ಆಷಾಢದ ಸುತ್ತ

ಆಷಾಢದಲ್ಲಿ ಶುಭ ಕಾರ್ಯಗಳೆಲ್ಲ ವರ್ಜ್ಯ ಎನ್ನುವದು ಎಲ್ಲ ಕಡೆ ಇದೆಯೋ ಅಥವ ಬೆಂಗಳೂರಿನಲ್ಲಿ ಹೆಚ್ಚಾಗಿದೆಯೋ? ನಮ್ಮ ಗುಲ್ಬರ್ಗ ಕಡೆ ನನಗೆ ನೆನಪಿದ್ದಂತೆ ಅಷ್ಟು ಹೆಚ್ಚು ಇರಲಿಲ್ಲ. ನಮ್ಮಮ್ಮನ್ನ ಕೇಳಿದರೆ ಅವರೂ ಹಾಗೇ ಹೇಳಿದರು, ಜೊತೆಗೆ ನಮ್ಮ ಕಡೆ ಪುಷ್ಯ ಮಾಸ ಹಾಗೆ ಅಂದರು. ಅದು ಯಾಕೆ ಅಂತ ಇನ್ನೊಮ್ಮೆ ಕೇಳಬೇಕು! ಆಷಾಢದಲ್ಲಿ ಅತ್ತೆ ಸೊಸೆ ಒಬ್ಬರ ಮುಖ ಒಬ್ಬರು ನೋಡಬಾರದು ಅನ್ನೋದನ್ನ ಬಹಳ ಹಿಂದೆಯೇ ಕೇಳಿದ್ದೆ. ಮುಂದೆ ಇಂಜಿನಿಯರಿಂಗ ದಿನಗಳಲ್ಲಿ KRECಯ SACನ ಖುಲ್ಲಾ ಮೈದಾನದ ಸಿನೇಮಾ ಥೀಯೇಟರಿನಲ್ಲಿ ಅಣ್ಣಯ್ಯ ಸಿನೇಮಾ ನೋಡೋವಾಗ ಅದಕ್ಕೊಂದು ಲಾಜಿಕಲ್ ಕಾರಣವನ್ನೂ ಕೇಳಿದ್ದೆ (ಅದೇ, ನೀವೂ ಕೇಳಿರಬಹುದು. ಆಷಾಢದಲ್ಲಿ ಗಂಡ ಹೆಂಡತಿ ಸೇರಿದರೆ ಮುಂದೆ ಬಿರು ಬೇಸಿಗೆಯಲ್ಲಿ ಬಾಣಂತನ ಆಗಬೇಕಾಗಬಹುದು ಅನ್ನೋ ಕಾರಣ!) ಅದೇನೇ ಇರಲಿ ಆಷಾಢದ ಈ ತಿಂಗಳ ಬಗ್ಗೆ ಕೇಳಿರುವ ಇನ್ನೊಂದೆರಡು ವಿಷಯ ಹೇಳಿಬಿಡುವೆ.

’ಆಕಾಮಾವೈ ಕೋ ನ ಸ್ನಾತಃ’ ಎನ್ನುವ ಒಂದು ಪ್ರಶ್ನೆಯನ್ನ ಶಿಷ್ಯನೊಬ್ಬ ತನ್ನ ಗುರುವಿಗೇ ಹಾಕಿದ್ದನಂತೆ. ನಾರಾಯಣಾಚಾರ್ಯ ಎನ್ನುವ ಹೆಸರಿನ ಆ ಶಿಷ್ಯನಿದ್ದದ್ದು ವಾದಿರಾಜರಿಗೆ. ಒಳ್ಳೆ ವಿದ್ವಾಂಸನಾಗಿದ್ದ ಆತನಿಗೆ ತನ್ನ ವಿದ್ವತ್ತಿನ ಮದ ಸ್ವಲ್ಪ ಹೆಚ್ಚಾಗೇ ಏರಿ ಯಾರನ್ನೂ ಲೆಕ್ಕಿಸದಂತಾಗಿದ್ದನಂತೆ. ಯಾವುದೋ ಒಂದು ಗಳಿಗೆಯಲ್ಲಿ ವಾದಿರಾಜರಿಗೇ ಬಾಯಿಗೆ ಬಂದಂತೆ ಮಾತನಾಡಿದಾಗ ಅಲ್ಲಿಯವರೆಗೂ ಸುಮ್ಮನಿದ್ದ ವಾದಿರಾಜರು ಅವತ್ತು ಸಿಟ್ಟಿಗೆದ್ದು ಗುರು ಸ್ಥಾನದಲ್ಲಿರುವ ತಮಗೂ ತಮ್ಮ ಗುರುಗಳಾದ ವ್ಯಾಸರಾಜರಿಗೂ ಅವಹೇಳನವಾಗುವಂತೆ ನಡೆದುಕೊಂಡ ನೀನು ಬ್ರಹ್ಮ ರಾಕ್ಷಸನಾಗು ಎಂದು ಶಾಪ ಕೊಟ್ಟರಂತೆ. ಅದಾದ ಮೇಲೆ ಹಂಪಿಯ ಹತ್ತಿರದ ಅಡವಿಯೊಂದನ್ನು ತನ್ನ ಆಶ್ರಯವನ್ನಾಗಿ ಮಾಡಿಕೊಂಡ ಆ ಬ್ರಹ್ಮ ರಾಕ್ಷಸ ಹಾದಿ ಹೋಕರನ್ನೆಲ್ಲ ಈ ಪ್ರಶ್ನೆಯಿಂದ ಇಕ್ಕಟ್ಟಿಗೆ ಸಿಲುಕಿಸಿ ಕಿರುಕುಳ ಕೊಡ ತೊಡಗಿದ್ದನಂತೆ. ಒಂದು ಬಾರಿ ವಾದಿರಾಜರೇ ಆ ದಾರಿಯಾಗಿ ಬಂದಾಗ ಅವರನ್ನೂ ತಡೆದು ಅದೇ ಪ್ರಶ್ನೆ ಕೇಳಿದನಂತೆ. ಆಗ ವಾದಿರಾಜರು ಹೇಳಿದ್ದು, ’ರಂಢಾ ಪುತ್ರ ತ್ವಂ ನ ಸ್ನಾತಃ’ ಅಂತ. ಸಣ್ಣವನಿದ್ದಾಗ ಈ ಕತೆಯನ್ನ ಬೇಲೂರು ಕೇಶವದಾಸರ ’ಕರ್ನಾಟಕ ಭಕ್ತವಿಜಯ’ ಪುಸ್ತಕದಲ್ಲಿ ರಂಢ ಪುತ್ರದ ಕನ್ನಡ ಅನುವಾದ ರಂಡೆ ಮಗನ ಅನ್ನುವದರ ಸಮೇತ ಓದಿದಾಗ ಸಂಸ್ಕೃತದಲ್ಲೂ ಹೀಗೆ ಬೈತಾರ ಅಂತ ಆಶ್ಚರ್ಯವಾಗಿತ್ತು! ರಂಡೆಗಂಡ ಅನ್ನುವ ಬಯ್ಗಳು ಎಷ್ಟೋ ಹಿರಿಯರ ಬಾಯಲ್ಲಿ ಅಚ್ಚೆಯ ಶಬ್ದವಾಗಿ ಪ್ರೀತಿ ತುಂಬಿ ಬಂದಾಗ ಹಾಗೆ ಕರೆಯುತ್ತಿದ್ದದ್ದನ್ನ ಕೇಳಿದ್ದೆ. ಇಲ್ಲಿ ವಾದಿರಾಜರಿಗೇನೂ ಪ್ರೀತಿ ತುಂಬಿ ಬಂದಿರಲಿಕ್ಕಿಲ್ಲ ಅಲ್ಲವೆ?

ಪ್ರಶ್ನೆ ಇದ್ದದ್ದು ಆಷಾಢ ಕಾರ್ತಿಕ ಮಾಘ ವೈಶಾಖ ಮಾಸಗಳಲ್ಲಿ ಯಾರು ತೀರ್ಥ ಸ್ನಾನ ಮಾಡುವದಿಲ್ಲ ಅಂತ. ಅದಕ್ಕೆ ವಾದಿರಾಜರ ಉತ್ತರ ಬ್ರಹ್ಮ ರಾಕ್ಷಸನಾದ ನೀನು ಅನ್ನುವದು. ಆಷಾಢದಿಂದ ಕಾರ್ತಿಕದವರೆಗಿನ ನಾಲ್ಕು ತಿಂಗಳುಗಳಲ್ಲೇ ವ್ಯಾಸರು ವೇದಗಳನ್ನ ಪುನಾರಚಿಸಿ ವೇದ ವ್ಯಾಸರಾದದ್ದಂತೆ. ಕಾರ್ತಿಕದಿಂದ ಮಾಘದವರೆಗಿನ ಕಾಲದಲ್ಲಿ ಬ್ರಹ್ಮ ಸೂತ್ರಗಳನ್ನ ರಚಿಸಿದರಂತೆ, ಮಾಘದಿಂದ ವೈಶಾಖದವರೆಗಿನ ಕಾಲದಲ್ಲಿ ಪುರಾಣಗಳನ್ನ ರಚಿಸಿದರಂತೆ. ಅದರ ನಂತರ ಋಷಿಗಳಿಗೆ ಅವುಗಳ ಉಪದೇಶ ಮಾಡಿದರಂತೆ. ಅದರ ಜ್ಞಾಪಕಾರ್ಥವಾಗಿ, ವೇದ ವ್ಯಾಸರಿಗೆ ಗುರು ನಮನ ಸಲ್ಲಿಸುವದಕ್ಕಾಗಿ ಈ ನಾಲ್ಕು ತಿಂಗಳುಗಳ ತಿಂಗಳು(ಹುಣ್ಣಿಮೆ) ವ್ಯಾಸ ಪೂರ್ಣಿಮೆ ಅನಿಸಿಕೊಳ್ಳುವದಂತೆ. ಅಂತಹ ದಿನಗಳಲ್ಲಿ ತೀರ್ಥ ಸ್ನಾನ ಮಾಡ ಬೇಕು ಎನ್ನುವದೊಂದು ಸಂಪ್ರದಾಯ. ಇಷ್ಟೆಲ್ಲ ಕತೆ ಮತ್ತೆ ಓದಿದ್ದು ಅದೇ ಕರ್ನಾಟಕ ಭಕ್ತವಿಜಯದಲ್ಲಿ.

ಆಷಾಢದ ಇನ್ನೊಂದು ವಿಷಯವೆಂದರೆ ಶುಕ್ಲ ಪಕ್ಷದ ಏಕಾದಶಿ ಕಳೆದು ಆರಂಭವಾಗುವ ಚಾತುರ್ಮಾಸ್ಯ ವೃತ. ಯತಿಗಳು ಹೆಚ್ಚಾಗಿ ಮಾಡುವ ಈ ವೃತದ ದಿನಗಳಲ್ಲಿ ಯತಿಗಳು ಸಂಚಾರ ಮಾಡುವದಿಲ್ಲ. ಯಾವುದಾದರೂ ಒಂದು ಸ್ಥಳದಲ್ಲಿದ್ದು ಅದರ ಸೀಮೆಯನ್ನು ದಾಟಿ ಹೋಗುವದಿಲ್ಲ. ಜೊತೆಗೆ ಪ್ರತಿ ತಿಂಗಳಿಗೊಂದರಂತೆ ನಾಲ್ಕು ಥರದ ಆಹಾರ ವೃತಗಳನ್ನೂ ಆಚರಿಸುತ್ತಾರೆ. ಮೊದಲ ತಿಂಗಳು ಶಾಖ ವೃತ (ಅಂದರೆ ತರಕಾರಿ ಪದಾರ್ಥಗಳು ವರ್ಜ್ಯ), ಎರಡನೇ ತಿಂಗಳು ದಧಿ ವೃತದಲ್ಲಿ ಮೊಸರು ವರ್ಜ್ಯ. ಮೂರನೇ ತಿಂಗಳು ಕ್ಷೀರ ವೃತ, ಹಾಲು ಬಳಸುವಂತಿಲ್ಲ. ಕೊನೆಯದಾಗಿ ನಾಲ್ಕನೇಯ ತಿಂಗಳು ದ್ವಿದಳ ಧಾನ್ಯ ವೃತ (ದ್ವಿದಳ ಧಾನ್ಯಗಳು ವರ್ಜ್ಯ). ಈ ವೃತವನ್ನ ಸಂಸಾರವಂದಿಗರೂ ಮಾಡುತ್ತಾರೆ. ನನ್ನಪ್ಪ ಅಮ್ಮನೂ ಒಂದಷ್ಟು ವರ್ಷ ಮಾಡಿದರು. ಇತ್ತೀಚೆಗೆ ನನ್ನ ದೊಡ್ಡಪ್ಪ ದೊಡ್ಡಮ್ಮ ಮಾಡಲಿಕ್ಕೆ ಶುರು ಮಾಡಿದ್ದಾರೆ. ನಿತ್ಯ ಒಂದೇ ತರಹದ ಅಡಿಗೆ ಉಣ್ಣುವ ನನ್ನಂಥವರಿಗೆ ವೃತದಡಿಗೆ, ವೃತದ ಸಾರು ಪಲ್ಯಗಳು ಹೊಸ ರುಚಿಯೆನಿಸುತ್ತದೆ. ಒಂದೊಂದು ತಿಂಗಳ ಕಾಲ ಹೀಗೆ ಇಂಥದ್ದಿಲ್ಲ ಎನ್ನುವ ಕಂಡೀಷನ್ನಿನಂತೆ ಅಡಿಗೆ ಮಾಡುವದೂ, ಅದನ್ನ ಉಣ್ಣುವದೂ ಒಂದು ಚಾಲೇಂಜೇ ಸರಿ. ಅದಕ್ಕೇ ಅದು ವೃತ ಅಲ್ಲವೇ? ಈ ವೃತದ ಬಗ್ಗೆ ಹೇಳುವ ವಿಕೀಪೀಡಿಯ ಲಿಂಕು ಇಲ್ಲಿದೆ.

ಈ ವೃತ ಮಾಡುವ ಪದ್ಧತಿ ಯಾವಾಗಿನಿಂದ ಶುರುವಾಯಿತು ಎನ್ನುವದು ಗೊತ್ತಿಲ್ಲ. ಮಾಧ್ವ ಯತಿಗಳಲ್ಲಿ ಇದು ಹೆಚ್ಚಿದ್ದಂತೆ ತೋರುತ್ತದೆ, ಅಥವಾ ಮಾಧ್ವ ಯತಿಗಳಲ್ಲಿ ಉಳಿದುಕೊಂಡು ಬಂದಿದೆಯೋ. ವೃತ ನಾಲ್ಕು ತಿಂಗಳದ್ದಾದರೂ ಪ್ರತಿ ಪಕ್ಷವನ್ನ ಮಾಸವನ್ನಾಗಿ ಗಣಿಸಿ ಎರಡು ತಿಂಗಳಿಗೇ ನಾಲ್ಕು ಮಾಸ ಮಾಡಿ ಚಾತುರ್ಮಾಸ್ಯವನ್ನ ಮುಗಿಸುವದು ಸಾಮಾನ್ಯವಾಗಿ ಆಚರಿಸುವ ಪದ್ಧತಿ. ಯತಿಗಳು ಒಂದು ಕಡೆ ಚಾತುರ್ಮಾಸ್ಯ ಕೂಡುವರು ಎಂದರೆ ಅದಕ್ಕೆ ಹೊಂದಿಕೊಂಡಂತೆ ಉಪನ್ಯಾಸಗಳ ಸರಮಾಲೆಯೇ ಏರ್ಪಡುತ್ತದೆ. ಭಾದ್ರಪದ ಶುರುವಾದಂತೆ ಪ್ರೋಷ್ಟಪದಿ ಭಾಗವತ ಉಪನ್ಯಾಸವೂ ಅದರಲ್ಲೇ ಸೇರುವದೇನೋ, ಕೇಳಬೇಕು ಅಪ್ಪ ಅಮ್ಮರನ್ನ ಇನ್ನೊಮ್ಮೆ.

ಕಳೆದ ಬಾರಿ ಭಾರತಕ್ಕೆ ಹೋದಾಗ ನನ್ನ ದೊಡ್ಡಪ್ಪ ದೊಡ್ಡಮ್ಮ ವೃತ ಮಾಡಲು ಶುರು ಮಾಡಿರುವದು ತಿಳಿದು ಅದರ ಬಗ್ಗೆ ಮಾತಾಡುವಾಗ ನಾನು ಹೇಳಿದ್ದು, ’ಬಹುಷಃ ಸ್ವಾಮಿಗಳು ಹೀಗೇ ಒಂದೇ ಕಡೆ ನಾಲ್ಕು ತಿಂಗಳು ಕಳೆಯುವದರಿಂದ ಅವರು ಜೊತೆ ತಂದ ಆಹಾರ ಧಾನ್ಯಗಳನ್ನ ಜಾಣತನದಿಂದ ಬಳಸಲು ಇಂಥದ್ದೊಂದು ವ್ಯವಸ್ಥೆ ಮಾಡಿಕೊಂಡಿದ್ದರೇನೋ’ ಅಂದೆ. ಅದಕ್ಕೆ ನನ್ನ ದೊಡ್ಡಮ್ಮ ಹೇಳಿದ್ದು ಇಲ್ಲ ಅದು ಹಾಗಲ್ಲ ಆಯಾ ಕಾಲಕ್ಕೆ ಯಾವುದರಲ್ಲಿ ಕಸುರು(ದೋಷ) ಇರುವ ಸಂಭವವಿದೆಯೋ ಅಂಥದ್ದನ್ನ ಬಿಡಬೇಕು ಅಂತ ಇಂಥದ್ದೊಂದು ಆಚರಣೆ ಮಾಡಿದ್ದಾರೆ ಅಂದರು. ಅದಕ್ಕೆ ನನ್ನಪ್ಪ ಇಲ್ಲ ಇಂಥದ್ದೊಂದು ಆಚರಣೆ ಬಾಯಿ ಚಪಲವನ್ನ ಕಟ್ಟಲಿಕ್ಕೆ, ಯಾವುದು ಯಾವಾಗ ಸಮೃದ್ಧಿಯಾಗಿ ಸಿಗುವದೋ ಅಂಥ ಕಾಲದಲ್ಲಿ ಯತಿಯಾದವರು ಅವನ್ನ ತೆಗೆದುಕೊಳ್ಳದೇ ಇರುವದು ಇಂದ್ರಿಯ ನಿಗ್ರಹಕ್ಕಾಗಿ ಅಲ್ಲವೇ ಅಂದರು. ಮುಂದೆ ಎತ್ತೆತ್ತಲೋ ಹೋದ ಮಾತು ಹೇಗೆ ಮುಗಿಯಿತೋ ನೆನಪಿಲ್ಲ. ಆಮೇಲೆ ಬೆಂಗಳೂರಿನಲ್ಲಿ ನಾನು ಮೆಚ್ಚುವ ಹಿರಿಯರಿನ್ನೊಬ್ಬರ ಹತ್ತಿರ ಇದೇ ಮಾತನ್ನಾಡುವಾಗ ನಮ್ಮ ಮುಂಚಿನ ವಿಚಾರದ ಹಿನ್ನೆಲೆ ಕೊಟ್ಟಾಗ ಅವರು ಇನ್ನೊಂದು ಕೋನದಿಂದ ಅದನ್ನ ನೋಡಿ ಬಹುಷಃ ಇದು ಅಡುಗೆ ಮಾಡುವವರಿಗೆ ಚಾಲೆಂಜ್ ಇದ್ದಂತೆ, ಬೇಕೇ ಬೇಕು ಅನ್ನುವ ಪದಾರ್ಥಗಳಿಲ್ಲದೇ ಹೇಗೆ ರುಚಿಕಟ್ಟಾಗಿ ಮಾಡುವಿರಿ ನೋಡಿ ಎನ್ನುವದೇ ಆ ಚಾಲೆಂಜ ಎಂದರು. ಒಟ್ಟಿನಲ್ಲಿ ಇದು ಇನ್ನೂ ಬಗೆ ಹರಿದಿಲ್ಲ! ಆದರೆ ವೃತದಡಿಗೆಗೂ ಮೂಲವಾದ ಯತಿಗಳು ಒಂದೆಡೆ ನಾಲ್ಕು ಮಾಸಗಳ ಕಾಲ ನೆಲೆ ಇರುವದು ಯಾಕೆ ಅಂತ ಯೋಚಿಸಿರಲಿಲ್ಲ, ಪ್ರಶ್ನಿಸಿರಲಿಲ್ಲ. ಈಗ ಕರ್ನಾಟಕ ಭಕ್ತ ವಿಜಯದ ’ಆಕಾಮಾವೈ’ ವಿವರಣೆಯ ಹಿನ್ನೆಲೆಯಲ್ಲಿ ಯೋಚಿಸಿದಾಗ ಯತಿಗಳಿಗೆ ಅವರ ಅಧ್ಯಯನಕ್ಕೆ, ಗ್ರಂಥ ರಚನೆಗಳಿಗೆ, ಅವರ ಗುರು ವಂದನೆಗೆ ಅನುಕೂಲಕರವಾಗಲು ಹೀಗೆ ವೇದ ವ್ಯಾಸರು ವೇದಗಳನ್ನ ಪುಸಾರಚಿಸಿದ ನಾಲ್ಕು ತಿಂಗಳು ಒಂದು ಕಡೆ ಇದ್ದು ಸಾಧನೆ ಮಾಡುವ ಸಂಪ್ರದಾಯ ಶುರು ಆಯಿತೇನೋ ಅನಿಸುತ್ತಿದೆ.

Advertisements

3 thoughts on “ಆಷಾಢದ ಸುತ್ತ

  1. ಅನಿಲ್, ನೀವು ಹೇಳಿದಂತೆ, ನಾಲ್ಕು ತಿಂಗಳ ಕಾಲ ಒಂದೇ ಕಡೆ ನೆಲೆಯೂರಿ, ಅಧ್ಯಯನ, ಸಾಧನೆ ಮಾಡಿ ನಂತರದ ಎಂಟು ತಿಂಗಳುಗಳಲ್ಲಿ ಲೋಕಸಂಚಾರ ಮಾಡಿ ಜ್ಞಾನ ಪ್ರಸರಣಕ್ಕೆ ಈ ಪದ್ಧತಿ ಬಂದಿರಬಹುದು.
    ಇನ್ನೊಂದು ಕಾರಣ, ನನ್ನ ಊಹೆಯಂತೆ, ಮಧ್ವ ಯತಿಗಳ ಈ ಚಾತುರ್ಮಾಸ್ಯ ಮಲೆನಾಡಿನಿಂದ ಪಶ್ಚಿಮಕ್ಕಿರುವ ಕರಾವಳಿಯಿಂದಲೇ ಹುಟ್ಟಿರುವ ಕಾರಣ, ಅಲ್ಲಿನ ಮಳೆಗಾಲದಲ್ಲಿ ಸಂಚಾರ ಕಷ್ಟಕರವಾಗಿದ್ದ ಕಾರಣ ಶುರುವಾಗಿದ್ದಿರಬೇಕು. ಹಾಗೇನೇ, ಆಯಾಯ ತಿಂಗಳುಗಳಲ್ಲಿ ಸೂಕ್ತವಾದ ಆಹಾರ-ಪದಾರ್ಥಗಳನ್ನು ಮಾತ್ರ ಬಳಸಿ ಆರೋಗ್ಯ ಸಮತೋಲನಕ್ಕೂ ಗಮನ ಕೊಟ್ಟಿರಬೇಕು.

    • ಮಳೆಗಾಲದ ಬಗ್ಗೆ ಯೋಚಿಸಿರಲಿಲ್ಲ. ಅದನ್ನ ಹೇಳಿದ್ದಕ್ಕೆ ಧನ್ಯವಾದಗಳು ಜ್ಯೋತಿ. ಚಾತುರ್ಮಾಸ್ಯ ಈಗ ಹೆಚ್ಚಾಗಿ ಮಾಧ್ವ ಯತಿಗಳಲ್ಲಷ್ಟೇ ಇದ್ದರೂ ಮಧ್ವಾಚಾರ್ಯರಿಂದಲೇ ಇದು ಶುರುವಾದದ್ದಲ್ಲ ಅನಿಸುತ್ತದೆ. ಸಂಚಾರಕ್ಕೆ ಹೆಚ್ಚಿನ ಅನುಕೂಲಗಳು ಇಲ್ಲದ ಕಾಲದಲ್ಲಿ ಮಳೆಗಾಲದಲ್ಲಿ ಒಂದೆಡೆ ಇರಲು ಇದು ಅನುಕೂಲಕರವಾಗಿದ್ದರೂ ಮಳೆಗಾಲ ಎಷ್ಟರ ಮಟ್ಟಿಗೆ ಈ ವ್ರತಕ್ಕೆ ಮೂಲ ಕಾರಣ ಆಗಿರಬಹುದು ಗೊತ್ತಿಲ್ಲ. ಅದೂ ಒಂದು ಕಾರಣವಾಗಿರುವ ಸಾಧ್ಯತೆ ಖಂಡಿತ ಇದೆ ಅನಿಸುತ್ತದೆ.

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s