ಕರಿಬಡಗಿ-ಕರಿಗಡಬು

ಒಂದೂರಾಗ ಒಬ್ಬ ಬ್ರಾಹ್ಮಣ ಇದ್ದ. ಒಮ್ಮೆ ಆ ಬ್ರಾಹ್ಮಣಗ ಬಾಜೂ ಊರಿನೊಳಗ ಯಾರೋ ಊಟಕ್ಕ ಹೇಳಿರ್ತಾರ. ಅವರ ಮನಿ ಒಳಗ ಅವತ್ತ ಭರ್ಜರಿ ಕರಿಗಡಿಬಿನ ಔತಣ. ಬಿಸಿ ಬಿಸಿ ಕರಿಗಡಬು, ಅದಕ್ಕ ಮ್ಯಾಲೆ ತುಪ್ಪ ಸರಿಯಾಗಿ ಕತ್ತರಸ್ತಾನ. ತಮಾಷೆ ಅಂದರೆ ಆ ಬ್ರಾಹ್ಮಣ ಮೊದಲ ಎಂದೂ ಕರಿಗಡುಬು ತಿಂದಿರೋದಿಲ್ಲ, ಅದರ ಹೆಸರು ಕೂಡ ಕೇಳಿರೋದಿಲ್ಲ. ಇಷ್ಟು ಛೋಲೊ ತಿಂಡಿ ನನ್ನ ಹೆಂಡತಿ ಒಮ್ಮೆನೂ ಮಾಡಿಲ್ಲ ಅಲ್ಲ ಅಂದ್ಕೊತಾನ. ಅಕಿಗೆ ಕೇಳಿ ಮಾಡಿಸಿಗೋ ಬೇಕು ಅಂತ ಅಂದ್ಕೊತಾನ. ಊಟ ಆದ ಮ್ಯಾಲೆ ಎಲೆ ಅಡಿಕೆ ಹಾಕಿಕೊಂಡು, ಆ ಮನಿ ಅವರು ಕೊಟ್ಟ ದಕ್ಷಿಣೆ ತೊಗೊಂಡು ತನ್ನ ಮನಿ ಕಡೆ ಹೋಗೋಕಿಂತ ಮೊದ್ಲು ಆ ಮನಿ ಹೆಣ್ಣು ಮಗಳಿಗೆ ಕೇಳ್ತಾನ, ’ಅದು ಸಿ ಮಾಡಿದ್ರೆಲ್ಲಮ್ಮ ಭಾಳ ಭಾಳ ರುಚಿ ಇತ್ತು. ಅದಕ್ಕ ಏನಂತಾರ? ನನ್ನ ಹೆಂಡತಿಗೂ ಹೇಳಿ ಮಾಡಿಸ್ಕೊಂಡು ತಿನಬೇಕು ಅನಸೇದ.’ ’ಅದಕ್ಕ ಕರಿಗಡಬು ಅಂತಾರ್ರೀ’ ಅಂತ ಆ ಹೆಣ್ಮಗಳು ಹೇಳಿದ್ದನ್ನ ಮರೀ ಬಾರದು ಅಂತ ಹಾದಿ ಉದ್ದಕೂ ಮನಸ್ಸಿನ್ಯಾಗ ’ಕರಿಗಡಬು, ಕರಿಗಡಬು’ ಅಂತ ಅದರ ಧ್ಯಾನ ಮಾಡಿಕೋತ ಹೋಗ್ತಿರ್ತಾನ. ಇದು ಹಳೇ ಕತಿ, ಬ್ರಾಹ್ಮಣ, ಕಾಲ ಎಲ್ಲ ಹಳೇವು. ಸೋ, ಅವ ನಡಕೋತ ಹೊರಟಿದ್ದ ತನ್ನ ಊರಿಗೆ. ಅವಾಗೆಲ್ಲ ಒಂದು ಊರಿಂದ ಇನ್ನೊಂದು ಊರಿಗೆ ಹೋಗೊ ಬೇಕಾರ ನಡುವ ಹಳ್ಳ ಪಳ್ಳ ಬಂದರ ಅವನ್ನ ಈಜಿಕೊಂಡು, ಇಲ್ಲ ನೀರು ಅಷ್ಟು ಇದ್ದಿದ್ದಿಲ್ಲ ಅಂದರ ಹಂಗ ಹಳ್ಳದಾಗ ನಡಕೊಂಡು ದಾಟಿತಿದ್ರು ಅಂತ ಕೇಳೀನಿ. ಈ ಬ್ರಾಹ್ಮಣನ ಊರು ಬರೋದಕ್ಕ ಮೊದ್ಲು ಒಂದು ಸಣ್ಣ ಹಳ್ಳ ಬರತಿತ್ತಂತ; ಬಹುಷಃ ಒಂದು ಸಣ್ಣ ಕಾಲುವೆ ಇದ್ದಷ್ಟು ಅಗಲ ಇತ್ತೊ ಏನೋ, ಹಂಗೆ ಈತನೂ ಹನುಮಂತನ ಭಕ್ತ ಇದ್ದಿರಬೇಕು, ಆ ಹಳ್ಳನ ಹಾರಬೇಕು ಅನಿಸ್ತಂತ ಅತಗ. ಒಂದು ದಂಡಿ ಮ್ಯಾಲೆ ನಿಂತು ಹಾರಲಿಕ್ಕೆ ತಯಾರಾಗಿ ಹನುಮಂತ ಜಿಗಿದಂಗ ಠಣ್ ಅಂತ ಜಿಗದು ಒಂದ ನೆಗೆತಕ್ಕ ಆ ದಂಡಿ ಮುಟ್ಟಿದ್ನಂತ. ಆದ್ರ ಹಳ್ಳ ಹಾರೋ ಕಡೆ ಲಕ್ಷ ಹೋಗಿದ್ದಕ್ಕ ಅವ ಜಪಿಸ್ಲಿಕತ್ತಿದ್ದ ಕರಿಗಡಬಿನ ಮಂತ್ರ ’ಕರಿಬಡಿಗಿ ಕಕರಡಬಿ’ ಅಂತ ಆಗಿ ಹೋಗಿದ್ದು ಗೊತ್ತೇ ಆಗಲಿಲ್ಲ ಅವಂಗ.

ಮನಿಗೆ ಬಂದ, ಬಂದವನೇ ಹೆಂಡತಿಗೆ ಹೇಳಿದ್ನಂತ ’ಏನ, ಅವರ ಮನ್ಯಾಗ ಕರಿಬಡಗಿ ಕಕರಡಬಿ ಮಾಡಿದ್ದರು ಇವತ್ತ. ಭಾಳ ಛೊಲೊ ಆಗಿತ್ತು, ನೀನು ಮಾಡು ನಾಳೆ.’ ಹೆಂಡತಿಗೆ ತಿಳೀಲಿಲ್ಲ. ಏನ್ರಿ ಹಂಗ ಅಂದರ ಅಂಥ ಹೆಸರಿನ ತಿಂಡಿ ನಾನು ಕೇಳೆ ಇಲ್ಲ ಅಂದ್ಲು. ಅದೇನ, ಕರಿಬಡಗಿ ನಾಳೆ ಮಾಡು, ಅಂದ. ಪಾಪ ಹೊಸ ಲಗ್ನ ಆಗಿತ್ತೋ ಏನೋ ಗಂಡನ್ನ ಮತ್ತಿಷ್ಟು ಕೇಳಲಿಕ್ಕೆ ಹೆದರಿ ಸುಮ್ನಾದ್ಳು. ಮರು ದಿನ ಈ ಬ್ರಾಹ್ಮಣ ಹೊರಗ ಹೋಗೋ ಮುಂಚೆ ಮತ್ತ ನೆನಪಿಸಿ ಹೇಳಿದ, ಮರಿ ಬ್ಯಾಡ, ಕರಿಬಡಗಿ ಮಾಡು ಇವತ್ತ ಅಂತ. ಹೆಂಡತಿ ವಿಚಾರ ಮಾಡಿ ಮಾಡಿ ಕಡಿಕೆ ಒಂದು ಕೋಲಿಗೆ ಡಾಂಬರ್ ಹಚ್ಚಿ ಕರಿ ಬಡಿಗಿ ಮಾಡಿ ಮೂಲ್ಯಾಗ ಇಟ್ಳು. ಮಧ್ಯಾನ್ಹ ಬಂದ ಬ್ರಾಹ್ಮಣ ಹಸಕೊಂಡು. ಬಂದವನ ಎಲ್ಲೆದ ಕರಿಬಡಗಿ ಕೊಡು ಅಂದ. ಪಾಪ ಹೆಂಡತಿ ಮೂಲ್ಯಾಗ ಮಾಡಿ ಇಟ್ಟಿದ್ದ ಕರಿ ಬಡಿಗೆ ತಂದು ಕೊಟ್ಳು. ಅದೇನೋ ಹೇಳ್ತಾರಲ್ಲ ಹಸ್ತ ಬ್ರಾಹ್ಮಣನ್ನ ತಡವಬಾರದು ಅಂತ, ಹಂಗ ಈ ಬ್ರಾಹ್ಮಣಗ ಕೇಂಡಾಮಂಡಲ ಸಿಟ್ಟು ಬಂದು ಅದೆ ಬಡಗಿ ತೊಗೊಂಡು ಪಾಪ ಹೆಂಡತಿಗೆ ಬಾರಿಸಿಬಿಟ್ಟ. ಮೊದ್ಲ ಹೇಳಿದ್ನಲ್ಲ ಇದು ಹಳೆ ಕಾಲದ ಕತಿ ಅಂತ. ಈಗಾಗಿದ್ದರ ಹಂಗೆಲ್ಲ ಮಾಡ್ತಿದ್ದಿಲ್ಲೊ ಏನೊ :). ಇರಲಿ ಅಂತು ಅವನ ಹೆಂಡತಿ ಹೊಡ್ತ ತಿಂದು ಮೈ ಎಲ್ಲ ಬಾಸುಂಡಿ ಬಂತು. ಇವರ ಗದ್ಲ ಕೇಳಿ ಬಾಜೋ ಮನಿ ಅಜ್ಜಿ ಬಂದ್ಲು. ಏನೋ ಅದು ಯಾಕ ಹೋಡಿಲಿಕತಿಯೋ ಹೆಂಡತಿಗೆ ಅನಕೋತ ಬಂದಕಿಗೆ ಈಕಿ ಮೈಮೇಲೆ ಎದ್ದ ಬಾಸುಂಡಿ ನೋಡಿ, ’ಛೆ ಛೆ ಛೆ ಏನೊ ಇದು, ಒಳ್ಳೆ ಕರಿಗಡಬು ಬಾತಂಗ ಬಾತದಲ್ಲೊ ಮೈ ಎಲ್ಲ. ಹೀಂಗs ಹೊಡೆಯೋದ?’ ಅಂತಾಳ.

ಕರಿಬಡಗಿ ಅಂದರೇನು ಅಂತ ಹೇಳಲಾರದ ಬ್ರಾಹ್ಮಣ ಛಂಗಂತ ಹಾರಿ ಹೇಳ್ತಾನ, ’ಹಾ! ಅದೇ ನೋಡು ನಾನು ಮಾಡು ಅಂತ ಹೇಳಿದ್ದು. ಮಾಡಬಾರದ ?’

ಬಹಳ ಹಿಂದೆ ಕೇಳಿದ್ದ ಕತೆ. ಸ್ವಲ್ಪ ದಿವಸದ ಕೆಳಗೆ ನಾನೂ ಕರಿಗಡಬು ತಿಂದೆ. ನನ್ನ ಹೆಂಡತೀನೇ ಮಾಡಿದ್ಲು ಬಿಡ್ರಿ. ಮತ್ತ ಹೇಳಿದ್ನಲ್ಲ ಕತಿ ಹಳೇ ಕಾಲದ್ದ ಅಂತ! ಏನೇನೋ ಯೋಚ್ನೆ ಮಾಡ ಬ್ಯಾಡ್ರಿ.

ಕರಿಗಡಬು ತಿಂದು ಇಷ್ಟು ದಿವಸ ಆದ ಮೇಲೆ ಯಾಕೊ ಈ ಕತೆ ನೆನಪಾಯಿತು. ಪೂರ್ತಿ ನೆನಪಿರಲಿಲ್ಲ. ಇವತ್ತ ನಮ್ಮಪ್ಪನ ಜೊತೆ ಮಾತಾಡೊವಾಗ ಕೇಳಿದೆ. ಮೊದಲು ಸಣ್ಣವನಿದ್ದಾಗ ಕೇಳಿದಾಗ ಹೇಳಿದಷ್ಟೇ ಆಸ್ಥೆಯಿಂದ ಹೇಳಿದ್ರು.

ಅಷ್ಟಕ್ಕೂ ನನ್ನ ಹೆಂಡತಿ ಕರಿಗಡಬು ಮಾಡಿದ್ದು ಯಾಕೆ ? ನಾಳೆ ಹೇಳ್ತೀನಿ 🙂

(ಎಲ್ಲಾದರೂ ಕರಿಗಡಬಿನ ಚಿತ್ರ ಸಿಗತದೇನೋ ಅಂತ ಅಂತರಜಾಲ ಜಾಲಾಡಿದಾಗ ಈ ಕತಿ ಇನ್ನೊಂದು ರೂಪ ಸಿಕ್ತು ಇಲ್ಲಿ. ನೋಡ್ರಿ ಅಲ್ಲೇ ಕರಿಗಡುಬಿನ ಚಿತ್ರನೂ ಅದ)

Advertisements

One thought on “ಕರಿಬಡಗಿ-ಕರಿಗಡಬು

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s