ಮನಸ್ಸಿನ ಚಿತ್ರಗಳು

ಅದೇ ತಾನೇ ನೋಡಿಕೊಂಡು ಬಂದ ಚಿಕಾಗೋ ನಗರದ ಡೌನ್ ಟೌನ್ ಹಿಂದುಳಿದಿದೆ. ನಾವು ಸೇರಬೇಕಿದ್ದ ನಮ್ಮ ಮಿತ್ರರ ಮನೆಯ ಹಾದಿ ಸ್ವಲ್ಪ ತಪ್ಪಿದೆ. ರಸ್ತೆ ಕಾಮಗಾರಿಯ ಕೆಲಸವೊಂದು ನಡೆದಿರುವದನ್ನು ಅರಿಯದ ಜಿ.ಪಿ.ಎಸ್ಸು ಹೇಳಿದ ಹಾದಿಗೆ ಹೋದವರು ಬದಲಿ ಹಾದಿ ಹುಡುಕಬೇಕಾಯಿತು. ಹಾಗೇ ಹುಡುಕುತ್ತಾ ಹೊರಟವರು ಚಿಕಾಗೋದ ಯಾವುದೋ ಒಂದು ಬೀದಿಯಲ್ಲಿದ್ದೆವು. ಮತ್ತೆ ಹೆದ್ದಾರಿ ಸೇರಲು ಸೇತುವೆಯೊಂದನ್ನು ಹತ್ತಿ ಫ್ರೀವೇಗೆ ಇಳಿಯಬೇಕು. ಸೇತುವೆ ಹತ್ತಲು ಬಲಕ್ಕೆ ತಿರುಗುತ್ತಿದ್ದಾಗ ಹಾಗೇ ಕಾರಿನ ಬಲಗಡೆಯ ಕಿಟಕಿಯೊಳಗಿಂದ ಕಂಡ ದೃಶ್ಯವನ್ನು ನೋಡಿ ತಕ್ಷಣ ಕಾರನ್ನ ಅಲ್ಲೇ ಬದಿಗೆ ನಿಲ್ಲಿಸಬೇಕು ಅನ್ನಿಸಿತು. ಆ ಕತ್ತಲ ರಾತ್ರಿಯಲ್ಲಿ, ಅರಿಯದ ಊರಿನ ಯಾವುದೋ ಬೀದಿಯಲ್ಲಿ ಹೀಗೆ ನಿಲ್ಲುವದಕ್ಕೂ ಸ್ವಲ್ಪ ಅಳುಕು. ಹಿಂದೆ ಬೇರೆ ಯಾವುದೇ ಕಾರಿಲ್ಲದೇ ಇದ್ದದ್ದರಿಂದ ಹಾಗೇ ನಿಧಾನಕ್ಕೆ ಕಾರು ಚಲಿಸುತ್ತಲೇ ನೋಡಿದ ದೃಶ್ಯ ಮನಃಪಟಲದ ಮೇಲೆ ಉಳಿದಿದೆ. ೫-೬ ವರ್ಷಗಳ ಹಿಂದಿನ ನೆನಪುಗಳು ಮಸುಕಾಗಿದ್ದರೂ ಅವತ್ತಿನ ಅನಿಸಿಕೆಯ ಎಳೆಯೊಂದು ಉಳಿದಿದೆ.

ಅಲ್ಲಿ ಬಲಗಡೆ ನಾವೇರುತ್ತಿದ್ದ ಬ್ರಿಜ್ಜಿನ ಬದಿಗೆ ತಗ್ಗಿನ ಜಾಗದಲ್ಲೊಂದು ಬೇಸ್ ಬಾಲಿನ ಮೈದಾನ. ಫ್ಲಡ್ ಲೈಟಿನಲ್ಲಿ ಆ ಮೈದಾನದ ಒಂದು ಭಾಗ ಝಗಮಗಿಸುತ್ತಿದೆ. ಆ ಬೆಳಕಿನಂಗಳವನ್ನು ದಾಟಿ ಕಾಡ ಕತ್ತಲೆ, ಆ ಕತ್ತಲೆಯನ್ನು ದಾಟಿಕೊಂಡು ದೂರದಲ್ಲಿ ನಾವು ನೋಡಿಕೊಂಡು ಬಂದ ಚಿಕಾಗೋ ಡೌನ್ ಟೌನಿನ ಎತ್ತರದ ಕಟ್ಟಡಗಳು, ಅವುಗಳ ಮೈಮೇಲೆ, ಅವುಗಳ ಕಿಟಕಿಗಳಲ್ಲಿ ಬೆಳಗುತ್ತಿರುವ ದೀಪಗಳು.. ಕತ್ತಲೆ ಬೆಳಕು, ಡೌನ್ ಟೌನಿನ ಗೌಜು ಗದ್ದಲೆ ಹಾಗೂ ಅನತಿದೂರದಲ್ಲೇ ಇರುವ ಈ ಜಾಗದ ಪ್ರಶಾಂತತೆ.. ಏನೆಂದು ಹೇಳುವದು ಅಲ್ಲಿ ಕಂಡದ್ದನ್ನ ಅಥವಾ ಅಂದು ಅಲ್ಲಿ ಅನಿಸಿದ್ದನ್ನ…

ಕೆಲವು ಚಿತ್ರಗಳು ನಿಜಕ್ಕೂ ಅಚ್ಚಾಗುವದು ನಮ್ಮ ಚಿತ್ತಭಿತ್ತಿಯಲ್ಲಿ ಮಾತ್ರವೇನೋ! ಆಗಾಗ ತಾವಾಗಿಯೇ ನೆನಪಿನಲ್ಲಿ ಮೂಡುತ್ತಿರುತ್ತವೆ. ಹೀಗೆ ಅವುಗಳ ಬಗ್ಗೆ ಒಂದೆರಡು ಸಾಲುಗಳನ್ನ ಬರೆಯುವದರಿಂದ ಅವುಗಳ ನೆನಪು ಇನ್ನಷ್ಟು ದಿನ ಉಳಿಯಬಹುದೇನೂ ಅಥವಾ ಬರೆದ ಮರುಗಳಿಗೆ ಅವುಗಳ ಕಾಡುವ ಶಕ್ತಿ ಕುಂದಿಯೂ ಬಿಡಬಹುದು! ಇವತ್ತು ಅಂತಹ ಒಂದೆರಡು ಘಟನೆಗಳ ಬಗ್ಗೆ ಬರೆಯುವ ಉಮೇದು.

ಕಿಂಗ್ಸ್ ಕ್ಯಾನಿಯನ್ನಿನ ನಿಸರ್ಗ ರಮಣೀಯತೆಯನ್ನ ಅನುಭವಿಸುತ್ತ ಕಾರು ಓಡಿಸುತ್ತಿದ್ದೆವೊಮ್ಮೆ. ಅಲ್ಲೇ ಕೆಲವು ತಿರುವುಗಳನ್ನ, ಕೆಲವು ಆಹಾ ಎಂಥ ಸೌಂದರ್ಯ ಎನ್ನುವಂತಹ ಜಾಗಗಳನ್ನ ಕಾರಿನಿಂದಲೇ ನೋಡುತ್ತ ಸಾಗಿದವರು ಏರು ಹಾದಿಯಲ್ಲಿ ಸಾಗಿ, ಎತ್ತರದ ಮೇಲಿಂದ ಕಳಿವೆಯೊಳಕ್ಕೆ ನೋಡುವಂತಹ ಜಾಗವೊಂದರಲ್ಲಿ ಕಾರು ನಿಲ್ಲಿಸಿ ಕೆಳಗಿಳಿದೆವು. ನಿಧಾನಕ್ಕೆ ನಡೆದು ರಸ್ತೆಯಂಚಿಗೆ ಬಂದಂತೆ ಅದೆಲ್ಲಿತ್ತೋ ಉತ್ಸಾಹ, ತಟ್ಟನೆ ಹಾಗೇ ಮುನ್ನುಗ್ಗಿಬಿಡುವಾಸೆ, ಹಕ್ಕಿಯ ಹಾಗೆ ಹಾರುತ್ತ ಕೆಳಗೆ, ದೂರದಲ್ಲಿ ಕಂಡ ಹಸಿರ ವೈಭವದ ಮೇಲೆ ತೇಲುವ ಆಸೆ. ‘ನಿಂದರು ಮಗನೇ! ಹಿಂಗ ಇನ್ನೊಂದು ಚೂರು ಮುಂದ ಹೋದರೂ ಉರುಳಿ ಬೀಳತೀದಿ’ ಎಂದು ನನಗೇ ನಾನೇ ಹೇಳಿಕೊಳ್ಳದೇ ಇದ್ದರೆ ಅವತ್ತು ಜಿಗಿದೇ ಬಿಡುತ್ತಿದ್ದೆನೇನೋ! ಅಂತಹದೊಂದು ಭಾವನೆ ಹಿಂದೆ ಯಾವತ್ತೂ ಬಂದಿರಲಿಲ್ಲ, ಅದಾದ ಮೇಲೆ ಮತ್ತೆ ಬಂದಿಲ್ಲ.. ಆದರೂ ಅವತ್ತು ಯಾಕೆ ಬಂದಿತ್ತೋ ಕಾಣೆ. ಅವತ್ತು ಅಲ್ಲಿ ಕಂಡ ಜಾಗದ ಚಿತ್ರ ಇದು,

ಚಿತ್ರವನ್ನು ಈಗ ನೋಡಿದರೆ ಮತ್ತೆ ಹಾಗೇನೂ ಅನಿಸಿಲ್ಲ. ಬಹುಶಃ ಅವತ್ತು ನಾವಲ್ಲಿ ಏರು ಹಾದಿಯಲ್ಲಿ ಕಾರು ಓಡಿಸಿಕೊಂಡು ಬರುವಾಗ ಧುತ್ತೆಂದು ಎದುರಿನ ಆಗಸದಲ್ಲಿ ಗ್ಲೈಡರುಗಳಲ್ಲಿ ತೇಲಿಕೊಂಡು ಸಾಗುತ್ತಿದ್ದವರಿಬ್ಬರನ್ನು ನೋಡಿ ‘ಇವರೆಷ್ಟು ಒಳ್ಳೇ ದೃಶ್ಯವನ್ನು ನೋಡ್ತಾ ಇರಬಹುದಲ್ಲ’ ಎಂದು ಮನಸ್ಸಿನಲ್ಲಿ  ಕರುಬಿಕೊಂಡದ್ದೇ ಆ ರೂಪದಲ್ಲಿ ಹೊರಬಂದಿತ್ತೇನೋ ಅನಿಸುತ್ತದೆ.

ನಯಾಗರಾ ನೋಡಲು ಹೋದಾಗ, ಎಷ್ಟೇ ದೊಡ್ಡ ಜಲಪಾತವಾಗಿದ್ದರೂ, ಜನನಿಬಿಡವಾದ, ಊರ ನಡುವೆಯೇ ಕಾಣುವ ಮತ್ತು ನಾವು ನಿಂತ ನೆಲಮಟ್ಟದಿಂದ ಕೆಳಕ್ಕೆ ಸುರಿಯುವ ಜಲಪಾತದ ಅಗಾಧತೆ ಮೊದಲ ನೋಟಕ್ಕೆ ಎದೆಯೊಳಗಿಳಿಯಲಿಲ್ಲ. ವಾತಾವರಣದಲ್ಲಿದ್ದ ನೀರಿನ ಕಣಗಳು, ಕಿವಿಗೆ ಕೇಳುತ್ತಿದ್ದ ನೀರಿನ ಭೋರ್ಗರೆತಗಳು ಉತ್ಸಾಹವನ್ನೇ ತುಂಬುತ್ತಿದ್ದರೂ, ಅಮೇರಿಕಾದ ಬದಿಯಿಂದ ಕಾಣುವ ನಯಾಗಾರದತ್ತಿನ ಓರೆ ನೋಟ ಅದರ ಅಗಾಧತೆ ನಮ್ಮ ಕಲ್ಪನೆಯಲ್ಲಿ ಇದ್ದಂತೆ ಇಲ್ಲವೇನೋ ಅನ್ನುವ ಭಾವನೆಯನ್ನ ಮೂಡಿಸುತ್ತಿತ್ತು. ಜಲಪಾತದತ್ತ ಹರಿಯುವ ನೀರಿಗೆ ಬಲು ಸಮೀಪದಲ್ಲೇ ನಡೆಯುತ್ತಾ ಅದನ್ನೇ ಕ್ಷಣಕಾಲ ನೋಡುತ್ತ, ಅದು ಹರಿದು, ನೆಲ ಮುಗಿದು ತಟ್ಟನೇ ಕೆಳ ಬೀಳುವದನ್ನೇ ನೋಡುತ್ತಿದ್ದಂತೆಯೇ ಅದರ ವೇಗಕ್ಕೆ ಸಿಕ್ಕಂತಾಗಿ, ಆ ನೀರಿನಲ್ಲಿಯೇ ಪ್ರಪಾತದತ್ತ ತೇಲುತ್ತಿರುವೆ ಅಂತನ್ನಿಸಿದ ಭಾವವನ್ನ ಯಾವ ಕ್ಯಾಮರಾನೂ ಕಟ್ಟಿಕೊಡಲಾರದು. ಅವತ್ತು ಅಲ್ಲಿ ನನ್ನ ಹೆಂಡತಿಯು ರೆಕಾರ್ಡ್ ಮಾಡಿದ ಈ ವಿಡಿಯೋ ನೋಡಿದರೂ ಅದೇ ಭಾವ ಬರುತ್ತದೆ ಅಂತ ಹೇಳಲಾರೆನಾದರೂ ಅವತ್ತಿನ ಅನುಭವವನ್ನು ನನಗಂತೂ ನೆನಪು ಮಾಡಿಸುತ್ತದೆ!

ಅದೇ ನಯಾಗರ ಜಲಪಾತದ ಬಳಿಯೇ, ನೀರು ಇನ್ನೂ ಜಲಪಾತದತ್ತ ಹರಿಯುವ ಭಾಗ, ‘upper rapids’ ನೋಡುವಾಗ ಅಲ್ಲಿ ಆ ನೀರಿನ ರಭಸವನ್ನ, ಅದು ಮಾಡುವ ಶಬ್ದವನ್ನ, ಸಿಡಿಸಿದ ಹನಿಗಳನ್ನ, ಅದರ ಅಲೆಗಳ ತಾಕಲಾಟವನ್ನ ಮತ್ತು ಆ ನೀರಿನ ಶುಭ್ರ ಬಿಳಿಯನ್ನ ನೋಡಿ ಅದರ ಆ ಆಟವನ್ನ ನೆನಪಾದಾಗ ನೋಡಲಿಕ್ಕೆ ಅನುಕೂಲವಾಗಲಿ ಅಂತ ನನ್ನ ಫೋನಿನಲ್ಲಿ ಹಿಡಿದುಕೊಂಡು ಬಂದದ್ದು ಈ ವಿಡಿಯೋ!

ನಗರಗಳನ್ನ, ಪ್ರಕೃತಿ ಸೌಂದರ್ಯವನ್ನ ನೋಡಲು ಹೋದಾಗಿನ ಈ ಸಂದರ್ಭಗಳ ಜೊತೆಗೆ ಮದುವೆ ಮನೆಯಲ್ಲಿ ಕಂಡುಕೊಂಡ ಈ ಒಂದು ವಿಶೇಷವನ್ನು ಹೇಳಿ ಮುಗಿಸುತ್ತೇನೆ.

ಮದುವೆ ಮನೆಯಲ್ಲಿ, ಮುಹೂರ್ತದ ಸಮಯದಲ್ಲಿ, ಅಂತಃಪಟ ಸರಿದ ಮರುಕ್ಷಣ ಸುರಿಮಳೆಯಾಗುವ ಅಕ್ಷತೆಯಲ್ಲಿ ಕೈಯಲ್ಲಿನ ಅಕ್ಷತೆಯನ್ನು ವಧುವರರಿಗೆ ಹಾಕಿದ ಮರುಗಳಿಗೆಯಲ್ಲಿ, ವಧುವಿನ ತಂದೆಯನ್ನ ಕಾಣುವ ಹಾಗಿದ್ದರೆ, ಅವರನ್ನೊಮ್ಮೆ ನೋಡಬೇಕು. ಅವರ ಮುಖದ ಆ ಗಳಿಗೆಯ ಭಾವವನ್ನು, ಅದರ ಸಂತೋಷವನ್ನು ನೋಡಿಯೇ ತಿಳಿಯಬೇಕು. ಸಾಧ್ಯವಾದರೆ ಆ ಕ್ಷಣದಲ್ಲಿ ಅವರನ್ನು ಅಭಿನಂದಿಸಿದರೆ ಅವರ ಸಂತೋಷದಲ್ಲಿ ಇಣುಕಿದ ಅನುಭವವಾಗುತ್ತದೆ. ಹಿಂದೊಮ್ಮೆ ಆಕಸ್ಮಿಕವಾಗಿ ಆದ ಅನುಭವದಿಂದ ಕಲಿತದ್ದಿದು. ಅಕ್ಕಿಕಾಳು ಬಿದ್ದ ಮರುಗಳಿಗೆಯಲ್ಲಿ ಮದುಮಗಳ ತಂದೆಯ ಕೈ ಕುಲುಕಿ ಅಭಿನಂದನೆಗಳನ್ನ ಹೇಳಿದಾಗ ಅವರು ಆ ಹಸ್ತ ಲಾಘವದಲ್ಲಿ ವ್ಯಕ್ತಪಡಿಸಿದ ಸಂತೋಷ ಅವಿಸ್ಮರಣೀಯ.

Advertisements

ಯೋಸಿಮಿಟೆ ಕಣಿವೆಯಲ್ಲಿ

ಯೋಸಿಮಿಟೆ ಕಣಿವೆಯ ಆಳದಲ್ಲಿ ನಾವು ಬಹಳ ಕುಬ್ಜರಾಗಿ ಬಿಡುತ್ತೇವೆ. ಪ್ರಕೃತಿಯ ಮಡಲಲ್ಲಿ ಮನುಷ್ಯ ಎಂದಿದ್ದರೂ ಕುಬ್ಜನೇ. ಇನ್ನೂರು ಮುನ್ನೂರು ಅಡಿ ಎತ್ತರದ ಮರಗಳೂ ಕುಬ್ಜವೆನಿಸುವ ಬೆಟ್ಟಗಳ ಮುಂದೆ ನಾನೆಷ್ಟರವನು ? ಅಲ್ಲಿ ಅಡ್ಡಾಡುತ್ತಿದ್ದರೆ ತಲೆ ಎತ್ತಿಕೊಂಡೇ ತಿರುಗಾಡುವದು! ಯೆಲ್ಲೋಸ್ಟೋನ್ ನ್ಯಾಶನಲ್ ಪಾರ್ಕಿನ ವಿಶಾಲ ಹುಲ್ಲುಗಾವಲು ಕಣ್ಣಿನ ದೃಷ್ಟಿ ಹರಿದಷ್ಟು ದೂರಕ್ಕೂ ಪಸರಿಸಿದರೆ ಇಲ್ಲಿ ಯೋಸಿಮಿಟಿಯಲ್ಲಿ ರಾಜ ಠೀವಿಯಲ್ಲಿ ನಿಂತ ಬೆಟ್ಟಗಳ ದರ್ಬಾರು. ಹೀಗೆ ಬೆಟ್ಟಗಳ ನಡುವೆ ಓಡಾಡುವಾಗಲೆಲ್ಲ ಡೆಹ್ರಾ ಡೂನಿನ ಬೆಟ್ಟಗಳ ಬಗ್ಗೆ ನೆಹರೂ ಬರೆದದ್ದನ್ನ ಹಿಂದೆ ಯಾವಾಗಲೋ ಶಾಲೆಯಲ್ಲಿ ಓದಿದ್ದು ಅಸ್ಪಷ್ಟವಾಗಿ ನೆನಪಾಗುತ್ತದೆ.

016-compress

ಚಳಿಗಾಲದ ಮಂಜು ಕರಗಿ ನೀರಾಗಿ ಹರಿಯುವ ಈ ಸಮಯದಲ್ಲಿ ಜಲಪಾತಗಳ ರುದ್ರ ರಮಣೀಯತೆ ಕೈ ಬೀಸಿ ಕರೆಯುತ್ತದೆ. ಬೆಟ್ಟಗಳ ನೆತ್ತಿಯ ಮೇಲಿಂದ ಧುಮ್ಮಿಕ್ಕುವ ನೀರ ಧಾರೆಯ ಬಳಿ ಸಾರಿ ನಿಂತರೆ ಮೈಮನಕೆಲ್ಲ ಪನ್ನೀರ ಸಿಂಚನ. ಸಾವಿರಕ್ಕೂ ಮೀರಿ ಅಡಿಗಳ ಹಾರಿ ಕೆಳಗಿಳಿಯುವ ನೀರ ಹನಿ ನೋಡ ನೋಡುತ್ತ ಕಣ್ತುಂಬಿ ಎದೆಗೇ ಇಳಿದು ಬಿಡುತ್ತವೆ. ಜಲಪಾತದ ತುತ್ತ ತುದಿಯಲ್ಲಿ ಧುಮ್ಮಿಕ್ಕುವ ನೀರನ್ನೇ ದಿಟ್ಟಿಸುತ್ತಿದ್ದರೆ ಒಮ್ಮೊಮ್ಮೆ ಅಲ್ಲಿಂದ ನುಗ್ಗುವ ನೀರು ಇನ್ನೇನು ಮೈ ಮೇಲೆ ನುಗ್ಗಿ ನಮ್ಮ ಆಪೋಶನ ತೆಗೆದುಕೊಳ್ಳುವದೇನೋ ಅನಿಸಿ ದಿಗಿಲಾಗುತ್ತದೆ. ಬೀಳುವ ನೀರ ಧಾರೆಯಲ್ಲಿಯ ಚಿಕ್ಕ ಚಿಕ್ಕ ಪಾಕೆಟ್ಟುಗಳು ನಾ ಮುಂದೆ ತಾ ಮುಂದೆ ಎನ್ನುವಂತೆ ಧರೆಗಿಳಿಯುವದನ್ನು ನೋಡುವದೊಂದು ಹಬ್ಬ. ಧರೆಗಿಳಿದ ನೀರು ಕಲ್ಲುಗಳ ಮಧ್ಯೆ ರಭಸದಿಂದ ಹರಿಯುತ್ತದೆ. ಆಳವೇ ಇಲ್ಲದೇ ತನ್ನ ಒಳಗನ್ನೆಲ್ಲ ತೋರಿಸುತ್ತದೆ. ಪಾತ್ರ ಅಗಲವಾದಂತೆ ಶಾಂತವಾಗುತ್ತದೆ, ಗೂಢವಾಗುತ್ತದೆ.

ಯೋಸಿಮಿಟೆಯ ಕಾಡು ನಾಡು

ಯೋಸಿಮಿಟೆಯ ಕಾಡು ನಾಡು

ಮಾರಿಪೋಸಾ ಗ್ರೋವಿನ ಸಿಕೋಯಾ ಮರಗಳು ದೈತ್ಯ ಮರಗಳು, ಎತ್ತರದಲ್ಲಿ, ಸುತ್ತಳತೆಯಲ್ಲಿ ಹಾಗೇ ವಯಸ್ಸಿನಲ್ಲೂ. ಆದರೂ ಅವು ಅಷ್ಟೇನೂ ದೈತ್ಯ ಅಲ್ಲವಂತೆ. ಅವುಗಳ ಎತ್ತರ ೩೦೦ ಅಡಿಗೂ ಹೆಚ್ಚು ಹೋಗುವದಿಲ್ಲವಂತೆ ಸಾಮಾನ್ಯವಾಗಿ. ಹಾಗೇ ೨ ರಿಂದ ೩ ಸಾವಿರ ವರ್ಷಗಳಿಗೂ ಹೆಚ್ಚು ಬದುಕುವದೂ ಇಲ್ಲವಂತೆ! ಇಲ್ಲಿರುವ ಗ್ರಿಜ್ಲಿ ಜೈಂಟ್ ಎನ್ನುವ ಮರದ ಸುತ್ತಳತೆ ಕೇವಲ ೯೨ ಅಡಿ. ಅವುಗಳ ದೀರ್ಘ ಜೀವನದಲ್ಲಿ ಅದೆಷ್ಟು ಕಾಳ್ಗಿಚ್ಚುಗಳನ್ನ ಕಂಡಿರುತ್ತವೆಯೋ. ಎಷ್ಟೋ ಮರಗಳಲ್ಲಿ ಬೆಂಕಿ ಪೊಟರೆಗಳನ್ನ ಮಾಡಿದೆ. ದೊಡ್ಡ ಪಿಕ್ ಅಪ್ ಟ್ರಕ್ಕುಗಳು ಹಾದು ಹೋಗುವಷ್ಟು ದೊಡ್ಡ ಪೊಟರೆಗಳನ್ನು ಮಾಡಿದೆ.

ಈ ಬೇಸಿಗೆ ಮುನ್ನಿನ ದಿನಗಳಲ್ಲಿ ಯೋಸಿಮಿಟಿಯಂತಹ ಸ್ಥಳಗಳಲ್ಲಿ ಪ್ರಕೃತಿಯ ಜೀವಂತಿಕೆಯನ್ನು ಅನುಭವಿಸಬೇಕು. ಮೈ ಮನಗಳಲ್ಲಿ ತುಂಬಿಕೊಂಡು ತರಬೇಕು ಆ ಸಮಷ್ಟಿಯನ್ನ. ಕೆಲವು ವರ್ಷಗಳ ಕೆಳಗೆ ರಾಕಿ ಮೌಂಟೇನ್ಸ ನೋಡಲು ಹೋದಾಗ ಅಲ್ಲಿ ಹತ್ತಿರದ ಆಸ್ಪೆನ್ನಿನ ಮರೂನ್ ಬೆಲ್ಸಿನ ಸೊಬಗನ್ನು ನೋಡಿದಾಗ ಹೀಗನಿಸಿತ್ತು,

ತಿಳಿಹಳದಿ ಹೊಸಹಸಿರ ವನರಾಶಿ ತ-
ನ್ನೊಳ ತೋರುತ್ತ ಹರಿವ ತಿಳಿನೀರ ಹೊಳೆ
ಸುಳಿಸುಳಿದು ಮೈದಡವಿ ಕಚಗುಳಿಯಿಟ್ಟ ಗಾಳಿ
ಬಿಳಿ ಹಿಮವ ಕೊಡವಿಕೊಳ್ಳುತಿರುವ ಬೆಟ್ಟ
ವ್ಯಷ್ಟಿಯಲಿ ಅಷ್ಟಷ್ಟೆ ಮನ ತುಷ್ಟಿಗೊಳಿಸುವವು, ಕೈ
ಮುಷ್ಟಿಯಂತೆ ಸಮಷ್ಟಿಯಲಿ ಒತ್ತಟ್ಟಿಗಿರುವ
ಸೃಷ್ಟಿ ಸೊಬಗ ಹಿಡಿದಿಡುವಾಸೆ ಚಿತ್ತದೊಳು
ದೃಷ್ಟಿ ಸಾಲದು ಒಳಗಣ್ಣ ತೆರೆಸು ಹೇ ಪರಮೇಷ್ಠಿ

ಇಲ್ಲಿ ಯೋಸಿಮಿಟಿಯ ಕಣಿವೆಯಲ್ಲಿ ಅಲೆದಾಡಿದಾಗ ಮತ್ತೆ ನೆನಪಾಯಿತು (ಬಿಸಿಲು ೯೦ F ಗಿಂತ ಮೇಲೇ ಇದ್ದರೂ!).

(ಹೋದ ವಾರ Carbon Foot Print ಬಗ್ಗೆ ಬರೆದಿದ್ದೆ. ಈ ಟ್ರಿಪ್ಪಿಗೆ ಡ್ರೈವ್ ಮಾಡಿದ್ದು ೫೨೦ ಮೈಲು, ವ್ಯಾನಿನಲ್ಲಿ. ಅದೇ ವೆಬ್ ಸೈಟಿನಲ್ಲಿ ಹಾಕಿದಾಗ ಅದು ತೋರಿಸಿದ್ದು :
0.30 tonnes: 520 miles in a USA 2008 TOYOTA SIENNA 4WD 3.5, Auto(L5))

ಇಂಗಾಲದ ಹೆಜ್ಜೆ ಗುರುತು

ಬಹಳ ದಿವಸಗಳಿಂದ ಯೋಚಿಸ್ತಾ ಇದ್ದೆ, ನನ್ನ ಕಾರ್ಬನ್ ಫೂಟ್ ಪ್ರಿಂಟ್ ಎಷ್ಟಿರಬಹುದು ಅಂತ. ಇವತ್ತು ಒಂದೆರಡು ವೆಬ್ ಸೈಟ್ ಸಿಕ್ತು. ಅಲ್ಲಿ ನನ್ನ ಮಾಹಿತಿ ಹಾಕಿದಾಗ ಬಂದದ್ದು ಈ ಚಿತ್ರಗಳು ..

ಮೊದಲನೇ ಚಿತ್ರದ ಪ್ರಕಾರ ಎಲ್ಲರೂ ನನ್ನಷ್ಟೇ ಬಳಸಿದರೆ ೪ ವರೆ ಭೂಮಿ ಬೇಕಂತೆ!!!

ವರ್ಷವಿಡೀ ಇಲ್ಲಿ ಕಾರು ಓಡಿಸುವದು ಹಾಗೂ ವರ್ಷಕ್ಕೊಮ್ಮೆ ಭಾರತಕ್ಕೆ ಹೋಗುವದು ಇವುಗಳಿಂದ ಹೊಮ್ಮುವ ಇಂಗಾಲದ ಪ್ರಮಾಣ ಹೆಚ್ಚು ಕಡಿಮೆ ಸಮ. ಕಾರು ಹೊರ ಹಾಕುವ ಪ್ರಮಾಣ ಒಂದಷ್ಟು ಹೆಚ್ಚೇ. ನನ್ನ ೧೦ ವರ್ಷ ಹಳೇ ಹೊಂಡಾ ಅಕಾರ್ಡ್ ಓಡಿಸುವದರ ಬದಲು ಟೊಯೋಟಾ ಪ್ರೈಯಸ್ ಓಡಿಸಿದರೆ foot print ಸಾಕಷ್ಟು ಕಡಿಮೆ ಮಾಡಬಹುದು. ಆದರೆ ೧೦ ವರ್ಷ ಹಳೆಯದಾದರೂ ಕೇವಲ ೮೦ ಚಿಲ್ಲರೆ ಸಾವಿರ ಮೈಲು ಓಡಿರುವ ಕಾರು ಈಗಲೇ ಯಾಕೆ ಬದಲಾಯಿಸಬೇಕು ?

ಅಥವಾ ಆಫೀಸಿಗೆ ಹತ್ತಿರ ಮನೆ ಮಾಡಬೇಕು, ಹೆಚ್ಚಿನ ಓಡಾಟ ಅಲ್ಲಿಗೇ ತಾನೆ? ಆಗ ಬಾಡಿಗೆ ಈಗಿನ ಎರಡರಷ್ಟಾಗುತ್ತದೆ! ಹೀಗಾಗಿ ಅದನ್ನ ಮಾಡಲಾಗದು.

ಉಳಿದದ್ದು ವಾರದಲ್ಲಿ ಒಂದು ದಿವಸ ಕಾರಿನ ಬದಲು ಬಸ್ಸಿನಲ್ಲಿ ಆಫೀಸಿಗೆ ಹೋಗುವದು. ಆದರೆ ಸಧ್ಯಕ್ಕೆ ಅದನ್ನ ಮಾಡಲಾಗದು ಅನಿಸುತ್ತದೆ. ನೋಡಬೇಕು ಹೇಗಾದರೂ ಸಾಧ್ಯವಾದರೆ ಒಳ್ಳೆಯದು 🙂

ತಿನ್ನುವದು ಸಸ್ಯಾಹಾರ, ಹೆಚ್ಚಾಗಿ ಕೊಳ್ಳುವದು ಭಾರತೀಯರ ಅಂಗಡಿಗಳಿಂದ. ಅವರು ತರಕಾರಿಗಳನ್ನ ತರಿಸೋದು ಎಲ್ಲಿಂದಲೋ? ಸುಪರ್ ಮಾರ್ಕೆಟ್ಟುಗಳಿಗೆ ಹೋಲಿಸಿದರೆ ಕಮ್ಮಿ ಬೆಲೆ ಇರುವದರಿಂದ ಅವು ಅಷ್ಟೇನೂ ದೂರದಿಂದ ಬರುವದಿಲ್ಲ ಅನಿಸುತ್ತದೆ.

ಮನೆಯಲ್ಲಿ CFL ಬಳಸುತ್ತೇವೆ, ಡಿಶ್ ವಾಶರ್ ಹಾಕುವಾಗ ’Air Dry’ ಬಳಸೋದು, ಹಾಗೇ ಹಾಕುವ ಸಮಯ ಕೂಡ ಅತಿ ಕಡಿಮೆ. ಪೂರ್ತಿ ತುಂಬಿದಾಗಲೇ ಹಾಕೋದು ಹಾಗೂ ರಾತ್ರಿ ಮಲಗುವ ಸಮಯದಲ್ಲಿ ಹಾಕುವದು. ಅಲ್ಲಿ ಇನ್ನೇನೂ ಕಡಿಮೆ ಮಾಡುವದು ಸಾಧ್ಯ ಅನಿಸುವದಿಲ್ಲ. ಅಷ್ಟಕ್ಕೂ ನನ್ನ ಕರೆಂಟ್ ಬಿಲ್ ಬರೋದೊ ೨೫ ಚಿಲ್ರೆ ಡಾಲರು.

ನೀರಿನ ಬಳಕೆ ಇನ್ನಷ್ಟು ಸುಧಾರಿಸಬಹುದು. ಗುಲ್ಬರ್ಗಾ/ಸುರತ್ಕಲ್ಲಿನ ನೀರಿಲ್ಲದ ದಿನಗಳಲ್ಲಿ ಒಂದು ಬಕೆಟ್ಟಿನಲ್ಲೇ ಆಗುತ್ತಿದ್ದ ಪ್ರಾತಃ ಕಾಲದ ಕೆಲಸಗಳಿಗೆ ಈಗ (ಮುಖ್ಯವಾಗಿ ಸ್ನಾನಕ್ಕೆ) ಸಾಕಷ್ಟು ನೀರು ಪೋಲಾಗುತ್ತದೆ ಅನಿಸುತ್ತದೆ. ನೋಡೊಣ ಎಷ್ಟು ಕಡಿತ ಮಾಡಬಹುದು.

ಭಾರತದಲ್ಲಿ ತರಕಾರಿ ಮಾರ್ಕೆಟ್ಟಿಗೆ ಹೋಗುವಾಗ ಹೆಗಲಿಗೊಂದು ಚೀಲ ಹಾಕಿಕೊಂಡು ಹೋಗುವಂತೆ ಇಲ್ಲೂ ಮತ್ತೆ ಮತ್ತೆ ಬಳಸುವ ಚೀಲ ಇಟ್ಟುಕೊಂಡರೆ ಒಂದಷ್ಟು ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡ ಬಹುದು. ಆದರೆ ವಾರಕ್ಕೊಮ್ಮೆ ಅಂಗಡಿಗೆ ಹೋಗಿ ಹೊತ್ತುಕೊಂಡು ಬರುವ ಸಾಮಾನು ತರಲು ಸಾಕಷ್ಟು ದೊಡ್ಡ ಚೀಲವೇ ಇಡಬೇಕು! ಅಥವಾ ಒಂದಷ್ಟು ಚಿಕ್ಕ ಚಿಕ್ಕ ಚೀಲಗಳನ್ನಿಡಬೇಕು.

ನೀವೇನು ಮಾಡುತ್ತಿರುವಿರಿ ಹಂಚಿಕೊಳ್ಳುವಿರಾ?