ಪ್ರಾಕೃತವೆ ತಾ ಸಂಸ್ಕೃತವೆನಿಸಿ…

ಆದರುಶವ ಗತಾಕ್ಷ ಭಾಷಾ
ಭೇದದಿಂದಲಿ ಕರೆಯಲದನು ನಿ
ಷೇಧಗೈದವಲೋಕಿಸದೆ ಬಿಡುವರೆ ವಿವೇಕಿಗಳು
ಮಾಧವನ ಗುಣ ಪೇಳ್ವ ಪ್ರಾಕೃತ
ವಾದರೆಯು ಸರಿ ಕೇಳಿ ಪರಮಾ
ಹ್ಲಾದಬಡದಿಪ್ಪರೆ ನಿರಂತರ ಬಲ್ಲ ಕೋವಿದರು

ಭಾಸ್ಕರನ ಮಂಡಲವ ಕಂಡು ನ
ಮಸ್ಕರಿಸಿ ಮೋದಿಸದೆ ದ್ವೇಷದಿ
ತಸ್ಕರನು ನಿಂದಿಸಲು ಕುಂದಹದೇ ದಿವಾಕರಗೆ
ಸಂಸ್ಕೃತವಿದಲ್ಲೆಂದು ಕುಹಕ ತಿ
ರಸ್ಕರಿಸಲೇನಹುದು ಭಕ್ತಿ ಪು
ರಸ್ಕರದಿ ಕೇಳ್ವರಿಗೆ ಒಲಿವನು ಪುಷ್ಕರಾಕ್ಷ ಸದಾ

ಪತಿತನ ಕಪಾಲದಲಿ ಭಾಗೀ
ರಥಿಯ ಜಲವಿರೆ ಪೇಯವೆನಿಪದೆ
ಇತರ ಕವಿನಿರ್ಮಿತ ಕುಕಾವ್ಯಾಶ್ರಾವ್ಯಬುಧರಿಂದ
ಕೃತಿಪತಿಕಥಾನ್ವಿತವೆನಿಪ ಪ್ರಾ
ಕೃತವೆ ತಾ ಸಂಸ್ಕೃತವೆನಿಸಿ ಸ
ದ್ಗತಿಯನೀವುದು ಭಕ್ತಿಪೂರ್ವಕ ಕೇಳಿ ಪೇಳ್ವರಿಗೆ

ಹರಿಕಥಾಮೃತಸಾರ – ಸಂಧಿ ೧೭, ನುಡಿ ೩೪,೩೫,೩೬

ಕನ್ನಡದಲ್ಲಿ ದೇವರ ಪದ ಮಾಡುವದಿರಲಿ, ದೇವರ ಪೂಜೆ ವೇಳೆಗೆ ಕನ್ನಡ ಮಾತನಾಡಿದರೂ ಮೈಲಿಗೆಯಾಗುತ್ತದೆ ಎನ್ನುವ ಕಾಲದಲ್ಲಿ ಕನ್ನಡದಲ್ಲಿ ದೇವರ ಪದಗಳನ್ನು ಮಾಡಿದವರು ದಾಸರುಗಳು. ಶ್ರೀನಿವಾಸಾಚಾರ್ಯರು ತಾವೇ ಸ್ವತಃ ಕಟ್ಟುನಿಟ್ಟಿನ ಮಡಿ ಮೈಲಿಗೆ ಆಚರಣೆಗಳನ್ನು ಮಾಡಿದವರು. ವಿಜಯದಾಸರ, ಗೋಪಾಲದಾಸರ ಮೂಲಕ ಜಗನ್ನಾಥದಾಸರಾದವರು, ಕನ್ನಡವನ್ನು ಅಪ್ಪಿಕೊಂಡವರು. ಅವರ ಮೇರು ಕೃತಿ ಹರಿಕಥಾಮೃತಸಾರದಲ್ಲಿ, ಕನ್ನಡದಲ್ಲಿ ದೇವರನಾಮವೇ ಎಂದು ಪ್ರಶ್ನಿಸುವವರಿಗೆ ಹಲವು ಕಡೆ ಉತ್ತರ ಕೊಟ್ಟಿದ್ದಾರೆ. ಸಂಧಿ ೧೭ರ ಈ ಮೇಲಿನ ಮೂರು ನುಡಿಗಳು ಒಂದಾದ ಮೇಲೊಂದರಂತೆ ಕನ್ನಡದ ಪ್ರಾರ್ಥನೆಯೂ ಸಾರ್ಥಕವೇ ಆಗುತ್ತದೆ ಎನ್ನುತ್ತಾರೆ. ಒಂದಾದ ಮೇಲೊಂದರಂತೆ ಬೇರೆ ಬೇರೆ ರೀತಿಯಲ್ಲಿ ಹೇಳಿದ ನುಡಿಗಳಲ್ಲಿ ವ್ಯಷ್ಟಿಯಾಗಿ, ಸಮಷ್ಟಿಯಾಗಿ, ವಿಶೇಷ ಅರ್ಥವೇನಾದರೂ ಇದೆಯೆ? ತಿಳಿದವರನ್ನು ಕೇಳಿ ತಿಳಿಯಬೇಕು.

ಕಳೆದ ಒಂದು ವಾರದಲ್ಲಿ ಹರಿಕಥಾಮೃತಸಾರವನ್ನು ಪಠಿಸಿದೆ. ಎಷ್ಟೋ ದಿವಸಗಳಾಗಿತ್ತು ಆದ್ಯಂತವಾಗಿ ಪಠಿಸಿ. ಈ ಬಾರಿಯ ಓದಿಗೆ ಬಳಸಿಕೊಂಡದ್ದು ಶ್ರೀ ವ್ಯಾಸನಕೆರೆ ಪ್ರಭಂಜನಾಚಾರ್ಯರು ಸಂಗ್ರಹಿಸಿ ಮುದ್ರಿಸಿದ ಪುಸ್ತಕ. ಪ್ರತಿ ನುಡಿಗೂ ಅರ್ಥವನ್ನು ಸಾಕಷ್ಟು ವಿಸ್ತಾರವಾಗಿ ಕೊಟ್ಟದ್ದು ಈ ಪುಸ್ತಕದ ವಿಶೇಷ. ಬಹಳಷ್ಟು ದಿನಗಳ (ವರ್ಷಗಳೇ ಆಗಿತ್ತೇನೋ) ನಂತರದ ಈ ಓದಿನಲ್ಲಿ ಬಹಳಷ್ಟು ಕನ್ನಡ ಶಬ್ದಗಳು ವಿಶೇಷವಾಗಿ ಕಂಡವು. ಎಷ್ಟೋ ಶಬ್ದಗಳನ್ನು ಬರೆದಿಟ್ಟುಕೊಂಡೆ. ಇಲ್ಲಿ ಕೆಳಗೆ ಅವುಗಳನ್ನು ಹಾಕುತ್ತಿರುವೆ, ನೋಡಿ ನಿಮಗೆಷ್ಟು ಗೊತ್ತು ಇದರಲ್ಲಿ ಃ)

(ಬಹಳ ಹಿಂದೆ ಸಂಪದದಲ್ಲಿ ಒಮ್ಮೆ ಕೆಲವು ಶಬ್ದಗಳನ್ನು ಹಾಕಿದ್ದೆ. ಆ ಕೊಂಡಿ ಇಲ್ಲಿದೆ)

(ಪ್ರಾಕೃತವು ಸಂಸ್ಕೃತವೇ ಆಗುವದು ಅಂದರೆ ದೇವರು ಸಂಸ್ಕೃತದಲ್ಲಿ ಕರೆದರೆ ಮಾತ್ರ ಬರುತ್ತಾನೆಯೇ ಎಂಬ ಸಂಶಯ ಬರಬಹುದು. ಹಾಗೆ ಬಂದರೆ ಗಜೇಂದ್ರ ಮೋಕ್ಷದ ಈ ಕತೆ ಒಂದಷ್ಟು ಸಹಾಯಕಾರಿಯಾಗಬಹುದು ಃ) )

ಚಳಿವೆಟ್ಟಳಿಯ
ನುಡಿವೆಣ್ಣಿನಾಣ್ಮಾಂಡ (೨/೨೭ – ಸಂಧಿ/ನುಡಿ)
ಕುಂಭಿಣಿಜೆಯಾಣ್ಮ (೧೯/೩೨)
ಸಗ್ಗವೊಳೆಯಾಣ್ಮಾಲಯ (೨೨/೨೧)
ಬಾನ್ನವಿರಸಖ (೨೨/೨೧)
ಪೊಂಬಸಿರ (೨೪/೩೨)
ಪಾಪಾಟವಿ (೨೨/೨೨)
ಬವರ
ಮೈಗಣ್ಣ
ಪಣೆಗಣ್ಣ (೨೪/೧೪)
ಎಣ್ದೆಸೆ (೧೭/೧೩, ೯/೨೦)
ಏಣಲಾಂಛನ (೧೭/೭)
ಪೊಂಬಕ್ಕಿದೇರ
ಸೊನ್ನೊಡಲ (೨೪/೧೪)
ಬಾಕುಳಿಕ (೨೨/೭) (ನನಗೆ ಬಹಳ ವಿಶೇಷವೆನಿಸಿದ ಶಬ್ದವಿದು. ಇದರ ಬಗ್ಗೆ ಮತ್ತೊಮ್ಮೆ ಪ್ರತ್ಯೇಕವಾಗಿ ಬರೆಯಬೇಕು)
ಕಾರೊಡಲ (೨೫/೩೪)
ಸೊನ್ನಗದಿರ (೩೦/೧೪)
ಕುಣಪ (೨೫/೨)
ಬಂಡುಣಿ
ಎಲರುಣಿ
ತಾವರೆಗಂದ (೨೨/೧೨)
ಬಾಂದೊರೆ (೨೨/೧೨)
ಎಲರುಮಿತ್ರ (೨೪/೧೫)
ಬಾಂಬೊಳೆ (೨೩/೧೫)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s