ಗೋಳಗುಮ್ಮಟ

ರಜನೀಗಂಧಾ ಫೂಲ್ ತುಮ್ಹಾರೆ …’, ಬಹಳ ವರ್ಷಗಳ ಹಿಂದೆ ಟಿವಿಯಲ್ಲಿ ನೋಡಿ/ಕೇಳಿದ ಹಾಡು.  ಆ ಚಿತ್ರ ನೋಡಿದ್ದೆನೋ ಇಲ್ಲವೊ ನೆನಪಿಲ್ಲ ಆದರೆ ಅಮೂಲ್ ಪಾಲೇಕರ್ ಒಳ್ಳೆ ಖುಷಿ ಮೂಡಿನಲ್ಲಿ ಹೂವಿನ ಗೊಂಚಲು ಹಿಡಿದುಕೊಂಡು ಬಂದು ತನ್ನ ಗೆಳತಿಯ ಮನೆಯ ಹೂದಾನಿಯಲ್ಲಿ ಇಡುವ ದೃಶ್ಯ ಮತ್ತು ಹಾಗೇ ಹಿನ್ನೆಯಲ್ಲಿ ಕೇಳಿ ಬರುವ ಆ ಹಾಡು ಅದು ಹೇಗೋ ನೆನಪಿನಲ್ಲುಳಿದುಬಿಟ್ಟಿವೆ. ಇತ್ತೀಚೆಗೆ ಸ್ಯಾನ್ ಹೋಸೆ ಲೈಬ್ರರಿಯಲ್ಲಿ ’ರಜನೀಗಂಧಾ’ ಡಿವಿಡಿ ಸಿಕ್ಕಾಗ ಮನೆಗೆ ತಂದು ನೋಡಿದೆ. ನಾಯಕಿಯ ಸುತ್ತ ಸುತ್ತುವ ಕತೆ ಇಷ್ಟ ಆಯಿತು.

ಕಾಲೇಜು ದಿನಗಳ ಒಬ್ಬ ಗೆಳೆಯ ತನಗೂ ಮನೆಯವರಿಗೂ ಹತ್ತಿರವಾಗಿ ತನ್ನ ಮದುವೆ ಮಾಡಿಕೊ ಎಂದಾಗ ಮನಸ್ವಿ ’ಹೂಂ’ ಅಂದಿದ್ದಾಳೆ. ಯಾವುದೋ ಇಂಟರ್ವ್ಯೂಗೆಂದು ಮುಂಬೈಗೆ ಹೋದವಳಿಗೆ ಅವಳ ’ಮೊದಲ ಪ್ರೇಮ’ವಾಗಿದ್ದ ಹುಡುಗ ಸಿಗುತ್ತಾನೆ. ಎಷ್ಟೋ ದಿನಗಳಿಂದ ಮಾತಿಲ್ಲದಿದ್ದರೂ ಅದೆಲ್ಲ ನೆನಪಿನಲ್ಲಿ ಇಲ್ಲ ಎನ್ನುವಂತೆ ಅವಳೊಡನೆ ವ್ಯವಹರಿಸುತ್ತಾನೆ. ಪ್ರೇಮಿಯಾಗಿದ್ದಾಗಿನ ದಿನದ ಸಲಿಗೆ ತೋರುವದಿಲ್ಲವಾದರೂ ಅರಿಯದ ಊರಿನಲ್ಲಿ ಅವಳ ದೇಖರೇಖಿ ನೋಡಿಕೊಳ್ಳುವದರಲ್ಲಿ ಯಾವುದೇ ಕಸುರು ಉಳಿಸುವದಿಲ್ಲ. ರೆಗ್ಯುಲರ್ ಆಗಿ ಅವಳಿದ್ದ ಇನ್ನೊಬ್ಬ ಗೆಳತಿಯ ಮನೆಗೆ ಬರುತ್ತಾನೆ, ಹೇಳಿದ ಸಮಯಕ್ಕೆ ಬರುತ್ತಾನೆ, ಅವಳ ಕಡೆ ಗಮನ ಕೊಡುತ್ತಾನೆ, ಅವಳಿಗೆ ಊರು ಸುತ್ತಿಸುತ್ತಾನೆ, ಅವಳ ಇಂಟರ್ವ್ಯೂಗೆ ವಶೀಲಿ ಹಚ್ಚುವದನ್ನೂ ಮಾಡುತ್ತಾನೆ. ಇದೆಲ್ಲ ನೋಡುತ್ತ ನಾಯಕಿಯ ಮನಸ್ಸಿನಲ್ಲಿ ಹಳೆಯ ಪ್ರೇಮ ಮತ್ತೆ ಹೊಸದಾಗತೊಡಗುತ್ತದೆ.  ಹಳೆಯ ಪ್ರೇಮಿಯ ಇಂದಿನ ನಡೆಯಲ್ಲಿ ಅಂದಿನ ಪ್ರೇಮವನ್ನು ಕಾಣಲಾರಂಭಿಸುತ್ತಾಳೆ. ಯಾವ ಕ್ಷಣದಲ್ಲಿ ಅವನು ಮತ್ತೆ ತನ್ನನ್ನು ಪ್ರೇಮಿಸುತ್ತಿರುವದಾಗಿ ಹೇಳುತ್ತಾನೋ ಎಂದು ಕಾಯತೊಡಗುತ್ತಾಳೆ. ಅವನ ಒಂದು ಪ್ರೇಮದ ಮಾತಿಗೆ ನಿರ್ಧರಿಸಿದ ಮದುವೆಯನ್ನೂ ಬಿಟ್ಟು ಬರಲು ಸಿದ್ಧವಾಗಿ ಕೂತಿರುತ್ತಾಳೆ. ಕೊನೆಯ ಕ್ಷಣದವರೆಗೂ, ಅವಳಿದ್ದ ರೈಲು ಮುಂಬೈ ಬಿಟ್ಟು ಮತ್ತೆ ದಿಲ್ಲಿಗೆ ಹೊರಡುವ ಕ್ಷಣದವರೆಗೂ ಕಾಯುತ್ತಾಳೆ, ಅವಳೇ ಎಲ್ಲಿ ಹೇಳಿ ಬಿಡುತ್ತಾಳೊ ಅನಿಸುವಂತೆ ಕಾಯುತ್ತಾಳೆ. ಆದರೆ ಅವನು ಹೇಳುವದಿಲ್ಲ.

ಅವನಿಗೂ ಇಷ್ಟವಿತ್ತೆ? ನಮಗೆ ಗೊತ್ತಾಗುವದಿಲ್ಲ. ಎಲ್ಲ ರೀತಿಯ ಕೇರ್ ತೆಗೆದುಕೊಂಡರೂ ಪ್ರೇಮವಿದೆಯೇ ಎಂಬ ಸುಳಿವು ಕೊಡುವದಿಲ್ಲ, ಬಾಯಿ ಬಿಟ್ಟು ಹೇಳುವದಿಲ್ಲ. ಅವಳಿಗಾಗಿ ಅಷ್ಟು ಸಮಯ ಮೀಸಲಿಟ್ಟಿದ್ದೇಕೆ? ಮುಂಬೈಗೆ ಬಂದ ಹಳೆಯ ಗೆಳತಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಕರ್ತವ್ಯವನ್ನಷ್ಟೇ ನೆರವೇರಿಸಿದನೆ? ಬಹುಷಃ.

ರಜನೀಗಂಧಾದ ನಾಯಕಿಯ ತೊಳಲಾಟವನ್ನ ನೋಡುವಾಗ ಖಾಸನೀಸರ ಕತೆ ’ಮಂದಿಯ ರಹಸ್ಯ’ದ ಮಂದಾಕಿನಿ ನೆನಪಾದಳು. ಚಿಕ್ಕಂದಿನಿಂದ ತನ್ನ ತಾಯಿಯ ತಮ್ಮ ವಾಸು ಬಗ್ಗೆ ಕನಸು ಕಾಣುತ್ತ ಬೆಳೆದ ಮಂದಾಕಿನಿಯ ತಲೆಯಲ್ಲಿ ಯಾವಾಗಲೂ ಅವನದೇ ಧ್ಯಾನ. ಯಾವುದೇ ಪ್ರೇಮ ಕತೆಯನ್ನು ಕೇಳುವಾಗಲೂ ಅದು ತನ್ನ ಮತ್ತು ಅವನ ಕತೆಯಾಗಿಯೇ ತೋರುವದು. ಅವಳಪ್ಪನಿಗೆ ಬಿಜಾಪುರಕ್ಕೆ ವರ್ಗವಾದ ಮೇಲೆ ಅಲ್ಲಿನ ಗೋಳಗುಮ್ಮಟ ಅವಳ ಮೆಚ್ಚಿನ ಸ್ಥಳವಾಗಿದೆ. ಮನೆಯವರೆಲ್ಲರ ಜೊತೆಗೆ ಅಲ್ಲಿಗೆ ಹೋದಾಗ ವಾಸುವೂ ಬಂದಿದ್ದ.  ನುಡಿದದ್ದನ್ನ ತಿರು ತಿರುಗಿ ಮಾರ್ನುಡಿಯುವ ಆ ಗುಮ್ಮಟದಲ್ಲಿ ಅವನ ಹೆಸರನ್ನ ಕರೆದಿದ್ದಾಳೆ. ನೋಡಲು ಅಷ್ಟೇನು ಸುಂದರಿಯಲ್ಲದ, ಓದು ಬರಹದಲ್ಲೂ ಹಿಂದುಳಿದ, ಹಳ್ಳಿಯ ಹುಡುಗಿ ಮಂದಿಯನ್ನ ಮದುವೆಯಾಗಲು ಮುಂಬೈ ನಗರವಾಸಿಯಾದ ವಾಸು ಒಪ್ಪುವದಿಲ್ಲ.

ಇಲ್ಲದ್ದನ್ನ ಊಹಿಸಿಕೊಂಡು ಅದೇ ನಿಜವಾಗಲಿ ಎಂದು ಆಶಿಸುವ ಇಬ್ಬರ ಕತೆಯ ಎಳೆ ಒಂದೇ ರಿತಿಯದ್ದು. ಚಿಕ್ಕ ಚಿಕ್ಕ ಘಟನೆಗಳ ಮೂಲಕ ಇಬ್ಬರ ಮನಸ್ಸಿನಲ್ಲಿ ಪ್ರೇಮ ಪಲ್ಲವವಾಗುತ್ತ ಹೋಗುತ್ತದೆ. ತಮ್ಮನ್ನು ತಾವೇ ಪ್ರೋಗ್ರಾಮ್ ಮಾಡಿಕೊಳ್ಳುತ್ತ ಹೋಗುತ್ತಾರೆ. ಬೆಳೆಯುವ ದಿನಗಳಲ್ಲಿನ ಸಾಮಾನ್ಯವೆನಿಸುವ ಘಟನೆಗಳ ಮೂಲಕ ವಾಸು ಮಂದಾಕಿನಿಯ ಮನಸ್ಸಿನಲ್ಲಿ ನಿಂತರೆ, ರಜನೀಗಂಧಾದ ದೀಪಾಳ ಮನಸ್ಸಿನಲ್ಲಿ ಹಳೆಯ ಪ್ರೇಮಿ ನವೀನ್ ಈಗಣ ಸಂಜಯನಿಗಿಂತ ಮೇಲಾಗಿ ಕಾಣುತ್ತ ಹೋಗುತ್ತಾನೆ. ಗೆಳೆಯರು ಸಿಕ್ಕರೆ ಎಲ್ಲೆಂದರಲ್ಲಿ ತನ್ನನ್ನು ಮರೆಯುವ, ತಾನು ಮುತುವರ್ಜಿಯಿಂದ ಮಾಡಿಕೊಂಡ ಅಲಂಕಾರಕ್ಕಾಗಿ ತನಗೊಂದು ಚಿಕ್ಕ ಕಾಂಪ್ಲಿಮೆಂಟನ್ನೂ ಕೊಡದ ಸಂಜಯ ಗೌಣವಾಗುತ್ತ ಹೋಗುತ್ತಾನೆ. ಒಟ್ಟಾರೆ ಇಬ್ಬರೂ ತಾವು ಕಾಣಬೇಕು ಅಂದುಕೊಂಡಿದ್ದನ್ನಷ್ಟೇ ಕಾಣುತ್ತ ಅದರಲ್ಲೇ ಮುಳುಗಿರುತ್ತಾರೆ. ಚಿತ್ರದ ದೀಪಾಳಿಗಾಗಿ ಸಂಜಯ ಇನ್ನೂ ಇರುತ್ತಾನೆ ಆದರೆ ಮಂದಾಕಿನಿ “ಗೋಳಗುಮ್ಮಟದಲ್ಲಿ ಒಂದು ಧ್ವನಿ ಹತ್ತಾದರೆ ತಪ್ಪು ಅದರದ್ದೇ ಹೊರತು ಮಾತನಾಡಿದವರದಲ್ಲ” ಎನ್ನುವದನ್ನ ಮಾತ್ರ ಕಂಡುಕೊಳ್ಳುತ್ತಾಳೆ.

Advertisements

2 thoughts on “ಗೋಳಗುಮ್ಮಟ

  1. ‘ರಜನೀಗಂಧಾ’ದ ನಾಯಕಿಯ ಮನಸ್ಸಿನ ತೊಳಲಾಟವನ್ನು ಚನ್ನಾಗಿ ವಿಮರ್ಶಿಸಿದ್ದೀರಿ. ‘ಕಈ ಬಾರ್ ಯೂ ಭೀ ದೇಖಾ ಹೈ, ಯೆ ಜೋ ಮನ್ ಕೀ ಸೀಮಾ ರೇಖಾ ಹೆೈ’ ಹಾಡಿನಲ್ಲಿ ಈ ತೊಳಲಾಟ ತುಂಬಾ ಚೆನ್ನಾಗಿ ವ್ಯಕ್ತವಾಗಿದೆ. 🙂

    ಖಾಸನೀಸರ ಕಥೆ ಓದಿಲ್ಲ. ಸಾಧ್ಯವಾದಾಗ ಓದಬೇಕು.

    • ಥ್ಯಾಂಕ್ಸ್ ಶ್ರೀಕಾಂತ್. ಹೌದು ನೀವು ಹೇಳಿದ ಹಾಡಿನಲ್ಲಿ ನಾಯಕಿಯ ಮನಸ್ಸಿನ ತೊಳಲಾಟ ತುಂಬಾ ಚನ್ನಾಗಿ ವ್ಯಕ್ತವಾಗಿದೆ. ಆ ಹಾಡಿನ ಲಿಂಕ್ ಹಾಕದೆ ನನ್ನ ಪೋಸ್ಟ್ ಅಪೂರ್ಣವಾಗಿತ್ತು. ನಿಮ್ಮ ಟಿಪ್ಪಣಿ ಆ ಕೊರತೆಯನ್ನ ನೀಗಿಸಿದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s