ಜಯ ಜಯ ವಿಜಯೀ ರಘುರಾಮ

ನೃತ್ಯ ನಾಟಕ ಜಯ ಜಯ ವಿಜಯೀ ರಘುರಾಮದಲ್ಲಿ  ‘ಹರನ ಬಿಲ್ಲನ್ನು ಪರಕಿಸುವೆ..’ ಎಂದು ಹೇಳುತ್ತ ರಾಮನು ಶಿವ ಧನುವನ್ನು ಎತ್ತಿ ಮುರಿಯುವ ದೃಶ್ಯವನ್ನು ನೋಡುತ್ತಿರುವಾಗ ಅನಿಸಿದ್ದು..

“ಕಾದವರ ಕತೆಯಿದು, ರಾಮಾಯಣವು ಸಿರಿ ರಾಮಚಂದ್ರನಿಗಾಗಿ ಕಾದವರ ಕತೆಯಿದು. ತಾಯಿ ಕೌಸಲ್ಯೆ, ತಂದೆ ದಶರಥ, ಸುಮಿತ್ರೆ ಕೈಕೇಯಿಯರು, ವಿಶ್ವಾಮಿತ್ರ, ಮಿಥಿಲೆಯಲ್ಲಿ ಮೈಥಿಲಿ, ಪರಶುರಾಮ, ಮಂಥರೆಯೂ ಬಹುಶಃ, ಅಯೋಧ್ಯೆಯ ಜನರು, ಗಂಗೆಯ ತಡಿಯಲ್ಲಿ ಗುಹ, ಕಾಡಿನ ಋಷಿ ಮುನಿಗಳು, ಮಿಸುನಿ ಜಿಂಕೆ ಮಾರೀಚ, ಕಳ್ಳ ರಾವಣನೆದುರಿಸಿದ ಜಟಾಯು, ಶಬರಿ, ಋಷ್ಯಮೂಕದಲಿ ಹನುಮಂತ, ಸಂಪಾತಿ, ಅಶೋಕವನದಲ್ಲಿ ಸೀತೆ, ಎಲ್ಲರೂ ರಾಮನಿಗಾಗಿ ಕಾದವರೆ. ರಾವಣ ಕುಂಭಕರ್ಣರೂ ಅವನಿಗಾಗಿ ಕಾದವರೇ! ಕಾದವರನೆಲ್ಲ ಕಾದ ಮೋದ ಮೂರ್ತಿ ರಘು ರಾಮನ ಕತೆಯಿದು ರಾಮಾಯಣವು.”

‘ಭಾವ ಶುದ್ಧಿಯಲಿ ನೆನೆವ ತನ್ನ  ಭಕುತರ ಪೊರೆವ ಸೃಷ್ಟಿಯೊಳಗೆಣೆಗಾಣೆ ಅಯೋಧ್ಯಾ ರಾಮ’ ಎಂದ ಪುರಂದರ ದಾಸರ ಮಾತಿನಂತೆ ತನಗಾಗಿ ಕಾದವರನ್ನು ರಾಮ ತಾನು ಕಾದ ಕತೆ ರಾಮಾಯಣದ ಕತೆ. ಕಾದವರನ್ನು ಪರಕಿಸಿಯೇ ಕಾದ ರಾಮ, ಅತ್ಯಂತ ಕಠಿಣ ಪರೀಕ್ಷೆಯಾದದ್ದು ಮಾತ್ರ ಸೀತೆಗೆ!

ಪುತಿನ ಅವರ ಪದ್ಯಗಳ ಮೂಲಕ ರಾಮಾಯಣದ ಕತೆಯನ್ನು ಒಂದು ದೃಶ್ಯಕಾವ್ಯವನ್ನಾಗಿ, ಅಮೋಘ ನೃತ್ಯ ನಾಟಕವನ್ನಾಗಿ ನಮ್ಮೆಲ್ಲರ ಮುಂದಿಟ್ಟ ಶ್ರೀಮತಿ ಅಲಮೇಲು ಅಯ್ಯಂಗಾರ್ ಮತ್ತು ಅವರ ತಂಡಕ್ಕೆ ಅಭಿನಂದನೆಗಳು ಮತ್ತು ಧನ್ಯವಾದಗಳು. ಐದೂವರೆ  ವರ್ಷದ ನಮ್ಮ ಮಗನೂ ಐಪಾಡು ಕೇಳದೇ ರಾಮಾಯಣದಲ್ಲಿ ಮಗ್ನನಾಗಿದ್ದಷ್ಟೇ ಅಲ್ಲದೇ ನಾಟಕ ಮುಗಿಸಿ ಮನೆಗೆ ಹೋದ ಮೇಲೆ, ರಾತ್ರಿ ಮಲಗುವ ಮುನ್ನಿನ ಕಥೆಯಾಗಿ ರಾಮಾಯಣವನ್ನೇ ಹೇಳು ಅಂದಿದ್ದು ಅಚ್ಚರಿ ಮೂಡಿಸಿತ್ತು.

ಈ ನೃತ್ಯ ನಾಟಕದಲ್ಲಿ ನನಗೆ ಇಷ್ಟವಾದ ಭಾಗಗಳು,

೧. ಕಣ್ಣಿಗೆ ಕಟ್ಟುವಂತಹ ರಂಗ ಸಜ್ಜಿಕೆ, ನೆರಳು ಬೆಳಕಿನ ವ್ಯವಸ್ಥೆ, ದೇವಲೋಕವನ್ನೇ ಧರೆಗಿಳಿಸಿದಂತಹ ವೇಷ ಭೂಷಣಗಳು, ಆಯಾ ಸಂದರ್ಭಗಳಿಗೆ ಸೂಕ್ತವಾದ ಹಿನ್ನೆಲೆ ಪರದೆಗಳು, ಒಟ್ಟಾರೆಯಾಗಿ ಯಾವುದೇ ಪೌರಾಣಿಕ ಚಲನಚಿತ್ರಕ್ಕೂ ಕಡಿಮೆ ಇಲ್ಲದಂತಹ ಪ್ರಯೋಗ. ಮೊದಲ ದೃಶ್ಯದ ಪಾಲ್ಗಡಲು, ಶೇಷಶಾಯಿ ನಾರಾಯಣ ಮತ್ತು ಲಕ್ಷ್ಮೀ ದೇವಿಯರ ಚಿತ್ರಣದಿಂದ ಆರಂಭಿಸಿ, ಕೊನೆಯ ದೃಶ್ಯದ ‘ದಕ್ಷಿಣೆ ಲಕ್ಷ್ಮಣೋ ಯಸ್ಯ ವಾಮೇತು ಜನಕಾತ್ಮಜಾ। ಪುರತೋ ಮಾರುತೀರ್ಯಸ್ಯ ತಂ ವಂದೇ ರಘುನಂದನಮ್’ ಚಿತ್ರಣದವರೆಗೆ ಎಲ್ಲವೂ ಎಷ್ಟೊಂದು ಚನ್ನಾಗಿತ್ತು! ಅಗ್ನಿಕುಂಡದ ಮರೆಯಲ್ಲೇ ರಂಗಕ್ಕೆ ಬಂದ ಅಗ್ನಿದೇವ ನಿಧಾನಕ್ಕೆ ಪ್ರತ್ಯಕ್ಷನಾಗುವದು, ಮತ್ತೆ ಹಾಗೇ ನಿಧಾನಕ್ಕೆ ಮಾಯವಾಗುವದು, ಬಹಳ ಇಫೆಕ್ಟಿವ್ ಆಗಿತ್ತು.

೨. ರಾಮೋದಯ ಭಾಗದಲ್ಲಿ ಹಾಗೂ ರಾಮ ಪಟ್ಟಾಭಿಷೇಕದ ಭಾಗದಲ್ಲಿ ಎಷ್ಟೊಂದು ಜನರಿದ್ದರು ರಂಗದ ಮೇಲೆ! ಅವರೆಲ್ಲ ತಮ್ಮ ತಮ್ಮಲ್ಲೇ ಮಾತನಾಡಿಕೊಳ್ಳುತ್ತ, ಸಂದರ್ಭಕ್ಕೆ ತಕ್ಕಂತೆ ಅತ್ತಿಂದಿತ್ತ ಓಡಾಡುತ್ತ, ತೊಟ್ಟಿಲಲ್ಲಿ ಮಗುಗಳನ್ನು ಮಲಗಿಸುತ್ತ, ಹಾಗೇ ಮತ್ತೆ ಎತ್ತಿಕೊಂಡು ಆನಂದಪಡುತ್ತ ಆಯಾ ಸಂದರ್ಭದ ಸಡಗರವನ್ನು ಬಹಳ ಚನ್ನಾಗಿ ತೋರಿಸಿದರು. ರಾಮೋದಯದ ಸಂದರ್ಭದಲ್ಲಿ ರಾಮ, ಲಕ್ಷ್ಮಣ, ಭರತ, ಶತ್ರುಘ್ನರ ಪಾತ್ರಕ್ಕಾಗಿ ಬಳಸಿದ ಗೊಂಬೆಗಳು ಮಗುವಿನಷ್ಟು ಭಾರವಾಗಿದ್ದರೆ ಆ ಮಕ್ಕಳನ್ನು ಎತ್ತುವಾಗ ಮತ್ತು ಮಲಗಿಸುವಾಗ ಇನ್ನಷ್ಟು ಸಹಜವಾಗಿ ಬರಬಹುದಿತ್ತೇ ಅಂತ ಅನಿಸಿತು, ಆದರೆ ಆ ಅನಿಸಿಕೆ ಅವು ಗೊಂಬೆಗಳು ಎನ್ನುವ ಕಾರಣಕ್ಕೆ ನನ್ನ ಮನಸ್ಸಿಗೆ ಮೂಡಿದ ಅನಿಸಿಕೆಯಾಗಿರುವ ಸಾಧ್ಯತೆಯೇ ಹೆಚ್ಚು 🙂

೩. ನೃತ್ಯ ನಾಟಕವೇ ಎಂದ ಮೇಲೆ ಇಲ್ಲಿ ನೃತ್ಯಕ್ಕೆ, ಸಂಗೀತಕ್ಕೆ ಹೆಚ್ಚಿನ ಆದ್ಯತೆ. ನೃತ್ಯರೋಪದಲ್ಲೇ ತೋರಿಸಿದ ಭಾಗಗಳು ಸೊಗಸಾಗಿ ಮೂಡಿಬಂದವು. ಸಮೂಹ ನೃತ್ಯದ ಮೂಲಕ ತೋರಿದ ಸಡಗರ, ರಾಮ ಶಿವಧನುವನ್ನು ಎತ್ತುವ ಮುನ್ನ ಸೀತೆಯ ಕಾತರ, ಶಿವಧನುವನ್ನು ಮುರಿದಾದ ಮೇಲಿನ ಸಂತಸ, ನವವಧುವಿನ ನಾಚಿಕೆ, ಹರಿಣಾಭಿಸರಣದ ಭಾಗದಲ್ಲಿ ಹರಿಣವಾಗಿ ಬಂದ ಮಗುವಿನ ಮುದ್ದು ಓಡಾಟ, ರಾವಣನ ಆರ್ಭಟ, ಸೀತೆಯ ಸಂಕಟ, ರಾವಣ ವಧೆಯ ನಂತರ ಸೀತೆ ತಾನೇ ಅಗ್ನಿಗೆ ಹಾರಬೇಕಾದಂತಹ ಅನಿವಾರ್ಯತೆ, ಆ ಸಂದರ್ಭವನ್ನು ನೃತ್ಯದಲ್ಲಿ ತೋರಿಸಿದ ಬಗೆ, ತಟ್ಟನೆ ಬೆಂಕಿಯ ಕುಂಡದಲ್ಲಿ ಬಿದ್ದು ಮಾಯವಾದ ಸೀತೆ, ಆ ಕ್ಷಣದ ಸಂಗೀತ, ರಾಮನೂ ಅಲ್ಲಿ ದುಃಖ ಪಡುವ ಭಾಗ, ಈ ಎಲ್ಲವನ್ನೂ ನೃತ್ಯದ ಮೂಲಕ ತೋರಿಸುವಾಗ ಅಲ್ಲಿ ಕಂಡ ಅಭಿನಯ ಆಯಾ ಸಂದರ್ಭವನ್ನು ಸಮರ್ಥವಾಗಿ ಹಿಡಿದುಕೊಟ್ಟಿತು. ಹರಿಣಾಭಿಸರಣದಲ್ಲಿ ಸೀತೆಯನ್ನು ರಾವಣನೆತ್ತಿಕೊಂಡೊಯ್ಯುವ ಭಾಗ ಮತ್ತು ಸೀತೆ ಅಗ್ನಿಕುಂಡಕ್ಕೆ ಹಾರುವ ಭಾಗಗಳು ನೋಡುಗರ ಗಂಟಲುಬ್ಬಿಸಿದ ಭಾಗಗಳು.

೪. ಪುತಿನ ಅವರ ಹಾಡುಗಳು, ಅಲ್ಲಿ ಬಳಸಿದ ಪದಗಳು, ಅವುಗಳನ್ನು ಭಾವಪೂರ್ಣವಾಗಿ ಹೇಳಿದ್ದು, ಇದೆಲ್ಲಕ್ಕೂ ಸಹಕಾರಿಯಾಗುವಂತೆ ಆ ಮಾತುಗಳ ಇಂಗ್ಲೀಷ್ ಅವತರಣಿಕೆಯನ್ನೂ ಪಕ್ಕದ ತೆರೆಯ ಮೇಲೆ ತೋರಿಸಿದ್ದು ತುಂಬ ಚನ್ನಾಗಿತ್ತು. ಇಂಗ್ಲೀಷಿನ ಜೊತೆಗೆ ಕನ್ನಡದಲ್ಲೂ ಇದ್ದಿದ್ದರೆ ನೃತ್ಯ, ಸಂಗೀತದ ಭಾಗಗಳಲ್ಲಿ ಕೆಲವೊಮ್ಮೆ ಪುತಿನ ಸಾಹಿತ್ಯ ಸರಿಯಾಗಿ ಕೇಳಿಸದೇ ಇದ್ದಾಗ ಪರದೆಯ ಮೇಲೆ ಅದನ್ನು ಅದಿರುವಂತೆಯೇ ಓದಿಕೊಳ್ಳಬಹುದಿತ್ತಲ್ಲ ಎಂದನಿಸಿತು.

ಒಟ್ಟಾರೆಯಾಗಿ ಒಂದು ಅಪರೂಪದ ಪ್ರಯೋಗಕ್ಕೆ ನಾವು ಸಾಕ್ಷಿಯಾದೆವು ಅಂತ ಅನಿಸಿತು ‘ಜಯ ಜಯ ವಿಜಯೀ ರಘುರಾಮ’ ನೋಡಿ. ನಾಟಕ ಮುಗಿಸಿ ಮನೆಗೆ ಹೋದ ಮೇಲೆ ನಡೆದ ಒಂದು ಲಘು ಪ್ರಸಂಗದೊಂದಿಗೆ ನನ್ನ ಅನಿಸಿಕೆಗಳ ಕೆಲವು ಸಾಲುಗಳಿಗೆ ಮಂಗಳ ಹೇಳುವೆ 🙂

ನನ್ನ ಹೆಂಡತಿ ಮಗನಿಗೆ ಹೇಳುತ್ತಿದ್ದಳು: ಪುಟ್ಟಾ ರಾಮ ತ್ರೇತಾಯುಗದಾಗ ಇದ್ದ, ಕೃಷ್ಣ ದ್ವಾಪರಯುಗದಾಗಿದ್ದ. ಈಗ ಕಲಿಯುಗ ನಡದದ.
ಮಗ : ಅಮ್ಮ ಇದು ಲರ್ನಿಂಗ್ ಯುಗಾನ?
ಹೆಂಡತಿ : ಲರ್ನಿಂಗ್ ಯುಗಾನ? ಅಂತ ಅಂದವಳಿಗೆ ಮರುಕ್ಷಣದಲ್ಲೇ ಹೊಳೆಯಿತು ಇದು ಕನ್ನಡ ಕಲಿ ಪ್ರಭಾವ ಅಂತ 🙂

(ಮುಗಿಸುವ ಮುನ್ನ: ಶಬರಿ ಪ್ರಸಂಗವನ್ನು ನೋಡಲಾಗಲಿಲ್ಲ ನನಗೆ, ಮಗನ ಹಸಿವೆ ತಣಿಸಲು ಅವನನ್ನು ಕರೆದುಕೊಂಡು ಹೊರಗೆ ಹೋಗಿದ್ದರಿಂದ ಆ ಭಾಗ ತಪ್ಪಿಸಿಕೊಂಡೆ…)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s