ಹೀಗೊಂದು ರವಿವಾರದ ಮಾತು

ಸುಮತೀಂದ್ರ ನಾಡಿಗರ ’ಒಂದು ಹೊಡ್ತ ಎರಡು ತುಂಡು’ ತರಹದ ನೇರ ಮಾತು, ಭುವನೇಶ್ವರಿ ಹೆಗಡೆಯವರ ನಗೆಗಡಲ ಅಲೆಯುಕ್ಕಿಸಿದ ಮಾತು (ನಗು ನಗುತ್ತಲೇ ಏಕಾಂತ ಮತ್ತು ಏಕಾಂಗಿತನದ ಎಳೆ ಬಿಡಿಸಿಟ್ಟದ್ದೂ ಹೌದು), ಬರವಣಿಗೆಯಲ್ಲಿ ಪ್ರಾದೇಶಿಕ ಕನ್ನಡದ ಬಳಕೆಯ ಕುರಿತು ಒಂದು ಛೊಲೋ ಪ್ರಬಂಧವನ್ನ ಭಡ ಭಡ ಓದಿದರೂ ಅದರಲ್ಲಿ ಬಳಸಿದ ಪ್ರಾದೇಶಿಕ ಕನ್ನಡವನ್ನ ಆಯಾ ಊರಿನವರಂತೆಯೇ ನುಡಿದ ಶಾಂತಲಾ ಭಂಡಿಯವರ ಮಾತು, ಕನ್ನಡ ನಾಡಿನಿಂದ ದೂರ ಬೆಳೆಯುವ ಕನ್ನಡದ ಮಕ್ಕಳ ಮಕ್ಕಳ ಮನದಲ್ಲಿ, ಬಾಯಲ್ಲಿ ಕನ್ನಡಕ್ಕೂ ಒಂಚೂರು ಜಾಗ ದೊರಕಿಸಿಕೊಡುವದು ಹೇಗೆ ಎನ್ನುವದನ್ನ ಬಿಡಿಸಿಟ್ಟ ಮೀರಾ ಅವರ ಮಾತು, ಅದೇ ಮೀರಾ ಅವರು ಸಂಪಾದಿಸಿದ ’ಗುಬ್ಬಿ ಗೂಡು’ ಪುಸ್ತಕ ಅವೇ ಹೊರನಾಡ ಕನ್ನಡಿಗರ ಮಕ್ಕಳನ್ನು ಕನ್ನಡ ಓದಿನ ಕಡೆಗೆ ಹೇಗೆ ಸೆಳೆಯಬಲ್ಲದು ಎಂದು ಹೇಳಿದ ಡಾ. ಗುರುಪ್ರಸಾದ್ ಕಾಗಿನೆಲೆಯವರ ಮಾತು, ’ಕನ್ನಡ ಕಲಿ’ ಮಕ್ಕಳ ಆಕರ್ಷಕ ಕಾರ್ಯಕ್ರಮಗಳು, ಹಾಗೂ ಗೆಳೆಯರೊಂದಿಗೆ ಕುಳಿತು ಹೋಳಿಗೆ ಊಟದೊಡನೆ ಹರಟಿದ ನಮ್ಮದೇ ಮಾತು, ಕನ್ನಡ ಸಾಹಿತ್ಯ ರಂಗದ ವಸಂತ ಸಾಹಿತ್ಯೋತ್ಸವದಲ್ಲಿ ಕಳೆದ ಆದಿತ್ಯವಾರದ ಮಾತಿದು!

ಮುಂಚೆ ಎಲ್ಲೋ ಭೆಟ್ಟಿಯಾಗಿದ್ದೇವೆಲ್ಲವೇ ಎನ್ನುತ್ತ ಮಾತನಾಡಿಸಿದ ಮೈಶ್ರೀ ನಟರಾಜರೊಡನೆ, ಸಾಹಿತ್ಯ ಗೋಷ್ಠಿಯಲ್ಲಿ ಭೆಟ್ಟಿಯಾಗಿದ್ದ ಎಮ್ ಆರ್ ದತ್ತಾತ್ರಿ ಅವರೊಡನೆ, ಹಾಗೇ ಶ್ರೀವತ್ಸ ಜೋಷಿ ಅವರೊಡನೆ ಒಂದಷ್ಟು ಮಾತು, ಗುರುಪ್ರಸಾದ ಕಾಗಿನೆಲೆಯವರೊಡನೆ ’ಬಿಳಿಯ ಚಾದರ’ ಪುಸ್ತಕದ ಕುರಿತೊಂದೆರಡು ಮಾತು, ಹಾಗೇ ಅವರ ಬಿಳಿಯ ಚಾದರ ಹಾಗೂ ಶಕುತಂಳಾ ನನಗಿಲ್ಲಿ ಸ್ಯಾನ್ ಹೋಸೆ ಲೈಬ್ರರಿಯಲ್ಲಿ ಸಿಕ್ಕಿದ್ದವು ಎಂದು ಹೇಳಿದಾಗ ಅವರಿಗಾದ ಆಶ್ಚರ್ಯ, ತುಳಸೀವನದ ತ್ರಿವೇಣಿಯವರ ಭೆಟ್ಟಿ ಹಾಗೂ ಅವರು ಭಕ್ರಿಯ ಬಗೆಗಿನ ನನ್ನ ಹಳೇ ಬ್ಲಾಗ್ ಬರಹವನ್ನ ನೆನಪಿಸಿಕೊಂಡದ್ದು, ಊಟದ ಹೊತ್ತಿನಲ್ಲಿ ವಾಕ್ಪಟುಗಳ ಬಗ್ಗೆ, ಸಾಹಿತ್ಯ ಗೋಷ್ಠಿಯ ಬಗ್ಗೆ ಒಂದಷ್ಟು ಮಾತು, ಬಹಳ ದಿನಗಳ ಮೇಲೆ ಭೆಟ್ಟಿಯಾದ ಮಿತ್ರರೊಡನೆ ಒಂದಷ್ಟು ಉಭಯ ಕುಶಲೋಪರಿ.

ಭುವನೇಶ್ವರಿ ಹೆಗಡೆ ಅವರ ಸಹಜ, ಸರಳ ಮಾತು ಇಷ್ಟವಾಯಿತು. ಇಲ್ಲಿಯವರೆಗೆ ಅವರ ಸಾಹಿತ್ಯವನ್ನು ಹೆಚ್ಚಾಗಿ ಓದಿಲ್ಲ. “ನಿಮ್ಮ ಲೇಖನಗಳನ್ನು ಓದಿಲ್ಲ, ಆದರೆ ನಿಮ್ಮ ಮಾತು ಕೇಳಿ ಓದಬೇಕು ಅನಿಸಿದ್ದರಿಂದ ಈ ಪುಸ್ತಕ ಕೊಂಡೆ (ಬೆಸ್ಟ್ ಆಫ್ ಭುವನೇಶ್ವರಿ ಹೆಗಡೆ) ಇದರಲ್ಲಿ ನಿಮ್ಮ ಹಸ್ತಾಕ್ಷರ ಬೇಕು” ಎಂದು ಅವರಿಗೆ ಹೇಳುವಾಗ ಒಂದಷ್ಟು ಮುಜುಗರವಾಯ್ತು. ಆದರೆ ಅವರು ಪ್ರೀತಿಯಿಂದ ಹಸ್ತಾಕ್ಷರ ಹಾಕಿ ಕೊಟ್ಟರು :).

’ಕ್ಯಾ ಕಹೂ ಕೆ ಶರ್ಮ್ ಸೆ ಹೈ ಲಬ್ ಸಿಲೇ ಹುವೆ’ ಅನ್ನುವಲ್ಲಿ ಹಿನ್ನೆಲೆ ಸಂಗೀತವೇ ಇಲ್ಲದೇ ಬರೀ ಅಲ್ಲಿರುವ ಹಾಡು ಕೊಡುವ ಪರಿಣಾಮ, ಅದೇ ರೀತಿ ’ದೇಖೊ ಜೀ ತುಮ್ಹಾರೆ ಯಹಿ ಬತಿಯಾ ಮನಕೋ ಹೈ ತರಸಾತೀ’ ಎನ್ನುವಲ್ಲಿಯೂ ಉಂಟಾಗುವ ಅದೇ ರೀತಿಯ ಪರಿಣಾಮ ಯಾಕೊ ಒಂದೆರಡು ದಿವಸಗಳಿಂದ ಮನಸ್ಸಿನಲ್ಲಿ ಬರುತ್ತಿದ್ದವು. ಸುಮತೀಂದ್ರ ನಾಡಿಗರ ’ಮೂರು ಸಾಹಿತ್ಯ ಚರಿತ್ರೆ’ಗಳು ಪುಸ್ತಕವನ್ನ ಮನೆಗೆ ತಂದು ಅದರ ಪರಿವಿಡಿ ಕಣ್ಣು ಹಾಯಿಸಿದಾಗ ಕಂಡ ’ಎಸ್. ಆರ್. ಎಕ್ಕುಂಡಿ’ ಲೇಖನವನ್ನು ಮೊದಲು ಓದಲು ತೊಡಗಿದಾಗ ಅದರಲ್ಲಿನ ಸಾಲು, ’ಎಲ್ಲಿ ಮಾತುಗಳು ಕೇಳಬೇಕೋ ಅಲ್ಲಿ ಗುರುರಾಜ ಮಾರ್ಪಳ್ಳಿ ವಾದ್ಯಗಳನ್ನು ತೆಪ್ಪಗಿರಿಸಿ, ಕವಿತೆಯ ಸಾಲುಗಳನ್ನು ಉಚ್ಚರಿಸುತ್ತಿದ್ದರು’ ಓದಿದಾಗ ಎಲ್ಲಿಂದೆಲ್ಲಿಗೆ ಚುಕ್ಕಿಗಳ ಜೋಡಣೆ ಅನಿಸಿದ್ದು ಸುಳ್ಳಲ್ಲ. ಮೂರು ಸಾಹಿತ್ಯ ಚರಿತ್ರೆಗಳು ಕೈಯಲ್ಲಿ ಹಿಡಿದುಕೊಂಡು ಸುಮತೀಂದ್ರ ನಾಡಿಗರ ಹಸ್ತಾಕ್ಷರ ಕೇಳಲಿಕ್ಕೆ ಹೋದಾಗ ಅದರಲ್ಲಿನ ಅನಂತ ಮೂರ್ತಿಯವರ ’ದಿವ್ಯ’ದ ಬಗೆಗಿನ ಲೇಖನವನ್ನು ವಿಶೇಷವಾಗಿ ಅವರು ಉಲ್ಲೇಖಿಸಿದ್ದು ಯಾಕೋ ತಿಳಿಯಲಿಲ್ಲ. ಸುಮತೀಂದ್ರ ನಾಡಿಗರನ್ನೂ ನಾನು ಓದಿಕೊಂಡಿಲ್ಲ, ನಿಜ ಹೇಳಬೇಕೆಂದರೆ ಅವರ ಕುರಿತು ಹೆಚ್ಚಾಗಿ ಕೇಳಿದ್ದು ’ಆವರಣ’ದ ವಿವಾದದ ದಿನಗಳಲ್ಲಿ. ಹೀಗಾಗೀ ’ದಿವ್ಯ’ದ ಉಲ್ಲೇಖದಲ್ಲೂ ಕನೆಕ್ಟ್ ಮಾಡಲೊಂದು ಡಾಟಿತ್ತೆ ಎನ್ನುವ ಅನುಮಾನ ಉಳಿದಿದೆ. ಕಡೆಯದಾಗಿ ನಾಡಗೀತೆಯು ನುಡಿಯುತ್ತಿದ್ದಂತೆ ಕೈ ತಾಳ ಹಾಕುತ್ತಿತ್ತು, ಬಾಯಿ ನುಡಿಯುತ್ತಿತ್ತು ಆದರೆ ತಲೆಯಲ್ಲಿ ನಾಡಗೀತೆಯ ವಿವಾದ ಇಣುಕುತ್ತಿತ್ತು. ಇವತ್ತು ಎಲ್ಲೋ ಓದಿದೆ ನಾಡಗೀತೆಯ ಬಗ್ಗೆ ಪಾಪು ಏನೋ ಇನ್ನೊಂದು ಹೇಳಿಕೆ ಕೊಟ್ಟಿದ್ದಾರೆ. ಹ್ಮ್.. ಕಾಕತಾಳಿಯಗಳ ಕಂತೆ 🙂

ಸುಮತೀಂದ್ರ ನಾಡಿಗರ ಹಾಗೂ ಭುವನೇಶ್ವರಿ ಹೆಗಡೆ ಅವರ ಪುಸ್ತಕಗಳ ಮೇಲೆ ಅವರವರ ಸಹಿ ಪಡೆದಂತೆ ದತ್ತಾತ್ರಿ ಮತ್ತು ಗುರುಪ್ರಸಾದರ ಸಹಿ ಯಾಕೆ ಪಡೆಯಲಿಲ್ಲ ಎನ್ನುವ ಮನದ ಮಾತು ಮಾತ್ರ ಕಾಡಿತು. ಮನಸ್ಸಿನ ವ್ಯಾಪಾರ, ಅರಿವಿಲ್ಲದೇ ನಡೆಯುತ್ತದೆ, ಅವಲೋಕಿಸಿದಾಗ ಆಶ್ಚರ್ಯಪಡಿಸುತ್ತದೆ, ಪಾಠ ಕಲಿಸುತ್ತದೆ.

ಇರಲಿ, ಈಗ ಓದಲಿಕ್ಕೊಂದಷ್ಟು ಹೊಸ ಪುಸ್ತಕಗಳು ಸಿಕ್ಕಿವೆ, ನಿಧಾನವಾಗಿ ಸಮಯ ಮಾಡಿಕೊಂಡು ಓದಬೇಕು.

(ಚಿತ್ರಗಳು: ನನ್ನ ಕಾಪ್ಟಿವೇಟಿನಲ್ಲಿ ನಾನೇ ತೆಗೆದವು)

Advertisements

One thought on “ಹೀಗೊಂದು ರವಿವಾರದ ಮಾತು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s