ನೋಡಿ ಕಲಿ, ಮಾಡಿ ತಿಳಿ(ಸು)

ಓದುವ ಹವ್ಯಾಸ ಬರೆಯುವಾಗ ನನ್ನ ಓದಿನ ಚಟಕ್ಕೆ ಇಂಬು ಕೊಟ್ಟವರ ಬಗ್ಗೆ ಒಂದಷ್ಟು ಬರೆದರೂ ಇನ್ನೊ ಇದೆ ಅನಿಸಿತು. ಕುಳಿತುಕೊಂಡು ಯೋಚಿಸಿದಾಗ, ಮೂರ್ತಿರಾಯರ ದೇವರು ಪುಸ್ತಕವನ್ನ ಆದ್ಯಂತವಾಗಿ ಓದಿ, ನಿರ್ಭಾವುಕವಾಗಿ ಕೆಳಗಿಟ್ಟು ಎಲ್ಲ ಓದಬೇಕು, ಏನು ಬರೆದಿದ್ದಾರೆ ಅಂತ ನೋಡಬೇಕು” ಅಂದ ತಾತ, ಶಬ್ದಗಳನ್ನ, ಮಾತುಗಳನ್ನ ಚಮತ್ಕಾರಿಕವಾಗಿ ತಿರುಗಿಸಿ ನಗೆಯುಕ್ಕಿಸುವ ಇನ್ನೊಬ್ಬ ತಾತ, ಬೇಕಿದ್ದ ಹಾಡುಗಳನ್ನ ಬರೆದಿಟ್ಟುಕೊಳ್ಳುವ, ನಿತ್ಯ ಹಾಡುವ ಅಮ್ಮ, ಮಧ್ಯಾನ್ಹದ ಊಟ ಮತ್ತು ಮನೆಗೆಲಸವನ್ನೆಲ್ಲ ಮುಗಿಸಿದ ಮೇಲೆ ಮಲಗಲು ಅಂತ ಅಡ್ಡಾಗಿ ಹಾಗೇ ಅಂದಿನ ಪೇಪರನ್ನೋ ಅಥವಾ ಮತ್ಯಾವುದೋ ಪತ್ರಿಕೆಯನ್ನೋ ಓದುತ್ತಿದ್ದ ಅಜ್ಜಿ, ತಾವು ಸಣ್ಣವರಿದ್ದಾಗ ಅವರ ಹಿರಿಯರ ಸಂಗ್ರಹದ ಕನ್ನಡ ಪುಸ್ತಕಗಳನ್ನೆಲ್ಲ ಹೇಗೆ ಓದಿದ್ದರು ಎಂದು ಹೇಳಿದ ಅಪ್ಪ, ತಮ್ಮ ಕಾಲೇಜು ಲೈಬ್ರರಿಗೆ ಕರೆದೊಯ್ದು, ಅಲ್ಲಿ ನಮಗೆ ಇಷ್ಟವಾದ ಪುಸ್ತಕಗಳನ್ನ ಮನೆಗೆ ತರಲು ಅನುವು ಮಾಡಿಕೊಡುತ್ತಿದ್ದ ದೊಡ್ಡಪ್ಪ, ಹೇರಳವಾಗಿ ಪುಸ್ತಕಗಳನ್ನ ಸಂಗ್ರಹಿಸಿಟ್ಟಿರುವ ಚಿಕ್ಕಪ್ಪ, ಇವರೆಲ್ಲರ ನೆನಪಾಗುತ್ತದೆ.

ಇದ್ದ ಪರಿಸರದಲ್ಲಿ, ಕಣ್ಣ ಮುಂದೆ ಹಿರಿಯರು ಮಾಡುವುದನ್ನೇ ನೋಡಿ ನೋಡಿ ನಾನೂ ಪುಸ್ತಕವನ್ನು ಹಿಡಿಯಬೇಕು ಅಂತ ಅನಿಸಿದ್ದರಲ್ಲಿ ಆಶ್ಚರ್ಯವಿಲ್ಲ. ಇಂದಿನ ದಿನಗಳಲ್ಲಿ ಇಂತಹ ರೋಲ್ ಮಾಡೆಲ್ಲುಗಳನ್ನ ನಾವು ಒದಗಿಸಬಲ್ಲೆವೆ ಎನ್ನುವ ಪ್ರಶ್ನೆ ಬರುತ್ತಿದೆ ಇತ್ತೀಚೆಗೆ. ಕೈಯಲ್ಲಿ ಪುಸ್ತಕ, ಮ್ಯಾಗಝೀನುಗಳನ್ನ ಹಿಡಿಯುವ ಅವಶ್ಯಕತೆಯಿಲ್ಲ, ಒಂದು ಐ-ಪ್ಯಾಡಿನಲ್ಲಿ, ಕಿಂಡಲ್ಲಿನಲ್ಲಿ ನಾವು ಓದಿದ್ದನ್ನ ಹೇಳಿಕೊಳ್ಳದಿದ್ದರೆ, ಇನ್ನೊಬ್ಬರಿಗೆ (ಮನೆಯಲ್ಲೇ ಇರುವ ಮಕ್ಕಳಿಗೆ)  ಗೊತ್ತೇ ಆಗುವದಿಲ್ಲ. ಮಕ್ಕಳ ಬೆಳವಣಿಗೆಯಲ್ಲಿ ‘ನೋಡಿ ಕಲಿ’ ಯ ಪಾತ್ರ ಬಹಳ ದೊಡ್ಡದಲ್ಲವೇ?

*****

ಬಗೆ ಬಗೆಯ ಪುಸ್ತಕಳನ್ನ ಓದುವ ಚಟವಿದ್ದರೂ ಓದಿದ ವಿಷಯಗಳನ್ನ ನಿತ್ಯ ಜೀವನದಲ್ಲಿ ಸಮರ್ಥವಾಗಿ ಅಳವಡಿಸಿಕೊಳ್ಳುವದನ್ನ ನಾನು ಹೆಚ್ಚಾಗಿ ಕಲಿತಿರಲೇ ಇಲ್ಲ. ಅದನ್ನ ಹೆಚ್ಚು ಹೆಚ್ಚಾಗಿ ಕಲಿಯಬೇಕು ಅನಿಸಿದ್ದು, ಕಲಿಯಲು ಆರಂಭಿಸಿದ್ದು ನನ್ನ ದೊಡ್ಡಪ್ಪನನ್ನ ನೋಡಿ. ‘ನಾನು ಪುಸ್ತಕ ಓದಂಗಿಲ್ಲ ನೋಡು, ಯಾಕಂದರ ಪುಸ್ತಕ ಓದಿಕೋತ ಕೂತರ ಮಾಡಬೇಕಾದ್ದ ಕೆಲಸ ಮರ್ತ್ ಹೋಗ್ತದ’ ಎಂದು ಹೇಳಿ ಆಶ್ಚರ್ಯಗೊಳಿಸಿದ್ದರು ಒಮ್ಮೆ. ಹಾಗಂತ ಅವರು ಪುಸ್ತಕ ಓದುವದೇ ಇಲ್ಲ ಅಥವಾ ಓದೇ ಇಲ್ಲ ಅಂತಲ್ಲ. ತಾವು ಓದಿದ ಪುಸ್ತಕಗಳ ಮಾತನ್ನ, ತಮ್ಮ ಅನುಭವಗಳನ್ನ ತಟ್ಟನೇ ನಾಟುವಂತೆ ಹೇಳಿಬಿಡುತ್ತಾರೆ. ಅದು ಬರೀ ಹೇಳಿಕೆಯಲ್ಲ, ಅವರು ಆಚರಿಸಿದ್ದೇ ಆಗಿರುತ್ತದೆ. ನಾನು ಏನೂ ಓದುವುದಿಲ್ಲ ಎನ್ನುವವರ ಮಾತಿನಲ್ಲಿ ಸಂದರ್ಭೋಚಿತವಾಗಿ, ‘ತಾನು ಬ್ರಾಹ್ಮಣ್ಯ ಬಿಟ್ಟರೂ ಬ್ರಾಹ್ಮಣ್ಯ ತನ್ನನ್ನು ಬಿಡಲಿಲ್ಲ’ ಎನ್ನುವ ‘ಸಂಸ್ಕಾರ’ದ ಮಾತು ಬರುತ್ತದೆ, ‘ಸಿಂಬಳದಾಗಿನ ನೊಣದ ಗತೆ ಅಲ್ಲಲ್ಲೆ ಹೊಲಸಿನ್ಯಾಗ ಸುತ್ತಬ್ಯಾಡ್ರಲೇ’ ಅಂತ ಕಗ್ಗದ ಮಾತೂ ಬರುತ್ತದೆ. ಅವರು ಬಳಸುವ ಗಾದೆಗಳು, ನುಡಿಗಟ್ಟುಗಳು ಸಂದರ್ಭದ ಸಾರವನ್ನು ಹಿಡಿದಿಡುತ್ತವೆ. ಮಾಡಬೇಕಾದ ಕೆಲಸದ ಬಗ್ಗೆ ಎಚ್ಚರವಿರುವವರು ಇತರರೊಂದಿಗೆ ಮತ್ತು ಅದಕ್ಕಿಂತ ಮುಖ್ಯವಾಗಿ ತಮಗೆ ತಾವೇ ಹೇಗೆ ಖಚಿತ ಶಬ್ದಗಳನ್ನು ಬಳಸಿ ಸಂವಹಿಸಬೇಕು ಎನ್ನುವದನ್ನ ತೋರಿಸುತ್ತವೆ.

ಓದುವ ಬಗ್ಗೆ ದೊಡ್ಡಪ್ಪ ಹೇಳಿದಂಥದೇ ಮಾತನ್ನ ಜಾನ್ ಮುಯಿರ್ ಪುಸ್ತಕಗಳ ಬಗ್ಗೆ ಹೇಳಿದ್ದನ್ನ ಓದಿದ್ದೆ ಒಂದು ಪುಸ್ತಕದಲ್ಲಿ. ಸ್ಯಾನ್ ಹೋಸೆ ಲೈಬ್ರರಿಯಿಂದ ತಂದಿದ್ದ ಪುಸ್ತಕದಲ್ಲಿನ ಆ ಸಾಲುಗಳನ್ನ ಬರೆದಿಟ್ಟುಕೊಂಡಿದ್ದೆ.

I have a low opinion of books; they are but piles of stones set up to show coming travelers where other minds have been, or at best signal smokes to call attention…No amount of word-making will ever make a single soul to know these mountains. As well seek to warm the naked and frost-bitten by lectures on caloric and pictures of flames. One day’s exposure to mountains is better than cartloads of books.

                                                                                                           – John Muir on books

(ಜಾನ್ ಮುಯಿರ್ ಒಬ್ಬ ಸ್ಕಾಟಿಷ್-ಅಮೇರಿಕನ್  ನ್ಯಾಚುರಲಿಸ್ಟ್. ಅಮೇರಿಕಾದ ಪಶ್ಚಿಮ ತೀರದ ಹತ್ತಿರದ ಸಿಯೆರಾ ನೆವಾಡ ಬೆಟ್ಟಗಳಲ್ಲಿ, ಅಲ್ಲಿಯ ಕಾಡಿನಲ್ಲಿ ಬಹಳಷ್ಟು ಸಮಯ ಕಳೆದಾತ. ತನ್ನ ಬರವಣಿಗೆಯಿಂದ ಬಹಳಷ್ಟು ಜನರನ್ನೂ, ಅಮೇರಿಕಾದ ಸರಕಾರವನ್ನೂ ಪ್ರಭಾವಿತಗೊಳಿಸಿದಾತ. ಅಮೇರಿಕಾದ ನ್ಯಾಶನಲ್ ಪಾರ್ಕುಗಳ ಪಿತಾಮಹನೆಂದು ಈತನನ್ನು ಕರೆಯುತ್ತಾರೆ. ಅವನ ಬಗ್ಗೆ ಇನ್ನಷ್ಟು ಮಾಹಿತಿಯನ್ನು ವಿಕಿಪೀಡಿಯಾದ ಈ ಪುಟದಲ್ಲಿ ನೋಡಬಹುದು. ಅವನ ಹೇಳಿಕೆಗಳ ಸಂಗ್ರಹವೊಂದು ಇಲ್ಲಿದೆ)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s