ಹಳೇ ಪುಸ್ತಕಗಳು…

ಇವತ್ತು ಸಾಂಟಾಕ್ಲಾರಾ ಲೈಬ್ರರಿಯಲ್ಲಿ ಹಳೇ ಪುಸ್ತಕಗಳ ಮಾರಾಟವಿತ್ತು. ದೊಡ್ಡ ಬ್ಯಾಗ್ ಒಂದರಲ್ಲಿ ಹಿಡಿಸಿದಷ್ಟು ಪುಸ್ತಕ ತುಂಬಿಕೊಳ್ಳಬಹುದು. ಬೆಲೆ ೫ ಡಾಲರ್ ಮಾತ್ರ. ಆಗಾಗ ನಡೆಯುತ್ತಿರುತ್ತದೆ ಇಂತಹ ಮಾರಾಟ.  ಒಂದಷ್ಟು ಅದೃಷ್ಟವಿದ್ದರೆ ಒಳ್ಳೊಳ್ಳೆ ಪುಸ್ತಕಗಳೇ ಸಿಗಬಹುದು.  ಹೋಗಿ ಒಂದು ಅರ್ಧ ಬ್ಯಾಗ್ ಭರ್ತಿ ಪುಸ್ತಕಳನ್ನು ಹೊತ್ತು ಕೊಂಡು ಬಂದೆ.  ಸುಲಭದಲ್ಲಿ ಹರಿಯಲಾಗದ ದಪ್ಪ ರಟ್ಟಿನ ಒಂದಷ್ಟು ಪುಸ್ತಕಗಳನ್ನ ನನ್ನ ಮಗನಿಗಾಗಿ ತಂದರೆ ನನ್ನ ಓದಿಗೆ ತಂದದ್ದು ಅರ್ನೆಸ್ಟ್ ಹೆಮಿಂಗ್ವೇಯ ಸಣ್ಣ ಕತೆಗಳ ಸಂಗ್ರಹ, ಬಹಳ ದಿನಗಳಿಂದ ಓದಬೇಕು ಎಂದುಕೊಂಡಿದ್ದ ‘ಓ ಜೇರುಸಲೇಮ್’ ಹಾಗೂ ಈ ಹಿಂದೆ ಎರಡು ಬಾರಿ ಕೊಂಡು ಬೇರೆಯವರಿಗೆ ಕೊಟ್ಟಿದ್ದ  ‘ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್’.  ವಿಕ್ಟರ್ ಫ್ರಾಂಕೆಲ್ಲನ ಪುಸ್ತಕವನ್ನು ಓದಿದ್ದೇನೆ ಈ ಮೊದಲು. ಆದರೂ ಮ್ಯಾನ್ಸ್ ಸರ್ಚ್ ಫಾರ್ ಮೀನಿಂಗ್ ಪುಸ್ತಕ ನನ್ನ ಸಂಗ್ರಹದಲ್ಲಿ ಇರಬೇಕು ಅನಿಸಿದ್ದರಿಂದ ಮತ್ತೆ ಕೊಂಡುಕೊಂಡೆ. ಒಂದು ಗಂಟೆಗೂ ಹೆಚ್ಚು ಕಾಲ ಆ ಹಳೆ ಪುಸ್ತಕಗಳ ಮಧ್ಯೆ ಅಡ್ಡಡಿದರೂ ಒಂದು ಬ್ಯಾಗ್ ಭರ್ತಿ ಮಾಡಿಕೊಳ್ಳುವಷ್ಟು ಪುಸ್ತಕ ಸಿಗಲಿಲ್ಲವಲ್ಲ ಅನಿಸಿತು ಆದರೆ.

೩-೪ ತಿಂಗಳ ಹಿಂದೆ ಬೆಂಗಳೂರಿನಲ್ಲಿ ತಿರುಗಾಡುತ್ತಿದ್ದಾಗ ನೋಡಿದ ಹಳೇ ಪುಸ್ತಕಗಳ ಮಾರಾಟಗಾರರು ನೆನಪಾದರು. ಅವತ್ತೊಂದು ದಿವಸ ಹಳೇ ಪುಸ್ತಕವೊಂದನ್ನು ಕೊಂಡು ಹಾಗೇ ಹೊಸ ಪುಸ್ತಕಗಳನ್ನೂ ಹುಡುಕಿಕೊಂಡು ಹೋದಾಗಿನ ಅನುಭುವವನ್ನು ಬರೆದಿಟ್ಟುಕೊಂಡಿದ್ದೆ, ಈಗ ಹಾಕುತ್ತಿದ್ದೇನೆ ಇಲ್ಲಿ ಕೆಳಗೆ.

ವರ್ಷಗಳಾಗಿತ್ತು ಬೆಂಗಳೂರಿನ ಬೀದಿಗಳಲ್ಲಿ, ರಸ್ತೆ ಬದಿಯಲ್ಲಿ ಒಟ್ಟಿರುವ ಪುಸ್ತಕಗಳ ಸಾಲುಗಳಲ್ಲಿ ಕಣ್ಣು ಹಾಯಿಸುತ್ತ ಅಡ್ಡಾಡಿ. ಇವತ್ತು ಅಂತಹದೊಂದು ‘ಅಂಗಡಿ’ಯಿಂದ ಡಿ.ಆರ್.ನಾಗರಾಜರ ‘ಸಾಹಿತ್ಯ ಕಥನ’ ಪುಸ್ತಕವನ್ನು ಕೊಂಡುಕೊಂಡೆ (ಒಂದಷ್ಟು ಚೌಕಾಶಿಯೂ ಮಾಡಿದೆ ಅನ್ನಿ 😉 ). ಆಸಕ್ತಿ ಹುಟ್ಟಿಸುವ ಪ್ರಬಂಧಗಳಿವೆ ಅನಿಸುತ್ತದೆ. ಓದಬೇಕು ನಿಧಾನವಾಗಿ.

ಹಾಗೇ ಮುಂದುವರೆದು ನಾನು ಕೇಳಿದಂತೆ ಬಹಳ ಒಳ್ಳೇ ಹೆಸರುಳ್ಳ ಪುಸ್ತಕದಂಗಡಿಯನ್ನು ಹೊಕ್ಕೆ. ಅಲ್ಲಿ ಹೆಕ್ಕಿಕೊಂಡ ಪುಸ್ತಕಗಳು, ನೇಮಿಚಂದ್ರರ ಇಲ್ಲಿಯವರೆಗಿನ ಕಥೆಗಳು, ಜೋಗಿ ಬರೆದ ಕಥೆಗಳು ಹಾಗೂ ವಸುಧೇಂದ್ರರ ನಮ್ಮಮ್ಮ ಅಂದ್ರೆ ನನಗಿಷ್ಟ. ನೇಮಿಚಂದ್ರರ ಯಾದ್ ವಶೇಮ್ ಮತ್ತು ಪಾವೆಂ ಅವರ ಪದಾರ್ಥ ಚಿಂತಾಮಣಿ ಹುಡುಕಿದೆ, ಇರಲಿಲ್ಲ. ಯಾದ್ ವಶೇಮ್ ತರಿಸಿ ಕೊಡುತ್ತಾರಂತೆ ಹಾಗೂ ಪದಾರ್ಥ ಚಿಂತಾಮಣಿ ಬಗ್ಗೆ ವಿಚಾರಿಸುತ್ತಾರಂತೆ. ಮತ್ತೆ ಫೋನ್ ಮಾಡಬೇಕು.

ಅಂಗಡಿ ಮಾಲೀಕರು ಬಿಲ್ ಬರೆಯುತ್ತಿದ್ದಾಗ ಅವರನ್ನು ಕೇಳಿದೆ, ‘ಕನ್ನಡದಲ್ಲಿ ಹೊಸತಾಗಿ ಬರುತ್ತಿರುವ ಲೇಖಕರ ಪುಸ್ತಕಗಳು ಹೇಗೆ ಮಾರಾಟ ಆಗುತ್ತಿವೆ ? ಯಾರು ಹೊಸಬರಲ್ಲಿ ಪ್ರಮುಖರು?”

ಆದಕ್ಕೆ ಅವರು ಹೇಳಿದ್ದು ಜೋಗಿ ಕಥೆ ಚನ್ನಾಗಿದೆ, ಚೇತನ ತೀರ್ಥಹಳ್ಳಿ ಅವರ ಭಾಮಿನಿ ಷಟ್ಪದಿ ಹೀಗೆ ಕೆಲವೊಂದು ಬರ್ತಿದೆ. ಆದರೆ ಬಹಳ ಸತ್ವಶಾಲಿ ಅನಿಸುವಂತಹದ್ದು ಬರುವದು ನಿಂತು ಬಹಳ ಕಾಲವಾಗಿದೆ.  ಭೈರಪ್ಪನವರೊಬ್ಬರು ಅಂತಹದನ್ನ ಈಗಲೂ ಬರೀತಾರೆ ಆದರೆ ಅವರ ಕಾದಂಬರಿಗಳು ೩-೪ ವರ್ಷಕ್ಕೆ ಒಂದರಂತೆ ಬರುತ್ತೆ. ಅದು ಬಿಟ್ಟರೆ ಉಳಿದದ್ದೆಲ್ಲ ಹೀಗೆ. ಕನ್ನಡ ಪುಸ್ತಕಗಳು ಈಗ ಹೆಚ್ಚು ಕಡಿಮೆ ಲೈಬ್ರರಿಗಳಿಗಾಗಿ ಮಾತ್ರ ಪ್ರಿಂಟ್ ಆಗುವಂತೆ ಆಗಿವೆ.  ನೇರವಾಗಿ ಸಾಹಿತಿಗಳಿಗೆ ಇದನ್ನು ಹೇಳಿದರೆ ನಿಮ್ಮ ಅಂಗಡಿಯಲ್ಲಿ ಮಾರಾಟ ಆಗಲಿಲ್ಲ ಅಂದರೆ ಪುಸ್ತಕ ಎಲ್ಲೂ ಮಾರಾಟವೇ ಆಗಲಿಲ್ಲ ಅಂತ ಅರ್ಥವೇ ಅಂತೆಲ್ಲ ಹೇಳುತ್ತಾರೆ, ಅವರಿಗೆ ಸಿಟ್ಟೂ ಬರಬಹುದು!

ಕನ್ನಡ ಪುಸ್ತಕಗಳ ಸ್ಥಿತಿ ನಿಜಕ್ಕೂ ಅಷ್ಟು ಕೆಳಗಿಳಿದಿದೆಯೆ ಎಂದು ಯೋಚಿಸುತ್ತ, ಕೊಡಬೇಕಾದ ೨೫೦ ರೂ ಕೊಟ್ಟು ಹೊರ ಬಂದೆ.

ಅಲ್ಲಿಂದ ಬಂದಮೇಲೆ ನಾನು ಕೊಂಡ ಪುಸ್ತಕಗಳನ್ನು ಓದಿದ ಮೇಲೆ, ಓದಬೇಕು ಅನಿಸಿದ ಇನ್ನಷ್ಟು ಪುಸ್ತಕಗಳ ಬಗ್ಗೆ ವಿಚಾರಿಸಿದ ಮೇಲೆ ನನಗೇನೂ ಹಾಗನ್ನಿಸಲಿಲ್ಲ . ಹಾಗೆ ನೋಡಿದರೆ ಭೈರಪ್ಪನವರ ಆವರಣವೇ ಅಷ್ಟು ತೃಪ್ತಿ ಕೊಡಲಿಲ್ಲ. ಓದಿದ ಮೇಲೆ ಏನೋ missing ಅನಿಸಿದೆ. ನೇಮಿಚಂದ್ರರ ಒಂದು ಕತೆ ‘ಬದುಕು ಕಾಯುವದಿಲ್ಲ’ ಬಗ್ಗೆ ಇಲ್ಲಿ ಬರೆದುಕೊಂಡಿದ್ದೆ. ಅವರ ಯಾದ್ ವಶೇಮ್  ಶುರುವಾತಿನಲ್ಲಿ ಒಂದಿಷ್ಟು ಓದಿಸಿಕೊಳ್ಳಲಿಲ್ಲ ಅನಿಸಿದರೂ ಮುಗಿಸುವಾಗ ಇಷ್ಟ ಆಯಿತು. ವಸುಧೇಂದ್ರರ ನಮ್ಮಮ್ಮ ಅಂದ್ರೆ ನನಗಿಷ್ಟ ತುಂಬಾನೇ ಇಷ್ಟ ಆಯಿತು. ಅದರ ಬಗ್ಗೆ ಇನ್ನೊಮ್ಮೆ ಬರೆಯಬೇಕು. ಜೋಗಿ ಕತೆಗಳು ಗಾತ್ರದಲ್ಲಿ ಚಿಕ್ಕವಾದರೂ ದೊಡ್ಡ ಪಂಚ್ ತುಂಬಿರುತ್ತವೆ. ನಾನು ಇತ್ತೀಚೆಗೆ ಓದಿದ, ಕೇಳಿದ ಕೆಲವೇ ಪುಸ್ತಕಗಳಿಂದ ಕನ್ನಡದ ಪುಸ್ತಕ ಲೋಕವನ್ನು ಅಳೆಯಲಾಗದು. ಆದರೂ ಇಂಟರ್ನೆಟ್ಟಿನಲ್ಲಿ ಕನ್ನಡದ ಸಾರಸ್ವತ ಲೋಕ  ಅನಾವರಣಗೊಳ್ಳುತ್ತಿರುವದನ್ನು ನೋಡಿದರೆ ಕನ್ನಡದಲ್ಲಿ ಪುಸ್ತಕಗಳ, ಲೇಖಕರ ಕೊರತೆಯಾಗಬಹುದು ಎಂದೇನೂ ಅನಿಸಿಲ್ಲ.   ಬಹಳ simplified observation ಆಯ್ತೇ ಏನೋ ಗೊತ್ತಿಲ್ಲ 🙂

Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s