ದಧೀಭಾಂಡ

ಅಜ್ಜಾ, ಏಳಜ್ಜ ಮೇಲೆ. ಒಳಗೆ ಗಾಳಿ ಇಲ್ಲ, ಉಸಿರು ಕಟ್ತಾ ಇದೆ. ಬೇಗ ಮೇಲೆ ಏಳು..

ಯಾಕಜ್ಜ ಏನು ಮಾತಾಡ್ತಿಲ್ಲ? ಸಿಟ್ಟಿಂದ ಬೆನ್ನಟ್ಟಿ ಬಂದ ನನ್ನಮ್ಮ ನನ್ನ ಹೆಸರು ಕೂಗ್ತಾ ಬಂದದ್ದು ಕೇಳಿಸ್ತು. ನಾನು ಆ ಕಡೆ ಹೋದೆ ಅಂತ ನೀನು ಅವಳಿಗೆ ಹೇಳಿದ್ದೂ ಕೇಳಿಸ್ತು. ಈಗ ಅಮ್ಮನ ಧ್ವನಿನೂ ಕೇಳಿಸ್ತಾ ಇಲ್ಲ. ಹಂಗಾರೆ ಅಮ್ಮ ಆಗ್ಲೆ ಭಾಳ ದೂರ ಹೋಗಿರ್ಬೇಕು. ನನ್ನ ಹೊರಗ್ಬಿಡು ಈಗ. ನಾನು ಈ ಕಡೆ ಹೋಗ್ತೀನಿ, ಅಮ್ಮನ ಕೈಗೆ ಇನ್ನೊಂದು ಸ್ವಲ್ಪ ಹೊತ್ತು ಸಿಗಬಾರದು ನಾನು.

….

ಅಜ್ಜಾ, ನಿಜವಾಗ್ಲೂ ಉಸಿರಾಡ್ಸೋಕಾಗ್ತಾ ಇಲ್ಲ. ನಿನ್ನ ನೋಡಿದ್ರೆ ಒಳ್ಳೆವ್ನ ಥರ ಕಾಣಿಸ್ದೆ. ಎಂದೂ ಕಂಡಿರಲಿಲ್ಲ ಅಮ್ಮನ ಈ ಸಿಟ್ನ. ಹಿಡ್ದು ನಾಕು ತದಕೇ ಬಿಡ್ತಾಳೆ ಅಂತ ಕೈಗೆ ಸಿಗದೇ ಓಡಿ ಬರ್ತಿದ್ದೆ. ದಾರೀಲಿ ನೀನು ಮೊಸರಿನ ದೊಡ್ಡ ಪಾತ್ರೆ ಇಟ್ಕೊಂಡು ಕೂತ್ಕೊಂಡಿದ್ದೆ. ಒಳ್ಳೇವ್ನು ನೀನು ಅಂತ ಅಂದ್ಕೊಂಡೆ, ಅಮ್ಮನ ಕೈಲಿ ತಪ್ಪಿಸ್ಕೋಳ್ಳೋಕೆ ನಿನ್ನ ಪಾತ್ರೆ ಒಳಗೆ ಕೂತ್ಕೋತೀನಿ ಅಂದೆ. ನೀನು ಕೆಟ್ಟೋನ್ ಥರ ಕಾಣಿಸ್ಲೇ ಇಲ್ಲ. ಈಗ್ಯಾಕೆ ನನ್ನ ಹೊರಗೆ ಬಿಡ್ತಾನೇ ಇಲ್ಲ? ಬಿಡು ಅಜ್ಜಾ ನನ್ನ.

….

ಅಜ್ಜಾ, ಬಿಡು ಅಜ್ಜಾ. ಉಸಿರು ಕಟ್ತಾ ಇದೆ.. ಊ ಊ ..

ಪುಟ್ಟಾ ನನಗೋಸ್ಕರ ಒಂದು ಮಾತು ಹೇಳ್ತೀಯಾ? ಅಂದರೆ ಬಿಟ್ಟು ಬಿಡ್ತೀನಿ.

ಏನು ಹೇಳ್ಬೇಕು ಅಜ್ಜಾ?

‘ನಿನಗೆ ಮುಕ್ತಿ ಕೊಟ್ಟಿದೀನಿ’ ಅಂತ ಹೇಳಿಬಿಡು, ಬಿಟ್ಟು ಬಿಡ್ತೀನಿ.

ನಾನು ಪುಟ್ಟ ಮಗು ಅಜ್ಜಾ, ನಂಗದೆಲ್ಲ ಗೊತ್ತಾಗೋದಿಲ್ಲ. ನನ್ನ ಬಿಟ್ಟು ಬಿಡು ಅಜ್ಜಾ.

ಬಿಡೋದಕ್ಕೆ ಹಿಡ್ದಿಲ್ಲ ಕೃಷ್ಣ ನಿನ್ನ. ನೀನು ಬರೀ ಪುಟ್ಟ ಮಗೂನಾ? ನಂಗೆ ಮುಕ್ತಿ ಕೊಟ್ಟೆ ಅಂತ ಹೇಳಿಬಿಡು, ಬಿಟ್ಟುಬಿಡ್ತೀನಿ.

ಅಜ್ಜಾ ಬಿಟ್ಬಿಡು ಅಜ್ಜಾ, ನಿನ್ನ ಕೈಯಲ್ಲಿ ಸಿಕ್ಕಿ ಹಾಕ್ಕೊಳ್ಳೊ ಬದ್ಲು ಅಮ್ಮನ ಕೈಗೆ ಸಿಕ್ಕಿದ್ರೆ ಚನ್ನಾಗಿತ್ತು! ಬಿಟ್ಬಿಡು ಅಜ್ಜಾ..

….

ಅಜ್ಜಾ..

….

ಆಯ್ತು ಅಜ್ಜಾ, ನಿಂಗೆ ಮುಕ್ತಿ ಕೊಟ್ಟಿದೀನಿ, ಬಿಟ್ಬಿಡು ಅಜ್ಜಾ.

….

ಹೇಳಿದ್ನಲ್ಲ ಅಜ್ಜಾ, ಇನ್ನೂ ಯಾಕೇ ಏಳ್ತಿಲ್ಲ?

ಮತ್ತೆ ನನ್ನ ಹೆಂಡತಿ ಮಕ್ಕಳು ನನ್ನ ಜವಾಬ್ದಾರಿ ಅಲ್ಲವಾ? ಅವರಿಗೂ ಮುಕ್ತಿ ಕೊಟ್ಟೆ ಅಂತ ಹೇಳ್ಬಿಡಪ್ಪ!

ಅಯ್ಯೋ ಇದೇನಾಟ ಅಜ್ಜಾ ನಿಂದು? ಆಯ್ತು ಅವರಿಗೂ ಮುಕ್ತಿ ಕೊಟ್ಟೆ. ಈಗ್ಲಾದ್ರೋ ಏಳು ಅಜ್ಜಾ.

ನನ್ನ ಹಳ್ಳಿಗೇ ನಾನೇ ಮುಖಂಡ, ನನ್ನ ಹಳ್ಳಿ ಜನ ಎಲ್ಲಾ ನನ್ನ ಜವಾಬ್ದಾರೀನೇ ಅಲ್ವಾ? ಅವರಿಗೂ ಮುಕ್ತಿ ಕೊಟ್ಟೆ ಅಂತ ಹೇಳ್ಬಿಡು ಮತ್ತೆ.

ನಂದಿಲ್ಲಿ ಉಸಿರು ಕಟ್ತಾ ಇದೆ.. ಆಯಿತು ಅವರಿಗೂ ಮುಕ್ತಿ ಕೊಟ್ಟಿದೀನಿ. ಬಿಟ್ಬಿಡು ಅಜ್ಜಾ..

ಎಷ್ಟೊಳ್ಳೇತಾ ಕೃಷ್ಣ ನೀನು. ಇನ್ನೇನೂ ಇಲ್ಲ, ನಿನ್ನ ಇಷ್ಟೊತ್ತು ಇಟ್ಕೊಂಡು ನನ್ನ ಕೆಲಸ ಮಾಡಿಕೊಟ್ತಲ್ಲ ಈ ಮೊಸರಿನ ಪಾತ್ರೆ, ಇದಕ್ಕೂ ಮುಕ್ತಿ ಕೊಟ್ಟೆ ಅಂತ ಹೇಳ್ಬಿಡು, ಬಿಟ್ಟೇ ಬಿಟ್ಟೆ.

ಆಯ್ತು ಅಜ್ಜಾ ಈ ಮೊಸರಿನ ಪಾತ್ರೆಗೂ ಮುಕ್ತಿ ಕೊಟ್ಟೆ.. ನನ್ನ ಬಿಟ್ಬಿಡು.

ಬಾರೋ ನನ್ನ ಕೃಷ್ಣ, ಒಡೆಯಾ. ಮತ್ತೆ ನೀನು ಬರ್ತೀಯಾ, ಆವಾಗ್ಲೇ ನಾನೂ ಬರ್ತೀನಿ. ಆಗ ಕೊಡ್ತೀನಿ ಅಂದಿದ್ದೆ. ಇವತ್ತು ಕೊಟ್ಟೆ ಬಿಟ್ಯಲ್ಲ. ಧನ್ಯನಾದೆ ಕೃಷ್ಣ.

ಭಾಗವತದ ದಧೀಭಾಂಡನ ಕತೆಯಂತೆ ಇದು. ರಾಮಾವತಾರ ಕಾಲಕ್ಕೆ ಗುಹನಾಗಿ ರಾಮನಿಗೆ ಅಪಾರ ಸಹಾಯ ಮಾಡಿದಾತ. ಮುಕ್ತಿ ಕೊಡು ರಾಮ ಅಂತ ರಾಮನನ್ನು ಕೇಳಿದಾತ. ಅದು ಈಗಲ್ಲ, ಮುಂದೆ ನೀನು ಬರ್ತೀಯಾ, ನಾನೂ ಬರ್ತೀನಿ. ಆಗ ಕೊಡ್ತೀನಿ ಅನ್ನುತ್ತಾನಂತೆ ರಾಮ. ಅವನೇ ಗೋಕುಲದ ಬೀದಿಯಲ್ಲಿ ಕುಳಿತುಕೊಂಡಿರುತ್ತಾನೆ. ಸಿಟ್ಟಿನಿಂದ ಬೆನ್ನಟ್ಟಿ ಬರುತ್ತಿರುವ ಅಮ್ಮ ಯಶೋದೆಯಿಂದ ತಪ್ಪಿಸಿಕೊಳ್ಳಲು ಕೃಷ್ಣ ಅವನ ಆಶ್ರಯವನ್ನೇ ಪಡೆಯುತ್ತಾನಂತೆ.

ದಧೀಭಾಂಡನ ಈ ಕತೆ ಕೇಳಿರಲಿಲ್ಲ. ನಿನ್ನೆ ಅರಳುಮಲ್ಲಿಗೆ ಪಾರ್ಥಸಾರಥಿ ಅವರ ಭಾಗವತ ಪ್ರವಚನದ ಮಂಗಳದಲ್ಲಿ ಮೊದಲ ಬಾರಿ ಕೇಳಿದೆ. ತಟ್ಟನೆ ಎದೆಗೆ ತಟ್ಟಿ, ವಿಚಾರ ಮಾಡಿದಂತೆ ಬಗೆ ಬಗೆಯಲ್ಲಿ ಬೆರಗು ಮೂಡಿಸಿದ ಕತೆ. ಮುಕ್ತಿಯನ್ನು ಕೇಳುವವ ಹೊರಗಿದ್ದಾನೆ, ಕೊಡುವವ ಒಳಗಿದ್ದಾನೆ. ಅಷ್ಟೇ ಅಲ್ಲ, ಸ್ವತಃ ತಾನೇ ಬೇಕಾಗಿ ಒಳಗೆ ಹೋಗಿದ್ದಾನೆ. ಅಮ್ಮನ್ನ ಸಿಟ್ಟಿಗೆಬ್ಬಿಸಿದ್ದು, ಅವಳಟ್ಟಿಸಿಕೊಂಡು ಬಂದದ್ದು, ಎಲ್ಲ ಇವನಿಗಾಗಿಯೆ? ಮುಕ್ತಿಯನ್ನೇ ಕೊಡುವವಗೆ ದಧಿಭಾಂಡದ ಸೆರೆಯೆ?

ಉತ್ಥಾನ ದ್ವಾದಶಿ, ತುಳಸಿ ಲಗ್ನದ ದಿವಸಕ್ಕೊಂದು ಭಾಗವತದ ಕೃಷ್ಣನ ಕತೆ, ರಾಮನ ಕತೆಯ ಸ್ಮರಣೆಯೊಂದಿಗೆ.

(ಕತೆಯ ತಿರುಳು, ಅರಳುಮಲ್ಲಿಗೆ ಅವರ ಪ್ರವಚನದಲ್ಲಿ ಕೇಳಿದ್ದು. ಇಲ್ಲಿ ಬರೆದದ್ದು ಅವರ ಪ್ರವಚನದ ಯಥಾವತ್ ಅಕ್ಷರ ರೂಪವಲ್ಲ. ನನ್ನ ನೆನಪಿನಲ್ಲಿ ಉಳಿದದ್ದನ್ನ, ನನ್ನ ವಾಕ್ಯಗಳಲ್ಲಿ ಇಲ್ಲಿ ಬರೆದಿದ್ದೇನೆ)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s