ಒಬ್ಬನೇ ಮನುಷ್ಯ!

‘ಹೋಗಿ ಆ ಸಾರ್ವಜನಿಕ ಸ್ನಾನಗೃಹದಲ್ಲಿ ಎಷ್ಟು ಮಂದಿ ಇದ್ದಾರೆ ಎಂದು ನೋಡಿಕೊಂಡು ಬಾ.’ ಅಂತ ಸಿರಿವಂತನೊಬ್ಬ ತನ್ನ ಸೇವಕನಿಗೆ ಹೇಳುತ್ತಾನೆ. ಬಹುಷಃ ಈಸೋಪನ ಕತೆಗಳಲ್ಲಿ ಓದಿದ್ದಿರಬೇಕು ಈ ಕತೆಯನ್ನ. ಆ ಸೇವಕನೋ ಲಗುಬಗೆಯಿಂದ ಓಡಿ ಹೋಗಿ ಬರುತ್ತಾನೆ. ಬಂದವನೇ ಹೇಳುತ್ತಾನೆ, ‘ಸ್ವಾಮಿ ಅಲ್ಲಿರುವದು ಒಬ್ಬನೇ ಮನುಷ್ಯ!’ ಈ ಸ್ವಾಮಿಗೀಗ ಬಲು ಖುಷಿ. ನೆಮ್ಮದಿಯಿಂದ ಸ್ನಾನ ಮಾಡಬಹುದೆಂದು ತಡ ಮಾಡದೆ ಅಲ್ಲಿಗೆ ಹೋದರೆ ಅಲ್ಲಿ ಕಂಡದ್ದೇನು? ಸ್ನಾನಗೃಹ ಜನರಿಂದ ಗಿಜಿಗುಟ್ಟುತ್ತಿದೆ!

ತನ್ನ ಜೊತೆಯಲ್ಲೇ ಬಂದ ಸೇವಕನನ್ನು ಜಬರಿಸಿದಾಗ ಅವನು ಹೇಳಿದ್ದೇನು? ‘ಸ್ವಾಮಿ, ನಿಜ ಇಲ್ಲಿ ಇವರೆಲ್ಲ ಇದ್ದಾರೆ. ಆದರೆ ನಾನು ಬಂದಾಗ ಇಲ್ಲಿ ಈ ಸ್ನಾನದ ಮನೆಯ ಬಾಗಿಲಿಗಡ್ಡವಾಗಿ ದೊಡ್ಡ ಕಲ್ಲೊಂದು ಬಿದ್ದಿತ್ತು. ಎಲ್ಲರಿಗೂ ಅದು ಅಡ್ಡವಾಗಿತ್ತು. ಅವರೆಲ್ಲ ಅದನ್ನು ಬಳಸಿಕೊಂಡು ಅಥವಾ ಅದರ ಮೇಲೇರಿ ಅದನ್ನು ದಾಟಿಕೊಂಡು ಹೋಗುತ್ತಿದ್ದರು. ಆದರೆ ಒಬ್ಬನು ಮಾತ್ರ ಆ ಕಲ್ಲನ್ನು ದಾರಿಯಿಂದ ಸರಿಸಿ ಎಲ್ಲರಿಗೂ ಅನುಕೂಲ ಮಾಡಿಕೊಟ್ಟ. ಅದಕ್ಕೆ ಒಬ್ಬನೇ ಮನುಷ್ಯನಿದ್ದಾನೆಂದು ನಾನು ಹೇಳಿದ್ದು!’

ಒಂದಷ್ಟು ದಿನಗಳ ಕೆಳಗೆ ಕೋರಮಂಗಲದ ಫೋರಂ ಮಾಲಿನ ಮುಂದಿನ ಕಾಲ್ದಾರಿಯಲ್ಲಿ ಹೋಗುವಾಗ ಗ್ಯಾಸ್ ಸಿಲಿಂಡರುಗಳನ್ನು ಇಟ್ಟುಕೊಂಡು ಹೋಗುತ್ತಿದ್ದ ಅಟೋ (ಸಾಮಾನು ಸಾಗಣೆಯ ಆಟೋ) ಒಂದು ಅಲ್ಲಿಯ ಅಂಗಡಿಯೊಂದರಿಂದ ಬಂದು ಫುಟ್ ಪಾಥನ್ನು ದಾಟಿ ರಸ್ತೆಗೆ ಇಳಿಯುತ್ತಿತ್ತು. ಆ ಆಟೋದ ಹಿಂಭಾಗದಲ್ಲಿ  ಒಂದರ ಕಬ್ಬಿಣದ ಚೈನಿನ ಒಂದು ತುದಿ ಹೊರಗೇ ನೇತಾಡುತ್ತಿತ್ತು. ಆಟೋ ನಿಧಾನಕ್ಕೆ ರಸ್ತೆಗಿಳಿಯುತ್ತಿದ್ದಾಗ ಅಲ್ಲೇ ಇಬ್ಬರು ಪಾದಚಾರಿಗಳು ನನಗೆದುರಾಗಿ ಬರುತ್ತಿದ್ದವರು ಆ ಆಟೋವನ್ನು ರಸ್ತೆಗಿಳಿಯಲು ಬಿಟ್ಟು ಅದರ ಹಿಂಭಾಗದಲ್ಲಿ ಬಂದರು. ಅದರಲ್ಲೊಬ್ಬನ ಕಣ್ಣಿಗೆ ಓಲಾಡುತ್ತಿದ್ದ ಆ ಚೈನಿನ ತುದಿ, ಅದರ ಭಾರದ ಹುಕ್ ಕಾಣಿಸಿತು. ಆಗ ಆತ ಅತ್ಯಂತ ಸಹಜವಾಗಿ, ತನ್ನ ಗೆಳೆಯನೊಂದಿಗೆ ಆಡುತ್ತಿದ್ದ ಮಾತನ್ನೂ ನಿಲ್ಲಿಸದೆ, ಆ ಹುಕ್ಕಿನ ಭಾಗವನ್ನೆತ್ತಿ ಆಟೋದ ಒಳಗಿಟ್ಟು ಮುಂದೆ ನಡೆದ. ಕತೆ ಮತ್ತೆ ನೆನಪಾಯ್ತು!

Advertisements

ಜಯ ಜಯ ವಿಜಯೀ ರಘುರಾಮ

ನೃತ್ಯ ನಾಟಕ ಜಯ ಜಯ ವಿಜಯೀ ರಘುರಾಮದಲ್ಲಿ  ‘ಹರನ ಬಿಲ್ಲನ್ನು ಪರಕಿಸುವೆ..’ ಎಂದು ಹೇಳುತ್ತ ರಾಮನು ಶಿವ ಧನುವನ್ನು ಎತ್ತಿ ಮುರಿಯುವ ದೃಶ್ಯವನ್ನು ನೋಡುತ್ತಿರುವಾಗ ಅನಿಸಿದ್ದು..

“ಕಾದವರ ಕತೆಯಿದು, ರಾಮಾಯಣವು ಸಿರಿ ರಾಮಚಂದ್ರನಿಗಾಗಿ ಕಾದವರ ಕತೆಯಿದು. ತಾಯಿ ಕೌಸಲ್ಯೆ, ತಂದೆ ದಶರಥ, ಸುಮಿತ್ರೆ ಕೈಕೇಯಿಯರು, ವಿಶ್ವಾಮಿತ್ರ, ಮಿಥಿಲೆಯಲ್ಲಿ ಮೈಥಿಲಿ, ಪರಶುರಾಮ, ಮಂಥರೆಯೂ ಬಹುಶಃ, ಅಯೋಧ್ಯೆಯ ಜನರು, ಗಂಗೆಯ ತಡಿಯಲ್ಲಿ ಗುಹ, ಕಾಡಿನ ಋಷಿ ಮುನಿಗಳು, ಮಿಸುನಿ ಜಿಂಕೆ ಮಾರೀಚ, ಕಳ್ಳ ರಾವಣನೆದುರಿಸಿದ ಜಟಾಯು, ಶಬರಿ, ಋಷ್ಯಮೂಕದಲಿ ಹನುಮಂತ, ಸಂಪಾತಿ, ಅಶೋಕವನದಲ್ಲಿ ಸೀತೆ, ಎಲ್ಲರೂ ರಾಮನಿಗಾಗಿ ಕಾದವರೆ. ರಾವಣ ಕುಂಭಕರ್ಣರೂ ಅವನಿಗಾಗಿ ಕಾದವರೇ! ಕಾದವರನೆಲ್ಲ ಕಾದ ಮೋದ ಮೂರ್ತಿ ರಘು ರಾಮನ ಕತೆಯಿದು ರಾಮಾಯಣವು.”

‘ಭಾವ ಶುದ್ಧಿಯಲಿ ನೆನೆವ ತನ್ನ  ಭಕುತರ ಪೊರೆವ ಸೃಷ್ಟಿಯೊಳಗೆಣೆಗಾಣೆ ಅಯೋಧ್ಯಾ ರಾಮ’ ಎಂದ ಪುರಂದರ ದಾಸರ ಮಾತಿನಂತೆ ತನಗಾಗಿ ಕಾದವರನ್ನು ರಾಮ ತಾನು ಕಾದ ಕತೆ ರಾಮಾಯಣದ ಕತೆ. ಕಾದವರನ್ನು ಪರಕಿಸಿಯೇ ಕಾದ ರಾಮ, ಅತ್ಯಂತ ಕಠಿಣ ಪರೀಕ್ಷೆಯಾದದ್ದು ಮಾತ್ರ ಸೀತೆಗೆ!

ಪುತಿನ ಅವರ ಪದ್ಯಗಳ ಮೂಲಕ ರಾಮಾಯಣದ ಕತೆಯನ್ನು ಒಂದು ದೃಶ್ಯಕಾವ್ಯವನ್ನಾಗಿ, ಅಮೋಘ ನೃತ್ಯ ನಾಟಕವನ್ನಾಗಿ ನಮ್ಮೆಲ್ಲರ ಮುಂದಿಟ್ಟ ಶ್ರೀಮತಿ ಅಲಮೇಲು ಅಯ್ಯಂಗಾರ್ ಮತ್ತು ಅವರ ತಂಡಕ್ಕೆ ಅಭಿನಂದನೆಗಳು ಮತ್ತು ಧನ್ಯವಾದಗಳು. ಐದೂವರೆ  ವರ್ಷದ ನಮ್ಮ ಮಗನೂ ಐಪಾಡು ಕೇಳದೇ ರಾಮಾಯಣದಲ್ಲಿ ಮಗ್ನನಾಗಿದ್ದಷ್ಟೇ ಅಲ್ಲದೇ ನಾಟಕ ಮುಗಿಸಿ ಮನೆಗೆ ಹೋದ ಮೇಲೆ, ರಾತ್ರಿ ಮಲಗುವ ಮುನ್ನಿನ ಕಥೆಯಾಗಿ ರಾಮಾಯಣವನ್ನೇ ಹೇಳು ಅಂದಿದ್ದು ಅಚ್ಚರಿ ಮೂಡಿಸಿತ್ತು.

ಈ ನೃತ್ಯ ನಾಟಕದಲ್ಲಿ ನನಗೆ ಇಷ್ಟವಾದ ಭಾಗಗಳು,

೧. ಕಣ್ಣಿಗೆ ಕಟ್ಟುವಂತಹ ರಂಗ ಸಜ್ಜಿಕೆ, ನೆರಳು ಬೆಳಕಿನ ವ್ಯವಸ್ಥೆ, ದೇವಲೋಕವನ್ನೇ ಧರೆಗಿಳಿಸಿದಂತಹ ವೇಷ ಭೂಷಣಗಳು, ಆಯಾ ಸಂದರ್ಭಗಳಿಗೆ ಸೂಕ್ತವಾದ ಹಿನ್ನೆಲೆ ಪರದೆಗಳು, ಒಟ್ಟಾರೆಯಾಗಿ ಯಾವುದೇ ಪೌರಾಣಿಕ ಚಲನಚಿತ್ರಕ್ಕೂ ಕಡಿಮೆ ಇಲ್ಲದಂತಹ ಪ್ರಯೋಗ. ಮೊದಲ ದೃಶ್ಯದ ಪಾಲ್ಗಡಲು, ಶೇಷಶಾಯಿ ನಾರಾಯಣ ಮತ್ತು ಲಕ್ಷ್ಮೀ ದೇವಿಯರ ಚಿತ್ರಣದಿಂದ ಆರಂಭಿಸಿ, ಕೊನೆಯ ದೃಶ್ಯದ ‘ದಕ್ಷಿಣೆ ಲಕ್ಷ್ಮಣೋ ಯಸ್ಯ ವಾಮೇತು ಜನಕಾತ್ಮಜಾ। ಪುರತೋ ಮಾರುತೀರ್ಯಸ್ಯ ತಂ ವಂದೇ ರಘುನಂದನಮ್’ ಚಿತ್ರಣದವರೆಗೆ ಎಲ್ಲವೂ ಎಷ್ಟೊಂದು ಚನ್ನಾಗಿತ್ತು! ಅಗ್ನಿಕುಂಡದ ಮರೆಯಲ್ಲೇ ರಂಗಕ್ಕೆ ಬಂದ ಅಗ್ನಿದೇವ ನಿಧಾನಕ್ಕೆ ಪ್ರತ್ಯಕ್ಷನಾಗುವದು, ಮತ್ತೆ ಹಾಗೇ ನಿಧಾನಕ್ಕೆ ಮಾಯವಾಗುವದು, ಬಹಳ ಇಫೆಕ್ಟಿವ್ ಆಗಿತ್ತು.

೨. ರಾಮೋದಯ ಭಾಗದಲ್ಲಿ ಹಾಗೂ ರಾಮ ಪಟ್ಟಾಭಿಷೇಕದ ಭಾಗದಲ್ಲಿ ಎಷ್ಟೊಂದು ಜನರಿದ್ದರು ರಂಗದ ಮೇಲೆ! ಅವರೆಲ್ಲ ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತ, ಸಂದರ್ಭಕ್ಕೆ ತಕ್ಕಂತೆ ಅತ್ತಿಂದಿತ್ತ ಓಡಾಡುತ್ತ, ತೊಟ್ಟಿಲಲ್ಲಿ ಮಗುಗಳನ್ನು ಮಲಗಿಸುತ್ತ, ಹಾಗೇ ಮತ್ತೆ ಎತ್ತಿಕೊಂಡು ಆನಂದಪಡುತ್ತ ಆಯಾ ಸಂದರ್ಭದ ಸಡಗರವನ್ನು ಬಹಳ ಚನ್ನಾಗಿ ತೋರಿಸಿದರು. ರಾಮೋದಯದ ಸಂದರ್ಭದಲ್ಲಿ ರಾಮ, ಲಕ್ಷ್ಮಣ, ಭರತ, ಶತ್ರುಘ್ನರ ಪಾತ್ರಕ್ಕಾಗಿ ಬಳಸಿದ ಗೊಂಬೆಗಳು ಮಗುವಿನಷ್ಟು ಭಾರವಾಗಿದ್ದರೆ ಆ ಮಕ್ಕಳನ್ನು ಎತ್ತುವಾಗ ಮತ್ತು ಮಲಗಿಸುವಾಗ ಇನ್ನಷ್ಟು ಸಹಜವಾಗಿ ಬರಬಹುದಿತ್ತೇ ಅಂತ ಅನಿಸಿತು, ಆದರೆ ಆ ಅನಿಸಿಕೆ ಅವು ಗೊಂಬೆಗಳು ಎನ್ನುವ ಕಾರಣಕ್ಕೆ ನನ್ನ ಮನಸ್ಸಿಗೆ ಮೂಡಿದ ಅನಿಸಿಕೆಯಾಗಿರುವ ಸಾಧ್ಯತೆಯೇ ಹೆಚ್ಚು 🙂

೩. ನೃತ್ಯ ನಾಟಕವೇ ಎಂದ ಮೇಲೆ ಇಲ್ಲಿ ನೃತ್ಯಕ್ಕೆ, ಸಂಗೀತಕ್ಕೆ ಹೆಚ್ಚಿನ ಆದ್ಯತೆ. ನೃತ್ಯರೋಪದಲ್ಲೇ ತೋರಿಸಿದ ಭಾಗಗಳು ಸೊಗಸಾಗಿ ಮೂಡಿಬಂದವು. ಸಮೂಹ ನೃತ್ಯದ ಮೂಲಕ ತೋರಿದ ಸಡಗರ, ರಾಮ ಶಿವಧನುವನ್ನು ಎತ್ತುವ ಮುನ್ನ ಸೀತೆಯ ಕಾತರ, ಶಿವಧನುವನ್ನು ಮುರಿದಾದ ಮೇಲಿನ ಸಂತಸ, ನವವಧುವಿನ ನಾಚಿಕೆ, ಹರಿಣಾಭಿಸರಣದ ಭಾಗದಲ್ಲಿ ಹರಿಣವಾಗಿ ಬಂದ ಮಗುವಿನ ಮುದ್ದು ಓಡಾಟ, ರಾವಣನ ಆರ್ಭಟ, ಸೀತೆಯ ಸಂಕಟ, ರಾವಣ ವಧೆಯ ನಂತರ ಸೀತೆ ತಾನೇ ಅಗ್ನಿಗೆ ಹಾರಬೇಕಾದಂತಹ ಅನಿವಾರ್ಯತೆ, ಆ ಸಂದರ್ಭವನ್ನು ನೃತ್ಯದಲ್ಲಿ ತೋರಿಸಿದ ಬಗೆ, ತಟ್ಟನೆ ಬೆಂಕಿಯ ಕುಂಡದಲ್ಲಿ ಬಿದ್ದು ಮಾಯವಾದ ಸೀತೆ, ಆ ಕ್ಷಣದ ಸಂಗೀತ, ರಾಮನೂ ಅಲ್ಲಿ ದುಃಖ ಪಡುವ ಭಾಗ, ಈ ಎಲ್ಲವನ್ನೂ ನೃತ್ಯದ ಮೂಲಕ ತೋರಿಸುವಾಗ ಅಲ್ಲಿ ಕಂಡ ಅಭಿನಯ ಆಯಾ ಸಂದರ್ಭವನ್ನು ಸಮರ್ಥವಾಗಿ ಹಿಡಿದುಕೊಟ್ಟಿತು. ಹರಿಣಾಭಿಸರಣದಲ್ಲಿ ಸೀತೆಯನ್ನು ರಾವಣನೆತ್ತಿಕೊಂಡೊಯ್ಯುವ ಭಾಗ ಮತ್ತು ಸೀತೆ ಅಗ್ನಿಕುಂಡಕ್ಕೆ ಹಾರುವ ಭಾಗಗಳು ನೋಡುಗರ ಗಂಟಲುಬ್ಬಿಸಿದ ಭಾಗಗಳು.

೪. ಪುತಿನ ಅವರ ಹಾಡುಗಳು, ಅಲ್ಲಿ ಬಳಸಿದ ಪದಗಳು, ಅವುಗಳನ್ನು ಭಾವಪೂರ್ಣವಾಗಿ ಹೇಳಿದ್ದು, ಇದೆಲ್ಲಕ್ಕೂ ಸಹಕಾರಿಯಾಗುವಂತೆ ಆ ಮಾತುಗಳ ಇಂಗ್ಲೀಷ್ ಅವತರಣಿಕೆಯನ್ನೂ ಪಕ್ಕದ ತೆರೆಯ ಮೇಲೆ ತೋರಿಸಿದ್ದು ತುಂಬ ಚನ್ನಾಗಿತ್ತು. ಇಂಗ್ಲೀಷಿನ ಜೊತೆಗೆ ಕನ್ನಡದಲ್ಲೂ ಇದ್ದಿದ್ದರೆ ನೃತ್ಯ, ಸಂಗೀತದ ಭಾಗಗಳಲ್ಲಿ ಕೆಲವೊಮ್ಮೆ ಪುತಿನ ಸಾಹಿತ್ಯ ಸರಿಯಾಗಿ ಕೇಳಿಸದೇ ಇದ್ದಾಗ ಪರದೆಯ ಮೇಲೆ ಅದನ್ನು ಅದಿರುವಂತೆಯೇ ಓದಿಕೊಳ್ಳಬಹುದಿತ್ತಲ್ಲ ಎಂದನಿಸಿತು.

ಒಟ್ಟಾರೆಯಾಗಿ ಒಂದು ಅಪರೂಪದ ಪ್ರಯೋಗಕ್ಕೆ ನಾವು ಸಾಕ್ಷಿಯಾದೆವು ಅಂತ ಅನಿಸಿತು ‘ಜಯ ಜಯ ವಿಜಯೀ ರಘುರಾಮ’ ನೋಡಿ. ನಾಟಕ ಮುಗಿಸಿ ಮನೆಗೆ ಹೋದ ಮೇಲೆ ನಡೆದ ಒಂದು ಲಘು ಪ್ರಸಂಗದೊಂದಿಗೆ ನನ್ನ ಅನಿಸಿಕೆಗಳ ಕೆಲವು ಸಾಲುಗಳಿಗೆ ಮಂಗಳ ಹೇಳುವೆ 🙂

ನನ್ನ ಹೆಂಡತಿ ಮಗನಿಗೆ ಹೇಳುತ್ತಿದ್ದಳು: ಪುಟ್ಟಾ ರಾಮ ತ್ರೇತಾಯುಗದಾಗ ಇದ್ದ, ಕೃಷ್ಣ ದ್ವಾಪರಯುಗದಾಗಿದ್ದ. ಈಗ ಕಲಿಯುಗ ನಡದದ.
ಮಗ : ಅಮ್ಮ ಇದು ಲರ್ನಿಂಗ್ ಯುಗಾನ?
ಹೆಂಡತಿ : ಲರ್ನಿಂಗ್ ಯುಗಾನ? ಅಂತ ಅಂದವಳಿಗೆ ಮರುಕ್ಷಣದಲ್ಲೇ ಹೊಳೆಯಿತು ಇದು ಕನ್ನಡ ಕಲಿ ಪ್ರಭಾವ ಅಂತ 🙂

(ಮುಗಿಸುವ ಮುನ್ನ: ಶಬರಿ ಪ್ರಸಂಗವನ್ನು ನೋಡಲಾಗಲಿಲ್ಲ ನನಗೆ, ಮಗನ ಹಸಿವೆ ತಣಿಸಲು ಅವನನ್ನು ಕರೆದುಕೊಂಡು ಹೊರಗೆ ಹೋಗಿದ್ದರಿಂದ ಆ ಭಾಗ ತಪ್ಪಿಸಿಕೊಂಡೆ…)

ಮನಸ್ಸಿನ ಚಿತ್ರಗಳು

ಅದೇ ತಾನೇ ನೋಡಿಕೊಂಡು ಬಂದ ಚಿಕಾಗೋ ನಗರದ ಡೌನ್ ಟೌನ್ ಹಿಂದುಳಿದಿದೆ. ನಾವು ಸೇರಬೇಕಿದ್ದ ನಮ್ಮ ಮಿತ್ರರ ಮನೆಯ ಹಾದಿ ಸ್ವಲ್ಪ ತಪ್ಪಿದೆ. ರಸ್ತೆ ಕಾಮಗಾರಿಯ ಕೆಲಸವೊಂದು ನಡೆದಿರುವದನ್ನು ಅರಿಯದ ಜಿ.ಪಿ.ಎಸ್ಸು ಹೇಳಿದ ಹಾದಿಗೆ ಹೋದವರು ಬದಲಿ ಹಾದಿ ಹುಡುಕಬೇಕಾಯಿತು. ಹಾಗೇ ಹುಡುಕುತ್ತಾ ಹೊರಟವರು ಚಿಕಾಗೋದ ಯಾವುದೋ ಒಂದು ಬೀದಿಯಲ್ಲಿದ್ದೆವು. ಮತ್ತೆ ಹೆದ್ದಾರಿ ಸೇರಲು ಸೇತುವೆಯೊಂದನ್ನು ಹತ್ತಿ ಫ್ರೀವೇಗೆ ಇಳಿಯಬೇಕು. ಸೇತುವೆ ಹತ್ತಲು ಬಲಕ್ಕೆ ತಿರುಗುತ್ತಿದ್ದಾಗ ಹಾಗೇ ಕಾರಿನ ಬಲಗಡೆಯ ಕಿಟಕಿಯೊಳಗಿಂದ ಕಂಡ ದೃಶ್ಯವನ್ನು ನೋಡಿ ತಕ್ಷಣ ಕಾರನ್ನ ಅಲ್ಲೇ ಬದಿಗೆ ನಿಲ್ಲಿಸಬೇಕು ಅನ್ನಿಸಿತು. ಆ ಕತ್ತಲ ರಾತ್ರಿಯಲ್ಲಿ, ಅರಿಯದ ಊರಿನ ಯಾವುದೋ ಬೀದಿಯಲ್ಲಿ ಹೀಗೆ ನಿಲ್ಲುವದಕ್ಕೂ ಸ್ವಲ್ಪ ಅಳುಕು. ಹಿಂದೆ ಬೇರೆ ಯಾವುದೇ ಕಾರಿಲ್ಲದೇ ಇದ್ದದ್ದರಿಂದ ಹಾಗೇ ನಿಧಾನಕ್ಕೆ ಕಾರು ಚಲಿಸುತ್ತಲೇ ನೋಡಿದ ದೃಶ್ಯ ಮನಃಪಟಲದ ಮೇಲೆ ಉಳಿದಿದೆ. ೫-೬ ವರ್ಷಗಳ ಹಿಂದಿನ ನೆನಪುಗಳು ಮಸುಕಾಗಿದ್ದರೂ ಅವತ್ತಿನ ಅನಿಸಿಕೆಯ ಎಳೆಯೊಂದು ಉಳಿದಿದೆ.

ಅಲ್ಲಿ ಬಲಗಡೆ ನಾವೇರುತ್ತಿದ್ದ ಬ್ರಿಜ್ಜಿನ ಬದಿಗೆ ತಗ್ಗಿನ ಜಾಗದಲ್ಲೊಂದು ಬೇಸ್ ಬಾಲಿನ ಮೈದಾನ. ಫ್ಲಡ್ ಲೈಟಿನಲ್ಲಿ ಆ ಮೈದಾನದ ಒಂದು ಭಾಗ ಝಗಮಗಿಸುತ್ತಿದೆ. ಆ ಬೆಳಕಿನಂಗಳವನ್ನು ದಾಟಿ ಕಾಡ ಕತ್ತಲೆ, ಆ ಕತ್ತಲೆಯನ್ನು ದಾಟಿಕೊಂಡು ದೂರದಲ್ಲಿ ನಾವು ನೋಡಿಕೊಂಡು ಬಂದ ಚಿಕಾಗೋ ಡೌನ್ ಟೌನಿನ ಎತ್ತರದ ಕಟ್ಟಡಗಳು, ಅವುಗಳ ಮೈಮೇಲೆ, ಅವುಗಳ ಕಿಟಕಿಗಳಲ್ಲಿ ಬೆಳಗುತ್ತಿರುವ ದೀಪಗಳು.. ಕತ್ತಲೆ ಬೆಳಕು, ಡೌನ್ ಟೌನಿನ ಗೌಜು ಗದ್ದಲೆ ಹಾಗೂ ಅನತಿದೂರದಲ್ಲೇ ಇರುವ ಈ ಜಾಗದ ಪ್ರಶಾಂತತೆ.. ಏನೆಂದು ಹೇಳುವದು ಅಲ್ಲಿ ಕಂಡದ್ದನ್ನ ಅಥವಾ ಅಂದು ಅಲ್ಲಿ ಅನಿಸಿದ್ದನ್ನ…

ಕೆಲವು ಚಿತ್ರಗಳು ನಿಜಕ್ಕೂ ಅಚ್ಚಾಗುವದು ನಮ್ಮ ಚಿತ್ತಭಿತ್ತಿಯಲ್ಲಿ ಮಾತ್ರವೇನೋ! ಆಗಾಗ ತಾವಾಗಿಯೇ ನೆನಪಿನಲ್ಲಿ ಮೂಡುತ್ತಿರುತ್ತವೆ. ಹೀಗೆ ಅವುಗಳ ಬಗ್ಗೆ ಒಂದೆರಡು ಸಾಲುಗಳನ್ನ ಬರೆಯುವದರಿಂದ ಅವುಗಳ ನೆನಪು ಇನ್ನಷ್ಟು ದಿನ ಉಳಿಯಬಹುದೇನೂ ಅಥವಾ ಬರೆದ ಮರುಗಳಿಗೆ ಅವುಗಳ ಕಾಡುವ ಶಕ್ತಿ ಕುಂದಿಯೂ ಬಿಡಬಹುದು! ಇವತ್ತು ಅಂತಹ ಒಂದೆರಡು ಘಟನೆಗಳ ಬಗ್ಗೆ ಬರೆಯುವ ಉಮೇದು.

ಕಿಂಗ್ಸ್ ಕ್ಯಾನಿಯನ್ನಿನ ನಿಸರ್ಗ ರಮಣೀಯತೆಯನ್ನ ಅನುಭವಿಸುತ್ತ ಕಾರು ಓಡಿಸುತ್ತಿದ್ದೆವೊಮ್ಮೆ. ಅಲ್ಲೇ ಕೆಲವು ತಿರುವುಗಳನ್ನ, ಕೆಲವು ಆಹಾ ಎಂಥ ಸೌಂದರ್ಯ ಎನ್ನುವಂತಹ ಜಾಗಗಳನ್ನ ಕಾರಿನಿಂದಲೇ ನೋಡುತ್ತ ಸಾಗಿದವರು ಏರು ಹಾದಿಯಲ್ಲಿ ಸಾಗಿ, ಎತ್ತರದ ಮೇಲಿಂದ ಕಳಿವೆಯೊಳಕ್ಕೆ ನೋಡುವಂತಹ ಜಾಗವೊಂದರಲ್ಲಿ ಕಾರು ನಿಲ್ಲಿಸಿ ಕೆಳಗಿಳಿದೆವು. ನಿಧಾನಕ್ಕೆ ನಡೆದು ರಸ್ತೆಯಂಚಿಗೆ ಬಂದಂತೆ ಅದೆಲ್ಲಿತ್ತೋ ಉತ್ಸಾಹ, ತಟ್ಟನೆ ಹಾಗೇ ಮುನ್ನುಗ್ಗಿಬಿಡುವಾಸೆ, ಹಕ್ಕಿಯ ಹಾಗೆ ಹಾರುತ್ತ ಕೆಳಗೆ, ದೂರದಲ್ಲಿ ಕಂಡ ಹಸಿರ ವೈಭವದ ಮೇಲೆ ತೇಲುವ ಆಸೆ. ‘ನಿಂದರು ಮಗನೇ! ಹಿಂಗ ಇನ್ನೊಂದು ಚೂರು ಮುಂದ ಹೋದರೂ ಉರುಳಿ ಬೀಳತೀದಿ’ ಎಂದು ನನಗೇ ನಾನೇ ಹೇಳಿಕೊಳ್ಳದೇ ಇದ್ದರೆ ಅವತ್ತು ಜಿಗಿದೇ ಬಿಡುತ್ತಿದ್ದೆನೇನೋ! ಅಂತಹದೊಂದು ಭಾವನೆ ಹಿಂದೆ ಯಾವತ್ತೂ ಬಂದಿರಲಿಲ್ಲ, ಅದಾದ ಮೇಲೆ ಮತ್ತೆ ಬಂದಿಲ್ಲ.. ಆದರೂ ಅವತ್ತು ಯಾಕೆ ಬಂದಿತ್ತೋ ಕಾಣೆ. ಅವತ್ತು ಅಲ್ಲಿ ಕಂಡ ಜಾಗದ ಚಿತ್ರ ಇದು,

ಚಿತ್ರವನ್ನು ಈಗ ನೋಡಿದರೆ ಮತ್ತೆ ಹಾಗೇನೂ ಅನಿಸಿಲ್ಲ. ಬಹುಶಃ ಅವತ್ತು ನಾವಲ್ಲಿ ಏರು ಹಾದಿಯಲ್ಲಿ ಕಾರು ಓಡಿಸಿಕೊಂಡು ಬರುವಾಗ ಧುತ್ತೆಂದು ಎದುರಿನ ಆಗಸದಲ್ಲಿ ಗ್ಲೈಡರುಗಳಲ್ಲಿ ತೇಲಿಕೊಂಡು ಸಾಗುತ್ತಿದ್ದವರಿಬ್ಬರನ್ನು ನೋಡಿ ‘ಇವರೆಷ್ಟು ಒಳ್ಳೇ ದೃಶ್ಯವನ್ನು ನೋಡ್ತಾ ಇರಬಹುದಲ್ಲ’ ಎಂದು ಮನಸ್ಸಿನಲ್ಲಿ  ಕರುಬಿಕೊಂಡದ್ದೇ ಆ ರೂಪದಲ್ಲಿ ಹೊರಬಂದಿತ್ತೇನೋ ಅನಿಸುತ್ತದೆ.

ನಯಾಗರಾ ನೋಡಲು ಹೋದಾಗ, ಎಷ್ಟೇ ದೊಡ್ಡ ಜಲಪಾತವಾಗಿದ್ದರೂ, ಜನನಿಬಿಡವಾದ, ಊರ ನಡುವೆಯೇ ಕಾಣುವ ಮತ್ತು ನಾವು ನಿಂತ ನೆಲಮಟ್ಟದಿಂದ ಕೆಳಕ್ಕೆ ಸುರಿಯುವ ಜಲಪಾತದ ಅಗಾಧತೆ ಮೊದಲ ನೋಟಕ್ಕೆ ಎದೆಯೊಳಗಿಳಿಯಲಿಲ್ಲ. ವಾತಾವರಣದಲ್ಲಿದ್ದ ನೀರಿನ ಕಣಗಳು, ಕಿವಿಗೆ ಕೇಳುತ್ತಿದ್ದ ನೀರಿನ ಭೋರ್ಗರೆತಗಳು ಉತ್ಸಾಹವನ್ನೇ ತುಂಬುತ್ತಿದ್ದರೂ, ಅಮೇರಿಕಾದ ಬದಿಯಿಂದ ಕಾಣುವ ನಯಾಗಾರದತ್ತಿನ ಓರೆ ನೋಟ ಅದರ ಅಗಾಧತೆ ನಮ್ಮ ಕಲ್ಪನೆಯಲ್ಲಿ ಇದ್ದಂತೆ ಇಲ್ಲವೇನೋ ಅನ್ನುವ ಭಾವನೆಯನ್ನ ಮೂಡಿಸುತ್ತಿತ್ತು. ಜಲಪಾತದತ್ತ ಹರಿಯುವ ನೀರಿಗೆ ಬಲು ಸಮೀಪದಲ್ಲೇ ನಡೆಯುತ್ತಾ ಅದನ್ನೇ ಕ್ಷಣಕಾಲ ನೋಡುತ್ತ, ಅದು ಹರಿದು, ನೆಲ ಮುಗಿದು ತಟ್ಟನೇ ಕೆಳ ಬೀಳುವದನ್ನೇ ನೋಡುತ್ತಿದ್ದಂತೆಯೇ ಅದರ ವೇಗಕ್ಕೆ ಸಿಕ್ಕಂತಾಗಿ, ಆ ನೀರಿನಲ್ಲಿಯೇ ಪ್ರಪಾತದತ್ತ ತೇಲುತ್ತಿರುವೆ ಅಂತನ್ನಿಸಿದ ಭಾವವನ್ನ ಯಾವ ಕ್ಯಾಮರಾನೂ ಕಟ್ಟಿಕೊಡಲಾರದು. ಅವತ್ತು ಅಲ್ಲಿ ನನ್ನ ಹೆಂಡತಿಯು ರೆಕಾರ್ಡ್ ಮಾಡಿದ ಈ ವಿಡಿಯೋ ನೋಡಿದರೂ ಅದೇ ಭಾವ ಬರುತ್ತದೆ ಅಂತ ಹೇಳಲಾರೆನಾದರೂ ಅವತ್ತಿನ ಅನುಭವವನ್ನು ನನಗಂತೂ ನೆನಪು ಮಾಡಿಸುತ್ತದೆ!

ಅದೇ ನಯಾಗರ ಜಲಪಾತದ ಬಳಿಯೇ, ನೀರು ಇನ್ನೂ ಜಲಪಾತದತ್ತ ಹರಿಯುವ ಭಾಗ, ‘upper rapids’ ನೋಡುವಾಗ ಅಲ್ಲಿ ಆ ನೀರಿನ ರಭಸವನ್ನ, ಅದು ಮಾಡುವ ಶಬ್ದವನ್ನ, ಸಿಡಿಸಿದ ಹನಿಗಳನ್ನ, ಅದರ ಅಲೆಗಳ ತಾಕಲಾಟವನ್ನ ಮತ್ತು ಆ ನೀರಿನ ಶುಭ್ರ ಬಿಳಿಯನ್ನ ನೋಡಿ ಅದರ ಆ ಆಟವನ್ನ ನೆನಪಾದಾಗ ನೋಡಲಿಕ್ಕೆ ಅನುಕೂಲವಾಗಲಿ ಅಂತ ನನ್ನ ಫೋನಿನಲ್ಲಿ ಹಿಡಿದುಕೊಂಡು ಬಂದದ್ದು ಈ ವಿಡಿಯೋ!

ನಗರಗಳನ್ನ, ಪ್ರಕೃತಿ ಸೌಂದರ್ಯವನ್ನ ನೋಡಲು ಹೋದಾಗಿನ ಈ ಸಂದರ್ಭಗಳ ಜೊತೆಗೆ ಮದುವೆ ಮನೆಯಲ್ಲಿ ಕಂಡುಕೊಂಡ ಈ ಒಂದು ವಿಶೇಷವನ್ನು ಹೇಳಿ ಮುಗಿಸುತ್ತೇನೆ.

ಮದುವೆ ಮನೆಯಲ್ಲಿ, ಮುಹೂರ್ತದ ಸಮಯದಲ್ಲಿ, ಅಂತಃಪಟ ಸರಿದ ಮರುಕ್ಷಣ ಸುರಿಮಳೆಯಾಗುವ ಅಕ್ಷತೆಯಲ್ಲಿ ಕೈಯಲ್ಲಿನ ಅಕ್ಷತೆಯನ್ನು ವಧುವರರಿಗೆ ಹಾಕಿದ ಮರುಗಳಿಗೆಯಲ್ಲಿ, ವಧುವಿನ ತಂದೆಯನ್ನ ಕಾಣುವ ಹಾಗಿದ್ದರೆ, ಅವರನ್ನೊಮ್ಮೆ ನೋಡಬೇಕು. ಅವರ ಮುಖದ ಆ ಗಳಿಗೆಯ ಭಾವವನ್ನು, ಅದರ ಸಂತೋಷವನ್ನು ನೋಡಿಯೇ ತಿಳಿಯಬೇಕು. ಸಾಧ್ಯವಾದರೆ ಆ ಕ್ಷಣದಲ್ಲಿ ಅವರನ್ನು ಅಭಿನಂದಿಸಿದರೆ ಅವರ ಸಂತೋಷದಲ್ಲಿ ಇಣುಕಿದ ಅನುಭವವಾಗುತ್ತದೆ. ಹಿಂದೊಮ್ಮೆ ಆಕಸ್ಮಿಕವಾಗಿ ಆದ ಅನುಭವದಿಂದ ಕಲಿತದ್ದಿದು. ಅಕ್ಕಿಕಾಳು ಬಿದ್ದ ಮರುಗಳಿಗೆಯಲ್ಲಿ ಮದುಮಗಳ ತಂದೆಯ ಕೈ ಕುಲುಕಿ ಅಭಿನಂದನೆಗಳನ್ನ ಹೇಳಿದಾಗ ಅವರು ಆ ಹಸ್ತ ಲಾಘವದಲ್ಲಿ ವ್ಯಕ್ತಪಡಿಸಿದ ಸಂತೋಷ ಅವಿಸ್ಮರಣೀಯ.

ಮರೆಯದಿರೂ ಮನವೆ!

ಉದುರೆಲೆಗಾಲದೆಳೆ ಬಿಸಿಲು ಬೆಳಗಿದ

ಗಿಡ ಮರ ತೂಗಿಸಿದೆಲರಿಗಲುಗಿದ ಹ

ಳದಿ ಕೆಂಪಿನ ಕಂದಿನ ತರಗೆಲೆಗಳ

ನುದುರಿಸಿ ತೇಲಿಸಿ ಹಾದಿಗೆ ಬೀದಿಗೆ

ಚದುರಿಸುತಂಗಳದುಂಬಿದ ಗಾಳಿಯು

ಮಿಡಿದ ಮುದವ ಮರೆಯದಿರೂ ಮನವೆ!

ಇವತ್ತು ಮುಂಜಾನೆ ಆಫೀಸಿಗೆ ಹೋಗಲು ಮನೆಯಿಂದ ಹೊರಬರುತ್ತಿದ್ದಂತೆಯೇ ಸೋಕಿದ ಮೆಲುಗಾಳಿ, ಆ ಗಾಳಿಗೆ ಅಲುಗಾಡುವ ಗಿಡಗಳು, ಆ ಗಿಡಗಳಿಂದ ಉದುರುತ್ತಿದ್ದ ಎಲೆಗಳು ಹಾಗೇ ಗಾಳಿಯಲ್ಲಿ ತೇಲುತ್ತಾ ನಿಧಾನವಾಗಿ ನೆಲಕ್ಕಿಳಿಯುತ್ತಿದ್ದದ್ದನ್ನ ನೋಡಿ ಮನ ಆಹಾ ಉದುರೆಲೆಗಾಲ ಎಂದಿತು. ಆಗಲೇ ತಲೆಯಲ್ಲಿ ಮೂಡಿದೆರಡು ಸಾಲುಗಳನ್ನ ಬರೆದಿಟ್ಟುಕೊಂಡು, ನಂತರ ಇನ್ನಷ್ಟು ಸಾಲುಗಳನ್ನ  ಜೋಡಿಸುವತನಕ ಇದರ ಗುಂಗು ಬಿಡಲಿಲ್ಲ. ಅನಿಸಿದ್ದನ್ನ ಶಬ್ದಗಳಲ್ಲಿ ಹಿಡಿಯುವಷ್ಟು ಹಿಡಿತ ಶಬ್ದಗಳ ಮೇಲಿಲ್ಲ ನನಗೆ.. ಹೀಗಾಗಿ ಇಲ್ಲಿ  ಹಿಡಿದದ್ದು ಅನಿಸಿದ್ದನ್ನಲ್ಲ, ಅನಿಸಿದ್ದುದರ ನೆನಪನ್ನ ಅನ್ನುವದು ಹೆಚ್ಚು ಸೂಕ್ತವೇನೋ!

ಬರೆಯಬೇಕು ಅನಿಸಿದ್ದನ್ನ ಬರೆದಾದ ಮೇಲೆ ಉಳಿದ ಪ್ರಶ್ನೆ, ‘ಉದುರೆಲೆ ಕಾಲ’ ನನ್ನ ಶಬ್ದ ಭಂಡಾರ ಸೇರಿದ್ದು ಯಾವಾಗ? ಇತ್ತೀಚೆಗೆ ಓದಿದ್ದಿರಬೇಕು, ಬಹುಶಃ ಹಂಸಾನಂದಿ ಬರೆದ ಪದ್ಯದಲ್ಲಿ ಇರಬೇಕು ಅನಿಸಿತು. ಈಗ ನೋಡಿದಾಗ ಅದು ಖಾತ್ರಿ ಆಯಿತು. ನೋಡಿರದೆ ಇದ್ದರೆ ನೀವೂ ನೋಡಿ, ಅಲ್ಲೊಂದೊಳ್ಳೆ ಪದ್ಯ ಇದೆ ಹಾಗೇ ಒಳ್ಳೆ ಚಿತ್ರಾನೂ ಇದೆ 🙂

(picture: my son’s art work, as envisioned by his mom, about the fall season. Picture taken by me 🙂 )

Into Thin Air

I read this book few years back and was struck by two things, the magnitude of the struggle Everest climbers endure and the real tragedy on the Everest in 1996. John Krakauer has done a wonderful job of recreating – in words – his Everest climbing experience and the horrors of that fateful day. He takes us through his preparations, the eventual climb, his feelings as he climbed and his feelings at the top of the world. He opens the book with the description of his physical condition and the mental state when he was at the top of the world. The harsh reality of the twenty nine thousand feet climb is revealed right at the start, in your face. With that opening, he takes us on a breathtaking journey.

I think I was reading that book in 2008 (read it 2009 looks like). When I was mid way through the book and around the point of reading the tragic parts, heard the news of torrential rains and the never seen before floods in the Northern Karnataka regions. It was beyond anyone’s imagination. The story in the book, the tragedy unfolding at the moment and relative calm of my surroundings in which I was reading about the two events struck a chord with this quote from the book. There have been many occasions since then when I have remembered this quote. The message of this quote has stayed with me and it always seems so much true.

I distrust summaries, any kind of gliding through times, any too great a claim that one is in control of what one recounts; I think someone who claims to understand but is obviously calm, someone who claims to write with emotion recollected in tranquility, is a fool and a liar. To understand is to tremble. To recollect is to re-enter and be riven…. I admire the authority of being on one’s knees in front of the event.

Harold Brodkey – “Manipulations”

(Watched the movie Into Thin Air today and was reminded of this quote. Hence the short post in the blog. Usually I don’t watch the movies based on the books that I have read. Somehow I saw the movie today. Liked it. Obviously not as detailed as the book, but covered the tragedy part in detail and overall does justice to the story)

ಗುಂಡಿನ ಘಮಲು

ಮಗಳು ಚಲನಚಿತ್ರವೊಂದರ ನಾಯಕಿಯಾದಳು ಎನ್ನುವ ಖುಷಿಗೆ ಅಪ್ಪ ಸಹಜವಾಗಿ ಗುಂಡಿನ ಬಾಟಲಿ ತೆಗೆಯುತ್ತಾನೆ. ಮಗಳ ಗೆಳೆಯ ಮುನ್ನಾನೊಡನೆ ಹಂಚಿಕೊಳ್ಳುತ್ತಾ ತಾನೂ ಕುಡಿಯುತ್ತಾನೆ. ರಂಗೀಲಾ ಸಿನೆಮಾದ ಈ ಸೀನನ್ನು ಮೊದಲ ಬಾರಿಗೆ ನೋಡಿದಾಗ ಹೆಚ್ಚೇನು ಯೋಚಿಸಿದ ನೆನಪಿಲ್ಲ. ಆದರೆ ನಂತರದ ದಿನಗಳಲ್ಲಿ ಯಾವಗಲೋ ಒಮ್ಮೆ ಅನಿಸಿದ್ದೆಂದರೆ, ಮನೆಯಲ್ಲೆ ಹೆಂಡದ ಬಾಟಲಿಯನ್ನಿಂಟುಕೊಂಡು, ಖುಷಿಯಾದಾಗ ಮುಚ್ಚು ಮರೆ ಇಲ್ಲದೆ, ಜ್ಯೂಸು ಕುಡಿಯುವಷ್ಟೇ ಸಹಜವಾಗಿ ಹೆಂಡವನ್ನು ಕುಡಿಯುವಂಥ ಮಧ್ಯಮ ವರ್ಗದ ಮನೆಯನ್ನ ಮೊದಲು ತೋರಿಸಿದ್ದು ರಂಗೀಲಾ ಸಿನೆಮಾನೆ ಇರಬೇಕು ಅಂತ.

ರಂಗೀಲಾದ ಈ ಸೀನು ಮತ್ತೆ ನೆನಪಾದದ್ದು ನಿನ್ನೆ ಮೇ ತಿಂಗಳ ಮಯೂರದಲ್ಲಿ ಬಿ.ಆರ್.ಎಲ್ ಅವರ ಅಂಕಣದಲ್ಲಿ ಅವರು ಶ್ರೀನಾಥ್ ಮತ್ತು ತಮ್ಮ ಬಾಂಧವ್ಯದ ಬಗ್ಗೆ ಬರೆಯುತ್ತಾ*, ಹೇರಳವಾಗಿ ಗುಂಡು ಪ್ರಸಂಗಗಳನ್ನ ನೆನಪಿಸಿಕೊಂಡದ್ದನ್ನ ಓದಿದಾಗ. ಮಯೂರಕ್ಕೆ ಗುಂಡನ್ನ ಪರಿಚಯಿಸಿದವರು ಅವರೇ ಮೊದಲೇನೂ ಇರಲಿಕ್ಕಿಲ್ಲ. ಗುಂಡಿನ ಗಮ್ಮತ್ತನ್ನ, ತಮ್ಮ ತಮ್ಮ ಕುಡಿದು ಚಿತ್ತಾದದ್ದನ್ನ ಮಯೂರದಲ್ಲಿ ಬರೆದದ್ದನ್ನ ಓದಿದಾಗ ರಂಗೀಲಾದ ಬಗ್ಗೆ ಅನಿಸಿದ್ದು ನೆನಪಾಯ್ತು, ಮನಸ್ಸಿಗೆ ಒಂದಷ್ಟು ಕಸಿವಿಸಿ ಆಯ್ತು. ಹಾಗಂತ ಲೇಖನ ಇಷ್ಟ ಆಗಲಿಲ್ಲ ಅಂತಲ್ಲ. ಶ್ರೀನಾಥ ಮತ್ತು ತಮ್ಮ ಅಂತರಂಗದ ಸ್ನೇಹದ ಪರಿಯನ್ನ ಬಿಚ್ಚಿಕೊಡುವ, ಕಟ್ಟಿಕೊಡುವ ಲೇಖನ ಬಹಳ ಇಷ್ಟವಾಯಿತು. ಗುಂಡಿನ ಘಮಲು ಇಲ್ಲದೆಯೂ ಈ ಲೇಖನ ಇಷ್ಟವಾಗುತ್ತಿತ್ತು. ಗುಂಡಿನ ವಿಷಯವೂ ಅವರ ಸ್ನೇಹದ ಅವಿಭಾಜ್ಯ ಅಂಗವೇ ಆಗಿದೆಯೇನೋ, ಅದೇ ಕಾರಣಕ್ಕೆ ಲೇಖನದಲ್ಲಿ ಅದಿಲ್ಲದೇ ಇರಲು ಸಾದ್ಯವಿಲ್ಲವೇನೋ ಅಂತ ಅನಿಸಿದ್ದೂ ನಿಜ!

*********

ಇಲ್ಲಿ ಅಮೇರಿಕದಲ್ಲಿ ನನ್ನ ಸಹೋದ್ಯೋಗಿಗಳಿಬ್ಬರು ಹೇಳಿದ್ದನ್ನ ಬರೆದು ಇದನ್ನ ಮುಗಿಸುತ್ತೇನೆ,

ಒಬ್ಬ ಸಹೋದ್ಯೋಗಿ ಭಾರತದಿಂದ ಬಂದ ತನ್ನ ತಂದೆಯೊಂದಿಗೆ ಕುಳಿತು, ತನ್ನ ಮನೆಯಲ್ಲಿ, ಹಸಿರು ಬಾಟಲಿಯ ಬೀರನ್ನ ಹೀರುತ್ತಿದ್ದ. ೪/೫ ವರ್ಷದ ಅವನ ಮಗ ಅಲ್ಲೇ ಸುಳಿದಾಡುತ್ತಿದ್ದ. ಏನು ಕುಡಿಯುತ್ತಿದ್ದೀರಿ ಅಂತ ಅವನು ಕೇಳಿದಾಗ ಔಷಧಿ ಅಂತ ಹೇಳಿದರು ಅವನಿಗೆ. ಮರುದಿನ ಮಧ್ಯಾನ್ಹ ಅವನ ತಂದೆಗೆ ಮಗ ಹೇಳಿದ್ದು, ‘ದಾದಾಜೀ ಜಬ್ ಮೈ ಭೀ ಬಡಾ ಹೋ ಜಾವುಂಗಾ, ತಬ್ ವೊ ಗ್ರೀನ್ ಬಾಟಲ್ ವಾಲಾ ದವಾ ಪೀಯುಂಗಾ’.

ಇನ್ನೊಬ್ಬ ಸಹೋದ್ಯೋಗಿಯೂ ಇದೇ ರೀತಿ ‘ಔಷಧಿ’ ಎಂದು ಮನೆಯಲ್ಲೆ ಬಾಟಲಿಗಳನ್ನಿಡುತ್ತಿದ್ದ. ಮಗ ದೊಡ್ಡವನಾಗುತ್ತಿದ್ದಂತೆ ಸುಳ್ಳು ಹೇಳುವದು ಕಷ್ಟವಾಯಿತು. ಕಡೆಗೊಮ್ಮೆ ‘ಇದನ್ನು ಕುಡಿಯಬೇಡ’ ಅಂತ  ಮಗ  ಹೇಳಿದ ಮೇಲೆ ಈಗ ಕುಡಿಯುವದನ್ನ ಪೂರ್ತಿ ಬಿಟ್ಟುಬಿಟ್ಟಿದ್ದಾನೆ.

*ಪ್ರಣಯರಾಜನ ಸ್ನೇಹದ ಕಡಲಲ್ಲಿ – ‘ಒಡನಾಟ’ – ಬಿ.ಆರ್.ಲಕ್ಷ್ಮಣರಾವ್ – ಮಯೂರ, ಮೇ ೨೦೧೨, ಪುಟ ೪೬