ರಾಮನೆಂದರೆ ನೆನಪಾಗುವದು…

ರಾಮನೆಂದರೆ ನೆನಪಾಗುವವು ಪುರಂದರ ದಾಸರ ಶರಣು ಸಕಲೋದ್ಧಾರ ಪದದ ಸಾಲುಗಳು,
ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ
ಆವ ದೇವರಿಗುಂಟು ಬ್ರಹ್ಮಾಂಡದೊಳಗೆ

ಹಾಗೂ,

ಭಾವ ಶುದ್ಧಿಯಲಿ ನೆನೆವ ತನ್ನ ಭಕುತರ ಪೊರೆವ
ಪುರಂದರ ವಿಠಲನೇ ಅಯೋಧ್ಯಾ ರಾಮ

ರಾಮನೆಂದರೆ ನೆನಪಾಗುವದು,
ಹಿಂದೆ ಯಾವಾಗಲೋ ತರಂಗದಲ್ಲಿ ಆರ್ ಗಣೇಶ್ ಬರೆದ ರಾಮನ ಬಗೆಗಿನ ಬರಹದಲ್ಲಿ ಉಲ್ಲೇಖಿಸಿದ್ದ, ‘ಸ್ಮಿತಪೂರ್ವಭಾಷಿ’, ‘ಅಕ್ಲಿಷ್ಟ ಕರ್ಮಣಃ’ ಹಾಗೂ ‘ಅಪರಿಗ್ರಹ’. ನಗುಮೊಗದಿಂದ ತಾನೇ ಮೊದಲು ಮಾತನಾಡಿಸುವ, ಯಾವ ಕೆಲಸವನ್ನೇ ಆದರೂ ಹೂವು ಎತ್ತಿಟ್ಟಂತೆ ಸರಳವಾಗಿ ಮಾಡುವ ಅಕ್ಲಿಷ್ಟಕರ್ಮನಾದ ಹಾಗೂ ಎಂದೂ ಪರರ ವಸ್ತುವನ್ನು ಬಯಸದ, ತೆಗೆದುಕೊಳ್ಳದ ಆದರ್ಶ ವ್ಯಕ್ತಿ ರಾಮ.

ರಾಮನೆಂದರೆ ನೆನಪಾಗುವದು,
‘ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯ ಅಕ್ಲಿಷ್ಟಕರ್ಮಣಃ’ ಎಂದು ಲಂಕೆಯ ಹೆಬ್ಬಾಗಿಲ ಮೇಲೆ ನಿಂತು ಘೋಷಿಸಿದ ಹನುಮಂತನ ಮಾತು. ಹರಿದಾಸರುಗಳಿಗೆ ಹಾದಿ ತೋರಿದ ಮಾತು.

ರಾಮನೆಂದರೆ ನೆನಪಾಗುವದು ಶ್ರೀ ಮಧ್ವಾಚಾರ್ಯರ ದ್ವಾದಶಸ್ತೋತ್ರದ ‘ವಂದೇ ವಂದ್ಯಮ್ ಸದಾನಂದಮ್’ ಸ್ತುತಿಯ ರಾಮ ಸ್ಮರಣೆ,
ಸ್ಮರಾಮಿ ಭವ ಸಂತಾಪ ಹಾನಿದಾಮೃತಸಾಗರಮ್
ಪೋರ್ಣಾನಂದಸ್ಯ ರಾಮಸ್ಯ ಸಾನುರಾಗವಲೋಕನಮ್

ರಾಮನೆಂದರೆ ನೆನಪಾಗುವದು,
ಶ್ರೀ ವಾದಿರಾಜರ ಲಕ್ಷ್ಮೀ ಶೋಭನ ಪದದಲ್ಲಿ ಹರಿಯ ಸರ್ವೋತ್ತಮತ್ವವನ್ನು ಸಿದ್ಧಪಡಿಸಿ, ಅವನೇ ತನಗೆ ಅನುರೂಪನಾದ ವರ ಎಂದು ನಿರ್ಧರಿಸಿದ ಲಕ್ಷ್ಮಿ ಅಜಿತ ನಾಮಕ ಹರಿಯ ಬಳಿಗೆ ಹೋಗಿ ಅವನ ಕೊರಳಿಗೆ ಮಾಲೆ ಹಾಕುವುದನ್ನು ಹೇಳುವ ಸಂದರ್ಭದಲ್ಲಿ ಬಳಸಿದ ಪದ್ಯ,

ಇಂತು ಚಿಂತಿಸಿ ರಮೆ ಸಂತ ರಾಮನ ಪದವ
ಸಂತೋಷ ಮನದಿ ನೆನೆವುತ್ತ
ಸಂತೋಷ ಮನದಿ ನೆನೆವುತ್ತ ತನ್ನ ಶ್ರೀ
ಕಾಂತನಿದ್ದೆಡೆಗೆ ನಡೆದಳು ||

ಲಕ್ಷ್ಮಿಗೆ ಅನುರೂಪನಾದವನು ನಾರಾಯಣನಾದರೆ ಅವನಿಗೆ ಅನುರೂಪಳಾದವಳು ಲಕ್ಷ್ಮಿಯೋಬ್ಬಳೇ ಎಂಬುದನ್ನು ಸೋಚಿಸುವದಕ್ಕೇನೇ ಅಲ್ಲಿ ‘ನಿನ್ನನ್ನು ಬಿಟ್ಟು ಇನ್ನೊಬ್ಬಳನ್ನು ಕಣ್ಣೆತ್ತಿಯೂ ನೋಡುವುದಿಲ್ಲ’ ಎಂದು ಸೀತೆಗೆ ಮಾತು ಕೊಟ್ಟ ‘ಸಂತ ರಾಮನ’ ಮೂಲಕ  ಸೀತಾ ರಾಮರನ್ನು ಸೂಚಿರುವರು ಎಂದು ನನಗನಿಸುತ್ತದೆ.

ರಾಮನೆಂದರೆ ನೆನಪಾಗುವದು ರಾಮ ರಕ್ಷಾ ಸ್ತೋತ್ರದ ನುಡಿ,
ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇ ತು ಜನಕಾತ್ಮಜಾ
ಪುರತೋ ಮಾರುತೀರ್ಯಸ್ಯ ತಂ ವಂದೇ ರಘುನಂದನಂ

ರಾಮನೆಂದರೆ, ವಿಶೇಷವಾಗಿ ರಾಮನವಮಿಯೆಂದರೆ ನೆನಪಾಗುವ ಇನ್ನೊಂದು ಹಾಡು ಕನಕದಾಸರು ರಚಿಸಿದ,  “ಅಂಗಳದೊಳು ರಾಮನಾಡಿದ ಚಂದ್ರ ಬೇಕೆಂದು ತಾ ಹಟ ಮಾಡಿದಾ”..

ರಾಮನವಮಿಯೆಂದರೆ ನೆನಪಾಗುವದು ಅಡಿಗರ ಹುತ್ತಗಟ್ಟಿದ ಚಿತ್ತ ಕೆತ್ತಿದ ಪುರುಷೋತ್ತಮನ ಚಿತ್ರ, ಪಾನಕ ಪನಿವಾರಗಳೊಂದಿಗೆ ಬೆಂಕಿಯುಗುಳುವ ರಾಕೆಟ್ಟು, ಸುಟ್ಟಲ್ಲದೇ ಮುಟ್ಟೆನೆಂಬ ಉಡಾಫೆಯೆನ್ನುವ ರಾಮನವಮಿಯ ದಿವಸಕ್ಕೆ ಕವನವೂ ಕೂಡ.

    *****

ಇತ್ತೀಚೆಗಷ್ಟೇ ಅಷ್ಟಿಷ್ಟು ಕಲಿತಿರುವ ಮಲ್ಲಿಕಾ ಮಾಲೆಯೆಂಬ ಅಕ್ಷರ ವೃತ್ತದಲ್ಲಿ ರಾಮನ ಬಗ್ಗೆ ನೆನಪಿಗೆ ಬರುವ ಕೆಲವು ಮಾತುಗಳನ್ನು ಬಳಸಿ ನಾಲ್ಕು ಸಾಲುಗಳನ್ನು ರಚಿಸಬೇಕು ಅನಿಸಿ ಪ್ರಯತ್ನಿಸಿದಾಗ ಬಂದವು ಈ ಕೆಳಗಿನ ಸಾಲುಗಳು. ಶ್ರೀ ರಾಮಚಂದ್ರನಿಗೆ ಅರ್ಪಿತವು. ರಾಮನವಮಿಯ ಶುಭಾಶಯಗಳು ಎಲ್ಲರಿಗೂ.

ರಾಮಚಂದ್ರನೆ ಚೆಲ್ವ ಮೂರ್ತಿಯೆ ಪಾದ ಪದ್ಮಕೆ ವಂದಿಪೆ
ರಾಮ ನಿನ್ನಯ ನಾಮ ಪೇಳುವೆ ಭಾವ ಶುದ್ಧಿಯ ಬೇಡುವೆ

ರಾಮ ಹೇ ಭವ ತಾಪಹಾರಿಯೆ ಹೇ ಸುಧಾಂಬುಧಿ ದೇವನೇ
ಪ್ರೇಮದಿಂದಲಿ ನೋಡಿ ಕಾಯುವ ಮೊದ ಪೂರ್ಣನೆ ವಂದಿಪೆ

ದುಷ್ಟ ರಾವಣನಂತ್ಯ ಕಾರಣ ವಾಲಿ ಭಂಜನ ದೇವನೇ
ಕ್ಲಿಷ್ಟ ಕಾರ್ಯಗಳೆಲ್ಲ ಮೀರಿದ ಮಂದಹಾಸನೆ ಸಂತನೇ

ನೋಡಿ ಲಕ್ಷ್ಮಣ ರಾಮ ಸೀತೆಯ ಮುಂದೆ ಮಾರುತಿ ಮೂರುತೀ
ಪಾಡಿ ನಾಮದ ಮಾಲೆ ಮಲ್ಲಿಕೆ ರಾಮ ನಿನ್ನನು ಪೂಜಿಪೇ

(*ಸೊದೆ: ಅಮೃತ – ಮಧ್ವಾಚಾರ್ಯರ ‘ಶ್ರೀ  ಕೃಷ್ಣಾಮೃತ ಮಹಾರ್ಣವ’ ಗ್ರಂಥದ ಕನ್ನಡ ಅವತರಣಿಕೆಗೆ ಬನ್ನಂಜೆ ಗೋವಿಂದಾಚಾರ್ಯರು ಇಟ್ಟಿರುವ ಹೆಸರು ‘ಕೃಷ್ಣನೆಂಬ ಸೊದೆಯ ಕಡಲು’ ಅದರ ನೆನಪಿನಿಂದ ಸೊದೆಯನ್ನು ಅಮೃತವೆಂದು ಬಳಸಿರುವೆ )

(ಮಲ್ಲಿಕಾಮಾಲೆಯಲ್ಲಿನ ಈ ಪ್ರಯತ್ನದಲ್ಲಿ ಕೆಲವು ತಪ್ಪುಗಳಾಗಿವೆ. ಅಮೃತಕ್ಕೆ ಸೊದೆ ಎನ್ನುವರು, ಸೋದೆಯಲ್ಲ. ಬನ್ನಂಜೆಯವರು ಇತ್ತ ಹೆಸರನ್ನು ನೆನಪಿದೆ ಎಂದುಕೊಂಡು  ಶಬ್ದವನ್ನು ಬಳಸಿದ್ದು ನನ್ನ ತಪ್ಪು. ಅದು ಸೊದೆಯಾದದ್ದಕ್ಕೆ ಅಲ್ಲಿ ಇರಬೇಕಾದ ಗುರು ತಪ್ಪಿದೆ. ‘ರಾಮ ನೀ ಭವ ತಾಪಹಾರಿಯೆ ಸೊದೆ*ಯಂಬುಧಿ ದೇವನೇ’ – ಇದನ್ನು ಈಗ ತಿದ್ದಲಾಗಿದೆ. ಅದೇ ರೀತಿ ಪಾದಾಂತ್ಯದ ಕೊನೆಯ ಗುರುವೂ ಬಹಳಷ್ಟು ಕಡೆ ತಪ್ಪಿದೆ. ಈ ಎಲ್ಲ ತಿದ್ದುಪಡಿ ಸೂಚಿಸಿದ ಜಿವೆಂ ಅವರಿಗೆ ವಂದನೆಗಳು. ‘ಅಂಗಳದೊಳು ರಾಮನಾಡಿದ’ ಹಾಡು ಪುರಂದರ ದಾಸರದ್ದು ಎಂದು ಬರೆದಿದ್ದೆ ಮೊದಲು, ಆದರೆ ಅದು ಕನಕದಾಸರ ಹಾಡು. ಹಾಡಿನ ಮೊದಲ ಭಾಗವನ್ನಷ್ಟೇ ನೆನಪಿನಲ್ಲಿಟ್ಟುಕೊಂಡದ್ದರ ಪರಿಣಾಮ. ಇವತ್ತು ಅದೇ ಹಾಡನ್ನು ಕೇಳುವಾಗ   ‘ಈ ಸಂಭ್ರಮ ನೋಡಿ ಆದಿ ಕೇಶವ ರಘು ವಂಶವನ್ನೇ ಕೊಂಡಾಡಿದ’ ಬಂದ ಕೂಡಲೇ ತಪ್ಪಿನರಿವಾಯಿತು. ಇಲ್ಲಿ ಈಗ ತಿದ್ದುಪಡಿ ಮಾಡಿದೆ.)

 
Advertisements

ಸಂಸಾರ ಪಾಶವ ನೀ ಬಿಡಿಸಯ್ಯ…

ಸಂಸಾರ ಪಾಶವ ನೀ ಬಿಡಿಸಯ್ಯ
ಕಂಸಾರಿ ಪುರಂದರವಿಠ್ಠಲರಾಯ

ಹ್ಯಾಂಗೆ ಬರೆದಿತ್ತೋ ಪ್ರಾಚೀನದಲ್ಲಿ… ಎಂದು ಆರಂಭವಾಗುವ ಪುರಂದರದಾಸರ ಪದದಲ್ಲಿ ಕೊನೆಗೆ “ಸಂಸಾರ ಪಾಶವನ್ನು ಕಂಸಾರಿಯಾದ ನೀನು ಬಿಡಿಸಯ್ಯ” ಎಂದು ಕಂಸಾರಿಯನ್ನೇ ನೆನೆದದ್ದು ಯಾಕೆ? ಕೃಷ್ಣನ, ಹರಿಯ ಇನ್ಯಾವುದೇ ರೂಪವನ್ನು ನೆನೆಯುವ ಬದಲು ಕಂಸಾರಿಯಾಗಿಯೇ ಯಾಕೆ ನೆನೆದರು ಎಂಬ ಪ್ರಶ್ನೆ ಹಿಂದೊಮ್ಮೆ ಬಂದದ್ದು, ಅದರ ಬಗ್ಗೆ ಒಂದಷ್ಟು ಬರೆದದ್ದು ಇಲ್ಲಿವೆ. ಅಲ್ಲಿ ಉಲ್ಲೇಖಿಸದೇ ಇದ್ದ ಇನ್ನೊಂದು ಅಂಶವೆಂದರೆ ‘ಶ್ರೀ ಕೃಷ್ಣಾಷ್ಟೋತ್ತರ ಶತನಾಮಾವಳಿ’ಯಲ್ಲಿಯೂ ‘ಸಂಸಾರವೈರಿ ಕಂಸಾರಿ ಮುರಾರಿರ್ನರಕಾಂತಕಃ’ ಎಂದು ಬರುತ್ತದೆ. ದಾಸರು ಅದನ್ನೇ ತಮ್ಮ ಪದದಲ್ಲೂ ಬಳಸಿದರೆ ಎಂಬ ವಿಚಾರವೂ ಬಂದಿತ್ತು.

ಶ್ರೀ ಸತ್ಯಾತ್ಮತೀರ್ಥರ ಶ್ರೀಮದ್ಭಾಗವತ ಪ್ರವಚನ ಮಾಲಿಕೆಯ ಸಿ.ಡಿ.ಯನ್ನು ಕೇಳುತ್ತಿದ್ದಾಗ ನನಗೆ ಗೊತ್ತಿಲ್ಲದ ಹೊಸ ವಿಷಯ ತಿಳಿಯಿತು. ಕೃಷ್ಣನಿಂದ ಹತನಾದ ಕಂಸ ಅಸುರನಾದ ಕಾಲನೇಮಿಯಂತೆ. ಈ ಕಾಲನೇಮಿ ಕಾಮಕ್ಕೆ ಅಭಿಮಾನಿಯಾದ ಅಸುರನಂತೆ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ಅನಿಸಿದ್ದು, ‘ಧರ್ಮಾsವಿರುದ್ಧೋ ಕಾಮೋsಸ್ಮಿ’ (ಧರ್ಮಕ್ಕೆ ವಿರೋಧವಾಗಿಲ್ಲದ ಕಾಮವು ನಾನು) ಎಂದು ಗೀತೆಯಲ್ಲಿ ಹೇಳುವ ಕೃಷ್ಣ, ಧರ್ಮಕ್ಕೆ ವಿರುದ್ಧವಾದ ಕಾಮವೆಲ್ಲದರ ಅಭಿಮಾನಿಯಾದ ಕಂಸರೂಪಿ ಕಾಲನೇಮಿಯನ್ನು ಕೊಂದ. ನಮ್ಮನ್ನು ಮತ್ತೆ ಮತ್ತೆ ಸಂಸಾರದಲ್ಲಿ ಕೆಡವುವ ಕಾಮದಿಂದ ಪಾರುಮಾಡಿ, ಧರ್ಮಾsವಿರುದ್ಧ ಕಾಮವೆನಿಸುವ ಮುಕ್ತಿಯನ್ನು ಬಯಸಿದಾಗ ಕಂಸಾರಿಯನ್ನೇ ನೆನೆಯಬೇಕಲ್ಲವೆ? ಉನ್ನತಿಯನ್ನೀಯುವ ಕಾಮನೆಗಳು ಧರ್ಮ ವಿರೋಧಿಯಾಗಿರುವದಿಲ್ಲ. ನಿಕೃಷ್ಟವಾದ ಕಾಮನೆಗಳನ್ನು ದಮನ ಮಾಡಿ, ಉನ್ನತಿಯನ್ನು ಸಾಧಿಸುವ ಕಾಮನೆಯ ಪೂರ್ತಿಗಾಗಿ ಕಂಸಾರಿಯನ್ನು ನೆನೆಸಿದ್ದಾರೆ ಪುರಂದರ ದಾಸರು*.

ಅದೇ ಪ್ರವಚನದಲ್ಲಿ ಶ್ರೀಸತ್ಯಾತ್ಮತೀರ್ಥರು ಹೇಳಿದ ಈ ಇನ್ನೊಂದು ಶ್ಲೋಕ, “ಸರಿಯಾದ ಜ್ಞಾನವಿರುವಲ್ಲಿ ಶರಣಾಗಬೇಕು, ಆ ಜ್ಞಾನದಲ್ಲಿ ಸುದೃಢವಾದ ನಂಬಿಕೆಯನ್ನಿಡಬೇಕು, ಆ ನಂಬಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಿರಬೇಕು, ನಂಬಿಕೆ ಅಲುಗಾಡುವಂತಹ ಸಂದರ್ಭ ಬಂದರೆ ತಿಳಿದವರನ್ನು ವಿಚಾರಿಸಿ, ತಿಳಿದುಕೊಂಡದ್ದನ್ನೂ ಮತ್ತು ಅದರ ಬಗೆಗಿನ ನಂಬಿಕೆಗಳನ್ನೂ ಮತ್ತೆ ಜಿತಮಾಡಿಕೊಳ್ಳುತ್ತ ಆಯಾ ಸಂದರ್ಭದ ಸಮನ್ವಯವನ್ನು ಸಾಧಿಸಿಕೊಳ್ಳಬೇಕು” ಎಂದು ಹೇಳಿದ ವೈದ್ಯರ ಮಾತು** ನೆನಪಾಯಿತು, ಮತ್ತೆ ಗಟ್ಟಿಯಾಗಿ ಮನಸ್ಸಿನಲ್ಲಿ ಉಳಿಯಿತು.

ಅದೃಢಂಚ ಹತಂ ಜ್ಞಾನಂ
ಪ್ರಮಾದೇನ ಹತಂ ಶ್ರತಂ
ಸಂದಿಗ್ಧೋಹಿ ಹತಂ ಮಂತ್ರಃ
ವ್ಯಗ್ರಚಿತ್ತೋ ಹತಂ ಜಪಃ

(ಗಟ್ಟಿಗೊಳ್ಳದಿರಲಳಿವುದು ಅರಿವು
ಎಚ್ಚರಗೇಡಿಗುಳಿಯದು ಕೇಳಿದುದು
ಇಬ್ಬಂದಿತನದಲಳಿಯುವುದು ಮಂತ್ರ
ಕಳವಳದ ಮನ ಕಳೆಯುವುದು ಜಪವ)

ಎಲ್ಲವನ್ನೂ ದೇವರ ಪರವಾಗಿ, ಆನಂದತೀರ್ಥರ ತತ್ವವಾದದ ಅರಿವಿನ ಮೂಲಕ ಹರಿ ಪರವಾಗಿ ಸಮನ್ವಯ ಮಾಡಿಕೊಳ್ಳುವದು ಹೇಗೆ ಎನ್ನುವದನ್ನು ನೋಡಬೇಕೆಂದರೆ ಶ್ರೀ ವಾದಿರಾಜರ ‘ಶ್ರೀ ರುಕ್ಮಿಣೀಶ ವಿಜಯ’ ಕೃತಿಯನ್ನು ಮನನ ಮಾಡಬೇಕು ಅಂತ ನನಗನಿಸುತ್ತದೆ. ಇತ್ತೀಚೆಗಷ್ಟೇ ಓದಲು ಶುರು ಮಾಡಿದ ಈ ಕೃತಿಯಲ್ಲಿ ಇನ್ನೂ ಓದಲು ಬಹಳಷ್ಟು ಸರ್ಗಗಳಿವೆ. ಅದರಲ್ಲಿ ಕಂಡುಬರುವ ವಿಷಯ ನಿರೂಪಣೆ, ಕವಿತಾ ಚಾತುರ್ಯ, ಪದಲಾಲಿತ್ಯ, ಬಳಸಿದ ಅಲಂಕಾರಗಳು, ಉತ್ಪ್ರೇಕ್ಷೆಗಳು, ಎಲ್ಲವೂ ಆ ಕೃತಿಯ ಆರಾಧ್ಯ ಮೂರುತಿ ಶ್ರೀ ಕೃಷ್ಣನಲ್ಲೇ ನೆಲೆಯಾಗಿವೆ, ಅವನನ್ನೇ ಆರಾಧಿಸುತ್ತವೆ.

ಟಿಪ್ಪಣಿ  :

* ಬರೆದಾದ ಮೇಲೆ ಇದನ್ನು ವೈದ್ಯರಿಗೆ ಕಳುಹಿಸಿದಾಗ ಅವರು ಸೂಚಿಸಿದ conclusion ಇದು. ಇದರ ಜೊತೆಗೆ ತಮ್ಮ ತಾತನವರು ಹೇಳಿಕೊಳ್ಳುತ್ತಿದ್ದ ಪ್ರಾಣೇಶದಾಸರ ಪದ ‘ಪಾಲಿಸೊ ವೇಂಕಟರೇಯ’ ಎನ್ನುವದರಲ್ಲಿ ‘ಜಾಂಬವತಿನಲ್ಲ’ ಎಂದು ಬರುತ್ತದೆ ಎಂದು ತಿಳಿಸಿದರು. ಅಲ್ಲಿ ‘ಜಾಂಬವತೀನಲ್ಲ’ನೇ ಯಾಕೆ ಬಂದ ಎಂದರೆ ಜಾಂಬವತಿಗೇ ಮೊದಲು ಭಾಗವತವನ್ನು ಉಪದೇಶಿಸಿದ್ದು ಎಂದು ತಿಳಿಸಿದರು. ದಾಸರು ಪದಗಳಲ್ಲಿ ಯಾವುದನ್ನೂ ಸುಮ್ಮ ಸುಮ್ಮನೆ ಹಾಕುವದಿಲ್ಲ, ಶಾಸ್ತ್ರ ಗ್ರಂಥಗಳಲ್ಲಿ, ಇತಿಹಾಸ ಪುರಾಣಗಳಲ್ಲಿ ಉಲ್ಲೇಖಿತವಾದ ವಿಶಿಷ್ಠ ಸಂದರ್ಭಗಳನ್ನ, ದೇವರ ಹೆಸರುಗಳನ್ನ ಸಂದರ್ಭೋಚಿತವಾಗಿ ತಮ್ಮ ಪದಗಳಲ್ಲಿ ಬಳಸಿರುತ್ತಾರೆ. ನಾವು ಜಿಜ್ಞಾಸುಗಳಾಗಿ ವಿಚಾರಿಸಿದಾಗ ಅವುಗಳ ವಿಷಯ ತಿಳಿದರೆ ಖುಷಿಯಾಗುತ್ತದೆ, ದಾಸರ ವಿಸ್ತಾರ ಅರಿವಿನ ಬಗ್ಗೆ, ಆ ಅರಿವನ್ನು ಕನ್ನಡದ ನಾಮಗಳಲ್ಲಿ ಅಡಕವಾಗಿಡುವ ಬಗ್ಗೆ ಮತ್ತಷ್ಟು ಗೌರವ ಮೂಡುತ್ತದೆ.

** ವೈದ್ಯರು ಅವತ್ತು ಹೇಳಿದ ಮಾತಿನ ಯಥಾರ್ಥ ಶಬ್ದಗಳು/ವಾಕ್ಯಗಳು ಇವೇ ಇರಲಿಕ್ಕಿಲ್ಲ. ಆದರೆ ನನ್ನ ನೆನಪಿನಲ್ಲಿ ಉಳಿದ ಆ ಮಾತಿನ ಸಂದೇಶವನ್ನು ಸಂಗ್ರಹವಾಗಿ ಬರೆಯಬೇಕು ಅನಿಸಿದಾಗ ಅವು  ಬಂದದ್ದು ಈ  ರೂಪದಲ್ಲಿ. ಅದಕ್ಕಾಗಿ quote ಹಾಕಿರುವೆ! )

ಇದನ್ನು ಬರೆದು ಪೋಸ್ಟಿಸಿ ಆದ ಬಳಿಕ ಕೇಳಿದ ಶ್ರೀ ಸತ್ಯಾತ್ಮ ತೀರ್ಥರ ಪ್ರವಚನದಲ್ಲಿ ಇನ್ನೊಂದು ವಿಷಯ ತಿಳಿಯಿತು. ವ್ಯಾಸ, ಹಯಗ್ರೀವ ರೂಪಗಳು ಜ್ಞಾನ ಹುಟ್ಟಿಸುವ (ಜ್ಞಾನ ಕೊಡುವ) ರೂಪಗಳಂತೆ. ಪರಶುರಾಮ ರೂಪವು ಜ್ಞಾನವನ್ನು ರಕ್ಷಿಸುವ, ಕಾಪಿಡುವ ರೂಪವಾದರೆ ಕೃಷ್ಣ ರೂಪವು ಜ್ಞಾನಕ್ಕೆ ಬರುವ ವಿಘ್ನಗಳನ್ನು ಸಂಕಷ್ಟಗಳನ್ನು ದೂರಗೊಳಿಸುವ ರೂಪವಂತೆ. ಸಂಸಾರ ಪಾಶವನ್ನು ನೀಗಲು ಕಂಸಾರಿಯನ್ನು ನೆನೆ ಎಂದದ್ದಕ್ಕೆ ಇದೂ ಒಂದು ಕಾರಣವೆನಿಸುತ್ತದೆ ನನಗೆ.

ಹಯವದನ ತನ್ನ ಪ್ರಿಯಳಾದ ಲಕ್ಷುಮಿಗೆ…

ರಾಗ: ಪಂತುರಾವಳಿ ಧ್ರುವ ತಾಳ

ಶೋಭಾನವೆನ್ನೀರೆ ಸುರರೊಳು ಸುಭಗನಿಗೆ
ಶೋಭಾನವೆನ್ನಿ ಸುಗುಣನಿಗೆ
ಶೋಭಾನವೆನ್ನೀರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನಿ ಸುರಪ್ರಿಯಗೆ || ಶೋಭಾನೆ || ಪ ||

ಲಕ್ಷ್ಮೀನಾರಾಯಣರ ಚರಣಕ್ಕೆ ಶರಣೆಂಬೆ
ಪಕ್ಷಿವಾಹನ್ನಗೆರಗುವೆ
ಪಕ್ಷಿವಾಹನ್ನಗೆರಗುವೆ ಅನುದಿನ
ರಕ್ಷಿಸಲಿ ನಮ್ಮ ವಧೂವರರ ||

ಪಾಲಸಾಗರವನ್ನು ಲೀಲೆಯಲಿ ಕಡೆಯಲು
ಬಾಲೆ ಮಹಲಕ್ಷುಮಿ ಉದಿಸಿದಳು
ಬಾಲೆ ಮಹಲಕ್ಷುಮಿ ಉದಿಸಿದಳಾ ದೇವಿ
ಪಾಲಿಸಲಿ ನಮ್ಮ ವಧೂವರರ ||

ಬೊಮ್ಮನ ಪ್ರಳಯದಲಿ ತನ್ನರಸಿಯೊಡಗೂಡಿ
ಸುಮ್ಮನೆಯಾಗಿ ಮಲಗಿರ್ದ
ನಮ್ಮ ನಾರಾಯಣಗು ಈ ರಮ್ಮೆಗಡಿಗಡಿಗು
ಜನ್ಮವೆಂಬುದು ಅವತಾರ ||

ಕಂಬುಕಂಠದ ಸುತ್ತ ಕಟ್ಟಿದ ಮಂಗಳಸೂತ್ರ
ಅಂಬುಜವೆರಡು ಕರಯುಗದಿ
ಅಂಬುಜವೆರಡು ಕರಯುಗದಿ ಧರಿಸಿ ಪೀ |
ತಾಂಬರವನ್ನುಟ್ಟು ಮೆರೆದಳು ||

ಒಂದು ಕರದಿಂದ ಅಭಯವನೀವಳೆ ಮ
ತ್ತೊಂದು ಕೈಯಿಂದ ವರಗಳ
ಕುಂದಿಲ್ಲದಾನಂದಸಂದೋಹ ಉಣಿಸುವ
ಇಂದಿರೆ ನಮ್ಮ ಸಲಹಲಿ ||

ಪೊಳೆವ ಕಾಂಚಿಯ ದಾಮ ಉಲಿವ ಕಿಂಕಿಣಿಗಳು
ನಲಿವ ಕಾಲಂದುಗೆ ಘಲಕೆನಲು
ನಳನಳಿಸುವ ಮುದ್ದುಮೊಗದ ಚೆಲುವೆ ಲಕ್ಷುಮಿ
ಸಲಹಲಿ ನಮ್ಮ ವಧೂವರರ ||

ರನ್ನದ ಮೊಲೆಗಟ್ಟು ಚಿನ್ನದಾಭರಣಗಳ
ಚೆನ್ನೆ ಮಹಲಕ್ಷುಮಿ ಧರಿಸಿದಳೆ
ಚೆನ್ನೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ
ಮನ್ನೆಯ ವಧೂವರರ ಸಲಹಲಿ ||

ಕುಂಭಕುಚದ ಮೇಲೆ ಇಂಬಿಟ್ಟ ಹಾರಗಳು
ತುಂಬಿಗುರುಳ ಮುಖಕಮಲ
ತುಂಬಿಗುರುಳ ಮುಖಕಮಲದ ಮಹಲಕ್ಷುಮಿ ಜಗ
ದಂಬೆ ವಧೂವರರ ಸಲಹಲಿ ||

ಮುತ್ತಿನ ಓಲೆಯನಿಟ್ಟಳೆ ಮಹಲಕ್ಷುಮಿ
ಕಸ್ತೂರಿತಿಲಕ ಧರಿಸಿದಳೆ
ಕಸ್ತೂರಿ ತಿಲಕ ಧರಿಸಿದಳಾ ದೇವಿ ಸ
ರ್ವತ್ರ ವಧೂವರರ ಸಲಹಲಿ ||

ಅಂಬುಜನಯನಗಳ ಬಿಂಬಾಧರದ ಶಶಿ
ಬಿಂಬದಂತೆಸೆವ ಮೂಗುತಿಮಣಿ
ಬಿಂಬದಂತೆಸೆವ ಮೂಗುತಿಮಣಿಯ ಮಹಲಕ್ಷುಮಿ
ಉಂಬುದಕೀಯಲಿ ವಧೂವರರ್ಗೆ ||

ಮುತ್ತಿನಕ್ಷತೆಯಿಟ್ಟು ನವರತ್ನದ ಮುಕುಟವ
ನೆತ್ತಿಯ ಮೇಲೆ ಧರಿಸಿದಳೆ
ನೆತ್ತಿಯ ಮೇಲೆ ಧರಿಸಿದಳಾ ದೇವಿ ತನ್ನ
ಭಕ್ತಿಯ ಜನರ ಸಲಹಲಿ ||

ಕುಂದ ಮಂದಾರ ಜಾಜಿ ಕುಸುಮಗಳ ವೃಂದವ
ಚೆಂದದ ತುರುಬಿಲಿ ತುರುಬಿದಳೆ
ಕುಂದಣವರ್ಣದ ಕೋಮಲೆ ಮಹಲಕ್ಷುಮಿ ಕೃಪೆ
ಯಿಂದ ವಧೂವರರ ಸಲಹಲಿ||

ಎಂದೆಂದೂ ಬಾಡದ ಅರವಿಂದದ ಮಾಲೆಯ
ಇಂದಿರೆ ಪೊಳೆವ ಕೊರಳಲ್ಲಿ
ಇಂದಿರೆ ಪೊಳೆವ ಕೊರಳಲ್ಲಿ ಧರಿಸಿದಳೆ ಅವ
ಳಿಂದು ವಧೂವರರ ಸಲಹಲಿ ||

ದೇವಾಂಗ ಪಟ್ಟಿಯ ಮೇಲು ಹೊದ್ದಿಕೆಯ
ಭಾವೆ ಮಹಲಕ್ಷುಮಿ ಧರಿಸಿದಳೆ
ಭಾವೆ ಮಹಲಕ್ಷುಮಿ ಧರಿಸಿದಳಾ ದೇವಿ ತನ್ನ
ಸೇವಕ ಜನರ ಸಲಹಲಿ ||

ಈ ಲಕ್ಷುಮಿದೇವಿಯ ಕಾಲುಂಗುರ ಘಲಕೆನಲು
ಲೋಲಾಕ್ಷಿ ಮೆಲ್ಲನೆ ನಡೆತಂದಳು
ಸಾಲಾಗಿ ಕುಳ್ಳಿರ್ದ ಸುರರ ಸಭೆಯ ಕಂಡು
ಆಲೋಚಿಸಿದಳು ಮನದಲ್ಲಿ ||

ತನ್ನ ಮಕ್ಕಳ ಕುಂದ ತಾನೆ ಪೇಳುವದಕ್ಕೆ
ಮನ್ನದಿ ನಾಚಿ ಮಹಲಕ್ಷುಮಿ
ತನ್ನಾಮದಿಂದಲಿ ಕರೆಯದೆ ಒಬ್ಬೊಬ್ಬರ
ಉನ್ನತ ದೋಷಗಳನೆಣಿಸಿದಳು ||

ಕೆಲವರು ತಲೆಯೂರಿ ತಪಗಯ್ದು ಪುಣ್ಯವ
ಗಳಿಸಿದ್ದರೇನೂ ಫಲವಿಲ್ಲ
ಜ್ವಲಿಸುವ ಕೋಪದಿ ಶಾಪವ ಕೊಡುವರು
ಲಲನೆಯನಿವರು ಒಲಿಸುವರೇ ||

ಎಲ್ಲ ಶಾಸ್ತ್ರಗಳನೋದಿ ದುರ್ಲಭ ಜ್ಞಾನವ
ಕಲ್ಲಿಸಿ ಕೊಡುವ ಗುರುಗಳು
ಬಲ್ಲಿದ ಧನಕ್ಕೆ ಮರುಳಾಗಿವರಿಬ್ಬರು
ಸಲ್ಲದ ಪುರೋಹಿತಕೊಳಗಾದರು ||

ಕಾಮನಿರ್ಜಿತನೊಬ್ಬ ಕಾಮನಿಗೆ ಸೋತೊಬ್ಬ
ಭಾಮಿನಿಯ ಹಿಂದೆ ಹಾರಿದವ
ಕಾಮಾಂಧನಾಗಿ ಮುನಿಯ ಕಾಮಿನಿಗೆಯ್ದಿದನೊಬ್ಬ
ಕಾಮದಿ ಗುರುತಲ್ಪಗಾಮಿಯೊಬ್ಬ ||

ನಶ್ವರೈಶ್ವರ್ಯವ ಬಯಸುವನೊಬ್ಬ ಪರ
ರಾಶ್ರಯಿಸಿ ಬಾಳುವ ಈಶ್ವರನೊಬ್ಬ
ಹಾಸ್ಯವ ಮಾಡಿ ಹಲ್ಲ ಉದುರಿಸಿಕೊಂಡವನೊಬ್ಬ ಅ
ದೃಶ್ಯಾಂಘ್ರಿಯೊಬ್ಬ ಒಕ್ಕಣ್ಣನೊಬ್ಬ ||

ಮಾವನ ಕೊಂದೊಬ್ಬ ಮರುಳಾಗಿಹನು ಗಡ
ಹಾರ್ವನ ಕೊಂದೊಬ್ಬ ಬಳಲಿದ
ಜೀವರ ಕೊಂದೊಬ್ಬ ಕುಲಗೇಡೆಂದೆನಿಸಿದ
ಶಿವನಿಂದೊಬ್ಬ ಬಯಲಾದ ||

ಧರ್ಮವುಂಟೊಬ್ಬನಲಿ ಹೆಮ್ಮೆಯ ಹೆಸರಿಗೆ
ಅಮ್ಮಮ್ಮ ತಕ್ಕ ಗುಣವಿಲ್ಲ
ಕ್ಷಮ್ಮೆಯ ಬಿಟ್ಟೊಬ್ಬ ನರಕದಲಿ ಜೀವರ
ಮರ್ಮವ ಮೆಟ್ಟಿ ಕೊಲಿಸುವ ||

ಖಳನಂತೆ ಒಬ್ಬ ತನಗೆ ಸಲ್ಲದ ಭಾಗ್ಯವ
ಬಲ್ಲಿದಗಂಜಿ ಬರಿಗೈದ
ದುರ್ಲಭ ಮುಕ್ತಿಗೆ ದೂರವೆಂದೆನಿಸುವ ಪಾ
ತಾಳ ತಳಕ್ಕೆ ಇಳಿದ ಗಡ ||

ಎಲ್ಲರಾಯುಷ್ಯವ ಶಿಂಶುಮಾರದೇವ
ಸಲ್ಲೀಲೆಯಿಂದ ತೊಲಗಿಸುವ
ಒಲ್ಲೆ ನಾನಿವರ ನಿತ್ಯ ಮುತ್ತೈದೆಯೆಂದು
ಬಲ್ಲವರೆನ್ನ ಭಜಿಸುವರು ||

ಪ್ರಕೃತಿಯ ಗುಣದಿಂದ ಕಟ್ಟುವಡೆದ ನಾನಾ
ವಿಕೃತಿಗೊಳಗಾಗಿ ಭವದಲ್ಲಿ
ಸುಖದುಃಖವುಂಬ ಬೊಮ್ಮಾದಿ ಜೀವರು
ದುಃಖಕ್ಕೆ ದೂರಳೆನಿಪ ಎನಗೆಣೆಯೆ ||

ಒಬ್ಬನವನ ಮಗ ಮತ್ತೊಬ್ಬನವನ ಮೊಮ್ಮ
ಒಬ್ಬನವನಿಗೆ ಶಯನಾಹ
ಒಬ್ಬನವನ ಪೊರುವ ಮತ್ತಿಬ್ಬರವನಿಗಂಜಿ
ಅಬ್ಬರದಲಾವಾಗ ಸುಳಿವರು ||

ಒಬ್ಬನವನ ನಾಮಕಂಜಿ ಬೆಚ್ಚುವ ಗಡ
ಸರ್ಬರಿಗಾವ ಅಮೃತವ
ಸರ್ಬರಿಗಾವ ಅಮೃತವನುಣಿಸುವ ಅವ
ನೊಬ್ಬನೆ ನಿರನಿಷ್ಟ ನಿರವದ್ಯ ||                                ||೨೭||

ನಿರನಿಷ್ಟ ನಿರವದ್ಯ ಎಂಬ ಶ್ರುತ್ಯರ್ಥವ
ಒರೆದು ನೋಡಲು ನರಹರಿಗೆ
ನರಕಯಾತನೆ ಸಲ್ಲ ದುರಿತಾತಿದೂರನಿಗೆ
ಮರುಳ ಮನ ಬಂದಂತೆ ನುಡಿಯದಿರು                       ||೨೮||

ಒಂದೊಂದು ಗುಣಗಳು ಇದ್ದಾವು ಇವರಲ್ಲಿ
ಸಂದಣಿಸಿವೆ ಬಹುದೋಷ
ಕುಂದೆಳ್ಳಷ್ಟಿಲ್ಲದ ಮುಕುಂದನೆ ತನಗೆಂದು
ಇಂದಿರೆ ಪತಿಯ ನೆನೆದಳು ||

ದೇವರ್ಷಿ ವಿಪ್ರರ ಕೊಂದು ತನ್ನುದರದೊಳಿಟ್ಟು
ತೀವಿರ್ದ ಹರಿಗೆ ದುರಿತವ
ಭಾವಜ್ಞರೆಂಬರೆ ಆಲದೆಲೆಯ ಮೇಲೆ
ಶಿವನ ಲಿಂಗವ ನಿಲಿಸುವರೆ ||

ಹಸಿ ತೃಷೆ ಜರೆ ಮರಣ ರೋಗರುಜಿನಗಳೆಂಬ
ಅಸುರ ಪಿಶಾಚಿಗಳ ಭಯವೆಂಬ
ವ್ಯಸನ ಬರಬಾರದು ಎಂಬ ನಾರಯಣನಿಗೆ
ಪಶು ಮೊದಲಾಗಿ ನೆನೆಯದು ||

ತಾ ದುಃಖಿಯಾದರೆ ಸುರರಾರ್ತಿಯ ಕಳೆದು
ಮೋದವೀವುದಕ್ಕೆ ಧರೆಗಾಗಿ
ಮಾಧವ ಬಾಹನೆ ಕೆಸರೊಳು ಮುಳುಗಿದವ ಪರರ
ಬಾಧಿಪ ಕೆಸರ ಬಿಡಿಸುವನೆ ||

ಬೊಮ್ಮನಾಲಯದಲ್ಲಿ ಇದ್ದವಗೆ ಲಯವುಂಟೆ
ಜನ್ಮ ಲಯವಿಲ್ಲದವನಿಗೆ
ಅಮ್ಮಿಯನುಣಿಸಿದ್ದ ಯಶೋದೆಯಾಗಿದ್ದಳೆ
ಅಮ್ಮ ಇವಗೆ ಹಸಿ ತೃಷೆಯುಂಟೆ ||

ಆಗ ಭಕ್ಷ್ಯ ಭೋಜ್ಯವಿತ್ತು ಪೂಜಿಸುವ
ಯೋಗಿಗಳುಂಟೇ ಧನಧಾನ್ಯ
ಆಗ ದೊರಕೊಂಬುದೆ ಪಾಕ ಮಾಡುವ ವಹ್ನಿ ಮ
ತ್ತಾಗಲೆಲ್ಲಿಹುದು ವಿಚಾರಿಸಿರೋ ||

ರೋಗವನೀವ ವಾತ ಪಿತ್ತ ಶ್ಲೇಷ್ಮ
ಆಗ ಕೂಡುವುದೇ ರಮೆಯೊಡನೆ
ಭೋಗಿಸುವವಗೆ ದುರಿತವ ನೆನೆವರೆ
ಈ ಗುಣನಿಧಿಗೆ ಎಣೆಯುಂಟೆ ||

ರಮ್ಮೆದೇವಿಯರನಪ್ಪಿಕೊಂಡಿಪ್ಪುದು
ರಮ್ಮೆಯರಸಗೆ ರತಿ ಕಾಣಿರೋ
ಅಮ್ಮೋಘ ವೀರ್ಯವು ಚಲಿಸಿದರೆ ಪ್ರಳಯದಲಿ
ಕುಮ್ಮಾರರ್ ಯಾಕೆ ಜನಿಸರು ||

ಏಕತ್ರ ನಿರ್ಣೀತ ಶಾಸ್ತ್ರಾರ್ಥ ಪರತ್ರಾಪಿ
ಬೇಕೆಂಬ ನ್ಯಾಯವ ತಿಳಿದುಕೊ
ಶ್ರೀಕೃಷ್ಣನೊಬ್ಬನೆ ಸರ್ವದೋಷಕ್ಕೆ ಸಿ
ಲುಕನೆಂಬುದು ಸಲಹಲಿಕೆ

ಎಲ್ಲ ಜಗವ ನುಂಗಿ ದಕ್ಕಿಸಿಕೊಂಡವಗೆ
ಸಲ್ಲದು ರೋಗರುಜಿನವು
ಬಲ್ಲ ವೈದ್ಯರ ಕೇಳಿ ಅಜೀರ್ತಿಮೂಲವಲ್ಲ
ದಿಲ್ಲ ಸಮಸ್ತ ರುಜಿನವು ||

ಇಂಥಾ ಮೂರುತಿಯ ಒಳಗೊಂಬ ನರಕ ಬಹು
ಭ್ರಾಂತ ನೀನೆಲ್ಲಿಂದ ತೋರಿಸುವೆಲೋ
ಸಂತೆಯ ಮರುಳ ಹೊಗೆಲೋ ನಿನ್ನ ಮಾತ
ಸಂತರು ಕೇಳಿ ಸೊಗಸರು ||

ಶ್ರೀನಾರಾಯಣರ ಜನನೀಜನಕರ
ನಾನೆಂಬ ವಾದೀ ನುಡಿಯೆಲೋ
ಜಾಣರದರಿಂದರಿಯ ಮೂಲರೂಪವ ತೋರಿ
ಶ್ರೀನರಸಿಂಹ ಅವತಾರ ||

ಅಂಬುಧಿಯ ಉದಕದಲಿ ಒಡೆದು ಮೂಡಿದ ಕೂರ್ಮ
ನೆಂಬ ಶ್ರೀಹರಿಯ ಪಿತನಾರು
ಎಂಬ ಶೀಹರಿಯ ಪಿತನಾರು ಅದರಿಂದ ಸ್ವ
ಯಂಭುಗಳೆಲ್ಲ ಅವತಾರ ||

ದೇವಕಿಯ ಗರ್ಭದಲಿ ದೇವನವತರಿಸಿದ
ಭಾವವನು ಬಲ್ಲ ವಿವೇಕಿಗಳು
ಈ ವಸುಧೆಯೊಳಗೆ ಕೃಷ್ಣಗೆ ಜನ್ಮವ
ಆವ ಪರಿಯಲ್ಲಿ ನುಡಿವೆಯೋ ||

ಆವಳಿಸುವಾಗ ಯಶೋದಾದೇವಿಗೆ
ದೇವ ತನ್ನೊಳಗೆ ಹುದುಗಿದ್ದ
ಭುವನವನೆಲ್ಲ ತೋರಿದುದಿಲ್ಲವೇ
ಆ ವಿಷ್ಣು ಗರ್ಭದೊಳಡುಗುವನೆ ||

ಆನೆಯ ಮಾನದಲಿ ಅಡಗಿಸಿದವರುಂಟೆ
ಅನೇಕ ಕೋಟಿ ಅಜಾಂಡವ
ಅಣು ರೋಮಕೂಪದಲಿ ಆಳ್ದ ಶ್ರೀಹರಿಯ
ಜನನೀಜಠರವು ಒಳಗೊಂಬುದೆ ||

ಅದರಿಂದ ಕೃಷ್ಣನಿಗೆ ಜನ್ಮವೆಂಬುದು ಸಲ್ಲ
ಮದನನಿವನ ಕುಮಾರನು
ಕದನದಿ ಕಣೆಗಳ ಇವನೆದೆಗೆಸೆವನೆ
ಸುದತೇರಿಗಿವನಿಂತು ಸಿಲುಕುವನೆ ||

ಅದರಿಂದ ಕೃಷ್ಣನಿಗೆ ಪರನಾರೀಸಂಗವ ಕೋ
ವಿದರಾದ ಬುಧರು ನುಡಿವರೆ
ಸದರವೆ ಈ ಮಾತು ಸರ್ವವೇದಂಗಳು
ಮುದದಿಂದ ತಾವು ಸ್ತುತಿಸುವುವು ||

ಎಂದ ಭಾಗವತದ ಚೆಂದದ ಮಾತನು
ಮಂದಮಾನವ ಮನಸಿಗೆ
ತಂದುಕೊ ಜಗಕ್ಕೆ ಕೈವಲ್ಯವೀವ ಮು
ಕುಂದಗೆ ಕುಂದು ಕೊರತೆ ಸಲ್ಲ ||

ಹತ್ತು ವರ್ಷದ ಕೆಳಗೆ ಮಕ್ಕಳಾಟಿಕೆಯಲ್ಲಿ
ಚಿತ್ತ ಸ್ತ್ರೀಯರಿಗೆ ಎರಗುವದೆ
ಅರ್ತಿಯಿಂದರ್ಚಿಸಿದ ಗೋಕುಲದ ಕನ್ಯೆಯರ
ಸತ್ಯಸಂಕಲ್ಪ ಬೆರೆತಿದ್ದ ||

ಹತ್ತು ಮತ್ತಾರುಸಾಸಿರ ಸ್ತ್ರೀಯರಲ್ಲಿ
ಹತ್ತು ಹತ್ತೆನಿಪ ಕ್ರಮದಿಂದ
ಪುತ್ರರ ವೀರ್ಯದಲಿ ಸೃಷ್ಟಿಸಿದವರುಂಟೆ
ಅರ್ತಿಯ ಸೃಷ್ಟಿ ಹರಿಗಿದು ||

ರೋಮ ರೋಮಕೂಪ ಕೋಟಿ ವೃಕಂಗಳ
ನಿರ್ಮಿಸಿ ಗೋಪಾಲರ ತೆರಳಿಸಿದ
ನಮ್ಮ ಶ್ರೀಕೃಷ್ಣ ಮಕ್ಕಳ ಸೃಜಿಸುವ ಮ
ಹಿಮ್ಮೆ ಬಲ್ಲವರಿಗೆ ಸಲಹಲಿಕೆ ||

ಮಣ್ಣನೇಕೆ ಮೆದ್ದೆಯೆಂಬ ಯಶೋದೆಗೆ
ಸಣ್ಣ ಬಾಯೊಳಗೆ ಜಗಂಗಳ
ಕಣ್ಣಾರೆ ತೋರಿದ ನಮ್ಮ ಶ್ರೀಕೃಷ್ಣನ
ಘನ್ನತೆ ಬಲ್ಲವರಿಗೆ ಸಲಹಲಿಕೆ ||

ನಾರದ ಸನಕಾದಿ ಮೊದಲಾದ ಯೋಗಿಗಳು
ನಾರಿಯರಿಗೆ ಮರುಳಾಹರೆ
ಓರಂತೆ ಶ್ರೀಕೃಷ್ಣನಡಿಗಡಿಗೆರಗುವರೆ
ಆರಾಧಿಸುತ್ತ ಭಜಿಸುವರೆ ||

ಅಂಬುಜಸಂಭವ ತ್ರಿಯಂಬಕ ಮೊದಲಾದ
ನಂಬಿದವರಿಗೆ ವರವಿತ್ತ
ಸಂಭ್ರಮದ ಸುರರು ಎಳ್ಳಷ್ಟು ಕೋಪಕ್ಕೆ
ಇಂಬಿದ್ದರಿವನ ಭಜಿಸುವರೆ ||

ಆವನುಂಗುಷ್ಠವ ತೊಳೆದ ಗಂಗಾದೇವಿ
ಪಾವನಳೆನಿಸಿ ಮೆರೆಯಳೆ
ಜೀವನ ಸೇರುವ ಪಾಪವ ಕಳೆವಳು
ಈ ವಾಸುದೇವಗೆ ಎಣೆಯುಂಟೆ ||

ಕಿಲ್ಬಿಷವಿದ್ದರೆ ಅಗ್ರಪೂಜೆಯನು
ಸರ್ಬರಾಯರ ಸಭೆಯೊಳಗೆ
ಉಬ್ಬಿದ ಮನದಿಂದ ಧರ್ಮಜ ಮಾಡುವನೆ
ಕೊಬ್ಬದಿರೆಲೋ ಪರವಾದಿ ||

ಸಾವಿಲ್ಲದ ಹರಿಗೆ ನರಕಯಾತನೆ ಸಲ್ಲ
ಜೀವಂತರಿಗೆ ನರಕದಲಿ
ನೋವನೀವನು ನಿಮ್ಮ ಯಮದೇವನು
ಗೋವ ನೀ ಹರಿಯ ಗುಣವರಿಯ ||

ನರಕವಾಳುವ ಯಮಧರ್ಮರಾಯ ತನ್ನ
ನರಜನ್ಮದೊಳಗೆ ಪೊರಳಿಸಿ
ಮರಳಿ ತನ್ನರಕದಲಿ ಪೊರಳಿಸಿ ಕೊಲುವನು
ಕುರು ನಿನ್ನ ಕುಹಕ ಕೊಳದಲಿ ||

ಬೊಮ್ಮನ ನೂರು ವರ್ಷ ಪರಿಯಂತ ಪ್ರಳಯದಲಿ
ಸುಮ್ಮನೆಯಾಗಿ ಮಲಗಿಪ್ಪ
ನಮ್ಮ ನಾರಾಯಣಗೆ ಹಸಿ ತೃಷೆ ಜರಾಮರಣ ದು
ಷ್ಕರ್ಮದುಃಖಂಗಳು ತೊಡಸುವರೆ ||

ರಕ್ಕಸರಸ್ತ್ರಗಳಿಂದ ಗಾಯವಡೆಯದ
ಅಕ್ಷಯ ಕಾಯದ ಶ್ರೀಕೃಷ್ಣ
ತುಚ್ಛ ಯಮಭಟರ ಶಸ್ತ್ರಕಳಕುವನಲ್ಲ
ಹುಚ್ಚ ನೀ ಹರಿಯ ಗುಣವರಿಯ ||

ಕಿಚ್ಚ ನುಂಗಿದನು ನಮ್ಮ ಶ್ರೀಕೃಷ್ಣನು
ತುಚ್ಛ ನರಕದೊಳು ಅನಲನಿಗೆ
ಬೆಚ್ಚುವನಲ್ಲ ಅದರಿಂದವಗೆ ನರಕ
ಮೆಚ್ಚುವರಲ್ಲ ಬುಧರೆಲ್ಲ ||

ಮನೆಯಲ್ಲಿ ಕ್ಷಮೆಯ ತಾಳ್ದ ವೀರ ಭಟ
ರಣರಂಗದಲಿ ಕ್ಷಮಿಸುವನೆ
ಅಣುವಾಗಿ ನಮ್ಮ ಹಿತಕೆ ಮನದೊಳಗಿನ ಕೃಷ್ಣ
ಮುನಿವ ಕಾಲಕ್ಕೆ ಮಹತ್ತಾಹ ||

ತಾಯ ಪೊಟ್ಟೆಯಿಂದ ಮೂಲ ರೂಪವ ತೋರಿ
ಆಯುಧ ಸಹಿತ ಪೊರವಂಟ
ನ್ಯಾಯಕೋವಿದರು ಪುಟ್ಟಿದನೆಂಬರೆ
ಬಾಯಿಗೆ ಬಂದಂತೆ ಬಗಳದಿರು ||

ಉಟ್ಟ ಪೀತಾಂಬರ ತೊಟ್ಟ ಭೂಷಣಂಗಳು
ಇಟ್ಟ ನವರತ್ನದ ಕಿರೀಟವು
ಮೆಟ್ಟಿದ ಕುರುಹ ಎದೆಯಲ್ಲಿ ತೋರಿದ ಶ್ರೀ
ವಿಠ್ಠಲ ಪುಟ್ಟಿದನೆನಬಹುದೆ ||

ಋಷಭ್ಹಂಸಮೇಷಮಹಿಷಮೂಷಿಕವಾಹನವೇರಿ ಮಾ
ನಿಸರಂತೆ ಸುಳಿವ ಸುರರೆಲ್ಲ
ಎಸೆವ ದೇವೇಶಾನರ ಸಹಸಕ್ಕೆ ಮಣಿದರು
ಕುಸುಮನಾಭನಿಗೆ ಸರಿಯುಂಟೆ ||

ಒಂದೊಂದು ಗುಣಗಳು ಇದ್ದಾವು ಇವರಲ್ಲಿ
ಸಂದಣಿಸಿವೇಕೋ ಬಹು ದೋಷ
ಕುಂದೆಳ್ಳಿಷ್ಟಿಲ್ಲದ ಮುಕುಂದನೆ ತನಗೆಂದು
ಇಂದಿರೆ ಪತಿಯ ನೆನೆದಳು ||

ಇಂತು ಚಿಂತಿಸಿ ರಮೆ ಸಂತ ರಾಮನ ಪದವ
ಸಂತೋಷ ಮನದಿ ನೆನೆವುತ್ತ
ಸಂತೋಷಮನದಿ ನೆನೆವುತ್ತ ತನ್ನ ಶ್ರೀ
ಕಾಂತನಿದ್ದೆಡೆಗೆ ನಡೆದಳು ||

ಕಂದರ್ಪಕೋಟಿಗಳ ಗೆಲುವ ಸೌಂದರ್ಯದ
ಚೆಂದವಾಗಿದ್ದ ಚೆಲುವನ
ಇಂದಿರೆ ಕಂಡು ಇವನೆ ತನಗೆ ಪತಿ
ಯೆಂದವನ ಬಳಿಗೆ ನಡೆದಳು ||

ಇತ್ತರದ ಸುರರ ಸುತ್ತ ನೋಡುತ್ತ ಲಕ್ಷ್ಮಿ
ಚಿತ್ತವ ಕೊಡದೆ ನಸುನಗುತ
ಚಿತ್ತವ ಕೊಡದೆ ನಸುನಗುತ ಬಂದು ಪುರು
ಷೋತ್ತಮನ ಕಂಡು ನಮಿಸಿದಳು ||

ನಾನಾ ಕುಸುಮಗಳಿಂದ ಮಾಡಿದ ಮಾಲೆಯ
ಶ್ರೀನಾರಿ ತನ್ನ ಕರದಲ್ಲಿ
ಪೀನಕಂಧರದ ತ್ರಿವಿಕ್ರಮರಾಯನ ಕೊರ
ಳೀನ ಮೇಲಿಟ್ಟು ನಮಿಸಿದಳು ||

ಉಟ್ಟ ಪೊಂಬಟ್ಟೆಯು ತೊಟ್ಟಾಭರಣಂಗಳು
ಇಟ್ಟ ನವರತ್ನದ ಮುಕುಟವು
ದುಷ್ಟಮರ್ದನವೆಂಬ ಕಡೆಯ ಪೆಂಡೆಗಳ
ವಟ್ಟಿದ್ದ ಹರಿಗೆ ವಧುವಾದಳು ||

ಕೊಂಬು ಚೊಂಬು ಕಹಳೆಗಳು ತಾಳಮದ್ದಳೆಗಳು
ತಂಬಟೆ ಭೇರಿ ಪಟಹಗಳು
ಭೋಂ ಭೋಂ ಎಂಬ ಶಂಖ ಡೊಳ್ಳು ಮೌರಿಗಳು
ಅಂಬುಧಿಯ ಮನೆಯಲ್ಲೆಸೆದುವು ||

ಅರ್ಘ್ಯಪಾದ್ಯಾಚಮನ ಮೊದಲಾದ ಷೋಡಶಾ
ನರ್ಘ್ಯ ಪೂಜೆಯಿತ್ತನಳಿಯಂಗೆ
ಒಗ್ಗಿದ ಮನದಿಂದ ಧಾರೆಯೆರೆದನೆ ಸಿಂಧು
ಸದ್ಗತಿಯಿತ್ತು ಸಲಹೆಂದ ||

ವೇದೋಕ್ತ ಮಂತ್ರ ಪೇಳಿ ವಸಿಷ್ಠ ನಾರದ ಮೊದ
ಲಾದ ಮುನೀಂದ್ರರು ಮುದದಿಂದ
ವಧೂವರರ ಮೇಲೆ ಶೋಭನದಕ್ಷತೆಯನು
ಮೋದವೀವುತ್ತ ತಳಿದರು ||

ಸಂಭ್ರಮದಿಂದಂಬರದಿ ದುಂದುಭಿ ಮೊಳಗಲು
ತುಂಬುರು ನಾರದರು ಸ್ತುತಿಸುತ್ತ
ತುಂಬುರು ನಾರದರು ಸ್ತುತಿಸುತ್ತ ಪಾಡಿದರು ಪೀ
ತಾಂಬರಧರನ ಮಹಿಮೆಯ ||

ದೇವನಾರಿಯರೆಲ್ಲ ಬಂದೊದಗಿ ಪಾಠಕರು
ಓವಿ ಪಾಡುತ್ತ ಕುಣಿದರು
ದೇವತರುವಿನ ಹೂವಿನ ಮಳೆಗಳ
ಶ್ರೀವರನ ಮೇಲೆ ಕರೆದರು ||                                  ||೭೫||

ಮುತ್ತುರತ್ನಗಳಿಂದ ಕೆತ್ತಿಸಿದ ಹಸೆಯ ನವ
ರತ್ನಮಂಟಪದಿ ಪಸರಿಸಿ
ರತ್ನಮಂಟಪದಿ ಪಸರಿಸಿ ಕೃಷ್ಣನ
ಮುತ್ತೈದೆಯರೆಲ್ಲ ಕರೆದರು ||

ಶೇಷಶಯನನೇ ಬಾ ದೋಷದೂರನೆ ಬಾ
ಭಾಸುರಕಾಯ ಹರಿಯೆ ಬಾ
ಭಾಸುರಕಾಯ ಹರಿಯೆ ಬಾ ಶ್ರೀಕೃಷ್ಣ ವಿ
ಲಾಸದಿಂದೆಮ್ಮ ಹಸೆಗೆ ಬಾ ||

ಕಂಜಲೋಚನನೆ ಬಾ ಮಂಜುಳಮೂರ್ತಿಯೆ ಬಾ
ಕುಂಜರವರದಾಯಕನೆ ಬಾ
ಕುಂಜರವರದಾಯಕನೆ ಬಾ ಶ್ರೀಕೃಷ್ಣ ನಿ
ರಂಜನ ನಮ್ಮ ಹಸೆಗೆ ಬಾ ||

ಆದಿಕಾಲದಲ್ಲಿ ಆಲದೆಲೆಯ ಮೇಲೆ
ಶ್ರೀದೇವಿಯರೊಡನೆ ಪವಡಿಸಿದ
ಶ್ರೀದೇವಿಯರೊಡನೆ ಪವಡಿಸಿದ ಶ್ರೀಕೃಷ್ಣ
ಮೋದದಿಂದೆಮ್ಮ ಹಸೆಗೆ ಬಾ ||

ಆದಿಕಾರಣನಾಗಿ ಆಗ ಮಲಗಿದ್ದು
ಮೋದ ಜೀವರ ತನ್ನ ಉದರದಲಿ
ಮೋದ ಜೀವರ ತನ್ನುದರದಲಿ ಇಂಬಿಟ್ಟ ಅ
ನಾದಿ ಮೂರುತಿಯೇ ಹಸೆಗೆ ಬಾ ||

ಚಿನ್ಮಯನೆನಿಪ ನಿಮ್ಮ ಮನೆಗಳಲ್ಲಿ ಜ್ಯೋ
ತಿರ್ಮಯವಾದ ಪದ್ಮದಲಿ
ರಮ್ಮೆಯರೊಡಗೂಡಿ ರಮಿಸುವ ಶ್ರೀಕೃಷ್ಣ
ನಮ್ಮ ಮನೆಯ ಹಸೆಗೆ ಬಾ ||

ನಾನಾವತಾರದಲಿ ನಂಬಿದ ಸುರರಿಗೆ
ಆನಂದವೀವ ಕರುಣಿ ಬಾ
ಆನಂದವೀವ ಕರುಣಿ ಬಾ ಶ್ರೀಕೃಷ್ಣ
ಶ್ರೀನಾರಿಯರೊಡನೆ ಹಸೆಗೆ ಬಾ ||

ಬೊಮ್ಮನ ಮನೆಯಲ್ಲಿ ರನ್ನಪೀಠದಿ ಕುಳಿತು
ಒಮ್ಮನದಿ ನೇಹವ ಮಾಡುವ
ನಿರ್ಮಲ ಪೂಜೆಯ ಕೈಗೊಂಬ ಶ್ರೀಕೃಷ್ಣ ಪ
ರಮ್ಮ ಮೂರುತಿಯೆ ಹಸೆಗೆ ಬಾ ||

ಮುಖ್ಯಪ್ರಾಣನ ಮನೆಯಲ್ಲಿ ಭಾರತಿದೇವಿಯಾಗ
ಲಿಕ್ಕಿ ಬಡಿಸಿದ ರಸಾಯನವ
ಸಕ್ಕರೆಗೂಡಿದ ಪಾಯಸ ಸವಿಯುವ
ರಕ್ಕಸವೈರಿಯೆ ಹಸೆಗೆ ಬಾ ||

ರುದ್ರನ ಮನೆಯಲ್ಲಿ ರುದ್ರಾಣಿದೇವಿಯರು
ಭದ್ರಮಂಟಪದಿ ಕುಳ್ಳಿರಿಸಿ
ಸ್ವಾದ್ವನ್ನಂಗಳ ಬಡಿಸಲು ಕೈಗೊಂಡ
ಮುದ್ದು ನರಸಿಂಹ ಹಸೆಗೆ ಬಾ ||

ಗರುಡನ ಮೇಲೇರಿ ಗಗನಮಾರ್ಗದಲ್ಲಿ
ತರತರದಿ ಸ್ತುತಿಪ ಸುರಸ್ತ್ರೀಯರ
ಮೆರೆವ ಗಂಧರ್ವರ ಗಾನವ ಸವಿಯುವ
ನರಹರಿ ನಮ್ಮ ಹಸೆಗೆ ಬಾ ||

ನಿಮ್ಮಣ್ಣನ ಮನೆಯ ಸುಧರ್ಮ ಸಭೆಯಲ್ಲಿ
ಉಮ್ಮೆಯರಸ ನಮಿಸಿದ
ಧರ್ಮರಕ್ಷಕನೆನಿಪ ಕೃಷ್ಣ ಕೃಪೆಯಿಂದ ಪ
ರಮ್ಮ ಮೂರುತಿಯೆ ಹಸೆಗೆ ಬಾ ||

ಇಂದ್ರನ ಮನೆಗ್ಹೋಗಿ ಅದಿತಿಗೆ ಕುಂಡಲವಿತ್ತು
ಅಂದದ ಪೂಜೆಯ ಕೈಗೊಂಡು
ಅಂದದ ಪೂಜೆಯ ಕೈಗೊಂಡು ಸುರತರುವ
ಇಂದಿರೆಗಿತ್ತ ಹರಿಯೆ ಬಾ ||

ನಿಮ್ಮ ನೆನೆವ ಮುನಿಹೃದಯದಲಿ ನೆಲೆಸಿದ
ಧರ್ಮರಕ್ಷಕನೆನಿಸುವ
ಸಮ್ಮತವಾಗಿದ್ದ ಪೂಜೆಯ ಕೈಗೊಂಡ ನಿ
ಸ್ಸೀಮ ಮಹಿಮ ಹಸೆಗೆ ಬಾ ||

ಮುತ್ತಿನ ಸತ್ತಿಗೆ ನವರತ್ನದ ಚಾಮರ
ಸುತ್ತ ನಲಿವ ಸುರಸ್ತ್ರೀಯರ
ನೃತ್ಯವ ನೋಡುತ ಚಿತ್ರವಾದ್ಯಂಗಳ ಸಂ
ಪತ್ತಿನ ಹರಿಯೆ ಹಸೆಗೆ ಬಾ ||

ಎನಲು ನಗುತ ಬಂದು ಹಸೆಯ ಮೇಲೆ
ವನಿತೆ ಲಕ್ಷುಮಿಯೊಡಗೂಡಿ
ಅನಂತವೈಭವದಿ ಕುಳಿತ ಕೃಷ್ಣಗೆ ನಾಲ್ಕು
ದಿನದುತ್ಸವವ ನಡೆಸಿದರು ||

ಅತ್ತೇರೆನಿಪ ಗಂಗೆ ಯಮುನೆ ಸರಸ್ವತಿ ಭಾ
ರತಿ ಮೊದಲಾದ ಸುರಸ್ತ್ರೀಯರು
ಮುತ್ತಿನಕ್ಷತೆಯನು ಶೋಭಾನವೆನುತಲಿ ತಮ್ಮ
ಅರ್ತಿಯಳಿಯಗೆ ತಳಿದರು ||

ರತ್ನದಾರತಿಗೆ ಸುತ್ತಮುತ್ತನೆ ತುಂಬಿ
ಮುತ್ತೈದೆಯರೆಲ್ಲ ಧವಳದ
ಮುತ್ತೈದೆಯರೆಲ್ಲ ಧವಳದ ಪದನ ಪಾ
ಡುತ್ತಲೆತ್ತಿದರೆ ಸಿರಿವರಗೆ ||

ಬೊಮ್ಮ ತನ್ನರಸಿ ಕೂಡೆ ಬಂದೆರಗಿದ
ಉಮ್ಮೆಯರಸ ನಮಿಸಿದ
ಅಮ್ಮರರೆಲ್ಲರು ಬಗೆಬಗೆ ಉಡುಗೊರೆಗಳ
ರಮ್ಮೆಯರಸಗೆ ಸಲಿಸಿದರು ||

ಸತ್ಯಲೋಕದ ಬೊಮ್ಮ ಕೌಸ್ತುಭರತ್ನವನಿತ್ತ
ಮುಕ್ತಸುರರು ಮುದದಿಂದ
ಮುತ್ತಿನ ಕಂಠೀಸರವ ಮುಖ್ಯಪ್ರಾಣನಿತ್ತ
ಮಸ್ತಕದ ಮಣಿಯ ಶಿವನಿತ್ತ ||

ತನ್ನರಸಿ ಕೂಡೆ ಸವಿನುಡಿ ನುಡಿವಾಗ ವ
ದನ್ನದಲ್ಲಿದ್ದಗ್ನಿ ಕೆಡದಂತೆ
ವಹ್ನಿ ಪ್ರತಿಷ್ಠೆಯ ಮಾಡಿ ಅವನೊಳಗಿದ್ದ
ತನ್ನಾಹುತಿಯಿತ್ತ ಸುರರಿಗೆ ||

ಕೊಬ್ಬಿದ ಖಳರೋಡಿಸಿ ಅಮೃತಾನ್ನ ಊಟಕ್ಕೆ
ಉಬ್ಬಿದ ಹರುಷದಿ ಉಣಿಸಲು
ಉಬ್ಬಿದ ಹರುಷದಿ ಉಣಿಸಬೇಕೆಂದು ಸಿಂಧು
ಸರ್ಬರಿಗೆಡೆಯ ಮಾಡಿಸಿದ ||

ಮಾವನ ಮನೆಯಲ್ಲಿ ದೇವರಿಗೌತಣವ
ದಾನವರು ಕೆಡಿಸದೆ ಬಿಡರೆಂದು
ದಾನವರು ಕೆಡಿಸದೆ ಬಿಡರೆಂದು ಶ್ರೀಕೃಷ್ಣ
ದೇವ ಸ್ತ್ರೀವೇಷವ ಧರಿಸಿದ ||

ತನ್ನ ಸೌಂದರ್ಯದಿಂದುನ್ನತಮಯವಾದ ಲಾ
ವಣ್ಯದಿಂ ಮೆರೆವ ನಿಜ ಪತಿಯ
ಹೆಣ್ಣು ರೂಪವ ಕಂಡು ಕನ್ಯೆ ಮಹಲಕ್ಷುಮಿ ಇವ
ಗನ್ಯರೇಕೆಂದು ಬೆರಗಾದಳು ||

ಲಾವಣ್ಯಮಯವಾದ ಹರಿಯ ಸ್ತ್ರೀವೇಷಕ್ಕೆ
ಭಾವಕಿಯರೆಲ್ಲ ಮರುಳಾಗೆ
ಮಾವರ ಸುಧೆಯ ಕ್ರಮದಿಂದ ಬಡಿಸಿ ತನ್ನ
ಸೇವಕ ಸುರರಿಗುಣಿಸಿದ ||

ನಾಗನ ಮೇಲೆ ತಾ ಮಲಗಿದ್ದಾಗ
ಆಗಲೆ ಜಗವ ಜತನದಿ
ಆಗಲೆ ಜಗವ ಜತನದಿ ಧರಿಸೆಂದು
ನಾಗಬಲಿಯ ನಡೆಸಿದರು ||

ಕ್ಷುಧೆಯ ಕಳೆವ ನವರತ್ನದ ಮಾಲೆಯ
ಮುದದಿಂದ ವಾರಿಧಿ ವಿಧಿಗಿತ್ತ
ಚದುರ ಹಾರವ ವಾಯುದೇವರಿಗಿತ್ತ
ವಿಧುವಿನ ಕಲೆಯ ಶಿವಗಿತ್ತ ||

ಶಕ್ರ ಮೊದಲಾದ ದಿಕ್ಪಾಲಕರಿಗೆ
ಸೊಕ್ಕಿದ ಚೌದಂತ ಗಜಂಗಳ
ಉಕ್ಕಿದ ಮನದಿಂದ ಕೊಟ್ಟ ವರುಣದೇವ ಮದು
ಮಕ್ಕಳಾಯುಷ್ಯವ ಬೆಳೆಸೆಂದ ||

ಮತ್ತೆ ದೇವೇಂದ್ರಗೆ ಪಾರಿಜಾತವನಿತ್ತ
ಚಿತ್ತವ ಸೆಳೆವಪ್ಸರಸ್ತ್ರೀಯರ
ಹತ್ತುಸಾವಿರ ಕೊಟ್ಟ ವರುಣದೇವ ಹರಿ
ಭಕ್ತಿಯ ಮನದಲ್ಲಿ ಬೆಳೆಸೆಂದ ||

ಪೊಳೆವ ನವರತ್ನದ ರಾಶಿಯ ತೆಗೆತೆಗೆದು
ಉಳಿದಮರರಿಗೆ ಸಲ್ಲಿಸಿದ
ಉಳಿದ ಅಮರರಿಗೆ ಸಲ್ಲಿಸಿದ ಸಮುದ್ರ
ಕಳುಹಿದನವರ ಮನೆಗಳಿಗೆ ||

ಉನ್ನತ ನವರತ್ನಮಯವಾದ ಅರಮನೆಯ
ಚೆನ್ನೇಮಗಳಿಂದ ವಿರಚಿಸಿ
ತನ್ನ ಅಳಿಯನಿಗೆ ಸ್ಥಿರವಾಗಿ ಮಾಡಿಕೊಟ್ಟ
ಇನ್ನೊಂದು ಕಡೆಯಡಿ ಇಡದಂತೆ ||

ಹಯವದನ ತನ್ನ ಪ್ರಿಯಳಾದ ಲಕ್ಷುಮಿಗೆ
ಜಯವಿತ್ತ ಕ್ಷೀರಾಂಬುಧಿಯಲ್ಲಿ
ಜಯವಿತ್ತ ಕ್ಷೀರಾಂಬುಧಿಯಲ್ಲಿ ಶ್ರೀಕೃಷ್ಣ
ದಯದಿ ನಮ್ಮೆಲ್ಲರ ಸಲಹಲಿ ||

ಈ ಪದನ ಮಾಡಿದ ವಾದಿರಾಜಮುನಿಗೆ
ಶ್ರೀಪತಿಯಾದ ಹಯವದನ
ತಾಪವ ಕಳೆದು ತನ್ನ ಶ್ರೀಚರಣದ ಸ
ಮೀಪದಲ್ಲಿಟ್ಟು ಸಲಹಲಿ ||

ಇಂತು ಸ್ವಪ್ನದಲಿ ಕೊಂಡಾಡಿಸಿಕೊಂಡ ಲಕ್ಷ್ಮೀ
ಕಾಂತನ ಕಂದನೆನಿಸುವ
ಕಾಂತನ ಮೆಚ್ಚಿನ ವಾದಿರಾಜೇಂದ್ರಮುನಿ
ಪಂಥದಿ ಪೇಳಿದ ಪದವಿದು ||

ಶ್ರೀಯರಸ ಹಯವದನಪ್ರಿಯ ವಾದಿರಾಜ
ರಾಯ ರಚಿಸಿದ ಪದವಿದು
ಆಯುಷ್ಯ ಭವಿಷ್ಯ ದಿನದಿನಕೆ ಹೆಚ್ಚುವುದು ನಿಅ
ರಾಯಾಸದಿಂದ ಸುಖಿಪರು ||

ಬೊಮ್ಮನ ದಿನದಲ್ಲಿ ಒಮ್ಮೊಮ್ಮೆ ಈ ಮದುವೆ
ಕ್ರಮ್ಮದಿ ಮಾಡಿ ವಿನೋದಿಸುವ
ನಮ್ಮ ನಾರಾಯಣಗು ಈ ರಮ್ಮೆಗಡಿಗಡಿಗೂ ಅಸು
ರಮ್ಮೋಹನವೇ ನರನಟನೆ ||

ಮದುವೆಯ ಮನೆಯಲ್ಲಿ ಈ ಪದನ ಪಾಡಿದರೆ
ಮದುಮಕ್ಕಳಿಗೆ ಮುದವಹುದು
ವಧುಗಳಿಗೆ ಓಲೆಭಾಗ್ಯ ದಿನದಿನಕೆ ಹೆಚ್ಚುವುದು
ಮದನನಯ್ಯನ ಕೃಪೆಯಿಂದ ||

ಶೋಭಾನವೆನ್ನೀರೆ ಸುರರೊಳು ಸುಭಗನಿಗೆ
ಶೋಭಾನವೆನ್ನೀ ಸುಗುಣನಿಗೆ
ಶೋಭಾನವೆನ್ನೀರೆ ತ್ರಿವಿಕ್ರಮರಾಯಗೆ
ಶೋಭಾನವೆನ್ನೀ ಸುರಪ್ರಿಯಗೆ || ಶೋಭಾನೆ ||

(ಬಹುಶಃ ಒಂದು ವರ್ಷದ ಕೆಳಗಿರಬೇಕು, ವಾದಿರಾಜರು ರಚಿಸಿದ ಲಕ್ಷ್ಮೀಶೋಭಾನ ಪದವನ್ನು ಪದೇ ಪದೇ ಕೇಳುವ ಗುಂಗು ಹಿಡಿದಿತ್ತು. ಆ ದಿನಗಳಲ್ಲೇ ಒಮ್ಮೆ ಅದನ್ನು ಟೈಪಿಸಿ ಸಂಪದದ ಹರಿದಾಸ ಸಂಪದ ಸಂಚಯಕ್ಕೆ ಹಾಕಿದ್ದೆ. ಅದನ್ನೇ ಈಗ ಇಲ್ಲೂ ಹಾಕುತ್ತಿರುವೆ.)

ಶ್ರೀ ದುರ್ಗಾ ಸುಳಾದಿ

ರಾಗ ಭೈರವಿ – ಧ್ರುವತಾಳ

ದುರ್ಗಾ ದುರ್ಗೆಯೆ ಮಹಾ ದುಷ್ಟ ಜನ ಸಂಹಾರೆ
ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ
ದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮ
ಭರ್ಗಾದಿಗಳಿಗೆಲ್ಲ ಗುಣಿಸಿದರೂ
ಸ್ವರ್ಗ ಭೂಮಿ ಪಾತಾಳ ಸಮಸ್ತ ವ್ಯಾಪುತ ದೇವಿ
ವರ್ಗಕ್ಕೆ ಮೀರಿದ ಬಲು ಸುಂದರಿ
ದುರ್ಗಣದವರ ಬಾಧೆ ಬಹಳವಾಗಿದೆ ತಾಯಿ
ದುರ್ಗತಿಹಾರೆ ನಾನು ಪೇಳುವದೇನು
ದುರ್ಗಂಧವಾಗಿದೆ ಸಂಸೃತಿ ನೋಡಿದರೆ
ನಿರ್ಗಮ ನಾ ಕಾಣೆನಮ್ಮ ಮಂಗಳಾಂಗೆ
ದುರ್ಗೆ ಹೇ ದುರ್ಗೆ ಮಹಾ ದುರ್ಗೆ ಭೂ ದುರ್ಗೆ ವಿಷ್ಣು-
ದುರ್ಗೆ ದುರ್ಜಯೆ ದುರ್ಧಷೆ ಶಕ್ತಿ
ದುರ್ಗ ಕಾನನ ಗಹನ ಪರ್ವತ ಘೋರ ಸರ್ಪ
ಗರ್ಗರ ಶಬ್ದ ವ್ಯಾಘ್ರ ಕರಡಿ ಮೃತ್ಯು
ವರ್ಗ ಭೂತ ಪ್ರೇತ ಪೈಶಾಚಿ ಮೊದಲಾದ
ದುರ್ಗಣ ಸಂಕಟ ಪ್ರಾಪ್ತವಾಗೆ
ದುರ್ಗಾ ದುರ್ಗೆ ಎಂದು ಉಚ್ಚಸ್ವರದಿಂದ
ನಿರ್ಗಳಿತನಾಗಿ ಒಮ್ಮೆ ಕೂಗಿದರೂ
ಸ್ವರ್ಗಾಪವರ್ಗದಲ್ಲಿ ಹರಿಯೊಡನೆ ಇದ್ದರೂ
ಸುರ್ಗಣ ಜಯ ಜಯವೆಂದು ಪೊಗಳುತಿರೆ
ಕರ್ಗಂಳಿಂದಲಿ ಎತ್ತಿ ಸಾಕುವ ಸಾಕ್ಷಿ ಭೂತೆ
ನೀರ್ಗುಡಿದಂತೆ ಲೋಕಲೀಲೆ ನಿನಗೆ
ಸ್ವರ್ಗಂಗಾಜನಕ ನಮ್ಮ ವಿಜಯವಿಠ್ಠಲನಂಘ್ರಿ
ದುರ್ಗಾಶ್ರಯ ಮಾಡಿ ಬದುಕುವಂತೆ ಮಾಡು

ಮಟ್ಟ ತಾಳ

ಅರಿದರಾಂಕುಶ ಶಕ್ತಿ ಪರಶು ನೇಗಿಲು ಖಡ್ಗ
ಸರಸಿಜ ಗದೆ ಮುದ್ಗರ ಚಾಪ ಮಾರ್ಗಣ
ವರ ಅಭಯ ಮುಸಲ ಪರಿ ಪರಿ ಆಯುಧವ
ಧರಿಸಿ ಮೆರೆವ ಲಕುಮಿ ಸರಸಿಜ ಭವ ರುದ್ರ
ಸರುವ ದೇವತೆಗಳ ಕರುಣಾಪಾಂಗದಲ್ಲಿ
ನಿರೀಕ್ಷಿಸಿ ಅವರವರ ಸ್ವರೂಪ ಸುಖ ಕೊಡುವ
ಸಿರಿಭೂಮಿದುರ್ಗಾ ಸರ್ವೋತ್ತಮ ನಮ್ಮ ವಿಜಯವಿಠ್ಠಲನಂಘ್ರಿ
ಪರಮ ಭಕುತಿಯಿಂದ ಸ್ಮರಿಸುವ ಜಗಜ್ಜನನಿ

ತ್ರಿವಿಡಿ ತಾಳ

ಸ್ತುತಿ ಮಾಡುವೆ ನಿನ್ನ ಕಾಳಿ ಮಹ ಕಾಳಿ ಉ-
ನ್ನತ ಬಾಹು ಕರಾಳವದನೆ ಚಂದಿರ ಮುಖೆ
ಧೃತಿ ಶಾಂತಿ ಬಹುರೂಪೆ ರಾತ್ರಿ ರಾತ್ರಿ ಚರಣೆ
ಸ್ಥಿತಿಯೆ ನಿದ್ರಾ ಭದ್ರೆ ಭಕ್ತವತ್ಸಲೆ ಭವ್ಯೆ
ಚತುರಷ್ಟ ದ್ವಿ ಹಸ್ತೆ ಹಸ್ತಿ ಹಸ್ತಿ ಗಮನೆ ಅ-
ದ್ಭುತ ಪ್ರಬಲೆ ಪ್ರವಾಸೆ ದುರ್ಗಾರಣ್ಯವಾಸೆ
ಕ್ಷಿತಿಭಾರಹರಣೆ ಕ್ಷೀರಾಬ್ಧಿತನಯೆ ಸ-
ದ್ಗತಿ ಪ್ರದಾತೆ ಮಾಯಾ ಶ್ರೀಯೆ ಇಂದಿರೆ ರಮೆ
ದಿತಿಜಾತ ನಿಗ್ರಹೆ ನಿರ್ಧೂತ ಕಲ್ಮಷೆ
ಪ್ರತಿಕೂಲಭೇದೆ ಪೂರ್ಣಬೋಧೆ ರೌದ್ರೆ
ಅತಿಶಯ ರಕ್ತ ಜಿಹ್ವಾಲೋಲೆ ಮಾಣಿಕ್ಯಮಾಲೆ
ಜಿತಕಾಮೆ ಜನನ ಮರಣ ರಹಿತೆ ಖ್ಯಾತೆ
ಘೃತಪಾತ್ರ ಪರಮಾನ್ನ ತಾಂಬೂಲ ಹಸ್ತೆ ಸು-
ವ್ರತೆ ಪತಿವ್ರತೆ ತ್ರಿನೇತ್ರೆ ರಕ್ತಾಂಬರೆ
ಶತಪತ್ರನಯನೆ ನಿರುತಕನ್ಯೆ ಉದಯಾರ್ಕ-
ಶತಕೋಟಿ ಸನ್ನಿಭೆ ಹರಿಯಾಂಕಸಂಸ್ಥೆ
ಶ್ರುತಿತತಿನುತೆ ಶುಕ್ಲ ಶೋಣಿತರಹಿತೆ ಅ-
ಪ್ರತಿಹತೆ ಸರ್ವದಾ ಸಂಚಾರಿಣಿ ಚತುರೆ
ಚತುರ ಕಪರ್ದಿಯೆ ಅಂಭ್ರಣಿ ಹ್ರೀ
ಉತ್ಪತ್ತಿ ಸ್ಥಿತಿ ಲಯಕರ್ತೆ ಶುಭ್ರಶೋಭನ ಮೂರ್ತೇ
ಪತಿತಪಾವನೆ ರನ್ನೆ ಸರ್ವೌಷಧಿಯಲ್ಲಿದ್ದು
ಹತ ಮಾಡು ಕಾಡುವ ರೂಗಂಗಳಿಂದ (ದು/ಗಳನು?*)
ಕ್ಷಿತಿಯೊಳು ಸುಖದಲ್ಲಿ ಬಾಳುವ ಮತಿ ಇತ್ತು
ಸತತ ಕಾಯಲಿ ಬೇಕು ದುರ್ಗೆ ದುರ್ಗೆ
ಚ್ಯುತದೂರ ವಿಜಯವಿಠ್ಠಲರೇಯನ ಪ್ರಿಯೆ
ಕೃತಾಂಜಲಿಯಿಂದಲಿ ತಲೆ ಬಾಗಿ ನಮಿಸುವೆ

ಅಟ್ಟತಾಳ

ಶ್ರೀಲಕ್ಷ್ಮಿ ಕಮಲಾ ಪದ್ಮಾ ಪದ್ಮಿನಿ ಕಮ-
ಲಾಲಯೆ ರಮಾ ವೃಷಾಕಪಿ ಧನ್ಯಾ ವೃದ್ಧಿ ವಿ-
ಶಾಲಾ ಯಜ್ಞಾ ಇಂದಿರೆ ಹಿರಣ್ಯ ಹರಿಣಿ
ವಾಲಯ ಸತ್ಯ ನಿತ್ಯಾನಂದ ತ್ರಯಿಸುಧಾ
ಶೀಲೆ ಸುಗಂಧಿ ಸುಂದರಿ ವಿದ್ಯಾ ಸುಶೀಲೆ
ಸುಲಕ್ಷಣದೇವಿ ನಾನಾ ರೂಪಗಳಿಂದ ಮೆರೆವ ಮೃತ್ಯುನಾಶೆ
ವಾಲಗ ಕೊಡು ಸಂತರ ಸನ್ನಿಧಿಯಲ್ಲಿ
ಕಾಲಕಾಲಕ್ಕೆ ಎನ್ನ ಭಾರವಹಿಸುವ ತಾಯಿ
ಮೇಲು ಮೇಲು ನಿನ್ನ ಶಕ್ತಿ ಕೀರ್ತಿ ಬಲು
ಕೇಳಿ ಕೇಳೀ ಬಂದೆ ಕೇವಲ ಈ ಮನ
ಘಾಳಿಯಂತೆ ಪರದ್ರವ್ಯಕ್ಕೆ ಪೋಪುದು
ಏಳಲ ಮಾಡದೆ ಉದ್ಧಾರವ ಮಾಡುವ
ಕೈಲಾಸಪುರದಲ್ಲಿ ಪೂಜೆಗೊಂಬ ದೇವಿ
ಮೂಲಪ್ರಕೃತಿ ಸರ್ವ ವರ್ಣಾಭಿಮಾನಿನಿ
ಪಾಲಸಾಗರಶಾಯಿ ವಿಜಯವಿಠ್ಠಲನೊಳು
ಲೀಲೆ ಮಾಡುವ ನಾನಾಭರಣೆ ಭೂಷಣೆ ಪೂರ್ಣೆ

ಆದಿತಾಳ
ಗೋಪಿನಂದನೆ ಮುಕ್ತೆ ದೈತ್ಯ ಸಂತತಿಗೆ ಸಂ-
ತಾಪವ ಕೊಡುತಿಪ್ಪ ಮಹಾ ಕಠೋರ ಉಗ್ರ-
ರೂಪ ವೈಲಕ್ಷಣೆ ಅಜ್ಞಾನಕ್ಕಭಿಮಾನಿನಿ
ತಾಪತ್ರಯವಿನಾಶೆ ಓಂಕಾರೆ ಹೂಂಕಾರೆ
ಪಾಪಿ ಕಂಸಗೆ ಭಯ ತೋರಿದೆ ಬಾಲ ಲೀಲೆ
ವ್ಯಾಪುತೆ ಧರ್ಮ ಮಾರ್ಗ ಪ್ರೇರಣೆ ಅಪ್ರಾಕೃತೆ
ಸ್ವಾಪದಲ್ಲಿ ನಿನ್ನ ನೆನೆಸಿದ ಶರಣನಿಗೆ
ಅಪಾರವಾಗಿದ್ದ ವಾರಿಧಿಯಂತೆ ಮಹಾ
ಆಪತ್ತು ಬಂದಿರಲು ಹಾರಿ ಪೋಗೋವು ಸಪ್ತ
ದ್ವೀಪನಾಯಿಕೆ ನರಕ ನಿರ್ಲೇಪೆ ತಮೋಗುಣದ
ವ್ಯಾಪಾರ ಮಾಡಿಸಿ ಭಕ್ತ ಜನಕೆ ಪುಣ್ಯ
ಸೋಪಾನ ಮಾಡಿ ಕೊಡುವ ಸೌಭಾಗ್ಯವಂತೆ ದುರ್ಗೆ
ಪ್ರಾಪುತವಾಗಿ ಎನ್ನ ಮನದಲಿ ನಿಂದು ದುಃಖ-
ಕೂಪದಿಂದಲಿ ಎತ್ತಿ ಕಡೆ ಮಾಡು ಜನ್ಮಂಗಳನು
ಸೌಪರ್ಣಿ ಮಿಗಿಲಾದ ಸತಿಯರು ನಿತ್ಯ ನಿನ್ನ
ಆಪಾದ ಮೌಳಿ ತನಕ ಭಜಿಸಿ ಭವ್ಯರಾದರು
ನಾ ಪೇಳುವದೇನು ಪಾಂಡವರ ಮನೋಭೀಷ್ಟೆ
ಈ ಪಂಚ ಭೌತಿಕದಲ್ಲಿ ಆವ ಸಾಧನ ಕಾಣೆ
ಶ್ರೀಪತಿನಾಮ ಒಂದೇ ಜಿಹ್ವಾಗ್ರದಲ್ಲಿ ನೆನೆವ
ಔಪಾಸನೆ ಕೊಡು ರುದ್ರಾದಿಗಳ ವರದೆ
ತಾಪಸ ಜನಪ್ರಿಯ ವಿಜಯವಿಠ್ಠಲ ಮೂರ್ತಿಯ
ಶ್ರೀಪಾದಾರ್ಚನೆ ಮಾಳ್ಪಾ ಶ್ರೀಭೂದುರ್ಗಾವರ್ಣಾಶ್ರಯೆ

ಜತೆ

ದುರ್ಗೆ ಹಾ ಹೇ ಹೋ ಹಾ ದುರ್ಗೆ ಮಂಗಳ ದುರ್ಗೆ
ದುರ್ಗತಿ ಕೊಡದಿರು ವಿಜಯವಿಠ್ಠಲನ ಪ್ರಿಯೆ

ವಿಜಯದಾಸರ ಈ ದುರ್ಗಾ ಸುಳಾದಿಯೇ ಇರಬೇಕು ನಾನು ಮೊದಲು ಕೇಳಿದ ಸುಳಾದಿ. ನಮ್ಮಮ್ಮ ಇದನ್ನ ಹೇಳುತ್ತಿದ್ದ ನೆನಪಿದೆ. ಆಗಿನ್ನೂ ಸುಳಾದಿ ಅಂದರೆ ಏನು ಅಂತ ಗೊತ್ತಿರಲಿಲ್ಲ. ನಮ್ಮಮ್ಮನೂ ಹೇಳ್ತಾ ಇದ್ದದ್ದು ಬಹುಶಃ ಈ ಸುಳಾದಿಯನ್ನ, ಜೊತೆಗೆ ಜಗನ್ನಾಥದಾಸರ ‘ದುರಿತವನ ಕುಠಾರ’ ಎಂದು ಶುರುವಾಗುವ ನರಸಿಂಹ ಸುಳಾದಿ ಮತ್ತು ವಿಜಯದಾಸರ ಧನ್ವಂತ್ರಿ ಸುಳಾದಿಗಳನ್ನ ಮಾತ್ರ, ಅಥವಾ ಅವಷ್ಟೆ ನನ್ನ ನೆನಪಿನಲ್ಲಿ ಉಳಿದಿರುವದೇನೊ.

ಮುಂದೆ ನಮ್ಮಮ್ಮ ಮತ್ತು ಅಪ್ಪ ಇಬ್ಬರಿಗೂ ಸುಳಾದಿಗಳಲ್ಲಿ ಆಸಕ್ತಿ ಹುಟ್ಟಿ, ಅವುಗಳನ್ನ ಹೇಳಿಕೊಳ್ಳಲು ಮತ್ತು ತಿಳಿಸಿಕೊಡಲು ಹಿರಿಯರಾದ ವೆಂಕಟರಾಯರು, ರಾಘಣ್ಣ ಅವರು, ಶ್ರೀನಿವಾಸರಾಯರು, ಜಯಪ್ಪ ಅವರು ಮತ್ತು ವೆಂಕಮ್ಮ ಮಾಮಿ ಅವರ ಸಂಪರ್ಕ ಬರುವಷ್ಟರಲ್ಲಿ ನಾನು ಮನೆಯಿಂದ ಹೊರಬಿದ್ದು ಇಂಜಿನಿಯರಿಂಗಿಗೆ ಅಂತ ಹಾಸ್ಟೆಲ್ ಸೇರಿದ್ದೆ, ಅದರ ನಂತರ ಕೆಲಸಕ್ಕೆ ಅಂತ ಬೆಂಗಳೂರು, ಸ್ಯಾನ್ ಹೋಸೆ ಸೇರಿದ್ದಾಯಿತು. ಅದೆಲ್ಲದರ ಮಧ್ಯದಲ್ಲಿ ಆಗಾಗ ಮನೆಗೆ ಹೋದಾಗ ದೊರಕಿದ ಸಂಪರ್ಕದಲ್ಲಿ ಆಗಾಗ ಸುಳಾದಿಗಳನ್ನ ಕೇಳುತ್ತಿದ್ದೆ. ಅಪ್ಪ ಅಮ್ಮರು ಹೇಳುವ ವಿಷಯಗಳಿಂದ ಅವುಗಳ ಬಗ್ಗೆ ಆಸಕ್ತಿ ಮೂಡುತ್ತಿತ್ತು. ಆದರೂ ಅವುಗಳನ್ನ ಹೇಳಿಕೊಳ್ಳಬೇಕು ಅಂತ ಅನ್ನಿಸಿರಲಿಲ್ಲ. ಸಾಕಷ್ಟು ಚರಣಗಳನ್ನುಳ್ಳ, ದೊಡ್ಡದಾಗಿ ಕಾಣುತ್ತಿದ್ದ ಸುಳಾದಿಗಳನ್ನ ಯಾರಾದರೂ ಹೇಳುತ್ತಿದ್ದರೆ ಕೇಳುತ್ತಿದ್ದೆ ಅಷ್ಟೆ. ಕೆಲವು ಸುಳಾದಿಗಳು ಸ್ವಲ್ಪ ಮಟ್ಟಿಗಾದರೂ ನೆನಪಿನಲ್ಲಿ ಉಳಿಯತೊಡಗಿದ್ದು ರಾಯಚೂರು ಶೇಷಗಿರಿದಾಸರು ಹಾಡಿದ ‘ಪಂಚರತ್ನ ಸುಳಾದಿ’ಗಳ ಕ್ಯಾಸೆಟ್ಟನ್ನು ಕೊಂಡು ತಂದದ್ದು ಮತ್ತು ಆ ಕ್ಯಾಸೆಟ್ಟನ್ನ ಕಾರಿನಲ್ಲಿ ಇಟ್ಟುಕೊಂಡು ಸಾಕಷ್ಟು ಸಾರಿ ಕೇಳಿದ ಮೇಲೆ. ಇಷ್ಟಾದರೂ ಸುಳಾದಿಗಳ ಪ್ರಪಂಚದ ಒಂದು ಇಣುಕು ನೋಟವನ್ನಷ್ಟೇ ಇಲ್ಲಿಯವರೆಗೆ ನೋಡಿದ್ದು. ಆದಷ್ಟು ಆದಾಗ ಓದುತ್ತ ಇರಬೇಕು.

ಅಮ್ಮನ ಬಾಯಿಯಲ್ಲಿ ದುರ್ಗಾ ಸುಳಾದಿಯನ್ನ ಕೇಳುತ್ತಿದ್ದಾಗ ಅದರ ಕೊನೆಗೆ ಜತೆಯಲ್ಲಿ ಬರುವ ದುರ್ಗೆ ಹಾ ಹೇ ಹೋ ಹಾ ಎನ್ನುವದನ್ನ ಕೇಳಿ ಮೊದಮೊದಲು ಆಶ್ಚರ್ಯವಾಗುತ್ತಿತ್ತು. ಈಗಿನ ಆಶ್ಚರ್ಯವೆಂದರೆ, ಇಷ್ಟು ವರ್ಷಗಳ ನಂತರವೂ ನನಗೆ ಅದರ ಅರ್ಥ ತಿಳಿದಿಲ್ಲ! ‘ಹಿ’ ಎನ್ನುವದು ಲಜ್ಜಾ ಬೀಜ ಅಥವಾ ಲಕ್ಷ್ಮೀಯನ್ನ ಧ್ಯಾನಿಸುವ ಅಕ್ಷರ ಎಂದು ಕೇಳಿರುವೆ. ರಾಯರ ಸ್ತೋತ್ರದ ಕೊನೆಯಲ್ಲಿ ಬರುವ ‘ಸಾಕ್ಷೀ ಹಯಾಸ್ಯೋsತ್ರ ಹೀ’ ಎಂಬ ರಾಘವೇಂದ್ರ ಸ್ವಾಮಿಗಳ ಆಶೀರ್ವಚನಕ್ಕೆ ‘ಲಕ್ಷ್ಮೀ ಹಯವದನರೇ ಸಾಕ್ಷಿ’ ಎಂದರ್ಥವಂತೆ. ಈ ಸುಳಾದಿಯಲ್ಲಿ ಬರುವ ‘ಹಾ ಹೇ ಹೋ ಹಾ’ ಎಂಬುವು ದುರ್ಗೆಯನ್ನ ಸೂಚಿಸುವಂತಹವೇ?

ಅದೊಂದೇ ಪ್ರಶ್ನೆಯಲ್ಲ, ಇನ್ನೂ ಹಲವು ಪ್ರಶ್ನೆಗಳಿವೆ,
೧. ಈ ಸುಳಾದಿಯ ಪ್ರತಿ ಚರಣಕ್ಕೆ ಬಳಸಿದ ತಾಳಕ್ಕೂ, ಆ ಚರಣದಲ್ಲಿ ವ್ಯಕ್ತಪಡಿಸಿದ ಭಾವಕ್ಕೂ ಇರುವ ಸಂಬಂಧವೇನು? ಮೊದಲ ಚರಣದಲ್ಲಿ ದುರ್ಗೆಯ ಮಹತ್ವದ ವಿಚಾರವಿದೆ, ಲೋಕಲೀಲೆಯೆಂಬುದು ಅವಳಿಗೆ ನೀರುಕುಡಿದಷ್ಟು ಸುಲಭ ಎನ್ನುತ್ತಾರೆ. ದುರ್ಗಂಧವಾದ ಸಂಸೃತಿ(ಹುಟ್ಟು ಸಾವಿನ ಸಂಸಾರ)ಯಿಂದ, ಬರುವ ಆಪತ್ತುಗಳಿಂದ ರಕ್ಷಿಸಿ ಸ್ವರ್ಗದ ಗಂಗೆಯ ತಂದೆಯಾದ ವಿಜಯವಿಠ್ಠಲನ ಆಶ್ರಯ ಮಾಡಿಕೊಂಡು ಬದುಕುವಂತೆ ಮಾಡು ಎಂದು ಪ್ರಾರ್ಥಿಸುತ್ತಾರೆ. ಈ ಚರಣಕ್ಕೆ ಬಳಸಿದ ಧ್ರುವ ತಾಳ ಇಲ್ಲಿನ ಭಾವವನ್ನ ಹೇಗೆ ಕಟ್ಟಿ ಕೊಡುತ್ತದೆ? ಅದೇ ರೀತಿ ಉಳಿದ ಚರಣಗಳಲ್ಲಿ ವ್ಯಕ್ತವಾಗುವ ಭಾವಗಳನ್ನ ಆಯಾ ಚರಣಗಳ ತಾಳಗಳು ಹೇಗೆ ಉದ್ದೀಪಿಸುತ್ತವೆ?

೨. ಮೊದಲ ಚರಣದ ಕೊನೆಯೆರಡು ಸಾಲುಗಳಲ್ಲಿ ಬರುವ ವಿಜಯವಿಠ್ಠಲನಂಘ್ರಿ ದುರ್ಗಾಶ್ರಯ ಮಾಡಿ ಬದುಕುವಂತೆ ಮಾಡು ಎನ್ನುವದನ್ನ, ವಿಜಯವಿಠ್ಠಲನ ಪಾದವನ್ನು ದುರ್ಗೆ ನಿನ್ನ ಮೂಲಕ ಆಶ್ರಯಿಸುವಂತೆ ಮಾಡಿ ಬದುಕಿಸು ಎಂದು ಅರ್ಥ ಮಾಡುವದೋ ಅಥವಾ ವಿಜಯವಿಠ್ಠಲನಂಘ್ರಿದುರ್ಗ (ಅಥವಾ ಅವನ ಪಾದಕಮಲದ ಊರು, ವೈಕುಂಠ) ಎಂಬ ಅರ್ಥ ಬರುವುದೋ? ಇಲ್ಲಾ ಎರಡೂ ತರಹ ಅರ್ಥೈಸಬಹುದೊ?

೩. ಎರಡನೇ ಚರಣದಲ್ಲಿ ಹೇಳಿರುವದು ಅಂಭೃಣೀಸೂಕ್ತದ ವಿಷಯವಿದ್ದಂತೆ ತೋರುತ್ತದೆ. ಅದರ ಜೊತೆಗೆ ಬರುವ ದೇವಿಯ ನಾನಾ ವಿಧದ ಆಯುಧಗಳ ಉಲ್ಲೇಖ ಬರೀ ದುರ್ಗಾ ರೂಪಕ್ಕೆ ಸಂಬಂಧಪಟ್ಟವೋ ಅಥವಾ ಶ್ರೀ, ಭೂ, ದುರ್ಗಾ ಎಂಬ ಮೂರು ರೂಪಗಳಿಗೂ ಸಂಬಂಧಪಟ್ಟವೋ?

೪. ಮೂರನೇ ಚರಣದಲ್ಲಿ, ಹೆಚ್ಚಿನ ಪುಸ್ತಕಗಳಲ್ಲಿ ನೋಡಿದಂತೆ ಮತ್ತು ನಾನು ಕೇಳಿದಂತೆ ಹೆಚ್ಚಿನ ಪಾರಾಯಣದಲ್ಲಿ, ‘ಸರ್ವೌಷಧಿಯಲಿದ್ದು ಹತ ಮಾಡು ಕಾಡುವ ರೋಗಂಗಳಿಂದ’ ಎನ್ನುವ ಸಾಲಿದೆ. ಇದು ಅರ್ಥ ಸರಿ ಹೋಗುವದಿಲ್ಲ ಅಲ್ಲವೆ? ಒಂದು ಪುಸ್ತಕದಲ್ಲಿ ‘ಸರ್ವೌಷಧಿಯಲಿದ್ದು ಹತ ಮಾಡು ಕಾಡುವ ರೋಗಂಗಳನು’ ಎಂದಿರುವದನ್ನ ನೋಡಿದ್ದೇನೆ. ಇತ್ತೀಚೆಗೆ ಅನಿಸುತ್ತಿರುವದು ಇದು ಬಹುಶಃ ‘ಸರ್ವೌಷಧಿಯಲಿದ್ದು ಹತ ಮಾಡು ಕಾಡುವ ರೋಗಂಗಳಿಂದು’ ಎಂದಿರಬಹುದೇ ಎಂದು.

೫. ಕೊನೆಯ ಚರಣದಲ್ಲಿ ಬರುವ ‘ನಾ ಪೇಳುವದೇನು ಪಾಂಡವರ ಮನೋಭೀಷ್ಟೆ’ ಎಂಬುದಕ್ಕೆ ಅರ್ಥವೇನು? ಕುರುಕ್ಷೇತ್ರ ಯುದ್ಧಕ್ಕೆ ಮೊದಲು ಅಕ್ಷೋಹಿಣಿ ಸೈನ್ಯ ಬೇಡ ‘ಕೃಷ್ಣನೇ ನಮ್ಮೆಡೆಗಿರಲಿ’ ಎಂದ ಅರ್ಜುನನ ಮಾತಿನ ಮೂಲಕ ವ್ಯಕ್ತವಾದ ಮನೋಭಿಷ್ಟೆಯೇ? ಅಥವಾ ಇನ್ನಾವುದಾದರೂ ಪ್ರಸಂಗವನ್ನ ಇಲ್ಲಿ ಸೂಚಿಸುತ್ತಿರುವರೋ?

೬. ‘ಈ ಪಂಚ ಭೌತಿಕದಲ್ಲಿ ಆವ ಸಾಧನ ಕಾಣೆ’ ಎಂದೇಕೆ ಹೇಳುತ್ತಿರುವರು? ‘ಮಾನವ ಜನ್ಮ ದೊಡ್ಡದು'(ಪುರಂದರದಾಸರು), ‘ಸಾಧನಕೆ ಬಗೆಗಾಣೆನೆನ್ನಬಹುದೆ'(ವಿಜಯದಾಸರು), ‘ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು'(ಜಗನ್ನಾಥದಾಸರು) ಮುಂತಾದ ಬೇರೆ ಬೇರೆ ಪದಗಳಲ್ಲಿ ವ್ಯಕ್ತವಾಗುವ ಭಾವಕ್ಕೂ ಇಲ್ಲಿ ವ್ಯಕ್ತವಾದ ಭಾವಕ್ಕೂ ವ್ಯಾತ್ಯಾಸವೆನಿಸುವದೆ? ನನಗೇ ತೋಚುವ ಸಮಾಧಾನವೆಂದರೆ ವ್ಯತ್ಯಾಸವಿಲ್ಲ, ಪಂಚಭೌತಿಕದ ಸಾಧನೆಯ ನಿರಾಕರಣ ಅದಕ್ಕಿಂತಲೂ ಉತ್ತಮವಾದ, ‘ಅಂತಕಾಲೇ ವಿಶೇಷತಃ’ ಎನ್ನುವ ಹರಿನಾಮ, ಶ್ರೀಪತಿಯ ನಾಮ ನಾಲಿಗೆಯ ಉಳಿಯುವಂತಹ ಸಾಧನೆಗೋಸ್ಕರ ಎನ್ನುವದು. ಈ ಸಾಲು ’ಪಾಂಡವರ ಮನೋಭೀಷ್ಟ’ವನ್ನ ಸೂಚಿಸುತ್ತಿದೆಯೆ?

ಇಷ್ಟೆಲ್ಲ ಪ್ರಶ್ನೆಗಳು ಪ್ರತಿ ಬಾರಿ ಓದುವಾಗಲೂ ಕಾಡುವದಿಲ್ಲ, ಬೇರೆ ಬೇರೆ ಸಂದರ್ಭಗಳಲ್ಲಿ ಅನಿಸಿದವುಗಳಿವು. ಒತ್ತಟ್ಟಿಗಿರಲಿ ಎಂದು ಇಲ್ಲಿ ಬರೆದಿರುವೆ.

ಶ್ರೀದುರ್ಗಾ ದೇವಿಯ ಈ ಸುಳಾದಿಯನ್ನ ಓದಿದಾಗ ಮನಸ್ಸು ಪ್ರಸನ್ನವಾಗುತ್ತದೆ. ನಾಲ್ಕನೇ ಚರಣದ ‘ಶ್ರೀ ಲಕ್ಷ್ಮೀ ..’ ಎಂದು ಶುರುವಾಗಿ ಹೇಳುವ ಲಕ್ಷ್ಮಿಯ ೨೪ ರೂಪಗಳನ್ನ ಹೇಳುವಾಗ ಇವು ೨೪ ತತ್ವಾಭಿಮಾನಿ ದೇವತೆಗಳಲ್ಲಿ ಅಡಕವಾದ ೨೪ ಲಕ್ಷ್ಮೀನಾರಾಯಣರ ರೂಪಗಳಲ್ಲಿನ ಲಕ್ಷ್ಮೀ ರೂಪಗಳಲ್ಲವೇ ಅಂತ ನೆನಪಾಗುತ್ತದೆ. ಅವುಗಳ ಜೊತೆಗಿನ ನಾರಾಯಣ ರೂಪ ಹಾಗೂ ಆಯಾ ರೂಪಗಳಿಂದ ಅನುಗ್ರಹಿತರಾಗುವ ತತ್ವಾಭಿಮಾನಿಗಳ ಸ್ಮರಣೆಯೂ ಆದರೆ ಎಷ್ಟು ಚನ್ನಾಗಿರುತ್ತದೆ ಅನಿಸುತ್ತದೆ.

ವಿಜಯದಶಮಿಯ ದಿವಸ ದುರ್ಗಾ ದೇವಿಯ, ಶ್ರೀ ಹರಿಯ ಪ್ರಾರ್ಥನೆ ವಿಜಯದಾಸರ ದುರ್ಗಾ ಸುಳಾದಿಯ ಮೂಲಕ. ದಾಸರಾಯರ, ಗುರುಗಳ,ಭಾರತಿವಾಯು ದೇವರ, ಲಕ್ಷ್ಮೀನಾರಾಯಣರ ಅನುಗ್ರಹ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುವೆ.

[ವಿಜಯದಶಮಿಗೆ ಬರೆದದ್ದು ಹಾಕಿರಲಿಲ್ಲ. ಇವತ್ತು ಹಾಕುತ್ತಿರುವೆ]

ಮಜ್ಜಿಗೆಯೊಳಗಿನ ಬೆಣ್ಣೆಯಂತೆ…

“ಮಜ್ಜಿಗಿ ಕಟದಾಗ ಬೆಣ್ಣಿ ಹೆಂಗ ಬರತದ ಗೊತ್ತದೇನು ನಿನಗ? ಕಟೆಯೋದನ್ನ ಒಂದು ಹಂತದಾಗ ನಿಲ್ಲಸಿ, ಹೀಂಗ ಮಜ್ಜಗಿ ಒಳಗ ಒಂದು ಚಮಚಾನೋ, ಸಣ್ಣ ಸೌಟೋ ತೊಗೊಂಡು ಕೈ ಆಡಿಸತಾ ಇದ್ದರ, ಒಂದು ಕ್ಷಣದಾಗ ತಟ್ಟನೆ ಬೆಣ್ಣಿ ತೇಲತದ.”

ನಮ್ಮಪ್ಪ ಈ ಮಾತನ್ನ ಆಗಾಗ ಹೇಳ್ತಿರ್ತಾರೆ. ಸಣ್ಣವನಿದ್ದಾಗ ಅಜ್ಜಿ, ಅಮ್ಮ ಕಡಗೋಲಿನಿಂದ ಕಟದು ಮಜ್ಜಿಗೆ ಮಾಡೋದನ್ನ, ಅದರಿಂದ ಬೆಣ್ಣೆ ತೆಗೆದು, ತುಪ್ಪ ಕಾಸೋದನ್ನ ನೋಡಿದ್ದೇನೆ. ದೊಡ್ಡವನಾಗ್ತ ಕಡಗೋಲಿನ ಬದಲಿಗೆ ಮಿಕ್ಸರಿನಲ್ಲಿ ಮಜ್ಜಿಗೆ ಕಟೆಯೋದನ್ನೂ ನೋಡಿದ್ದೇನೆ. ಕಟೆಯೋದನ್ನ ನಿಲ್ಲಿಸಿ ನಿಧಾನಕ್ಕೆ ಒಂದು ಚಮಚವನ್ನ ಅದರಲ್ಲಿ ಆಡಿಸುತ್ತಾ ಮಜ್ಜಿಗೆಯೊಳಗೆ ಬೆಣ್ಣೆ ತೇಲುವದನ್ನೆ ಅಮ್ಮ ಕಾಯುತ್ತಿದ್ದ ನೆನಪೂ ಇದೆ. ಆದರೆ ಸ್ವತಃ ಕೈಯಾಡಿಸಿ ಬೆಣ್ಣೆ ತೇಲುವ ಆ ಕ್ಷಣದ ಅನುಭವವನ್ನ ಯಾವತ್ತೂ ಪಡೆದುಕೊಂಡದ್ದಿಲ್ಲ. ಆ ಗಳಿಗೆಯಲ್ಲಿ ಯಾವ ತರಹದ ಅನುಭವ ತುಂಬಿರಬಹುದು ಎನ್ನುವ ಕುತೂಹಲವಿದೆ. ತಮಾಷೆಯೆಂದರೆ ಆ ಕ್ಷಣದ ಬಗ್ಗೆ ಯೋಚಿಸಿದಾಗ ನೆನಪಾಗುವದು ಸುರತ್ಕಲ್ಲಿನ ದಿನಗಳಲ್ಲಿ ಕಂಡ ಮಳೆ. ಮೋಡ ಕಟ್ಟಿದ ವಾತಾವರಣದಲ್ಲಿ ಮುಂದಿನ ಕ್ಷಣದಲ್ಲಿ ಮಳೆ ಬೀಳುವದು ಎನ್ನುವ ಅರಿವು ಉಂಟಾಗುವದು ಗೊತ್ತಾಗುತ್ತಿತ್ತು. ಆ ಅರಿವು ಕೆಲಸ ಮಾಡಿ ಕೊಡೆ ಬಿಡಿಸುವ ಮೊದಲೇ ಮಳೆ ಹನಿಗಳು ಮೈ ತೊಯ್ಸಿರುತ್ತಿದ್ದವು!

ಪುರಂದರ ದಾಸರ ಹಾಡು ಭಾಗ್ಯದ ಲಕ್ಷ್ಮಿ ಬಾರಮ್ಮ ಕೇಳುವಾಗಲೆಲ್ಲ ನನಗೆ ಅಪ್ಪನ “ಮಜ್ಜಿಗೆಯೊಳಗೆ ಬೆಣ್ಣೆ ತೇಲುವ” ಮಾತು ನೆನಪಾಗುತ್ತದೆ. ಸಜ್ಜನ, ಸಾಧು ಜನರ ಪೂಜೆಯ ವೇಳೆಗೆ ಮಜ್ಜಿಗೆಯೊಳಗಿನ ಬೆಣ್ಣೆಯಂತೆ ಬಾರಮ್ಮ ಎನ್ನುವ ಸರಳವಾದ ಸಾಲಿನಲ್ಲಿ ಎಷ್ಟೊಂದು ಅರ್ಥಪೂರ್ಣ ಮಾತನ್ನ ಹೇಳಿದ್ದಾರಲ್ಲ ದಾಸರು ಎನ್ನುವ ಬೆರಗು ಮೂಡುತ್ತದೆ. ಥಟ್ಟನೆ ಕಾಣುವ ಬೆಣ್ಣೆಯ ಹಿಂದೆ ಹಾಲು ಕಾಸಿ, ಹೆಪ್ಪು ಹಾಕಿ, ಕೆನೆ ತೆಗೆದು, ಮಜ್ಜಿಗೆ ಕಟೆದ ಪರಿಶ್ರಮವಿದೆ; ತೇಲುವ ಬೆಣ್ಣೆಗಾಗಿ ಕಾಯುವ ಕಾತುರವಿದೆ. ಆ ಬೆಣ್ಣೆಯಿಂದ ಮುಂದೆ ಪಡೆಯುವ ತುಪ್ಪದಂತೆ, ಲಕ್ಷ್ಮಿಯ ಅನುಗ್ರಹದ ಮುಖಾಂತರ, ಮುಂದಿನ ಹೆಜ್ಜೆಯಾಗಿ ನಾರಾಯಣನ ಅನುಗ್ರಹವನ್ನು ಪಡೆಯಬೇಕು ಎನ್ನುವ ಸೂಚನೆಯೂ ಇಲ್ಲಿದೆಯೆ?

ಭಾಗ್ಯದ ಲಕ್ಷ್ಮೀ ಬಾರಮ್ಮ।ನಮ್ಮಮ್ಮ ನೀ ಸೌಭಾಗ್ಯದ ಲಕ್ಷ್ಮೀ ಬಾರಮ್ಮ

ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ । ಗೆಜ್ಜೆ ಕಾಲ್ಗಳ ಧ್ವನಿಯ ತೋರುತ
ಸಜ್ಜನ ಸಾಧು ಪೂಜೆಯ ವೇಳೆಗೆ । ಮಜ್ಜಿಗೆಯೊಳಗಿನ ಬೆಣ್ಣೆಯಂತೆ

ಕನಕ ವೃಷ್ಟಿಯ ಕರೆಯುತ ಬಾರೆ । ಮನ ಕಾಮನೆಯ ಸಿದ್ಧಿಯ ತೋರೆ
ದಿನಕರ ಕೋಟಿ ತೇಜದಿ ಹೊಳೆಯುವ । ಜನಕರಾಯನ ಕುಮಾರಿ ಬೇಗ

ಅತ್ತಿತ್ತಗಲದೆ  ಭಕ್ತರ ಮನೆಯಲಿ । ನಿತ್ಯ ಮಹೋತ್ಸವ ನಿತ್ಯ ಸುಮಂಗಲ
ಸತ್ಯವ ತೋರುವ ಸಾಧು ಸಜ್ಜನರ । ಚಿತ್ತದಿ ಹೊಳೆಯುವ ಪುತ್ಥಳಿ ಬೊಂಬೆ

ಸಂಖ್ಯೆಯಿಲ್ಲದ ಭಾಗ್ಯವ ಕೊಟ್ಟು । ಕಂಕಣ ಕೈಯ ತಿರುವುತ ಬಾರೆ
ಕುಂಕುಮಾಂಕಿತೆ ಪಂಕಜ ಲೋಚನೆ । ವೇಂಕಟರಮಣನ ಬಿಂಕದ ರಾಣಿ

ಸಕ್ಕರೆ ತುಪ್ಪದ ಕಾಲುವೆ ಹರಿಸಿ । ಶುಕ್ರವಾರದ ಪೂಜೆಯ ವೇಳೆಗೆ
ಅಕ್ಕರೆಯುಳ್ಳ ಅಳಗಿರಿ ರಂಗನ । ಚೊಕ್ಕ ಪುರಂದರ ವಿಠಲನ ರಾಣಿ

ಇತ್ತೀಚೆಗೆ ನನ್ನ ಮಗನಿಗೆ ಈ ಭಾಗ್ಯದ ಲಕ್ಷ್ಮಿ ಪದವನ್ನ ಹಾಡುವ ಕುತೂಹಲ ಮೂಡಿದೆ. ನಾನು ಇಲ್ಲಿಯವರೆಗೆ ಬಹಳಷ್ಟು ಬಾರಿ ಈ ಪದವನ್ನ ಕೇಳಿದ್ದರೂ ಅದರ ನುಡಿಗಳನ್ನ ಅವು ಬರುವ ಕ್ರಮದಲ್ಲಿ ನೆನಪಿಟ್ಟುಕೊಳ್ಳಲು ಪ್ರಯತ್ನ ಪಟ್ಟಿರಲಿಲ್ಲ. ಈಗ ಮಗನ ದೆಸೆಯಿಂದ ನೆನಪಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದಾಗ, ಈ ಪದದಲ್ಲಿ ದಾಸರು ಶ್ರೀಸೂಕ್ತದ ತಿರುಳನ್ನ ಹಿಡಿದಿಟ್ಟಿದ್ದಾರೆಯೇ ನೋಡಬೇಕು ಅಂತ ಅನಿಸಿತು. ಅದೃಷ್ಟವಶಾತ್ ನನ್ನ ಬಳಿಯಲ್ಲಿ ಸಾ.ಕೃ.ರಾಮಚಂದ್ರರಾಯರು ಅರ್ಥ ಸಂಗ್ರಹಿಸಿದ ಶ್ರೀಸೂಕ್ತದ ಪುಸ್ತಕವೂ ಇದ್ದದ್ದರಿಂದ ಅದನ್ನೂ ಓದಿದೆ. ಓದಿಯಾದ ಮೇಲೆ ಶ್ರೀಸೂಕ್ತದ ಬಗ್ಗೆಯೇ ಕೆಲವೊಂದು ಪ್ರಶ್ನೆಗಳು ಹುಟ್ಟಿಕೊಂಡವು. ಸಂಪತ್ತಿಗೋಸ್ಕರ ಮಾತ್ರ ಮಾಡುವ ಯಜ್ಞದಲ್ಲಿ ಸಂಪತ್ತಿನ ಒಡತಿಯಾದ ಲಕ್ಷ್ಮಿಯನ್ನು ಸಂಪತ್ತನ್ನ ಕೊಡು ಎನ್ನುವ ಒಂದೇ ಉದ್ದೇಶದಿಂದಷ್ಟೇ ಅಲ್ಲಿ ಲಕ್ಷ್ಮಿಯ ಉಪಾಸನೆಯನ್ನ ಹೇಳುತ್ತಿದ್ದಾರಲ್ಲ ಅನಿಸಿತು. ಅದರ ಬೆನ್ನಿಗೇ ನೆನಪಾಗಿದ್ದು ಅಂಭೃಣೀ ಸೂಕ್ತ.

ದಾಸ ಸಾಹಿತ್ಯದಲ್ಲಿ ಕೆಲವು ಕಡೆ ಅಂಭೃಣೀ ಸೂಕ್ತದ ಉಲ್ಲೇಖವನ್ನು ಕೇಳಿರುವೆ, ಶ್ರೀಸೂಕ್ತದ ಉಲ್ಲೇಖ ಬಂದಿರಬಹುದಾದರೂ ನಾನು ಕೇಳಿದ ನೆನಪಿಲ್ಲ. ನಾನೇನೂ ಹೆಚ್ಚು ಓದಿಲ್ಲವಾದ್ದರಿಂದ ಶ್ರೀಸೂಕ್ತದ ಬಗ್ಗೆ ಉಂಟಾದ ಅನುಮಾನಗಳನ್ನ ಪರಿಹರಿಸಿಕೊಳ್ಳಬೇಕು ಅಂತ ಅನಿಸಿದಾಗ ಫೋನ್ ಮಾಡಿದ್ದು ವೈದ್ಯರಿಗೆ (ಜಿ. ಶ್ರೀನಿವಾಸ್ ಅವರಿಗೆ). ಅವರು ಮೊದಲಿಗೆ ಹೇಳಿದ್ದು, ಶ್ರೀಸೂಕ್ತ ಮತ್ತು ಪುರುಷಸೂಕ್ತ ಎನ್ನುವ ಪುಸ್ತಕವೊಂದನ್ನ ಬನ್ನಂಜೆ ಅವರು ಬರೆದಿದ್ದಾರೆ, ಅದನ್ನ ತರಿಸಿಕೊಂಡು ಓದು ಅಂತ. ಮುಂದೆ ಹೇಳಿದ್ದು, “ಅಂಭೃಣೀ ಸೂಕ್ತದಲ್ಲಿ ಬ್ರಹ್ಮ ರುದ್ರರನ್ನ ಅವರ ಪಟ್ಟಕ್ಕೇರಿಸುವವಳು ನಾನು, ಅಂತಹ ನನಗೆ ಸ್ವಾಮಿ ನಾರಾಯಣ ಎನ್ನುವದರ ಸ್ಪಷ್ಟ ಉಲ್ಲೇಖವಿದೆ. ಮಧ್ವಾಚಾರ್ಯರ ದ್ವಾದಶಸ್ತೋತ್ರದ ವಿಶ್ವಸ್ಥಿತಿಪ್ರಳಯ ಸರ್ಗಮಹಾವಿಭೂತಿ… ಎಂದು ಶುರುವಾಗುವ ಸ್ತೋತ್ರ, ಈ ಅಂಭೃಣೀ ಸೂಕ್ತದ ವಿಷಯವನ್ನೇ ಹೇಳುತ್ತದೆ. ಲಕ್ಷ್ಮಿಗೆ ಬಲವಿತ್ತ ಹರಿಯ ಕೃಪಾ ಕಟಾಕ್ಷಕ್ಕೆ ನಮಿಸುವೆ ಎನ್ನುತ್ತಾರೆ ಮಧ್ವಾಚಾರ್ಯರು ಅದರಲ್ಲಿ.  ಶ್ರೀಸೂಕ್ತದಲ್ಲಿ ವಿಷ್ಣುವಿನ ಪ್ರಿಯಳೆ ಎಂದೆಲ್ಲ ಲಕ್ಷ್ಮಿಯನ್ನ ಕರೆದು ಪ್ರಾರ್ಥಿಸಿದರೂ, ಅಂಭೃಣೀ ಸೂಕ್ತದಲ್ಲಿ ಬಂದಂತೆ ನಾರಯಣನ ಮಹತ್ವ ಸ್ಪಷ್ಟವಾಗಿ ಬಂದಿಲ್ಲ. ಹಾಗಂತ ಶ್ರೀಸೂಕ್ತ ಕಡಿಮಯಲ್ಲ. ಶ್ರೀಸೂಕ್ತವೂ ಪ್ರಮುಖವಾದದ್ದೇ ಮತ್ತು ಅದನ್ನ ದೇವರ ಪೂಜೆಯ ವೇಳೆಗೆ, ಶಂಖದ ಪೂಜೆ ಮಾಡುವಾಗ ಹೇಳುವ ಪರಿಪಾಠವಿದೆ. ನಿರ್ಮಾಲ್ಯ ವಿಸರ್ಜನೆಯ ವೇಳೆಗೆ ಅಂಭೃಣೀ ಸೂಕ್ತ, ಶಂಖದ ಪೂಜೆಯ ವೇಳೆಗೆ ಶ್ರೀಸೂಕ್ತ ಹೇಳಿ, ಮುಂದೆ ದೇವರ ಪೂಜೆ ಮಾಡುವಾಗ ಪುರುಷಸೂಕ್ತ ಹೇಳುವದು ಕ್ರಮ. ಶ್ರೀಭೂ ಸಮೇತ ನಾರಾಯಣನ ಪೂಜೆ ಎನ್ನುವ ಅರ್ಥದಲ್ಲಿ ಈ ಪೂಜೆಯ ಕ್ರಮವಿದೆ. ಇದು ಮಧ್ವಾಚಾರ್ಯರು ಕೃಷ್ಣಮಂತ್ರದಲ್ಲಿ ..ಸತ್ಯಾಸಮೇತಮಖಿಲಪ್ರದಮಿಂದಿರೇಶಮ್, ರುಕ್ಮಿಣೀ ಸತ್ಯಭಾಮಾ ಸಮೇತ ಕೃಷ್ಣನನ್ನು ಧ್ಯಾನಿಸಬೇಕು ಎಂದು ಹೇಳಿದಂತೆ” ಎಂದರು. ಆ  ಶ್ಲೋಕ ಸಂಕೀರ್ಣಗ್ರಂಥಗಳಲ್ಲಿ ಎಲ್ಲಿದೆ ಎನ್ನುವದನ್ನೂ ಹೇಳಿದರು. ಅದು, ಇಂತಿದೆ,

ಧ್ಯಾಯೇದ್ಧರಿನ್ಮಣಿನಿಭಂ ಜಗದೇಕವಂದ್ಯಂ
ಸೌಂದರ್ಯಸಾರಮರಿಶಂಖವರಾಭಯಾನಿ
ದೋರ್ಭಿ‌ರ್ದಧಾನಮಜಿತಂ ಸರಸಂ ಚ ಭೈಷ್ಮೀ-
ಸತ್ಯಾಸಮೇತಮಖಿಲಪ್ರದಮಿಂದಿರೇಶಮ್

(ಇಂದ್ರನೀಲಮಣಿಯಂತೆ ಶ್ಯಾಮಲ ವರ್ಣ, ಸಮಸ್ತ ಜನರಿಂದಲೂ ವಂದ್ಯ, ಸೌಂದರ್ಯದ ಗಣಿ, ನಾಲ್ಕು ಕೈಗಳಲ್ಲಿ ಚಕ್ರ, ಶಂಖ, ವರ, ಅಭಯಗಳನ್ನು ಧರಿಸಿದ್ದಾನೆ. ಪ್ರೀತಿಯಿಂದ ರುಕ್ಮಿಣೀ ಸತ್ಯಭಾಮೆಯರೊಡಗೂಡಿದ್ದಾನೆ. ಇಂತಹ ಅಜೇಯನಾದ, ಅಭೀಷ್ಟಗಳನ್ನೆಲ್ಲ ಕೈಗೂಡಿಸುವ ಶ್ರೀಕೃಷ್ಣನನ್ನು ಧ್ಯಾನಿಸಬೇಕು – ಅರ್ಥ, ಸಂಕೀರ್ಣ ಗ್ರಂಥಗಳು ಪುಸ್ತಕದಿಂದ)
(ಭೈಷ್ಮೀ ಎಂದರೆ ಭೀಷ್ಮಕನ ಮಗಳು ರುಕ್ಮಿಣಿ ಅಂತಿರಬೇಕು)

ಇದೇ ವಿಷಯವನ್ನು ಮುಂದುವರಿಸಿ ಇನ್ನೂ ಬಹಳಷ್ಟು ಮಾತುಕತೆಯಾಯಿತು. ನಾರಾಯಣನನ್ನ ತಿಳಿದವರು ಅವನನ್ನೇ ನೇರವಾಗಿ ಪ್ರಾರ್ಥಿಸಬಹುದು ಆದರೆ ಅವನ ಅರಿವು ಇನ್ನೂ ಜಿತವಾಗದವರು ನಾರಾಯಣನನ್ನು, ಅವನ ಪರಿವಾರ ಸಮೇತವಾಗಿ ಪ್ರಾರ್ಥಿಸುವದೇ ಸರಿಯಾದ ಕ್ರಮ ಎಂದು ಮಧ್ವಾಚಾರ್ಯರು ಎಷ್ಟು ಚನ್ನಾಗಿ ತಿಳಿಸಿದ್ದಾರೆ ಎನ್ನುವದನ್ನೂ ತಿಳಿಸಿದರು. ಅದೇ ವಿಷಯವಾಗಿ ಒಂದು ಸ್ವಾರಸ್ಯಕರವಾದ ಕತೆಯನ್ನೂ ಹೇಳಿದರು. ಮುಂದೆ ಇನ್ನೊಮ್ಮೆ ಅದರ ಬಗ್ಗೆ ಬರೆಯಬೇಕು. ಅಂತೂ ಇವತ್ತಿನ ಮಾತುಕತೆಯಲ್ಲಿ ಶ್ರೀಸೂಕ್ತದ ಬಗೆಗಿನ ಗೊಂದಲಗಳ ನಿವಾರಣೆಯಾಯಿತು. ಲಕ್ಷ್ಮೀ ನಾರಾಯಣರ ಸ್ಮರಣೆಯಾಯಿತು. ವೈದ್ಯರೇ ಹೇಳಿದಂತೆ ಎಷ್ಟು ಗುರುಹಿರಿಯರ ಕರುಣೆಯ, ಅನುಗ್ರಹದ ಪರಿಣಾಮವೋ ಇದು; ಹೀಗೆ ಅರಿವು ಹೆಚ್ಚಿಸಿಕೊಳ್ಳಲಿಕ್ಕೆ ಅನುಕೂಲವಾಗಿದ್ದು. ಅನಂತ ವಂದನೆಗಳು ಅವರೆಲ್ಲರಿಗೆ.

ಭಾವಾಷ್ಟ ಪುಷ್ಪಂಗಳ…

(ಮೊನ್ನೆ ಮಧ್ವ ನವಮಿ ನಿಮಿತ್ತ ನನ್ನಪ್ಪ ಸುಮಧ್ವ ವಿಜಯದ ಶ್ಲೋಕವನ್ನೂ, ಜೊತೆಗೆ ಗೋಪಾಲದಾಸರು ಅಷ್ಟ ಭಾವ ಪುಷ್ಪಗಳ ಬಗ್ಗೆ ರಚಿಸಿದ ಸುಳಾದಿಯನ್ನೂ ಟೈಪಿಸಿ ಕಳಿಸಿದ್ದರು. ಅವೆರಡನ್ನೂ ಓದಿ, ಅವುಗಳ ಸುತ್ತಲೇ ತಿರುಗಿದ ವಿಚಾರಗಳ ಕುರಿತು ಈ ಪೋಸ್ಟು)

ಮಧ್ವಾಚಾರ್ಯರ ಜೀವನ ಚರಿತ್ರೆಯನ್ನು ಕಟ್ಟಿ ಕೊಡುವ ಬಹು ಮುಖ್ಯ ಕೃತಿ, ಅವರ ನೇರ ಶಿಷ್ಯ  ತ್ರಿವಿಕ್ರಮ ಪಂಡಿತಾಚಾರ್ಯರ ಮಗ, ನಾರಾಯಣ ಪಂಡಿತಾಚಾರ್ಯರ ಸುಮಧ್ವ ವಿಜಯ. ಅದರ ಒಂದು ಸಂಧಿಯಲ್ಲಿ ಮಧ್ವಾಚಾರ್ಯರು ಪೂಜೆಯನ್ನು ಮಾಡುವ ಪರಿಯನ್ನು ಸುಂದರವಾಗಿ ಹಿಡಿದಿಟ್ಟಿದ್ದಾರೆ. ಬಗೆ ಬಗೆಯ ಹೂವುಗಳಿಂದ ದೇವರನ್ನು ಪೂಜಿಸುವುದನ್ನ ವಿವರಿಸುತ್ತಾರೆ. ಮುಂದುವರೆದು, ಆಚಾರ್ಯರು ಬರೀ ಬಾಹ್ಯದಲ್ಲಿ ಮಾತ್ರ ಹೀಗೆ ಹೂವುಗಳಿಂದ ಪೂಜಿಸುವದಲ್ಲದೇ ಅಂತರಂಗದಲ್ಲೂ ದೇವನನ್ನು ಅಷ್ಟ ಭಾವ ಪುಷ್ಪಗಳಿಂದ ಪೂಜಿಸುತ್ತಾರಲ್ಲವೇ ಎಂದು ಬೆರಗು ಮೂಡಿಸುತ್ತಾರೆ.

ತಮರುಣಿ-ಮಣಿ-ವರ್ಣಂ ದಿವ್ಯ-ದೇಹಾಖ್ಯ-ಗೇಹೇ
ಸ್ನಪಿತಮತಿ-ಪೃಥು-ಶ್ರದ್ಧಾ-ನದೀ=ಚಿತ್ತ-ವಾರ್ಭಿಹಿ|
ನನು ಸ ಯಜತಿ ನಿತ್ಯಂ ಹೃತ್-ಸರೋಜಾಸನ-ಸ್ಥಂ
ನ ತು ಸಕ್ರುದಿತಿ ಪುಶ್ಪೈರಷ್ಟಭಿರ್ಭಾವ-ಪುಷ್ಪೈಹಿ ||೩೭||
– ಶ್ರೀ ಮಧ್ವ ವಿಜಯ. ೧೪ ನೇ ಸರ್ಗ.

ಪದ್ಮರಾಗದ ನಸುಕೆಂಬಣ್ಣದ ಭಗವಂತನನ್ನು, ದಿವ್ಯದೇಹವೆಂಬ ಮನೆಯಲ್ಲಿ ಹೃದಯ ಕಮಲದ ಪೀಠದಲ್ಲಿ ನೆಲೆಸಿದವನನ್ನು ಮೀಯಿಸುತ್ತ, ವಿಶಾಲವಾಗಿ ಹರಿವ ನಂಬಿಕೆಯ ನದಿಯಲ್ಲಿ ತುಂಬಿದ ಚಿತ್ತವೆಂಬ ನೀರಿನಿಂದ ಪೂಜಿಸುತ್ತಾರಲ್ಲವೆ ಅವರು ನಿತ್ಯವೂ ಎಂಟು ಬಗೆಯ ಭಾವಪುಷ್ಪಗಳಿಂದ, ಬರಿದೆ ಒಮ್ಮೆ ಈ ಹೂವುಗಳಿಂದಷ್ಟೆ ಅಲ್ಲ.
                                    (ಈ ಶ್ಲೋಕದ ಅರ್ಥವನ್ನ ಬಹುಷಃ ಬನ್ನಂಜೆ ಗೋವಿಂದಾಚಾರ್ಯರ ಶ್ರೀ ಮಧ್ವ ವಿಜಯ ಸಂಗ್ರಹದಿಂದ ತೆಗೆದುಕೊಂಡದ್ದು ಅನಿಸುತ್ತದೆ)

ವ್ಯಾಸನಕೆರೆ ಪ್ರಭಂಜನಾಚಾರ್ಯರ ಅರ್ಥ ಸಹಿತ ಸಂಗ್ರಹದ ಸುಮಧ್ವವಿಜಯ ಪುಸ್ತಕದಲ್ಲಿ ಈ ಶ್ಲೋಕದ ಅಡಿ ಟಿಪ್ಪಣಿಯಲ್ಲಿ ಅಷ್ಟ ಭಾವ ಪುಷ್ಪಗಳನ್ನು ತಿಳಿಸುವ ಈ ಕೆಳಗಿನ ಶ್ಲೋಕವನ್ನು ಕೊಟ್ಟಿದ್ದಾರೆ.

ಅಹಿಂಸಾ ಪ್ರಥಮಂ ಪುಷ್ಪಂ ಪುಷ್ಪಮಿಂದ್ರಿಯ ನಿಗ್ರಹಂ
ಸರ್ವಭೂತ ದಯಾ ಪುಷ್ಪಂ ಕ್ಷಮಾಪುಷ್ಪಂ ವಿಶಿಷ್ಯತೇ
ಜ್ಞಾನ ಪುಷ್ಪಂ ತಪಃ ಪುಷ್ಪಂ ಧ್ಯಾನ ಪುಷ್ಪಂ ತು ಸಪ್ತಮಂ
ಸತ್ಯಂ ಚೈವಾಷ್ಟಮಂ ಪುಷ್ಪಮೇಭಿಸ್ತುಷ್ಯತಿ ಕೇಶವ

(ಅಹಿಂಸೆ, ಇಂದ್ರಿಯ ನಿಗ್ರಹ, ಸರ್ವಭೂತ ದಯಾ, ಕ್ಷಮೆ, ಜ್ಞಾನ, ತಪ, ಧ್ಯಾನ ಮತ್ತು ಸತ್ಯ ಗಳೇ ಎಂಟು ಭಾವ ಪುಷ್ಪಗಳು. ಕೇಶವನು ಇವುಗಳಿಂದ ಅರ್ಚಿಸುವದರಿಂದ ಸಂತುಷ್ಟನಾಗುತ್ತಾನೆ)

ಈ ಎಂಟು ಪುಷ್ಪಗಳ ಕುರಿತು ಗೋಪಾಲದಾಸರು ಸುಳಾದಿಯನ್ನು ರಚಿಸಿದ್ದಾರೆಂದು ತಿಳಿದದ್ದು ಅಪ್ಪ ಇದನ್ನು ಟೈಪಿಸಿ ಈ ಮೇಲಿನಲ್ಲಿ ಕಳಿಸಿದಾಗಲೇ.

               ಧ್ರುವ ತಾಳ
ಭಾವಾಷ್ಟ ಪುಷ್ಪಂಗಳ ದೇವಗೆ ಅರ್ಪಿಸುವ
ಭಾವನೆಯನು ಕೇಳಿ ಭಕ್ತಜನರು
ಜೀವರಿಂದ ಈ ಧರ್ಮ ಎಂದಿಗೆ ಆದದಲ್ಲ
ದೇವನಲ್ಲೇವೆ ಇಂಥ ಗುಣಗಳುಂಟು
ಭಾವಾಷ್ಟ ಪುಷ್ಪ ಗುಣವ ದೇವನಲ್ಲಿಪ್ಪವೆಂದು
ಜೀವ ತಿಳಿದರೆ ಉದ್ಧಾರ ಉಂಟು
ಜೀವರೆಂಬುವರು ಕರ್ಮ ಬದ್ಧರು ಇನ್ನು
ದೇವನು ಕರ್ಮ ತ್ರಿಗುಣಾದಿ ರಹಿತ
ಜೀವರಿಂದಲಿ ಅತ್ಯಂತ ಭೇದ ಸಾಕಾರ ಹರಿ
ಯಾವತ್ತರಾದಿ ವ್ಯಾಪ್ತ ಎಣಿ ಇಲ್ಲದ ಮೂರ್ತಿ
ಪಾವನಾಂಗ ಪಾಪನಾಶ ನಿತ್ಯತೃಪ್ತಾ
ಜೀವದಿ ಜಡದಿ ಎಂದಿಗೆ ಅಗಲದೆ ಇಪ್ಪ
ಈ ವಿಧ ಶಕುತಿಯ ಈಶ ಗೋಪಾಲವಿಟ್ಠಲ
ದೇವರಿಗುಂಟೆಂದು ಅರಿವ ಜೀವನೆ ಬಲುಧನ್ಯ ||೧||

ಮಠ್ಯ ತಾಳ
ಬೊಮ್ಮಾಂಡವ ಸೃಜಿಸಿ ಬೊಮ್ಮನೊಳಗೆ ನಿಂತು
ಸುಮ್ಮನಸರನೆಲ್ಲ ನಿರ್ಮಿಸಿ ಪಾಲಿಸಿ
ಬೊಮ್ಮಾಂಡ ಅಳಿಸಿ ಬೊಮ್ಮನ ಕೊಲ್ಲುವ
ಬೊಮ್ಮಹತ್ತಿ ದೋಷವು ಎಮ್ಮಯ್ಯಗಿಲ್ಲ
ಹಮ್ಮಿನ ಹಂಸಡಿಬಿಕರ್ಯಲ್ಲಾರಾ
ನಿರ್ಮಳದಿ ಕೊಂದ ನಿರ್ಮತ್ಸರದಿಂದ
ಧರ್ಮದಿ ಈ ಪುಷ್ಪ ನಮ್ಮಯ್ಯಗೆಂದು
ಘಮ್ಮನೆ ಅರ್ಪಿಸು ಘನ ಭಕುತಿಯಲ್ಲಿ
ರಮ್ಮೆರಮಣನೆ ಗೋಪಾಲವಿಟ್ಠಲ ಪರ
ಬೊಮ್ಮ ಒಲಿವ ಹೀಗೆ ಧರ್ಮ ಅರಿದವರಿಗೆ ||೨||

ರೂಪಕ ತಾಳ
ಎರಡೆಂಟು ಸಾಸಿರ ಅರಸಿಯರ ಕೂಡ
ಪರಿ ಪರಿ ಕ್ರೀಡಿಯ ಮಾಡಿ ನೋಡಿ ಚಲ್ವ
ತರುಳ ತನದಿ ಹನ್ನೆರಡು ಸಾಸಿರಮಂದಿ
ತರುಳರ ಪಡೆದು ತಾ ಪರೀಕ್ಷಿತನಿಗೆ ಇನ್ನು
ಪರಿಣಾಮ ಮಾಡಿದವರ ಬ್ರಹ್ಮಚಾರಿ ಎಂದು
ಸರಿ ಹೋಗುವದೇ ಇಂಥ ಚರಿಯ ಮನುಜರಿಂದ
ಹರಿಗೆ ಇಂದ್ರಿಯನಿಗ್ರಹ ಸ್ಥಿರ ಪುಷ್ಪವೆಂತೆಂದು
ಅರಿದು ಅರ್ಪಿಸುವ ಜೀವರಿಗೆ ಲೇಪಿಸದು
ಪರಮದಯಾಳು ಗೋಪಾಲವಿಠ್ಠಲ ತನ್ನ
ಆರಿದಂತೆ ಫಲವೀವಾ ಶರಣರ ಜನಕೆ ||೩||

ಝಂಪೆ ತಾಳ
ಭೂತದಯಾಪುಷ್ಪ ಭೂತೇಶಗಲ್ಲದೆ
ಭೂತಾಧಾರದಿ ಇಪ್ಪ ಭೂತರಿಗೆ ಥರವೇ
ನೀತಿಲಿ ತ್ರಿವಿಧ ಜೀವರಿಗೆ ತಾ ತಪ್ಪದೆ
ಪ್ರೀತಿಲಿ ಉಣಿಸಿ ಅಜಾತನಾಗಿ ಇಪ್ಪ
ಮಾತು ಮಾತಿಗೆ ಅನಂತ ಕರ್ಮಂಗಳು
ಜ್ಞಾತವಿಲ್ಲದೆ ಮಾಳ್ಪ ಜೀವರಿಗೆ ಇದು ಸಲ್ಲ
ಭೂತರುಗಳ ಗತಿ ತಾ ತಿಳಿದು ತ್ರಿವಿಧರಿಗೆ
ನೋತಫಲವಿತ್ತು ಸಮನಾಗಿ ಇಪ್ಪುವನೆಂದು
ಈ ತೆರದಿ ತಿಳಿದು ನೀ ಭೂತದಯಾ ಪುಷ್ಪ
ಪ್ರೀತಿಯಲಿ ಅರ್ಪಿಸನ್ಯಥಾ ಚಿಂತಿಸದೆ
ದಾತ ನಮ್ಮ ಸ್ವಾಮೀ ಗೋಪಾಲವಿಟ್ಠಲ
ಸೋತೆನೆಂದ ಬಳಿಕ ಸಲಹದೆ ಬಿಡನು ||೪||

ತ್ರಿಪುಟ ತಾಳ
ಸರ್ವದಾ ಕ್ಷಮೆ ಪುಷ್ಪ ಸರ್ವೆಶಗಲ್ಲದೆ
ಗರ್ವ ತತ್ವದಿ ಬದ್ಧ ಜೀವರಿಗೆ ಸಲ್ಲ
ಶರ್ವನಲ್ಯಾದರು ಸಹಿಸಿಲ್ಲ ಈ ಕರ್ಮ
ಪೂರ್ವದ ಆಖ್ಯಾನ ಇದಕುಂಟು
ಸರ್ವ ಉತ್ತಮ ದೇವನಾರೆಂದು ಭೃಗು ಮುನಿ
ಸರ್ವಪೂರ್ಣ ಹರಿಯ ಎದಿಯ ವದ್ದ
ಪರ್ವತದೋಪಾದಿ ಇದ್ದ ಕಾರಣವಾಗಿ
ಸರ್ವೋತ್ತಮನೆಂದು ತುತಿಸಿ ನಲಿದಾ
ನಿರ್ವ್ಯಾಜದಿಂದಲಿ ನಿತ್ಯ ಕೋಪದಿ ಖೇದ
ಗರ್ವ ತತ್ವದಿ ಬದ್ಧ ಜನರಿಗೆ ಕೂಡದು
ಸರ್ವಾನಂದ ಪೂರ್ಣ ಗೋಪಾಲವಿಠಲ
ಸರ್ವೇಶಗೀ ಪುಷ್ಪ ಅರಿವ ಜೀವನೆ ಧನ್ಯ ||೫||

ಅಟ್ಟ ತಾಳ
ದಮ ಜ್ಞಾನ ಧ್ಯಾನವು ಸಮೀಚೀನ ಪುಷ್ಪವು
ರಮೆ ಈಶಗಲ್ಲದೆ ಶ್ರಮಿಸೋ ಜೀವರಿಗಿಲ್ಲಾ
ವಮನ ಕಂಡರೆ ಅಂಜೋ ಭ್ರಮಣ ಜೀವರಿಗೆ
ದಮ ಎಂಬ ಪುಷ್ಪವು ಎಂತು ದೊರೆಯುವದಯ್ಯಾ
ಮಮತಿ ಜಡದಿ ನಿಮಿಷ ಬಿಡದೆ ಇದ್ದ
ಹಮ್ಮತಿ ಜೀವನಿಗೆ ಜ್ಞಾನಪುಷ್ಪವು ಎಂತೋ
ಕ್ಷಮಿಸಿ ನೋಡಲು ಧ್ಯಾನಪುಷ್ಪ ವೆಂಬೋದು ಅಂತು
ನಿಮಿತ್ತ ಮಾತ್ರವು ಇದು ನೀಚ ಜೀವರಗಿಲ್ಲ
ಸಮ್ಮತಿಸಿ ನೋಡಿವು ಸರ್ವೋತ್ತಮನಲ್ಲವೇ
ನಿಮಿಷ ಬಿಡದೆ ಇಪ್ಪವೆಂದು ಚಿಂತನೆ ಮಾಡೆ
ದಮಜ್ಞಾನ ಧ್ಯಾನವುಳವನಾಗುವನಾ ಜೀವ
ಸುಮನಸರೊಡಿಯ ಗೋಪಾಲವಿಟ್ಠಲನು
ನಮಿಸಿ ನೆಚ್ಚಿದಂಗಿನ್ನರಿಸುವನಿದಿರಾ ||೬||

ಆದಿ ತಾಳ
ಸತ್ಯವೆಂಬುವ ಪುಷ್ಪ ಸರ್ವೆಶಗೆ ಇದು
ನಿತ್ಯ ಅನೃತ ನುಡಿವ ಜೀವಗೆ ಸಲ್ಲ
ಕತ್ತಲೆ ಒಳಗಿದ್ದ ಮತ್ತೆ ಉದಯವೆಂಬೋ
ಮಿಥ್ಯ ವಚನವಾಡಿ ಸುತ್ತುವ ಸಂಸಾರ
ಮತ್ತೆ ಇವಗೀ ಪುಷ್ಪ ಎಂತು ದೊರುವದಯ್ಯಾ
ಸತ್ಯ ಸಂಕಲ್ಪ ನಮ್ಮ ಗೋಪಾಲವಿಠ್ಠಲಗೆ
ಮತ್ತೆ ನೀ ಉಂಟೆಂದು ಮನಮುಟ್ಟಿ ತಿಳಿಯೋ ||೭||

ಜತೆ
ಭೇದವಿಲ್ಲದೀ ಪುಷ್ಪ ಇಪ್ಪವು ಹರಿಯಲ್ಲಿ
ಸಾಧಿಸರ್ಚಿಸು ಗೋಪಾಲವಿಟ್ಠಲ ಒಲಿವಾ ||೮||

ಈ ಭಾವಾಷ್ಟ ಪುಷ್ಪಗಳು ಅಂದರೆ ಅವು ಸಾರ್ವಕಾಲಿಕ ಸತ್ಯಗಳು ಅಥವಾ ಅವು ಪ್ರಿನ್ಸಿಪಲ್ಲುಗಳು ಅಂತ ವೈದ್ಯರು ಹೇಳುತ್ತಿರುತ್ತಾರೆ. ಈ ಅಷ್ಟ ಪುಷ್ಪಗಳು ನಮ್ಮ ಭಾವದಲ್ಲಿ ಅರಳಬೇಕು, ಅವನ್ನು ಅವನಿಗೇ ಸಮರ್ಪಿಸಬೇಕು ಎನ್ನುವದು ಇಲ್ಲಿಯವರೆಗೆ ತಿಳಿದದ್ದು.

ಗೋಪಾಲ ದಾಸರು ಸುಳಾದಿಯಲ್ಲಿ ಹೇಳುವದು ಆ ಅಷ್ಟ ಪುಷ್ಪಗಳು ಇರುವದು ಆ ದೇವನಲ್ಲಿ ಮಾತ್ರವೇ ಎಂದು ತಿಳಿದುಕೊಂಡು ಅರ್ಚಿಸು ಅಂತ. ಮೊದಮೊದಲು ಇದನ್ನು ಓದುತ್ತಿರುವಾಗ ಅನಿಸಿದ್ದು, ಈ ಪುಷ್ಪಗಳು ದೇವನಲ್ಲಿ ಮಾತ್ರ ಎಂದರೆ ಮನುಷ್ಯ ಮಾತ್ರರು ತಮ್ಮ ಭಾವ ಶುದ್ಧಿಗಾಗಿ ಇವುಗಳನ್ನು ಸಾಧಿಸುವದು ಸಾಧ್ಯವೇ ಇಲ್ಲವೇ ಅನಿಸತೊಡಗಿತು.

ನಂತರ ನಿಧಾನವಾಗಿ ಯೋಚಿಸಿದಾಗ ಈ ಅಷ್ಟ ಪುಷ್ಪಗಳೂ ಆ ದೇವನ ಗುಣಗಳೇ ಎಂದೂ ಮತ್ತು ಅವನ ಗುಣಗಳಿಗೂ, ಅವನಿಗೂ ವ್ಯತ್ಯಾಸವೇ ಇಲ್ಲ ಎಂಬುದನ್ನ ಈ ಸುಳಾದಿಯಲ್ಲೂ ಹೇಳುತ್ತಿದ್ದಾರೆ ಗೋಪಾಲದಾಸರು ಅನಿಸಿತು. ಸುಮಧ್ವ ವಿಜಯದ ಶ್ಲೋಕದಲ್ಲಿ ಮಧ್ವಾಚಾರ್ಯರು ಭಾವಾಷ್ಟ ಪುಷ್ಪಗಳಿಂದ ತಮ್ಮ ಅಂತರಂಗದಲ್ಲಿ ದೇವನನ್ನು ಪೂಜಿಸುತ್ತಾರೆ ಎನ್ನುವದು ಅವನ ಗುಣಗಳಿಂದಲೇ ಅವನನ್ನು ಪೂಜಿಸುವ ವಿಶಿಷ್ಟ***  ಪೂಜೆಯನ್ನು ತಿಳಿಸುತ್ತದೆಯೋ ಅನಿಸಿತು.

ಮತ್ತೆ ವೈದ್ಯರ ಹತ್ತಿರ ಮಾತಾಡುವಾಗ ಅವರು ಹೇಳಿದ್ದು, ಪೂಜೆಗೆ ಹೂವುಗಳು ಅರಳಬೇಕು. ಭಾವದಲ್ಲಿ ಈ ಹೂವುಗಳು ಅರಳಬೇಕು. ಇವುಗಳ ಅರಳುವಿಕೆ ಪೂರ್ಣ ಪ್ರಮಾಣದಲ್ಲಿ ಆಗುವದು ದೇವನಲ್ಲಿ ಮಾತ್ರ. ಜೀವರಲ್ಲಿ ಅತ್ಯಂತ ಹೆಚ್ಚಿನ ಪ್ರಮಾಣದಲ್ಲಿ ಇವು ಅರಳುವದು ಮಧ್ವಾಚಾರ್ಯರಲ್ಲಿ (ಬ್ರಹ್ಮ ವಾಯುಗಳಲ್ಲಿ).

ಮಹಾಭಾರತದಲ್ಲಿ ಭೀಮಸೇನ ದೇವರ ಪೂಜೆಯ ವೇಳೆಗೆ ಹೇಳುತ್ತಿದ್ದ ಎನ್ನುವ ಶ್ಲೋಕವೊಂದರ ಉಲ್ಲೇಖವೂ ಇದೆ ಎಂದು ಈ ಶ್ಲೋಕವನ್ನೂ ತಿಳಿಸಿದರು. ಅವರೊಡನೆ ಫೋನಿನಲ್ಲಿ ಮಾತನಾಡುವಾಗ ಇದನ್ನು ಬರೆದಿಟ್ಟುಕೊಂಡಿರಲಿಲ್ಲವಾದರೂ ಅದೇ ಶ್ಲೋಕವನ್ನು ಪ್ರಭಂಜನಾಚಾರ್ಯರೂ ಉಲ್ಲೇಖಿಸಿದ್ದರಿಂದ, ನನ್ನ ಹತ್ತಿರದ ಪುಸ್ತಕದಲ್ಲಿ ಸಿಕ್ಕಿತು.

ಆರಾಧಯಾಮಿ ಮಣಿಸನ್ನಿಭಮಾತ್ಮಬಿಂಬಂ ಮಾಯಾಪುರೇ ಹೃದಯಪಂಕಜಸನ್ನಿವಿಷ್ಟಮ್
ಶ್ರದ್ಧಾನದೀವಿಮಲಚಿತ್ತಜಲಾಭಿಷೇಕಂ ಭಾವಾಷ್ಟಪುಷ್ಪವಿಧಿನಾ ಹರಿಮರ್ಚಯಾಮಿ

ಮುಂದೆ ಮಾತನಾಡುತ್ತ ಅವರು ಇನ್ನೊಂದು ಶ್ಲೋಕ ತಿಳಿಸಿದರು. ಅದರಲ್ಲಿ ಎಂಟು ಹೂವುಗಳಲ್ಲಿ ಸ್ವಲ್ಪ ವ್ಯತ್ಯಾಸವಿದೆ. ಎರಡೂ ಶ್ಲೋಕಗಳನ್ನೂ ನಾರಾಯಣ ಪಂಡಿತರೇ ಉಲ್ಲೇಖಿಸಿದ್ದಾರೆ ಎಂದು ತಿಳಿಸಿದರು. ಆ ಎಂಟು ಪುಷ್ಪಗಳು, ಅಹಿಂಸೆ, ಸತ್ಯ, ಅಸ್ತೇಯ, ಬ್ರಹ್ಮಚರ್ಯ, ಅಪರಿಗ್ರಹ, ಶೌಚ, ತುಷ್ಟಿ, ಸರ್ವಸಮರ್ಪಣ.

(***ವ್ಯತಿರೇಕ ಮತ್ತು ಅನ್ವಯ ಪೂಜೆಗಳ ಬಗ್ಗೆ ಜಗನ್ನಾಥ ದಾಸರು ಹರಿಕಥಾಮೃತಸಾರದಲ್ಲಿ ಹೇಳುತ್ತಾರೆ. ಬಿಡಿ ಬಿಡಿಯಾಗಿ ಉಪಕರಣಗಳಿಂದ, ಹೂವುಗಳಿಂದ, ದೇವರನ್ನು ಪೂಜಿಸುವ ವ್ಯತಿರೇಕ ಪೂಜೆ ಮತ್ತು ಎಲ್ಲದರಲ್ಲೂ ಎಲ್ಲೆಲ್ಲೂ ಅಡಕವಾಗಿರುವ ದೇವರನ್ನು ನೆನೆಯುತ್ತ, ಅವನೇ ತುಂಬಿರುವ ವಸ್ತುಗಳಿಂದ ಅವನನ್ನು ಪೂಜಿಸುವ ಅನ್ವಯ ಪೂಜೆಗಳ ಬಗ್ಗೆ ತಿಳಿಸುತ್ತಾರೆ. ಇಲ್ಲಿ ಅವನ ಗುಣಗಳಿಂದಲೇ ಅವನ ಪೂಜೆ ಮಾಡುತ್ತಾರೆ ಎಂಬುದು ಈ ಅನ್ವಯ ಪೂಜೆಯ ಮುಂದುವರೆದ ಘಟ್ಟವ? ಇದರ ಬಗ್ಗೆ ಮಾತನಾಡಬೇಕು.)