ಗರುಡಗಂಬದಲಿ ಕುಣಿದು ಹಾಡಿದರು ನೀವು ಬರುವಿರೆಂದು

ಗರುಡಗಂಬದಲಿ ಕುಣಿದು ಹಾಡಿದರು ನೀವು ಬರುವಿರೆಂದು
ಶ್ರೀ ವಿಷ್ಣುತತ್ವಸುಧೆ ಸ್ವರ್ಣ ಕಲಶದಲಿ ತುಂಬಿ ತರುವಿರೆಂದು

ಕಡಲ ಹಾರಿ ಪರ್ವತವ ತೂರಿ ದಾನವರ ಕುಲವ ಹುರಿದು
ಶ್ರೀರಾಮಚಂದ್ರ ಶುಭನಾಮ ವಚನ ಮೈಥಿಲಿ ಮಾತೆಗೊರೆದು
ಬಂದನಂಜನಾನಂದತೀರ್ಥ ಪವಮಾನ ದೀನ ಬಂಧು

ಗರುಡಗಂಬದಲಿ ಕುಣಿದು ಹಾಡಿದರು ನೀವು ಬರುವಿರೆಂದು

ಸೋಮ ವಂಶದೊಳಗುದಿಸಿ ಬಂದ ಶ್ರೀ ಭೀಮಸೇನನೆಂದು
ಬಕ ಹಿಡಿಂಬ ಕಿಮ್ಮೀರ ಕೀಚಕರನೆಲ್ಲ ಸವರಿ ಕೊಂದು
ಶ್ರೀಮುಕುಂದ ಗೋವಿಂದ ಭಕ್ತ ಪವಮಾನ ದೀನ ಬಂಧು

ಗರುಡಗಂಬದಲಿ ಕುಣಿದು ಹಾಡಿದರು ನೀವು ಬರುವಿರೆಂದು

ಕೌಲ ವೃಕ್ಷ ಕೈದಂಡ ಮೊಳೆಸಿ ಆನಂದತೀರ್ಥರೆಂದು
ನದಿಯ ದಾಟಿ ಶ್ರೀ ಬದರಿಕಾಶ್ರಮಕೆ ಶಿಷ್ಯರಾಗಿ ಬಂದು
ಪರಿವ್ರಾಜಕಾಚಾರ್ಯ ಮಧ್ವ ಪವಮಾನ ದೀನ ಬಂಧು

ಇರಳು ಪಯಣದಲಿ ದಾರಿ ಅರಸಿರಲು ಜೀವಕುಲವು ನೊಂದು
ತತ್ವರಥಕೆ ಸಪ್ತಶ್ವ ಹೂಡಿ ಮನುಕುಲಕೆ ಮೂಡಿ ಬಂದು
ಜಗವ ಬೆಳಗಿದನು ಜ್ಞಾನಸೂರ್ಯ ಪವಮಾನ ದೀನಬಂಧು

ವಿಷವ್ಯೂಹದಲಿ ಬದುಕಬಹುದು ಕುಡಿದೊಂದೇ ಅಮೃತ ಬಿಂದು
ಗರುಡಗಂಬದಲಿ ಕುಣಿದು ಹಾಡಿದರು ನೀವು ಬರುವಿರೆಂದು
ಶ್ರೀ ವಿಷ್ಣುತತ್ವಸುಧೆ ಸ್ವರ್ಣ ಕಲಶದಲಿ ತುಂಬಿ ತರುವಿರೆಂದು

(ನಮ್ಮ ದೊಡ್ಡಮ್ಮ ಸಣ್ಣಕಿ ಇದ್ದಾಗ ಕಲಿತಿದ್ದ ಹಾಡಂತೆ ಇದು. ಇವತ್ತು ಮಧ್ವನವಮಿಗೆ ಅತ್ಯಂತ ಸೂಕ್ತವಾದ ಹಾಡು. ತಾನು ಹಾಡಿ ನಮಗೆ ಕೇಳಿಸಿದಳು. ಸುಮಧ್ವವಿಜಯದಲ್ಲಿ ಹೇಳಿದ ಕೆಲವು ವಿಷಯಗಳನ್ನು ಎಷ್ಟು ಚನ್ನಾಗಿ ಸ್ಮರಣೆ ಮಾಡುತ್ತಾರೆ ಇದರಲ್ಲಿ! ಬಹಳ ಇಷ್ಟವಾಯಿತು. ಯಾರು ಬರೆದದ್ದೋ ಗೊತ್ತಿಲ್ಲ ದೊಡ್ಡಮ್ಮನಿಗೆ. ಹಾಡಿನಲ್ಲಿ ಅಂಕಿತ ಅಥವಾ ಮುದ್ರಿಕೆಯೂ ಇದ್ದಂತಿಲ್ಲ.)

Advertisements

Couple of translations

Haven’t written anything in these pages in a long long time. On a whim re-translated these two English poems. Here you go,

1. Where the mind is without fear by Rabindranath Tagore

Where the mind is without fear and the head is held high;
Where knowledge is free;
Where the world has not been broken up into fragments by narrow domestic walls;
Where words come out from the depth of truth;
Where tireless striving stretches its arms towards perfection;
Where the clear stream of reason has not lost its way into the dreary desert sand of dead habit;
Where the mind is led forward by thee into ever-widening thought and action …
Into that heaven of freedom, my father, let my country awake.

ಎಲ್ಲಿ ಬುದ್ಧಿಗಿಲ್ಲವೊ ಭಯವು ಎಲ್ಲಿ ತಲೆ ಎತ್ತಿ ಇರುವಲ್ಲಿ;
ಎಲ್ಲಿ ಅರಿವಿಗಿಲ್ಲವೊ ಬೇಲಿ;
ಎಲ್ಲಿ ಜಗ ಒಡೆದಿಲ್ಲವೊ ಮನೆ ಮನೆಯ ಕಿರು ಗೋಡೆಗಳ ನಡುವೆ;
ಎಲ್ಲಿ ನುಡಿಯು ಹೊರಡುವುದೊ ನನ್ನಿಯ ನಡುವಿಂದ;
ಎಲ್ಲಿ ದಣಿಯದ ದುಡಿತ ಕೈ ಚಾಽಽಚುವುದೊ ಕೈವಲ್ಯದೆಡೆಗೆ;
ಎಲ್ಲಿ ತಿಳಿವಿನ ತೊರೆ ಕಳೆದಿಲ್ಲವೊ ಒಣ ರೂಢಿಗಳ ಮರಳುಗಾಡಿನಲ್ಲಿ;
ಎಲ್ಲಿ ಬುದ್ಧಿಯನು ಮುನ್ನಡೆಸುವೆಯೊ ನೀ ಸತತ ಬೆಳೆಯುವ ಭಾವದಲಿ ನಡೆಯಲ್ಲಿ;
ಅಲ್ಲಿ, ಆ ಸ್ವಾತಂತ್ರ್ಯದ ಸ್ವರ್ಗದಲ್ಲಿ, ತಂದೇ, ನನ್ನ ದೇಶವು ಏಳಲೇಳಲಿ.

2. A DEDICATION TO MY WIFE by T.S. Eliot

To whom I owe the leaping delight
That quickens my senses in our wakingtime
And the rhythm that governs the repose of our sleepingtime,
the breathing in unison.
Of lovers whose bodies smell of each other
Who think the same thoughts without need of speech,
And babble the same speech without need of meaning…

No peevish winter wind shall chill
No sullen tropic sun shall wither
The roses in the rose-garden which is ours and ours only

But this dedication is for others to read:
These are private words addressed to you in public

ಋಣಿ ನಾನವಳಿಗೆ,
ನಮ್ಮ ಎಚ್ಚರದಲೆನ್ನ ಕರಣಗಳನುತ್ತೇಜಿಸುವ
ನನ್ನಲ್ಲಿ ಪುಟಿಯುವಾನಂದದ ಸೆಲೆಗಾಗಿ
ನಮ್ಮ ಶಾಂತ ನಿದ್ರೆಯನು ಕಾಪಿಡುವ
ಉಸಿರಾಟಗಳ ಏಕ ಲಯಕ್ಕಾಗಿ

ಪ್ರೇಮಿಗಳು ನಾವ್ಸೂಸುವ ಪರಸ್ಪರ ಮೈ ಕಂಪಿಗಾಗಿ
ಆಡದೆಯೂ ಆಲೋಚನೆಗಳು ಅವೇ ಆಗುವ ಪರಿಗಾಗಿ,
ಅಂತೆ, ಅರ್ಥಗಳ ಹಂಗಿಲ್ಲದ ಅವೇ ಮಾತುಗಳಿಗಾಗಿ…

ಬಿರು ಚಳಿಯ ಗಾಳಿ ಶೋಷಿಸಲಾಗದ
ಉರಿ ಬಿಸಿಲ ಸೂರ್ಯ ಬಾಡಿಸಲಾಗದ
ಗುಲಾಬಿ ಹೂವುಗಳ ತೋಟ ನಮ್ಮದು; ಕೇವಲ ನಮ್ಮದು

ಆದರೀ ಅರ್ಪಣೆಯು ಪರರ ಓದಿಗಾಗಿ:
ಎದೆಯ ಮಾತುಗಳಿವು ನಿನಗೆ ಹೇಳಿದವು ಎಲ್ಲರೆದುರಿನಲ್ಲಿ

ನಮನ

 

ಅಮ್ಮ ತಾಯಿ ಆಯಿ ಅವ್ವ

ಜನ್ಮದಾತ್ರಿ ಜನನಿ ಮಾತೆ

ನಿಮ್ಮ ಪ್ರೀತಿ ಹೊನಲಿನಲ್ಲಿ

ನಮ್ಮ ಬಾಳು ಹಸನು ಮಾಡಿ

 

ಅಪ್ಪನೊಡನೆ ಕಂಡ ಕನಸ

ಒಪ್ಪವಾಗಿ ನನಸಗೊಳಿಸೆ

ಅಮ್ಮ ನೀವು ಹಗಲು ಇರುಳು

ನಿಮ್ಮ ನೀವು ತೇಯ್ದುಕೊಂಡು

 

ಗಟ್ಟಿ ಮನದಿ ಕಷ್ಟ ಮೆಟ್ಟಿ

ದಿಟ್ಟ ತನದ ಬಟ್ಟೆ ತೋರಿ

ಕೆಟ್ಟ ಕಣ್ಣು ತಾಗದಂತೆ

ದಿಟ್ಟಿ ಬೊಟ್ಟಿನಂತೆ ಕಾದು

 

ಬಾಳು ಬೆಳೆಸಿದವ್ವ, ಮೇಲ್ಮೆ

ತಿಳಿಸಿದವ್ವ, ತಾಳ್ಮೆಯಿಂದ

ಬೇಳ್ವೆ ನಡೆಸಿ, ಹರಿಯ ಗುರುವ

ಒಲಿಸಿಕೊಂಬ ಹಾದಿ ತಿಳಿಸಿ

 

ನಗುತ ಮುಗಿಲಿನಂತೆ ಹಬ್ಬಿ

ಬಗೆಯ ತುಂಬಿ ನಿಂತೆಯಮ್ಮ

ಏನ ಕೊಡಲಿ ತಾಯೆ ನಿನಗೆ?

ಏನ ಹೇಳಲಮ್ಮ ನಿನಗೆ?

 

ಅಮ್ಮ ತಾಯಿ ಆಯಿ ಅವ್ವ

ಜನ್ಮದಾತ್ರಿ ಜನನಿ ಮಾತೆ

ನಿಮ್ಮ ಪ್ರೀತಿ ನಿಮ್ಮ ಕರುಣೆ

ಗಮ್ಮ ಬಾಗಿ ನಮಿಪೆ ನಮಿಪೆ

ಮದರ್ಸ್ ಡೇಕ್ಕ ಬರ್ದಿದ್ದು. ಇಲ್ಲಿ ಹಾಕೋದ್ರಾಗ ಫಾದರ್ಸ್ ಡೇ ಬಂದದ! )

 

ಹೆಂಡ್ತೀ ಹೆಂಡ್ತೀ ಏನ ಕೊಡ್ತೀ?

ಹೆಂಡ್ತೀ ಹೆಂಡ್ತೀ ಏನ ಕೊಡ್ತೀ?
ಮುಂಜಾನ್ ಮುಂಜಾನ್ ಲಗೂ ಎದ್ದು
ಸಾನ ಸಂಧ್ಯಾನ್ ಎಲ್ಲಾ ಮುಗ್ಸಿ
ಧೊಡ್ಡವ್ನ್ ಎಬ್ಸಿ ರೆಡಿ ಮಾಡ್ಸಿ ಸಾಲಿಗ್ ಸಾಗ್ಸಿ
ಸಣ್ಣವ್ನ್ ಡೈಪರ ಬದ್ಲಿ ಮಾಡ್ಸಿ ಮಾರಿ ತೊಳ್ಸಿ
ಬಂದೀನ್ ನೋಡ ನಿಂತೀನ್ ನೋಡ
ಕುಡದಿದ್ ಛಾ ಖಾಲಿ ಆತ
ಹೊಟ್ಯಾಗ್ ತಾಳ ಚಾಲೂ ಆತ
ಭಡಾನ್ ಕೊಡ ಗಡಾನ್ ಕೊಡ
ದ್ವಾಸಿ ಇಡ್ಲಿ ರಾಗಿ ಓಟ್ಸು ಏನರೆ
ಭಾಳಷ್ಟ್ ಕೆಲ್ಸಾ ಮಾಡೋದದ
ಹೇಳಿದ್ ಕೇಳ್ತೀನ್ ಹಾಕಿದ್ ತಿಂತೀನ್
ಹೆಂಡ್ತೀ ಹೆಂಡ್ತೀ ಏನ ಕೊಡ್ತೀ?

ಗಂಡಾ ಗಂಡಾ ಗಡಾನ್ ಬಾರೋ
ಪದ್ಯ ಗಿದ್ಯ ಗೀಚಿದ್ ಸಾಕೋ
ಮೂರ್ಮೂರು ದ್ವಾಸಿ ಎದ್ದಾವ್ನೋಡು
ಪ್ಲೇಟಿಗ್ ಬಾರೋ ತಿನ್ನೋದ್ ಮಾಡೊ
ಹಾಕಿದ್ ದ್ವಾಸಿ ಆರಸ್ ಬ್ಯಾಡ
ನನ್ನ ತಲಿ ಕಾಯಿಸ್ ಬ್ಯಾಡ
ಇನ್ನ ಬೇಕಿದ್ರ್ ಈಗ ಹೇಳೋ

ಮಸುಕು ಬೆಟ್ಟದ ದಾರಿ

ಮಸುಕು ಬೆಟ್ಟದ ದಾರಿ ಓದಿ ಮುಗಿಸಿದೆ. ಎಮ್. ಆರ್. ದತ್ತಾತ್ರಿ ಅವರ ಎರಡನೇ ಕಾದಂಬರಿ. ಮನೋಹರ ಗ್ರಂಥಮಾಲೆಯವರು ಪ್ರಕಟಿಸಿದ್ದಾರೆ. ಆಕಸ್ಮಿಕವಾಗಿ, ಕುಪರ್ಟಿನೋ ಲೈಬ್ರರಿಯಲ್ಲಿ ಸಿಕ್ಕಿತು, ಲೈಬ್ರರಿಯ ದಪ್ಪ ರಟ್ಟಿನ ಪ್ರತಿ.

IMG_1958

ಹೊಸ ತರಹದ ಪಾತ್ರವಿದೆ ಇದರಲ್ಲಿ, ನೆನಪಿನ ಮೂರ್ತ ರೂಪ. ಕಾದಂಬರಿಯ ತುಂಬ ಕಾಣುವದು ಸೂಕ್ಷ್ಮ ಅವಲೋಕನ, details, details, details! ಕವಿ ಸಂವೇದನೆಯ ಸೂಕ್ಷ್ಮ ದೃಷ್ಟಿ ಹಾಗೂ ವಿವರಗಳು ‘ದ್ವೀಪವ ಬಯಸಿ’ಯಲ್ಲಿಯೂ ಇದ್ದವು; ಇಲ್ಲಿ ಅವುಗಳದ್ದೇ ಮೆರವಣಿಗೆ. ಸನ್ನಿವೇಶಗಳನ್ನು ಅವುಗಳ ಎಲ್ಲ ಬಣ್ಣ ರುಚಿ ವಾಸನೆಗಳ ಸಮೇತ ಚಿತ್ರಿಸಿರುವ ರೀತಿಯಿಂದಾಗಿ ನಿರಂಜನನ ಅದ್ಭುತ ಶಕ್ತಿ ಕಾದಂಬರಿಯ ಪುಟಗಳಲ್ಲೆಲ್ಲ ಹರಡಿಕೊಂಡಿದೆ. ಹಲವು ಪಾತ್ರಗಳಿವೆ, ಕೆಲವು ದಟ್ಟವಾಗಿವೆ, ಕೆಲವು ಹೀಗೆ ಬಂದು ಹಾಗೇ ಹೋಗುತ್ತವೆ, ಬೆಟ್ಟ ಗುಡ್ಡಗಳೂ ಜೀವತಳೆದಿವೆ. ಆದರೆ ಯಾವ ಪಾತ್ರವೂ ವ್ಯರ್ಥವಾಗಿ ಬರುವದಿಲ್ಲ, ತನ್ನನ್ನು ತಾನು ಸ್ಮೃತಿಪಟಲದಲ್ಲಿ ಕೊರೆಯದೆ ಹೋಗುವದಿಲ್ಲ. ಸರಳವಾಗಿ, ಸುಲಲಿತವಾಗಿ ಓದಿಸಿಕೊಂಡು ಹೋಗುವ ಭಾಷೆ ಕೆಲವು ಕಡೆ ಕಾವ್ಯಾತ್ಮಕವಾಗುತ್ತದೆ, ಕತೆಯನ್ನು ಕಣ್ಣಿಗೆ ಕಟ್ಟುವಂತೆ ಹೇಳುತ್ತದೆ, ಇಲ್ಲೇ ನಮ್ಮ ಸುತ್ತು ಮುತ್ತಿನಲ್ಲೇ ನಡೆಯುತ್ತಿವೆಯೇನೋ ಘಟನೆಗಳು ಎನ್ನುವಷ್ಟು ತನ್ಮಯಗೊಳಿಸುತ್ತದೆ. ಕೆಲವು ಕಡೆ ಇಂಗ್ಲೀಷ್ ನುಡಿಗಟ್ಟುಗಳ ಕನ್ನಡ ಅವತರಣಿಕೆ ಓದಿನ ನಡೆ ಸ್ವಲ್ಪ ತಡವರಿಸುವಂತೆ ಮಾಡುತ್ತವೆ. Artistic circle ಎನ್ನುವದು ಕಲಾ ವರ್ತುಲವಾಗುವ ಬದಲು ಕಲೆಯ ಜಗತ್ತಾಗಬಹುದು. Streetsmart ಎನ್ನುವದು ನಾಡಜಾಣತ್ವವಾದದ್ದು ಇಂಟರೆಸ್ಟಿಂಗ್ ಅನಿಸಿತು :-).

ಚಿತ್ರಕಾರ ಚಿತ್ರದಲ್ಲಿ ಬರೆಯುವದು ನೋಡಿದ್ದನ್ನೋ ಅಥವಾ ನೋಡಿದ್ದರ ನೆನಪನ್ನೋ ಎನ್ನುವ ಭಾಗವನ್ನು ಓದುವಾಗ ಹಿಂದೆ ಯಾವಾಗಲೋ ಪೀಟರ್ ಡ್ರಕರನ ಪುಸ್ತಕದಲ್ಲಿ ಓದಿದ್ದ ಈ ಭಾಗದ ನೆನಪಾಯಿತು!

ಮನುಷ್ಯನಿಗೆ ನೆನಪುಗಳು ಬೇಕು. ಅವು ತನ್ನವೇ ಆದಾಗ ಅವು ವ್ಯಕ್ತಿತ್ವದ ಅನಾವರಣಕ್ಕೆ, ಬೆಳವಣಿಗೆಗೆ ಸಹಕಾರಿಯಾಗಿ ಬಾಳನ್ನು ಸಾರ್ಥಕಗೊಳಿಸುವಲ್ಲಿ ಸಹಾಯ ಮಾಡುತ್ತವೆ. ಆದರೆ ನೆನಪುಗಳು ಬರೀ ಕಂಡ ಕಂಡ ಘಟನೆಗಳ ಬಗೆಗಾದರೆ, ಬಾಳಿನಲ್ಲಿ ಬಂದ ಇತರರ ಬಗ್ಗೆಯೇ ಆದರೆ ಮತ್ತು ಆ ನೆನಪುಗಳು ಹೇಳದೆ ಕೇಳದೇ ಪ್ರಕಟಗೊಳ್ಳುವ ರೀತಿಯ ಮೇಲೇ ತನ್ನ ಹಿಡಿತವೇ ಇಲ್ಲದೇ ಹೋದರೆ ಅಂತಹ ವ್ಯಕ್ತಿ ಬದುಕುವದಾದರೂ ಹೇಗೆ? ಬಾಳಿನ ಸಾರ್ಥಕ್ಯವನ್ನು ಕಂಡುಕೊಳ್ಳುವದು ಹೇಗೆ? ನಿರಂಜನನ ಪಾತ್ರ ಒಂದು ಸಾಧ್ಯತೆಯನ್ನು ಕಂಡುಕೊಳ್ಳುತ್ತದೆ. ಮಸುಕು ಬೆಟ್ಟದ ಹಾದಿ ತಿಳಿಯಾಗುತ್ತದೆ.

ಪ್ರೀತಿ ಮೃತ್ಯು ಭಯ…

ಮೊನ್ನೆ ಕುಪರ್ಟಿನೊ ಲೈಬ್ರರಿಯಲ್ಲಿ ಅನಂತಮೂರ್ತಿಯವರ ಪ್ರೀತಿ ಮೃತ್ಯು ಭಯ ಸಿಕ್ಕಿತ್ತು. ಚಿಕ್ಕ ಪುಸ್ತಕ, ಕೆಲವೇ ಸಮಯದಲ್ಲಿ ಓದಿ ಮುಗಿಯಿತು. ಆರಂಭದ ಕೆಲವು ಪುಟಗಳನ್ನು ಓದುವದು ಸ್ವಲ್ಪ ಕಷ್ಟವಾಯಿತು. ಮುಂದೆ ಹೋಗುತ್ತ ಸರಳವಾಗಿ ಓದಲು ಆಯಿತು. ಅನುಬಂಧದಲ್ಲಿ ಕೊಟ್ಟ ಕಾದಂಬರಿ ಮರು ಬರೆಹವನ್ನು ಓದಲಿಲ್ಲ. ಪುಸ್ತಕ ಓದಿ ೨ ದಿನಗಳ ನಂತರ ಅದರ ಬಗ್ಗೆ ನೆನಪು ಮಾಡಿಕೊಂಡರೆ ಅನಿಸಿದ್ದು ಇಲ್ಲಿ ಕೆಳಗಿದೆ.

ತೀರ ವೈಯಕ್ತಿಕವೆನಿಸುವ ಬರಹ. ಮನಸ್ಸಿನ ಭಾವನೆಗಳು ದಟ್ಟವಾಗಿ, ಹಸಿಬಿಸಿಯಾಗಿ ಹಾಗೇ ಹೊರಬಂದತಿವೆ. ಅದಕ್ಕೊಂದು ಹೆಸರು, ಪ್ರಜ್ಞಾ ಪ್ರವಾಹ ತಂತ್ರ ( stream of consciousness ). ಮನಸ್ಸಿನೊಳಗಣ ವಿಚಾರಗಳನ್ನು ಹಾಗೆ ಹಾಗೆಯೇ ತೋರಿಸುವ ತಂತ್ರವಂತೆ ಇದು. ಇಲ್ಲಿ ಹೆಚ್ಚು ಸ್ವಗತಗಳಂತೆ ತೋರುತ್ತವೆಯಂತೆ, ಆದರೂ ಸ್ವಗತಕ್ಕಿಂತ ಭಿನ್ನವಾದ ತಂತ್ರ ಇದು. ಸುಲಭಕ್ಕೆ ದಕ್ಕಿದ ಯಾವುದನ್ನೂ ಒಪ್ಪಿಕೊಳ್ಳದ, ಕಷ್ಟಪಟ್ಟೇ ಪಡೆಯಬೇಕು ಎಂದು ಬಯಸುವ ನಾಯಕ. ರೆವಲೂಶನರಿ ಆಗಬಯಸುವವ, ಆದರೆ ಅದಕ್ಕೆ ಬೇಕಾದಷ್ಟು ಧೈರ್ಯ ಇದೆಯೇ ತನ್ನಲ್ಲಿ ಎನ್ನುವದನ್ನೇ ಯೋಚಿಸುತ್ತ ಸಿಗರೇಟು ಸುಡುವವ. ಎಲ್ಲವನ್ನೂ, ಎಲ್ಲರನ್ನೂ ತಿರಸ್ಕರಿಸಬೇಕು ಎಂದು ಹಪಹಪಿಸುವ ರೆಬೆಲ್ ಆದವ. ಸಿಗರೇಟು ಬಿಡಬೇಕು, ಶೋಕಿ ಸೂಟು ಹೊಲಿಸಿಕೊಂಡು ಅದರ ಬಾಕಿ ಕೊಡಲಿಕ್ಕೆ ಆಗದಿರುವಂತೆ ಆಗಬಾರದು ಎನ್ನುವವ. ಕ್ರಿಶ್ಚಿಯನ್ ಹುಡುಗಿಯನ್ನು ಪ್ರೀತಿಸಿದವ, ಅದೂ ಕೂಡ ನಿಜವಾದ ಪ್ರೀತಿಯೆ ಅಥವಾ ಹಳೆಯ ಗೆಳತಿಯಾದ ಇನ್ನೊಬ್ಬ ಸಜಾತೀ ಹುಡುಗಿಯನ್ನು ಮದುವೆಯಾಗದೇ ಇವಳನ್ನು ಮದುವೆಯಾಗುವದು ಕೂಡ ಸುಲಭಕ್ಕೆ ಎಟುಕಿದ್ದನ್ನು ಒಲ್ಲೆ ಎನ್ನುವ ತನ್ನ ಹಟವೋ ಎಂತಲೂ ವಿಚಾರ ಮಾಡುವವ. ಕೆಲಸ ಕಾಯಮ್ಮಾಗಲು ಸಹಾಯ ಮಾಡಿದವರನ್ನು ತಿರಸ್ಕರಿಸಬೇಕು, ಅಪ್ಪನನ್ನು ತಿರಸ್ಕರಿಸಬೇಕು, ಅಮ್ಮನ ಸ್ವಾರ್ಥವನ್ನು ಧಿಕ್ಕರಿಸಬೇಕು. ಇನ್ನೂ ಏನೇನೋ ವಿರೋಧಿಸಬೇಕು. ಒಟ್ಟಿನಲ್ಲಿ ತನಗೆ ಬೇಕು ಎಂದು ಮಾಡುವ ಬದಲಿಗೆ ಇನ್ನೊಬ್ಬರು ಹೀಗೆ ಮಾಡಯ್ಯ ಎಂದು ಹೇಳುತ್ತಾರಲ್ಲ ಎಂದಿದ್ದನ್ನು ಮಾಡದೇ ತಾನು ಬೇರೆ ಎಂದು ಸಾಧಿಸಬೇಕು. ನೇತಿ ನೇತಿ ಗತಿ. ಎಲ್ಲ ಸಿಡಿಮಿಡಿಗೂ ಕಾರಣ ಹಟಾತ್ತನೆ ಒದಗಿದ ತಮ್ಮನ ಸಾವಿನ ಸುದ್ದಿ. ಇನ್ನೆರಡು ತಿಂಗಳಲ್ಲಿ ಆಗಬೇಕಿದ್ದ ತನ್ನ ಮದುವೆಗೆ ಊಹಿಸದ ವಿಘ್ನ. ಅಂತರಜಾತೀಯ ವಿವಾಹವಾಗಿ ತಾನು ಹೋದರೆ ತನ್ನ ತಂದೆತಾಯಿಯನ್ನು, ತಂಗಿ ತಮ್ಮನನ್ನು ನೋಡಿಕೊಳ್ಳುವವರು ಇಲ್ಲವಾಗುತ್ತಾರೆ, ಅದರ ಕೆಟ್ಟ ಹೆಸರೂ ತನಗೆ ಎನ್ನುವ ಸಂಕಟವೋ? ಸಾವಿನ ಮುಂದೆ ನಿಂತು ನೋಡಿದಾಗ ಜೀವನ ದೊಡ್ಡದಾಗಿ ಕಾಣಬೇಕು. ಇಲ್ಲಿಯ ಜಾತಿ ಮೊದಲಾದವು  ಕ್ಷುಲ್ಲಕವಾಗಬೇಕು. ತನ್ನ ತಂದೆ ತಾಯಿಗೆ ಆ ದೊಡ್ಡ ಬುದ್ಧಿ ಬರುತ್ತಿಲ್ಲ. ಸತ್ತ ಮಗನ ಸಾವನ್ನು ಮೊದಲು ಸುಲಭವಾಗಿ ಒಪ್ಪಿಕೊಂಡುಬಿಟ್ಟರು. ಈಗ ಅದನ್ನೇ ತನ್ನ ಮದುವೆಗೆ ತಡೆಯಾಗಿ ಬಳಸುತ್ತಿದ್ದಾರೆ ಎನ್ನುವ ಸಿಟ್ಟು. ಒಟ್ಟಿನಲ್ಲಿ ಸಿಟ್ಟು, ರೋಷ, ಸರಳವಾಗಿ ಜನರೊಂದಿಗೆ ಬೇರೆಯಬಾರದು ಎನ್ನುವ ಹಮ್ಮು, ಉಳಿದಂತೆ ಎಲ್ಲದರ ಬಗೆಗೂ ಪ್ರಶ್ನೆ. ಮುಂದೆ ಮಾಡುವುದೇನು? ಎನ್ನುವ ಪ್ರಶ್ನೆಯೊಂದಿಗೆ ಮುಕ್ತಾಯ.

ಇದಕ್ಕಿಂತ ಹೆಚ್ಚಿಗೆ ಬೆಳೆಸಲಿಕ್ಕೆ ಬಹುಷಃ ಅಲ್ಲಿ ಏನೂ ಇರಲಿಲ್ಲ. ರೆಬೆಲ್ ತಾನು ಯಾವುದರ ವಿರುದ್ಧ ರೆಬೆಲ್ ಆಗಿದ್ದಾನೋ ಆ ಪರಿಸ್ಥಿತಿ ಹಾಗೇ ಇರಲಿ ಎಂದು ಬಯಸುತ್ತಾನಂತೆ, ಅದೇ ರೆವಲ್ಯೂಶನರಿ ಪರಿಸ್ಥಿತಿಯನ್ನು ಬದಲಿಸುವದಕ್ಕೋಸ್ಕರ ಪರಿಸ್ಥಿತಿಯನ್ನು ವಿರೋಧಿಸುತ್ತಾನಂತೆ. ಇಲ್ಲಿ ರೆಬೆಲ್ ಆಗಿ ಉಳಿದ ನಾಯಕ ಏನಾದರೂ ಮಾಡುವ ಪ್ರಶ್ನೆ ಬಂದಾಗ ತಟಸ್ಥನಾಗಿಬಿಟ್ಟನೇ? ಅಥವಾ ತೀರ ವೈಯಕ್ತಿಕವಾಯಿತು ಎನ್ನುವ ಕಾರಣಕ್ಕೆ ಮಾಡಬೇಕು ಎನಿಸಿದ್ದನ್ನು ಬರೆಯುವದಕ್ಕೆ ಬೇಕಾದ ಧೈರ್ಯದ ಸಾಲಲಿಲ್ಲವೋ? ಅಥವಾ ಅಲ್ಲಿ ಬರೆಯುವದನ್ನು ನಿಲ್ಲಿಸಿ ಜೀವನದಲ್ಲಿ ರೆವೆಲ್ಯೂಶನರಿ ಆಗುವ ಇಚ್ಚೆಯೋ? ಏನೋ, ಅಂತೂ ಕಾದಂಬರಿಯಂತೂ ಪ್ರಶ್ನೆಯಲ್ಲಿ ಮುಗಿಯಿತು.