ಬೃಂದಾವನಕೆ ಹಾಲನು ಮಾರಲು…

ಬೃಂದಾವನಕೆ ಹಾಲನು ಮಾರಲು
ಹೋಗುವ ಬಾರೆ ಬೇಗ ಸಖಿ…

ಅರೆ, ಬೃಂದಾವನದಲ್ಲಿ ಇದ್ದದ್ದೇ ಗೋವಳರಲ್ಲವೆ? ಅಲ್ಲಿಗೇ ಹಾಲು ಮಾರಲಿಕ್ಕೆ ಹೋಗೋದಾ? ಎಷ್ಟು ಸರ್ತಿ ಗುನುಗಿದ್ದೀನಿ ಈ ಹಾಡನ್ನ ಆದರೆ ಹೊಳದೇ ಇರಲಿಲ್ಲ! ಮುಂದಿನ ಸಾಲು ನೆನಪಿಲ್ಲ, ನೋಡೋಣ ಕವಿತೆಯಲ್ಲಿ ಮುಂದೆ ಏನು ಹೇಳ್ತಾರೆ ಅಂತ ಯೂಟ್ಯೂಬಿನಲ್ಲಿ ಹಾಡು ಹುಡುಕಿ ಹಾಕಿದೆ…

ಬೃಂದಾವನಕೆ ಹಾಲನು ಮಾರಲು
ಹೋಗುವ ಬಾರೆ ಬೇಗ ಸಖಿ
ಬೃಂದಾವನದಿ ಹಾಲನು
ಕೊಳ್ಳುವರಾರಿಹರೆ ಹೇಳಿಂದುಮುಖಿ

ಅರೆ, ಕವಿ ಕೂಡ ಅದನ್ನೇ ಕೇಳ್ತಾ ಇದ್ದಾರೆ.. ಯಾರು ಕೊಳ್ತಾರೆ ಅಲ್ಲಿ ಹಾಲನ್ನ ಅಂತ. ಬೃಂದಾವನದ ತುಂಬ ಹಾಲು ಮಾರೋವ್ರೇ ಇರೋವಾಗ ನಿನ್ನ ಹಾಲನ್ನ ಯಾರೇ ಕೊಳ್ತಾರೆ ಅಂತ

ಗೋವನು ಕಾಯುವ ಗೋವಿಂದನಿಹನೆ
ಹಾಲನು ಕೊಳ್ಳುವ ಕೇಳೆ ಸಖಿ
ಚಿನ್ನವ ಕೊಡನೆ ರನ್ನವ ಕೊಡನೆ
ತನ್ನನೆ ಕೊಡುವನೆ ಬಾರೆ ಸಖಿ

ಓ, ಇದು ಸರಿ ಯಾರು ಕೊಳ್ಳಲಿ ಬಿಡಲಿ ಗೋವಿಂದ ಇದ್ದಾನಲ್ಲ ಅವನಂತು ಕೊಂಡೇ ಕೊಳ್ತಾನೆ ಆಲ್ವಾ? ಬರೀ ಹಾಲು ಕೊಳ್ಳೋದೇನು ಅದಕ್ಕೆ ಪ್ರತಿಯಾಗಿ ತನ್ನನ್ನೇ ಕೊಟ್ಟು ಬಿಡ್ತಾನೆ ನಮಗೆ! ಇನ್ನೇನು ಬೇಕು? ಆದರೂ ಕೃಷ್ಣ ಬೆಣ್ಣೆ ಕದಿಯೋ ಕತೆಗಳೇ ಹೆಚ್ಚು ಪ್ರಸಿದ್ಧವಾಗಿರೋವಾಗ ಇವರು ಯಾಕೆ ಹಾಲು ಕೊಳ್ಳೋ ಬಗ್ಗೆ ಹೇಳ್ತಾ ಇದ್ದಾರೆ? ಅಷ್ಟಕ್ಕೂ ಹಾಲು ಕಾಯಿಸಿ, ಹೆಪ್ಪು ಹಾಕಿ, ಕೆನೆ ತೆಗೆದು, ಮಜ್ಜಿಗೆ ಕಡೆದು ಬೆಣ್ಣೆ ತೆಗೆಯುವ ಕ್ರಿಯೆಯೇ ಒಂದು ಆಧ್ಯಾತ್ಮಿಕ ಪ್ರತಿಮೆಯಾಗಿರುವಾಗ, ಬೆಣ್ಣೆ ಮಾರಲು ಹೋಗುವ ಎಂತೇ ಹೇಳಬಹುದಿತ್ತಲ್ಲ?

ಕಣ್ಣನು ಮೋಹಿಪ ಪೀತಾಂಬರವನು
ಬಣ್ಣದ ಬಳೆಗಳ ಧರಿಸು ಸಖಿ
ಚೆನ್ನವ ಮೋಹಿಸುವೆದೆಯನು ಹಾರವು
ಸಿಂಗರಿಸಲಿ ಹೇ ನಳಿನಮುಖಿ

ಹಾಗೇ ಬಂದೀಯ ಮತ್ತೆ! ಒಳ್ಳೇ ಪೀತಾಂಬರ ಉಟ್ಕೋ, ಬಣ್ಣದ ಬಳೆಗಳನ್ನ ಹಾಕ್ಕೋ, ಆ ಗೋವಿಂದನ್ನ ಮೋಹಿಸೊ ಎದೇನ ಖಾಲಿ ಬಿಟ್ಟೀಯಾ, ಒಳ್ಳೆ ಹಾರ ಹಾಕ್ಕೊಂಡು ಸಿಂಗಾರ ಮಾಡ್ಕೊಳ್ಳೆ ಚಂದುಳ್ಳಿ ಚೆಲುವೆ!

ಹಾಲು ಮಾರಲಿಕ್ಕೆ ಹೋಗೊವ್ರು ಪೀತಾಂಬರ ಉಟ್ಕೊಂಡು ಸಿಂಗಾರ ಮಾಡ್ಕೊಂಡು ಬಗಲಲ್ಲೊ, ತಲೇ ಮೇಲಿನ ಸಿಂಬಿಲೋ ಹಾಲಿನ ಪಾತ್ರೆ ಇಟ್ಕೊಂಡು ಹೋಗೋ ಚಿತ್ರಣನೇ ಒಂಥರ ತಮಾಷಿ ಆಗಿದೆಯಲ್ಲ… ನಿಜವಾಗ್ಲೂ ಹಾಲ ಮಾರಲಿಕ್ಕೇನೆ ಹೊರಟಿರೊದಾ ಇವರು?

ಯಮುನಾ ತೀರದೊಳಲೆಯುವ ಬಾರೆ
ಹಾಲು ಬೇಕೆ ಹಾಲೆಂದು ಸಖಿ
ಹಾಲನು ಮಾರುವ ನೆವದಿಂದ
ಹರಿಯ ಮೋಹಿಸಿ ಕರೆಯುವ ಬಾರೆ ಸಖಿ

ಹಾ, ಇಲ್ಲಿ ಬಂತು ನೋಡಿ ವಿಷಯ! ಹಾಲು ತೆಗೆದುಕೊಂಡು ಬೃಂದಾವನಕ್ಕೆ ಹೋದ ಕೂಡಲೇ ಗೋವಿಂದ ಸಿಕ್ಕು ಬಿಡ್ತಾನೆಯೇ? ಅವನೆಲ್ಲಿ ಯಾವ ಬೀದಿಯಲ್ಲೋ, ಯಮುನಾ ತೀರದಲ್ಲೋ ಆಡ್ತಿರ್ತಾನೆ. ಅಲ್ಲೆಲ್ಲ ಅಲೀಬೇಕು, ಹಾಲು ಬೇಕೇ ಹಾಲು ಅಂತ ಕರೀಬೇಕು, ನಾವು ಕರೆಯೋದು ಅವನಿಗೆ ಕೇಳಿಸ್ತಾ ಅಂತ ಕಾತರಿಸ್ಬೇಕು. ಗೋವಿಂದ ಕೊಳ್ಳೋ, ಬಾರೋ ಅಂತ ನೆನಿಬೇಕು. ಹಾಗೆ ನೆನೀತಾ ನೆನೀತಾ ಅವನ್ನ ಮೋಹಿಸಬೇಕು, ಮತ್ತೆ ಕರಿಬೇಕು. ಅದೇ ಅಲ್ವೇನೆ ಸುಖ? ಬಾ ಹೋಗೋಣ, ಮನಮೋಹಕ ಹರಿನ ಮೋಹಿಸಿ ಕರೆಯೋಣ. ನಮ್ಮ ಕರೆ ಕೇಳಿ, ಅವನು ಬಂದ ಕೂಡ್ಲೆ ನಾವು ಚನ್ನಾಗಿ ಕಾಣ್ಬೇಕಲ್ವಾ ಅವನಿಗೆ? ಅದಕ್ಕೆ ಹೇಳಿದ್ದು ಹಾಲನ್ನ ಮಾರಬೇಕು ಅನ್ನೋದೊಂದು ಕಾರಣ, ಕಾರ್ಯ ಬೇರೇನೇ ಇದೆ!

ಹಾಲ ನಿವೇದಿಸಿ ಆತ್ಮವನರ್ಪಿಸಿ
ಮುಕ್ತಿಯ ಹೊಂದುವ ಸೌಮ್ಯ ಮುಖಿ
ಹಾಲನು ಮಾರಿ ಹರಿಯನು
ಕೊಳ್ಳುವ ನಾವೇ ಧನ್ಯರು ಕಮಲಮುಖಿ

ನಮ್ಮ ಕರೆ ಕೇಳಿ ಅವನು ಬಂದೇ ಬರ್ತಾನೆ. ಅವನು ಬಂದ ಕೂಡ್ಲೇ ನಾವೇನು ಹಾಲು ಮಾರ್ತೀವಿ ಅಂದ್ಕೊಂಡ್ಯಾ ಮತ್ತೆ? ಇಲ್ವೇ, ಅಲ್ಲಿ ಹಾಲ ನಿವೇದಿಸೋಣ, ನಮ್ಮ ಆತ್ಮವನ್ನೇ ಅರ್ಪಿಸೋಣ! ಹಾಗಾದರೆ ಇದು ಹಾಲು ಮಾರಾಟ ಅಲ್ಲ, ಹಾಲಿನಂತಹ ಶುದ್ಧ, ಮುಗ್ಧ ಆತ್ಮ ನಿವೇದನೆ. ಹಾಲಿನ ಅರ್ಪಣೆ ಮೂಲಕ ಸರ್ವ ಸಮರ್ಪಣೆ! ಆದರೂ ಹಾಲು ತೆಗೆದುಕೊಂಡು ಹೋಗಿದ್ದೀವಿ, ಅದನ್ನ ಅವನು ಕೊಂಡಿದ್ದಾನೆ ಅಂದ್ಮೇಲೆ ಅವನು ನಮ್ಮನ್ನ ಹಾಗೇ ಸುಮ್ಮನೆ ಕಳಿಸಿಬಿಡ್ತಾನೆಯೆ? ಇಲ್ವೇ ತನ್ನನ್ನೇ ಕೊಟ್ಟು ಬಿಡ್ತಾನೆ! ನೋಡು ಎಷ್ಟು ಲಾಭ ಇದೆ ಇಲ್ಲಿ.. ಹಾಲು ಮಾರಿ ಹರಿನ ಪಡೀತಿವಿ, ಧನ್ಯರಲ್ಲವೇನೇ ನಾವೇ? ಇಂಥಾ ಲಾಭ ಇನ್ನೆಲ್ಲಿ ಸಿಗುತ್ತೆ ನಿನಗೆ? ಬೇಗ ನಡಿಯೆ ಮತ್ತೆ ಬೃಂದಾವನಕ್ಕೆ.

ನಮ್ಮೀ ಲಾಭವ ಮೀರುವ ಲಾಭವು
ಬೇರೆಲ್ಲಿಹುದೆ ಇಂದುಮುಖಿ
ಬೃಂದಾವನಕೆ ಹಾಲನು ಮಾರಲು
ಹೋಗುವ ಬಾರೆ ಬೇಗ ಸಖಿ

ಕವಿ ಏನೋ ಹಾಡಲ್ಲಿ ಬೇಗ ಬಾ ಸಖಿ ಅಂತ ಹೇಳಿದಾರೆ ಆದರೆ ಸಂಗೀತದಲ್ಲಿ ಆ ತ್ವರೆನ ಹಾಡಲ್ಲಿ ಕಾಣ್ತಾ ಇಲ್ವಲ್ಲ ಅನಿಸ್ತು, ಆದರೆ ಮರುಕ್ಷಣವೇ ಅನಿಸ್ತು  ‘ಬೃಂದಾವನಕೆ ಹಾಲನು ಮಾರಲು ಹೋಗುವ ಬಾರೆ’ ಎಂದಾಗಲೇ ಮನಸ್ಸು ಬೃಂದಾವನಕ್ಕೆ ತ್ವರಿತವಾಗಿ ಹೋಗಿ ಆಗಿದೆ ಅಂತ!

ಉಳಿದದ್ದು: ಯೂಟ್ಯೂಬಿನಲ್ಲಿ ಹುಡುಕಿ ಕೇಳಿದ ಎರಡು ಲಿಂಕುಗಳಲ್ಲಿ ಒಂದು ನುಡಿ ವ್ಯತ್ಯಾಸವಿದ್ದದ್ದರಿಂದ ಬಹುಶಃ ಎಲ್ಲ ನುಡಿ ಹಾಡಿರಲಿಕ್ಕಿಲ್ಲ ಎಂದು ಹಾಡಿನ ಸಾಹಿತ್ಯಕ್ಕಾಗಿ ಹುಡುಕಿದಾಗ ಸಿಕ್ಕ ಕಣಜದ ಈ ಲಿಂಕಿನಲ್ಲಿ ಹಾಡಿನ ಪೂರ್ಣಪಾಠವಿದೆ. ಸಖಿಗೆ ಚನ್ನಾಗಿ ಅಲಂಕಾರ ಮಾಡಿಕೊಂಡು ಬಾ ಎಂದು ಹೇಳುವ ಇನ್ನೂ ಒಂದು ನುಡಿ ಅಲ್ಲಿದೆ 🙂

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s