ಮಸುಕು ಬೆಟ್ಟದ ದಾರಿ

ಮಸುಕು ಬೆಟ್ಟದ ದಾರಿ ಓದಿ ಮುಗಿಸಿದೆ. ಎಮ್. ಆರ್. ದತ್ತಾತ್ರಿ ಅವರ ಎರಡನೇ ಕಾದಂಬರಿ. ಮನೋಹರ ಗ್ರಂಥಮಾಲೆಯವರು ಪ್ರಕಟಿಸಿದ್ದಾರೆ. ಆಕಸ್ಮಿಕವಾಗಿ, ಕುಪರ್ಟಿನೋ ಲೈಬ್ರರಿಯಲ್ಲಿ ಸಿಕ್ಕಿತು, ಲೈಬ್ರರಿಯ ದಪ್ಪ ರಟ್ಟಿನ ಪ್ರತಿ.

IMG_1958

ಹೊಸ ತರಹದ ಪಾತ್ರವಿದೆ ಇದರಲ್ಲಿ, ನೆನಪಿನ ಮೂರ್ತ ರೂಪ. ಕಾದಂಬರಿಯ ತುಂಬ ಕಾಣುವದು ಸೂಕ್ಷ್ಮ ಅವಲೋಕನ, details, details, details! ಕವಿ ಸಂವೇದನೆಯ ಸೂಕ್ಷ್ಮ ದೃಷ್ಟಿ ಹಾಗೂ ವಿವರಗಳು ‘ದ್ವೀಪವ ಬಯಸಿ’ಯಲ್ಲಿಯೂ ಇದ್ದವು; ಇಲ್ಲಿ ಅವುಗಳದ್ದೇ ಮೆರವಣಿಗೆ. ಸನ್ನಿವೇಶಗಳನ್ನು ಅವುಗಳ ಎಲ್ಲ ಬಣ್ಣ ರುಚಿ ವಾಸನೆಗಳ ಸಮೇತ ಚಿತ್ರಿಸಿರುವ ರೀತಿಯಿಂದಾಗಿ ನಿರಂಜನನ ಅದ್ಭುತ ಶಕ್ತಿ ಕಾದಂಬರಿಯ ಪುಟಗಳಲ್ಲೆಲ್ಲ ಹರಡಿಕೊಂಡಿದೆ. ಹಲವು ಪಾತ್ರಗಳಿವೆ, ಕೆಲವು ದಟ್ಟವಾಗಿವೆ, ಕೆಲವು ಹೀಗೆ ಬಂದು ಹಾಗೇ ಹೋಗುತ್ತವೆ, ಬೆಟ್ಟ ಗುಡ್ಡಗಳೂ ಜೀವತಳೆದಿವೆ. ಆದರೆ ಯಾವ ಪಾತ್ರವೂ ವ್ಯರ್ಥವಾಗಿ ಬರುವದಿಲ್ಲ, ತನ್ನನ್ನು ತಾನು ಸ್ಮೃತಿಪಟಲದಲ್ಲಿ ಕೊರೆಯದೆ ಹೋಗುವದಿಲ್ಲ. ಸರಳವಾಗಿ, ಸುಲಲಿತವಾಗಿ ಓದಿಸಿಕೊಂಡು ಹೋಗುವ ಭಾಷೆ ಕೆಲವು ಕಡೆ ಕಾವ್ಯಾತ್ಮಕವಾಗುತ್ತದೆ, ಕತೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತದೆ, ಇಲ್ಲೇ ನಮ್ಮ ಸುತ್ತು ಮುತ್ತಿನಲ್ಲೇ ನಡೆಯುತ್ತಿವೆಯೇನೋ ಘಟನೆಗಳು ಎನ್ನುವಷ್ಟು ತನ್ಮಯಗೊಳಿಸುತ್ತದೆ. ಕೆಲವು ಕಡೆ ಇಂಗ್ಲೀಷ್ ನುಡಿಗಟ್ಟುಗಳ ಕನ್ನಡ ಅವತರಣಿಕೆ ಓದಿನ ನಡೆ ಸ್ವಲ್ಪ ತಡವರಿಸುವಂತೆ ಮಾಡುತ್ತವೆ. Artistic circle ಎನ್ನುವದು ಕಲಾ ವರ್ತುಲವಾಗುವ ಬದಲು ಕಲೆಯ ಜಗತ್ತಾಗಬಹುದು. Streetsmart ಎನ್ನುವದು ನಾಡಜಾಣತ್ವವಾದದ್ದು ಇಂಟರೆಸ್ಟಿಂಗ್ ಅನಿಸಿತು :-).

ಚಿತ್ರಕಾರ ಚಿತ್ರದಲ್ಲಿ ಬರೆಯುವದು ನೋಡಿದ್ದನ್ನೋ ಅಥವಾ ನೋಡಿದ್ದರ ನೆನಪನ್ನೋ ಎನ್ನುವ ಭಾಗವನ್ನು ಓದುವಾಗ ಹಿಂದೆ ಯಾವಾಗಲೋ ಪೀಟರ್ ಡ್ರಕರನ ಪುಸ್ತಕದಲ್ಲಿ ಓದಿದ್ದ ಈ ಭಾಗದ ನೆನಪಾಯಿತು!

ಮನುಷ್ಯನಿಗೆ ನೆನಪುಗಳು ಬೇಕು. ಅವು ತನ್ನವೇ ಆದಾಗ ಅವು ವ್ಯಕ್ತಿತ್ವದ ಅನಾವರಣಕ್ಕೆ, ಬೆಳವಣಿಗೆಗೆ ಸಹಕಾರಿಯಾಗಿ ಬಾಳನ್ನು ಸಾರ್ಥಕಗೊಳಿಸುವಲ್ಲಿ ಸಹಾಯ ಮಾಡುತ್ತವೆ. ಆದರೆ ನೆನಪುಗಳು ಬರೀ ಕಂಡ ಕಂಡ ಘಟನೆಗಳ ಬಗೆಗಾದರೆ, ಬಾಳಿನಲ್ಲಿ ಬಂದ ಇತರರ ಬಗ್ಗೆಯೇ ಆದರೆ ಮತ್ತು ಆ ನೆನಪುಗಳು ಹೇಳದೆ ಕೇಳದೇ ಪ್ರಕಟಗೊಳ್ಳುವ ರೀತಿಯ ಮೇಲೇ ತನ್ನ ಹಿಡಿತವೇ ಇಲ್ಲದೇ ಹೋದರೆ ಅಂತಹ ವ್ಯಕ್ತಿ ಬದುಕುವದಾದರೂ ಹೇಗೆ? ಬಾಳಿನ ಸಾರ್ಥಕ್ಯವನ್ನು ಕಂಡುಕೊಳ್ಳುವದು ಹೇಗೆ? ನಿರಂಜನನ ಪಾತ್ರ ಒಂದು ಸಾಧ್ಯತೆಯನ್ನು ಕಂಡುಕೊಳ್ಳುತ್ತದೆ. ಮಸುಕು ಬೆಟ್ಟದ ಹಾದಿ ತಿಳಿಯಾಗುತ್ತದೆ.

Advertisements

ಪ್ರೀತಿ ಮೃತ್ಯು ಭಯ…

ಮೊನ್ನೆ ಕುಪರ್ಟಿನೊ ಲೈಬ್ರರಿಯಲ್ಲಿ ಅನಂತಮೂರ್ತಿಯವರ ಪ್ರೀತಿ ಮೃತ್ಯು ಭಯ ಸಿಕ್ಕಿತ್ತು. ಚಿಕ್ಕ ಪುಸ್ತಕ, ಕೆಲವೇ ಸಮಯದಲ್ಲಿ ಓದಿ ಮುಗಿಯಿತು. ಆರಂಭದ ಕೆಲವು ಪುಟಗಳನ್ನು ಓದುವದು ಸ್ವಲ್ಪ ಕಷ್ಟವಾಯಿತು. ಮುಂದೆ ಹೋಗುತ್ತ ಸರಳವಾಗಿ ಓದಲು ಆಯಿತು. ಅನುಬಂಧದಲ್ಲಿ ಕೊಟ್ಟ ಕಾದಂಬರಿ ಮರು ಬರೆಹವನ್ನು ಓದಲಿಲ್ಲ. ಪುಸ್ತಕ ಓದಿ ೨ ದಿನಗಳ ನಂತರ ಅದರ ಬಗ್ಗೆ ನೆನಪು ಮಾಡಿಕೊಂಡರೆ ಅನಿಸಿದ್ದು ಇಲ್ಲಿ ಕೆಳಗಿದೆ.

ತೀರ ವೈಯಕ್ತಿಕವೆನಿಸುವ ಬರಹ. ಮನಸ್ಸಿನ ಭಾವನೆಗಳು ದಟ್ಟವಾಗಿ, ಹಸಿಬಿಸಿಯಾಗಿ ಹಾಗೇ ಹೊರಬಂದತಿವೆ. ಅದಕ್ಕೊಂದು ಹೆಸರು, ಪ್ರಜ್ಞಾ ಪ್ರವಾಹ ತಂತ್ರ ( stream of consciousness ). ಮನಸ್ಸಿನೊಳಗಣ ವಿಚಾರಗಳನ್ನು ಹಾಗೆ ಹಾಗೆಯೇ ತೋರಿಸುವ ತಂತ್ರವಂತೆ ಇದು. ಇಲ್ಲಿ ಹೆಚ್ಚು ಸ್ವಗತಗಳಂತೆ ತೋರುತ್ತವೆಯಂತೆ, ಆದರೂ ಸ್ವಗತಕ್ಕಿಂತ ಭಿನ್ನವಾದ ತಂತ್ರ ಇದು. ಸುಲಭಕ್ಕೆ ದಕ್ಕಿದ ಯಾವುದನ್ನೂ ಒಪ್ಪಿಕೊಳ್ಳದ, ಕಷ್ಟಪಟ್ಟೇ ಪಡೆಯಬೇಕು ಎಂದು ಬಯಸುವ ನಾಯಕ. ರೆವಲೂಶನರಿ ಆಗಬಯಸುವವ, ಆದರೆ ಅದಕ್ಕೆ ಬೇಕಾದಷ್ಟು ಧೈರ್ಯ ಇದೆಯೇ ತನ್ನಲ್ಲಿ ಎನ್ನುವದನ್ನೇ ಯೋಚಿಸುತ್ತ ಸಿಗರೇಟು ಸುಡುವವ. ಎಲ್ಲವನ್ನೂ, ಎಲ್ಲರನ್ನೂ ತಿರಸ್ಕರಿಸಬೇಕು ಎಂದು ಹಪಹಪಿಸುವ ರೆಬೆಲ್ ಆದವ. ಸಿಗರೇಟು ಬಿಡಬೇಕು, ಶೋಕಿ ಸೂಟು ಹೊಲಿಸಿಕೊಂಡು ಅದರ ಬಾಕಿ ಕೊಡಲಿಕ್ಕೆ ಆಗದಿರುವಂತೆ ಆಗಬಾರದು ಎನ್ನುವವ. ಕ್ರಿಶ್ಚಿಯನ್ ಹುಡುಗಿಯನ್ನು ಪ್ರೀತಿಸಿದವ, ಅದೂ ಕೂಡ ನಿಜವಾದ ಪ್ರೀತಿಯೆ ಅಥವಾ ಹಳೆಯ ಗೆಳತಿಯಾದ ಇನ್ನೊಬ್ಬ ಸಜಾತೀ ಹುಡುಗಿಯನ್ನು ಮದುವೆಯಾಗದೇ ಇವಳನ್ನು ಮದುವೆಯಾಗುವದು ಕೂಡ ಸುಲಭಕ್ಕೆ ಎಟುಕಿದ್ದನ್ನು ಒಲ್ಲೆ ಎನ್ನುವ ತನ್ನ ಹಟವೋ ಎಂತಲೂ ವಿಚಾರ ಮಾಡುವವ. ಕೆಲಸ ಕಾಯಮ್ಮಾಗಲು ಸಹಾಯ ಮಾಡಿದವರನ್ನು ತಿರಸ್ಕರಿಸಬೇಕು, ಅಪ್ಪನನ್ನು ತಿರಸ್ಕರಿಸಬೇಕು, ಅಮ್ಮನ ಸ್ವಾರ್ಥವನ್ನು ಧಿಕ್ಕರಿಸಬೇಕು. ಇನ್ನೂ ಏನೇನೋ ವಿರೋಧಿಸಬೇಕು. ಒಟ್ಟಿನಲ್ಲಿ ತನಗೆ ಬೇಕು ಎಂದು ಮಾಡುವ ಬದಲಿಗೆ ಇನ್ನೊಬ್ಬರು ಹೀಗೆ ಮಾಡಯ್ಯ ಎಂದು ಹೇಳುತ್ತಾರಲ್ಲ ಎಂದಿದ್ದನ್ನು ಮಾಡದೇ ತಾನು ಬೇರೆ ಎಂದು ಸಾಧಿಸಬೇಕು. ನೇತಿ ನೇತಿ ಗತಿ. ಎಲ್ಲ ಸಿಡಿಮಿಡಿಗೂ ಕಾರಣ ಹಟಾತ್ತನೆ ಒದಗಿದ ತಮ್ಮನ ಸಾವಿನ ಸುದ್ದಿ. ಇನ್ನೆರಡು ತಿಂಗಳಲ್ಲಿ ಆಗಬೇಕಿದ್ದ ತನ್ನ ಮದುವೆಗೆ ಊಹಿಸದ ವಿಘ್ನ. ಅಂತರಜಾತೀಯ ವಿವಾಹವಾಗಿ ತಾನು ಹೋದರೆ ತನ್ನ ತಂದೆತಾಯಿಯನ್ನು, ತಂಗಿ ತಮ್ಮನನ್ನು ನೋಡಿಕೊಳ್ಳುವವರು ಇಲ್ಲವಾಗುತ್ತಾರೆ, ಅದರ ಕೆಟ್ಟ ಹೆಸರೂ ತನಗೆ ಎನ್ನುವ ಸಂಕಟವೋ? ಸಾವಿನ ಮುಂದೆ ನಿಂತು ನೋಡಿದಾಗ ಜೀವನ ದೊಡ್ಡದಾಗಿ ಕಾಣಬೇಕು. ಇಲ್ಲಿಯ ಜಾತಿ ಮೊದಲಾದವು  ಕ್ಷುಲ್ಲಕವಾಗಬೇಕು. ತನ್ನ ತಂದೆ ತಾಯಿಗೆ ಆ ದೊಡ್ಡ ಬುದ್ಧಿ ಬರುತ್ತಿಲ್ಲ. ಸತ್ತ ಮಗನ ಸಾವನ್ನು ಮೊದಲು ಸುಲಭವಾಗಿ ಒಪ್ಪಿಕೊಂಡುಬಿಟ್ಟರು. ಈಗ ಅದನ್ನೇ ತನ್ನ ಮದುವೆಗೆ ತಡೆಯಾಗಿ ಬಳಸುತ್ತಿದ್ದಾರೆ ಎನ್ನುವ ಸಿಟ್ಟು. ಒಟ್ಟಿನಲ್ಲಿ ಸಿಟ್ಟು, ರೋಷ, ಸರಳವಾಗಿ ಜನರೊಂದಿಗೆ ಬೇರೆಯಬಾರದು ಎನ್ನುವ ಹಮ್ಮು, ಉಳಿದಂತೆ ಎಲ್ಲದರ ಬಗೆಗೂ ಪ್ರಶ್ನೆ. ಮುಂದೆ ಮಾಡುವುದೇನು? ಎನ್ನುವ ಪ್ರಶ್ನೆಯೊಂದಿಗೆ ಮುಕ್ತಾಯ.

ಇದಕ್ಕಿಂತ ಹೆಚ್ಚಿಗೆ ಬೆಳೆಸಲಿಕ್ಕೆ ಬಹುಷಃ ಅಲ್ಲಿ ಏನೂ ಇರಲಿಲ್ಲ. ರೆಬೆಲ್ ತಾನು ಯಾವುದರ ವಿರುದ್ಧ ರೆಬೆಲ್ ಆಗಿದ್ದಾನೋ ಆ ಪರಿಸ್ಥಿತಿ ಹಾಗೇ ಇರಲಿ ಎಂದು ಬಯಸುತ್ತಾನಂತೆ, ಅದೇ ರೆವಲ್ಯೂಶನರಿ ಪರಿಸ್ಥಿತಿಯನ್ನು ಬದಲಿಸುವದಕ್ಕೋಸ್ಕರ ಪರಿಸ್ಥಿತಿಯನ್ನು ವಿರೋಧಿಸುತ್ತಾನಂತೆ. ಇಲ್ಲಿ ರೆಬೆಲ್ ಆಗಿ ಉಳಿದ ನಾಯಕ ಏನಾದರೂ ಮಾಡುವ ಪ್ರಶ್ನೆ ಬಂದಾಗ ತಟಸ್ಥನಾಗಿಬಿಟ್ಟನೇ? ಅಥವಾ ತೀರ ವೈಯಕ್ತಿಕವಾಯಿತು ಎನ್ನುವ ಕಾರಣಕ್ಕೆ ಮಾಡಬೇಕು ಎನಿಸಿದ್ದನ್ನು ಬರೆಯುವದಕ್ಕೆ ಬೇಕಾದ ಧೈರ್ಯದ ಸಾಲಲಿಲ್ಲವೋ? ಅಥವಾ ಅಲ್ಲಿ ಬರೆಯುವದನ್ನು ನಿಲ್ಲಿಸಿ ಜೀವನದಲ್ಲಿ ರೆವೆಲ್ಯೂಶನರಿ ಆಗುವ ಇಚ್ಚೆಯೋ? ಏನೋ, ಅಂತೂ ಕಾದಂಬರಿಯಂತೂ ಪ್ರಶ್ನೆಯಲ್ಲಿ ಮುಗಿಯಿತು.

ಕಲತ್ರವಸ್ತ್ರಕೃತಾಲಯಂ…

ಸಮುದ್ರ ಮಥನದಲ್ಲಿ ಹುಟ್ಟಿದ ಲಕ್ಷ್ಮಿ ನಾರಾಯಣನನ್ನು ವರಿಸಿದ ಮೇಲೆ ಸಮುದ್ರ ರಾಜನ ಪ್ಲ್ಯಾನ್ ಹೀಗಿತ್ತಂತೆ..

ಉನ್ನತ ನವರತ್ನಮಯವಾದ ಅರಮನೆಯ
ಚೆನ್ನೇಮಗಳಿಂದ ವಿರಚಿಸಿ
ತನ್ನ ಅಳಿಯನಿಗೆ ಸ್ಥಿರವಾಗಿ ಮಾಡಿಕೊಟ್ಟ
ಇನ್ನೊಂದು ಕಡೆಯಡಿ ಇಡದಂತೆ ||

– ಶ್ರೀ ವಾದಿರಾಜರ ಲಕ್ಷ್ಮೀ ಶೋಭನ

ಸಮುದ್ರದಲ್ಲೇ ಮನೆ ಮಾಡಿಕೊಂಡು ಇದ್ದ ಮೇಲೆ ನೋಡಿ ಏನಾಯ್ತಂತೆ..

ಪುರಾಪ್ಯಜೇಯೋ ಮುರಜಿತ್ಕಿಲಾತ್ರ
ಪುರೀಂ ವಿಧಾಯಾಭವದತ್ಯಜೇಯಃ
ಮಮೇತ್ಥಮಾಭಾತಿ ಕಲತ್ರವಸ್ತ್ರಕೃತಾ-
ಲಯಂ ಕಃ ಖಲು ಜೇತುಕಾಮಃ
– ಶ್ರೀ ವಾದಿರಾಜರ ರುಕ್ಮಿಣೀಶ ವಿಜಯ ಅಧ್ಯಾಯ ೧೬, ನುಡಿ ೫೯

(ಮೊದಲೇ ಯಾರಿಂದಲೂ ಜಯಿಸಲಶಕ್ಯನಾದ ಮುರವೈರಿಯಾದ ಕೃಷ್ಣನು ಸಮುದ್ರವನ್ನಾಶ್ರಯಿಸಿ ಇನ್ನೂ ಸುತರಾಂ ಜಯಿಸಲಶಕ್ಯನೇ ಆದನು. ನನಗೆ ಹೀಗೆ ತೋರುತ್ತದೆ, ಯಾರು ಹೆಂಡತಿಯ ಸೀರೆಯಲ್ಲೇ ಅಡಗಿರುತ್ತಾರೆಯೋ ಅವರನ್ನು ಯಾವೋನು ಜಯಿಸಲು ಬಯಸುತ್ತಾನೆ.
[ಭೋದೇವಿಯು ವಿಷ್ಣು ಪತ್ನಿ, ಸಮುದ್ರವು ಭೂ ವಸ್ತ್ರದಂತೆ ಪ್ರಸಿದ್ಧಿಯಿಂದ ವಿನೋದೋಕ್ತಿಯನ್ನು ತೋರಿರುತ್ತಾರೆ])

ಹೀಗೊಂದು ಮದುವೆ ಮಾತುಕತೆ…

ವಧುವಿನ ಕಡೆಯವರು : ಲಗ್ನ ಆದ ಮೇಲೆ ನಮ್ಮ ಹುಡುಗಿಗೆ ನಿಮ್ಮ ಹುಡುಗ ಕಷ್ಟದ ಕೆಲಸಗಳನ್ನ ಹೇಳಬಾರದು. ನಾವು ಒಂದು ಪತ್ರ ಬರೆದು ಹಾಕಿದರೆ ಸಾಕು, ಅದನ್ನ ನೋಡಿದ ತಕ್ಷಣ ಹೆಂಡತಿನ್ನ ತವರು ಮನಿಗೆ ಕಳಿಸಿ ಕೊಡಬೇಕು. ಮತ್ತ ಹಂಗ ಅಂತ ಹೇಳಿ ಇನ್ನೊಬ್ಬಕಿನ್ನ ಲಗ್ನ ಆಗಬಾರದು. ನಮ್ಮ ಹುಡುಗಿನ್ನ ಲಗ್ನ ಆದಕೂಡ್ಲೆ ನಮ್ಮನ್ನೆಲ್ಲ ಮರಿಯೋ ಹಾಗಿಲ್ಲ ಮತ್ತೆ. ನಮ್ಮನ್ನೆಲ್ಲ ನೆನಪಿನಲ್ಲಿಟ್ಟುಕೊಂಡಿರಬೇಕು. ಈ ಎಲ್ಲ ನಿಯಮಕ್ಕ ಒಪ್ಪಿದರಷ್ಟೇ ಕಮಲಮುಖಿಯಾದ ನಮ್ಮ ಹುಡುಗಿ ನಿಮ್ಮ ಹುಡುಗನ್ನ ಲಗ್ನ ಆಗಲಿಕ್ಕೆ ಒಪ್ಪುತ್ತಾಳೆ.

ವರನ ಕಡೆಯವರು : ಹೆಣ್ಣು ಮಗಳು ಲಗ್ನ ಮಾಡಿಕೊಂಡು ಬಂದ ಮೇಲೆ ಗೃಹಸ್ಥರಿಗೆ ಉಚಿತವಾದ ಕೆಲಸಗಳನ್ನಂತೂ ಮಾಡಬೇಕು. ನಮ್ಮ ಹುಡುಗನ ಮನೆ ಹದಿನಾಲ್ಕು ಅಂತಸ್ತಿನದ್ದು. ಮಧ್ಯದಲ್ಲಿ ಸಂಪತ್ತಿನ ಆಗರವಾದ ಬಂಗಾರದ ಪರ್ವತ ಇದೆ. ಅಮೂಲ್ಯ ರತ್ನಗಳ ಆಗರವಾದ ಉಪ್ಪು ನೀರಿನ ಸಮುದ್ರವಿದೆ ನಮ್ಮ ಹುಡುಗನದ್ದು. ಇನ್ನು ಹಾಲು, ಮೊಸರು, ತುಪ್ಪ, ಜೇನು ತುಪ್ಪ, ಅಮೃತದಂಥ ಸಿಹಿನೀರಿನ ಸಮುದ್ರಗಳಿವೆ. ಅವುಗಳ ಮಧ್ಯದಲ್ಲಿ ಬೇಕಾದಷ್ಟು ಜಮೀನು, ಅಲ್ಲಿ ರಾಶಿ ರಾಶಿ ಧಾನ್ಯ, ಮಕ್ಕಳು, ಅವರ ಮನೆಗಳು, ಇದಿಷ್ಟನ್ನ ನಿಮ್ಮ ಹುಡುಗಿ ನೋಡಿಕೊಂಡರೆ ಸಾಕು, ಇನ್ನೇನೂ ಹೆಚ್ಚಿನ ಕೆಲಸ ಹೇಳೋದಿಲ್ಲ. ಇವೆಲ್ಲ ಮನೆ ಕೆಲಸ, ಮನೆ ಯಜಮಾನತಿಯೇ ಮಾಡುವಂಥವು. ಬೇರೆಯವರಿಗೆ ಒಪ್ಪಿಸೋದು ಒಳ್ಳೇದಲ್ಲ.

ವಧುವಿನ ಕಡೆ : ಓ, ನಮ್ಮ ಹುಡುಗಿ ಕೋಮಲಾಂಗಿನೇ ಹೌದಾದರೂ ಈ ಎಲ್ಲ ಕೆಲಸಗಳನ್ನ ತನ್ನ ದೃಷ್ಟಿ ತುದಿ ನೋಟದೊಳಗೆ ಮಾಡಿ ಮುಗಿಸುತ್ತಾಳೆ. ನಿಮ್ಮ ಹುಡುಗ ಮಾತ್ರ ನಮ್ಮ ಹುಡುಗಿನ್ನ ಬಿಟ್ಟು ಎಲ್ಲೂ ಒಬ್ಬೊಬ್ಬನೇ ಹೋಗಬಾರದು. ಏಕಾಂತದಲ್ಲೇ ಇರಲಿ, ಸಭೆಯಲ್ಲೇ ಇರಲಿ, ಯಾವಾಗಲೂ ಜೊತೆಯಲ್ಲೇ ಇರಬೇಕು.  ಸ್ನಾನ, ಅಭ್ಯಂಜನ, ಭೋಜನ, ಮೊದಲಾದ ವಿನೋದದ ಆಟಗಳಲ್ಲಿ ನಮ್ಮ ಹುಡುಗಿಗೆ  ಮೊದಲು ತನ್ನೊಂದಿಗೆ ಸಹಕಾರ ಕೊಡಬೇಕು. ಕ್ಷಣ ತಪ್ಪದೇ ಅವನ ಅಂಗಸಂಗ ಸೌಖ್ಯವಿರಬೇಕು, ಇವಳೇ ಭೋಷಣಳಾಗಿ ಮೈಯಲ್ಲಿ ಸದಾ ಅನೇಕ ರೂಪದಿಂದ ಲಗ್ನಳಾಗಿರುವ ಭಾಗ್ಯವೂ ಇರಬೇಕು. ತುಟಿಗಳಲ್ಲಿರುವ ಅಮೃತವನ್ನು ಸದಾ ಇವಳೇ ಸವಿಯುತ್ತಿರಬೇಕು. ಕೊಳಲು ತುಟಿಗೆ ತಗುಲಿದರೆ ಅದರಲ್ಲೂ ಇವಳೇ ಇರಬೇಕು. ಒಟ್ಟು ಪರಮಾಣುವಷ್ಟು ದೇಶದಲ್ಲಾಗಲೀ ಕಾಲದಲ್ಲಾಗಲೀ ಇವಳನ್ನು ಬಿಟ್ಟಿರಬಾರದು..

ಎಲ್ಲದಕ್ಕೂ ಸೈ ಎಂದು ರುಕ್ಮಿಣಿಯನ್ನು ಕೃಷ್ಣ ಮದುವೆ ಮಾಡಿಕೊಂಡನಂತೆ 🙂

(ಶ್ರೀವಾದಿರಾಜರ ರುಕ್ಮಿಣೀಶ ವಿಜಯದ ೧೫ನೇ ಅಧ್ಯಾಯದಿಂದ ಟೈಪಿಸಿದ್ದು)

ರಾಮನೆಂದರೆ ನೆನಪಾಗುವದು…

ರಾಮನೆಂದರೆ ನೆನಪಾಗುವವು ಪುರಂದರ ದಾಸರ ಶರಣು ಸಕಲೋದ್ಧಾರ ಪದದ ಸಾಲುಗಳು,
ಈ ತಮ್ಮ ಈ ಸೀತೆ ಈ ಬಂಟ ಈ ಭಾಗ್ಯ
ಆವ ದೇವರಿಗುಂಟು ಬ್ರಹ್ಮಾಂಡದೊಳಗೆ

ಹಾಗೂ,

ಭಾವ ಶುದ್ಧಿಯಲಿ ನೆನೆವ ತನ್ನ ಭಕುತರ ಪೊರೆವ
ಪುರಂದರ ವಿಠಲನೇ ಅಯೋಧ್ಯಾ ರಾಮ

ರಾಮನೆಂದರೆ ನೆನಪಾಗುವದು,
ಹಿಂದೆ ಯಾವಾಗಲೋ ತರಂಗದಲ್ಲಿ ಆರ್ ಗಣೇಶ್ ಬರೆದ ರಾಮನ ಬಗೆಗಿನ ಬರಹದಲ್ಲಿ ಉಲ್ಲೇಖಿಸಿದ್ದ, ‘ಸ್ಮಿತಪೂರ್ವಭಾಷಿ’, ‘ಅಕ್ಲಿಷ್ಟ ಕರ್ಮಣಃ’ ಹಾಗೂ ‘ಅಪರಿಗ್ರಹ’. ನಗುಮೊಗದಿಂದ ತಾನೇ ಮೊದಲು ಮಾತನಾಡಿಸುವ, ಯಾವ ಕೆಲಸವನ್ನೇ ಆದರೂ ಹೂವು ಎತ್ತಿಟ್ಟಂತೆ ಸರಳವಾಗಿ ಮಾಡುವ ಅಕ್ಲಿಷ್ಟಕರ್ಮನಾದ ಹಾಗೂ ಎಂದೂ ಪರರ ವಸ್ತುವನ್ನು ಬಯಸದ, ತೆಗೆದುಕೊಳ್ಳದ ಆದರ್ಶ ವ್ಯಕ್ತಿ ರಾಮ.

ರಾಮನೆಂದರೆ ನೆನಪಾಗುವದು,
‘ದಾಸೋಹಂ ಕೋಸಲೇಂದ್ರಸ್ಯ ರಾಮಸ್ಯ ಅಕ್ಲಿಷ್ಟಕರ್ಮಣಃ’ ಎಂದು ಲಂಕೆಯ ಹೆಬ್ಬಾಗಿಲ ಮೇಲೆ ನಿಂತು ಘೋಷಿಸಿದ ಹನುಮಂತನ ಮಾತು. ಹರಿದಾಸರುಗಳಿಗೆ ಹಾದಿ ತೋರಿದ ಮಾತು.

ರಾಮನೆಂದರೆ ನೆನಪಾಗುವದು ಶ್ರೀ ಮಧ್ವಾಚಾರ್ಯರ ದ್ವಾದಶಸ್ತೋತ್ರದ ‘ವಂದೇ ವಂದ್ಯಮ್ ಸದಾನಂದಮ್’ ಸ್ತುತಿಯ ರಾಮ ಸ್ಮರಣೆ,
ಸ್ಮರಾಮಿ ಭವ ಸಂತಾಪ ಹಾನಿದಾಮೃತಸಾಗರಮ್
ಪೋರ್ಣಾನಂದಸ್ಯ ರಾಮಸ್ಯ ಸಾನುರಾಗವಲೋಕನಮ್

ರಾಮನೆಂದರೆ ನೆನಪಾಗುವದು,
ಶ್ರೀ ವಾದಿರಾಜರ ಲಕ್ಷ್ಮೀ ಶೋಭನ ಪದದಲ್ಲಿ ಹರಿಯ ಸರ್ವೋತ್ತಮತ್ವವನ್ನು ಸಿದ್ಧಪಡಿಸಿ, ಅವನೇ ತನಗೆ ಅನುರೂಪನಾದ ವರ ಎಂದು ನಿರ್ಧರಿಸಿದ ಲಕ್ಷ್ಮಿ ಅಜಿತ ನಾಮಕ ಹರಿಯ ಬಳಿಗೆ ಹೋಗಿ ಅವನ ಕೊರಳಿಗೆ ಮಾಲೆ ಹಾಕುವುದನ್ನು ಹೇಳುವ ಸಂದರ್ಭದಲ್ಲಿ ಬಳಸಿದ ಪದ್ಯ,

ಇಂತು ಚಿಂತಿಸಿ ರಮೆ ಸಂತ ರಾಮನ ಪದವ
ಸಂತೋಷ ಮನದಿ ನೆನೆವುತ್ತ
ಸಂತೋಷ ಮನದಿ ನೆನೆವುತ್ತ ತನ್ನ ಶ್ರೀ
ಕಾಂತನಿದ್ದೆಡೆಗೆ ನಡೆದಳು ||

ಲಕ್ಷ್ಮಿಗೆ ಅನುರೂಪನಾದವನು ನಾರಾಯಣನಾದರೆ ಅವನಿಗೆ ಅನುರೂಪಳಾದವಳು ಲಕ್ಷ್ಮಿಯೋಬ್ಬಳೇ ಎಂಬುದನ್ನು ಸೋಚಿಸುವದಕ್ಕೇನೇ ಅಲ್ಲಿ ‘ನಿನ್ನನ್ನು ಬಿಟ್ಟು ಇನ್ನೊಬ್ಬಳನ್ನು ಕಣ್ಣೆತ್ತಿಯೂ ನೋಡುವುದಿಲ್ಲ’ ಎಂದು ಸೀತೆಗೆ ಮಾತು ಕೊಟ್ಟ ‘ಸಂತ ರಾಮನ’ ಮೂಲಕ  ಸೀತಾ ರಾಮರನ್ನು ಸೂಚಿರುವರು ಎಂದು ನನಗನಿಸುತ್ತದೆ.

ರಾಮನೆಂದರೆ ನೆನಪಾಗುವದು ರಾಮ ರಕ್ಷಾ ಸ್ತೋತ್ರದ ನುಡಿ,
ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇ ತು ಜನಕಾತ್ಮಜಾ
ಪುರತೋ ಮಾರುತೀರ್ಯಸ್ಯ ತಂ ವಂದೇ ರಘುನಂದನಂ

ರಾಮನೆಂದರೆ, ವಿಶೇಷವಾಗಿ ರಾಮನವಮಿಯೆಂದರೆ ನೆನಪಾಗುವ ಇನ್ನೊಂದು ಹಾಡು ಕನಕದಾಸರು ರಚಿಸಿದ,  “ಅಂಗಳದೊಳು ರಾಮನಾಡಿದ ಚಂದ್ರ ಬೇಕೆಂದು ತಾ ಹಟ ಮಾಡಿದಾ”..

ರಾಮನವಮಿಯೆಂದರೆ ನೆನಪಾಗುವದು ಅಡಿಗರ ಹುತ್ತಗಟ್ಟಿದ ಚಿತ್ತ ಕೆತ್ತಿದ ಪುರುಷೋತ್ತಮನ ಚಿತ್ರ, ಪಾನಕ ಪನಿವಾರಗಳೊಂದಿಗೆ ಬೆಂಕಿಯುಗುಳುವ ರಾಕೆಟ್ಟು, ಸುಟ್ಟಲ್ಲದೇ ಮುಟ್ಟೆನೆಂಬ ಉಡಾಫೆಯೆನ್ನುವ ರಾಮನವಮಿಯ ದಿವಸಕ್ಕೆ ಕವನವೂ ಕೂಡ.

    *****

ಇತ್ತೀಚೆಗಷ್ಟೇ ಅಷ್ಟಿಷ್ಟು ಕಲಿತಿರುವ ಮಲ್ಲಿಕಾ ಮಾಲೆಯೆಂಬ ಅಕ್ಷರ ವೃತ್ತದಲ್ಲಿ ರಾಮನ ಬಗ್ಗೆ ನೆನಪಿಗೆ ಬರುವ ಕೆಲವು ಮಾತುಗಳನ್ನು ಬಳಸಿ ನಾಲ್ಕು ಸಾಲುಗಳನ್ನು ರಚಿಸಬೇಕು ಅನಿಸಿ ಪ್ರಯತ್ನಿಸಿದಾಗ ಬಂದವು ಈ ಕೆಳಗಿನ ಸಾಲುಗಳು. ಶ್ರೀ ರಾಮಚಂದ್ರನಿಗೆ ಅರ್ಪಿತವು. ರಾಮನವಮಿಯ ಶುಭಾಶಯಗಳು ಎಲ್ಲರಿಗೂ.

ರಾಮಚಂದ್ರನೆ ಚೆಲ್ವ ಮೂರ್ತಿಯೆ ಪಾದ ಪದ್ಮಕೆ ವಂದಿಪೆ
ರಾಮ ನಿನ್ನಯ ನಾಮ ಪೇಳುವೆ ಭಾವ ಶುದ್ಧಿಯ ಬೇಡುವೆ

ರಾಮ ಹೇ ಭವ ತಾಪಹಾರಿಯೆ ಹೇ ಸುಧಾಂಬುಧಿ ದೇವನೇ
ಪ್ರೇಮದಿಂದಲಿ ನೋಡಿ ಕಾಯುವ ಮೊದ ಪೂರ್ಣನೆ ವಂದಿಪೆ

ದುಷ್ಟ ರಾವಣನಂತ್ಯ ಕಾರಣ ವಾಲಿ ಭಂಜನ ದೇವನೇ
ಕ್ಲಿಷ್ಟ ಕಾರ್ಯಗಳೆಲ್ಲ ಮೀರಿದ ಮಂದಹಾಸನೆ ಸಂತನೇ

ನೋಡಿ ಲಕ್ಷ್ಮಣ ರಾಮ ಸೀತೆಯ ಮುಂದೆ ಮಾರುತಿ ಮೂರುತೀ
ಪಾಡಿ ನಾಮದ ಮಾಲೆ ಮಲ್ಲಿಕೆ ರಾಮ ನಿನ್ನನು ಪೂಜಿಪೇ

(*ಸೊದೆ: ಅಮೃತ – ಮಧ್ವಾಚಾರ್ಯರ ‘ಶ್ರೀ  ಕೃಷ್ಣಾಮೃತ ಮಹಾರ್ಣವ’ ಗ್ರಂಥದ ಕನ್ನಡ ಅವತರಣಿಕೆಗೆ ಬನ್ನಂಜೆ ಗೋವಿಂದಾಚಾರ್ಯರು ಇಟ್ಟಿರುವ ಹೆಸರು ‘ಕೃಷ್ಣನೆಂಬ ಸೊದೆಯ ಕಡಲು’ ಅದರ ನೆನಪಿನಿಂದ ಸೊದೆಯನ್ನು ಅಮೃತವೆಂದು ಬಳಸಿರುವೆ )

(ಮಲ್ಲಿಕಾಮಾಲೆಯಲ್ಲಿನ ಈ ಪ್ರಯತ್ನದಲ್ಲಿ ಕೆಲವು ತಪ್ಪುಗಳಾಗಿವೆ. ಅಮೃತಕ್ಕೆ ಸೊದೆ ಎನ್ನುವರು, ಸೋದೆಯಲ್ಲ. ಬನ್ನಂಜೆಯವರು ಇತ್ತ ಹೆಸರನ್ನು ನೆನಪಿದೆ ಎಂದುಕೊಂಡು  ಶಬ್ದವನ್ನು ಬಳಸಿದ್ದು ನನ್ನ ತಪ್ಪು. ಅದು ಸೊದೆಯಾದದ್ದಕ್ಕೆ ಅಲ್ಲಿ ಇರಬೇಕಾದ ಗುರು ತಪ್ಪಿದೆ. ‘ರಾಮ ನೀ ಭವ ತಾಪಹಾರಿಯೆ ಸೊದೆ*ಯಂಬುಧಿ ದೇವನೇ’ – ಇದನ್ನು ಈಗ ತಿದ್ದಲಾಗಿದೆ. ಅದೇ ರೀತಿ ಪಾದಾಂತ್ಯದ ಕೊನೆಯ ಗುರುವೂ ಬಹಳಷ್ಟು ಕಡೆ ತಪ್ಪಿದೆ. ಈ ಎಲ್ಲ ತಿದ್ದುಪಡಿ ಸೂಚಿಸಿದ ಜಿವೆಂ ಅವರಿಗೆ ವಂದನೆಗಳು. ‘ಅಂಗಳದೊಳು ರಾಮನಾಡಿದ’ ಹಾಡು ಪುರಂದರ ದಾಸರದ್ದು ಎಂದು ಬರೆದಿದ್ದೆ ಮೊದಲು, ಆದರೆ ಅದು ಕನಕದಾಸರ ಹಾಡು. ಹಾಡಿನ ಮೊದಲ ಭಾಗವನ್ನಷ್ಟೇ ನೆನಪಿನಲ್ಲಿಟ್ಟುಕೊಂಡದ್ದರ ಪರಿಣಾಮ. ಇವತ್ತು ಅದೇ ಹಾಡನ್ನು ಕೇಳುವಾಗ   ‘ಈ ಸಂಭ್ರಮ ನೋಡಿ ಆದಿ ಕೇಶವ ರಘು ವಂಶವನ್ನೇ ಕೊಂಡಾಡಿದ’ ಬಂದ ಕೂಡಲೇ ತಪ್ಪಿನರಿವಾಯಿತು. ಇಲ್ಲಿ ಈಗ ತಿದ್ದುಪಡಿ ಮಾಡಿದೆ.)

 

ಸಂಸಾರ ಪಾಶವ ನೀ ಬಿಡಿಸಯ್ಯ…

ಸಂಸಾರ ಪಾಶವ ನೀ ಬಿಡಿಸಯ್ಯ
ಕಂಸಾರಿ ಪುರಂದರವಿಠ್ಠಲರಾಯ

ಹ್ಯಾಂಗೆ ಬರೆದಿತ್ತೋ ಪ್ರಾಚೀನದಲ್ಲಿ… ಎಂದು ಆರಂಭವಾಗುವ ಪುರಂದರದಾಸರ ಪದದಲ್ಲಿ ಕೊನೆಗೆ “ಸಂಸಾರ ಪಾಶವನ್ನು ಕಂಸಾರಿಯಾದ ನೀನು ಬಿಡಿಸಯ್ಯ” ಎಂದು ಕಂಸಾರಿಯನ್ನೇ ನೆನೆದದ್ದು ಯಾಕೆ? ಕೃಷ್ಣನ, ಹರಿಯ ಇನ್ಯಾವುದೇ ರೂಪವನ್ನು ನೆನೆಯುವ ಬದಲು ಕಂಸಾರಿಯಾಗಿಯೇ ಯಾಕೆ ನೆನೆದರು ಎಂಬ ಪ್ರಶ್ನೆ ಹಿಂದೊಮ್ಮೆ ಬಂದದ್ದು, ಅದರ ಬಗ್ಗೆ ಒಂದಷ್ಟು ಬರೆದದ್ದು ಇಲ್ಲಿವೆ. ಅಲ್ಲಿ ಉಲ್ಲೇಖಿಸದೇ ಇದ್ದ ಇನ್ನೊಂದು ಅಂಶವೆಂದರೆ ‘ಶ್ರೀ ಕೃಷ್ಣಾಷ್ಟೋತ್ತರ ಶತನಾಮಾವಳಿ’ಯಲ್ಲಿಯೂ ‘ಸಂಸಾರವೈರಿ ಕಂಸಾರಿ ಮುರಾರಿರ್ನರಕಾಂತಕಃ’ ಎಂದು ಬರುತ್ತದೆ. ದಾಸರು ಅದನ್ನೇ ತಮ್ಮ ಪದದಲ್ಲೂ ಬಳಸಿದರೆ ಎಂಬ ವಿಚಾರವೂ ಬಂದಿತ್ತು.

ಶ್ರೀ ಸತ್ಯಾತ್ಮತೀರ್ಥರ ಶ್ರೀಮದ್ಭಾಗವತ ಪ್ರವಚನ ಮಾಲಿಕೆಯ ಸಿ.ಡಿ.ಯನ್ನು ಕೇಳುತ್ತಿದ್ದಾಗ ನನಗೆ ಗೊತ್ತಿಲ್ಲದ ಹೊಸ ವಿಷಯ ತಿಳಿಯಿತು. ಕೃಷ್ಣನಿಂದ ಹತನಾದ ಕಂಸ ಅಸುರನಾದ ಕಾಲನೇಮಿಯಂತೆ. ಈ ಕಾಲನೇಮಿ ಕಾಮಕ್ಕೆ ಅಭಿಮಾನಿಯಾದ ಅಸುರನಂತೆ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ಅನಿಸಿದ್ದು, ‘ಧರ್ಮಾsವಿರುದ್ಧೋ ಕಾಮೋsಸ್ಮಿ’ (ಧರ್ಮಕ್ಕೆ ವಿರೋಧವಾಗಿಲ್ಲದ ಕಾಮವು ನಾನು) ಎಂದು ಗೀತೆಯಲ್ಲಿ ಹೇಳುವ ಕೃಷ್ಣ, ಧರ್ಮಕ್ಕೆ ವಿರುದ್ಧವಾದ ಕಾಮವೆಲ್ಲದರ ಅಭಿಮಾನಿಯಾದ ಕಂಸರೂಪಿ ಕಾಲನೇಮಿಯನ್ನು ಕೊಂದ. ನಮ್ಮನ್ನು ಮತ್ತೆ ಮತ್ತೆ ಸಂಸಾರದಲ್ಲಿ ಕೆಡವುವ ಕಾಮದಿಂದ ಪಾರುಮಾಡಿ, ಧರ್ಮಾsವಿರುದ್ಧ ಕಾಮವೆನಿಸುವ ಮುಕ್ತಿಯನ್ನು ಬಯಸಿದಾಗ ಕಂಸಾರಿಯನ್ನೇ ನೆನೆಯಬೇಕಲ್ಲವೆ? ಉನ್ನತಿಯನ್ನೀಯುವ ಕಾಮನೆಗಳು ಧರ್ಮ ವಿರೋಧಿಯಾಗಿರುವದಿಲ್ಲ. ನಿಕೃಷ್ಟವಾದ ಕಾಮನೆಗಳನ್ನು ದಮನ ಮಾಡಿ, ಉನ್ನತಿಯನ್ನು ಸಾಧಿಸುವ ಕಾಮನೆಯ ಪೂರ್ತಿಗಾಗಿ ಕಂಸಾರಿಯನ್ನು ನೆನೆಸಿದ್ದಾರೆ ಪುರಂದರ ದಾಸರು*.

ಅದೇ ಪ್ರವಚನದಲ್ಲಿ ಶ್ರೀಸತ್ಯಾತ್ಮತೀರ್ಥರು ಹೇಳಿದ ಈ ಇನ್ನೊಂದು ಶ್ಲೋಕ, “ಸರಿಯಾದ ಜ್ಞಾನವಿರುವಲ್ಲಿ ಶರಣಾಗಬೇಕು, ಆ ಜ್ಞಾನದಲ್ಲಿ ಸುದೃಢವಾದ ನಂಬಿಕೆಯನ್ನಿಡಬೇಕು, ಆ ನಂಬಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಿರಬೇಕು, ನಂಬಿಕೆ ಅಲುಗಾಡುವಂತಹ ಸಂದರ್ಭ ಬಂದರೆ ತಿಳಿದವರನ್ನು ವಿಚಾರಿಸಿ, ತಿಳಿದುಕೊಂಡದ್ದನ್ನೂ ಮತ್ತು ಅದರ ಬಗೆಗಿನ ನಂಬಿಕೆಗಳನ್ನೂ ಮತ್ತೆ ಜಿತಮಾಡಿಕೊಳ್ಳುತ್ತ ಆಯಾ ಸಂದರ್ಭದ ಸಮನ್ವಯವನ್ನು ಸಾಧಿಸಿಕೊಳ್ಳಬೇಕು” ಎಂದು ಹೇಳಿದ ವೈದ್ಯರ ಮಾತು** ನೆನಪಾಯಿತು, ಮತ್ತೆ ಗಟ್ಟಿಯಾಗಿ ಮನಸ್ಸಿನಲ್ಲಿ ಉಳಿಯಿತು.

ಅದೃಢಂಚ ಹತಂ ಜ್ಞಾನಂ
ಪ್ರಮಾದೇನ ಹತಂ ಶ್ರತಂ
ಸಂದಿಗ್ಧೋಹಿ ಹತಂ ಮಂತ್ರಃ
ವ್ಯಗ್ರಚಿತ್ತೋ ಹತಂ ಜಪಃ

(ಗಟ್ಟಿಗೊಳ್ಳದಿರಲಳಿವುದು ಅರಿವು
ಎಚ್ಚರಗೇಡಿಗುಳಿಯದು ಕೇಳಿದುದು
ಇಬ್ಬಂದಿತನದಲಳಿಯುವುದು ಮಂತ್ರ
ಕಳವಳದ ಮನ ಕಳೆಯುವುದು ಜಪವ)

ಎಲ್ಲವನ್ನೂ ದೇವರ ಪರವಾಗಿ, ಆನಂದತೀರ್ಥರ ತತ್ವವಾದದ ಅರಿವಿನ ಮೂಲಕ ಹರಿ ಪರವಾಗಿ ಸಮನ್ವಯ ಮಾಡಿಕೊಳ್ಳುವದು ಹೇಗೆ ಎನ್ನುವದನ್ನು ನೋಡಬೇಕೆಂದರೆ ಶ್ರೀ ವಾದಿರಾಜರ ‘ಶ್ರೀ ರುಕ್ಮಿಣೀಶ ವಿಜಯ’ ಕೃತಿಯನ್ನು ಮನನ ಮಾಡಬೇಕು ಅಂತ ನನಗನಿಸುತ್ತದೆ. ಇತ್ತೀಚೆಗಷ್ಟೇ ಓದಲು ಶುರು ಮಾಡಿದ ಈ ಕೃತಿಯಲ್ಲಿ ಇನ್ನೂ ಓದಲು ಬಹಳಷ್ಟು ಸರ್ಗಗಳಿವೆ. ಅದರಲ್ಲಿ ಕಂಡುಬರುವ ವಿಷಯ ನಿರೂಪಣೆ, ಕವಿತಾ ಚಾತುರ್ಯ, ಪದಲಾಲಿತ್ಯ, ಬಳಸಿದ ಅಲಂಕಾರಗಳು, ಉತ್ಪ್ರೇಕ್ಷೆಗಳು, ಎಲ್ಲವೂ ಆ ಕೃತಿಯ ಆರಾಧ್ಯ ಮೂರುತಿ ಶ್ರೀ ಕೃಷ್ಣನಲ್ಲೇ ನೆಲೆಯಾಗಿವೆ, ಅವನನ್ನೇ ಆರಾಧಿಸುತ್ತವೆ.

ಟಿಪ್ಪಣಿ  :

* ಬರೆದಾದ ಮೇಲೆ ಇದನ್ನು ವೈದ್ಯರಿಗೆ ಕಳುಹಿಸಿದಾಗ ಅವರು ಸೂಚಿಸಿದ conclusion ಇದು. ಇದರ ಜೊತೆಗೆ ತಮ್ಮ ತಾತನವರು ಹೇಳಿಕೊಳ್ಳುತ್ತಿದ್ದ ಪ್ರಾಣೇಶದಾಸರ ಪದ ‘ಪಾಲಿಸೊ ವೇಂಕಟರೇಯ’ ಎನ್ನುವದರಲ್ಲಿ ‘ಜಾಂಬವತಿನಲ್ಲ’ ಎಂದು ಬರುತ್ತದೆ ಎಂದು ತಿಳಿಸಿದರು. ಅಲ್ಲಿ ‘ಜಾಂಬವತೀನಲ್ಲ’ನೇ ಯಾಕೆ ಬಂದ ಎಂದರೆ ಜಾಂಬವತಿಗೇ ಮೊದಲು ಭಾಗವತವನ್ನು ಉಪದೇಶಿಸಿದ್ದು ಎಂದು ತಿಳಿಸಿದರು. ದಾಸರು ಪದಗಳಲ್ಲಿ ಯಾವುದನ್ನೂ ಸುಮ್ಮ ಸುಮ್ಮನೆ ಹಾಕುವದಿಲ್ಲ, ಶಾಸ್ತ್ರ ಗ್ರಂಥಗಳಲ್ಲಿ, ಇತಿಹಾಸ ಪುರಾಣಗಳಲ್ಲಿ ಉಲ್ಲೇಖಿತವಾದ ವಿಶಿಷ್ಠ ಸಂದರ್ಭಗಳನ್ನ, ದೇವರ ಹೆಸರುಗಳನ್ನ ಸಂದರ್ಭೋಚಿತವಾಗಿ ತಮ್ಮ ಪದಗಳಲ್ಲಿ ಬಳಸಿರುತ್ತಾರೆ. ನಾವು ಜಿಜ್ಞಾಸುಗಳಾಗಿ ವಿಚಾರಿಸಿದಾಗ ಅವುಗಳ ವಿಷಯ ತಿಳಿದರೆ ಖುಷಿಯಾಗುತ್ತದೆ, ದಾಸರ ವಿಸ್ತಾರ ಅರಿವಿನ ಬಗ್ಗೆ, ಆ ಅರಿವನ್ನು ಕನ್ನಡದ ನಾಮಗಳಲ್ಲಿ ಅಡಕವಾಗಿಡುವ ಬಗ್ಗೆ ಮತ್ತಷ್ಟು ಗೌರವ ಮೂಡುತ್ತದೆ.

** ವೈದ್ಯರು ಅವತ್ತು ಹೇಳಿದ ಮಾತಿನ ಯಥಾರ್ಥ ಶಬ್ದಗಳು/ವಾಕ್ಯಗಳು ಇವೇ ಇರಲಿಕ್ಕಿಲ್ಲ. ಆದರೆ ನನ್ನ ನೆನಪಿನಲ್ಲಿ ಉಳಿದ ಆ ಮಾತಿನ ಸಂದೇಶವನ್ನು ಸಂಗ್ರಹವಾಗಿ ಬರೆಯಬೇಕು ಅನಿಸಿದಾಗ ಅವು  ಬಂದದ್ದು ಈ  ರೂಪದಲ್ಲಿ. ಅದಕ್ಕಾಗಿ quote ಹಾಕಿರುವೆ! )

ಇದನ್ನು ಬರೆದು ಪೋಸ್ಟಿಸಿ ಆದ ಬಳಿಕ ಕೇಳಿದ ಶ್ರೀ ಸತ್ಯಾತ್ಮ ತೀರ್ಥರ ಪ್ರವಚನದಲ್ಲಿ ಇನ್ನೊಂದು ವಿಷಯ ತಿಳಿಯಿತು. ವ್ಯಾಸ, ಹಯಗ್ರೀವ ರೂಪಗಳು ಜ್ಞಾನ ಹುಟ್ಟಿಸುವ (ಜ್ಞಾನ ಕೊಡುವ) ರೂಪಗಳಂತೆ. ಪರಶುರಾಮ ರೂಪವು ಜ್ಞಾನವನ್ನು ರಕ್ಷಿಸುವ, ಕಾಪಿಡುವ ರೂಪವಾದರೆ ಕೃಷ್ಣ ರೂಪವು ಜ್ಞಾನಕ್ಕೆ ಬರುವ ವಿಘ್ನಗಳನ್ನು ಸಂಕಷ್ಟಗಳನ್ನು ದೂರಗೊಳಿಸುವ ರೂಪವಂತೆ. ಸಂಸಾರ ಪಾಶವನ್ನು ನೀಗಲು ಕಂಸಾರಿಯನ್ನು ನೆನೆ ಎಂದದ್ದಕ್ಕೆ ಇದೂ ಒಂದು ಕಾರಣವೆನಿಸುತ್ತದೆ ನನಗೆ.