ಶ್ರೀರ್ಯತ್ಕಟಾಕ್ಷಬಲವತ್ಯಜಿತಂ ನಮಾಮಿ

ಮಧ್ವಾಚಾರ್ಯರ ದ್ವಾದಶಸ್ತೋತ್ರದ ಏಳನೇ ಅಧ್ಯಾಯದ ಈ ಸ್ತೋತ್ರ, ಹೃಷಿಕೇಶತೀರ್ಥರು ಬರೆದಿಟ್ಟ ಪ್ರಾಚೀನ ಪಾಠದಲ್ಲಿ ‘ಶ್ರೀಸ್ತುತಿ’ ಎಂದೂ, ದ್ವಾದಶಸ್ತೋತ್ರಗಳಲ್ಲಿ ಮೊದಲನೇ ಸ್ತೋತ್ರವಾಗಿಯೂ ದಾಖಲಾಗಿದೆಯಂತೆ. ಇಲ್ಲಿ ನುಡಿ ನುಡಿಯಲ್ಲಿ ಲಕ್ಷ್ಮೀದೇವಿಯ ಸ್ತುತಿಯನ್ನ ಮಾಡುತ್ತಾರೆ ಮತ್ತು ಲಕ್ಷ್ಮೀದೇವಿಗೆ ತನ್ನ ಕಡೆಗಣ್ಣ ನೋಟದಿಂದಲೇ ಬಲ ತುಂಬುವ ಅಜಿತನಾಮಕ ಹರಿಯನ್ನು ನಮಿಸುತ್ತಾರೆ. ಜಗದ ತಾಯಿ ತಂದೆಯರನ್ನ ಒಟ್ಟಿಗೆ ನೆನೆಯುತ್ತಾರೆ.

ಹರಿಯ ಈ ಅಜಿತ ರೂಪ ಸಮುದ್ರಮಥನವನ್ನ ಮಾಡಿಸಿದ ರೂಪವಂತೆ. ಸುರಾಸುರರನ್ನೆಲ್ಲ ಒಟ್ಟು ಸೇರಿಸಿ, ಆ ಇಡೀ ಸಮುದ್ರಮಥನದ ಜವಾಬ್ದಾರಿಯನ್ನ ತೆಗೆದುಕೊಂಡು, ಅದು ನಡೆಯುವಂತೆ ನೋಡಿಕೊಂಡ ಈ ಅಜಿತರೂಪದ ಹರಿಯನ್ನೇ ಸಮುದ್ರಮಥನದಿಂದೆದ್ದು ಬಂದ ಲಕ್ಷ್ಮೀ ವರಿಸಿದ್ದಂತೆ. ಅಜಿತನ ರೂಪದ ಕಾರ್ಯಗಳ ಬಗ್ಗೆ ಇನ್ನಷ್ಟು ಓದಬೇಕು, ಸರಿಯಾದ ಆಕರ ದೊರಕಿದಾಗ.

ಮೊದಲೊಮ್ಮೆ ‘ಮಜ್ಜಿಗೆಯೊಳಗಿನ ಬೆಣ್ಣೆಯಂತೆ’ ಎಂದು ಶುರುವಾದ ಜಿಜ್ಞಾಸೆಯಲ್ಲಿ ಈ ಸ್ತುತಿಯ ಬಗ್ಗೆ ಬರೆದಿದ್ದೆ. ಅಲ್ಲಿ ಬರೆದಾದ ಮೇಲೆ ವಿದ್ಯಾಭೂಷಣರ ದನಿಯಲ್ಲಿ ಬಹಳಷ್ಟು ಬಾರಿ ಕೇಳಿದೆ ಈ ಸ್ತುತಿಯನ್ನ. ನನ್ನ ಬಳಿಯಿರುವ ‘ಸಂಕೀರ್ಣ ಗ್ರಂಥಗಳು’ ಪುಸ್ತಕದಲ್ಲಿ ಈ ಸ್ತುತಿಯ ಅರ್ಥವನ್ನು ಓದಿ, ಇಲ್ಲಿ ಬರೆದಿರುವೆ.

ಈ ಸ್ತುತಿಯ ಮೊದಲ ನುಡಿಯಲ್ಲಿ ‘ವಿಶ್ವಸ್ಥಿತಿಪ್ರಳಯಸರ್ಗಮಹಾವಿಭೂತಿ ವೃತ್ತಿಪ್ರಕಾಶನಿಯಮಾವೃತಿ ಬಂಧ ಮೋಕ್ಷಾಃ’ ಎಂಬ ಈ ಜಗದ ಹಲವು ವಿಷಯಗಳನ್ನು ತನ್ನ ಕಡೆಗಣ್ಣ ನೋಟದಲ್ಲಿ ನಡೆಸುವ ರಮೆ ಎಂದು ಹೇಳಿರುವುದನ್ನ ಮುಂದಿನ ನುಡಿಗಳಲ್ಲಿ ವಿಶದೀಕರಿಸುತ್ತ ಸ್ತುತಿಸುತ್ತಿರುವರೇನೋ ಎಂದು ಅನಿಸುತ್ತದೆ. ಮೇಲ್ನೋಟಕ್ಕೆ ನೋಡಿದರೆ ಶಿವ ತಾಂಡವವನ್ನು ಹೇಳುವ ನುಡಿ ಪ್ರಳಯದ ಬಗೆಗೂ, ಬೊಮ್ಮನ ಬಗೆಗಿನ ನುಡಿ ‘ಸರ್ಗ’ದ ಬಗೆಗೂ,  ಇರುವಂತೆ ಅನಿಸುತ್ತವೆ. ಅದು ನಿಜವಾಗಿಯೂ ಹಾಗೇ ವಿಶದೀಕರಿಸುತ್ತ ಸ್ತುತಿಸುತ್ತಿರುವುದೇ ಹೌದೆ ಎನ್ನುವದು ನನ್ನ ಬುದ್ಧಿಗೆ ನಿಲುಕಿಲ್ಲ. ತಿಳಿದವರನ್ನ ಕೇಳಬೇಕು.

ನವರಾತ್ರಿಯ ಈ ದಿನಗಳಲ್ಲಿ ಲಕ್ಷ್ಮೀ ನಾರಾಯಣರ ಸ್ಮರಣೆ, ಪ್ರಾರ್ಥನೆ, ಈ ವಿಧದಲ್ಲಿ. ನವರಾತ್ರಿ ನಮ್ಮೆಲ್ಲರ ಬಾಳಿನಲ್ಲೂ ಸಡಗರವನ್ನು ತುಂಬಲಿ.

******

ವಿಶ್ವಸ್ಥಿತಿಪ್ರಳಯಸರ್ಗಮಹಾವಿಭೂತಿ
ವೃತ್ತಿಪ್ರಕಾಶನಿಯಮಾವೃತಿಬಂಧ ಮೋಕ್ಷಾಃ।
ಯಸ್ಯಾ ಅಪಾಂಗಲವಮಾತ್ರತ ಊರ್ಜಿತಾ ಸಾ
ಶ್ರೀರ್ಯತ್ಕಟಾಕ್ಷಬಲವತ್ಯಜಿತಂ ನಮಾಮಿ ॥ ೧ ॥

ಈ ಜಗದ ಇರವು, ಅಳಿವು, ಹುಟ್ಟು, ಐಸಿರಿ, ಬಾಳು, ತಿಳಿವು, ನಿಯಮನ, ಅಜ್ಞಾನ, ಬಂಧನ, ಬಿಡುಗಡೆ (ಮೋಕ್ಷ)ಗಳು ಯಾರ ಕಡೆಗಣ್ಣ ನೋಟದಿಂದಲುಂಟಾಗುವವೋ, ಆ ರಮೆಗೆ ತನ್ನ ಕಣ್ತುದಿಯ ನೋಟದಲೇ ಬಲ ತುಂಬುವ ಅಜಿತನಿಗೆ ನಮಿಸುವೆನು

ಬ್ರಹ್ಮೇಶಶಕ್ರರವಿಧರ್ಮಶಶಾಂಕಪೂರ್ವ
ಗೀರ್ವಾಣಸಂತತಿರಿಯಂ ಯದಪಾಂಗಲೇಶಮ್।
ಆಶ್ರಿತ್ಯ ವಿಶ್ವವಿಜಯಂ ವಿದಧಾತ್ಯಚಿಂತ್ಯಾ (ವಿಸೃಜತ್ಯಚಿಂತ್ಯಾ)
ಶ್ರೀರ್ಯತ್ಕಟಾಕ್ಷಬಲವತ್ಯಜಿತಂ ನಮಾಮಿ ॥ ೨ ॥

ಬ್ರಹ್ಮ, ಶಿವ, ಇಂದ್ರ, ಸೂರ್ಯ, ಯಮ, ಚಂದ್ರ ಮೊದಲಾದ ದೇವತೆಗಳ ಗಣವು ಯಾರ ಕಣ್ತುದಿನೋಟವನ್ನು ಆಶ್ರಯಿಸಿ ಜಗದಲ್ಲಿ ಗೆಲವು ಪಡೆಯುವದೋ ಅಂಥ, ತಿಳುವಿಗೆಟುಕದ ರಮೆಗೆ ಯಾರ ಕಟಾಕ್ಷದ ಬಲವೋ ಅಂಥ ಅಜಿತನಿಗೆ ನಮಿಸುವೆ.

ಧರ್ಮಾ ರ್ಥಕಾಮಸುಮತಿಪ್ರಚಯಾದ್ಯಶೇಷ
ಸನ್ಮಂಗಲಂ ವಿದಧತೇ ಯದಪಾಂಗಲೇಶಮ್।
ಆಶ್ರಿತ್ಯ ತತ್ಪ್ರಣತ ಸತ್ಪ್ರಣತಾ ಅಪೀಡ್ಯಾಃ
ಶ್ರೀರ್ಯತ್ಕಟಾಕ್ಷಬಲವತ್ಯಜಿತಂ ನಮಾಮಿ ॥ ೩ ॥

ತಮಗೆ ಮೊರೆ ಬಂದ ಸಜ್ಜನರಿಗೆ ಧರ್ಮ, ಅರ್ಥ, ಕಾಮ, ಒಳ್ಳೆಯ ಬುದ್ದಿಗಳ ಅಭಿವೃದ್ದಿಯನ್ನ, ಎಲ್ಲ ಸನ್ಮಂಗಳವನ್ನ, ಬ್ರಹ್ಮಾದಿ ದೇವತೆಗಳು ಯಾವ ದೇವತೆಯ ಕಡೆಗಣ್ಣ ನೋಟವನ್ನು ಆಶ್ರಯಿಸಿ ಕೊಡುವರೋ, ಆ ರಮೆಗೆ ತನ್ನ ಕಣ್ತುದಿನೋಟದಿಂದಲೇ ಬಲದುಂಬುವ ಅಜಿತನಿಗೆ ನಮಿಸುವೆನು.

ಷಡ್ ವರ್ಗ ನಿಗ್ರಹ ನಿರಸ್ತ ಸಮಸ್ತ ದೋಷಾ
ಧ್ಯಾಯಂತಿ ವಿಷ್ಣುಮೃಷಯೋ ಯದಪಾಂಗಲೇಶಮ್।
ಆಶ್ರಿತ್ಯಯಾನಪಿ ಸಮೇತ್ಯ ನ ಯಾತಿ ದುಃಖಂ
ಶ್ರ್ರೀರ್ಯತ್ಕಾಟಕ್ಷಬಲವತ್ಯಜಿತಂ ನಮಾಮಿ ॥ ೪ ॥

ಯಾರನ್ನು ಆಶ್ರಯಿಸಿದರೆ ದುಃಖ ದೂರವಾಗುವದೋ, ಅಂಥ ಅರಿಷಡ್ವರ್ಗಗಳನ್ನು ಗೆದ್ದ, ದೋಷದೂರರಾದ ಋಷಿಗಳು ಯಾವ ಶ್ರೀಯ ಕಡೆಗಣ್ಣ ನೋಟದಿಂದಲೇ ವಿಷ್ಣುಧ್ಯಾನವನ್ನ ಸಾಧಿಸುವರೋ, ಅಂಥ ರಮೆಗೆ ಬಲದುಂಬುವ ಕಡೆಗಣ್ಣ ನೋಟದ ಅಜಿತನಿಗೆ ನಮಿಸುವೆನು.

ಶೇಷಾಹಿವೈರಿಶಿವಶಕ್ರಮನುಪ್ರಧಾನ
ಚಿತ್ರೋರುಕರ್ಮರಚನಂ ಯದಪಾಂಗಲೇಶಮ್।
ಆಶ್ರಿತ್ಯ ವಿಶ್ವಮಖಿಲಂ ವಿದಧಾತಿ ಧಾತಾ
ಶ್ರೀರ್ಯತ್ಕಟಾಕ್ಷಬಲವತ್ಯಜಿತಂ ನಮಾಮಿ ॥ ೫ ॥

ಶೇಷ, ಗರುಡ(ಅಹಿವೈರಿ), ಶಿವ, ಇಂದ್ರ, ಮನು ಮುಂತಾದವರ ಬಗೆ ಬಗೆಯ ಕೃತಿಗಳುಳ್ಳ ಈ ವಿಶ್ವವನೆಲ್ಲ ಯಾರ ಕಡೆಗಣ್ಣ ನೋಟವನ್ನಾಶ್ರಯಿಸಿ ರಚಿಸುವನೋ ಆ ಬೊಮ್ಮ, ಅಂಥ ರಮೆಗೆ ಬಲದುಂಬುವ ಕಟಾಕ್ಷದ ಅಜಿತನಿಗೆ ನಮಿಸುವೆ.

ಶಕ್ರೋಗ್ರದೀಧಿತಿಹಿಮಾಕರಸೂರ್ಯಸೂನು
ಪೂರ್ವಂ ನಿಹತ್ಯ ನಿಖಿಲಂ ಯದಪಾಂಗಲೇಶಮ್।
ಆಶ್ರಿತ್ಯ ನೃತ್ಯತಿ ಶಿವಃ ಪ್ರಕಟೋರು ಶಕ್ತಿಃ
ಶ್ರೀರ್ಯತ್ಕಟಾಕ್ಷಬಲವತ್ಯಜಿತಂ ನಮಾಮಿ ॥ ೬ ॥

ಯಾರ ಕಡೆಗಣ್ಣ ನೋಟದಿಂದ ಶಿವನು ಇಂದ್ರ, ಸೂರ್ಯ, ಚಂದ್ರ, ಯಮ ಮೊದಲಾದ ನಿಖಿಲ ವಿಶ್ವವನ್ನು ಸಂಹರಿಸಿ, ತನ್ನ ಶಕ್ತಿಯನ್ನು ತೋರಿಸುತ್ತ ತಾಂಡವ ನೃತ್ಯ ಮಾಡುವನೋ, ಆ ರಮೆಗೆ ತನ್ನ ಕಟಾಕ್ಷದಿಂದಲೇ ಬಲವೀವ ಅಜಿತನಿಗೆ ನಮಿಸುವೆ.

ತತ್ಪಾದಪಂಕಜಮಹಾಸನತಾಮವಾಪ
ಶರ್ವಾದಿವಂದ್ಯಚರಣೋ ಯದಪಾಂಗಲೇಶಮ್।
ಆಶ್ರಿತ್ಯ ನಾಗಪತಿರನ್ಯಸುರೈರ್ದುರಾಪಾಂ
ಶ್ರೀರ್ಯತ್ಕಟಾಕ್ಷಬಲವತ್ಯಜಿತಂ ನಮಾಮಿ ॥ ೭ ॥

ಯಾರ ಕಡೆಗಣ್ಣ ನೋಟವನ್ನಾಶ್ರಯಿಸಿ, ಇತರ ದೇವತೆಗಳಿಗೆ ದುರ್ಲಭವಾದ, ಹರಿಯ ಪಾದಕಮಲಗಳಿಗೆ ಆಸನವೆನಿಸುವ ಭಾಗ್ಯವನ್ನು ಪಡೆಯುವನೊ ನಾಗರಾಜನಾದ ಶೇಷನು, ಆ ರಮೆಗೆ ತನ್ನ ಕಟಾಕ್ಷದಿಂದಲೆ ಬಲದುಂಬುವ ಅಜಿತನಿಗೆ ನಮಿಸುವೆನು.

ನಾಗಾರಿರುಗ್ರಬಲಪೌರುಷ ಆಪ ವಿಷ್ಣೋ
ರ್ವಾಹತ್ವಮುತ್ತಮಜವೋ ಯದಪಾಂಗಲೇಶಮ್।
ಆಶ್ರಿತ್ಯ ಶಕ್ರಮುಖದೇವಗಣೈರಚಿಂತ್ಯಂ
ಶ್ರೀರ್ಯತ್ಕಟಾಕ್ಷಬಲವತ್ಯಜಿತಂ ನಮಾಮಿ ॥ ೮ ॥

ಯಾವ ರಮೆಯ ಕಡೆಗಣ್ಣ ನೋಟದ ಬಲದಿಂದ, ಉಗ್ರಬಲ, ಪೌರುಷ, ಉತ್ತಮ ವೇಗಗಳುಳ್ಳ ಗರುಡನು ಇಂದ್ರಾದಿ ದೇವತೆಗಳ ಯೋಚನೆಗೆ ನಿಲುಕದ ಭಗವಂತನ ವಾಹನವಾಗುವ ಭಾಗ್ಯವನ್ನು ಪಡೆದನೋ ಅಂಥ ರಮೆಗೆ ತನ್ನ ಕಟಾಕ್ಷದಿಂದ ಬಲ ತುಂಬುವ ಅಜಿತನಿಗೆ ನಮಿಸುವೆ.

ಆನಂದತೀರ್ಥಮುನಿಸನ್ಮುಖಪಂಕಜೋತ್ಥಂ
ಸಾಕ್ಷಾದ್ರಮಾಹರಿಮನಃಪ್ರಿಯಮುತ್ತಮಾರ್ಥಮ್।
ಭಕ್ತ್ಯಾ ಪಠತ್ಯಜಿತಮಾತ್ಮನಿ ಸನ್ನಿಧಾಯ
ಯಃ ಸ್ತೋತ್ರಮೇತದಭಿಯಾತಿ ತಯೋರಭೀಷ್ಟಮ್ ॥ ೯ ॥

ಆನಂದತೀರ್ಥ ಮುನಿಗಳ ಉತ್ತಮವಾದ ಮುಖಕಮಲದಿಂದ ಬಂದ, ಸಾಕ್ಷಾತ್ ರಮೆ ಮತ್ತು ಹರಿಯ ಮನಸ್ಸಿಗೆ ಪ್ರಿಯವಾದ, ಈ ಸ್ತೋತ್ರವನ್ನು ಭಕ್ತಿಯಿಂದ ಪಠಿಸುತ್ತ, ಅಜಿತನನ್ನು ಹೃದಯದಲ್ಲಿ ನೆನೆಯುವರೋ ಅವರು ರಮಾಮಾಧವರ ಅನುಗ್ರಹದಿಂದ ಮನೋರಥವನ್ನು ಹೊಂದುವರು.

॥ ಇತಿ ಶ್ರೀಮದಾನಂದತೀರ್ಥಭಗವತ್ಪಾದಾಚಾರ್ಯವಿರಚಿತೇ ದ್ವಾದಶಸ್ತೋತ್ರೇ ಸಪ್ತಮೋsಧ್ಯಾಯಃ ॥

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s