ಕಾರ್ ಕಲಿಕೀ

‘ನಿನ್ನ ಹೆಂಡತಿಗೆ ನೀನೆ ಕಾರ್ ಕಲಿಸಲಿಕ್ಕೆ ಹೋಗಬ್ಯಾಡ. ಬರೀ ಜಗಳ ಆಗ್ತಾವ ನೋಡು.’ ಅಂತ ಭಾಳ ಮಂದಿ ಭಾಳ ಸರ್ತಿ ಹೇಳಿದ್ರು ನನಗ. ಆದ್ರ ಏನು ಮಾಡೋದು, ನೀನು ಮೊದ್ಲ ಎರಡು ಮೂರು ಸರ್ತಿ ನನಗ ಹೇಳಿ ಕೊಡೊ ತನಕ ನಾನು ಬ್ಯಾರೇದವರ ಕಡೆ ಕಾರ್ ಕಲಿಯಂಗಿಲ್ಲ ಅಂತ ಪಟ್ಟ ಹಿಡದು ಕೂತ ಹೆಂಡತಿ ಮಾತಂತೂ ಕೇಳಬೇಕಲ್ಲ. ನನಗ ಮೆಚ್ಚಿಗಿ ಅಂತ ಗೇರು ಬದ್ಲಾಯ್ಸಬೇಕಾಗೋ ಕಾರ್ ತೊಗೊಂಡಿದ್ದ ತಪ್ಪಿಗೆ ಇಷ್ಟು ದಿವ್ಸ ಕಾರ್ ಕಲೀಲಾರದೆ ಹಂಗೇ ಮ್ಯಾನೇಜ್ ಮಾಡಿದಾಕೀಗೆ ಈಗ ಮಗನ ದೆಸಿಂದ ಕಾರ್ ಕಲೀಬೇಕು ಅನ್ನೋ ಹುಮ್ಮಸ್ಸು ಬಂದದ. ಈಗ ನಾನ್ಯಾಕ ಛಾನ್ಸ್ ಬಿಡ್ಬೇಕು? ಪುಣ್ಯಕ್ಕ ಇದೇ ವ್ಯಾಳ್ಯಾಕ್ಕ ನಮ್ಮ ನಹುಷ ಇಲ್ಲೇ ಸ್ಯಾನ್ ಹೋಸೆಗೆ ಬಂದು ತಂದೊಂದು ಆಟೊಮ್ಯಾಟಿಕ್ ಕಾರು ತೊಗೊಂಡಿದ್ದು ಅನುಕೂಲ ಆಗೇದ. ನಮ್ಮ ಕಾರ್ನಾಗ ಮಗನ್ನ ಕೂಡ್ಸಿ, ಅವನ ಜೊತೀಗೆ ನಹುಷನ್ನ ಕೂಡ್ಸಿ, ಅವನ ಕಾರ್ ಒಳಗ ನಾವಿಬ್ಬರೂ ಪಾರ್ಕಿಂಗ್ ಲಾಟ್ ಸುತ್ತೋದು ನಡೀಲಿಕತ್ತದ.

ಕಾರು ಕಲಿಸೋ ಕಾಲಕ್ಕ, ನನಗ ಕಾರು ಕಲಿಸಿದ ಮ್ಯಾಥ್ಯೂಸನ ನೆನಪಾಗ್ತದ. ಭಾರತದಾಗ ಅರ್ಧಮರ್ಧ ಕಾರು ಕಲ್ತಿದ್ದೆ. ಇಲ್ಲಿಗೆ ಬಂದ ಒಂದು ಆರು ತಿಂಗಳ ಮ್ಯಾಲೆ ಕಾರು ಕಲೀಲಿಕ್ಕೆ ಶುರು ಮಾಡಿದ್ದೆ. ಅದು ಈಗ ೧೨-೧೩ ವರ್ಷ ಹಿಂದಿನ ಮಾತು. ಆದ್ರ ಅವತ್ತು ಮ್ಯಾಥ್ಯೂಸ್ ಹೇಳಿದ್ದ ೩ ವಿಚಾರ ಮಾತ್ರ ಇವತ್ತೂ ಮರತಿಲ್ಲ. ಅವಂದರ,

  1. ಸಿಗ್ನಲ್ಲಿನ್ಯಾಗ, ಟ್ರಾಫಿಕ್ಕಿನ್ಯಾಗ ಇನ್ನೊಂದು ಕಾರಿನ ಹಿಂದ ನಿಲ್ಲಸಬೇಕಾದ್ರ ಆ ಮುಂದಿನ ಕಾರಿನ ಹಿಂದಿನ ಘಾಲಿ ನೆಲಕ್ಕ ಮುಟ್ಟೋ ಜಾಗ ಕಾಣಸೋ ಅಷ್ಟು ದೂರದಾಗ ನಿಂದರಬೇಕು. ಅಂದರ ಅಕಸ್ಮಾತ್ ಮುಂದೇನಾದರೂ ಆಗಿ ಮುಂದಿನ ಕಾರು ಸ್ಟಕ್ ಆದ್ರ ಅಲ್ಲಿಂದ ಬಲಕ್ಕ ಹೊಳ್ಳಿಸಿಕೊಂಡು ಇನ್ನೊಂದು ಲೇನಿಗೆ ಹೋಗಲಿಕ್ಕೆ ಬರ್ತದ. ಇಲ್ಲಾ ಅಂದರ ನಾನೂ ಸ್ಟಕ್ ಆಗ್ತೀನಿ.
  2. ಕಾರು ಬ್ರೇಕ್ ಹಾಕಿ ನಿಲ್ಲಸೊ ಕಾಲಕ್ಕ, ಇನ್ನೇನು ನಿಂತು ಅನ್ನೋವಾಗ ಒಂಚೂರು ಬ್ರೇಕ್ ಮ್ಯಾಲಿನ ಕಾಲನ ಸಡ್ಲ ಮಾಡ್ಬೇಕು. ಅಂದರ ಬ್ರೇಕ್ ಹಾಕಿದಾಗ ಬರೋ ಜರ್ಕ್ ಒಂಚೂರು ಕಮ್ಮಿ ಆಗ್ತದ.
  3. ಎಡಕ್ಕ ಅಥವಾ ಬಲಕ್ಕ ಹೊರಳಸೋ ಮೊದ್ಲ ಬ್ಲೈಂಡ್ ಸ್ಪಾಟ್ ನೋಡ್ಬೇಕು ಅಂತ ಎಲ್ಲಾರೂ ಹೇಳ್ತಾರ. ಅದನ್ನ ಮ್ಯಾಥ್ಯೂಸ್ ಪ್ರ್ಯಾಕ್ಟಿಕಲ್ ಆಗಿ ಮಾಡಿ ತೋರ್ಸಿದ್ದ. ಒಂದು ಕಡೆ ಕಾರು ಪಾರ್ಕ್ ಮಾಡಿ ನನಗ ಹೇಳಿದ. ನೀನು ಡ್ರೈವರ ಪಕ್ಕದ ಕನಡಿ ಮತ್ತ ಹಿಂದಿಂದು ತೋರ್ಸೋ ಕನ್ನಡಿ ಎರಡನ್ನೂ ಅವಾಗಾವಾಗ ನೋಡ್ತಿರು. ನಾನು ಹಿಂದಿನಿಂದ ನಡಕೋತ ಬರ್ತೀನಿ. ಮೊದ್ಲ ಕನ್ನಡಿ ಒಳಗ ಕಾಣಸ್ತಿರ್ತೀನಿ, ಹಂಗ ಮುಂದ ಬರ್ತಾ ಬರ್ತಾ ಒಂದು ಕಡೆ ನಾನು ಯಾವ ಕನ್ನಡಿ ಒಳಗೂ ಕಾಣ್ಸಂಗಿಲ್ಲ. ಅದೇ ನಿನ್ನ ಬ್ಲೈಂಡ್ ಸ್ಪಾಟು. ಅವಾಗ ಸ್ವಲ್ಪ ತಲಿ ಬಗ್ಸಿ ಎಡ ಭುಜದ ಮ್ಯಾಲಿಂದ ಎಡಕ್ಕ ಹೊರಗ ನೋಡಿದ್ರ ಕಾಣಿಸ್ತೀನಿ ಅಂತ. ಅದರ ಹಂಗ ಮಾಡಿ ತೋರ್ಸಿದ.

ಇವು ಮೂರು ಭಾಳ ಛೊಲೊ ಹೇಳಿದ್ದ. ಉಳಧಂಗ ಎಲ್ಲಾ ಛೊಲೊನೇ ಕಲ್ಸಿದ್ದ. ಈ ಇಂಡಿಕೇಟರ್ ಹಾಕೋದು ಮಾತ್ರ ಭಾಳ ಕನ್ಫ್ಯೂಸ್ ಆಗ್ತಿತ್ತು. ಸ್ಟೀರಿಂಗ್ ವ್ಹೀಲಿನ ಎಡಗಡೆ ಇರೋದನ್ನ ಮ್ಯಾಲೆ ಮಾಡಿದ್ರ ಬಲಗಡೆ ಇಂಡಿಕೇಟರು ಮತ್ತ ಕೆಳಗ ಮಾಡಿದ್ರ ಎಡಗಡೆ ಇಂಡಿಕೇಟರು ಅಂತ ಹೇಳಿದ್ದು ತಲೀಗೆ ಇಳ್ದಿದ್ದಿಲ್ಲ. ಯಾವಾಗ್ಲೂ ಗೊಂದಲ ಆಗೋದು ಮಗಂದು. ಒಂದು ಸರ್ತಿ ಅಂತು ಇಂಡಿಕೇಟರ್ ಬದ್ಲು ವೈಪರ್ ಚಾಲು ಮಾಡಿ ಬಯ್ಸಿಕೊಂಡಿದ್ದೆ. ಕಡೀಕೆ ಶಾಂತ ಮನಸ್ಸಿಂದ ವಿಚಾರ ಮಾಡಿದಾಗ ನನಗ ತಿಳೀತು, ಸ್ಟೀರಿಂಗ್ ವ್ಹೀಲು ಯಾವ ಕಡೆ ತಿರಗಸಬೇಕಾಗೇದೋ ಇಂಡಿಕೇಟರ್ರೂ ಅದೇ ದಿಕ್ಕಿನಾಗ ಹೋಗಬೇಕು ಮತ್ತ ಎಡಗೈ ಆ ಕೆಲಸ ಮಾಡಬೇಕು ಅಂತ. ಅದಾದ ಮ್ಯಾಲೆ ನಿರುಮ್ಮಳ ಆತು.

ಅಂತೂ ನನ್ನ ಹೆಂಡತಿ ಕಾರ್ ಕಲಿಕೀ ನೆಪದಾಗ ನನ್ನ ಕಾರ್ ಕಲಿಕೀ ನೆನಪಾತು. ಪಾರ್ಕಿಂಗ್ ಲಾಟಿನೊಳಗ ಛೋಲೊ ಓಡಸ್ಲಿಕತ್ತಾಳ ಅನಸಿದ್ದಕ್ಕ ರೋಡ್ ಮ್ಯಾಲೆ ಹೋಗ್ತಿ ಏನು ಅಂತ ಕೇಳಿದ್ರ, ‘Not with you. You are not a good instructor!’ ಅಂತ ಅನ್ನಿಸಿಕೊಂಡಿದ್ದೂ ಆಯಿತು. ಯಾಕ ನಾನೇನು ಅಷ್ಟು ಬಯ್ದೀನೇನು ಅಂತ ಅಂದರ ಇಲ್ಲ ನಿನ್ನ ಹತ್ರ ಕಾಲಾಗ ಬ್ರೇಕ್ ಇಲ್ಲ ಅನ್ನೋ ಸಮಝಾಯ್ಸಿ ಬ್ಯಾರೆ ಬಂತು. ಇನ್ನ ಮ್ಯಾಲೆ ಕಾರು ಕಲಿಸೋವ್ರ ಹತ್ರ ಹೋಗಲಿಕ್ಕೆ ರೆಡಿ ಆಗ್ಯಾಳ ಹಂಗಾರ!

(ಇಲ್ಲೆ ಬರೆಯೋ ಕಲ್ಕ ಎಡಕ್ಕ, ಬಲಕ್ಕ ಎಲ್ಲಾ ಹೇಳಿದ್ದು ಅಮೇರಿಕಾದಾಗಿನ ರಸ್ತೆ ಬಲಗಡೆ ಡ್ರೈವಿಂಗ್ ಪದ್ಧತಿ ಪ್ರಕಾರನ ಮತ್ತ!)

(ನನ್ನ ಮ್ಯಾನ್ಯುವಲ್ ಕಾರು ಓಡ್ಸೋ ಕಾಲಕ್ಕ, ಅವುಗಳ ಸ್ಟೀರಿಂಗ್ ವ್ಹೀಲ್ ಹಿಡ್ದಾಗ ಆದ ಜ್ಞಾನೋದಯದ ಪರಿಣಾಮದಿಂದ ಎರಡು ಕವನ(?) ಬರ್ದಿದ್ದೆ ಭಾಳ ಹಿಂದ, ಇಲ್ಲೆ ಮತ್ತ ಇಲ್ಲೆ ಅವ ಃ-) )

(ಚಿತ್ರಃ ನನ್ನ ಕಾರ್ ಕ್ರೇಝಿ ಮಗನವು, ನಾನೇ ಯಾವಾಗ ಯಾವಾಗೋ ತಗದ ಚಿತ್ರಗಳ ಕೊಲ್ಯಾಜು)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s