ಲೇಬಲ್ಲುಗಳ ಮೀರಿ…

ಐಸ್ ಬರ್ಗ್ ಹೊಡೆದು ತೂತಾದ ಟೈಟಾನಿಕ್ ಮುಳುಗುತ್ತಿದ್ದಾಗ ಲೈಫ್ ಬೋಟಿಗೆ ಪರದಾಡುತ್ತಿದ್ದ ಜನ ಆ ದೊಡ್ಡ ಐಸ್ ಬರ್ಗ್ ಮೇಲೆಯೇ ೩-೪ ಗಂಟೆ, ಸಹಾಯ ಬರುವವರೆಗೆ ಕಳೆಯಬಹುದಿತ್ತೆ? Harvard Business Review ನ ಈ ಲೇಖನವನ್ನ ನೋಡುವದಕ್ಕೆ ಮೊದಲು ಇಂತಹ ಯೋಚನೆ ನನಗಂತೂ ಬಂದಿರಲಿಲ್ಲ. ನಮ್ಮ ಕಣ್ಣೆದುರೇ ಇದ್ದದ್ದನ್ನ ಯಾಕೆ ನಾವು ನೋಡುವದಿಲ್ಲ ಎನ್ನುವ ಹೆಡ್ಡಿಂಗಿನಲ್ಲಿರುವ ಲೇಖನ ಇಷ್ಟವಾಯಿತು. ಯಾವುದೇ ವಸ್ತು ಅಥವಾ ಅದರ ಹೆಸರಿನೊಟ್ಟಿಗೆ ಅದರ ಉಪಯುಕ್ತತೆಯನ್ನು ಎಷ್ಟು ಗಾಢವಾಗಿ ತಳಕು ಹಾಕಿಕೊಂಡಿರುತ್ತೇವೆ ಎಂದರೆ ಬೇರೆ ಯಾವುದೇ ಸಂದರ್ಭದಲ್ಲಿ ಆ ವಸ್ತುವನ್ನು ಬಳಸುವ ಬಗ್ಗೆ ನಾವು ಯೋಚನೆಯನ್ನೆ ಮಾಡುವುದಿಲ್ಲವಲ್ಲ ಯಾಕೆ ಎನ್ನುವ ಪ್ರಶ್ನೆಯನ್ನು ಕೇಳಿಕೊಂಡು ಅದಕ್ಕೆ ಉತ್ತರ ಹುಡುಕುವ ಲೇಖನವದು. ಸಾಧ್ಯವಾದರೆ  ಪೂರ್ತಿ ಲೇಖನ ಓದಿ, ಅದರ ಅಡಿಯ ಕಮೆಂಟುಗಳನ್ನೂ ಓದಿ.

ಇದನ್ನ ನೋಡಿದಾಗ ಇತ್ತೀಚೆಗೆ ಇಲ್ಲಿಯ ಸ್ಯಾನ್ ಹೋಸೆ ಲೈಬ್ರರಿಯಲ್ಲಿಯ ಘಟನೆಯೊಂದು ನೆನಪಾಯ್ತು. ಪ್ರತೀ ಶನಿವಾರದಂತೆ ಅವತ್ತು ಕೂಡ ನನ್ನ ಮಗನನ್ನ ಲೈಬ್ರರಿಯ ಸ್ಟೋರಿ ಟೈಮಿಗೆ ಅಂತ ಕರೆದೊಯ್ದಿದ್ದೆ. ಆದರೆ ಅವತ್ತು ಸ್ಟೋರಿ ಟೈಮ್ ಇರಲಿಲ್ಲ. ಬದಲಿಗೆ ‘ಕಸದಿಂದ ರಸ’ ಅಥವಾ ‘ Make Art from Recycled Material’ ಎನ್ನುವ ಚಟುವಟಿಕೆಯಿತ್ತು.

ಕೋಣೆಯ ಒಂದು ಬದಿಯಲ್ಲಿ ಗೋಡೆಗಾನಿಸಿ ಸಾಲಾಗಿಟ್ಟಿದ್ದ ಮೇಜುಗಳ ಮೇಲೆ ಬಗೆ ಬಗೆಯ ವಸ್ತುಗಳು. ಟಿಸ್ಯೂ ಪೇಪರ್ ಮತ್ತು ಪೇಪರ್ ನ್ಯಾಪಕಿನ್ನುಗಳನ್ನು ಸುತ್ತಿಡಲು ಬಳಸುವ ರಟ್ಟಿನ ಕೊಳವೆಗಳು, ಬಾಟಲಿ ಬೂಚುಗಳು, ಒಂದಷ್ಟು ಟ್ರೇ ತರಹದ ಸಾಮನುಗಳು, ಒಂದಷ್ಟು ಬಟನ್ನುಗಳು, ತುಂಡು ತುಂಡು ಬಟ್ಟೆಗಳು, ಪೇಪರ್ ಕಪ್ಪು, ಪ್ಲೇಟುಗಳು ಕತ್ತರಿ, ಅಂಟು ಇತ್ಯಾದಿಗಳನ್ನೆಲ್ಲ ಅಲ್ಲಿ ಇಟ್ಟಿದ್ದರು. ಆ ಚಟುವಟಿಕೆಯ ನಿರ್ವಾಹಕಿ ಹೇಳಿದ್ದು, ‘ಇಲ್ಲಿರುವ ವಸ್ತುಗಳನ್ನ ಬಳಸಿ ಏನಾದರೂ ಮಾಡಿ’. ನಿಮಗೇನು ಮಾಡಬೇಕು ಅನಿಸುವದೋ ಅದನ್ನು ಮಾಡಿ ಅಂತ.

ಮೊದಲಿಗೆ ಎಲ್ಲಿಂದ ಶುರು ಮಾಡುವದಪ್ಪ ಅಂತ ಗಲಿಬಿಲಿಯಾಯಿತು. ಕೊನೆಗೆ ಒಂದಷ್ಟು ತಲೆ ಕೆರೆದುಕೊಂಡು ಯೋಚಿಸಿ, ಮಗನೊಂದಿಗೆ ವಿಚಾರಿಸಿ, ಇಬ್ಬರೂ ಸೇರಿ ಈ ಮುಖಗಳನ್ನ ಮಾಡಿದೆವು.

ಹಾಗೇ ಅಲ್ಲಿ ಇತರರು ಏನು ಮಾಡ್ತಿದ್ದಾರೆ ಅಂತ ಕಣ್ಣಾಡಿಸಿದಾಗ ಎಷ್ಟೋಂದು ವೆರೈಟಿ ಇತ್ತು ಅಲ್ಲಿ. ಯಾರೋ ಒಬ್ಬರು ಒಂದು ಹಡಗು ಮಾಡಿದ್ದರು, ಇನ್ನೊಬ್ಬ ಹುಡುಗಿ ಒಂದು ದೊಡ್ಡ ಪೇಪರ್ ಪ್ಲೇಟಿನಲ್ಲಿ ದೊಡ್ಡ ದೊಡ್ಡ ಕಣ್ಣು ಮೂಗುಗಳನ್ನ್ ಮಾಡಿ ಅಲ್ಲೊಂದು ಮಾನ್ಸ್ಟರ್ ಮುಖ ಮಾಡಿದ್ದಳು. ಇನ್ನೂ ಏನೆಲ್ಲ ಇತ್ತು ಅಲ್ಲಿ. ಹಾಗೇ ಆ ಚಟುವಟಿಕೆಯ ನಿರ್ವಾಹಣೆ ಮಾಡುತ್ತಿರುವವರನ್ನ ಮಾತಾಡಿಸಿದಾಗ ಅವರು ಬೇರೆ ಬೇರೆ ಕಡೆ ಇಂತಹ ಚಟುವಟಿಕೆ ಮಾಡಿಸಿದಾಗಿನ ತಮ್ಮ ಅನುಭವ ಹೇಳಿಕೊಂಡರು. ಟಿಸ್ಯೂ ಪೇಪರಿಗೆ ಬಳಸುವ ರಟ್ಟಿನ ಕೊಳವೆಗಳನ್ನ ಬಳಸಿ ಯಾರೋ ಆಟಿಗೆಯ ದುರ್ಬೀನು ಮಾಡಿದ್ದರಂತೆ. ಅದೇ ಕೊಳವೆಯ ಒಳಗೆ ಗಟ್ಟಿ ತುಂಡೊಂದನ್ನ ಹಾಕಿ, ಅದರ ಎರಡು ತೆರೆದ ಭಾಗಗಳನ್ನ ಬಾಟಲ್ ಬೂಚಿನಿಂದ ಮುಚ್ಚಿ ಅದನ್ನೊಂದು ಗಿರಿಗಿಟ್ಲೆ ತರಹದ ಶಬ್ದ ಮಾಡುವ ರಾಟಲ್ ಮಾಡಿದ್ದರಂತೆ (ಅವರು ಹೇಳಿದ್ದು ಕೇಳಿ ನಾವೂ ಇದನ್ನ ಮಾಡಿದೆವು). ಒಟ್ಟಾರೆ ಆ ರೀಸೈಕಲ್ಡ್ ವಸ್ತುಗಳನ್ನ ಅವುಗಳ ಸಾಮಾನ್ಯ ಪರಿಮಿತಿಯಿಂದ ಹೊರಗೊಯ್ದಾಗ ಏನೆಲ್ಲ ಮಾಡಬಹುದಲ್ಲ ಎನ್ನುವದರ ಅರಿವು ಮೂಡಿಸುವಂತಿತ್ತು ಈ ಚಟುವಟಿಕೆ.

****

ಇದರಲ್ಲೇನಿದೆ ನಾವು ಭಾರತೀಯರು ಒಂದೇ ವಸ್ತುವನ್ನ ಎಷ್ಟೆಲ್ಲ ಕೆಲಸಗಳಿಗೆ ಬಳಸ್ತೀವಿ ನಮಗೆ ಇದೆಲ್ಲ ಈಗಾಗಲೇ ಗೊತ್ತು ಅನಿಸಬಹುದು. ಆದರೆ ಈ ಲೇಬಲಿಂಗ್ ಅನ್ನುವದು ವಸ್ತುಗಳಿಗಷ್ಟೇ ಸೀಮಿತವಲ್ಲ. ಎಷ್ಟೋ ಬಾರಿ ಮನುಷ್ಯರನ್ನೂ ನಾವು ನಮ್ಮ ಅರಿವಿದ್ದೊ ಇಲ್ಲದೆಯೋ ಅವರಿಗೆ ಅಂಟಿಸಿರುವ/ಅಂಟಿರುವ ಲೇಬಲ್ಲುಗಳನ್ನು ಮೀರಿ ನೋಡುವುದೇ ಇಲ್ಲ!

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s