ಎಳಿಯೋಣು ಬಾರ…

ಎಳಿಯೋಣು ಬಾರ ಎಳಿಯೋಣು ಬಾ
ನಲಿಯುತ್ತ ನಾವು ಎಳಿಯೋಣು ಬಾ

ಹೊಳೆಯೆರಡರೂರವಳೆ ತಿಳಿವೂರ ಮನೆಯವಳೆ
ಹೊಳೆಮಿಂಚು ನಗೆಯವಳೆ ಬಗೆಯನ್ನು ಗೆದ್ದವಳೆ

ಮಳೆಬಿಲ್ಲ ಬಣ್ಣಗಳ ಬಾಳಲ್ಲಿ ತಂದವಳೆ
ಒಲವನ್ನು ನಲಿವನ್ನು ಎದೆಯಲ್ಲಿ ಮಿಡಿದವಳೆ

ಬೆಳಕಾಗಿ ಹರಸಿರಲು ಗುರುಹಿರಿಯರು ಕೂಡಿ
ಕರುಣಾಳು ಕಣ್ದೆರೆದು ಸಿರಿದೇವನು ನೋಡಿ

ಎಳೆ ಎರಡು ಹೂವುಗಳು ಅಂಗಳದಲಿ ಆಡಿ
ತಲೆ ಬಾಗಿ ನಮಿಸೋಣ ಬಾ ಇಬ್ಬರು ಕೂಡಿ

ಹಾದಿ ಹರಡಿದೆ ಮುಂದೆ ಗಾಲಿ ತಿರುಗಲಿ ಹೀಗೆ
ಹಬ್ಬಿ ಹರಡಲಿ ಪ್ರೀತಿ ದೇವನೊಪ್ಪುವ ರೀತಿ

ಕಲ್ಲುಂಟು ಮುಳ್ಳುಂಟು ಹಾದಿಯಲಿ ಕವಲುಂಟು
ಬೇವುಂಟು ನೋವುಂಟು ಸಿಟ್ಟುಂಟು ಸೆಡವುಂಟು

ಎದೆಗುಂದದಿರು ಹುಡುಗಿ ಗುರುರಾಯರ ನೆರಳುಂಟು
ಹರಿವಾಯುಗುರು ತಾವು ಹಿರಿದಾಗಿ ಹಿಂದಿರಲು

ನೊಗಭಾರವಾಗದಿರಲಿ ಮೊಗನಗೆಯು ಹಾಗಿರಲಿ
ಬಗೆಯಿಟ್ಟು ಬಾಳ್ದೇರ ಎಳಿಯೋಣು ಬಾ ಹುಡುಗಿ

( ಎಳಿಯೋಣು ಬಾರ ಎನ್ನುವ ಸಾಲಿಗೆ ಬೇಂದ್ರೆಯವರ ಕುಣಿಯೋಣು ಬಾರಾದ ಸ್ಫೂರ್ತಿ ಖಂಡಿತವಾಗಿಯೂ ಇದೆ 🙂 )
Advertisements

ಬೆಂಕಿಗೆ ಗಾಳಿ ಹಾಕಬಾರದಂತೆ!

ಇವರು ಮಹಾನ್ ಪ್ರಭೃತಿಗಳು
ಗಾಳಿಗೇ ಬೆಂಕಿ ಕೊಟ್ಟವರು!

ನುಸುಳಿದ ಗಾಳಿಯು ರಭಸದಲುಕ್ಕುತ
ಹಸಿರಿನ ತೋಪಿನ ಗಿಡಮರ ಉರುಳಿಸಿ
ಹೊಸಕುತ ಹೂಗಳ ಹಾರಿಸೆ ಪಣ್ಗಳ
ಬೀಸುತ ಬಂದರು ಬಗೆಬಗೆ ಆಯುಧ

ಹಿಡಿಯಿರಿ ಬಿಡದಿರಿ ಹೊಡೆಯಿರಿ ಕಟ್ಟಿರಿ
ಒಡೆಯನ ತೋಟವ ಕೆಡಹುವ ತೊಂಡನ
ಹುಡುಕಿರಿ ಬೇಗನೆ ಅಲ್ಲಿಹ ನೋಡಿರಿ
ಗಿಡದಲಿ ಸುಳಿದಿಹ ಗಾಳಿಯ ಗುದ್ದಿರಿ

ಅಂತೂ ಇಂತೂ ಹೇಗೋ ಎಂತೋ
ಮೂರನೆ ಒಂದರ ಬೆಲೆಯನೆ ತೆತ್ತೋ
ಇವರೇ ಹಿಡಿದರೊ ತಾನೇ ಸಿಕ್ತೋ
ಮುಟ್ಟಿಲಿ ಕಟ್ಟಿದೆವೆನ್ನುತ ಕುಣಿದರು

ಮಾಡಿದ ತಪ್ಪಿಗೆ ತಕ್ಕನೆ ಶಾಸ್ತಿಯ
ನೀಡಿದ ಒಡೆಯನ ಬುದ್ಧಿಯ ಮೆಚ್ಚುತ
ಬಟ್ಟೆಯ ಬಿಗಿದರು ಎಣ್ಣೆಯ ಸುರಿದರು
ಇಟ್ಟರು ಬೆಂಕಿಯ ಸುಟ್ಟರು ಗಾಳಿಯ!

ಆ ಮನೆ ಈ ಮನೆ ಸೇರಿಸಿ ಅರಮನೆ
ಸರಭರ ಉರಿಸುತ ಹರಡುತ ಎಲ್ಲೆಡೆ
ಗಟ್ಟಿಗರಿಬ್ಬರು ಗೆಳೆಯರ ಕೂಟವು
ಸುಟ್ಟಿರೆ ಪಟ್ಟಣ, “ಸತ್ತೆವೊ ಕೆಟ್ಟೆವೊ

ಆರಿಸಿ ಆರಿಸಿ ಉರಿಯನು ತಾಳೆವೊ
ನೀರನು ತನ್ನಿರಿ ಕಡಲಿಗೆ ಹಾರಿರಿ”
ತಾರಕಕೇರಿತು ಹಾಹಾಕಾರವು
ಅರಿತರೆ ಬಿದ್ದಿಹ ಬೆಂಕಿಯ ಕಾರಣ?

ಹರುಷದ ವನದಲಿ ವೃಕ್ಷದ ನೆರಳಲಿ
ಉರಿದಿಹ ಮಣ್ಣಿನ ಅಣುಗಿಯ ಶೋಕಕೆ
ಮರುಗಿಹ ಆಣ್ಮನ ಕೋಪದ ಕಿಡಿಯದು
ಹಾರಿತು ಹಾಟಕದೂರನು ಸುಟ್ಟಿತು

ರಾಮನೆಂದರೆ ನೆನಪಾಗುವದು…

ರಾಮನೆಂದರೆ ನೆನಪಾಗುವವು ಪುರಂದರ ದಾಸರ ಶರಣು ಸಕಲೋದ್ಧಾರ ಪದದ ಸಾಲುಗಳು,
ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ
ಆವ ದೇವರಿಗುಂಟು ಬ್ರಹ್ಮಾಂಡದೊಳಗೆ

ಹಾಗೂ,

ಭಾವ ಶುದ್ಧಿಯಲಿ ನೆನೆವ ತನ್ನ ಭಕುತರ ಪೊರೆವ
ಪುರಂದರ ವಿಠಲನೇ ಅಯೋಧ್ಯಾ ರಾಮ

ರಾಮನೆಂದರೆ ನೆನಪಾಗುವದು,
ಹಿಂದೆ ಯಾವಾಗಲೋ ತರಂಗದಲ್ಲಿ ಆರ್ ಗಣೇಶ್ ಬರೆದ ರಾಮನ ಬಗೆಗಿನ ಬರಹದಲ್ಲಿ ಉಲ್ಲೇಖಿಸಿದ್ದ, ‘ಸ್ಮಿತಪೂರ್ವಭಾಷಿ’, ‘ಅಕ್ಲಿಷ್ಟ ಕರ್ಮಣಃ’ ಹಾಗೂ ‘ಅಪರಿಗ್ರಹ’. ನಗುಮೊಗದಿಂದ ತಾನೇ ಮೊದಲು ಮಾತನಾಡಿಸುವ, ಯಾವ ಕೆಲಸವನ್ನೇ ಆದರೂ ಹೂವು ಎತ್ತಿಟ್ಟಂತೆ ಸರಳವಾಗಿ ಮಾಡುವ ಅಕ್ಲಿಷ್ಟಕರ್ಮನಾದ ಹಾಗೂ ಎಂದೂ ಪರರ ವಸ್ತುವನ್ನು ಬಯಸದ, ತೆಗೆದುಕೊಳ್ಳದ ಆದರ್ಶ ವ್ಯಕ್ತಿ ರಾಮ.

ರಾಮನೆಂದರೆ ನೆನಪಾಗುವದು,
‘ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯ ಅಕ್ಲಿಷ್ಟಕರ್ಮಣಃ’ ಎಂದು ಲಂಕೆಯ ಹೆಬ್ಬಾಗಿಲ ಮೇಲೆ ನಿಂತು ಘೋಷಿಸಿದ ಹನುಮಂತನ ಮಾತು. ಹರಿದಾಸರುಗಳಿಗೆ ಹಾದಿ ತೋರಿದ ಮಾತು.

ರಾಮನೆಂದರೆ ನೆನಪಾಗುವದು ಶ್ರೀ ಮಧ್ವಾಚಾರ್ಯರ ದ್ವಾದಶಸ್ತೋತ್ರದ ‘ವಂದೇ ವಂದ್ಯಮ್ ಸದಾನಂದಮ್’ ಸ್ತುತಿಯ ರಾಮ ಸ್ಮರಣೆ,
ಸ್ಮರಾಮಿ ಭವ ಸಂತಾಪ ಹಾನಿದಾಮೃತಸಾಗರಮ್
ಪೋರ್ಣಾನಂದಸ್ಯ ರಾಮಸ್ಯ ಸಾನುರಾಗವಲೋಕನಮ್

ರಾಮನೆಂದರೆ ನೆನಪಾಗುವದು,
ಶ್ರೀ ವಾದಿರಾಜರ ಲಕ್ಷ್ಮೀ ಶೋಭನ ಪದದಲ್ಲಿ ಹರಿಯ ಸರ್ವೋತ್ತಮತ್ವವನ್ನು ಸಿದ್ಧಪಡಿಸಿ, ಅವನೇ ತನಗೆ ಅನುರೂಪನಾದ ವರ ಎಂದು ನಿರ್ಧರಿಸಿದ ಲಕ್ಷ್ಮಿ ಅಜಿತ ನಾಮಕ ಹರಿಯ ಬಳಿಗೆ ಹೋಗಿ ಅವನ ಕೊರಳಿಗೆ ಮಾಲೆ ಹಾಕುವುದನ್ನು ಹೇಳುವ ಸಂದರ್ಭದಲ್ಲಿ ಬಳಸಿದ ಪದ್ಯ,

ಇಂತು ಚಿಂತಿಸಿ ರಮೆ ಸಂತ ರಾಮನ ಪದವ
ಸಂತೋಷ ಮನದಿ ನೆನೆವುತ್ತ
ಸಂತೋಷ ಮನದಿ ನೆನೆವುತ್ತ ತನ್ನ ಶ್ರೀ
ಕಾಂತನಿದ್ದೆಡೆಗೆ ನಡೆದಳು ||

ಲಕ್ಷ್ಮಿಗೆ ಅನುರೂಪನಾದವನು ನಾರಾಯಣನಾದರೆ ಅವನಿಗೆ ಅನುರೂಪಳಾದವಳು ಲಕ್ಷ್ಮಿಯೋಬ್ಬಳೇ ಎಂಬುದನ್ನು ಸೋಚಿಸುವದಕ್ಕೇನೇ ಅಲ್ಲಿ ‘ನಿನ್ನನ್ನು ಬಿಟ್ಟು ಇನ್ನೊಬ್ಬಳನ್ನು ಕಣ್ಣೆತ್ತಿಯೂ ನೋಡುವುದಿಲ್ಲ’ ಎಂದು ಸೀತೆಗೆ ಮಾತು ಕೊಟ್ಟ ‘ಸಂತ ರಾಮನ’ ಮೂಲಕ  ಸೀತಾ ರಾಮರನ್ನು ಸೂಚಿರುವರು ಎಂದು ನನಗನಿಸುತ್ತದೆ.

ರಾಮನೆಂದರೆ ನೆನಪಾಗುವದು ರಾಮ ರಕ್ಷಾ ಸ್ತೋತ್ರದ ನುಡಿ,
ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇ ತು ಜನಕಾತ್ಮಜಾ
ಪುರತೋ ಮಾರುತೀರ್ಯಸ್ಯ ತಂ ವಂದೇ ರಘುನಂದನಂ

ರಾಮನೆಂದರೆ, ವಿಶೇಷವಾಗಿ ರಾಮನವಮಿಯೆಂದರೆ ನೆನಪಾಗುವ ಇನ್ನೊಂದು ಹಾಡು ಕನಕದಾಸರು ರಚಿಸಿದ,  “ಅಂಗಳದೊಳು ರಾಮನಾಡಿದ ಚಂದ್ರ ಬೇಕೆಂದು ತಾ ಹಟ ಮಾಡಿದಾ”..

ರಾಮನವಮಿಯೆಂದರೆ ನೆನಪಾಗುವದು ಅಡಿಗರ ಹುತ್ತಗಟ್ಟಿದ ಚಿತ್ತ ಕೆತ್ತಿದ ಪುರುಷೋತ್ತಮನ ಚಿತ್ರ, ಪಾನಕ ಪನಿವಾರಗಳೊಂದಿಗೆ ಬೆಂಕಿಯುಗುಳುವ ರಾಕೆಟ್ಟು, ಸುಟ್ಟಲ್ಲದೇ ಮುಟ್ಟೆನೆಂಬ ಉಡಾಫೆಯೆನ್ನುವ ರಾಮನವಮಿಯ ದಿವಸಕ್ಕೆ ಕವನವೂ ಕೂಡ.

    *****

ಇತ್ತೀಚೆಗಷ್ಟೇ ಅಷ್ಟಿಷ್ಟು ಕಲಿತಿರುವ ಮಲ್ಲಿಕಾ ಮಾಲೆಯೆಂಬ ಅಕ್ಷರ ವೃತ್ತದಲ್ಲಿ ರಾಮನ ಬಗ್ಗೆ ನೆನಪಿಗೆ ಬರುವ ಕೆಲವು ಮಾತುಗಳನ್ನು ಬಳಸಿ ನಾಲ್ಕು ಸಾಲುಗಳನ್ನು ರಚಿಸಬೇಕು ಅನಿಸಿ ಪ್ರಯತ್ನಿಸಿದಾಗ ಬಂದವು ಈ ಕೆಳಗಿನ ಸಾಲುಗಳು. ಶ್ರೀ ರಾಮಚಂದ್ರನಿಗೆ ಅರ್ಪಿತವು. ರಾಮನವಮಿಯ ಶುಭಾಶಯಗಳು ಎಲ್ಲರಿಗೂ.

ರಾಮಚಂದ್ರನೆ ಚೆಲ್ವ ಮೂರ್ತಿಯೆ ಪಾದ ಪದ್ಮಕೆ ವಂದಿಪೆ
ರಾಮ ನಿನ್ನಯ ನಾಮ ಪೇಳುವೆ ಭಾವ ಶುದ್ಧಿಯ ಬೇಡುವೆ

ರಾಮ ಹೇ ಭವ ತಾಪಹಾರಿಯೆ ಹೇ ಸುಧಾಂಬುಧಿ ದೇವನೇ
ಪ್ರೇಮದಿಂದಲಿ ನೋಡಿ ಕಾಯುವ ಮೊದ ಪೂರ್ಣನೆ ವಂದಿಪೆ

ದುಷ್ಟ ರಾವಣನಂತ್ಯ ಕಾರಣ ವಾಲಿ ಭಂಜನ ದೇವನೇ
ಕ್ಲಿಷ್ಟ ಕಾರ್ಯಗಳೆಲ್ಲ ಮೀರಿದ ಮಂದಹಾಸನೆ ಸಂತನೇ

ನೋಡಿ ಲಕ್ಷ್ಮಣ ರಾಮ ಸೀತೆಯ ಮುಂದೆ ಮಾರುತಿ ಮೂರುತೀ
ಪಾಡಿ ನಾಮದ ಮಾಲೆ ಮಲ್ಲಿಕೆ ರಾಮ ನಿನ್ನನು ಪೂಜಿಪೇ

(*ಸೊದೆ: ಅಮೃತ – ಮಧ್ವಾಚಾರ್ಯರ ‘ಶ್ರೀ  ಕೃಷ್ಣಾಮೃತ ಮಹಾರ್ಣವ’ ಗ್ರಂಥದ ಕನ್ನಡ ಅವತರಣಿಕೆಗೆ ಬನ್ನಂಜೆ ಗೋವಿಂದಾಚಾರ್ಯರು ಇಟ್ಟಿರುವ ಹೆಸರು ‘ಕೃಷ್ಣನೆಂಬ ಸೊದೆಯ ಕಡಲು’ ಅದರ ನೆನಪಿನಿಂದ ಸೊದೆಯನ್ನು ಅಮೃತವೆಂದು ಬಳಸಿರುವೆ )

(ಮಲ್ಲಿಕಾಮಾಲೆಯಲ್ಲಿನ ಈ ಪ್ರಯತ್ನದಲ್ಲಿ ಕೆಲವು ತಪ್ಪುಗಳಾಗಿವೆ. ಅಮೃತಕ್ಕೆ ಸೊದೆ ಎನ್ನುವರು, ಸೋದೆಯಲ್ಲ. ಬನ್ನಂಜೆಯವರು ಇತ್ತ ಹೆಸರನ್ನು ನೆನಪಿದೆ ಎಂದುಕೊಂಡು  ಶಬ್ದವನ್ನು ಬಳಸಿದ್ದು ನನ್ನ ತಪ್ಪು. ಅದು ಸೊದೆಯಾದದ್ದಕ್ಕೆ ಅಲ್ಲಿ ಇರಬೇಕಾದ ಗುರು ತಪ್ಪಿದೆ. ‘ರಾಮ ನೀ ಭವ ತಾಪಹಾರಿಯೆ ಸೊದೆ*ಯಂಬುಧಿ ದೇವನೇ’ – ಇದನ್ನು ಈಗ ತಿದ್ದಲಾಗಿದೆ. ಅದೇ ರೀತಿ ಪಾದಾಂತ್ಯದ ಕೊನೆಯ ಗುರುವೂ ಬಹಳಷ್ಟು ಕಡೆ ತಪ್ಪಿದೆ. ಈ ಎಲ್ಲ ತಿದ್ದುಪಡಿ ಸೂಚಿಸಿದ ಜಿವೆಂ ಅವರಿಗೆ ವಂದನೆಗಳು. ‘ಅಂಗಳದೊಳು ರಾಮನಾಡಿದ’ ಹಾಡು ಪುರಂದರ ದಾಸರದ್ದು ಎಂದು ಬರೆದಿದ್ದೆ ಮೊದಲು, ಆದರೆ ಅದು ಕನಕದಾಸರ ಹಾಡು. ಹಾಡಿನ ಮೊದಲ ಭಾಗವನ್ನಷ್ಟೇ ನೆನಪಿನಲ್ಲಿಟ್ಟುಕೊಂಡದ್ದರ ಪರಿಣಾಮ. ಇವತ್ತು ಅದೇ ಹಾಡನ್ನು ಕೇಳುವಾಗ   ‘ಈ ಸಂಭ್ರಮ ನೋಡಿ ಆದಿ ಕೇಶವ ರಘು ವಂಶವನ್ನೇ ಕೊಂಡಾಡಿದ’ ಬಂದ ಕೂಡಲೇ ತಪ್ಪಿನರಿವಾಯಿತು. ಇಲ್ಲಿ ಈಗ ತಿದ್ದುಪಡಿ ಮಾಡಿದೆ.)

 

ತಪ

20130125_103559

ಈ,

ಚಳಿಯ ಕಾಲದಲಿಳೆಯ ನಡುಗಿಸೊ
ಕುಳಿರ ಕಾಟವ ತಾಳೆನೆನ್ನುತ
ಲೆಳೆದುಕೊಂಡಿಹ ಶಾಲು ಕಂಬಳಿ
ಯೊಳಗೆ ಧರಿಸಿದನೇಕ ದಿರಿಸಿನ
ಹಲವು ವಲಯಗಳೊಳಗೆ ತುಸುವೇ
ಗಾಳಿ ನುಸುಳಲು ಬೆನ್ನು ನಡುಗುವ

ಚಳಿಯಲ್ಲಿ,

ಉಟ್ಟುದನು ಬಿಸುಟು ದಿಕ್ಕೆಟ್ಟ ತೆರದಿ
ಬತ್ತಲೆ ನಿಂತಿಹ ಮರಗಳ ನೋಡಲು
ಹುತ್ತ ಚಿತ್ತದೊಳ್ ಮರಮರ ಜಪವನೆ
ತೊಟ್ಟು ಹುಟ್ಟಿದಾದಿ ಕವಿಯದೆ ನೆನಪು

ಒತ್ತರಿಸಿದುದೇಕೆಂದು ಯೋಚಿಸಲು,

ಉತ್ತಮೋತ್ತಮನ ಕರುಣೆಯನೆ ಬಯಸಿ
ಕೆಟ್ಟುದನತಿ ವೇಗದಿ ತೊರೆದ ತೆರದಿ
ಬಿಟ್ಟವುಗಳ ತೊಟ್ಟನು ಕಳಚಿಟ್ಟಿವು
ಕಟ್ಟಿಗೆ ಹಂದರವಾಗಿವೆ ರಾಮಾ!

ಜಪ್ಪಿಸಿ ಕುಳಿತಿವೆ,

ಮರು ಹುಟ್ಟಿಗೆ ಕಾದಿವೆ ನವ ವಸಂತಕೆ
ಪುರುಷೋತ್ತಮನ ಕರುಣೆಯ ಬೆಳಕಿಗೆ

(ಇತ್ತೀಚೆಗೆಷ್ಟೇ ಬೆಂಗಳೂರಿನ ಚಳಿಯಿಲ್ಲದ ಬೆಚ್ಚನೆಯ ಚಳಿಗಾಲವನ್ನು ಮುಗಿಸಿಕೊಂಡು ಬಂದವನಿಗೆ ಇಲ್ಲಿ ಸ್ಯಾನ್ ಹೋಸೆಯಲ್ಲಿ ವಿಪರೀತ ಚಳಿ. ಎಲ್ಲಿ ನೋಡಿದಲ್ಲಿ ಎಲೆಯೆಲ್ಲ ಉದುರಿಸಿಕೊಂಡು ನಿಂತ ಮರಗಳು. ನಾವು ಚಳಿ ಚಳಿಯೆಂದು ಬೆಚ್ಚನೆಯ ಬಟ್ಟೆಗಳ ಹಲವು ಲೇಯರುಗಳನ್ನು ಹಾಕಿಕೊಂಡು ಓಡಾಡುವಾಗ ಹೀಗೆ ಎಲ್ಲ ತೆರೆದುಕೊಂಡು ನಿಂತ ಮರಗಳ ಕಡೆಗೇ ಗಮನ ಹರಿಯುತ್ತಿದೆ ಈ ಬಾರಿ ಯಾಕೊ!)

(ಚಿತ್ರಃ ನಾನೇ ನನ್ನ ಫೋನ್ ಕ್ಯಾಮರಾದಲ್ಲಿ ತೆಗೆದು, ಪಿಕಾಸಾದಲ್ಲಿ ಸ್ವಲ್ಪ ತಿದ್ದಿದ್ದು)

ಮರೆಯದಿರೂ ಮನವೆ!

ಉದುರೆಲೆಗಾಲದೆಳೆ ಬಿಸಿಲು ಬೆಳಗಿದ

ಗಿಡ ಮರ ತೂಗಿಸಿದೆಲರಿಗಲುಗಿದ ಹ

ಳದಿ ಕೆಂಪಿನ ಕಂದಿನ ತರಗೆಲೆಗಳ

ನುದುರಿಸಿ ತೇಲಿಸಿ ಹಾದಿಗೆ ಬೀದಿಗೆ

ಚದುರಿಸುತಂಗಳದುಂಬಿದ ಗಾಳಿಯು

ಮಿಡಿದ ಮುದವ ಮರೆಯದಿರೂ ಮನವೆ!

ಇವತ್ತು ಮುಂಜಾನೆ ಆಫೀಸಿಗೆ ಹೋಗಲು ಮನೆಯಿಂದ ಹೊರಬರುತ್ತಿದ್ದಂತೆಯೇ ಸೋಕಿದ ಮೆಲುಗಾಳಿ, ಆ ಗಾಳಿಗೆ ಅಲುಗಾಡುವ ಗಿಡಗಳು, ಆ ಗಿಡಗಳಿಂದ ಉದುರುತ್ತಿದ್ದ ಎಲೆಗಳು ಹಾಗೇ ಗಾಳಿಯಲ್ಲಿ ತೇಲುತ್ತಾ ನಿಧಾನವಾಗಿ ನೆಲಕ್ಕಿಳಿಯುತ್ತಿದ್ದದ್ದನ್ನ ನೋಡಿ ಮನ ಆಹಾ ಉದುರೆಲೆಗಾಲ ಎಂದಿತು. ಆಗಲೇ ತಲೆಯಲ್ಲಿ ಮೂಡಿದೆರಡು ಸಾಲುಗಳನ್ನ ಬರೆದಿಟ್ಟುಕೊಂಡು, ನಂತರ ಇನ್ನಷ್ಟು ಸಾಲುಗಳನ್ನ  ಜೋಡಿಸುವತನಕ ಇದರ ಗುಂಗು ಬಿಡಲಿಲ್ಲ. ಅನಿಸಿದ್ದನ್ನ ಶಬ್ದಗಳಲ್ಲಿ ಹಿಡಿಯುವಷ್ಟು ಹಿಡಿತ ಶಬ್ದಗಳ ಮೇಲಿಲ್ಲ ನನಗೆ.. ಹೀಗಾಗಿ ಇಲ್ಲಿ  ಹಿಡಿದದ್ದು ಅನಿಸಿದ್ದನ್ನಲ್ಲ, ಅನಿಸಿದ್ದುದರ ನೆನಪನ್ನ ಅನ್ನುವದು ಹೆಚ್ಚು ಸೂಕ್ತವೇನೋ!

ಬರೆಯಬೇಕು ಅನಿಸಿದ್ದನ್ನ ಬರೆದಾದ ಮೇಲೆ ಉಳಿದ ಪ್ರಶ್ನೆ, ‘ಉದುರೆಲೆ ಕಾಲ’ ನನ್ನ ಶಬ್ದ ಭಂಡಾರ ಸೇರಿದ್ದು ಯಾವಾಗ? ಇತ್ತೀಚೆಗೆ ಓದಿದ್ದಿರಬೇಕು, ಬಹುಶಃ ಹಂಸಾನಂದಿ ಬರೆದ ಪದ್ಯದಲ್ಲಿ ಇರಬೇಕು ಅನಿಸಿತು. ಈಗ ನೋಡಿದಾಗ ಅದು ಖಾತ್ರಿ ಆಯಿತು. ನೋಡಿರದೆ ಇದ್ದರೆ ನೀವೂ ನೋಡಿ, ಅಲ್ಲೊಂದೊಳ್ಳೆ ಪದ್ಯ ಇದೆ ಹಾಗೇ ಒಳ್ಳೆ ಚಿತ್ರಾನೂ ಇದೆ 🙂

(picture: my son’s art work, as envisioned by his mom, about the fall season. Picture taken by me 🙂 )

ಊರ್ಣನಾಭಾವತಾರ

ಹೆಚ್ಟಿಯೆಮ್ಮೆಲ್ಲುಗಳಲ್ಲಿ

ಹೊರಳಾಡಿ

ಹೈರಾಣಾದ ಮನ

ತಣಿಯದೆ

ತಿರುಗುವಾಗ

ಥಟ್ಟನೆ ನೆನಪಾಯ್ತು

ಹಾಲ್ಗಡಲು

ಹಾವಸೆ

ಕೆಳಗೆ ಮಿಸುಕಿದ

ಆದಿಜೇಡ

(ಲಿಂಕುಗಳ ಕ್ಲಿಕ್ಕಿಸುತ್ತ ಅಂತರಜಾಲದಲ್ಲಿ ಕಳೆದು ಹೋಗಿದ್ದಾಗ ಥಟ್ಟನೆ  ನೆನಪಾಗಿತ್ತು ಗೋಕಾಕರ ಕವನ, ಊರ್ಣನಾಭಾವಾತಾರ. ಆಗಲೇ ಯಾವಾಗಲೋ ಇದನ್ನು ಬರೆದಿಟ್ಟದ್ದು ಹಾಗೆ ಡ್ರಾಫ್ತಿನಲ್ಲಿ ಉಳಿದು ಬಿಟ್ಟಿತ್ತು. ಈಗ ಡ್ರಾಫ್ಟುಗಳಲ್ಲಿ ಉಳಿದವಕ್ಕೆ ಬೆಳಕು ಕಾಣಿಸುವ ಉಮೇದು. ಒಮ್ಮೆ ಪೋಸ್ಟ್ ಮಾಡುವ ತನಕ ಇವು ತಲೆಯಲ್ಲೇ ಸುತ್ತುತ್ತಿರುತ್ತವೆ. ಅದರಿಂದ ಬಿಡುಗಡೆ ಅಂದರೆ ಪೋಸ್ಟ್ ಮಾಡುವದು!

ಇವತ್ತು ಮತ್ತೊಮ್ಮೆ ಓದಿ, ಒಂದಷ್ಟು ತಿದ್ದಿ ಪೋಸ್ಟಿಸುತ್ತಿರುವೆ; ಗೋಕಾಕರ ಈ ಪದ್ಯದ ಪರಿಚಯವನ್ನು ಮಾಡಿಕೊಟ್ಟ ಪ್ರಭು ಮೂರ್ತಿ ಅವರಿಗೆ ಧನ್ಯವಾದಗಳನ್ನು ತಿಳಿಸುತ್ತ…)