ಗರುಡಗಂಬದಲಿ ಕುಣಿದು ಹಾಡಿದರು ನೀವು ಬರುವಿರೆಂದು

ಗರುಡಗಂಬದಲಿ ಕುಣಿದು ಹಾಡಿದರು ನೀವು ಬರುವಿರೆಂದು
ಶ್ರೀ ವಿಷ್ಣುತತ್ವಸುಧೆ ಸ್ವರ್ಣ ಕಲಶದಲಿ ತುಂಬಿ ತರುವಿರೆಂದು

ಕಡಲ ಹಾರಿ ಪರ್ವತವ ತೂರಿ ದಾನವರ ಕುಲವ ಹುರಿದು
ಶ್ರೀರಾಮಚಂದ್ರ ಶುಭನಾಮ ವಚನ ಮೈಥಿಲಿ ಮಾತೆಗೊರೆದು
ಬಂದನಂಜನಾನಂದತೀರ್ಥ ಪವಮಾನ ದೀನ ಬಂಧು

ಗರುಡಗಂಬದಲಿ ಕುಣಿದು ಹಾಡಿದರು ನೀವು ಬರುವಿರೆಂದು

ಸೋಮ ವಂಶದೊಳಗುದಿಸಿ ಬಂದ ಶ್ರೀ ಭೀಮಸೇನನೆಂದು
ಬಕ ಹಿಡಿಂಬ ಕಿಮ್ಮೀರ ಕೀಚಕರನೆಲ್ಲ ಸವರಿ ಕೊಂದು
ಶ್ರೀಮುಕುಂದ ಗೋವಿಂದ ಭಕ್ತ ಪವಮಾನ ದೀನ ಬಂಧು

ಗರುಡಗಂಬದಲಿ ಕುಣಿದು ಹಾಡಿದರು ನೀವು ಬರುವಿರೆಂದು

ಕೌಲ ವೃಕ್ಷ ಕೈದಂಡ ಮೊಳೆಸಿ ಆನಂದತೀರ್ಥರೆಂದು
ನದಿಯ ದಾಟಿ ಶ್ರೀ ಬದರಿಕಾಶ್ರಮಕೆ ಶಿಷ್ಯರಾಗಿ ಬಂದು
ಪರಿವ್ರಾಜಕಾಚಾರ್ಯ ಮಧ್ವ ಪವಮಾನ ದೀನ ಬಂಧು

ಇರಳು ಪಯಣದಲಿ ದಾರಿ ಅರಸಿರಲು ಜೀವಕುಲವು ನೊಂದು
ತತ್ವರಥಕೆ ಸಪ್ತಶ್ವ ಹೂಡಿ ಮನುಕುಲಕೆ ಮೂಡಿ ಬಂದು
ಜಗವ ಬೆಳಗಿದನು ಜ್ಞಾನಸೂರ್ಯ ಪವಮಾನ ದೀನಬಂಧು

ವಿಷವ್ಯೂಹದಲಿ ಬದುಕಬಹುದು ಕುಡಿದೊಂದೇ ಅಮೃತ ಬಿಂದು
ಗರುಡಗಂಬದಲಿ ಕುಣಿದು ಹಾಡಿದರು ನೀವು ಬರುವಿರೆಂದು
ಶ್ರೀ ವಿಷ್ಣುತತ್ವಸುಧೆ ಸ್ವರ್ಣ ಕಲಶದಲಿ ತುಂಬಿ ತರುವಿರೆಂದು

(ನಮ್ಮ ದೊಡ್ಡಮ್ಮ ಸಣ್ಣಕಿ ಇದ್ದಾಗ ಕಲಿತಿದ್ದ ಹಾಡಂತೆ ಇದು. ಇವತ್ತು ಮಧ್ವನವಮಿಗೆ ಅತ್ಯಂತ ಸೂಕ್ತವಾದ ಹಾಡು. ತಾನು ಹಾಡಿ ನಮಗೆ ಕೇಳಿಸಿದಳು. ಸುಮಧ್ವವಿಜಯದಲ್ಲಿ ಹೇಳಿದ ಕೆಲವು ವಿಷಯಗಳನ್ನು ಎಷ್ಟು ಚನ್ನಾಗಿ ಸ್ಮರಣೆ ಮಾಡುತ್ತಾರೆ ಇದರಲ್ಲಿ! ಬಹಳ ಇಷ್ಟವಾಯಿತು. ಯಾರು ಬರೆದದ್ದೋ ಗೊತ್ತಿಲ್ಲ ದೊಡ್ಡಮ್ಮನಿಗೆ. ಹಾಡಿನಲ್ಲಿ ಅಂಕಿತ ಅಥವಾ ಮುದ್ರಿಕೆಯೂ ಇದ್ದಂತಿಲ್ಲ.)

Advertisements

ಸಂಸಾರ ಪಾಶವ ನೀ ಬಿಡಿಸಯ್ಯ…

ಸಂಸಾರ ಪಾಶವ ನೀ ಬಿಡಿಸಯ್ಯ
ಕಂಸಾರಿ ಪುರಂದರವಿಠ್ಠಲರಾಯ

ಹ್ಯಾಂಗೆ ಬರೆದಿತ್ತೋ ಪ್ರಾಚೀನದಲ್ಲಿ… ಎಂದು ಆರಂಭವಾಗುವ ಪುರಂದರದಾಸರ ಪದದಲ್ಲಿ ಕೊನೆಗೆ “ಸಂಸಾರ ಪಾಶವನ್ನು ಕಂಸಾರಿಯಾದ ನೀನು ಬಿಡಿಸಯ್ಯ” ಎಂದು ಕಂಸಾರಿಯನ್ನೇ ನೆನೆದದ್ದು ಯಾಕೆ? ಕೃಷ್ಣನ, ಹರಿಯ ಇನ್ಯಾವುದೇ ರೂಪವನ್ನು ನೆನೆಯುವ ಬದಲು ಕಂಸಾರಿಯಾಗಿಯೇ ಯಾಕೆ ನೆನೆದರು ಎಂಬ ಪ್ರಶ್ನೆ ಹಿಂದೊಮ್ಮೆ ಬಂದದ್ದು, ಅದರ ಬಗ್ಗೆ ಒಂದಷ್ಟು ಬರೆದದ್ದು ಇಲ್ಲಿವೆ. ಅಲ್ಲಿ ಉಲ್ಲೇಖಿಸದೇ ಇದ್ದ ಇನ್ನೊಂದು ಅಂಶವೆಂದರೆ ‘ಶ್ರೀ ಕೃಷ್ಣಾಷ್ಟೋತ್ತರ ಶತನಾಮಾವಳಿ’ಯಲ್ಲಿಯೂ ‘ಸಂಸಾರವೈರಿ ಕಂಸಾರಿ ಮುರಾರಿರ್ನರಕಾಂತಕಃ’ ಎಂದು ಬರುತ್ತದೆ. ದಾಸರು ಅದನ್ನೇ ತಮ್ಮ ಪದದಲ್ಲೂ ಬಳಸಿದರೆ ಎಂಬ ವಿಚಾರವೂ ಬಂದಿತ್ತು.

ಶ್ರೀ ಸತ್ಯಾತ್ಮತೀರ್ಥರ ಶ್ರೀಮದ್ಭಾಗವತ ಪ್ರವಚನ ಮಾಲಿಕೆಯ ಸಿ.ಡಿ.ಯನ್ನು ಕೇಳುತ್ತಿದ್ದಾಗ ನನಗೆ ಗೊತ್ತಿಲ್ಲದ ಹೊಸ ವಿಷಯ ತಿಳಿಯಿತು. ಕೃಷ್ಣನಿಂದ ಹತನಾದ ಕಂಸ ಅಸುರನಾದ ಕಾಲನೇಮಿಯಂತೆ. ಈ ಕಾಲನೇಮಿ ಕಾಮಕ್ಕೆ ಅಭಿಮಾನಿಯಾದ ಅಸುರನಂತೆ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ಅನಿಸಿದ್ದು, ‘ಧರ್ಮಾsವಿರುದ್ಧೋ ಕಾಮೋsಸ್ಮಿ’ (ಧರ್ಮಕ್ಕೆ ವಿರೋಧವಾಗಿಲ್ಲದ ಕಾಮವು ನಾನು) ಎಂದು ಗೀತೆಯಲ್ಲಿ ಹೇಳುವ ಕೃಷ್ಣ, ಧರ್ಮಕ್ಕೆ ವಿರುದ್ಧವಾದ ಕಾಮವೆಲ್ಲದರ ಅಭಿಮಾನಿಯಾದ ಕಂಸರೂಪಿ ಕಾಲನೇಮಿಯನ್ನು ಕೊಂದ. ನಮ್ಮನ್ನು ಮತ್ತೆ ಮತ್ತೆ ಸಂಸಾರದಲ್ಲಿ ಕೆಡವುವ ಕಾಮದಿಂದ ಪಾರುಮಾಡಿ, ಧರ್ಮಾsವಿರುದ್ಧ ಕಾಮವೆನಿಸುವ ಮುಕ್ತಿಯನ್ನು ಬಯಸಿದಾಗ ಕಂಸಾರಿಯನ್ನೇ ನೆನೆಯಬೇಕಲ್ಲವೆ? ಉನ್ನತಿಯನ್ನೀಯುವ ಕಾಮನೆಗಳು ಧರ್ಮ ವಿರೋಧಿಯಾಗಿರುವದಿಲ್ಲ. ನಿಕೃಷ್ಟವಾದ ಕಾಮನೆಗಳನ್ನು ದಮನ ಮಾಡಿ, ಉನ್ನತಿಯನ್ನು ಸಾಧಿಸುವ ಕಾಮನೆಯ ಪೂರ್ತಿಗಾಗಿ ಕಂಸಾರಿಯನ್ನು ನೆನೆಸಿದ್ದಾರೆ ಪುರಂದರ ದಾಸರು*.

ಅದೇ ಪ್ರವಚನದಲ್ಲಿ ಶ್ರೀಸತ್ಯಾತ್ಮತೀರ್ಥರು ಹೇಳಿದ ಈ ಇನ್ನೊಂದು ಶ್ಲೋಕ, “ಸರಿಯಾದ ಜ್ಞಾನವಿರುವಲ್ಲಿ ಶರಣಾಗಬೇಕು, ಆ ಜ್ಞಾನದಲ್ಲಿ ಸುದೃಢವಾದ ನಂಬಿಕೆಯನ್ನಿಡಬೇಕು, ಆ ನಂಬಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಿರಬೇಕು, ನಂಬಿಕೆ ಅಲುಗಾಡುವಂತಹ ಸಂದರ್ಭ ಬಂದರೆ ತಿಳಿದವರನ್ನು ವಿಚಾರಿಸಿ, ತಿಳಿದುಕೊಂಡದ್ದನ್ನೂ ಮತ್ತು ಅದರ ಬಗೆಗಿನ ನಂಬಿಕೆಗಳನ್ನೂ ಮತ್ತೆ ಜಿತಮಾಡಿಕೊಳ್ಳುತ್ತ ಆಯಾ ಸಂದರ್ಭದ ಸಮನ್ವಯವನ್ನು ಸಾಧಿಸಿಕೊಳ್ಳಬೇಕು” ಎಂದು ಹೇಳಿದ ವೈದ್ಯರ ಮಾತು** ನೆನಪಾಯಿತು, ಮತ್ತೆ ಗಟ್ಟಿಯಾಗಿ ಮನಸ್ಸಿನಲ್ಲಿ ಉಳಿಯಿತು.

ಅದೃಢಂಚ ಹತಂ ಜ್ಞಾನಂ
ಪ್ರಮಾದೇನ ಹತಂ ಶ್ರತಂ
ಸಂದಿಗ್ಧೋಹಿ ಹತಂ ಮಂತ್ರಃ
ವ್ಯಗ್ರಚಿತ್ತೋ ಹತಂ ಜಪಃ

(ಗಟ್ಟಿಗೊಳ್ಳದಿರಲಳಿವುದು ಅರಿವು
ಎಚ್ಚರಗೇಡಿಗುಳಿಯದು ಕೇಳಿದುದು
ಇಬ್ಬಂದಿತನದಲಳಿಯುವುದು ಮಂತ್ರ
ಕಳವಳದ ಮನ ಕಳೆಯುವುದು ಜಪವ)

ಎಲ್ಲವನ್ನೂ ದೇವರ ಪರವಾಗಿ, ಆನಂದತೀರ್ಥರ ತತ್ವವಾದದ ಅರಿವಿನ ಮೂಲಕ ಹರಿ ಪರವಾಗಿ ಸಮನ್ವಯ ಮಾಡಿಕೊಳ್ಳುವದು ಹೇಗೆ ಎನ್ನುವದನ್ನು ನೋಡಬೇಕೆಂದರೆ ಶ್ರೀ ವಾದಿರಾಜರ ‘ಶ್ರೀ ರುಕ್ಮಿಣೀಶ ವಿಜಯ’ ಕೃತಿಯನ್ನು ಮನನ ಮಾಡಬೇಕು ಅಂತ ನನಗನಿಸುತ್ತದೆ. ಇತ್ತೀಚೆಗಷ್ಟೇ ಓದಲು ಶುರು ಮಾಡಿದ ಈ ಕೃತಿಯಲ್ಲಿ ಇನ್ನೂ ಓದಲು ಬಹಳಷ್ಟು ಸರ್ಗಗಳಿವೆ. ಅದರಲ್ಲಿ ಕಂಡುಬರುವ ವಿಷಯ ನಿರೂಪಣೆ, ಕವಿತಾ ಚಾತುರ್ಯ, ಪದಲಾಲಿತ್ಯ, ಬಳಸಿದ ಅಲಂಕಾರಗಳು, ಉತ್ಪ್ರೇಕ್ಷೆಗಳು, ಎಲ್ಲವೂ ಆ ಕೃತಿಯ ಆರಾಧ್ಯ ಮೂರುತಿ ಶ್ರೀ ಕೃಷ್ಣನಲ್ಲೇ ನೆಲೆಯಾಗಿವೆ, ಅವನನ್ನೇ ಆರಾಧಿಸುತ್ತವೆ.

ಟಿಪ್ಪಣಿ  :

* ಬರೆದಾದ ಮೇಲೆ ಇದನ್ನು ವೈದ್ಯರಿಗೆ ಕಳುಹಿಸಿದಾಗ ಅವರು ಸೂಚಿಸಿದ conclusion ಇದು. ಇದರ ಜೊತೆಗೆ ತಮ್ಮ ತಾತನವರು ಹೇಳಿಕೊಳ್ಳುತ್ತಿದ್ದ ಪ್ರಾಣೇಶದಾಸರ ಪದ ‘ಪಾಲಿಸೊ ವೇಂಕಟರೇಯ’ ಎನ್ನುವದರಲ್ಲಿ ‘ಜಾಂಬವತಿನಲ್ಲ’ ಎಂದು ಬರುತ್ತದೆ ಎಂದು ತಿಳಿಸಿದರು. ಅಲ್ಲಿ ‘ಜಾಂಬವತೀನಲ್ಲ’ನೇ ಯಾಕೆ ಬಂದ ಎಂದರೆ ಜಾಂಬವತಿಗೇ ಮೊದಲು ಭಾಗವತವನ್ನು ಉಪದೇಶಿಸಿದ್ದು ಎಂದು ತಿಳಿಸಿದರು. ದಾಸರು ಪದಗಳಲ್ಲಿ ಯಾವುದನ್ನೂ ಸುಮ್ಮ ಸುಮ್ಮನೆ ಹಾಕುವದಿಲ್ಲ, ಶಾಸ್ತ್ರ ಗ್ರಂಥಗಳಲ್ಲಿ, ಇತಿಹಾಸ ಪುರಾಣಗಳಲ್ಲಿ ಉಲ್ಲೇಖಿತವಾದ ವಿಶಿಷ್ಠ ಸಂದರ್ಭಗಳನ್ನ, ದೇವರ ಹೆಸರುಗಳನ್ನ ಸಂದರ್ಭೋಚಿತವಾಗಿ ತಮ್ಮ ಪದಗಳಲ್ಲಿ ಬಳಸಿರುತ್ತಾರೆ. ನಾವು ಜಿಜ್ಞಾಸುಗಳಾಗಿ ವಿಚಾರಿಸಿದಾಗ ಅವುಗಳ ವಿಷಯ ತಿಳಿದರೆ ಖುಷಿಯಾಗುತ್ತದೆ, ದಾಸರ ವಿಸ್ತಾರ ಅರಿವಿನ ಬಗ್ಗೆ, ಆ ಅರಿವನ್ನು ಕನ್ನಡದ ನಾಮಗಳಲ್ಲಿ ಅಡಕವಾಗಿಡುವ ಬಗ್ಗೆ ಮತ್ತಷ್ಟು ಗೌರವ ಮೂಡುತ್ತದೆ.

** ವೈದ್ಯರು ಅವತ್ತು ಹೇಳಿದ ಮಾತಿನ ಯಥಾರ್ಥ ಶಬ್ದಗಳು/ವಾಕ್ಯಗಳು ಇವೇ ಇರಲಿಕ್ಕಿಲ್ಲ. ಆದರೆ ನನ್ನ ನೆನಪಿನಲ್ಲಿ ಉಳಿದ ಆ ಮಾತಿನ ಸಂದೇಶವನ್ನು ಸಂಗ್ರಹವಾಗಿ ಬರೆಯಬೇಕು ಅನಿಸಿದಾಗ ಅವು  ಬಂದದ್ದು ಈ  ರೂಪದಲ್ಲಿ. ಅದಕ್ಕಾಗಿ quote ಹಾಕಿರುವೆ! )

ಇದನ್ನು ಬರೆದು ಪೋಸ್ಟಿಸಿ ಆದ ಬಳಿಕ ಕೇಳಿದ ಶ್ರೀ ಸತ್ಯಾತ್ಮ ತೀರ್ಥರ ಪ್ರವಚನದಲ್ಲಿ ಇನ್ನೊಂದು ವಿಷಯ ತಿಳಿಯಿತು. ವ್ಯಾಸ, ಹಯಗ್ರೀವ ರೂಪಗಳು ಜ್ಞಾನ ಹುಟ್ಟಿಸುವ (ಜ್ಞಾನ ಕೊಡುವ) ರೂಪಗಳಂತೆ. ಪರಶುರಾಮ ರೂಪವು ಜ್ಞಾನವನ್ನು ರಕ್ಷಿಸುವ, ಕಾಪಿಡುವ ರೂಪವಾದರೆ ಕೃಷ್ಣ ರೂಪವು ಜ್ಞಾನಕ್ಕೆ ಬರುವ ವಿಘ್ನಗಳನ್ನು ಸಂಕಷ್ಟಗಳನ್ನು ದೂರಗೊಳಿಸುವ ರೂಪವಂತೆ. ಸಂಸಾರ ಪಾಶವನ್ನು ನೀಗಲು ಕಂಸಾರಿಯನ್ನು ನೆನೆ ಎಂದದ್ದಕ್ಕೆ ಇದೂ ಒಂದು ಕಾರಣವೆನಿಸುತ್ತದೆ ನನಗೆ.

ಮಧ್ವನವಮಿಯೂ ಲಿವರ್ ಮೂರ್ ದೇವಸ್ಥಾನವೂ…

‘ಆನಂದತೀರ್ಥರೆಂಬ ಅರ್ತಿಯ ಪೆಸರುಳ್ಳ ಗುರು ಮಧ್ವ ಮುನಿರಾಯ’ ರ ಸ್ಮರಣೋತ್ಸವವನ್ನ ಇಲ್ಲಿನ ಶ್ರೀ ವ್ಯಾಸ ಭಜನಾ ಮಂಡಳಿಯ ತಂಡ ಲಿವರ್ ಮೂರ್ ಶಿವ-ವಿಷ್ಣು ದೇವಸ್ಥಾನದಲ್ಲಿ ಆಯೋಜಿಸಿತ್ತು. ೪-೫ ವರ್ಷಗಳ ಕೆಳಗೆ ಅರಳುಮಲ್ಲಿಗೆ ಪಾರ್ಥಸಾರಥಿ ಅವರು ಇಲ್ಲಿಗೆ ಬಂದಾಗ ಅವರದೊಂದು ಪ್ರವಚನ ಕೇಳಲು ಹೋಗಿದ್ದೆ. ಅಲ್ಲಿ ಪ್ರವಚನದ ಕೊನೆಗೆ ಈ ತಂಡ ಮಧ್ವಾಚಾರ್ಯರ ದ್ವಾದಶ ಸ್ತೋತ್ರದ  ‘ಪ್ರೀಣಯಾಮೋ ವಾಸುದೇವಮ್’ ಅನ್ನು ರಾಗವಾಗಿ, ಪುಸ್ತಕದ ಸಹಾಯವಿಲ್ಲದೇ ಹೇಳುವದನ್ನು ಕೇಳಿ ಆಶ್ಚರ್ಯಪಟ್ಟಿದ್ದೆ. ಅದಾದ ಮೇಲೆ ಅವರ e-mail ಗುಂಪಿಗೆ ನಾನೂ ಸದಸ್ಯನಾದೆ. ಕೆಲವಾರು ಕಾರ್ಯಕ್ರಮಗಳಿಗೆ ಹೋಗಲು ಪ್ರಾರಂಭಿಸಿದೆವು. ಮಧ್ವನವಮಿ ಮತ್ತು ರಾಘವೇಂದ್ರ ಸ್ವಾಮಿಗಳ ಆರಾಧನೆಗಳನ್ನು ಈ ತಂಡ ಪ್ರತಿ ವರ್ಷ ಲಿವರ್ ಮೂರ್ ದೇವಸ್ಥಾನದಲ್ಲಿ ಆಯೊಜಿಸುತ್ತದೆ. ಇಡೀ ದಿವಸದ ಕಾರ್ಯಕ್ರಮವಿರುತ್ತದೆ. ಬೆಳಿಗ್ಗೆ ದೇವರ ಪೂಜೆ, ಸ್ತೋತ್ರ ಪಠನದಿಂದ ಆರಂಭಿಸುವ ಕಾರ್ಯಕ್ರಮದ ಮುಖ್ಯ ಭಾಗ ರಥೋತ್ಸವ.  ಹರಿ ವಾಯು ಗುರುಗಳನ್ನೂ ಮಧ್ವಾಚಾರ್ಯರ ಸರ್ವಮೂಲಗ್ರಂಥಗಳನ್ನೂ ಹೊತ್ತ ಸಾಲಂಕೃತ ರಥ  ಗುಡಿಗೆ ಪ್ರದಕ್ಷಿಣೆ ಹಾಕಿ ಬರುತ್ತದೆ. ರಥದ ಮುಂದೆ ನಡೆಯುವ ಭಜನೆ ನರ್ತನೆಗಳನ್ನು ನೋಡಿದರೆ ಇದು ಭಾರತದಲ್ಲೇ ಆಗುತ್ತಿದೆಯೇನೋ ಅನಿಸುವದು.  ನಂತರ ದೇವರ ನೈವೇದ್ಯ, ಆಮೇಲೆ ಭಕ್ತರ ಊಟ. ತಂಡದ ಸದಸ್ಯರಲ್ಲಿ ಒಳ್ಳೆ expert ಅಡುಗೆ ಮಾಡುವವರು ರುಚಿಕಟ್ಟಾಗಿ ಮಾಡಿ ಹಾಕಿದ್ದನ್ನು ಹೊಟ್ಟೆ ತುಂಬ ತಿಂದು ಬಂದೆವು 🙂

ಮಧ್ವನವಮಿ - ವೇದಿಕೆ

ಮಧ್ವನವಮಿ - ವೇದಿಕೆ

 

ಮಧ್ವನವಮಿ - ರಥೋತ್ಸವ

ಮಧ್ವನವಮಿ - ರಥೋತ್ಸವ

ವಾಯುದೇವರ ಸ್ಮರಣೆ, ಅವರ ಗುಣ ಕಥನ ಹನುಮ ಭೀಮ ಮಧ್ವ ಮೂರು ಅವತಾರಗಳ ಸ್ಮರಣೆಯಷ್ಟೇ ಅಲ್ಲ, ಅವರಂತರ್ಯಾಮಿಯಾದ ಶ್ರೀಹರಿಯ ಸ್ಮರಣೆಯೂ ಹೌದು. ಆನಂದತೀರ್ಥರೇ ಹೇಳಿದಂತೆ ಹರಿ ‘ಪರಮಾತ್ ಪರತಃ ಪುರುಷೋತ್ತಮತಃ’ ಆದರೆ ‘ಹರಿಯ ವಿಹಾರಕ್ಕೆ ಆವಾಸನೆನಿಸುವ’ ವಾಯು ಅವನ  ಪ್ರತಿಬಿಂಬ (ಮಧ್ವಾಚಾರ್ಯರೇ ಹೇಳಿದಂತೆ,  ‘ಆಭಾಸಕೋsಸ್ಯ ಪವನಃ’). ಹರಿಯ ಗುಣಗಳನ್ನು ಜೀವಗಣದಲ್ಲೆಲ್ಲ ಅತ್ಯಂತ ಸ್ಪಷ್ಟವಾಗಿ ಪ್ರತಿಫಲಿಸುವಾತ.  ಸೀತೆ ಕೊಟ್ಟ ಮುತ್ತಿನ ಹಾರದ ಮುತ್ತುಗಳಲ್ಲಿ ಹನುಮಂತ ರಾಮನನ್ನೇ ಹುಡುಕಿದ. ದೊಡ್ಡವರ ಗುಣ ಕಥನ ಯಾವಾಗಲು ಅವರಲ್ಲಿ ನೆಲೆ ನಿಂತ  ಗುಣ ರೂಪಿ ಹರಿಯ ಕಥನ ಹಾಗೂ ಆಯಾ ಗುಣಗಳನ್ನು ಎತ್ತಿ ತೋರಿಸುವ ಪುಣ್ಯವಂತರ ಶುದ್ಧ ಅಂತಃಕರಣದ ಕಥನವೇ ಅಲ್ಲವೇ ? ದುಮ್ಮದ್ರಿಯ ವರೇಹಳ್ಳೇರಾಯನ ಮಧ್ವನವಮಿಗೆ ಹೋಗಲಾಗದಿದ್ದರೂ ಇಲ್ಲಿಯ ಮಧ್ವನವಮಿಯಲ್ಲಿ ಪಾಲ್ಗೊಂಡಿದ್ದು ಖುಷಿ ಕೊಟ್ಟಿದೆ.

ದುಮ್ಮದ್ರಿಯ ವರಹಳ್ಳೇರಾಯ…

ನಮಾಮಿ ದೂತಂ ರಾಮಸ್ಯ… ಬರೆದ ಮೇಲೆ ಒಂಭತ್ತು ದಿನಗಳ ಕಾಲ ಬರೆಯಬೇಕೆಂದಿದ್ದು ಮೂರೇ ದಿನಗಳಿಗೇ ನಿಂತಿತ್ತು. ನವಲಿ ಭೋಗಾಪುರೇಶ, ಕುಕನೂರಿನ ಹೊಂಡದ ಕಟ್ಟೆ ಹನುಮಪ್ಪ, ಟೊಣ್ಣೂರಿನ ಬಲಭೀಮಸೇನರ ಬಗ್ಗೆ ಬರೆದು ಕೊನೆಗೆ ವರಹಳ್ಳೇರಾಯನ ಬಗ್ಗೆ ಬರೆಯುವ ವಿಚಾರವಿತ್ತು. ಇರಲಿ, ಹಳ್ಳೇರಾಯನೇ ಮೊದಲು ಬರಲಿ.

ಧಾರವಾಡದ ರೋಣದಲ್ಲಿ ಹುಟ್ಟಿ ಬೆಳೆದ ನಮ್ಮ ತಾತನಿಗೂ ಗೊತ್ತಿಲ್ಲ ಗುಲ್ಬರ್ಗದ ಜೇವರ್ಗಿ ಹತ್ತಿರದ ದುಮ್ಮದ್ರಿಯ ವರಹಳ್ಳೇರಾಯ ಹೇಗೆ ಅಥವಾ ಯಾವಾಗಿನಿಂದ ನಮ್ಮ ಮನೆ ದೇವರಾದ ಅಂತ. ಏನೇ ಇರಲಿ ಮೊಟ್ಟ ಮೊದಲ ಬಾರಿ ಈತನ ಗುಡಿಗೆ ಹೋದಾಗ ಆಶ್ಚರ್ಯವಾಗಿತ್ತು ಆ ಗುಡೀ ನೋಡಿ. ಹನುಮಪ್ಪನನ್ನು ನೋಡಲು ಗುಡಿಯ ಒಳಗೆ ಹೋಗಬೇಕೆಂದರೆ ಗುಡಿಯ ಮೇಲ್ಛಾವಣಿಯಲ್ಲಿನ ಬೆಳಕಿಂಡಿಯಂಥ ಚಚ್ಚೌಕ ಕಿಂಡಿಯಿಂದ ಒಳಗಿಳಿಯಬೇಕಿತ್ತು!! ಅದನ್ನು ಬಿಟ್ಟರೆ ಬೇರೊಂದು ಬಾಗಿಲಿಲ್ಲ ಕಿಟಕಿಯಿಲ್ಲ.  ಗುಡಿಯ ಒಳಗೆ ವಿದ್ಯುದ್ದೀಪಗಳಂತೂ ಇರಲಿಲ್ಲ. ಹನುಮಪ್ಪನಿಗೆ ಹಚ್ಚಿದ ದೀಪದ ಬೆಳಕೇ ಬೆಳಕು. ಬಹುಷಃ ನಾನು ನಾಲ್ಕನೇ ಕ್ಲಾಸಲ್ಲಿದ್ದಿರಬೇಕು ಮೊದಲ ಸಲ ಅಲ್ಲಿಗೆ ಹೋದಾಗ. ಎಷ್ಟೋ ವರ್ಷಗಳ ನಂತರ ದೊಡ್ಡಪ್ಪ, ಚಿಕ್ಕಪ್ಪರ ಕುಟುಂಬದೊಡಗೂಡಿ ನಮ್ಮ ತಾತನ ಕುಟುಂಬ ಪೂರ್ತಿ ಹೋಗಿ ಹಳ್ಳೇರಾಯನಿಗೆ ನೈವೇದ್ಯ ಕೊಟ್ಟು ಬರುವ ಕಾರ್ಯಕ್ರಮ ಇತ್ತು. ಅಲ್ಲಿ ನೈವೇದ್ಯಕ್ಕೆ ಬೇಕಾಗುವ ಎಲ್ಲ ಸಾಮಾನುಗಳನ್ನೂ ಕಟ್ಟಿಕೊಂಡು ಹೋಗಿದ್ದೇವು. ಒಂದು ರಾತ್ರಿ ಇದ್ದು ಮರುದಿನ ಪೂಜೆ ನೈವೇದ್ಯದ ಕಾರ್ಯಕ್ರಮ ಮುಗಿಸಿಕೊಂಡು ಬಂದೆವನಿಸುತ್ತದೆ. ನೆಲಮಟ್ಟದ ಭಾವಿಯ ಬಾಯಿಯಂತಹ ಬೆಳಕಿಂಡಿ ಬಾಗಿಲೂ, ಆ ಗುಡಿಯಲ್ಲಿನ ಕತ್ತಲೆಯೂ ನಮಗೆಲ್ಲ ಕುತೂಹಲವನ್ನೂ, ಅಷ್ಟಿಷ್ಟು ಹೆದರಿಕೆಯನ್ನೂ ಹುಟ್ಟಿಸಿತ್ತು. ಮರುದಿನದಷ್ಟೊತ್ತಿಗೆ ಒಂಟಿಯಾಗಿ ಅದರೊಳಗೆ ಇಳಿದು ಹನುಮಂತನ ಮುಂದಿನ ಗಂಟೆ ಬಾರಿಸಿ ಬರಬೇಕು ಎನ್ನುವ ಆಟ ಆಡಲು ಶುರು ಮಾಡಿದ್ದೆವು 🙂

ಈ ಹನುಮಪ್ಪ ಬಹಳ ಪುರಾತನ ಮೂರ್ತಿಯೆಂದೂ, ಹಿಂದೆ ಆ ಭಾಗದಲ್ಲೆಲ್ಲ ಮುಸ್ಲಿಂ ರಾಜರ ಪ್ರಾಬಲ್ಯವಿದ್ದಾಗ ಭೂಗತನಾದನೆಂತಲೂ ಹೇಳುತ್ತಾರೆ. ಗುಡಿಗೆ ಸ್ವಲ್ಪ ದೂರದಲ್ಲೇ ಹಳ್ಳವೊಂದು ಹರಿಯುವದರಿಂದ ಹಳ್ಳದ ದಡದ ಹನುಮಪ್ಪ ಹಳ್ಳೇರಾಯನೇ ಆಗಿದ್ದಾನೆ.  ಹನುಮಪ್ಪನ ಪೂಜೆಗ ನೀರು ತರುವದು ಈ ಹಳ್ಳದಿಂದಲೇ. ಸಾಮಾನ್ಯವಾಗಿ ಮಳೆಗಾಲದಲ್ಲಿ ಮಾತ್ರ ಹಳ್ಳದಲ್ಲಿ ನೀರಿರುತ್ತಿತ್ತು. ಈಗ ಕೆಲವು ವರ್ಷಗಳ ಹಿಂದೆ ಯು.ಕೆ.ಪಿ. ಪ್ರೊಜೇಕ್ಟ್ ಅಷ್ಟಿಷ್ಟು ಆಗಿರುವದರಿಂದ ಹಳ್ಳಕ್ಕೆ ಕೃಷ್ಣೆಯೇ ಬಂದು ಬಿಟ್ಟಿದ್ದಾಳೆ. ಆದರೂ ಹಳ್ಳದಿಂದ ಕುಡಿಯುವ ನೀರು ತರುವದು ಹಳ್ಳದ ದಡದಲ್ಲಿ ಒರತೆ ತೆಗೆದು, ಅದರಲ್ಲಿನ ಮಣ್ಣು ನೀರನ್ನೆಲ್ಲ ಹೊರಹಾಕಿ ನಂತರ ಬರುವ ಸ್ವಚ್ಚ ನೀರನ್ನೇ. ಅಂತದ್ದೇನನ್ನೂ ನೋಡಿರದ ನಮಗೆ ಅದೂ ಒಂದು ಆಶ್ಚರ್ಯ. ಈಗ ಗುಡಿಯ ಮುಂದೆ ಬೋರ್ವೆಲ್ ಇದೆ, ಆದರೆ ನೀರು ಕುಡಿಯಲು ರುಚಿಯಾಗಿಲ್ಲ. ಹಳ್ಳದ ನೀರನ್ನೇ ತರುವದು ಇನ್ನೂ ನಡೆದಿದೆ ಅನಿಸುತ್ತದೆ.

ಭಾರತದಲ್ಲೆಲ್ಲ real estate ಬಿಸಿ ಏರಿದಾಗ, ನದೀ ಹಳ್ಳಗಳ ದಂಡೆಯ  ಮರಳೆತ್ತಿಕೊಂಡು ಹೋಗುವದು ಶುರುವಾದಾಗ ಈ ಹಳ್ಳದಿಂದಲೂ ಮರಳೆತ್ತುವದು ನಡೆಯಿತು. ಆಗ ಅಲ್ಲಿಗೆ ಬರುತ್ತಿದ್ದದ್ದು ಅರ್.ಎನ್.ಶೆಟ್ಟಿಯ ಲಾರಿಗಳಂತೆ.  ಒಮ್ಮೆ ಅರ್.ಎನ್.ಶೆಟ್ಟಿಯ ಕನಸಲ್ಲಿ ಈ ಹನುಮಪ್ಪ ಬಂದು ‘ನನಗೊಂದು ಸ್ವಲ್ಪ ರಸ್ತೆ, ಬೆಳಕು ಕಾಣುವಂತೆ ಜಾಗ ಮಾಡು’ ಎಂದು ಹೇಳಿದಂತಾಯ್ತಂತೆ. ಆ ಕನಸು ಎಷ್ಟು ನಿಜವೋ ಗೊತ್ತಿಲ್ಲ. ಆದರೆ ಈಗ ಮೊದಲಿನ ಆ ಗುಡಿಯಂತೂ ಇಲ್ಲ. ಬದಲಿಗೆ ಎಲ್ಲ ಕಡೆಯ ಗುಡಿಗಳಂತಹ ಗುಡಿಯಾಗಿದೆ. ಬಹಳಷ್ಟು ಜನ ನಿಂತು ಹನುಮಪ್ಪನ ಪೂಜೆ ನೋಡುವಂತಾಗಿದೆ. ಆದರೂ ಮೊದಲಿನ ಗುಡಿ ನೆನಪಾಗುತ್ತದೆ 🙂

ಗುಲ್ಬರ್ಗದ ಕೋರಂಟಿ ಹನುಮ ಮತ್ತು ಎನ್ವಿ ಲೇಯೌಟ್ ಹನುಮ..

ಗುಲ್ಬರ್ಗದ ದಿನಗಳಲ್ಲಿ ಹೋಗುತ್ತಿದ್ದ ಹನುಮಂತನ ಗುಡಿಗಳಂದರೆ ನೆನಪಾಗುವದು ನಮ್ಮ ನೂತನ ವಿದ್ಯಾಲಯ ಶಾಲೆಗೆ ಹತ್ತಿರದ ವಿಠ್ಠಲ ನಗರ ಅಥವ ಎನ್.ವಿ.ಲೇಯೌಟಿನ ಹನುಮಂತ ಹಾಗೂ ಸ್ವಲ್ಪ (ಆಗ) ಊರ ಹೊರಗೆ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಹತ್ತಿರದ ಕೋರಂಟಿ ಹನುಮಪ್ಪನ ಗುಡಿ. 

ಇವೆರಡರಲ್ಲಿ  ಎನ್.ವಿ. ಲೇಯೌಟಿನ ಹನುಮಪ್ಪನ ಗುಡಿಗೆ ಹೋದದ್ದೇ ಹೆಚ್ಚು.  ನಮ್ಮ ಸಾಲಿಗೆ, ಸಾಲಿ ಗ್ರೌಂಡಿಗೆ ಹತ್ತಿರವಿದ್ದದ್ದೂ, ಅಲ್ಲದೇ ಇಲ್ಲಿ ಅರ್ಚಕರಾಗಿದ್ದ ಶ್ರೀ ಹಳ್ಳೆಪ್ಪಾಚಾರ್ ಅವರು ನಮ್ಮ ಮನೆ ದೇವರಾದ ದುಮ್ಮದ್ರಿಯ ವರಹಳ್ಳೇರಾಯನ ಅರ್ಚಕರೂ ಆಗಿದ್ದು ವಿಶೇಷ ಕಾರಣ. ಕಪ್ಪು ಕಲ್ಲಿನ ನಿಂತ ಹನುಮಪ್ಪನ ಮೂರ್ತಿ ಸುಂದರವಾಗಿದೆ. ಮೂರರಿಂದ ನಾಲ್ಕು ಅಡಿಯಷ್ಟು ಎತ್ತರವಿರಬೇಕು ಬಹುಷಃ. ಬೆಳಗಿನ ಹೊತ್ತಿನಲ್ಲಿ ಹೋದರೆ ಹಳ್ಳೆಪ್ಪಾಚಾರರು ಅಥವಾ ಅವರ ಮಗ ನಾರಾಯಣಾಚಾರರು ವಾಯುಸ್ತುತಿಯನ್ನೋ ಅಥವಾ ಇನ್ನೇನೋ ಸ್ತೋತ್ರವನ್ನು ಹೇಳುತ್ತ ಹನುಮಪ್ಪನ ಅಲಂಕಾರ ಮಾಡುತ್ತಿರುವದು ಸಾಮಾನ್ಯ ದೃಶ್ಯವಾಗಿರುತ್ತಿತ್ತು.  ಈಗ ಹಳ್ಳೆಪ್ಪಾಚಾರರು ಇಲ್ಲ, ನಾರಾಯಣಾಚಾರರೆ ಗುಡಿ ನೋಡಿಕೊಳ್ಳುತ್ತಾರೆ. ಧನುರ್ಮಾಸದಲ್ಲಿ ಬೆಳ್ಳಂಬೆಳಿಗ್ಗೆ ದೇವರಿಗೆ ಹುಗ್ಗಿ ನೈವೇದ್ಯ ಕೊಡುತ್ತಾರೆ. ಒಂದಷ್ಟು ಸಾರಿ ಸಮಯಕ್ಕೆ ಸರಿಯಾಗಿ ಹೋದದ್ದರಿಂದ ಹುಗ್ಗಿ ಪ್ರಸಾದವನ್ನು ಚಪ್ಪರಿಸಿದ್ದೇನೆ. ಆ ಹುಗ್ಗಿಯ ರುಚಿ ಇನ್ನೆಲ್ಲೂ ಸಿಕ್ಕ ನೆನಪಿಲ್ಲ. ಮತ್ತೊಮ್ಮೆ ಯಾವಾಗಲಾದರೂ ಹೋಗಬೇಕು ಅದಕ್ಕಾಗಿ 🙂 

ಇನ್ನು ಕೋರಂಟಿ ಹನುಮಪ್ಪ ಬಹುಷಃ ಇಂಜಿನಿಯರಿಂಗ್ ಕಾಲೇಜು ಹುಡುಗ/ಹುಡುಗಿಯರಲ್ಲಿ ಹೆಚ್ಚು ಪ್ರಸಿದ್ಧ. ಇಂಜಿನಿಯರಿಂಗ್ ಕಾಲೇಜಿಗೆ ಹಾಗೂ ಹಾಸ್ಟೆಲ್ಲಿಗೆ ಹತ್ತಿರದಲ್ಲೇ ಇರುವದೊಂದೇ ಕಾರಣವಿರಲಿಕ್ಕಿಲ್ಲ :). ಎತ್ತರದ ಕೆಂಪು/ಕೇಸರಿ ಮೂರ್ತಿಯಿದ್ದಂತೆ ನೆನಪು. ಗುಡಿ ತಕ್ಕಮಟ್ಟಿಗೆ ದೊಡ್ಡದಿರಬೇಕನಿಸುತ್ತದೆ. ಈತನಿಗೆ ಕೋರಂಟಿ ಹನುಮಪ್ಪ ಎನ್ನುವ ಹೆಸರು ಬಂದದ್ದು ಹೇಗೆ ಎನ್ನುವ ಕುತೂಹಲವೊಂದು ಯಾವಾಗಲೂ ಇತ್ತು. ಕೆಲವು ವರ್ಷಗಳ ಹಿಂದೆ ಹರ್ಷಾ ಭೋಗ್ಲೆ ಬರೆದ ಕಾಲಮ್ ಒಂದರಲ್ಲಿ ಹೈದರಾಬಾದಿನ ಕೋರಂಟಿ ಆಸ್ಪತ್ರೆಯ ಹೆಸರು ಹಿಂದೊಮ್ಮೆ ಪ್ಲೇಗು ಕಾಲರಾದಂತಹ ಮಾರಿಗಳಿಗೆ ತುತ್ತಾದ ಜನರನ್ನು quarantine ಮಾಡಿ ಇಟ್ಟಿದ್ದ ಆಸ್ಪತ್ರೆ ಜನರ ಬಾಯಲ್ಲಿ ಕೋರಂಟಿ ಆಸ್ಪತ್ರೆ ಆಗಿದೆ ಎಂದು ಬರೆದದ್ದನ್ನು ಓದಿದೆ.  ಬಹುಷಃ ಗುಲ್ಬರ್ಗದ ಊರ ಹೊರಗಿನ ಕೋರಂಟಿ ಗುಡಿಯ ಸುತ್ತ ಮುತ್ತಲಿನ ಜಾಗವೇನಾದರೂ ಹಿಂದೆ quarantineಗೆ ಬಳಸಲಾಗಿತ್ತೇನೋ ಅನಿಸಿತು. ಖಚಿತವಾಗಿ ಗೊತ್ತಿಲ್ಲ. 

ಗೂಗಲ್ಲಿನಲ್ಲಿ ಈ ಎರಡು ದೇವಸ್ಥಾನಗಳ ಬಗ್ಗೆ ಹುಡುಕಿದಾಗ ಕೋರಂಟಿ ಗುಡಿ ಸಿಕ್ಕಿತು ಇಲ್ಲಿಇಲ್ಲಿ ಮತ್ತು ಇಲ್ಲಿ. ಈ ಎರಡೂ ಗುಡಿಯ ಹನುಮಪ್ಪನ ಚಿತ್ರ ನನ್ನಲ್ಲಿಲ್ಲ.

ಯಲಗೂರೇಶ, ಯಲಗೂರಪ್ಪ..

ನಿನ್ನೆ ಹಂಪಿಯ ಯಂತ್ರೋದ್ಧಾರನನ್ನು ನೋಡಿದ ಮೇಲೆ ಇವತ್ತು ಆಲಮಟ್ಟಿ ಹತ್ತಿರದ ಯಲಗೂರಿನ ಹನುಮಪ್ಪ ಯಲಗೂರೇಶನ ಬಗ್ಗೆ.

ಆಲಮಟ್ಟಿಗೆ ಹತ್ತಿರದ ಯಲಗೂರು ಕೃಷ್ಣಾ ತೀರದ ಗ್ರಾಮ. ಇಲ್ಲಿಯ ಹನುಮಂತ ಬಲು ಜಾಗ್ರತನೆಂದು ಪ್ರಸಿದ್ಧ. ಆಳೆತ್ತರದ ಮೂರ್ತಿ, ಪ್ರಶಾಂತವಾದ ಗುಡಿ, ವಿಶಾಲವಾದ ಪ್ರಾಂಗಣ ಇಲ್ಲಿದೆ.  ಇಲ್ಲಿಗೆ ಭೇಟಿ ಕೊಟ್ಟು ಏಳೆಂಟು ವರ್ಷಗಳಾಗಿರಬೇಕು.  ಕಳೆದ ಬಾರಿ ಹೋದಾಗ ಬಿಜಾಪುರದಿಂದ ಹೋಗಿದ್ದೆ. ಎಲ್ಲಿ ಬಸ್ ಇಳಿದೆವೊ ನೆನಪಿಲ್ಲ. ಅಲ್ಲಿಂದ ಮುಂದೆ ೨-೩ ಕಿಲೋ ಮೀಟರ್ ನಡೆದು ಯಲಗೂರು ತಲುಪಿದಂತೆ ನೆನಪು.  ನನ್ನ ದೊಡ್ಡಮ್ಮನ ಮನೆ ಕುಲದೇವ ಈತ. ಈ ಹನುಮಪ್ಪನಿಗೆ ಕಾರ್ತಿಕ ಮಾಸದಲ್ಲಿ ದೀಪೋತ್ಸವವೂ ಸೇರಿದಂತೆ ದೊಡ್ಡ ಉತ್ಸವವಾಗುತ್ತದೆ. ಹನುಮಪ್ಪನಿಗೆ ನೈವೇದ್ಯ ಮಾಡಿಸಬೇಕೆಂದರೆ ಮೊದಲೇ ಊರಲ್ಲಿಯ ಅರ್ಚಕರನ್ನ ಸಂಪರ್ಕಿಸಿ ಎಷ್ಟು ಜನ ಬರುವವರು, ಏನೇನೂ ಮಾಡಬೇಕು ಎಲ್ಲವನ್ನೂ ತಿಳಿಸಿ ತಯ್ಯಾರಿ ಮಾಡಿಕೊಳ್ಳಬೇಕು. ಹನುಮಂತನ ನಿತ್ಯ ಪೂಜೆಗೆ ಕೃಷ್ಣೆಯಿಂದ ನೀರು ತುಂಬಿಕೊಂಡು ಬರುತ್ತಾರೆ. ಮೊದಲೆಲ್ಲ ಹೋದವರು ತಾವೇ ಪೂಜೆ ಮಾಡಿಕೊಳ್ಳುವದೂ ಸಾಧ್ಯವಿತ್ತೆನಿಸುತ್ತದೆ. ಈಗ ಹೇಗಿದೆಯೋ ಗೊತ್ತಿಲ್ಲ.

ಯಲಗೂರೇಶ - (ನನ್ನ ಹತ್ತಿರವಿರುವ ಚಿತ್ರಪಟವೊಂದರಿಂದ)

ಯಲಗೂರೇಶ - (ನನ್ನ ಹತ್ತಿರವಿರುವ ಚಿತ್ರಪಟವೊಂದರಿಂದ)

ಇಲ್ಲಿ ನಾನು ನೋಡಿದ ಎರಡು ವಿಶೇಷಗಳೆಂದರೆ ದೀಡ ನಮಸ್ಕಾರ ಮತ್ತು ಯಲಗೂಪ್ಪನಿಗೆ ಜನ ಪ್ರಶ್ನೆ ಕೇಳುವದು.

ಯಲಗೂರದಪ್ಪನಿಗೆ ದೀಡ ನಮಸ್ಕಾರ ಹಾಕುತ್ತೇನೆ ಅಂತ ಬೇಡಿಕೊಂಡವರು ತಮ್ಮ ಕೆಲಸವಾದ ಮೇಲೆ ಬಂದು ಅದನ್ನು ಪೂರೈಸುತ್ತಾರೆ. ಕೈಯಲ್ಲಿ ಒಂದು ಡಂಟು ಹಿಡಿದುಕೊಂಡು ಸಾಷ್ಟಾಂಗ ನಮಸ್ಕಾರ ಮಾಡಿ ದಂಟು ಹಿಡಿದ ಕೈ ಚಾಚಿ ಆ ದಂಟಿನ ತುದಿಯಿಂದ ನೆಲದಲ್ಲಿ ಒಂದು ಗೆರೆ ಎಳೆದು ಏಳುತ್ತಾರೆ. ಮತ್ತೆ ಮುಂದಿನ ನಮಸ್ಕಾರ ಆ ಗೆರೆಯ ಹತ್ತಿರ. ಒಂದಾಳು ಮತ್ತು ಅರ್ಧದಷ್ಟು ದೂರಕ್ಕೊಂದು ನಮಸ್ಕಾರದ ದೀಡ ನಮಸ್ಕಾರ ಮಾಡುತ್ತ ದೇವಸ್ಥಾನಕ್ಕೆ ಒಂದು ಪ್ರದಕ್ಷಿಣೆ ಬರುವದೇ ಈ ಸೇವೆ. ಬಹುಷಃ ಇತರ ಕಡೆಗಳಲ್ಲೂ ಇರಬಹುದು ಇದು.

ಯಲಗೂರಪ್ಪನ ವಿಶೇಷತೆಯೆಂದರೆ ಆತನಿಗೆ ಪ್ರಶ್ನೆ ಕೇಳುವದು, ಆತ ಅದಕ್ಕುತ್ತರಿಸುವದು ಎಂದೇ ಹೇಳಬೇಕು. ಎಷ್ಟೋ ಜನರು ತಮ್ಮ ಮಹತ್ವದ ನಿರ್ಧಾರಗಳಿಗಾಗಿ ಈತನ ಮೊರೆ ಹೋಗುತ್ತಾರೆ. ಈತ yes ಅನ್ನದೇ ಮದುವೆ ಸಂಬಂಧಗಳು ಮುಂದುವರಿಯುವದಿಲ್ಲ, ವೈದ್ಯರು ಹೇಳಿದ ಆಪರೇಶನ್ನುಗಳು ಆಗುವದಿಲ್ಲ. ಬಲಕ್ಕೆ ಹೂ ಕೊಟ್ಟನೋ, ಎಡಕ್ಕೆ ಕೊಟ್ಟನೊ ? ಅಥವ ಈಗ ಸಧ್ಯಕ್ಕೆ ಬೇಡ ಎನ್ನುವಂತೆ ಏನೂ ಕೊಡದೇ ತುಂಬಿಕೊಂಡು ಕುಳಿತನೋ, ಎಲ್ಲದಕ್ಕೂ ಅರ್ಥವಿದೆ ಇಲ್ಲಿ. ಪ್ರಶ್ನೆ ಕೇಳುವ ಸಮಯದಲ್ಲಿ ಜನ ಸೇರಿರುತ್ತಾರೆ. ಅರ್ಚಕರು ಒಬ್ಬೊಬ್ಬರನ್ನೇ ಹೆಸರು ಕರೆದು ತಮ್ಮ ಪ್ರಶ್ನೆಯನ್ನ ಮನಸ್ಸಿನಲ್ಲೇ ಕೇಳಿಕೊಳ್ಳಲು ಹೇಳುತ್ತಾರೆ. ಅದಾದ ಮೇಲೆ ಆತ ಹೂ ಕೊಡುವುದನ್ನೇ ಕಾಯುವದು. ಹೂ ಕೊಡದೆ ಇದ್ದರೆ ಸರಿಯಾಗಿ ಪ್ರಶ್ನೆ ಕೇಳಿದ್ದೀರಾ ಎಂದು ವಿಚಾರಿಸುತ್ತಾರನಿಸುತ್ತದೆ. Open ended ಪ್ರಶ್ನೆ ಕೇಳಿದರೆ ಅವನೇನು ಮಾಡಬೇಕು, ತುಂಬಿಕೊಂಡು ಕೂಡುತ್ತಾನಷ್ಟೇ ಅಲ್ಲವೇ ?  ಒಮ್ಮೊಮ್ಮೆ ಪ್ರಶ್ನೆ ಕೇಳಿದವರು, “ನೀನು ಏನರೆ ಒಂದು ಹೇಳಿಬಿಡಪ್ಪ, ಬಲಕ್ಕನ ಕೊಡು, ಎಡಕ್ಕನ ಕೊಡು ಸುಮ್ನೆ ತುಂಬಿಕೊಂಡು ಕೂಡಬ್ಯಾಡ” ಎಂದು ತಮ್ಮ ಎದುರು ಕೂತವರನ್ನು ಮಾತನಾಡಿಸಿದಂತೆ ಹನುಮಪ್ಪನನ್ನು ಮಾತನಾಡಿಸುವದನ್ನು ನೋಡುವದು ತಮಾಷೆಯಾಗಿರುತ್ತದೆ. ಆದರೆ ನಂಬಿಕೆ ಅಷ್ಟರ ಮಟ್ಟಿಗೆ ಇದೆ ಈತನಲ್ಲಿ. ನಂಬುವರಿಗೆಲ್ಲ ಈತ ಬಲು ಜಾಗ್ರತ ಹನುಮಪ್ಪ.  

ಇದನ್ನು ಬರೆಯುವ ಮುಂಚೆ ಅಂತರ್ಜಾಲದಲ್ಲಿ ಯಲಗೂರೇಶನ ಬಗ್ಗೆ ಏನಾದರೂ ಇದೆಯಾ ಎಂದು ನೋಡಿದಾಗ ಈ ತಾಣ ಸಿಕ್ಕಿತು. ಏಳು ಊರಿನ ಈಶ ಯಲಗೂರೇಶ ಕತೆಯೂ ಸೇರಿದಂತೆ ಇಲ್ಲಿ ಗುಡಿಯ ಬಗ್ಗೆ ಅನೇಕ ವಿಷಯಗಳಿವೆ.  ಯಲಗೂರೇಶನ ಮೂರ್ತಿಯ ಚಿತ್ರವೂ ಇದೆ.