ಓದುವ ಹವ್ಯಾಸ

ನನಗೆ ಓದುವ ಚಟ ಯಾವಾಗಿನಿಂದ ಶುರು ಆಯಿತೋ ನೆನಪಿಲ್ಲ. ಕತೆ ಕೇಳುವ ಹುಚ್ಚು ಬಹಳ ಇದ್ದದ್ದು ನೆನಪಿದೆ. ನಿನಗೆ ಕತೆ ಹೇಳ್ತಾ ಹೇಳ್ತಾ ನಿದ್ದೆ ಹತ್ತಿ ನಿದ್ದೆಯಲ್ಲಿ ಫಿಸಿಕ್ಸ್ ಹೇಳಲಿಕ್ಕೆ ಶುರು ಮಾಡ್ತಿದ್ರು ನಿಮ್ಮಪ್ಪ ಅಂತ ಹೇಳ್ತಿರ್ತಾಳೆ ಅಮ್ಮ. ಬೇರೆ ಬೇರೆ ಕತೆ ಹೇಳಿ ಬೇಸತ್ತು ಕಡೆಗೆ, ‘ಒಂದು ಗುಬ್ಬಿ ಬಂತು, ಒಂದು ಕಾಳು ತೊಗೊಂಡು ಹೋಯಿತು, ಇನ್ನೊಂದು ಗುಬ್ಬಿ ಬಂತು ಇನ್ನೊಂದು ಕಾಳು ತೊಗೊಂಡು ಹೋಯ್ತು’ ಅಂತ ಮುಗಿಯಲಾರದ ಕತೆ ಹೇಳಿದರೆ ಅದಕ್ಕೂ ಹೂ ಅಂತಿದ್ದೆ ನೀನು ಅಂತ ಅಪ್ಪ ಹೇಳ್ತಿದ್ದರು. ಕತೆ ಕೇಳುವ ಈ ಚಟವೇ ಮುಂದೆ ಓದುವ ಚಟಕ್ಕೆ ಇಂಬು ಕೊಟ್ಟಿರಬೇಕು. ಬಾಲಮಿತ್ರ, ಚಂದಮಾಮ, ಅಮರಚಿತ್ರ ಕತೆಗಳು ಮತ್ತು ರಜಾ ದಿನಗಳಲ್ಲಿ ಧಾರವಾಡದ ದೊಡ್ಡಪ್ಪನ ಮನೆಯಲ್ಲಿ ಓದಿದ ಭಾರತ-ಭಾರತಿಯ ಹಲವಾರು ಅಂಗೈ ಅಗಲದ ಪುಸ್ತಕಗಳೂ ಈ ಚಟಕ್ಕೆ ಆಹಾರ ಒದಗಿಸಿದವು. ಚಿಕ್ಕವನಿದ್ದಾಗಲೇ ಒಮ್ಮೆ ಕುಕನೂರಿನ ಅಜ್ಜಿ ತಾತರ ಮನೆಯಲ್ಲಿ ಸತ್ಯನಾರಾಯಣ ಪೂಜೆಯ ನಂತರ ಸತ್ಯನಾರಯಣ ಕತೆಯನ್ನು ಓದಲು ನನಗೇ ಹೇಳಿದಾಗ ಖುಷಿಯಿಂದ ಓದಿದ್ದೆ. ಅದನ್ನು ಎಲ್ಲರೂ ಮೆಚ್ಚಿದ್ದು ಕೋಡು ಮೂಡಿಸಿತ್ತು! ಈಗ ನನ್ನ ಮಗ ಕತೆ ಕೇಳುವದನ್ನು, ಅವನ ಕತೆ ಪುಸ್ತಕಗಳಿಂದ ಕತೆಗಳನ್ನು ಓದಲು ಯತ್ನಿಸುವದನ್ನೂ ನೋಡಿದಾಗ ಇದೆಲ್ಲ ನೆನಪಾಗುತ್ತದೆ. ಎಷ್ಟೆಲ್ಲ ಹಿರಿಯರು ಎಷ್ಟೊಂದು ರೀತಿಯಲ್ಲಿ ನನ್ನ ಹವ್ಯಾಸ ಹುಟ್ಟಲು ಹಾಗೂ ಬೆಳೆಯಲು ಕಾರಣರಾಗಿದ್ದಾರೆ, ಅವರೆಲ್ಲರ ಬಗೆಗೂ ಅಪಾರ ಮೆಚ್ಚುಗೆ ಮತ್ತು ಹೆಮ್ಮೆ.

(ಮೊನ್ನೆ ಲೈಬ್ರರಿಯಲ್ಲಿ ಚೈನೀಸ್ ಹೊಸ ವರ್ಷದ ಪ್ರಯುಕ್ತ, ಡ್ರಾಗನ್ ಧ್ವಜ ಮಾಡುವ ‘ಕ್ರಾಫ್ಟ್’ ಸಮಯವಿತ್ತು. ಅಲ್ಲಿ ಈ ಬುಕ್ ಮಾರ್ಕರ್ ಇಟ್ಟಿದ್ದರು.)

ಇಲ್ಲಿ ಅಮೇರಿಕದ ಲೈಬ್ರರಿಗಳಲ್ಲಿ ನಿಯಮಿತವಾಗಿ ‘ಸ್ಟೋರಿ ಟೈಮ್’ ಗಳಿರುತ್ತವೆ. ಅದರಲ್ಲಿ ಹಾವ ಭಾವಗಳೊಡನೆ, ಕತೆಯ ಪಾತ್ರಗಳಂತೆ ಮಾತನಾಡುತ್ತ, ಕತೆಗಳನ್ನು ಓದುವ, ಓದುತ್ತಲೇ ಅಭಿನಯಿಸುವ ಸ್ಟೋರಿ ಟೈಮುಗಳು ನನ್ನ ಮಗನಿಗೆ ಇಷ್ಟ. ಅವನಿಗೆ ಪುಸ್ತಕ ಪ್ರೀತಿ ಹುಟ್ಟಲು ಈ ಕಥಾ ಸಮಯಗಳು ಬಹಳ ಸಹಾಯ ಮಾಡುತ್ತಿವೆ. ಕಥೆ ಹೇಳುವದರ ಜೊತೆಗೆ ಒಂದಷ್ಟು ಹಾಡು, ಕುಣಿತವನ್ನೂ ಮಾಡಿಸುತ್ತಾರೆ. ಎಷ್ಟೋ ರೈಮುಗಳನ್ನ, ಅವುಗಳಿಗೆ ತಕ್ಕಂತೆ ಕುಣಿಯುವದನ್ನ ಇಲ್ಲಿಂದಲೇ ಕಲಿಯುತ್ತಾನೆ. ನಾವೂ ಮನೆಯಲ್ಲಿ ಅದನ್ನ ಅನುಕರಿಸಬಹುದು. ಕಥಾ ಸಮಯದ ನಂತರ ಲೈಬ್ರರಿಯಿಂದ ಹಲವು ಪುಸ್ತಕಗಳನ್ನ ಹೆಕ್ಕಿಕೊಂಡು ಬಂದು ಮನೆಯಲ್ಲಿ ಓದುವ ಅಭ್ಯಾಸಕ್ಕೆ ಒತ್ತಾಸೆ ಕೊಡುತ್ತವೆ ಈ ಸ್ಟೋರಿ ಟೈಮುಗಳು.

ಓದಿ, ನೋಡಿ ತಿಳಿದ ತಿಳವು ನಿತ್ಯದ ನಡವಳಿಕೆಯನ್ನೂ ಬದಲಾಯಿಸಬಲ್ಲದು. ಪುಸ್ತಕಗಳಿಲ್ಲದೇ ಹೇಳುತ್ತ ಹೋಗುವ ಕತೆಗಳು ಅವರದೇ ಚಿತ್ರಣಗಳನ್ನು ಮನಸ್ಸಿನಲ್ಲಿ ಕಲ್ಪಿಸಿಕೊಳ್ಳುತ್ತ ಹೋಗುವಲ್ಲಿ ಸಹಾಯ ಮಾಡಿದರೆ, ಚಿತ್ರ ಸಮೇತವಿದ್ದ ಪುಸ್ತಕಗಳಿಂದ ಓದಿದ ಕತೆಗಳು ಓದುವುದರ ಸ್ಪಷ್ಟ ಚಿತ್ರಣವನ್ನು ಕಣ್ಣೆದುರೇ ನಿಲ್ಲಿಸುವದರಿಂದ ಮಕ್ಕಳು ಕೆಲವೊಂದು ವಿಷಯಗಳನ್ನು ಬೇಗ ತಿಳಿದುಕೊಳ್ಳುತ್ತಾರೆ. ಇದರಿಂದ ಅಪ್ಪ ಅಮ್ಮಂದಿರಿಗೂ ಸಹಾಯವಾಗುತ್ತದೆ.

ಕಾರಿನ ಹಿಂದಿನ ಸೀಟಿನಲ್ಲಿ, ತನ್ನ ಸೀಟಿನಲ್ಲಿ, ಕೂತ ಮಗ ಏನಾದರೂ ಬೇಕು ಅಂತ ಹಟ ಮಾಡುವದು, ನಾವು ಕಾರ್ ನಿಂತ ಮೇಲೆ ಅದನ್ನು ಕೊಡುವದಾಗಿ ಹೇಳಿದರೂ ಅದು ತಿಳಿಯದೆ ಹೆಚ್ಚು ಹೆಚ್ಚು ಹಟ ಮಾಡುತ್ತಲೇ ಹೋಗುವದು ಸಾಮಾನ್ಯವಾಗಿತ್ತು ಮೊದಲು. ಆದರೆ, ‘ಶೀಪ್ ಇನ್ ದ ಜೀಪ್’ ಪುಸ್ತಕದಲ್ಲಿ ಎತ್ತಲೋ ನೋಡುತ್ತ ಜೀಪ್ ಓಡಿಸಿದ ಮೇಕೆಗಳ ಜೀಪು ಅಪಘಾತವಾಗಿ, ಅದು ನುಜ್ಜುಗುಜ್ಜಾಗಿ, ಚಕ್ರಗಳೂ, ಸ್ಟೀಯರಿಂಗೂ ಕಿತ್ತು ಹೊರಗೆ ಬಿದ್ದಿದ್ದ ಚಿತ್ರಗಳಿದ್ದ ಈ ಪುಸ್ತಕವನ್ನು ಓದಿದ ಮೇಲೆ ಸ್ವಲ್ಪ ಮೆತ್ತಗಾದ. ಕಾರು ನಿಲ್ಲುವವರೆಗೂ ಯಾಕೆ ಕಾಯಬೇಕು ಅನ್ನುವದು ತಿಳಿಯಿತು ಅವನಿಗೆ.

‘ಶೀಪ್ ಇನ್ ಅ ಜೀಪ್’ ಪುಸ್ತಕದ ಚಿತ್ರ ಹಾಕಲು ಗೂಗಲಿಸಿದಾಗ ಯಾರೋ ಅದನ್ನು ಓದಿದ ಯೂ ಟ್ಯೂಬಿನ ಈ ಲಿಂಕ್ ಸಿಕ್ಕಿತು.

ನಮ್ಮ ಮಗ ೩ ವರ್ಷದವನಾದಾಗ ಅವನ ವಾರ್ಷಿಕ ಚೆಕಪ್ಪಿಗೆ ಅಂತ ಅವನ ಡಾಕ್ಟರ್ ಹತ್ತಿರ ಹೋಗಿದ್ದಾಗ, ಅವರು ಕೊಟ್ಟ ಒಂದು ಮಾಹಿತಿ ಹಾಳೆಯಲ್ಲಿ ಜೇನ್ ಯೋಲೆನ್ ಬರೆದ ಈ ಪದ್ಯವಿತ್ತು. ಬಹಳ ಇಷ್ಟವಾಗಿ ಟೈಪಿಸಿ ಇಟ್ಟುಕೊಂಡಿದ್ದೆ.

Read to me riddles; read to me rhymes
Read to me stories of magical times
Read to me tales about castles and kings
Read to me stories of fabulous things
Read to me pirates, read to me knights,
Read to me dragons and dragon back flights
Read to me spaceships and cowboys and then
When you are finished, please read to me again.

             – by Jane Yolen; (Found this nice poem in one of the leaflets my son’s pediatrician gave us.)

**********************

ಪುಸ್ತಕಗಳಿಂದ ಓದಿ ಹೇಳುವ ಕತೆಗಳೇ ಹೆಚ್ಚಾದವು ಅನಿಸುತ್ತಿದೆ ಇತ್ತೀಚೆಗೆ. ಪುಸ್ತಕಗಳು ಎದುರಿಗೆ ಇಲ್ಲದೇ ಇದ್ದಾಗ, ಬಗೆ ಬಗೆಯ ಮಾಯಾಲೋಕದ, ಕಿನ್ನರರ, ಯಕ್ಷಿಣಿಗಳ ಲೋಕದ ಕತೆಗಳನ್ನ ವಿಸ್ತಾರವಾಗಿ ಹೇಳುತ್ತಾ ಹೋದಂತೆ ಅವನ್ನು ನನ್ನ ಮಗ ಹೇಗೆ ಕೇಳುತ್ತಾನೆ, ಅವುಗಳಿಂದ ತನ್ನಲ್ಲೇ ತಾನು ಆ ಲೋಕವನ್ನು ಕಟ್ಟಿಕೊಳ್ಳುತ್ತಾ ಹೋಗುತ್ತಾನಾ ಅಂತ ನೋಡಬೇಕು ಅನಿಸುತ್ತಿತ್ತು. ಒಂದಾನೊಂದು ಕಾಲಕ್ಕೆ ಬಹಳಷ್ಟು ಕತೆ ಕೇಳಿದ್ದೇನಾದ್ದರಿಂದ ಈಗ ಹೇಳಬಲ್ಲೆ ಅಂದುಕೊಂಡಿದ್ದು ಸುಳ್ಳೆಂದು ಸಾಬೀತಾಗಿದೆ. ನಾನು ಕೇಳಿದ ಕತೆಗಳ ಎಷ್ಟೋ ವಿವರಗಳು ನೆನಪಿಲ್ಲ ಅನಿಸುತ್ತಿದೆ. ಚಿಕ್ಕವನಿದ್ದಾಗ ಓದಿದಾಗ ಯಾಕೊ ಮತ್ತೆ ಮತ್ತೆ ಓದಬೇಕು ಅನಿಸಿರದಿದ್ದ ‘ಪಾತಾಳದಲ್ಲಿ ಪಾಪಚ್ಚಿ’ ಯ ಮೂಲ, ಅಲಿಸ್ ಇನ್ ವಂಡರ್ ಲ್ಯಾಂಡ್ ಪುಸ್ತಕವನ್ನು ಈಗ ದಿನವೂ ಸ್ವಲ್ಪ ಸ್ವಲ್ಪ ಓದಿ, ಅದರ ಕತೆಯನ್ನು ಮಗನಿಗೆ ಹೇಳುತ್ತಿರುವೆ. ಓದುತ್ತ ಹೋದಂತೆ, ನಾನು ಕನ್ನಡದಲ್ಲಿ ಇದನ್ನು ಓದಿದ್ದರ ನೆನಪಾಗುತ್ತಿದೆ ಮತ್ತು ಇದನ್ನ ಮತ್ತೆ ಮತ್ತೆ ಯಾಕೆ ಓದಲಿಲ್ಲ ಎನ್ನುವ ಪ್ರಶ್ನೆಯೂ ಬರುತ್ತಿದೆ. ಇದನ್ನ ಮೊದಲು ಕತೆಯಾಗಿ ಕೇಳಿದ್ದರೆ ಇದರೆ ಬಗ್ಗೆ ಹೆಚ್ಚಿನ ಆಸಕ್ತಿಯೇನಾದರೂ ಬರುತ್ತಿತ್ತೇ ಎನ್ನುವ ಪ್ರಶ್ನೆಯೂ ಮೂಡುತ್ತದೆ.

Advertisements

2 thoughts on “ಓದುವ ಹವ್ಯಾಸ

  1. ಶೀಪ್ ಇನ್ ದ ಜೀಪ್ ಕಥೆ ನನ್ನ ೪ ವರ್ಷದ ಪೋರಿಗೆ ಹೇಳಬೇಕು. ಕಾರಿನಲ್ಲಿ ಕೂತ ಕೂಡಲೇ ಶಾಪ್ಪಿಂಗ್ ಲಿಸ್ಟ್ ಹೊರ ಗೆಳೆಯುತ್ತಾಳೆ. ಕೊಡಿಸದಿದ್ದರೆ tantrums ಶುರುವಾಗುತ್ತೆ. ನನ್ನ ಎಂಟು ವರ್ಷದ ಮಗ ಮತ್ತು ಮಗಳಿಗೇ ಪುಸ್ತಕ ಪ್ರೇಮ ಜಾಸ್ತಿ ಎನ್ನಬಹುದು, ಇದಕ್ಕೆ ಕಾರಣ ನನ್ನ ಭರ್ತಿಯಾದ ನನ್ನ ಬುಕ್ ಶೆಲ್ಫ್ ಇರಬೇಕು. ಹಾಗೆಯೇ ಮನೆಯಲ್ಲಿ TV ಇಲ್ಲದಿರುವುದೂ ಮತ್ತೊಂದು ಕಾರಣ. ಟೀ ವೀ ಇಲ್ಲದೆ ಇರುವುದರಿಂದ ಮಕ್ಕಳು ಬೇರೆ ಚಟುವಟಿಕೆ ಗಳ ಕಡೆ ಗಮನ ನೀಡುತ್ತಾರೆ. ಒಳ್ಳೆಯ ಒಂದು ಲೇಖನಕ್ಕಾಗಿ ತಮಗೆ ಧನ್ಯವಾದಗಳು.

    • ಹ ಹ ಶಾಪಿಂಗ್ ಲಿಸ್ಟಿಗೆ ಶೀಪ್ ಇನ್ ದ ಜೀಪ್ ಕೆಲಸ ಮಾಡೋದು ಅನುಮಾನ ನನಗೆ 🙂 ನಿಮ್ಮ ಭರ್ತಿ ಬುಕ್ ಶೆಲ್ಫ್ ಒಂದೆ ಅಲ್ಲ, ಅದರ ಜೊತೆಗೆ ಅಲ್ಲಿಂದ ಪುಸ್ತಕಗಳನ್ನ ತೆಗೆದು ನೀವು ಓದುವದನ್ನ ನೋಡುವದೂ ಒಂದು ದೊಡ್ಡ ಕಾರಣ ಅಂತ ಅನಿಸುತ್ತದೆ ನನಗೆ. ಟಿ ವಿ ಇಲ್ಲದೆ ಇರುವದರಿಂದ ಬೇರೆ ಚಟುವಟಿಕೆ ಕಡೆ ಗಮನ ಕೊಡ್ತಾರೆ ಅನ್ನೋದು ನಿಜ. ನಾನು ಅದಕ್ಕೆ ಇದುವರೆಗೆ ಹೆಚ್ಚಿನ ಕಾರ್ಟೂನ್ ಚಾನೆಲ್ಲುಗಳಿಗೆ subscribe ಮಾಡಿಲ್ಲ. Over the air ಚಾನಲ್ಲುಗಳಲ್ಲಿ ನಿರ್ದಿಷ್ಟ ಸಮಯಕ್ಕೆ ಬರುವ ಕಾರ್ಟೂನ್ ಅಷ್ಟೇ ನೋಡುತ್ತಾನೆ ನನ್ನ ಮಗ. ಉಳಿದಂತೆ ಅವನ ಇಷ್ಟದ ಕೆಲವು DVD ಗಳನ್ನ ಲೈಬ್ರರಿಯಿಂದ ತರುತ್ತೇವೆ. ಬಹಳ ಇಷ್ಟ ಆಯ್ತು ನಿಮ್ಮ ಪ್ರತಿಕ್ರಿಯೆ, ಧನ್ಯವಾದಗಳು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s