ದರ ಪರಿಣಾಮ. ಇವತ್ತು ಅದೇ ಹಾಡನ್ನು ಕೇಳುವಾಗ   ‘ಈ ಸಂಭ್ರಮ ನೋಡಿ ಆದಿ ಕೇಶವ ರಘು ವಂಶವನ್ನೇ ಕೊಂಡಾಡಿದ’ ಬಂದ ಕೂಡಲೇ ತಪ್ಪಿನರಿವಾಯಿತು. ಇಲ್ಲಿ ಈಗ ತಿದ್ದುಪಡಿ ಮಾಡಿದೆ.)

 
Advertisements

ನಂದನ

ಇಂದಿನಿಂದಾರಂಭ ನಂದನದ ವತ್ಸರವು

ಕುಂದಿಲ್ಲದಾನಂದದಾ ನಂದನವ   

ನಂದನಾ ಕಂದ ನಿಮಗೀಯಲೆಂದು ಬಯಸುವೆ 

ತಿಂದ ಬೇವಲ್ಲಿರಲಿ ಬೆಲ್ಲದಾ ಸವಿ       

ಚಾಂದ್ರಮಾನ ಯುಗಾದಿ, ನಂದನ ಸಂವತ್ಸರದ ಶುಭಾಶಯಗಳು.      

 
(ರಾಯರ ಮಠದ ಪಂಚಾಂಗವನ್ನ ಇಲ್ಲಿಂದ ಇಳಿಸಿಕೊಳ್ಳಬಹುದು)

ನವೆಂಬರ್ ೧

ರಬೀಂದ್ರನಾಥ ಟಾಗೋರರ ಈ ಪದ್ಯವನ್ನು ಮೊದಲೊಮ್ಮೆ ಅನುವಾದ ಮಾಡಲಿಕ್ಕೆ ಪ್ರಯತ್ನಿಸಿದ್ದೆ. ಇತ್ತೀಚೆಗೆ ಮತ್ತೆ ನನ್ನದೇ ಅನುವಾದವನ್ನು ನೋಡಿದಾಗ ಇನ್ನೊಂದು ಪ್ರಯತ್ನ ಮಾಡಬೇಕು ಅನಿಸಿದ್ದಕ್ಕೆ ಮತ್ತೆ ಮಾಡಿ ಹಾಗೆ ಇಟ್ಟುಕೊಂಡಿದ್ದೆ. ಇವತ್ತು ಕನ್ನಡ ರಾಜ್ಯೋತ್ಸವಕ್ಕೆ ಏನನ್ನಾದರೂ ಬರೆಯಬೇಕು ಅಂದುಕೊಳ್ಳುತ್ತಾ ಹಾಗೇ ನೋಡುವಾಗ ಇದು ಕಣ್ಣಿಗೆ ಬಿತ್ತು. ರಾಜ್ಯೋತ್ಸವದ ಸಂದರ್ಭದಲ್ಲಿ ಇಂದಿನ ಕನ್ನಡ, ಕನ್ನಡಿಗರ ಪರಿಸ್ಥಿತಿ ಇತ್ಯಾದಿಗಳ ಕುರಿತು ಕನ್ನಡ ಪತ್ರಿಕೆಗಳಲ್ಲಿ, ಬ್ಲಾಗುಗಳಲ್ಲಿ ಈಗಷ್ಟೇ ಓದಿದ ಕೆಲವು ಲೇಖನಗಳ ಹಿನ್ನೆಲೆಯಲ್ಲಿ ನೋಡಿದಾಗ, ಈ ಪದ್ಯದ ಆಶಯ ರಾಜ್ಯೋತ್ಸವದ ಸಂದರ್ಭಕ್ಕೂ ಸರಿಯಾಗಿದೆ ಅನಿಸಿತು.

ಎಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು

ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ

ಮನಕಂಜಿಕೆಯೆ ಇರದಲ್ಲಿ, ತಲೆಯೆತ್ತಿ ಇರುವಲ್ಲಿ
ಅರಿವು ತೆರೆದಿರುವಲ್ಲಿ
ಮನೆಮನೆಯ ಕಿರುಗೋಡೆ ಜಗವೊಡೆಯದಿರುವಲ್ಲಿ
ನನ್ನಿಯಾಳದ ನುಡಿಯನ್ನೆ ಆಡುವಲ್ಲಿ
ದಣಿವಿರದ ಹೆಣಗಾಟ ಪರಿಪೂರ್ಣತೆಗೆ ಕೈಚಾಚುವಲ್ಲಿ
ನಿರ್ಜೀವ ನಡವಳಿಕೆಗಳ ಮಳಲು ತಿಳವಿನ ತೊರೆ ಬತ್ತಿಸಿರದಲ್ಲಿ
ಎಡೆ ಬಿಡದೆ ಬೆಳೆಯುವ ವಿಚಾರಕಾರ್ಯಗಳಲ್ಲಿ ನೀ ಮನವ ಮುನ್ನಡೆಸುವಲ್ಲಿ
ಸ್ವಾತಂತ್ರ್ಯದ ಆ ಸ್ವರ್ಗದಲ್ಲಿ, ತಂದೆ, ನನ್ನ ನಾಡು ಕಣ್ತೆರೆಯಲಿ

ದೀಪಾವಳಿ

ದೀಪಾವಳಿ ನೋಡು ದೀಪಾವಳಿ
ತಾಪಾ ಕಳಿ ಮನದ ಪಾಪಾ ತೊಳಿ
ತಪಾ ಕಲಿ ಅರಿವ ಹಾದಿ ತುಳಿ
ಹೋಪಾ ನಾಳು ಬಳಸಿ ಬಾಳ ಬೆಳಿ

Festival of Lights


ದೀಪಾವಳಿ ಬೆಳಗಲಿ ಇಳೆಯ
ದೀಪಾವಳಿ ಕಳೆಯಲಿ ತಮವ
ದೀಪಾವಳಿ ಬೆಳಗಲಿ ನಗುವ
ದೀಪಾವಳಿ ಬೆಳಗಲಿ ಒಳಗು


ದೀಪಾವಳಿ ಎಲ್ಲರ ಬಾಳಿನಲ್ಲಿ ಸುಖ, ಸಂತೋಷ, ಸಮೃದ್ಧಿಯನ್ನು ತರಲಿ

ಯುಗಾದಿ

ಭಾರತದ ಕ್ರಿಕೆಟ್ ತಂಡ ವಿಶ್ವ ಕಪ್ ಗೆದ್ದು ಯುಗಾದಿ ಖುಷಿಯನ್ನು ಬಹಳಷ್ಟು ಹಿಗ್ಗಿಸಿದೆ 🙂

ಎಲ್ಲರಿಗೂ ಯುಗಾದಿಯ ಶುಭಾಶಯಗಳು. ಖರ ಸಂವತ್ಸರ ನಿಮಗೆಲ್ಲ ಸಮೃದ್ಧಿಯನ್ನು, ಸಂತೃಪ್ತಿಯನ್ನು ತರಲಿ. ಸರ್ವೇ ಜನಾಃ ಸುಖಿನೋ ಭವಂತು.

ಪಂಚಾಂಗ: ರಾಯರ ಮಠದ PDF ರೂಪದಲ್ಲಿನ ಕನ್ನಡ ಪಂಚಾಗವನ್ನ ಇಲ್ಲಿಂದ ಇಳಿಸಿಕೊಳ್ಳಬಹುದು.

ಚಿತ್ರ: ನಮ್ಮ ಮನೆ ದೇವರು, ಇತ್ತೀಚಿಗೆ ಭಾರತಕ್ಕೆ ಹೋಗಿದ್ದಾಗ ತೆಗೆದ ಚಿತ್ರ.

ಗಣೇಶ ವಂದನೆ

ಏಕವಿಂಶತಿ ಮೋದಕಪ್ರಿಯ| ಮೂಕರನು ವಾಗ್ಮಿಗಳಮಾಳ್ಪ ಕೃ |
ಪಾಕರೇಶ ಕೃತಜ್ಞ ಕಾಮದ ಕಾಯೊ ಕೈಪಿಡಿದು ||
ಲೇಖಕಾಗ್ರಣಿ ಮನ್ಮನದ ದು| ರ್ವ್ಯಾಕುಲವ ಪರಿಹರಿಸು ದಯದಿ ಪಿ|
ನಾಕಿಭಾರ್ಯಾತನುಜ ಮೃದ್ಭವ ಪ್ರಾರ್ಥಿಸುವೆ ನಿನ್ನ ||

ಗಣೇಶ ಚತುರ್ಥಿಯಂದು ಗಣಪತಿಗೆ ನಮನ. ಜಗನ್ನಾಥ ದಾಸರ ಹರಿಕಥಾಮೃತ ಸಾರದ ಗಣಪತಿ ಸ್ತೋತ್ರದ ಈ ನುಡಿಯ ಮೂಲಕ. ಪಿನಾಕಿಭಾರ್ಯಾತನುಜ ಮೃದ್ಭವ ಎನ್ನುವದರಲ್ಲಿ ಗಣಪನ ಹುಟ್ಟಿನ ಕತೆಯನ್ನು ಎಷ್ಟು ಚನ್ನಾಗಿ ಹಿಡಿದಿಟ್ಟಿದ್ದಾರೆ ದಾಸರು. ಮನಸ್ಸಿನ ವ್ಯಾಕುಲತೆ, ದುರ್ವ್ಯಾಕುಲತೆಯನ್ನ ದೂರ ಮಾಡಲಿಕ್ಕೆ ಅದೇನೂ ಇಲ್ಲದವನನ್ನೇ ಬೇಡಬೇಕು. ಮನಸ್ಸಿನಲ್ಲಿ ವಿಚಾರಗಳ ಸ್ಪಷ್ಟತೆಗೆ ಬರವಣಿಗೆ ಸಹಾಯ ಮಾಡುತ್ತದೆ. ಅದಕ್ಕಾಗಿ ಲೇಖಕಾಗ್ರಣಿಯ ಸ್ಮರಣೆ.

ಇತ್ತೀಚೆಗೆ ಬ್ಲಾಗಿನಲ್ಲಿ ಏನನ್ನೂ ಬರೆದಿಲ್ಲ. ಬರೆಯಬೇಕು ಅಂದುಕೊಂಡ ವಿಶಯ ಬೇಕಾದಷ್ಟಿದೆ. ಮತ್ತೆ ಬರೆಯಲು ಆರಂಭಿಸಬೇಕು ಅಷ್ಟೆ.

ಆಕಾಶಾಧಿಪತಿ ಗಣಪ ಎಲ್ಲರ ಹಾದಿಯ ಎಡರುಗಳನ್ನ ನಿವಾರಿಸಿ ಅವಕಾಶಗಳನ್ನು ಒದಗಿಸಲಿ ಎನ್ನುವ ಪ್ರಾರ್ಥನೆಯೊಂದಿಗೆ ನಿಮಗೆಲ್ಲ ಗಣೇಶ್ ಚತುರ್ಥಿಯ ಶುಭಾಶಯಗಳು.