ಆ ಕ್ಷಣದಲ್ಲಿ ಹಾರಿ ಹೋದಂತೆ

ಹ್ಯಾಂಗೆ ಬರೆದಿತ್ತೋ ಪ್ರಾಚೀನದಲ್ಲಿ
ಹಾಂಗೆ ಇರಬೇಕು ಸಂಸಾರದಲ್ಲಿ

ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ
ಆ ಕ್ಷಣದಲ್ಲಿ ಹಾರಿ ಹೋದಂತೆ

ನಾನಾ ಪರಿಯಲ್ಲಿ ಸಂತೆ ನೆರೆದಂತೆ
ನಾನಾ ಪಂಥವ ಹಿಡಿದು ಹೋದಂತೆ

ಮಕ್ಕಳಾಡಿ ಮನೆ ಕಟ್ಟಿದಂತೆ
ಆಟ ಸಾಕೆಂದು ಅಳಿಸಿ ಪೋದಂತೆ

ವಸತಿಕಾರನು ವಸತಿ ಕಂಡಂತೆ
ಹೊತ್ತಾರೆ ಎದ್ದು ಹೊರಟು ಹೋದಂತೆ

ಸಂಸಾರ ಪಾಶವ ನೀ ಬಿಡಿಸಯ್ಯ
ಕಂಸಾರಿ ಪುರಂದರವಿಠ್ಠಲರಾಯ

ಪುರಂದರದಾಸರ ಈ ಪದವನ್ನ ವಿದ್ಯಾಭೂಷಣರ ಹಾಡುಗಾರಿಕೆಯಲ್ಲಿ ಮೊದಲ ಸಾರಿ ಕೇಳಿದಾಗಿನಿಂದ ಮನಸ್ಸಿನಲ್ಲಿ ನಿಂತಿದೆ. ಈಗೆರಡು ವಾರಗಳಿಂದ ಮತ್ತೆ ಮತ್ತೆ ನೆನಪಾಗುತ್ತಿದೆ. ಸರಳ ಸುಂದರ ಅನಿಸೋ ಪದ ಹೇಳ್ತಿರೋದಾದರೂ ಏನನ್ನ? ಪ್ರಾಚೀನದಲ್ಲಿ ಅಂದರೆ ಏನು? ವೇದೋಪನಿಷತ್ತುಗಳಲ್ಲಿ ಅಥವಾ ಭಾಗವತಾದಿ ಪುರಾಣಗಳಲ್ಲಿ ಹೇಳಿರುವಂತೆ ಎನ್ನುವ ಅರ್ಥವೇ? ಅಥವಾ ಅವರವರ ಹಣೆ ಬರಹದಂತೆ, ಅವರವರ ಕರ್ಮದ ಕಟ್ಟಿನಂತೆ ಎಂಬರ್ಥವೆ?

’ಈಸಬೇಕು ಇದ್ದು ಜೈಸಬೇಕು’ ಎಂದ ದಾಸರು ಇರುವ ಬಗೆಯನ್ನ ಮತ್ತು ಹೋಗುವ ಬಗೆಯನ್ನೂ ಹೇಳ್ತಾ ಇದ್ದಾರಲ್ಲವೆ ಇಲ್ಲಿ. ಪಕ್ಷಿ ಅಂಗಳದಲ್ಲಿ ಬಂದು ಕೂತಂತೆ. ಈ ಕ್ಷಣ ಬಂದು ಕುಳಿತ ಪಕ್ಷಿ ಮುಂದಿನ ಕ್ಷಣ ಮತ್ತೆಲ್ಲೋ ಹಾರಿ ಹೋಗೋದು. ಎಲ್ಲಿಂದ ಬಂತು, ಯಾಕೆ ಬಂತು ಗೊತ್ತಿಲ್ಲ. ಎಲ್ಲಿಗೆ ಹೊರಟಿತು ಗೊತ್ತಿಲ್ಲ. ಕ್ಷಣ, ಅಷ್ಟೇ. ಎಲ್ಲಿಂದಲೋ ಬಂದು ಕೂತ ಪಕ್ಷಿ ತಟ್ಟನೆ ಹಾರಿ ಹೋಗಿಬಿಡುತ್ತದೆ, ಯಾವುದರ ಮುಲಾಜು ಇಲ್ಲದೆ. ಬಂದು ಕೂತಿದ್ದರ ಕುರುಹೂ ಇಲ್ಲದಂತೆ ಹಾರಿ ಹೋಗಿಬಿಡುತ್ತದೆ. ಪ್ರಾಣ ಪಕ್ಷಿಯೂ ಅಷ್ಟೇ ಅಲ್ಲವೆ? ’ಅವ್ಯಕ್ತಾದೀನಿ ಭೂತಾನಿ ಅವ್ಯಕ್ತ ನಿಧನಾನ್ಯೇವ.’ ಹುಟ್ಟುವದಕ್ಕೆ ಮೊದಲು, ಸತ್ತ ಮೇಲೆ, ಎರಡೂ ಅವ್ಯಕ್ತವಾದ ಸ್ಥಿತಿಯೇ. ವ್ಯಕ್ತ ಮಧ್ಯವನ್ನ ಹೇಗೆ ನೋಡಬೇಕು ಹಾಗಾದರೆ?

’ನಾನಾ ಪರಿಯಲ್ಲಿ ಸಂತೆ ನೆರೆದಂತೆ’ ಸಂತೆಯಲ್ಲಿ ನಿರಂತರ ಇರುವದಂತೂ ಸಾಧ್ಯವಿಲ್ಲವಷ್ಟೇ? ಒಂದು ಕಾಲ ಘಟ್ಟದಲ್ಲಿ, ಯಾವ್ಯಾವದೋ ಕಾರಣದಿಂದ, ಏನೇನನ್ನೊ ಕೊಡು-ಕೊಳ್ಳುವದಕ್ಕಾಗಿ ಸಂತೆಯಲ್ಲಿ ನೆರೆದ ಜನರಂತೆಯೇ ಅಲ್ಲವೆ ನಾವೆಲ್ಲ ಈ ಜಗತ್ತಿನಲ್ಲಿ ಬಂದು ಹೋಗುವದು? ’ಋಣಾನುಬಂಧ ರೂಪೇಣ ಪಶುಪತ್ನಿಸುತಾಲಯ.’ ಏನನ್ನ ಕಳೆಯಲು ಈಗ ಕೂಡಿರುವದೋ ಬಲ್ಲವರಾರು? ಕಳೆಯುವವರೆಷ್ಟೋ, ಪಡೆಯುವವರೆಷ್ಟೋ. ಕೊನೆಗೊಮ್ಮೆ ತಮ್ಮ ತಮ್ಮ ದಾರಿ ಹಿಡಿಯುವವರೇ ಎಲ್ಲ.

ಸಂತೆಯಿಂದ ಹೊರಟವರು ಕೊಂಡು ಕೊಂಡ ವಸ್ತುವನ್ನ ಅಥವಾ ಗಳಿಸಿದ ಧನವನ್ನಾದರೂ ಕೊಂಡೊಯ್ಯುತ್ತಾರೆ. ಸಂಸಾರ ಸಂತೆಯಿಂದ ಹೊರಡುವದು ಬರಿಗೈಯಲ್ಲೆ! ಹಾಗಿದ್ದರೂ ಇಲ್ಲಿ ಇದ್ದ ಮೇಲೆ ಸುಮ್ಮನೆ ಇರುವವರಲ್ಲ. ಇದ್ದಷ್ಟು ದಿನ ಜೀವನವನ್ನ ಕಟ್ಟುವವರೇ ಎಲ್ಲ. ಹೊರಡುವ ಹೊತ್ತು ಬಂದಾಗ, ಕಟ್ಟಿದ್ದೆಲ್ಲವನ್ನೂ ಇಲ್ಲಿಯೇ ಬಿಟ್ಟು ಹೋಗಬೇಕು. ಮಕ್ಕಳು ಆಟಕ್ಕಾಗಿ ಮನೆ ಕಟ್ಟಿದಂತೆಯೇ ಇದೂ ಕೂಡ. ಮಕ್ಕಳಾಟದ ಮನೆಯನ್ನ ಆಟ ಸಾಕು ಎಂದು ಅವರೇ ಕೆಡಿಸಿ ಹೋಗುತ್ತಾರೆ. ಬದುಕಿನಲ್ಲಿ ಕಟ್ಟಿದ್ದನ್ನೆಲ್ಲ ಸಾವಿನಲ್ಲಿ ಕೆಡವಬೇಕು ಅಂತಲ್ಲ, ಆದರೆ ಬದುಕಿನಲ್ಲಿ ಕಟ್ಟಿಕೊಂಡವರ ಪಾಲಿಗೆ, ನಮಗಂಟಿಕೊಂಡವರ ಪಾಲಿಗೆ ಎಲ್ಲವೂ ಕೆಟ್ಟು ಹೋದಂತೆಯೇ ತಾನೆ?

ರಾತ್ರಿ ಕಳೆಯಲೊಂದು ಮನೆ ಹುಡುಕುವವರು ಸಿಕ್ಕ ಮನೆಯಲ್ಲಿದ್ದು, ಬೆಳಕು ಹರಿಯುತ್ತಲೆ ಹೊರಟು ಹೋಗುವರಲ್ಲವೆ? ಈ ದೇಹವೂ ಹಾಗೆ, ಜೀವನಿಗೊಂದು ತಾತ್ಕಾಲಿಕ ಮನೆ. ಇವತ್ತು ಇರುವದು ನಿಜ, ನಾಳೆ ಬೆಳಕು ಹರಿಯುತ್ತಲೇ ಇದನ್ನು ಇದ್ದಲ್ಲಿಯೇ ಬಿಟ್ಟು ಹೊರಡುವದೂ ನಿಜ. ಇಂದಿದ್ದು ನಾಳೆ ಬಿಡುವ ದೇಹವನ್ನಷ್ಟೇ ಕುರಿತು ಇಲ್ಲಿ ಹೇಳ್ತಾ ಇರೋದೋ ಅಥವಾ ಇನ್ನೂ ಹೆಚ್ಚಿನದೇನನ್ನೋ ಹೇಳುತ್ತಿದ್ದಾರೋ ಇಲ್ಲಿ? ಬೆಳಕು ಹರಿಯುತ್ತಲೇ ಎದ್ದು ಹೋಗುವ ವಸತಿಕಾರ ಇಲ್ಲಿ ಇದ್ದದ್ದು ರಾತ್ರಿಯೇ ಹಾಗಾದರೆ? ಬೆಳಕು ಹರಿದದ್ದು ಸಾವನ್ನ ಸೂಚಿಸುವದಾದರೂ ಹೇಗೆ? ಸಾಯುವವರಿಗೆಲ್ಲ ಬೆಳಕು ಹರಿಯಿತು ಎನ್ನಬಹುದೆ? ತಿಳಿದವರು ಹೇಳಬೇಕು.

ಸಂಸಾರ ಪಾಶವ ನೀ ಬಿಡಿಸಯ್ಯ ಎನ್ನುವಲ್ಲಿ ಕಂಸಾರಿಯೇ ಬಂದದ್ದು ಬರೀ ಪ್ರಾಸಕ್ಕೋಸ್ಕರವೆ? ಇರಲಿಕ್ಕಿಲ್ಲ. ಸಂಸಾರವನ್ನ ಕಂಸನಿಗೆ ಹೋಲಿಸಿದ್ದಾರೇನೋ ಇಲ್ಲಿ. ತಾನಿದ್ದಷ್ಟು ದಿನವೂ ಕಷ್ಟ ಕೊಟ್ಟವನು ಕಂಸ. ಸಂಸಾರವೂ ಹಾಗೆ ಅಲ್ಲವೇ? ಮತ್ತೆ ಮತ್ತೆ ಮೇಲೇರಿ ಬರುತ್ತದೆ, ಎಷ್ಟು ಕಷ್ಟ ಎನಿಸುತ್ತದೆ. ಸುಖದ ಅಮಲನ್ನೂ ಹತ್ತಿಸುತ್ತದೆ, ಸುಖದ ಹಿಂದೆಯೇ ದುಃಖವನ್ನೂ ಕೊಡುತ್ತದೆ. ಆ ಕಂಸ ಖುದ್ದಾಗಿ ಅಥವಾ ತನ್ನ ಬಂಟರ ಮೂಲಕವಾಗಿ ಮೇಲೇರಿ ಬಂದಂತೆಲ್ಲ ಅವರನ್ನ ಕೊಂದವನಲ್ಲವೇ ಕೃಷ್ಣ? ಅವನೇ ಬೇಕು ಮತ್ತೆ ಈ ಸಂಸಾರದ ಪಾಶದಿಂದ ಬಿಡಿಸಲಿಕ್ಕೆ!

ಪಕ್ಷಿ ಹಾರಿ ಹೋಗುವಾಗಿನ ’ಆ ಕ್ಷಣ’, ಆಗ ಇರಬೇಕಾದ ಮನಸ್ಥಿತಿಯನ್ನೇ ಅಲ್ಲವೇ ಈ ಪದ ಹೇಳುತ್ತಿರೋದು? ಸಂತೆಯಲ್ಲಿ ನಾನಾ ಪರಿಯಲ್ಲಿ ವ್ಯವಹಾರ ಮಾಡಿ ಕೊನೆಗೆ ಅವರಾರೋ ನಾವಾರೋ ಎಂಬಂತೆ ಹೊರಡುವಾಗಲೇ ಆಗಲಿ, ಮಕ್ಕಳು ತಾವೇ ಕಟ್ಟಿದ ಮನೆಯನ್ನ ಕೆಡಿಸಿ ಹೋಗುವಾಗ ಅಥವಾ ರಾತ್ರಿ ಕಳೆದ ಮನೆಯನ್ನ ಬಿಟ್ಟು ಹೋಗುವದರಲ್ಲೇ ಆಗಲಿ ಒಂದು ನಿರ್ಲಿಪ್ತತೆ ಇದೆ. ಸಾವು ಯಾವ ಕ್ಷಣದಲ್ಲಿ ಎರಗುತ್ತದೆ ಎನ್ನುವದು ಗೊತ್ತಿಲ್ಲ. ಬದುಕಿನ ಕ್ಷಣ ಕ್ಷಣದಲ್ಲೂ ಆ ನಿರ್ಲಿಪ್ತತೆ ಬಯಸುವದು ಸಾಯುವ ಆ ಕ್ಷಣದಲ್ಲಿ ಇರಬೇಕಾದ ನಿರ್ಲಿಪ್ತತೆಯನ್ನ ಗಳಿಸಿಕೊಳ್ಳುವದಕ್ಕೋಸ್ಕರವೆ? ಸಾಯುವ ಆ ಕ್ಷಣದಲ್ಲಿ, ಇಲ್ಲಿ ಸಂಸಾರದ ಕಡೆ ಅಭಿಮಾನ ಎಳೆದರೆ ಮತ್ತೆ ಬರುವದು ಇದೇ ಸಂಸಾರಕ್ಕೆ. ಕಡೆಗಾಲಕ್ಕೆ ಕಡವಳನ ನೆನೆ ಎನ್ನುವರಲ್ಲವೆ? ಭಗವದ್ಗೀತೆಯಲ್ಲಿ ಕೃಷ್ಣನೂ ಹೇಳುತ್ತಾನೆ, ’ಕಡೆಗಾಲಕ್ಕೆ ನನ್ನ ನೆನೆದವನು ನನ್ನನ್ನೇ ಹೊಂದುತ್ತಾನೆ’ ಎಂದು. ಮಧ್ವಾಚಾರ್ಯರು ವಂದೇ ವಂದ್ಯಂ ಸದಾನಂದಂ.. ಅಂತ್ಯ ಕಾಲೇ ವಿಶೇಷತಃಎನ್ನುತ್ತಾರೆ.

ಆದರೆ ಆ ಸ್ಮರಣೆ ಬರುವದಾದರೂ ಹೇಗೆ? ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮಾಚಾರ್ಯರು ಶಪಥ ಮಾಡಿ ಬ್ರಹ್ಮಚಾರಿಯಾಗಿದ್ದವರು. ತಾವು ಬಯಸದೇ ಸಾವು ಬರದು ಎಂದು ಗೊತ್ತಿದ್ದವರು. ಏನನ್ನೂ ಕಟ್ಟಿಕೊಳ್ಳದೇ ಇದ್ದವರಾದರೂ ರಾಜ್ಯವನ್ನು ಕಾಪಿಡಲು ತಮ್ಮನ್ನೇ ಮುಡಿಪಾಗಿಟ್ಟವರು. ಯುದ್ಧದಲ್ಲಿ ಪಾಂಡವರು ಗೆದ್ದ ಮೇಲೆ ‘ರಾಜ್ಯವೀಗ ಸುರಕ್ಷಿತ’ ಎಂದು ತಮ್ಮ ಜವಾಬ್ದಾರಿಯಿಂದ ಮುಕ್ತರಾದವರು.  ಎಂಟು ನೂರು ವರ್ಷಗಳ ಕಾಲ ನಿರ್ಲಿಪ್ತತೆಯನ್ನ ಪಾಲಿಸಿದವರಲ್ಲವೇ ಅವರು? ಕಡೆಗಾಲಕ್ಕೆ ಆ ಕೃಷ್ಣ ಅವರೆದುರೇ ನಿಂತಿದ್ದರೂ, ಆ ಕ್ಷಣದಲ್ಲಿ ಅವರ ಮನಸ್ಸಿನಲ್ಲಿ ಅವನ ಸ್ಮರಣೆಯಿರಲಿಲ್ಲವಂತೆ. ಅದಕ್ಕಾಗಿ ಮತ್ತೆ ಜನ್ಮವಾಯಿತಂತೆ ಅವರಿಗೆ. ಹಾಗಾದರೆ ಕೃಷ್ಣ ಎದುರಿನಲ್ಲಿದ್ದರಷ್ಟೇ ಸಾಲದು, ಸ್ಮರಣೆಯನ್ನೂ ಅವನೇ ಕೊಡಬೇಕು. ಕೊಟ್ಟು ಸಂಸಾರದಿಂದ ಬಿಡಿಸಬೇಕು. ಕಂಸಾರಿಯೇ ಯಾಕೆ ಬಂದ ಪದದಲ್ಲಿ ಎಂದು ಯೋಚಿಸಿದಾಗ ಹೊಳೆದದ್ದಿಷ್ಟು.

(ಇಂಟರ್ನೆಟ್ಟಿನಲ್ಲೆಲ್ಲಾದರೂ ವಿದ್ಯಾಭೂಷಣರು ಇದನ್ನ ಹಾಡಿದ್ದರ ಲಿಂಕ್ ಸಿಗುವದೇನೋ ಎಂದು ಹುಡುಕಿದಾಗ ಅರ್.ಕೆ.ಶ್ರೀಕಂಠನ್ ಅವರು ಹಾಡಿದ ಲಿಂಕ್ ಸಿಕ್ಕಿತು, ರಸಿಕಾಸ್.ಆರ್ಗ್ ನ ಈ ಕೊಂಡಿಯಲ್ಲಿ.)

Advertisements

6 thoughts on “ಆ ಕ್ಷಣದಲ್ಲಿ ಹಾರಿ ಹೋದಂತೆ

 1. ಸಂಸಾರ ಸಂತೆಯಿಂದ ನೀ ಹೊರಡುವದು ಬರಿಗಯ್ಯಿಂದಲ್ಲ . ಸಂಸಾರದಲ್ಲಿದ್ದಾಗ ನೀ ಸಂಪಾದಿಸಿದ್ದು
  ನಿನ್ನೊಂದಿಗೆ ಬರುವದು ಇದಕೆ ಸಂಶಯವಿಲ್ಲ. ಅದಕ್ಕೆಂದೇ ಕಂಸಾರಿಯನ್ನು ನನ್ನ ultimate ಮನೆ
  ಮುತ್ತಿಸೆಂದು ಕೇಳುವದು. ಪುನರ್ಜನ್ಮದಲ್ಲಿ ನಂಬಿಕೆ ಇಲ್ಲದವರಂತೆ ಜೀವ ನಿತ್ಯ ಎಂಬುದನ್ನುತಿಲಿಯದವರಂತೆ ಈ ತುಂಬಸರಳ ಎನಿಸುವ ಪದವನ್ನು ತಿಳಿಯಲು ಪ್ರಯತ್ನಿಸಿದ್ದೀರಿ.

  • ಜೀವ ನಿತ್ಯ ದೇಹವು ಜೀವನ ಸಾಧನೆಗೋಸುಗ ಬಂದದ್ದು ಇಲ್ಲಿರುವ ಸುಮ್ಮನೆಯಿಂದ ಅಲ್ಲಿರುವ
   ನಮ್ಮನೆಗೆ ಹೋಗುವದೇ ಜೀವನ ಅಂತಿಮಗುರಿ ಹೀಗಾಗಿ ಸಂಸಾರದಲ್ಲಿ ಹೇಗಿರಬೇಕು ಜೀವನಿಗೆ
   ಈ ಕಾರಣಕ್ಕಾಗಿ ಕಂಸಾರಿಯ ಅನುಗ್ರಹಬೇಕು ಎಂದು ದಾಸರು ಹೇಳುತ್ತಿದ್ದಾರೆ ಎನಿಸುವದು.

   ನಿನ್ನನ್ನು ಆಕ್ಷೇಪಿಸಿದ ನಾನು ನನ್ನ ತಿಳುವಳಿಕೆಯನ್ನು ಬರೆದಿದ್ದೇನೆ ನಿಜವಾದ ಅರ್ಥವನ್ನು
   ಪುರಂದರವಿಟ್ಟಲನೇ ಪ್ರೇರಿಸಬೇಕು.

   • ಅಪ್ಪ,
    ನಿಮ್ಮ ಈ ಕಮೆಂಟುಗಳ ಬಗ್ಗೆ ಫೋನಿನಲ್ಲಿ ಅವತ್ತೇ ಮಾತಾಡಿದ್ದೇವೆ. ಹೋಗುವಾಗ ಬರಿಗೈಯಲ್ಲಿ ಹೋಗುವದಿಲ್ಲ, ನಮ್ಮ ಕರ್ಮವನ್ನು ಹೊತ್ತೇ ಹೋಗುವದು ಎನ್ನುವದು ನಿಜ. ಆವತ್ತು ಬರೆಯುವಾಗ ನನ್ನ ಮನಸ್ಸಿನಲ್ಲಿದ್ದದ್ದು ‘Material’ ಆದ ಏನನ್ನೂ ಹೊತ್ತೊಯ್ಯುವದಿಲ್ಲ ಎನ್ನುವದು. ನಿಮ್ಮ ಆಕ್ಷೇಪವೂ ಸಕಾರಣವಾಗಿಯೇ ಇದೆ. ಅವತ್ತು ನಿಮ್ಮ ಜೊತೆ ಮಾತಾಡಿದ ನಂತರದ ದಿನಗಳಲ್ಲಿ ನೆನಪಾಗಿದ್ದೇನೆಂದರೆ ಕಂಸಾರಿಯೇ ಯಾಕೆ ಬಂದ ಅನ್ನುವದನ್ನು ಮೊದಲು ಯೋಚಿಸಲು ಆರಂಭಿಸಿದಾಗ ತಲೆಯಲ್ಲಿದ್ದದ್ದು ಕೃಷ್ಣ ಕಂಸಾರಿಯಾಗೇ ಯಾಕೆ ಬಂದ ಎನ್ನುವದು. ಬರೆಯುತ್ತಾ ಬರೆಯುತ್ತ ಅದು ಕೃಷ್ಣನೇ ಯಾಕೆ ಬಂದ ಎನ್ನುವ ತಿರುವು ತೆಗೆದುಕೊಂಡಿದೆಯಲ್ಲವೇ ಅಂತ ಅನಿಸಿ ಆಶ್ಚರ್ಯವಾಯಿತು.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s