ಮನ ನಿನ್ನಲಿ ನಿಲಿಸೋ ಮಾಧವ…

ಕೆಲವು ಹಾಡುಗಳು, ಶ್ಲೋಕಗಳೇ ಹಾಗೆ, ಅವನ್ನು ಕಂಡವರು, ಬರೆದವರು ತಾವು ಕಂಡದ್ದನ್ನ ಕಂಡ ಹಾಗೆ ಹೇಳುತ್ತ ಹೋದಂತೆ, ಅದನ್ನ ಕೇಳುತ್ತಿದ್ದರೆ ಅದೆಲ್ಲ ನಮಗೂ‌ ಕಾಣಿಸಿಯೇ ಬಿಡುವದು ಅನಿಸುವಂತೆ. ಪುರಂದರ ದಾಸರ ‘ಶರಣು ಸಕಲೋದ್ಧಾರ’ ಎಷ್ಟು ಬಾರಿ ಕೇಳಿದ್ದೇನೆ ನಮ್ಮಮ್ಮನ ಬಾಯಲ್ಲಿ. ಪ್ರತೀ ಬಾರಿಯೂ ಖುಷಿ ಕೊಡುತ್ತದೆ.

ಈ ತಮ್ಮ ಈ ಸೀತೆ ಈ ಬಂಟ ಈ‌ ಭಾಗ್ಯ
ಆವ ದೇವರಿಗುಂಟು ಬ್ರಹ್ಮಾಂಡದೊಳಗೆ

ಎನ್ನುವ ಸಾಲುಗಳಂತೂ‌ ದಾಸರು ಹಾಗೆ ಕಣ್ಮುಂದೆ ಕಾಣುತ್ತಲೇ ಹೇಳಿದಂತನಿಸುತ್ತವೆ. ಅದೇ ರೀತಿ, ರಾಮ ರಕ್ಷಾ ಸ್ತೋತ್ರದಲ್ಲಿ ಬರುವ

ದಕ್ಷಿಣೇ ಲಕ್ಷ್ಮಣೋ ಯಸ್ಯ ವಾಮೇ ತು ಜನಕಾತ್ಮಜಾ
ಪುರತೋ ಮಾರುತೀರ್ಯಸ್ಯ ತಮ್ ವಂದೇ ರಘುನಂದನಮ್

ಶ್ಲೋಕವೂ ಕೂಡ ಸೀತೆ ಲಕ್ಷ್ಮಣರನ್ನ ಎಡ ಬಲದಲ್ಲೂ, ಹನುಮಂತನನ್ನು ತನ್ನ ಮುಂದೆಯೂ ಹೊಂದಿದ ರಾಮ ಮನಃಪಟಲದ ಮೇಲೆ ಮೂಡಿಸುವಂತಿದೆ. ಎಷ್ಟು ಚಿತ್ರಪಟಗಳಲ್ಲಿ ನೋಡಿಲ್ಲ, ಎಷ್ಟು ಗುಡಿಗಳಲ್ಲಿ ಮೂರ್ತಿಗಳಾಗಿ ನೋಡಿಲ್ಲ ರಾಮ,ಸೀತಾ, ಲಕ್ಷ್ಮಣ ಹನುಮಂತರನ್ನ ಹಾಗೆ. ಆ ಎಲ್ಲ ಚಿತ್ರಗಳಿಗೂ, ಮೂರ್ತಿಗಳಿಗೂ‌ ಈ‌ ಶ್ಲೋಕವೇ ಸ್ಫೂರ್ತಿಯೇನೋ.

ಜಗನ್ನಾಥ ದಾಸರು ಹರಿಕಥಾಮೃತಸಾರದ ಕೊನೆಯ ಸಂಧಿಯಲ್ಲಿ ಹರಿಯನ್ನ ಹೆಗಲ ಮೇಲೆ ಹೊತ್ತು, ಆ ಹರಿಯ ಪಾದಗಳನ್ನು ತನ್ನ ಕೈಗಳಲ್ಲಿ ಹಿಡಿದಿರುವ ಗರುಡನ ಚಿತ್ರ ಕಣ್ಮುಂದೆ ತರುತ್ತಾರೆ. ಮಡಿಚಿದ ಬೆರಳುಗಳ ಉಗುರುಗಳ ಸಾಲಿನಲ್ಲಿ ತನ್ನ ಹೆಗಲಲ್ಲಿ ಕುಳಿತ ಹರಿಯ ಪ್ರತಿಬಿಂಬ ನೋಡುತ್ತ ಸುಖಿಸುವ ಗರುಡ ಸುಜನರಿಗೆ ಮಂಗಳವನ್ನು ಕೊಡಲಿ ಅಂತ ಪ್ರಾರ್ಥಿಸುತ್ತಾರೆ.

ಜಗದುದರನ ಸುರೋತ್ತಮನ ನಿಜ
ಪೆಗಲೊಳಾಂತು ಕರಾಬ್ಜದೊಳು ಪದ
ಯುಗ ಧರಿಸಿ ನಖ ಪಂಕ್ತಿಯೊಳು ರಮಣೀಯ ತರವಾದ
ನಗಧರನ ಪ್ರತಿಬಿಂಬ ಕಾಣುತ
ಮಿಗೆ ಹರುಷದಿಂ ಪೊಗಳಿ ಹಿಗ್ಗುವ
ಖಗ ಕುಲಾಧಿಪ ಕೊಡಲಿ ಮಂಗಳ ಸಕಲ ಸುಜನರಿಗೆ

ಇಂಥ ಸೊಗಸಾದ ಪದಗಳನ್ನೂ, ಸ್ತೋತ್ರಗಳನ್ನೂ‌ ವಿದ್ಯಾಭೂಷಣರ ಹಾಡುಗಾರಿಕೆಯಲ್ಲಿ ಕೇಳಿದಾಗ ಮತ್ತಷ್ಟು ಆನಂದವಾಗುತ್ತದೆ. ಪುರಂದರ ದಾಸರ ಕೃಷ್ಣಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ ಎನ್ನುವ ಹಾಡಲ್ಲಂತೂ ಎಡ ಬಲದಲ್ಲಿ ಓಲಾಡುವ ಕೌಸ್ತುಭ ಸಹಿತ ಆ ಕೃಷ್ಣನನ್ನ ನಮ್ಮ ಮುಂದೆ ನಿಲ್ಲಿಸಿಯೇ‌ ಬಿಟ್ಟರೇನೋ‌ ಅನಿಸುತ್ತದೆ. ಮನಸ್ಸು ಪಕ್ವವಾಗಿದ್ದರೆ ಆ ಮಘ ಮಘಿಸುವ ಸುಳಿಗುರುಳಿನ ಸೊಬಗನ್ನೂ , ಚಿಗುರು ತುಲಸಿ ವನಮಾಲೆಯ ಸುವಾಸನೆಯ ಅನುಭವವನ್ನೂ ಕಟ್ಟಿ ಕೊಡುವದೇನೋ! ಇಂಥ ಹಾಡುಗಳು, ಸ್ತೋತ್ರಗಳು ಮನಸ್ಸಿನಲ್ಲಿ ಉಳಿದಂತೆ ಆ ಕೃಷ್ಣನೂ‌ ಮನಸ್ಸಿನಲ್ಲಿ ನೆಲೆಸಲಿ, ಆ ಮಾಧವ ಮನವನ್ನ ತನ್ನಲ್ಲಿ ನಿಲ್ಲಿಸುವಂತಾಗಲಿ ಎನ್ನುವ ಹಾರೈಕೆಯೊಂದಿಗೆ, ಕೃಷ್ಣಾಷ್ಟಮಿಯ ಶುಭಾಶಯಗಳು.

ಮ್ಯೂಸಿಕ್ ಇಂಡಿಯಾ ಆನ್ಲೈನಿನಲ್ಲಿ ವಿದ್ಯಾಭೂಷಣರ ಹಾಡು ಕೇಳಬಹುದು.

ಕೃಷ್ಣ ಮೂರ್ತಿ ಕಣ್ಣ ಮುಂದೆ ನಿಂತಿದಂತಿದೆ
ಕಷ್ಟಗಳೆಲ್ಲವ ಪರಿಹರಿಸಿ ಮನದಿಷ್ಟಾರ್ಥಗಳನೆಲ್ಲ ಕೊಟ್ಟು ರಕ್ಷಿಸುವಂಥ

ಮಸ್ತಕದಲಿ ಮಾಣಿಕದ ಕಿರೀಟ
ಕಸ್ತೂರಿ ತಿಲಕದಿ ಹೊಳೆವ ಲಲಾಟ
ಶಿಸ್ತಿಲಿ ಕೊಳಲ ಊದುವ ಓರೆ ನೋಟ
ಕೌಸ್ತುಭ ಎಡ ಬಲದಲಿ ಓಲ್ಯಾಟ

ಮಘ ಮಘಸುವ ಸೊಬಗಿನ ಸುಳಿಗುರುಳು
ಚಿಗುರು ತುಲಸಿ ವನಮಾಲೆಯ ಕೊರಳು
ಬಗೆ ಬಗೆ ಹೊನ್ನ ಮುದ್ರಿಕೆ ಇಟ್ಟ ಬೆರಳು
ಸೊಬಗಿನ ನಾಭಿಯ ತಾವರೆ ಅರಳು

ಉಡುದಾರ ಒಡ್ಯಾಣ ಸಕಲಾಭರಣ
ಬೆಡಗು ಪೀತಾಂಬರ ಶತ ರವಿ ಕಿರಣ
ಕಡಗ ಗಗ್ಗರಿ ಪೆಂಡೆಗಳನಿಟ್ಟ ಚರಣ
ಒಡೆಯ ಪುರಂದರ ವಿಠಲನ ಕರುಣ

(‘ಮನ ನಿನ್ನಲಿ ನಿಲಿಸೋ ಮಾಧವ’ ಎನ್ನುವದು ‘ಅನಾದಿ ಕಾಲದ ಋಣಾನುಬಂಧ’ ಎಂದು ಶುರುವಾಗುವ ಒಂದು ದಾಸರ ಪದದ ಪಲ್ಲವಿಯ ಸಾಲು. ನನ್ನಮ್ಮನ ಫೇವರೇಟುಗಳಲ್ಲೊಂದು. ಇದರ ಬಗ್ಗೆ ಇನ್ಯಾವಾಗಲಾದರೂ ಬರೆಯಬೇಕು).

Advertisements

2 thoughts on “ಮನ ನಿನ್ನಲಿ ನಿಲಿಸೋ ಮಾಧವ…

  1. ಇನ್ನೊಂದು ೨೦ ದಿನಗಳಿಗೆ ವರ್ಷ ವಾಗುತ್ತಿದೆ. ಅನಾದಿಕಾಲದ ರಿಣಾನುಬಂಧ ಎಂದು ಆರಂಭ ವಾಗುವ ದಾಸರ ಪದದ ಬಗ್ಗೆ ನಿನ್ನ ಅನಿಸಿಕೆಗಳು ಹೊರಬಿದ್ದಿಲ್ಲ. ಹಾಗೇಕೆ?

  2. ಈಗಂತೂ ಇನ್ನೂ ೫ ದಿನ ಅಷ್ಟೇ ಉಳಿದಿರೋದು ವರ್ಷ ಪೂರ್ತಿ ಆಗ್ಲಿಕ್ಕೆ. ಮಜಾ ಅಂದ್ರ ಅಮ್ಮ ಹೆಚ್ಚಾಗಿ ಹಾಡೋ ಆ ಎರಡು ಸಾಲು ಬಿಟ್ರೆ ಮುಂದಿನದೇನೂ ಗೊತ್ತಿಲ್ಲ ನನಗೆ ಆ ಹಾಡಿನಲ್ಲಿ. ನೋಡೋಣ ಈ ಸರ್ತಿ ಬಂದಾಗ ಪೂರ್ತಿ ಓದ್ತೀನೇನೋ. ಬರೆಯೋದೇನಿದ್ರೂ ಅದಾದ ಮೇಲೆ!

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s