ಶ್ರೀ ದುರ್ಗಾ ಸುಳಾದಿ

ರಾಗ ಭೈರವಿ – ಧ್ರುವತಾಳ

ದುರ್ಗಾ ದುರ್ಗೆಯೆ ಮಹಾ ದುಷ್ಟ ಜನ ಸಂಹಾರೆ
ದುರ್ಗಾಂತರ್ಗತ ದುರ್ಗೆ ದುರ್ಲಭೆ ಸುಲಭೆ
ದುರ್ಗಮವಾಗಿದೆ ನಿನ್ನ ಮಹಿಮೆ ಬೊಮ್ಮ
ಭರ್ಗಾದಿಗಳಿಗೆಲ್ಲ ಗುಣಿಸಿದರೂ
ಸ್ವರ್ಗ ಭೂಮಿ ಪಾತಾಳ ಸಮಸ್ತ ವ್ಯಾಪುತ ದೇವಿ
ವರ್ಗಕ್ಕೆ ಮೀರಿದ ಬಲು ಸುಂದರಿ
ದುರ್ಗಣದವರ ಬಾಧೆ ಬಹಳವಾಗಿದೆ ತಾಯಿ
ದುರ್ಗತಿಹಾರೆ ನಾನು ಪೇಳುವದೇನು
ದುರ್ಗಂಧವಾಗಿದೆ ಸಂಸೃತಿ ನೋಡಿದರೆ
ನಿರ್ಗಮ ನಾ ಕಾಣೆನಮ್ಮ ಮಂಗಳಾಂಗೆ
ದುರ್ಗೆ ಹೇ ದುರ್ಗೆ ಮಹಾ ದುರ್ಗೆ ಭೂ ದುರ್ಗೆ ವಿಷ್ಣು-
ದುರ್ಗೆ ದುರ್ಜಯೆ ದುರ್ಧಷೆ ಶಕ್ತಿ
ದುರ್ಗ ಕಾನನ ಗಹನ ಪರ್ವತ ಘೋರ ಸರ್ಪ
ಗರ್ಗರ ಶಬ್ದ ವ್ಯಾಘ್ರ ಕರಡಿ ಮೃತ್ಯು
ವರ್ಗ ಭೂತ ಪ್ರೇತ ಪೈಶಾಚಿ ಮೊದಲಾದ
ದುರ್ಗಣ ಸಂಕಟ ಪ್ರಾಪ್ತವಾಗೆ
ದುರ್ಗಾ ದುರ್ಗೆ ಎಂದು ಉಚ್ಚಸ್ವರದಿಂದ
ನಿರ್ಗಳಿತನಾಗಿ ಒಮ್ಮೆ ಕೂಗಿದರೂ
ಸ್ವರ್ಗಾಪವರ್ಗದಲ್ಲಿ ಹರಿಯೊಡನೆ ಇದ್ದರೂ
ಸುರ್ಗಣ ಜಯ ಜಯವೆಂದು ಪೊಗಳುತಿರೆ
ಕರ್ಗಂಳಿಂದಲಿ ಎತ್ತಿ ಸಾಕುವ ಸಾಕ್ಷಿ ಭೂತೆ
ನೀರ್ಗುಡಿದಂತೆ ಲೋಕಲೀಲೆ ನಿನಗೆ
ಸ್ವರ್ಗಂಗಾಜನಕ ನಮ್ಮ ವಿಜಯವಿಠ್ಠಲನಂಘ್ರಿ
ದುರ್ಗಾಶ್ರಯ ಮಾಡಿ ಬದುಕುವಂತೆ ಮಾಡು

ಮಟ್ಟ ತಾಳ

ಅರಿದರಾಂಕುಶ ಶಕ್ತಿ ಪರಶು ನೇಗಿಲು ಖಡ್ಗ
ಸರಸಿಜ ಗದೆ ಮುದ್ಗರ ಚಾಪ ಮಾರ್ಗಣ
ವರ ಅಭಯ ಮುಸಲ ಪರಿ ಪರಿ ಆಯುಧವ
ಧರಿಸಿ ಮೆರೆವ ಲಕುಮಿ ಸರಸಿಜ ಭವ ರುದ್ರ
ಸರುವ ದೇವತೆಗಳ ಕರುಣಾಪಾಂಗದಲ್ಲಿ
ನಿರೀಕ್ಷಿಸಿ ಅವರವರ ಸ್ವರೂಪ ಸುಖ ಕೊಡುವ
ಸಿರಿಭೂಮಿದುರ್ಗಾ ಸರ್ವೋತ್ತಮ ನಮ್ಮ ವಿಜಯವಿಠ್ಠಲನಂಘ್ರಿ
ಪರಮ ಭಕುತಿಯಿಂದ ಸ್ಮರಿಸುವ ಜಗಜ್ಜನನಿ

ತ್ರಿವಿಡಿ ತಾಳ

ಸ್ತುತಿ ಮಾಡುವೆ ನಿನ್ನ ಕಾಳಿ ಮಹ ಕಾಳಿ ಉ-
ನ್ನತ ಬಾಹು ಕರಾಳವದನೆ ಚಂದಿರ ಮುಖೆ
ಧೃತಿ ಶಾಂತಿ ಬಹುರೂಪೆ ರಾತ್ರಿ ರಾತ್ರಿ ಚರಣೆ
ಸ್ಥಿತಿಯೆ ನಿದ್ರಾ ಭದ್ರೆ ಭಕ್ತವತ್ಸಲೆ ಭವ್ಯೆ
ಚತುರಷ್ಟ ದ್ವಿ ಹಸ್ತೆ ಹಸ್ತಿ ಹಸ್ತಿ ಗಮನೆ ಅ-
ದ್ಭುತ ಪ್ರಬಲೆ ಪ್ರವಾಸೆ ದುರ್ಗಾರಣ್ಯವಾಸೆ
ಕ್ಷಿತಿಭಾರಹರಣೆ ಕ್ಷೀರಾಬ್ಧಿತನಯೆ ಸ-
ದ್ಗತಿ ಪ್ರದಾತೆ ಮಾಯಾ ಶ್ರೀಯೆ ಇಂದಿರೆ ರಮೆ
ದಿತಿಜಾತ ನಿಗ್ರಹೆ ನಿರ್ಧೂತ ಕಲ್ಮಷೆ
ಪ್ರತಿಕೂಲಭೇದೆ ಪೂರ್ಣಬೋಧೆ ರೌದ್ರೆ
ಅತಿಶಯ ರಕ್ತ ಜಿಹ್ವಾಲೋಲೆ ಮಾಣಿಕ್ಯಮಾಲೆ
ಜಿತಕಾಮೆ ಜನನ ಮರಣ ರಹಿತೆ ಖ್ಯಾತೆ
ಘೃತಪಾತ್ರ ಪರಮಾನ್ನ ತಾಂಬೂಲ ಹಸ್ತೆ ಸು-
ವ್ರತೆ ಪತಿವ್ರತೆ ತ್ರಿನೇತ್ರೆ ರಕ್ತಾಂಬರೆ
ಶತಪತ್ರನಯನೆ ನಿರುತಕನ್ಯೆ ಉದಯಾರ್ಕ-
ಶತಕೋಟಿ ಸನ್ನಿಭೆ ಹರಿಯಾಂಕಸಂಸ್ಥೆ
ಶ್ರುತಿತತಿನುತೆ ಶುಕ್ಲ ಶೋಣಿತರಹಿತೆ ಅ-
ಪ್ರತಿಹತೆ ಸರ್ವದಾ ಸಂಚಾರಿಣಿ ಚತುರೆ
ಚತುರ ಕಪರ್ದಿಯೆ ಅಂಭ್ರಣಿ ಹ್ರೀ
ಉತ್ಪತ್ತಿ ಸ್ಥಿತಿ ಲಯಕರ್ತೆ ಶುಭ್ರಶೋಭನ ಮೂರ್ತೇ
ಪತಿತಪಾವನೆ ರನ್ನೆ ಸರ್ವೌಷಧಿಯಲ್ಲಿದ್ದು
ಹತ ಮಾಡು ಕಾಡುವ ರೂಗಂಗಳಿಂದ (ದು/ಗಳನು?*)
ಕ್ಷಿತಿಯೊಳು ಸುಖದಲ್ಲಿ ಬಾಳುವ ಮತಿ ಇತ್ತು
ಸತತ ಕಾಯಲಿ ಬೇಕು ದುರ್ಗೆ ದುರ್ಗೆ
ಚ್ಯುತದೂರ ವಿಜಯವಿಠ್ಠಲರೇಯನ ಪ್ರಿಯೆ
ಕೃತಾಂಜಲಿಯಿಂದಲಿ ತಲೆ ಬಾಗಿ ನಮಿಸುವೆ

ಅಟ್ಟತಾಳ

ಶ್ರೀಲಕ್ಷ್ಮಿ ಕಮಲಾ ಪದ್ಮಾ ಪದ್ಮಿನಿ ಕಮ-
ಲಾಲಯೆ ರಮಾ ವೃಷಾಕಪಿ ಧನ್ಯಾ ವೃದ್ಧಿ ವಿ-
ಶಾಲಾ ಯಜ್ಞಾ ಇಂದಿರೆ ಹಿರಣ್ಯ ಹರಿಣಿ
ವಾಲಯ ಸತ್ಯ ನಿತ್ಯಾನಂದ ತ್ರಯಿಸುಧಾ
ಶೀಲೆ ಸುಗಂಧಿ ಸುಂದರಿ ವಿದ್ಯಾ ಸುಶೀಲೆ
ಸುಲಕ್ಷಣದೇವಿ ನಾನಾ ರೂಪಗಳಿಂದ ಮೆರೆವ ಮೃತ್ಯುನಾಶೆ
ವಾಲಗ ಕೊಡು ಸಂತರ ಸನ್ನಿಧಿಯಲ್ಲಿ
ಕಾಲಕಾಲಕ್ಕೆ ಎನ್ನ ಭಾರವಹಿಸುವ ತಾಯಿ
ಮೇಲು ಮೇಲು ನಿನ್ನ ಶಕ್ತಿ ಕೀರ್ತಿ ಬಲು
ಕೇಳಿ ಕೇಳೀ ಬಂದೆ ಕೇವಲ ಈ ಮನ
ಘಾಳಿಯಂತೆ ಪರದ್ರವ್ಯಕ್ಕೆ ಪೋಪುದು
ಏಳಲ ಮಾಡದೆ ಉದ್ಧಾರವ ಮಾಡುವ
ಕೈಲಾಸಪುರದಲ್ಲಿ ಪೂಜೆಗೊಂಬ ದೇವಿ
ಮೂಲಪ್ರಕೃತಿ ಸರ್ವ ವರ್ಣಾಭಿಮಾನಿನಿ
ಪಾಲಸಾಗರಶಾಯಿ ವಿಜಯವಿಠ್ಠಲನೊಳು
ಲೀಲೆ ಮಾಡುವ ನಾನಾಭರಣೆ ಭೂಷಣೆ ಪೂರ್ಣೆ

ಆದಿತಾಳ
ಗೋಪಿನಂದನೆ ಮುಕ್ತೆ ದೈತ್ಯ ಸಂತತಿಗೆ ಸಂ-
ತಾಪವ ಕೊಡುತಿಪ್ಪ ಮಹಾ ಕಠೋರ ಉಗ್ರ-
ರೂಪ ವೈಲಕ್ಷಣೆ ಅಜ್ಞಾನಕ್ಕಭಿಮಾನಿನಿ
ತಾಪತ್ರಯವಿನಾಶೆ ಓಂಕಾರೆ ಹೂಂಕಾರೆ
ಪಾಪಿ ಕಂಸಗೆ ಭಯ ತೋರಿದೆ ಬಾಲ ಲೀಲೆ
ವ್ಯಾಪುತೆ ಧರ್ಮ ಮಾರ್ಗ ಪ್ರೇರಣೆ ಅಪ್ರಾಕೃತೆ
ಸ್ವಾಪದಲ್ಲಿ ನಿನ್ನ ನೆನೆಸಿದ ಶರಣನಿಗೆ
ಅಪಾರವಾಗಿದ್ದ ವಾರಿಧಿಯಂತೆ ಮಹಾ
ಆಪತ್ತು ಬಂದಿರಲು ಹಾರಿ ಪೋಗೋವು ಸಪ್ತ
ದ್ವೀಪನಾಯಿಕೆ ನರಕ ನಿರ್ಲೇಪೆ ತಮೋಗುಣದ
ವ್ಯಾಪಾರ ಮಾಡಿಸಿ ಭಕ್ತ ಜನಕೆ ಪುಣ್ಯ
ಸೋಪಾನ ಮಾಡಿ ಕೊಡುವ ಸೌಭಾಗ್ಯವಂತೆ ದುರ್ಗೆ
ಪ್ರಾಪುತವಾಗಿ ಎನ್ನ ಮನದಲಿ ನಿಂದು ದುಃಖ-
ಕೂಪದಿಂದಲಿ ಎತ್ತಿ ಕಡೆ ಮಾಡು ಜನ್ಮಂಗಳನು
ಸೌಪರ್ಣಿ ಮಿಗಿಲಾದ ಸತಿಯರು ನಿತ್ಯ ನಿನ್ನ
ಆಪಾದ ಮೌಳಿ ತನಕ ಭಜಿಸಿ ಭವ್ಯರಾದರು
ನಾ ಪೇಳುವದೇನು ಪಾಂಡವರ ಮನೋಭೀಷ್ಟೆ
ಈ ಪಂಚ ಭೌತಿಕದಲ್ಲಿ ಆವ ಸಾಧನ ಕಾಣೆ
ಶ್ರೀಪತಿನಾಮ ಒಂದೇ ಜಿಹ್ವಾಗ್ರದಲ್ಲಿ ನೆನೆವ
ಔಪಾಸನೆ ಕೊಡು ರುದ್ರಾದಿಗಳ ವರದೆ
ತಾಪಸ ಜನಪ್ರಿಯ ವಿಜಯವಿಠ್ಠಲ ಮೂರ್ತಿಯ
ಶ್ರೀಪಾದಾರ್ಚನೆ ಮಾಳ್ಪಾ ಶ್ರೀಭೂದುರ್ಗಾವರ್ಣಾಶ್ರಯೆ

ಜತೆ

ದುರ್ಗೆ ಹಾ ಹೇ ಹೋ ಹಾ ದುರ್ಗೆ ಮಂಗಳ ದುರ್ಗೆ
ದುರ್ಗತಿ ಕೊಡದಿರು ವಿಜಯವಿಠ್ಠಲನ ಪ್ರಿಯೆ

ವಿಜಯದಾಸರ ಈ ದುರ್ಗಾ ಸುಳಾದಿಯೇ ಇರಬೇಕು ನಾನು ಮೊದಲು ಕೇಳಿದ ಸುಳಾದಿ. ನಮ್ಮಮ್ಮ ಇದನ್ನ ಹೇಳುತ್ತಿದ್ದ ನೆನಪಿದೆ. ಆಗಿನ್ನೂ ಸುಳಾದಿ ಅಂದರೆ ಏನು ಅಂತ ಗೊತ್ತಿರಲಿಲ್ಲ. ನಮ್ಮಮ್ಮನೂ ಹೇಳ್ತಾ ಇದ್ದದ್ದು ಬಹುಶಃ ಈ ಸುಳಾದಿಯನ್ನ, ಜೊತೆಗೆ ಜಗನ್ನಾಥದಾಸರ ‘ದುರಿತವನ ಕುಠಾರ’ ಎಂದು ಶುರುವಾಗುವ ನರಸಿಂಹ ಸುಳಾದಿ ಮತ್ತು ವಿಜಯದಾಸರ ಧನ್ವಂತ್ರಿ ಸುಳಾದಿಗಳನ್ನ ಮಾತ್ರ, ಅಥವಾ ಅವಷ್ಟೆ ನನ್ನ ನೆನಪಿನಲ್ಲಿ ಉಳಿದಿರುವದೇನೊ.

ಮುಂದೆ ನಮ್ಮಮ್ಮ ಮತ್ತು ಅಪ್ಪ ಇಬ್ಬರಿಗೂ ಸುಳಾದಿಗಳಲ್ಲಿ ಆಸಕ್ತಿ ಹುಟ್ಟಿ, ಅವುಗಳನ್ನ ಹೇಳಿಕೊಳ್ಳಲು ಮತ್ತು ತಿಳಿಸಿಕೊಡಲು ಹಿರಿಯರಾದ ವೆಂಕಟರಾಯರು, ರಾಘಣ್ಣ ಅವರು, ಶ್ರೀನಿವಾಸರಾಯರು, ಜಯಪ್ಪ ಅವರು ಮತ್ತು ವೆಂಕಮ್ಮ ಮಾಮಿ ಅವರ ಸಂಪರ್ಕ ಬರುವಷ್ಟರಲ್ಲಿ ನಾನು ಮನೆಯಿಂದ ಹೊರಬಿದ್ದು ಇಂಜಿನಿಯರಿಂಗಿಗೆ ಅಂತ ಹಾಸ್ಟೆಲ್ ಸೇರಿದ್ದೆ, ಅದರ ನಂತರ ಕೆಲಸಕ್ಕೆ ಅಂತ ಬೆಂಗಳೂರು, ಸ್ಯಾನ್ ಹೋಸೆ ಸೇರಿದ್ದಾಯಿತು. ಅದೆಲ್ಲದರ ಮಧ್ಯದಲ್ಲಿ ಆಗಾಗ ಮನೆಗೆ ಹೋದಾಗ ದೊರಕಿದ ಸಂಪರ್ಕದಲ್ಲಿ ಆಗಾಗ ಸುಳಾದಿಗಳನ್ನ ಕೇಳುತ್ತಿದ್ದೆ. ಅಪ್ಪ ಅಮ್ಮರು ಹೇಳುವ ವಿಷಯಗಳಿಂದ ಅವುಗಳ ಬಗ್ಗೆ ಆಸಕ್ತಿ ಮೂಡುತ್ತಿತ್ತು. ಆದರೂ ಅವುಗಳನ್ನ ಹೇಳಿಕೊಳ್ಳಬೇಕು ಅಂತ ಅನ್ನಿಸಿರಲಿಲ್ಲ. ಸಾಕಷ್ಟು ಚರಣಗಳನ್ನುಳ್ಳ, ದೊಡ್ಡದಾಗಿ ಕಾಣುತ್ತಿದ್ದ ಸುಳಾದಿಗಳನ್ನ ಯಾರಾದರೂ ಹೇಳುತ್ತಿದ್ದರೆ ಕೇಳುತ್ತಿದ್ದೆ ಅಷ್ಟೆ. ಕೆಲವು ಸುಳಾದಿಗಳು ಸ್ವಲ್ಪ ಮಟ್ಟಿಗಾದರೂ ನೆನಪಿನಲ್ಲಿ ಉಳಿಯತೊಡಗಿದ್ದು ರಾಯಚೂರು ಶೇಷಗಿರಿದಾಸರು ಹಾಡಿದ ‘ಪಂಚರತ್ನ ಸುಳಾದಿ’ಗಳ ಕ್ಯಾಸೆಟ್ಟನ್ನು ಕೊಂಡು ತಂದದ್ದು ಮತ್ತು ಆ ಕ್ಯಾಸೆಟ್ಟನ್ನ ಕಾರಿನಲ್ಲಿ ಇಟ್ಟುಕೊಂಡು ಸಾಕಷ್ಟು ಸಾರಿ ಕೇಳಿದ ಮೇಲೆ. ಇಷ್ಟಾದರೂ ಸುಳಾದಿಗಳ ಪ್ರಪಂಚದ ಒಂದು ಇಣುಕು ನೋಟವನ್ನಷ್ಟೇ ಇಲ್ಲಿಯವರೆಗೆ ನೋಡಿದ್ದು. ಆದಷ್ಟು ಆದಾಗ ಓದುತ್ತ ಇರಬೇಕು.

ಅಮ್ಮನ ಬಾಯಿಯಲ್ಲಿ ದುರ್ಗಾ ಸುಳಾದಿಯನ್ನ ಕೇಳುತ್ತಿದ್ದಾಗ ಅದರ ಕೊನೆಗೆ ಜತೆಯಲ್ಲಿ ಬರುವ ದುರ್ಗೆ ಹಾ ಹೇ ಹೋ ಹಾ ಎನ್ನುವದನ್ನ ಕೇಳಿ ಮೊದಮೊದಲು ಆಶ್ಚರ್ಯವಾಗುತ್ತಿತ್ತು. ಈಗಿನ ಆಶ್ಚರ್ಯವೆಂದರೆ, ಇಷ್ಟು ವರ್ಷಗಳ ನಂತರವೂ ನನಗೆ ಅದರ ಅರ್ಥ ತಿಳಿದಿಲ್ಲ! ‘ಹಿ’ ಎನ್ನುವದು ಲಜ್ಜಾ ಬೀಜ ಅಥವಾ ಲಕ್ಷ್ಮೀಯನ್ನ ಧ್ಯಾನಿಸುವ ಅಕ್ಷರ ಎಂದು ಕೇಳಿರುವೆ. ರಾಯರ ಸ್ತೋತ್ರದ ಕೊನೆಯಲ್ಲಿ ಬರುವ ‘ಸಾಕ್ಷೀ ಹಯಾಸ್ಯೋsತ್ರ ಹೀ’ ಎಂಬ ರಾಘವೇಂದ್ರ ಸ್ವಾಮಿಗಳ ಆಶೀರ್ವಚನಕ್ಕೆ ‘ಲಕ್ಷ್ಮೀ ಹಯವದನರೇ ಸಾಕ್ಷಿ’ ಎಂದರ್ಥವಂತೆ. ಈ ಸುಳಾದಿಯಲ್ಲಿ ಬರುವ ‘ಹಾ ಹೇ ಹೋ ಹಾ’ ಎಂಬುವು ದುರ್ಗೆಯನ್ನ ಸೂಚಿಸುವಂತಹವೇ?

ಅದೊಂದೇ ಪ್ರಶ್ನೆಯಲ್ಲ, ಇನ್ನೂ ಹಲವು ಪ್ರಶ್ನೆಗಳಿವೆ,
೧. ಈ ಸುಳಾದಿಯ ಪ್ರತಿ ಚರಣಕ್ಕೆ ಬಳಸಿದ ತಾಳಕ್ಕೂ, ಆ ಚರಣದಲ್ಲಿ ವ್ಯಕ್ತಪಡಿಸಿದ ಭಾವಕ್ಕೂ ಇರುವ ಸಂಬಂಧವೇನು? ಮೊದಲ ಚರಣದಲ್ಲಿ ದುರ್ಗೆಯ ಮಹತ್ವದ ವಿಚಾರವಿದೆ, ಲೋಕಲೀಲೆಯೆಂಬುದು ಅವಳಿಗೆ ನೀರುಕುಡಿದಷ್ಟು ಸುಲಭ ಎನ್ನುತ್ತಾರೆ. ದುರ್ಗಂಧವಾದ ಸಂಸೃತಿ(ಹುಟ್ಟು ಸಾವಿನ ಸಂಸಾರ)ಯಿಂದ, ಬರುವ ಆಪತ್ತುಗಳಿಂದ ರಕ್ಷಿಸಿ ಸ್ವರ್ಗದ ಗಂಗೆಯ ತಂದೆಯಾದ ವಿಜಯವಿಠ್ಠಲನ ಆಶ್ರಯ ಮಾಡಿಕೊಂಡು ಬದುಕುವಂತೆ ಮಾಡು ಎಂದು ಪ್ರಾರ್ಥಿಸುತ್ತಾರೆ. ಈ ಚರಣಕ್ಕೆ ಬಳಸಿದ ಧ್ರುವ ತಾಳ ಇಲ್ಲಿನ ಭಾವವನ್ನ ಹೇಗೆ ಕಟ್ಟಿ ಕೊಡುತ್ತದೆ? ಅದೇ ರೀತಿ ಉಳಿದ ಚರಣಗಳಲ್ಲಿ ವ್ಯಕ್ತವಾಗುವ ಭಾವಗಳನ್ನ ಆಯಾ ಚರಣಗಳ ತಾಳಗಳು ಹೇಗೆ ಉದ್ದೀಪಿಸುತ್ತವೆ?

೨. ಮೊದಲ ಚರಣದ ಕೊನೆಯೆರಡು ಸಾಲುಗಳಲ್ಲಿ ಬರುವ ವಿಜಯವಿಠ್ಠಲನಂಘ್ರಿ ದುರ್ಗಾಶ್ರಯ ಮಾಡಿ ಬದುಕುವಂತೆ ಮಾಡು ಎನ್ನುವದನ್ನ, ವಿಜಯವಿಠ್ಠಲನ ಪಾದವನ್ನು ದುರ್ಗೆ ನಿನ್ನ ಮೂಲಕ ಆಶ್ರಯಿಸುವಂತೆ ಮಾಡಿ ಬದುಕಿಸು ಎಂದು ಅರ್ಥ ಮಾಡುವದೋ ಅಥವಾ ವಿಜಯವಿಠ್ಠಲನಂಘ್ರಿದುರ್ಗ (ಅಥವಾ ಅವನ ಪಾದಕಮಲದ ಊರು, ವೈಕುಂಠ) ಎಂಬ ಅರ್ಥ ಬರುವುದೋ? ಇಲ್ಲಾ ಎರಡೂ ತರಹ ಅರ್ಥೈಸಬಹುದೊ?

೩. ಎರಡನೇ ಚರಣದಲ್ಲಿ ಹೇಳಿರುವದು ಅಂಭೃಣೀಸೂಕ್ತದ ವಿಷಯವಿದ್ದಂತೆ ತೋರುತ್ತದೆ. ಅದರ ಜೊತೆಗೆ ಬರುವ ದೇವಿಯ ನಾನಾ ವಿಧದ ಆಯುಧಗಳ ಉಲ್ಲೇಖ ಬರೀ ದುರ್ಗಾ ರೂಪಕ್ಕೆ ಸಂಬಂಧಪಟ್ಟವೋ ಅಥವಾ ಶ್ರೀ, ಭೂ, ದುರ್ಗಾ ಎಂಬ ಮೂರು ರೂಪಗಳಿಗೂ ಸಂಬಂಧಪಟ್ಟವೋ?

೪. ಮೂರನೇ ಚರಣದಲ್ಲಿ, ಹೆಚ್ಚಿನ ಪುಸ್ತಕಗಳಲ್ಲಿ ನೋಡಿದಂತೆ ಮತ್ತು ನಾನು ಕೇಳಿದಂತೆ ಹೆಚ್ಚಿನ ಪಾರಾಯಣದಲ್ಲಿ, ‘ಸರ್ವೌಷಧಿಯಲಿದ್ದು ಹತ ಮಾಡು ಕಾಡುವ ರೋಗಂಗಳಿಂದ’ ಎನ್ನುವ ಸಾಲಿದೆ. ಇದು ಅರ್ಥ ಸರಿ ಹೋಗುವದಿಲ್ಲ ಅಲ್ಲವೆ? ಒಂದು ಪುಸ್ತಕದಲ್ಲಿ ‘ಸರ್ವೌಷಧಿಯಲಿದ್ದು ಹತ ಮಾಡು ಕಾಡುವ ರೋಗಂಗಳನು’ ಎಂದಿರುವದನ್ನ ನೋಡಿದ್ದೇನೆ. ಇತ್ತೀಚೆಗೆ ಅನಿಸುತ್ತಿರುವದು ಇದು ಬಹುಶಃ ‘ಸರ್ವೌಷಧಿಯಲಿದ್ದು ಹತ ಮಾಡು ಕಾಡುವ ರೋಗಂಗಳಿಂದು’ ಎಂದಿರಬಹುದೇ ಎಂದು.

೫. ಕೊನೆಯ ಚರಣದಲ್ಲಿ ಬರುವ ‘ನಾ ಪೇಳುವದೇನು ಪಾಂಡವರ ಮನೋಭೀಷ್ಟೆ’ ಎಂಬುದಕ್ಕೆ ಅರ್ಥವೇನು? ಕುರುಕ್ಷೇತ್ರ ಯುದ್ಧಕ್ಕೆ ಮೊದಲು ಅಕ್ಷೋಹಿಣಿ ಸೈನ್ಯ ಬೇಡ ‘ಕೃಷ್ಣನೇ ನಮ್ಮೆಡೆಗಿರಲಿ’ ಎಂದ ಅರ್ಜುನನ ಮಾತಿನ ಮೂಲಕ ವ್ಯಕ್ತವಾದ ಮನೋಭಿಷ್ಟೆಯೇ? ಅಥವಾ ಇನ್ನಾವುದಾದರೂ ಪ್ರಸಂಗವನ್ನ ಇಲ್ಲಿ ಸೂಚಿಸುತ್ತಿರುವರೋ?

೬. ‘ಈ ಪಂಚ ಭೌತಿಕದಲ್ಲಿ ಆವ ಸಾಧನ ಕಾಣೆ’ ಎಂದೇಕೆ ಹೇಳುತ್ತಿರುವರು? ‘ಮಾನವ ಜನ್ಮ ದೊಡ್ಡದು'(ಪುರಂದರದಾಸರು), ‘ಸಾಧನಕೆ ಬಗೆಗಾಣೆನೆನ್ನಬಹುದೆ'(ವಿಜಯದಾಸರು), ‘ಸಾಧನ ಶರೀರವಿದು ನೀ ದಯದಿ ಕೊಟ್ಟದ್ದು'(ಜಗನ್ನಾಥದಾಸರು) ಮುಂತಾದ ಬೇರೆ ಬೇರೆ ಪದಗಳಲ್ಲಿ ವ್ಯಕ್ತವಾಗುವ ಭಾವಕ್ಕೂ ಇಲ್ಲಿ ವ್ಯಕ್ತವಾದ ಭಾವಕ್ಕೂ ವ್ಯಾತ್ಯಾಸವೆನಿಸುವದೆ? ನನಗೇ ತೋಚುವ ಸಮಾಧಾನವೆಂದರೆ ವ್ಯತ್ಯಾಸವಿಲ್ಲ, ಪಂಚಭೌತಿಕದ ಸಾಧನೆಯ ನಿರಾಕರಣ ಅದಕ್ಕಿಂತಲೂ ಉತ್ತಮವಾದ, ‘ಅಂತಕಾಲೇ ವಿಶೇಷತಃ’ ಎನ್ನುವ ಹರಿನಾಮ, ಶ್ರೀಪತಿಯ ನಾಮ ನಾಲಿಗೆಯ ಉಳಿಯುವಂತಹ ಸಾಧನೆಗೋಸ್ಕರ ಎನ್ನುವದು. ಈ ಸಾಲು ’ಪಾಂಡವರ ಮನೋಭೀಷ್ಟ’ವನ್ನ ಸೂಚಿಸುತ್ತಿದೆಯೆ?

ಇಷ್ಟೆಲ್ಲ ಪ್ರಶ್ನೆಗಳು ಪ್ರತಿ ಬಾರಿ ಓದುವಾಗಲೂ ಕಾಡುವದಿಲ್ಲ, ಬೇರೆ ಬೇರೆ ಸಂದರ್ಭಗಳಲ್ಲಿ ಅನಿಸಿದವುಗಳಿವು. ಒತ್ತಟ್ಟಿಗಿರಲಿ ಎಂದು ಇಲ್ಲಿ ಬರೆದಿರುವೆ.

ಶ್ರೀದುರ್ಗಾ ದೇವಿಯ ಈ ಸುಳಾದಿಯನ್ನ ಓದಿದಾಗ ಮನಸ್ಸು ಪ್ರಸನ್ನವಾಗುತ್ತದೆ. ನಾಲ್ಕನೇ ಚರಣದ ‘ಶ್ರೀ ಲಕ್ಷ್ಮೀ ..’ ಎಂದು ಶುರುವಾಗಿ ಹೇಳುವ ಲಕ್ಷ್ಮಿಯ ೨೪ ರೂಪಗಳನ್ನ ಹೇಳುವಾಗ ಇವು ೨೪ ತತ್ವಾಭಿಮಾನಿ ದೇವತೆಗಳಲ್ಲಿ ಅಡಕವಾದ ೨೪ ಲಕ್ಷ್ಮೀನಾರಾಯಣರ ರೂಪಗಳಲ್ಲಿನ ಲಕ್ಷ್ಮೀ ರೂಪಗಳಲ್ಲವೇ ಅಂತ ನೆನಪಾಗುತ್ತದೆ. ಅವುಗಳ ಜೊತೆಗಿನ ನಾರಾಯಣ ರೂಪ ಹಾಗೂ ಆಯಾ ರೂಪಗಳಿಂದ ಅನುಗ್ರಹಿತರಾಗುವ ತತ್ವಾಭಿಮಾನಿಗಳ ಸ್ಮರಣೆಯೂ ಆದರೆ ಎಷ್ಟು ಚನ್ನಾಗಿರುತ್ತದೆ ಅನಿಸುತ್ತದೆ.

ವಿಜಯದಶಮಿಯ ದಿವಸ ದುರ್ಗಾ ದೇವಿಯ, ಶ್ರೀ ಹರಿಯ ಪ್ರಾರ್ಥನೆ ವಿಜಯದಾಸರ ದುರ್ಗಾ ಸುಳಾದಿಯ ಮೂಲಕ. ದಾಸರಾಯರ, ಗುರುಗಳ,ಭಾರತಿವಾಯು ದೇವರ, ಲಕ್ಷ್ಮೀನಾರಾಯಣರ ಅನುಗ್ರಹ ನಮ್ಮೆಲ್ಲರ ಮೇಲಿರಲಿ ಎಂದು ಪ್ರಾರ್ಥಿಸುವೆ.

[ವಿಜಯದಶಮಿಗೆ ಬರೆದದ್ದು ಹಾಕಿರಲಿಲ್ಲ. ಇವತ್ತು ಹಾಕುತ್ತಿರುವೆ]

Advertisements

2 thoughts on “ಶ್ರೀ ದುರ್ಗಾ ಸುಳಾದಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s