ಅಕ್ಟೋಬರ್ ೧೦, ಅಗ್ನಿಕಾರ್ಯ, ಸ್ವರ್ಣಸೇತು…

೨೦೦೫ರಲ್ಲಿ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟದ ವಾರ್ಷಿಕ ಸಂಚಿಕೆ ಸ್ವರ್ಣಸೇತುವಿನ ಸಂಪಾದಕ ಮಂಡಲಿಯನ್ನು ಸೇರಿಕೊಂಡ ಹೊಸತಿನಲ್ಲಿ ಸಂಪಾದಕ ಮಂಡಲಿಯ ಸದಸ್ಯರೆಲ್ಲ ಸೇರಿಕೊಂಡು ಬರುವ ಬರಹಗಳನ್ನು ತಿದ್ದಲು ಕೆಲವೊಂದು guidelines ಹಾಕಿಕೊಂಡೆವು. ಬರಹದಲ್ಲಿ ಟೈಪ್ ಆಗಿ ಬರುವ ಬರಹಗಳಲ್ಲಿ ಎಲ್ಲಿಯಾದರೂ ಟೈಪಿಂಗ್ ತಪ್ಪುಗಳಿದ್ದರೆ ತಿದ್ದುವದು, ವಾಕ್ಯ/ಶಬ್ದಗಳ ಉಪಯೋಗ ಸರಿ ಇಲ್ಲ ಅನಿಸಿದರೆ ಅದರ ಬಗ್ಗೆ ಲೇಖಕರಿಗೆ ತಿಳಿಸುವದು ಮತ್ತು ಮಾಡಬಹುದಾದ ಬದಲಾವಣೆಯನ್ನೂ ತಿಳಿಸುವದು, ಹಾಗೇ ಬಂದ ಕತೆಗಳಲ್ಲಿ ಪಾತ್ರಗಳ ಪರಿಚಯ ಸರಿಯಾಗಿ ಆಗುತ್ತಿಲ್ಲ ಅನಿಸಿದರೆ (ಉದಾ: ಯಾವುದೇ ವ್ಯಕ್ತಿಯ ಹೆಸರು ಧಿಡೀರನೆ ಕತೆಯ ಮಧ್ಯದಲ್ಲಿ ಅಸಹಜ ಅನಿಸುವಂತೆ ಬರುವದು, ಇತ್ಯಾದಿ) ಅದನ್ನೂ ಲೇಖಕರ ಗಮನಕ್ಕೆ ತರುವದು, ಇತ್ಯಾದಿ, ಇತ್ಯಾದಿ.

ಅಂಥ ಒಂದು ಕೆಲಸ ಮಾಡುತ್ತಿದ್ದದ್ದು ಮೊದಲ ಬಾರಿಗೆ ಆದ್ದರಿಂದ ಬಹಳ ಹುಮ್ಮಸ್ಸಿನಿಂದ ಕೆಲಸ ಪ್ರಾರಂಭಿಸಿದ್ದೆ. ನನ್ನ ಪಾಲಿಗೆ ಬಂದ ಲೇಖನಗಳಲ್ಲಿ ಒಂದು ಕತೆಯೂ ಇತ್ತು. ತಾಯಿ ಮಗಳ ಕತೆ ಸೊಗಸಾಗಿತ್ತು. ಕಾಲೇಜಿನ ನಾಟಕವೊಂದರಲ್ಲಿ ಪಾತ್ರ ನಿರ್ವಹಿಸಲು ಹೋಗುವ ಮಗಳ ಪಾತ್ರದೊಡನೆ ಶುರುವಾಗುವ ಕತೆ ಅದು. ತಾಯಿ ತನ್ನ ಕಾಲೇಜು ದಿನಗಳಲ್ಲಿ ಅದೇ ನಾಟಕದಲ್ಲಿ ತಾನು ನಾಯಕಿಯಾಗಿ ಅಭಿನಯಿಸಿದಾಗಿನಿಂದ ಆರಂಭಿಸಿ ಅನುಭವಿಸಿದ ಸಿಹಿ-ಕಹಿ ಘಟನೆಗಳ ಫ್ಲ್ಯಾಷ್ ಬ್ಯಾಕಿಗೆ ಹೋಗುತ್ತಿತ್ತು. ಅಂದಿನ ದಿನಗಳಲ್ಲಿ ಆ ನಾಟಕದಲ್ಲಿ ನಾಯಕನ ಪಾತ್ರ ವಹಿಸಿದ ತನ್ನ ಸಹಪಾಠಿಯನ್ನು ಪ್ರೀತಿಸುತ್ತಾಳೆ. ಅವನೂ ಅವಳನ್ನು ಪ್ರೀತಿಸುತ್ತಾನೆ. ಇಬ್ಬರ ಮನೆಯಲ್ಲೂ ಅವರ ಪ್ರೀತಿಗೆ ಬೆಲೆ ಸಿಗದ ಕಾರಣ ಎಲ್ಲರನ್ನೂ ಧಿಕ್ಕರಿಸಿ ತಮ್ಮದೇ ಮನೆ ಮಾಡಿಕೊಂಡು ಸಂಸಾರವಂದಿಗರಾಗುತ್ತಾರೆ, ಮದುವೆಯ ಹಂಗೂ ಇಲ್ಲದೇ. ಹೀಗೆ ಸಾಗುವ ಕತೆ ಮುಂದೆ ಅವಳ ಬಾಳಿನಲ್ಲಿ ಬರುವ ಬಿರುಗಾಳಿಯನ್ನೂ, ಅವಳು ಅದನ್ನು ಎದುರಿಸಿ ನಿಲ್ಲುವ ಪರಿಯನ್ನೂ ಸಮರ್ಥವಾಗಿ ಹೇಳುತ್ತ ಅವಳ ಗಟ್ಟಿಯಾದ ವ್ಯಕ್ತಿತ್ವದ ಚಿತ್ರಣ ಕೊಡುವ ಕತೆ ಗತಕಾಲದಲ್ಲೇ ಕೊನೆಗೊಳ್ಳುತ್ತಿತ್ತು. ಕತೆ ಓದಿದ ಮೇಲೆ ಬಹಳ ಒಳ್ಳೆ ಕತೆ ಅನಿಸಿದರೂ ಅದು ಗತಕಾಲದಲ್ಲೇ ಕೊನೆಗೊಳ್ಳದೆ ಮತ್ತೆ ವರ್ತಮಾನಕ್ಕೆ ಬಂದು ಮುಗಿದರೆ ಒಳ್ಳೆಯದಲ್ಲವೇ ಅಂತ ಅನಿಸಿತು. ಅದೇ ಅನಿಸಿಕೆಯನ್ನು ಇತರ ಸಂಪಾದಕರಲ್ಲೂ ಹಂಚಿಕೊಂಡಾಗ ಅವರೂ ಆಗಬಹುದೆಂದರು. ಆ ಕತೆಯ ಕತೆಗಾರ್ತಿಗೂ ಅದು ಒಪ್ಪಿಗೆಯಾಗಿ ಅವರು ಕತೆಯ ಅಂತ್ಯ ವರ್ತಮಾನದಲ್ಲೇ ಆಗುವಂತೆ ಬದಲಾಯಿಸಿ ಕಳಿಸಿದರು, ಅದೇ ಸ್ವರ್ಣಸೇತುವಿನಲ್ಲಿ ಪ್ರಕಟವೂ ಆಯಿತು. ಎಲ್ಲರೂ ಅದನ್ನು ಒಪ್ಪಿಕೊಂಡದ್ದು ನನಗೆ ಬಹಳ ಖುಷಿ ಕೊಟ್ಟಿತ್ತು, ಏನನ್ನೋ ಸಾಧಿಸಿದ ಭಾವನೆಯನ್ನೂ ಕೊಟ್ಟಿತ್ತು.

ಆ ಭಾವನೇ ಹಾಗೆ ಉಳಿದುಬಿಡುತ್ತಿತ್ತು, ಶ್ರೀನಿವಾಸ ವೈದ್ಯರ ‘ಅಗ್ನಿಕಾರ್ಯ’ ದ ಮಾಯಕ್ಕನ ಕತೆಯನ್ನು ಓದಿರದೇ ಇದ್ದರೆ! ರೈಲ್ವೇ ರಿಸರ್ವೇಶನ್ ಕೌಂಟರಿನ ಸಾಲಿನಲ್ಲಿ ಸಿಡುಕು ಗಂಡನೊಡನೆ ಕುಳಿತಿದ್ದ ಸೌಮ್ಯ ಹೆಣ್ಣುಮಗಳನ್ನು ಕಂಡಾಗ ಕತೆಗಾರನಿಗೆ ತನ್ನ ಮಾಯಕ್ಕನ ನೆನಪಾಗುತ್ತದೆ. ಮಾಯಕ್ಕನ ನೆನಪಿನಲ್ಲಿ ಹಿಂದೆ ಹೋದ ಕತೆಗಾರ ಮತ್ತೆ ರಿಸರ್ವೇಶನ್ ಕೌಂಟರಿನ ಸಾಲಿಗೆ ಮರಳಿದಾಗ ಆ ಹೆಣ್ಣುಮಗಳು ಮಾಯಕ್ಕಳೇ ಆಗುತ್ತಾಳೆ. ಅವಳ ಗಂಡ ಹಿಟ್ಲರನಂತೆ ಕಾಣುತ್ತಾನೆ. ಆ ಹಿಟ್ಲರನನ್ನ, ಅವನ ಸಿಡುಕನ್ನ, ಅವನೊಡನೆ ಇವಳು ನಡೆದುಕೊಳ್ಳುವ ಪರಿಯನ್ನೂ ನೋಡುವ ಕತೆಗಾರ ಈ ಮಾಯಕ್ಕನ ಈ ಕ್ಷಣದ ಘಟನೆಗಳ ಜೊತೆ ಜೊತೆಯಲ್ಲಿ ತನ್ನ ಮಾಯಕ್ಕನ ಬದುಕಿನ ಘಟನೆಗಳನ್ನೂ ಕಾಣತೊಡಗುತ್ತಾನೆ. ಬಹಳ ಸಲೀಸಾಗಿ ಅಂದಿಗೆ ಇಂದಿಗೆ ಹೋಗುತ್ತಾ, ಬರುತ್ತಾ ಭೂತಕಾಲದ ಕತೆ ಇಲ್ಲೆ ಮತ್ತೊಮ್ಮೆ ನಡೆಯುತ್ತಿದೇನೋ ಅನಿಸುವಂತೆ ಹೇಳುತ್ತಾನೆ. ಕತೆಯ ಕೊನೆಯಲ್ಲಿ ಭೂತಕಾಲದಿಂದ ವರ್ತಮಾನಕ್ಕೆ ಮರಳದೆ ಓದುಗರನ್ನ ನಿರ್ದಾಕ್ಷಿಣ್ಯವಾಗಿ ಅಲ್ಲೇ ಬಿಟ್ಟು ಬಿಡುತ್ತಾನೆ (ಅಥವಾ ತಾನೇ ಅಲ್ಲೇ ಉಳಿದು ಬಿಡುತ್ತಾನೆ ಎಂದರೆ ಹೆಚ್ಚು ಸಮಂಜಸವೇನೋ!). ನಿಜವಾಗಿಯೂ ಅದ್ಭುತ ನಿರೂಪಣೆ ಶ್ರೀನಿವಾಸ ವೈದ್ಯರದ್ದು. ಅದನ್ನು ಓದುತ್ತಿದ್ದಂತೆಯೇ ಸ್ವರ್ಣಸೇತುವಿನ ಕತೆಯ ಕೊನೆಯ ಬಗ್ಗೆ ತಪ್ಪು ಮಾಡಿಬಿಟ್ಟೆ ಅನಿಸಿಬಿಟ್ಟಿತು. ಆ ಕತೆಯೂ ವರ್ತಮಾನಕ್ಕೆ ಬರದೇ ಭೂತಕಾಲದಲ್ಲೇ ಮುಗಿಯುವದೇ ಸರಿಯಾಗಿತ್ತು ಅನಿಸಿಬಿಟ್ಟಿತು. ಕತೆಗಾರ್ತಿಯಾದರೂ ಕತೆಯನ್ನು ಹೇಳುತ್ತ ತಾವೂ ಅಲ್ಲೇ ನಿಂತುಬಿಟ್ಟಿದ್ದರೇನೋ, ಅದೇ ಕಾರಣಕ್ಕೇ ಕತೆಯ ಅಂತ್ಯ ಅಲ್ಲಿಗೇ ಆಗುವದೇ ಸರಿ ಅನಿಸಿತು.

ಅನಿಸಿದ್ದನ್ನ ಬರೆದು ಕಳುಹಿಸಬೇಕು, ಬ್ಲಾಗಿನಲ್ಲಾದರೂ ಹಾಕಬೇಕು ಎನ್ನುವ ಹಂಬಲ ಹಲವು ದಿವಸಗಳಿಂದ ಮನದಲ್ಲಿದ್ದರೂ ಮಾಡಲಾಗಿರಲಿಲ್ಲ, ಹೆಚ್ಚು ಕಡಿಮೆ ಮರೆತೇ ಹೋಗಿತ್ತು. ಪೂರ್ಣಿಮಾ ರಾಮಪ್ರಸಾದರ “ಅಕ್ಟೋಬರ್ ೧೦” ಕಥಾ ಸಂಕಲನದಲ್ಲಿ ಅವರ ಮುನ್ನುಡಿಯನ್ನು ಓದುವಾಗ ಇದೆಲ್ಲ ಮತ್ತೆ ನೆನಪಾಯಿತು. ೨೦೦೫ ಸಂಪಾದಕ ಸಮೀತಿಯಲ್ಲಿ ಜೊತೆಯಲ್ಲಿ ಕೆಲಸ ಮಾಡಿದ್ದೆವು. ‘ನೀವೇ ಲೇಖನಗಳನ್ನು ಬರೆಯದೆ ಇನ್ನೊಬ್ಬರ ಲೇಖನವನ್ನು ಹೇಗೆ ತಿದ್ದುವಿರಿ?’ ಎಂದು ಹರಿಹರೇಶ್ವರರು ಕೇಳಿದ್ದು ಇನ್ನೂ ನೆನಪಿನಲ್ಲಿದೆ. ಪೂರ್ಣಿಮಾ ಅವರು ಕತೆ ಬರೆಯಲು ಆರಂಭಿಸಿದ್ದು ಆವಾಗಲೇ ಎಂದು ಇಲ್ಲಿಯವರೆಗೂ ಗೊತ್ತಿರಲಿಲ್ಲ. ಅಂದಿನ ಸ್ವರ್ಣಸೇತು ಸಂಚಿಕೆಯಲ್ಲೇ ಅವರ ಎರಡು ಸೊಗಸಾದ ಕತೆಗಳಿದ್ದವು. ಓದುಗರೇ ಪೂರ್ಣ ಮಾಡಲಿ ಎಂದು ಅವರು ಕೊಟ್ಟ ಒಂದು ಅಪೂರ್ಣ ಕತೆಯೂ ಒಂದಾಗಿತ್ತು ಅದರಲ್ಲಿ. ಆ ಕತೆಗೆ ಸೊಗಸಾದ ಅಂತ್ಯಗಳೂ ಬಂದಿದ್ದವು. ಅದೇ ದಿನಗಳಲ್ಲೇ ಅವರು ಬರೆದ ಭೂತದ ಕತೆಯನ್ನು thatskannada.com ನಲ್ಲಿ ಓದಿದ ನೆನಪು. ಅಲ್ಲಿಂದ ಆರಂಭಿಸಿ ಪೂರ್ಣಿಮಾ ಅವರು ಇವತ್ತು ಕಥಾಸಂಕಲನವನ್ನು ಹೊರತಂದಿದ್ದು ನೋಡಿ ಖುಷಿಯಾಯಿತು. ಅಕ್ಟೋಬರ್ ೧೦ ಸಂಕಲನದಲ್ಲಿನ ಹಲವಾರು ಕತೆಗಳನ್ನು ಮೊದಲೇ ಓದಿದ್ದರೂ, ಮತ್ತೊಮ್ಮೆ ಒಂದೇ ಕಡೆ ಓದಿದ್ದು, ಅವುಗಳಲ್ಲೆಲ್ಲ ಪೋಣಿಸಿಕೊಂಡಿರುವ ಮನೋವೈಜ್ಞಾನಿಕ ವಿಚಾರಧಾರೆ, ಜೀವನಪ್ರೀತಿ ಸಂತೋಷ ಕೊಟ್ಟಿತು. ಮುನ್ನುಡಿಯಲ್ಲಿ ಅವರೇ ಹೇಳಿಕೊಳ್ಳುವಂತೆ ಕತೆಗಳು ಆಶಾಭಾವನೆಯ ಕಡೆಯೇ ವಾಲುತ್ತವೆ. ಜೀವನದಲ್ಲಿ ಸೋಲು ಎನ್ನುವದೊಂದು ಇದೆ ಎನ್ನುವದನ್ನು ಒಪ್ಪಲು ತಾವು ಸಿದ್ಧರಿಲ್ಲದ್ದರಿಂದ ಅದು ಹಾಗಾಗಿರಬಹುದು ಎನ್ನುತ್ತಾರೆ. ಅದು ಅವರ attitude ಅನ್ನ ತೋರಿಸುತ್ತದೆ. ಕಷ್ಟಗಳು ಬಂದಾಗ ಅವುಗಳನ್ನು ಎದುರಿಸಲು ಸರಿಯಾದ attitude ಬಹಳ ಮುಖ್ಯ ಎನ್ನುವದನ್ನೇ ಅವರ ಕತೆಗಳ ಪಾತ್ರಗಳೂ ತೋರಿಸುತ್ತವೆ.

ಮಂದಾರ ಪುಸ್ತಕ ಪ್ರಕಟಿಸಿದ ಅಕ್ಟೋಬರ್ ೧೦ ಕಥಾಸಂಕಲನದ ಮುದ್ರಣವೂ ಅಚ್ಚುಕಟ್ಟಾಗಿ ಬಂದಿದೆ. ಯಾಕೊ ಮುದ್ರಾರಾಕ್ಷಸ ಒಂದಷ್ಟು ಕಡೆ ಕೈಯಾಡಿಸಿದ್ದಾನೆ, ಅಕ್ಟೋಬರ್ ೧೦ ಕತೆಯಲ್ಲಿ ಬರುವ ಮನೋವೈಜ್ಞಾನಿಕ ಸ್ಥಿತಿಯ ವೈದ್ಯಕೀಯ ಹೆಸರನ್ನೇ ಮುದ್ರಾರಾಕ್ಷಸ ತಿಂದುಬಿಟ್ಟಿದ್ದಾನೆ ಎನ್ನುವದೊಂದು ಸ್ವಲ್ಪ ದೊಡ್ಡದಾಗಿ ಕಾಣಿಸಿತು. ಮಂಸೋರೆ ಅವರ ಚಿತ್ರಗಳು ಸೊಗಸಾಗಿವೆ, ಕತೆಗಳಿಗೆ ಪೂರಕವಾಗಿವೆ. ಇನ್ನಷ್ಟು ಕತೆಗಳು ಬರಲಿ ಪೂರ್ಣಿಮಾ ಅವರಿಂದ.

(ಇದನ್ನು ಬರೆದಿಟ್ಟು ೨-೩ ವಾರವೇ ಆಯಿತು. ಫೋಟೋಗಳನ್ನೂ ಹಾಕಬೇಕು ಅಂತ ಪೋಸ್ಟ್ ಮಾಡಿರಲಿಲ್ಲ. ಅಂತೂ ಅಕ್ಟೋಬರ್ ೧೦ಕ್ಕೇ ಪೋಸ್ಟ್ ಮಾಡಿದ್ದಾಯ್ತು!)

(ಶ್ರೀನಿವಾಸ ವೈದ್ಯರ ‘ಅಗ್ನಿಕಾರ್ಯ’ದ ಬಗ್ಗೆ ಓದುವ ಹವ್ಯಾಸದಲ್ಲೊಂದು ಒಳ್ಳೆ ಲೇಖನವಿದೆ. ನನ್ನ ಬರಹಕ್ಕೆ ಅಗ್ನಿಕಾರ್ಯದ ಚಿತ್ರವನ್ನೂ ಅಲ್ಲಿಂದಲೇ ಎರವಲು ಪಡೆದಿರುವೆ. ಚಿತ್ರಕ್ಕಾಗಿ ನರೇಂದ್ರ ಪೈ ಅವರಿಗೆ ಧನ್ಯವಾದಗಳು)

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s