ಯೋಚನೆ

ಮೊನ್ನೆ ರಾತ್ರಿ ಮಲಗೋ ಮುಂಚೆ ನನ್ನ ಮತ್ತು ನನ್ನ ಮಗನ ಸಂಭಾಷಣೆ. ಯೋಚನೆ ಮಾಡೊದು ಅಂದ್ರೆ ಏನು ಅಂತ ಇನ್ನೇನು ಮೂರು ಮುಟ್ಟುತ್ತಿರುವ ನನ್ನ ಮಗನಿಗೆ ಗೊತ್ತಿದೆ, ಅದರ ಬಗ್ಗೆ ಅವ ಮಾತೂ ಆಡಬಲ್ಲ ಅಂತ ನನಗೆ ಗೊತ್ತಿರ್ಲಿಲ್ಲ ಇದಕ್ಕಿಂತ ಮೊದಲು!

ಅಪ್ಪ ಕೃಷ್ಣ ಕಥಿ ಹೇಳು ನನಗ.

ಕೃಷ್ಣ, ಸತ್ಯಭಾಮ ಇಬ್ಬರು ತಮ್ಮ ತ್ವಾಟದಾಗ ಅಡ್ಡಾಡ್ಲಿಕತ್ತಿದ್ದರಂತ.

….

ಅಲ್ಲಿ ಬೆಳದಿದ್ದ ಹೂವು, ಹಣ್ಣು, ಗಿಡ ಎಲ್ಲ ನೋಡಿಕೋತ ಅಡ್ಡಾಡ್ಲಿಕತ್ತಿದ್ರು. ಅವಾಗ ಸತ್ಯಭಾಮಾಗ ಯಾವದೋ ಒಂದು ಛೊಲೋ ವಾಸನಿ ಬಂತಂತ.

….

ಅಕಿ ಕೃಷ್ಣಗ ಹೇಳಿದ್ಲಂತ, “ಕೃಷ್ಣ ಇದು ಯಾವ ವಾಸನಿ? ಎಷ್ಟು ಛೊಲೊ ಅದಲ. ಯಾವದರೆ ಹೂವಿಂದೇನು? ನಮ್ಮ ತ್ವಾಟದಾಗಿನ ಹೂವಿನ ವಾಸನಿ ಇದ್ಧಂಗಿಲ್ಲ ಆದರ.” ಕೃಷ್ಣ ಹೇಳಿದ್ನಂತ, “ಸತ್ಯಭಾಮ, ಇದು ಪಾರಿಜಾತ ಹೂವಿನ ವಾಸನಿ. ಅವು ಸ್ವರ್ಗದಾಗ ಇಂದ್ರನ ತ್ವಾಟದಾಗ ಇರ್ತಾವ. ಅದು ಹೆಂಗೋ ಇವತ್ತ ಇಲ್ಲಿ ನಮಗ ಅದರ ವಾಸನಿ ಬರ್ಲಿಕತ್ತದ.”

….

ಕೃಷ್ಣ ನನಗ ಪಾರಿಜಾತ ಹೂವು ಬೇಕು. ಆ ಹೂವಿನ ಗಿಡ ತಂದು ಇಲ್ಲೆ ನಮ್ಮ ತ್ವಾಟದಾಗ ಹಾಕಣ? ಹೆಂಗಿದ್ರು ಇಂದ್ರ ನಿನಗ ಗೂತ್ತಿದ್ದಾನ, ಹೋಗಿ ತೊಗೊಂಡು ಬರಣ ನಡಿ.

….

ಅದು ಸ್ವರ್ಗ ಲೋಕದೊಳಗಿನ ಗಿಡ. ಇಂದ್ರ ಕೊಡ್ತಾನೋ ಇಲ್ಲೋ.

….

ಊ.. ನನಗ ಬೇಕು. ನಾವು ಹೋಗಿ ತೊಗೊಂಡು ಬರೋಣ ನಡಿ.

….

ಆಯ್ತು ಹಂಗಾರ, ನಡೀ ಹೋಗಣ. ಹೋಗಿ ಆ ಹೂವಿನ ಗಿಡ ತೊಂಗೊಂಡು ಬರೋಣ ಇಂದ್ರನ ಕಡಿಂದ. ಯಾವ ಹೂವಿನ ಗಿಡ ಅದು ಪುಟ್ಟಿ?

ಅಪ್ಪ ನೀನೇ ಹೇಳು

ಯಾಕ ಪುಟ್ಟಿ ಇಷ್ಟೊತ್ತನಕ ಕಥಿ ಕೇಳಲಿಕತ್ತಿದ್ದಿಲ್ಲ?

ಇಲ್ಲ, ಕೇಳಲಿಕತ್ತಿದ್ದಿಲ್ಲ

ಯಾಕ? ಏನರ ಯೋಚನೆ ಮಾಡ್ಲಿಕತ್ತಿದ್ದೇನು?

ಹು, ಮಾಡ್ಲಿಕತ್ತಿದ್ದೆ!

ಏನು ಯೋಚನೆ ಮಾಡ್ಲಿಕತ್ತಿದ್ದಿ?

ರೆಡ್ ಕಾರು ಟ್ರಕ್ ಮುಂದ ಆಕ್ಸಿಡೆಂಟ್ ಆಗಿ ಹೆಂಗ ನಿಂತಿತ್ತು ಅಂತ ಯೋಚನೆ ಮಾಡ್ಲಿಕತ್ತಿದ್ದೆ.

 

ಅವತ್ತು ರಾತ್ರಿ ಕೃಷ್ಣ ಕತೆ ಕೇಳಿದವನಿಗೆ ಪಾರಿಜಾತ ಹೂವಿನ ಕತೆ ಹೇಳ ಹೊರಟಿದ್ದೆ. ಮೂಲ ಕತೆಯ ಅಸ್ಪಷ್ಟ ಎಳೆಯಷ್ಟೆ ನನಗೆ ನೆನಪಿರುವದು. ಸರಿಯೋ ತಪ್ಪೋ ಅದನ್ನೆ ಆ ಕಡೆ ಈ ಕಡೆ ಎಳೆದು ಹೇಳುತ್ತಿದ್ದೆ. ಮಧ್ಯೆ ಯಾಕೋ ಅವನ ಲಕ್ಷ್ಯ ಕತೆಯ ಕಡೆ ಇಲ್ಲ ಅನಿಸಿದಾಗ ಯಾವ ಹೂವು ಪುಟ್ಟಿ ಅಂತ ಪ್ರಶ್ನೆ ಕೇಳಿದೆ. ಆಗ ತಾನು ಅಲ್ಲೀ ತನಕ ಕತೇ ಕೇಳಲೇ ಇಲ್ಲ ಅನ್ನೋದನ್ನ ಹೇಳಿದ್ದಲ್ದೇ ತಾನೇನು ಯೋಚನೆ ಮಾಡ್ತಿದ್ದ ಅನ್ನೋದನ್ನೂ ಹೇಳಿದ್ದನ್ನ ಕೇಳಿದಾಗ ಆಶ್ಚರ್ಯ ಆಯ್ತು. ಅವತ್ತು ಮಲಗೋ ಮುಂಚೆ ಒಂದು ಟ್ರಕ್ ಡ್ರೈವರುಗಳ ಕತೆ ಪುಸ್ತಕ ಓದಿದ್ದೆ. ಅದರಲ್ಲಿ ಒಂದು ಕೆಂಪು ಕಾರು ಆಕ್ಸಿಡೆಂಟ್ ಆಗಿ ನಿಂತಿದ್ದ ಚಿತ್ರ ಇತ್ತು. ಇವನು ಅದೇ ಗುಂಗಿನಲ್ಲಿ ಇದ್ದೂ ಇದ್ದದ್ದೇನೂ ಆಶ್ಚರ್ಯ ಅಲ್ಲ. ಆದರೆ ಯೋಚನೆ ಮಾಡ್ತಿದ್ದೀಯಾ ಅಂದಾಗ ತನ್ನ ತಲೆಯಲ್ಲಿ ಏನು ಯೋಚಿಸ್ತಿದ್ದ ಅನ್ನೋದನ್ನ ಸ್ಪಷ್ಟವಾಗಿ ಹೇಳಿದ್ದು ಕೇಳಿ ಆಶ್ಚರ್ಯ ಆಯ್ತು.

Advertisements

One thought on “ಯೋಚನೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s