ಕೂಸು ಇದ್ದ ಮನೆಗೆ …

ಕೂಸು ಇದ್ದ ಮನೆಗೆ ಬೀಸಣಿಗೆ ಯಾಕೆ
ಕೂಸು ಕಂದಮ್ಮ ಒಳ ಹೊರಗೆ
ಕೂಸು ಕಂದಮ್ಮ ಒಳ ಹೊರಗೆ ಆಡಿದರೆ
ಬೀಸಣಿಗೆ ಗಾಳಿ ಬೀಸೀತ …

ಮಾಡದಾಗ ಇಟ್ಟಿದ್ದ ಪುಸ್ತಕ ಎಲ್ಲ ಕೆಳಗ ಹರವಿದೆಲ್ಲೋ ಪುಟ್ಟ ಅನ್ತಾ  ಒಂದು ಕಡೆ ಇಂದ ಮತ್ತೆ ಎತ್ತಿ ಇಡ್ತಾ ಬಂದರೆ ಇನ್ನೊಂದು ಕಡೆ ಇಂದ ಅವ ಹೊರಗ ಹಾಕ್ತಾ ಬರ್ತಾನೆ. ಮೂಡಿದ್ದರೆ ತಾ ತೆಗೆದದ್ದನ್ನ ತಾನೆ ಎತ್ತಿಡ್ತಾನೆ ಮತ್ತೆ ಮುಂದಿನ ಕ್ಷಣದಲ್ಲೇ‌ ಎಲ್ಲಾ ನೆಲಕ್ಕೆ  ವಾಪಸ್ ಹಾಕ್ತಾನೆ. ಇಲ್ಲೇ‌ ಇದ್ದ ಅನ್ನೋದರೊಳಗೆ ‘ವಾಕುಮ್ ವಾಕುಮ್’ ಅಂತ ತನ್ನ ಆಟಿಗೆ ವ್ಯಾಕ್ಯೂಮ್ ಕ್ಲೀನರ್ ಹಿಡಿದು ನಡೆದೇ ಬಿಡ್ತಾನೆ. ನಿಜವಾದ ವ್ಯಾಕ್ಯೂಮ್ ಕ್ಲೀನರ್ ಹೊರಗೆ ಬಂದರೆ ಅಂಜಿ ಅಲ್ಲೇ ದೂರದಲ್ಲೇ ನಿಂತಿರ್ತಾನೆ. ಪಾಟಿಯೋ ಬಾಗಿಲು, ಹೊರ ಬಾಗಿಲು ತೆಗೀತೀವಿ ಅನ್ನೋ‌ ಸೂಚನೆ ಸ್ವಲ್ಪವೇ‌ ಸಿಕ್ಕರೂ‌ ಸಾಕು ಕ್ಷಣಾರ್ಧದಲ್ಲೇ‌ ಹಾಜರ್ ಅಲ್ಲಿ. ಹಿತ್ತಲಿಗೆ ಹೊರ ಬಿದ್ದರೆ ಮಣ್ಣಾಟ, ಮುಂಬಾಗಿಲಿಂದ ಹೊರಬಿದ್ದರೆ  ‘ಕ್ವಾಕ್ ಕ್ವಾಕ್’ ಅಂತಾ ಡಕ್ ಪಾಂಡಿನ ಕಡೆಗೆ ಮುಖ.ಅಪ್ಪ ಇದ್ದರೆ ಅಪ್ಪ, ಇಲ್ಲ ಅಮ್ಮನ ಕೈ ಹಿಡಿದು ಎಳೆಕೊಂಡು ಹೋದನೇ ತನಗೆ ಬೇಕಾಗಿದ್ದ ಕಡೆ. ‘Free Electrons are like toddlers’ ಅಂತಿದ್ದರಂತ ನನ್ನ ಗೆಳೆಯನೊಬ್ಬನ ಟೀಚರ್.

ನಾಯಿ ಮರಿ ನಾಯಿ ಮರಿ ಹಾಡು ಬಂದರೆ ನಾವೂ ಬೌ ಬೌ ಅನ್ಬೇಕು, Five Little Soldirsನ್ನ ಅದರ ಜೊತೆಗೇ ಹಾಡ ಬೇಕು. ‘ಬಾರೆ ಗೋಪಮ್ಮ ನಿನ್ನ ಬಾಲಯ್ಯ ಅಳುತಾನೆ’ ಅಂದರೆ ನಗು ಮುಖ ಮಾಡಿ ಹಾಡು ಕೇಳ್ತಾನೆ. ಮಲಗೋ ಮಗನೇ ರಾತ್ರಿ ಬಹಳ ಆಯಿತು ಅಂದರೆ ಇನ್ನೂ ಹಾರಾಡ್ತಾ ಇರ್ತಾನೆ. ‘ಆನಂದ ಆನಂದ’ ಹೇಳಲೀ‌ ಅಂತ ಅಮ್ಮ ಅಂದರೆ ಅಮ್ಮನ ತೋಳ ಮೇಲೇ ತಲೆ ಇಡೊದಕ್ಕೆ ರೆಡಿ. ‘ತಾರಮ್ಮಯ್ಯ ಯದುಕುಲ ವಾರಿಧಿ ಚಂದ್ರಮನ’ ಅಂತ ಅಮ್ಮ ಹಾಡಿದರೆ ಅಪ್ಪನೂ ಧ್ವನಿಗೂಡಸ್ತಾನೋ‌ ಎನೋ‌ ಅಂತ ಅಪ್ಪನ ಮುಖ ನೋಡ್ತಾನೆ ತುಂಟ! ಕೆಲಸ ಅಂತ ಲ್ಯಾಪ್ಟಾಪ್ ಹಿಡಿದು ಅಪ್ಪ ಹೊರಗಿನ ರೂಮಿಗೆ ಹೊರಟರೆ ‘ಅಪ್ಪ ಆಪೀಸ್, ಅಪ್ಪ ಆಪಿಸ್’ ಅನ್ನೂದಕ್ಕೆ ಶುರು.

 

ಅಕ್ಕ-ಬುಕ್ಕ  ಅಕ್ಕ ಬುಕ್ಕ ಅಂತಿದ್ದವನ ಶಬ್ದ ಭಂಡಾರ ಬೆಳೀತಾ ಇದೆ. ಪುಟ್ಟಾ,, ಪುಟ್ಟಪ್ಪ, ಹೋಗು, ಗೋ, ಕುಕ್ಕರ್, ಅಪ್ಪಾ  ಬಂದು, ಅಮ್ಮಾ  ಬಂದು, ಹೋತ್, ಪೇನ್ (ಪ್ಲೇನ್), ಬಸ್, ಅಂಬೆಲ್ಲಾ (ಅಂಬ್ರೆಲ್ಲಾ) … ಹೊಸ ಶಬ್ದಗಳು ಹಾಗೇ ಸೇರ್ತಾನೆ ಇವೆ. ಇನ್ನೂ ಕೆಲವಷ್ಟು  ಶಬ್ದ ನಾಲಿಗೆ ತುದೀಲೇ ಇದೆ, ಇದೋ ಹೇಳೇ ಬಿಟ್ಟೆ ಅನ್ನೋ‌ ಹಾಗೆ ಮುಖ ಮಾಡ್ತಾನೆ ಆದರೆ ಹೇಳೋದಿಲ್ಲ. ಮಕ್ಕಳು ಮಾತು ಕಲಿಯೋದು, ಅವರ ಮಾತುಗಳನ್ನ ಕೇಳೋದು ನಿಜಕ್ಕೂ ರೋಮಾಂಚಕ. ಸುತ್ತಲಿನವರು ಆಡುವದನ್ನ ಕೇಳ್ತಾ ಕೇಳ್ತಾ ತಾವೂ‌ ಹಾಗೇ‌ ನುಡಿದೇ ಬಿಡ್ತಾರೆ, ತಮ್ಮ ಕಿವಿಗೇ ಕೇಳಿದ್ದು  ತಮಗೇ‌ ಇಷ್ಟವಾಗಿ (ಅಥವಾ ಸ್ಪಷ್ಟವಾಗಿ ಬರಲಿಲ್ಲ ಅಂತ ಅನಿಸಿ?)‌ ಅಂದಿದ್ದನ್ನೇ ಅಂತಾ ಹೋಗ್ತಾರೆ, ಸಂಗೀತಗಾರರು ರಿಯಾಜ್ ಮಾಡಿದಂತೆನಾ ಅದೂ?‌ ನಮ್ಮ ಕಿವಿಗಂತೂ ಸಂಗೀತವೇ!

ಹೊರಗಿನ ಕೋಣೇಲಿ ಕೂತು ಲ್ಯಾಪ್ಟಾಪಿನಲ್ಲಿ ಮಗ್ನನಾದಾಗ ಅಲ್ಲಿ ಒಳಗಿನ ರೂಮಿಂದ ‘ಅಪ್ಪ ಆಪೀಸ್’ ಅನ್ನೋದು ಕೇಳಿಸಿದಂತೆ ಅನಿಸುತ್ತದೆ, ತಕ್ಷಣ ನೆನಪಾಗುತ್ತದೆ; ನಮ್ಮ ಕೂಸು ಕಂದಮ್ಮ ಅಮ್ಮನ ಜೊತೆಗೆ ಅಜ್ಜ ಅಜ್ಜಿ  ಹತ್ತರಕ್ಕ,  ಬೆಂಗಳೂರಿಗೆ ಹೋಗಿ ಒಂದು ವಾರ ಆತು. ಹೋದ ಶನಿವಾರ ಎತ್ತಿಟ್ಟಿದ್ದ  ಅವನ ಪುಸ್ತಕ ಭಂಡಾರ ಅಲ್ಲೇ ಇದೆ, ಅವನ ಆಟಿಗೆ ಸಾಮಾನು ಅವುಗಳ ಜಗಾ ಬಿಟ್ಟು ಕದಲಿಲ್ಲ. ಮನೆ ಮನ ಎಲ್ಲ ಭಣ ಭಣ.

ನಮ್ಮ ಪುಟ್ಟಪ್ಪನ ಬಗ್ಗೆ ಇಷ್ಟೆಲ್ಲ ಬರದಿದ್ದರಿಂದ ದಿಟ್ಟಿ  ಆಗ್ತದೇನೋ‌; ದಿಟ್ಟಿ  ತಗೀಬೇಕು. “ನಾಯಿ ದೃಷ್ಟಿ, ನರೀ ದೃಷ್ಟಿ, ಅವರ ದೃಷ್ಟಿ, ಇವರ ದೃಷ್ಟಿ, ಅಪ್ಪನ ದೃಷ್ಟಿ, ಅವ್ವನ ದೃಷ್ಟಿ …. ಥೂ ಥೂ ಥೂ!”

Advertisements

2 thoughts on “ಕೂಸು ಇದ್ದ ಮನೆಗೆ …

    • ಥ್ಯಾಂಕ್ಸ್ ಜ್ಯೋತಿ. ನೆನಪಿನಿಂದ ಬರೆದದ್ದು ಎಲ್ಲೊ ಸರಿ ಇಲ್ಲ ಅನಿಸಿತ್ತು. ನೀವು ಸರಿಯಾದ ಪಾಠ ಕೊಟ್ಟಿದ್ದು ಒಳ್ಳೆದಾಯ್ತು. ಉತ್ತರಿಸಲು ತಡ ಆಯ್ತು, ಕ್ಷಮಿಸಿ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s