ಕೆಲಸವಾದ ಬಳಿಕ

ಬಂದ ಕೆಲಸವಾದ ಬಳಿಕ ಉಳಿಯಬಾರದು
ಬಂದ ಕೆಲಸವಾದ ಬಳಿಕ ಉಳಿಯಲಾಗದು

ಕೆಲಸವೊಂದು ಕೈಯಲಿರಲು
ಹಲವು ಹೊಸತನೆತ್ತಿಕೊಂಡು
ಹಳತು ಹೊಸತು ಮಿಳಿಸಿಕೊಂಡು
ನಾಳೆ ಫಸಲನೆಣಿಸಿ ಗುಣಿಸಿ

ಕಳೆದ ಕಾಲ ಸಾರ್ಥವಾಯ್ತ
ಕಲಿತ ಮಾತು ಅರ್ಥವಾಯ್ತ
ತಿಳಿದ ತಿಳಿವು ತೀರ್ಥವಾಯ್ತ
ಫಲಿತವಾಯ್ತ ಪತಿತವಾಯ್ತ

ಪೂರ್ಣವವನ ಗಣಿತ ಪೂರ್ಣ
ಪೂರ್ಣವುಸಿರಿನಾಟ ಪೂರ್ಣ
ಪೂರ್ಣಗೊಳ್ಳದಿದ್ದಪೂರ್ಣ
ಪೂರ್ಣಗೀಯಲೆಲ್ಲ ಪೂರ್ಣ

ಯತ್ಕೃತಮ್ ತು ಮಯಾ ದೇವ
ಪರಿಪೂರ್ಣಮ್ ತದಸ್ತು ಮೇ

‘ಕೆಲಸ ಆದ ಕೂಡ್ಲೆ ಎದ್ದು ಬಿಡೋದನ್ನ ನಮ್ಮಪ್ಪ ಮತ್ತ ನಮ್ಮಣ್ಣ ಯಾವಾಗಲೂ ಪಾಲಸ್ತಾರ’ ಅಂತ ನನ್ನಪ್ಪ ಎಷ್ಟೋ ಬಾರಿ ಹೇಳಿದ್ದಾರೆ. ಅದಕ್ಕೆ ತಕ್ಕಂತೆ ‘ಕೆಲಸಾದ ಕೂಡ್ಲೆ ಜಾಗ ಬಿಟ್ಬಿಡ್ತೀನಿ’ ಅಂತ ದೊಡ್ಡಪ್ಪನೇ ಹೇಳಿದ್ದಾರೆ ಮತ್ತು ಅದರಂತೆ ಮಾಡ್ತಾರೆ. ‘ನಮ್ಮದೇನ ಕೆಲಸದ ಅಲ್ಲೆ. ನೀವು ಹೋಗಿ ಬರ್ರಿ’ ಅಂತ  ಹೇಳಿ ಮನೆಯಲ್ಲೇ ಉಳಿಯುತ್ತಿದ್ದ ತಾತನ ನೆನಪೂ ಇದೆ.

ಇಂಟರ್ನೆಟ್ಟನ್ನೋ ಜಗತ್ತಿನ ಕಿಟಕಿ ಮೂಲಕ ನನ್ನ ಆಫೀಸಿನ ಕೆಲಸವೂ ಆಗ್ತದೆ ಮತ್ತು ಏನೆಲ್ಲ ವಿಷಯಗಳ ಬಗ್ಗೆ ತಿಳಿದುಕೊಳ್ಳಲಿಕ್ಕೂ ಆಗ್ತದೆ. ಮನಸ್ಸು ಪಾತರಗಿತ್ತಿಯಂತೆ ಹಾರಿಕೊಂಡೆ ಇರಬಹುದು. ಅಂತ್ಯ ಪಾರವಿಲ್ಲದ  ಲೋಕದೊಳಗೆ ಕಳೆದು ಹೋಗುವದು ಬಹಳ ಸುಲಭ. ಒಂದು ಕೆಲಸ ಮಾಡಿ ಮುಗಿಸುವ ಮುನ್ನವೇ ಮನಸ್ಸು ಮುಂದಿನ ಹತ್ತು ಕೆಲಸಗಳ ಬಗ್ಗೆ ಯೋಚಿಸುತ್ತಿರುತ್ತದೆ. ಎಷ್ಟೋ ಸಾರಿ ಇಲ್ಲಿಂದ ಯಾವಾಗಲೋ ಅಲ್ಲಿ ಹಾರಿಹೋಗಿ ಆ ಕೆಲಸವನ್ನೇ ಆರಂಭಿಸಿಬಿಟ್ಟಿರುತ್ತದೆ. ಅಥವಾ ಒಮ್ಮೊಮ್ಮೆ, ಮಾಡಬೇಕಾದ ಕೆಲಸ, ಒಪ್ಪಿಕೊಂಡ ಕೆಲಸ, ತಪ್ಪಿಸಿಕೊಳ್ಳಲಾಗದೆ ಒಪ್ಪಿಕೊಂಡ ಕೆಲಸ, ಮಾಡಬೇಕು ಎಂದುಕೊಂಡ ಕೆಲಸ, ಓದಬೇಕು ಎಂದುಕೊಂಡ ಪುಸ್ತಕ, ಬ್ಲಾಗು, ಬರವಣಿಗೆ, ಧುತ್ತನೆ ಎದುರಾದ ಕೆಲಸ, ಎಲ್ಲವೂ ಗಾಳಿಯಲ್ಲಿ ಹಾರಿಸಿದ ಚಂಡುಗಳು ಒಟ್ಟಿಗೆ ಕೆಳಗಿಳಿದು ಬಂದಂತೆ ಎದುರಾದಾಗ ಮನಸ್ಸು ಅಲ್ಲಿಷ್ಟು ಇಲ್ಲಿಷ್ಟು ಹರಿದು ಹಂಚಿ ದಣಿದುಬಿಡುವಾಗ ‘ಒಂದು ರೂಪದೊಳನಂತ ರೂಪ’, ‘ಒಂದು ಗುಣದೊಳಗನಂತ ಗುಣ, ಒಂದೊಂದು ಗುಣವೂ ಪರಿಪೂರ್ಣ’, ‘ಅವನ ಗುಣಗಳು ಅಚಿಂತ್ಯಾದ್ಭುತ’ ಮುಂತಾದ ಸಾಲುಗಳು ನೆನಪಾದರೆ ಭಗವಂತನ ಬಗ್ಗೆ ಹೊಸತೊಂದು ಬೆರಗು. ಇವತ್ತಿನ  virtual machine, hypervisor ಗಳ ನೆನಪಾದರೆ ಆ ಕ್ಷಣಕ್ಕೆ ಹೊಸತೊಂದು ‘virtual me’ ಹುಟ್ಟುಹಾಕಿ ಇನ್ನೊಂದರ ಜೊತೆಗೆ ಅದರ context ಸಂಕರವಾಗದೆ ಅದರಷ್ಟಕ್ಕೆ ಅದು ಕೆಲಸಪೂರ್ತಿ ಮಾಡಬರುವಂತಿದ್ದರೆ ಎನ್ನುವ ‘ರೆ’ ಕಾರ.

ಭಗವಂತನಂತೂ ಆಗಲು ಸಾಧ್ಯವಿಲ್ಲ. ಆದರೆ ನನ್ನದೇ ಒಂದು ‘virtual me’ ಮಾಡಬಹುದೆ? ಮಾಡಿದರೆ ಹೇಗೆ ಮಾಡ ಬಹುದು?

ಮೊದಲಿಗೆ ‘real me’ ಕೆಲಸವೇನು, ಅದರ ಉಪಕೆಲಸಗಳೇನು, ಅವುಗಳನ್ನು ಮಾಡುವ ಕ್ರಮ ಏನು ಎನ್ನುವದನ್ನ ನೋಡಿಕೊಳ್ಳಬೇಕು. ಆ ಕೆಲಸಕ್ಕೆ ವೇಳೆಯನ್ನೂ, ಬೇಕಾಗುವ ಸಲಕರಣೆಗಳನ್ನೂ ಹೊಂದಿಸಿಕೊಳ್ಳಬೇಕು. ಆ ವೇಳೆಗೆ ಕೆಲಸದ ಸಂಕಲ್ಪ ಮಾಡಬೇಕು. ಕೆಲಸವನ್ನು (ಅಥವಾ ಉಪಕೆಲಸಗಳನ್ನು ಕ್ರಮಬದ್ಧವಾಗಿ) ‘virtual me’ ಗೆ ವಹಿಸಿಕೊಡಬೇಕು. ಎಲ್ಲ ಉಪಕೆಲಸಗಳೂ ಮುಗಿಯುತ್ತ ಬಂದಂತೆ ಕೆಲಸವೂ ಮುಗಿಯುತ್ತಿರುತ್ತದೆ. ‘virtual me’ ಕೊನೆಯ ಉಪಕೆಲಸವನ್ನು ಮುಗಿಸಿದಾಗ ‘real me’ ಎಲ್ಲವನ್ನೂ ಗಮನಿಸಿ ಕೆಲಸವನ್ನು ಮುಗಿಸಬೇಕು. ಅದರಿಂದ ಕಲಿಯಬೇಕಾದ್ದನ್ನು ಕಲಿಯಬೇಕು ಮತ್ತು ಮುಂದೆ ಬಳಸಲು ಅನುಕೂಲವಾಗುವಂತೆ ಸೂಕ್ತವಾಗಿ ಸಂಗ್ರಹಿಸಬೇಕು. ಸಂಗ್ರಹ ನೆನಪಿನಲ್ಲಿ, ಪುಸ್ತಕದಲ್ಲಿ, ಕಂಪ್ಯೂಟರಿನಲ್ಲಿ ಅಥವಾ ಇನ್ನೆಲ್ಲಿಯಾದರೂ ಆಗಬಹುದು. ಎಲ್ಲಿ ಅದು ಸಿಗುತ್ತದೆ ಎನ್ನುವದು ‘real me’ ಗೆ ಗೊತ್ತಿರಬೇಕು.

‘Operation successful but the patient died’ ಅನ್ನುವಂತೆ ಆ ಕೆಲಸಕ್ಕೆ ಅಂದುಕೊಂಡ ಪರಿಣಾಮ ಸಿಗದಿದ್ದರೆ? ನಾನೆಂಬ ‘real me’ ಯ ಕೆಲಸವೇನು ಮತ್ತೆ? ಒಂದು ಪೂರ್ತಿ ಕೆಲಸವನ್ನು ಒಟ್ಟಿಗೆ ನಡೆಸಬೇಕೆ, ಪ್ರತಿಯೊಂದು ಘಟ್ಟದಲ್ಲೂ ‘virtual me’ ಯ ಕೆಲಸದ ಪರಿಣಾಮ ಗಮನಿಸಿ ಬೇಕಾದ ಬದಲಾವಣಗಳೊಡನೆ ಮುಂದಿನ ‘virtual me’ ಯನ್ನು ಶುರುಮಾಡಬೇಕೆ ಎನ್ನುವ ಎಲ್ಲ ನಿರ್ಧಾರಗಳನ್ನೂ ತೆಗೆದುಕೊಳ್ಳಬೇಕಾದ್ದು ‘real me’. ಒಂದು ಕೆಲಸದಿಂದ  ಅರಿತದ್ದನ್ನ ಮುಂದೆ ದುಡಿಸಿಕೊಳ್ಳುವದೂ ‘real me’.  ಒಂದು ಕೆಲಸ ನಡೆಯುವಾಗ ತುರ್ತೇನೋ ಬರುತ್ತದೆ, ಇನ್ನೊಂದು ಕಡೆ ಗಮನ ಕೊಡಬೇಕಾಗುತ್ತದೆ. ಆಗ  ‘real me’ ಮುಂದೆ ಬರಬೇಕು, ನಿರ್ಣಯ ‘real me’ ಯದ್ದೇ.

‘virtual me’ ಎಂಬ ಕೂಲಿ ಆಳಿನ್ನೂ ಮತ್ತು ‘real me’ ಎಂಬ ಮಾಲೀಕನನ್ನೂ ಪ್ರತ್ಯೇಕಿಸುವದು ಹೇಗೆ? ಪ್ರತ್ಯೇಕಿಸಬೇಕೆ? ಆಳಿನಲ್ಲೊಬ್ಬ ಮಾಲೀಕ, ಮಾಲೀಕನಲ್ಲೊಬ್ಬ ಆಳು ಇರಲೇಬೇಕು. ಉಪಕೆಲಸಗಳ ಪ್ರತಿ ಹಂತವನ್ನೂ ಮೊದಲೇ ನಿರ್ಧರಿಸಿ ಆಳಿಗೆ ಕೊಡಬೇಕೆಂತಿಲ್ಲ. ಮಾಲೀಕನ ಮೂಲಭೂತ ತತ್ವಗಳ ಪ್ರಶ್ನೆ ಬಂದಾಗ ಮಾಲೀಕನದ್ದೇ ನಿರ್ಣಯ. ಉಳಿದಂತೆ ‘Things seem more right when you are doing them than when you are thinking about them*’ ಎಂದುಕೊಂಡು ಮಾಡಲು ಆಳಿಗೆ ಬಿಡಬೇಕು. ಪ್ರತಿ ಕೆಲಸದ ಪರಿಣಾಮವನ್ನು ‘ಸರ್ವ ಕರ್ಮಾಖಿಲಂ ಜ್ಞಾನೇನ ಪರಿಸಮಾಪ್ಯತೆ’ ಎಂದುಕೊಂಡು ಮಾಲೀಕನಾಗಿ ಅರಿಯುತ್ತ ಹೋದಂತೆ, ಆ ಅರಿವಿನಿಂದ ಆಳನ್ನು ತಿದ್ದಿದಂತೆ, ಆಳು ಮತ್ತು ಮಾಲೀಕರಿಬ್ಬರೂ ಬೆಳೆಯುತ್ತ ಹೋಗುತ್ತಾರೆ.

ಕೊನೆಗೊಂದು ದಿವಸ ಕರೆ ಬಂದಾಗ ಯಾವ ಯಾವ ‘virtual me’ ಗಳು ಎಲ್ಲೆಲ್ಲಿ ಇದ್ದವೋ ಅಲ್ಲಲ್ಲೇ ಬಿಟ್ಟು ಹೊರಡಬೇಕಾಗುತ್ತದೆ. ಯಾಕೆಂದರೆ ಮಾಲೀಕನೂ ನಿಜವಾದ ಮಾಲೀಕನಲ್ಲವಲ್ಲ! ಆ ಕ್ಷಣಕ್ಕೆ ‘virtual me’ ಮತ್ತು ‘real me’ ಗಳು ಮಾಡ್ತಾ ಇದ್ದದ್ದು ಅಲ್ಲಿಗೇ ಪೂರ್ಣ. ‘ಯತ್ಕೃತಂ ತು ಮಯಾ ದೇವ ಪರಿಪೂರ್ಣಮ್ ತದಸ್ತು ಮೇ’. ಇಲ್ಲಿ ಯಾವುದೂ ವ್ಯರ್ಥವಲ್ಲ, ‘ನೇಹಾಭಿಕ್ರಮ ನಾಶೋಸ್ತಿ, ಪ್ರತ್ಯವಾಯೋ ನ ವಿದ್ಯತೆ’!

ಈ ‘virtual’ ವಿಚಾರ ಎಲ್ಲಿಗೆ ಕೊಂಡೊಯ್ಯುವುದೋ ನೋಡೋಣ ಅಂತ ಇದನ್ನೆಲ್ಲಾ ಬರೆಯುತ್ತ ಹೊರಟವನಿಗೆ ಕೊನೆಗೆ ಅನಿಸಿದ್ದು, ಇಷ್ಟೆಲ್ಲಾ ಕಷ್ಟ ಏಕೆ? ದಿವಸ ಸಂಧ್ಯಾ ವಂದನೆ ಮಾಡಿದರೆ ಆಯಿತು. ಆಚಮನ, ಸಂಕಲ್ಪ, ಮಾರ್ಜನ, ಭೂತೋಚ್ಛಾಟನ, ಧ್ಯಾನ, ಜಪ, ಸಮರ್ಪಣಗಳೆಲ್ಲವನ್ನ  ಕ್ರಮವಾಗಿ ಮಾಡುವದನ್ನೇ  ಅಭ್ಯಾಸ ಮಾಡ್ತಾ ಅದನ್ನೇ ಉಳಿದ ಕೆಲಸಗಳಿಗೂ ಅನ್ವಯಿಸಿದರೆ ಬೇಕಾದಷ್ಟು ಪ್ರೊಡಕ್ಟಿವ್ ಆಗುವದು ಅಂತ.  ಸ್ಟೀವ್ ಜಾಬ್ಸ್ ಹೇಳಿದ ‘Your time is limited’ ಎನ್ನುವ ಮಂತ್ರ ಹಿಡಿದರಂತೂ ಇನ್ನೂ ಒಳ್ಳೆಯದು. ಈ ಸಮಯ ಎಷ್ಟು ಸೀಮಿತವಾದದ್ದು ಅನ್ನುವದರ ಪ್ರತ್ಯಕ್ಷ ಅನುಭವ ಬಹಳಷ್ಟು ಬಾರಿ ಆಗಿದೆಯಾದರೂ ಕಳೆದ ಬಾರಿಯ ಭಾರತಕ್ಕೆ ಹೋದಾಗ ಕಂಡ ತಾತನ ಕೊನೆಯ ಒಂದು ವಾರ, ಕೊನೆಯ ಗಳಿಗೆ, ಆ ಸಂದರ್ಭ ಮರೆಯುವಂತಿಲ್ಲ. ಎಲ್ಲ ಆದ ಮೇಲೆ ಅಲ್ಲೂ ತಾತ ಸರಿಯಾಗಿ ಲೆಕ್ಕ ಹಾಕಿಕೊಂಡಂತೆ ಎದ್ದು ಹೋಗಿಬಿಟ್ಟ ಅನಿಸಿತು. ಈ ತಾತನಿಗೆ ಮುಂಚೆ ನನ್ನ ಅಮ್ಮನ ಅಪ್ಪ ಎಂಕಣ್ಣ ತಾತನಂತೂ ‘ತೊಂಭತ್ತು ವರ್ಷದ ಆಯುಷ್ಯ ಅದ, ಅದು ಮುಗಿದ ಗಳಿಗೆ ಹೋಗಿಬಿಡ್ತೀನಿ’ ಅಂತಿದ್ದಾತ ಅದರಂತೆ ತನ್ನ ೯೦ನೇ ಹುಟ್ಟು ಹಬ್ಬದ ದಿನವೇ ಹೊರಟು ಬಿಟ್ಟ. ಅವರಿಬ್ಬರ ಕೊನೆ ಮನಸ್ಸಿನಲ್ಲಿ ಆಗಾಗ ಹಣಕಿ ಇಂಥದ್ದನ್ನೆಲ್ಲ ಯೋಚಿಸುವಂತೆ ಮಾಡುತ್ತದೆ. ಇದರ ಉಪಯೋಗ ನಿಜವಾಗಿ ಆಗುವದು ಈ ಎಲ್ಲ ಯೋಚನೆಗಳ ಪರಿಣಾಮ ಸತತವಾಗಿ ನನ್ನ ಕೆಲಸಗಳಲ್ಲಿ ಕಾಣಿಸತೊಡಗಿದಾಗ. ಆ ದಿನ ಇನ್ನೂ ಬಂದಿಲ್ಲ, ನಿತ್ಯ ಪ್ರಯತ್ನ ಅದರದ್ದೇ!

(* – ‘Things seem more right …’ is a line I picked up from one of the short stories by John Steinbeck. I think the story is ‘To kill a white quail’ )

(ಒಂದಾರು ತಿಂಗಳಿಂದ ಡ್ರಾಫ್ಟಾಗಿ ಉಳಿದಿತ್ತು. ಇವತ್ತು ಕಡೆಗೂ ಇದಕ್ಕೊಂದು ರೂಪ ಕೊಟ್ಟು ಪೋಸ್ಟ್ ಮಾಡುತ್ತಿರುವೆ!)

Advertisements

One thought on “ಕೆಲಸವಾದ ಬಳಿಕ

  1. ಪದಗಗಳನ್ನು ನೋಡಿದಾಗ ತಿಳಿದುಕೊಂಡ ಅರ್ಥ ಗದ್ಯ ಓದುತ್ತಿದ್ದಂತೆ ಬದಲಾಗುತ್ತ ಹೋಯಿತು.ಕೊನೆಕೊನೆಗೆ ಅರ್ಥ ಮುದುಡಲು ಪ್ರಾರಂಭವಾಯ್ತು.ಕೊನೆ ಹಂತ ತಿಳಿಯಿತು ಅನಿಸುತ್ತಿದೆ-ಆದರದು virtuvallo?reallo?ಆ ಭಗವಂತನೇ ಬಲ್ಲ.ಕಳೆದ ಭಾನುವಾರ ಶೋಭಾ ಅವರನ್ನು ನೋಡಲು ಹೋದಾಗ ಬಂದದ್ದು ಇವೆ ಭಾವಗಳು.ಹಾಗಾಗಿ ಏನು ಮಾತಾಡಬೇಕೆಂದು ತಿಳಿಯದೆ ಎದ್ದು ಹೋಗಲು ಮನ ಬಾರದೆ ಮೂರು ತಾಸು ಒದ್ದಾಡಿದೆನು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s