ಸಂಸಾರ ಪಾಶವ ನೀ ಬಿಡಿಸಯ್ಯ
ಕಂಸಾರಿ ಪುರಂದರವಿಠ್ಠಲರಾಯ
ಹ್ಯಾಂಗೆ ಬರೆದಿತ್ತೋ ಪ್ರಾಚೀನದಲ್ಲಿ… ಎಂದು ಆರಂಭವಾಗುವ ಪುರಂದರದಾಸರ ಪದದಲ್ಲಿ ಕೊನೆಗೆ “ಸಂಸಾರ ಪಾಶವನ್ನು ಕಂಸಾರಿಯಾದ ನೀನು ಬಿಡಿಸಯ್ಯ” ಎಂದು ಕಂಸಾರಿಯನ್ನೇ ನೆನೆದದ್ದು ಯಾಕೆ? ಕೃಷ್ಣನ, ಹರಿಯ ಇನ್ಯಾವುದೇ ರೂಪವನ್ನು ನೆನೆಯುವ ಬದಲು ಕಂಸಾರಿಯಾಗಿಯೇ ಯಾಕೆ ನೆನೆದರು ಎಂಬ ಪ್ರಶ್ನೆ ಹಿಂದೊಮ್ಮೆ ಬಂದದ್ದು, ಅದರ ಬಗ್ಗೆ ಒಂದಷ್ಟು ಬರೆದದ್ದು ಇಲ್ಲಿವೆ. ಅಲ್ಲಿ ಉಲ್ಲೇಖಿಸದೇ ಇದ್ದ ಇನ್ನೊಂದು ಅಂಶವೆಂದರೆ ‘ಶ್ರೀ ಕೃಷ್ಣಾಷ್ಟೋತ್ತರ ಶತನಾಮಾವಳಿ’ಯಲ್ಲಿಯೂ ‘ಸಂಸಾರವೈರಿ ಕಂಸಾರಿ ಮುರಾರಿರ್ನರಕಾಂತಕಃ’ ಎಂದು ಬರುತ್ತದೆ. ದಾಸರು ಅದನ್ನೇ ತಮ್ಮ ಪದದಲ್ಲೂ ಬಳಸಿದರೆ ಎಂಬ ವಿಚಾರವೂ ಬಂದಿತ್ತು.
ಶ್ರೀ ಸತ್ಯಾತ್ಮತೀರ್ಥರ ಶ್ರೀಮದ್ಭಾಗವತ ಪ್ರವಚನ ಮಾಲಿಕೆಯ ಸಿ.ಡಿ.ಯನ್ನು ಕೇಳುತ್ತಿದ್ದಾಗ ನನಗೆ ಗೊತ್ತಿಲ್ಲದ ಹೊಸ ವಿಷಯ ತಿಳಿಯಿತು. ಕೃಷ್ಣನಿಂದ ಹತನಾದ ಕಂಸ ಅಸುರನಾದ ಕಾಲನೇಮಿಯಂತೆ. ಈ ಕಾಲನೇಮಿ ಕಾಮಕ್ಕೆ ಅಭಿಮಾನಿಯಾದ ಅಸುರನಂತೆ. ಈ ಹಿನ್ನೆಲೆಯಲ್ಲಿ ಯೋಚಿಸಿದಾಗ ಅನಿಸಿದ್ದು, ‘ಧರ್ಮಾsವಿರುದ್ಧೋ ಕಾಮೋsಸ್ಮಿ’ (ಧರ್ಮಕ್ಕೆ ವಿರೋಧವಾಗಿಲ್ಲದ ಕಾಮವು ನಾನು) ಎಂದು ಗೀತೆಯಲ್ಲಿ ಹೇಳುವ ಕೃಷ್ಣ, ಧರ್ಮಕ್ಕೆ ವಿರುದ್ಧವಾದ ಕಾಮವೆಲ್ಲದರ ಅಭಿಮಾನಿಯಾದ ಕಂಸರೂಪಿ ಕಾಲನೇಮಿಯನ್ನು ಕೊಂದ. ನಮ್ಮನ್ನು ಮತ್ತೆ ಮತ್ತೆ ಸಂಸಾರದಲ್ಲಿ ಕೆಡವುವ ಕಾಮದಿಂದ ಪಾರುಮಾಡಿ, ಧರ್ಮಾsವಿರುದ್ಧ ಕಾಮವೆನಿಸುವ ಮುಕ್ತಿಯನ್ನು ಬಯಸಿದಾಗ ಕಂಸಾರಿಯನ್ನೇ ನೆನೆಯಬೇಕಲ್ಲವೆ? ಉನ್ನತಿಯನ್ನೀಯುವ ಕಾಮನೆಗಳು ಧರ್ಮ ವಿರೋಧಿಯಾಗಿರುವದಿಲ್ಲ. ನಿಕೃಷ್ಟವಾದ ಕಾಮನೆಗಳನ್ನು ದಮನ ಮಾಡಿ, ಉನ್ನತಿಯನ್ನು ಸಾಧಿಸುವ ಕಾಮನೆಯ ಪೂರ್ತಿಗಾಗಿ ಕಂಸಾರಿಯನ್ನು ನೆನೆಸಿದ್ದಾರೆ ಪುರಂದರ ದಾಸರು*.
ಅದೇ ಪ್ರವಚನದಲ್ಲಿ ಶ್ರೀಸತ್ಯಾತ್ಮತೀರ್ಥರು ಹೇಳಿದ ಈ ಇನ್ನೊಂದು ಶ್ಲೋಕ, “ಸರಿಯಾದ ಜ್ಞಾನವಿರುವಲ್ಲಿ ಶರಣಾಗಬೇಕು, ಆ ಜ್ಞಾನದಲ್ಲಿ ಸುದೃಢವಾದ ನಂಬಿಕೆಯನ್ನಿಡಬೇಕು, ಆ ನಂಬಿಕೆಯನ್ನು ಗಟ್ಟಿಗೊಳಿಸಿಕೊಳ್ಳುತ್ತಿರಬೇಕು, ನಂಬಿಕೆ ಅಲುಗಾಡುವಂತಹ ಸಂದರ್ಭ ಬಂದರೆ ತಿಳಿದವರನ್ನು ವಿಚಾರಿಸಿ, ತಿಳಿದುಕೊಂಡದ್ದನ್ನೂ ಮತ್ತು ಅದರ ಬಗೆಗಿನ ನಂಬಿಕೆಗಳನ್ನೂ ಮತ್ತೆ ಜಿತಮಾಡಿಕೊಳ್ಳುತ್ತ ಆಯಾ ಸಂದರ್ಭದ ಸಮನ್ವಯವನ್ನು ಸಾಧಿಸಿಕೊಳ್ಳಬೇಕು” ಎಂದು ಹೇಳಿದ ವೈದ್ಯರ ಮಾತು** ನೆನಪಾಯಿತು, ಮತ್ತೆ ಗಟ್ಟಿಯಾಗಿ ಮನಸ್ಸಿನಲ್ಲಿ ಉಳಿಯಿತು.
ಅದೃಢಂಚ ಹತಂ ಜ್ಞಾನಂ
ಪ್ರಮಾದೇನ ಹತಂ ಶ್ರತಂ
ಸಂದಿಗ್ಧೋಹಿ ಹತಂ ಮಂತ್ರಃ
ವ್ಯಗ್ರಚಿತ್ತೋ ಹತಂ ಜಪಃ(ಗಟ್ಟಿಗೊಳ್ಳದಿರಲಳಿವುದು ಅರಿವು
ಎಚ್ಚರಗೇಡಿಗುಳಿಯದು ಕೇಳಿದುದು
ಇಬ್ಬಂದಿತನದಲಳಿಯುವುದು ಮಂತ್ರ
ಕಳವಳದ ಮನ ಕಳೆಯುವುದು ಜಪವ)
ಎಲ್ಲವನ್ನೂ ದೇವರ ಪರವಾಗಿ, ಆನಂದತೀರ್ಥರ ತತ್ವವಾದದ ಅರಿವಿನ ಮೂಲಕ ಹರಿ ಪರವಾಗಿ ಸಮನ್ವಯ ಮಾಡಿಕೊಳ್ಳುವದು ಹೇಗೆ ಎನ್ನುವದನ್ನು ನೋಡಬೇಕೆಂದರೆ ಶ್ರೀ ವಾದಿರಾಜರ ‘ಶ್ರೀ ರುಕ್ಮಿಣೀಶ ವಿಜಯ’ ಕೃತಿಯನ್ನು ಮನನ ಮಾಡಬೇಕು ಅಂತ ನನಗನಿಸುತ್ತದೆ. ಇತ್ತೀಚೆಗಷ್ಟೇ ಓದಲು ಶುರು ಮಾಡಿದ ಈ ಕೃತಿಯಲ್ಲಿ ಇನ್ನೂ ಓದಲು ಬಹಳಷ್ಟು ಸರ್ಗಗಳಿವೆ. ಅದರಲ್ಲಿ ಕಂಡುಬರುವ ವಿಷಯ ನಿರೂಪಣೆ, ಕವಿತಾ ಚಾತುರ್ಯ, ಪದಲಾಲಿತ್ಯ, ಬಳಸಿದ ಅಲಂಕಾರಗಳು, ಉತ್ಪ್ರೇಕ್ಷೆಗಳು, ಎಲ್ಲವೂ ಆ ಕೃತಿಯ ಆರಾಧ್ಯ ಮೂರುತಿ ಶ್ರೀ ಕೃಷ್ಣನಲ್ಲೇ ನೆಲೆಯಾಗಿವೆ, ಅವನನ್ನೇ ಆರಾಧಿಸುತ್ತವೆ.
ಟಿಪ್ಪಣಿ :
* ಬರೆದಾದ ಮೇಲೆ ಇದನ್ನು ವೈದ್ಯರಿಗೆ ಕಳುಹಿಸಿದಾಗ ಅವರು ಸೂಚಿಸಿದ conclusion ಇದು. ಇದರ ಜೊತೆಗೆ ತಮ್ಮ ತಾತನವರು ಹೇಳಿಕೊಳ್ಳುತ್ತಿದ್ದ ಪ್ರಾಣೇಶದಾಸರ ಪದ ‘ಪಾಲಿಸೊ ವೇಂಕಟರೇಯ’ ಎನ್ನುವದರಲ್ಲಿ ‘ಜಾಂಬವತಿನಲ್ಲ’ ಎಂದು ಬರುತ್ತದೆ ಎಂದು ತಿಳಿಸಿದರು. ಅಲ್ಲಿ ‘ಜಾಂಬವತೀನಲ್ಲ’ನೇ ಯಾಕೆ ಬಂದ ಎಂದರೆ ಜಾಂಬವತಿಗೇ ಮೊದಲು ಭಾಗವತವನ್ನು ಉಪದೇಶಿಸಿದ್ದು ಎಂದು ತಿಳಿಸಿದರು. ದಾಸರು ಪದಗಳಲ್ಲಿ ಯಾವುದನ್ನೂ ಸುಮ್ಮ ಸುಮ್ಮನೆ ಹಾಕುವದಿಲ್ಲ, ಶಾಸ್ತ್ರ ಗ್ರಂಥಗಳಲ್ಲಿ, ಇತಿಹಾಸ ಪುರಾಣಗಳಲ್ಲಿ ಉಲ್ಲೇಖಿತವಾದ ವಿಶಿಷ್ಠ ಸಂದರ್ಭಗಳನ್ನ, ದೇವರ ಹೆಸರುಗಳನ್ನ ಸಂದರ್ಭೋಚಿತವಾಗಿ ತಮ್ಮ ಪದಗಳಲ್ಲಿ ಬಳಸಿರುತ್ತಾರೆ. ನಾವು ಜಿಜ್ಞಾಸುಗಳಾಗಿ ವಿಚಾರಿಸಿದಾಗ ಅವುಗಳ ವಿಷಯ ತಿಳಿದರೆ ಖುಷಿಯಾಗುತ್ತದೆ, ದಾಸರ ವಿಸ್ತಾರ ಅರಿವಿನ ಬಗ್ಗೆ, ಆ ಅರಿವನ್ನು ಕನ್ನಡದ ನಾಮಗಳಲ್ಲಿ ಅಡಕವಾಗಿಡುವ ಬಗ್ಗೆ ಮತ್ತಷ್ಟು ಗೌರವ ಮೂಡುತ್ತದೆ.
** ವೈದ್ಯರು ಅವತ್ತು ಹೇಳಿದ ಮಾತಿನ ಯಥಾರ್ಥ ಶಬ್ದಗಳು/ವಾಕ್ಯಗಳು ಇವೇ ಇರಲಿಕ್ಕಿಲ್ಲ. ಆದರೆ ನನ್ನ ನೆನಪಿನಲ್ಲಿ ಉಳಿದ ಆ ಮಾತಿನ ಸಂದೇಶವನ್ನು ಸಂಗ್ರಹವಾಗಿ ಬರೆಯಬೇಕು ಅನಿಸಿದಾಗ ಅವು ಬಂದದ್ದು ಈ ರೂಪದಲ್ಲಿ. ಅದಕ್ಕಾಗಿ quote ಹಾಕಿರುವೆ! )
ಇದನ್ನು ಬರೆದು ಪೋಸ್ಟಿಸಿ ಆದ ಬಳಿಕ ಕೇಳಿದ ಶ್ರೀ ಸತ್ಯಾತ್ಮ ತೀರ್ಥರ ಪ್ರವಚನದಲ್ಲಿ ಇನ್ನೊಂದು ವಿಷಯ ತಿಳಿಯಿತು. ವ್ಯಾಸ, ಹಯಗ್ರೀವ ರೂಪಗಳು ಜ್ಞಾನ ಹುಟ್ಟಿಸುವ (ಜ್ಞಾನ ಕೊಡುವ) ರೂಪಗಳಂತೆ. ಪರಶುರಾಮ ರೂಪವು ಜ್ಞಾನವನ್ನು ರಕ್ಷಿಸುವ, ಕಾಪಿಡುವ ರೂಪವಾದರೆ ಕೃಷ್ಣ ರೂಪವು ಜ್ಞಾನಕ್ಕೆ ಬರುವ ವಿಘ್ನಗಳನ್ನು ಸಂಕಷ್ಟಗಳನ್ನು ದೂರಗೊಳಿಸುವ ರೂಪವಂತೆ. ಸಂಸಾರ ಪಾಶವನ್ನು ನೀಗಲು ಕಂಸಾರಿಯನ್ನು ನೆನೆ ಎಂದದ್ದಕ್ಕೆ ಇದೂ ಒಂದು ಕಾರಣವೆನಿಸುತ್ತದೆ ನನಗೆ.