ನಮಾಮಿ ದೂತಂ ರಾಮಸ್ಯ…

ಇಂದು ಮಾಘ ಮಾಸ ಶುಕ್ಲ ಪಕ್ಷದ ಪ್ರತಿಪದೆ. ಇಂದಿನಿಂದ ಮುಂದಿನ ೯ದಿನ ಮಧ್ವ ನವರಾತ್ರಿ. ಗುಲ್ಬರ್ಗ ಜಿಲ್ಲೆಯ ಜೇವರ್ಗಿ ಹತ್ತಿರದ ಯಡ್ರಾಮಿ, ಅದರ ಹತ್ತಿರದ ಕಾಚಾಪುರ ಕ್ರಾಸ್, ಅಲ್ಲಿಂದ ೨ ಕಿ.ಮಿ. ಒಳಗೆ ಕಾಲುಹಾದಿಯ ದುಮ್ಮಾದ್ರಿಯಲ್ಲಿರುವ ನಮ್ಮ ಮನೆ ದೇವ ವರಹಳ್ಳೇರಾಯನ ಗುಡಿಯಲ್ಲೂ ಮಧ್ವ ನವರಾತ್ರಿ ಆಚರಣೆ ಶುರುವಾಗಿರುತ್ತದೆ. ಮೊದಲು ಮಧ್ವನವಮಿಯೊಂದು ದಿನ ಮಾತ್ರ ಆಗುತ್ತಿದ್ದ ಹಬ್ಬ ಈಗ ೯ದಿನವೂ ಆಚರಣೆಯಾಗುತ್ತದೆ ಅನಿಸುತ್ತದೆ. ಮುಂದಿನ ೯ ದಿನಗಳಲ್ಲಿ ನನ್ನ ನೆನಪಿನಲ್ಲಿರುವ ಕೆಲವು ಹನುಮನ ದೇವಾಲಗಳ ಬಗ್ಗೆ ಬರೆಯಬೇಕು ಎಂದುಕೊಂಡಿರುವೆ. ಇವತ್ತಿನ ಹನುಮ ಹಂಪಿಯ ಚಕ್ರತೀರ್ಥದ ದಡದಲ್ಲಿ ನೆಲೆಸಿರುವ ಯಂತ್ರೋದ್ಧಾರಕ ಪ್ರಾಣ ದೇವ (ಅಥವಾ ಯಂತ್ರೋದ್ಧಾರ).

ವ್ಯಾಸರಾಯರು ಪ್ರತಿಷ್ಠಾಪಿಸಿದ ಯಂತ್ರೋದ್ಧಾರನ ಕತೆ ಬಹುಷಃ ಎಲ್ಲರಿಗೂ ಗೊತ್ತಿದ್ದದ್ದೆ, ಆದರೂ ಮತ್ತೊಮ್ಮೆ..

ಒಮ್ಮೇ ವ್ಯಾಸರಾಯರು ಪೂಜೆಗಾಗಿ ಹಂಪಿಯಲ್ಲಿನ ದೊಡ್ಡ ಬಂಡೆಯೊಂದರ ಮೇಲೆ ಹನುಮಂತನ ಚಿತ್ರವೊಂದನ್ನು ಬಿಡಿಸಿದರಂತೆ. ಮರುಕ್ಷಣದಲ್ಲಿ ಆ ಚಿತ್ರ ಜೀವಂತ ಹನುಮ (ಮಂಗ) ನಾಗಿ ಛಂಗನೆ ನೆಗೆದು ಹಾರಿ ಹೋಯಿತಂತೆ. ಛಲ ಬಿಡದ ವ್ಯಾಸರಾಯರು ಮತ್ತೆ ಚಿತ್ರ ಬರೆದರಂತೆ ಮತ್ತೆ ಜೀವ ಪಡೆದ ಮಂಗ ಹಾರಿ ಹೋಯಿತಂತೆ. ಹೀಗೆ ೧೨ ಬಾರಿ ಆಯಿತಂತೆ. ಕಡೆಗೆ ವ್ಯಾಸರಾಯರು ಮತ್ತೊಂದು ಚಿತ್ರ ಬರೆದೆ ಅದರ ಸುತ್ತ ಯಂತ್ರವೊಂದನ್ನು ಬರೆದು, ಅದಕ್ಕೆ ಮತ್ತೆ ಕೋತಿಗಳ ಬಂಧವನ್ನೂ ಬರೆದರಂತೆ. ಅಷ್ಟು ಮಾಡಿದ ನಂತರ ಹನುಮ ಹಾರಿ ಹೋಗದೇ ಹಾಗೇ ಕುಳಿತನಂತೆ!!

ಯಂತ್ರೋದ್ಧಾರ

ಯಂತ್ರೋದ್ಧಾರಕ ಪ್ರಾಣದೇವರು - ಹಂಪಿ

ಕತೆ ಏನಾದರಿರಲಿ, ಮುಂದೆ ಗೋಪಾಲದಾಸರು ಕೇಳುತ್ತಾರೆ, ಇದು ಏನಪ್ಪ ನಿನ್ನ ಚರಿತೆ ಯಂತ್ರೋದ್ಧಾರ ಹೀಗೆ ಯೋಗಾಸನದಲ್ಲಿ ಕುಳಿತುಬಿಟ್ಟೆ ಅಂತ.

ವ್ಯಾಸರಾಯರಿಂದ, ಪುರಂದರ ದಾಸರಿಂದ ಪೂಜಿಸಿಕೊಂಡ ಯಂತ್ರೋದ್ಧಾರಕನಿಗೆ ಮಾಧ್ವರಲ್ಲಿ ಬಲು ಮಹತ್ವ. ನಾಡಿನ ತುಂಬೆಲ್ಲ ವ್ಯಾಸರಾಯರು ನೂರಾರು ಹನುಮಂತನ ಪ್ರತಿಷ್ಠಾಪನೆ ಮಾಡಿದ್ದರೂ (ಬಾಲಕ್ಕೆ ಗಂಟೆ ಇರುವ ಪುರಾತನ ಹನುಮನ ಮೂರ್ತಿಗಳೆಲ್ಲ ವ್ಯಾಸರಾಯರ ಪ್ರತಿಷ್ಟಾಪನೆಯವು ಎನ್ನುತ್ತಾರೆ) ಈತ ಅವರಲ್ಲೆಲ್ಲ ಅಗ್ರಗಣ್ಯ.

ನಾವು ಚಿಕ್ಕವರಿರುವಾಗ ಯಂತ್ರೋದ್ಧಾರನ ಫೋಟೊ ಒಂದನ್ನು ಇಟ್ಟುಕೊಂಡು, ವ್ಯಾಸರಾಯರು ಬರೆದೆ ನಮಾಮಿ ದೂತಂ ರಾಮಸ್ಯ, ಹೇಳುತ್ತ ಮನೆಯಲ್ಲೇ ೫ ಪ್ರದಕ್ಷಿಣೆ ಹಾಕಿ  ದಿನವೂ ಅಂತ ಹೇಳುತ್ತಿದ್ದರು ದೊಡ್ಡವರು. ಒಂದಷ್ಟು ದಿನ ಹಾಕಿದೆವು ಕೂಡ. ಆಮೇಲೆ ಯಾವಾಗಲೋ ನಿಲ್ಲಿಸಿ ಬಿಟ್ಟೆವು.  ಪ್ರತಿ ಡಿಸೆಂಬರಿನಲ್ಲಿ ಬಹುಷಃ ಯಂತ್ರೋದ್ಧಾರನ ದೊಡ್ಡ ಉತ್ಸವವಾಗುತ್ತದೆ. ೧೬-೧೭ ವರ್ಷಗಳ ಹಿಂದೆ ಒಮ್ಮೆ ಹೋಗಿದ್ದ ನೆನಪು. ಬಹುಷಃ ಒಂಭತ್ತನೆ ತರಗತಿಯಲ್ಲಿದ್ದಿರಬೇಕು ಆಗ. ಡಿಸೆಂಬರ್ ಚಳಿ, ಅಲ್ಲೇ ಹತ್ತಿರದ ತುಳಸಿ ವನ (ಲಕ್ಷ ತುಳಸಿ ಅರ್ಚನೆ ಇದ್ದಂತೆ ನೆನಪು; ತುಳಸಿ ತರುವದಕ್ಕೆ ಕೈ ಜೋಡಿಸಲು ಹೋಗಿರಬೇಕು), ಸಾಮೂಹಿಕ ಪವಮಾನ ಹೋಮ, ಹೋಮ ಕುಂಡಗಳು ಅಂತೆಲ್ಲ ಅಸ್ಪಷ್ಟ ನೆನಪಿದೆ. ಆದರೆ ಯಂತ್ರೋದ್ಧಾರನ ಮೂರ್ತಿಯನ್ನು ನೋಡಿದ ನೆನಪೇ ಆಗಲೊಲ್ಲದು ಎಷ್ಟು ನೆನಪು ಮಾಡಿಕೊಂಡರೂ! ಮತ್ತೊಮ್ಮೆ ಹೋಗಬೇಕು.  ಯಂತ್ರೋದ್ಧಾರನನ್ನೂ, ಹಂಪೆಯ ಕಲ್ಲಿನ ರಥವನ್ನೂ, ವಿಜಯವಿಠ್ಠಲನ ಗುಡಿಯನ್ನೂ, ವಿರೂಪಾಕ್ಷನ ಗುಡಿಯನ್ನೂ, ಅದರಲ್ಲಿಯ ಪಿನ್-ಹೋಲ್ ಕ್ಯಾಮರಾವನ್ನೂ ನೋಡಿ, ಪುರಂದರ ದಾಸರ ಮಂಟಪದಲ್ಲಿ ಕುಳಿತು ಅವರ ಕೆಲವು ರಚನೆಗಳನ್ನು ಕೇಳಬೇಕು.  ತುಂಗಭದ್ರೆಯ ನೀರಿನಲ್ಲಿ, ದಡದಲ್ಲಿ ಆಡಬೇಕು. ಸೀತೆ ಸೆರಗು, ವಾಲಿ ಸುಗ್ರೀವರ ಗುಹೆ, ಕೋದಂಡ ರಾಮನ ದೇವಸ್ಥಾನವನ್ನೆಲ್ಲ ನೋಡಬೇಕು. ಅವೆಲ್ಲವನ್ನೂ ನೆನಪಿನಲ್ಲಿ, ಕ್ಯಾಮರಾ ಕಣ್ಣಲ್ಲಿ ಹೊತ್ತುಕೊಂಡು ಬರಬೇಕು. 

ಕೊನೆಯದಾಗಿ ಯಂತ್ರೋದ್ಧಾರನ ಬಗ್ಗೆ ಇನ್ನೊಂದು ಕತೆ 🙂
ಪುರಂದರ ದಾಸರು ನಿತ್ಯ ಯಂತ್ರೋದ್ಧಾರನಿಗೆ ನೈವೇದ್ಯ ತೆಗೆದುಕೊಂಡು ಹೋಗುತ್ತಿದ್ದರಂತೆ. ಒಮ್ಮೆ ದೇಹಾಲಸ್ಯದ ಕಾರಣದಿಂದ ತಮ್ಮ ಕಿರಿಯ ಮಗ ಮಧ್ವಪತಿಗೆ ಕಳಿಸಿದರಂತೆ. ಮಧ್ವಪತಿ ನೈವೇದ್ಯ ತೆಗೆದುಕೊಂಡು ಹೋಗಿ ಹನುಮಪ್ಪನ ಮುಂದೆ ಇಟ್ಟು, ನಿನಗೆ ನೈವೇದ್ಯವಿದು, ತೆಗೆದುಕೋ, ತಿನ್ನು ಎಂದು ಅರ್ಪಿಸಿದನಂತೆ. ನಂತರ ಎಷ್ಟೊ ಹೊತ್ತು ಹನುಮ ತಿನ್ನದೇ ಇದ್ದಾಗ ನಮ್ಮಪ್ಪ ಕೊಟ್ಟರೆ ತಿನ್ನುವೆ, ನಾನು ಕೊಟ್ಟರೆ ತಿನ್ನುವದಿಲ್ಲವೇಕೆ ಎಂದು ಹಟ ಮಾಡಿದನಂತೆ. ಬಾಲಕನ ಮುಗ್ಧ ಭಕ್ತಿಗೆ ಹಮುಮಂತ ಬಾಯಿ ತೆಗೆದು ಎಲ್ಲವನ್ನೂ ತಿಂದುಬಿಟ್ಟನಂತೆ!! ಅವತ್ತು ಊಟದ ಸಮಯದಲ್ಲಿ ದಾಸರು ಯಂತ್ರೋದ್ಧಾರನ ನೈವೇದ್ಯ ಎಲ್ಲಿ ಎಂದಾಗ ಮಧ್ವಪತಿ ನಡೆದುದನ್ನು ಹೇಳಿದರೆ ಎಲ್ಲರೂ ಗೊಳ್ಳನೆ ನಕ್ಕರಂತೆ. ಮಧ್ವಪತಿಗೆ ಅವಮಾನ ಎನಿಸಿದರೆ ದಾಸರು ಬಾರಪ್ಪ ನನ್ನ ಮುಂದೊಮ್ಮೆ ತಿನ್ನಿಸು ಅಂತ ಮತ್ತೆ ಯಂತ್ರೋದ್ಧಾರನ ಗುಡಿಗೆ ಹೋದರಂತೆ. ಈ ಬಾರಿ ಸುಲಭದ ಪಟ್ಟಿಗೆ ಬಾಯ್ಬಿಡದ ಹನುಮಪ್ಪ ಕಡೆಗೆ ಮಧ್ವಪತಿ ನಮ್ಮಪ್ಪನ ಮುಂದೆ ನನ್ನ ಅವಮಾನ ಮಾಡುವೆಯಾ ಎಂದೆಲ್ಲ ಮತ್ತೆ ಕೇಳಿಕೊಂಡಾಗ ದಾಸರ ಮುಂದೆಯೇ ಮತ್ತೊಮ್ಮೆ ಮಧ್ವಪತಿಯ ಕೈಯಾರೆ ತಿಂದನಂತೆ 🙂

ವ್ಯಾಸರಾಯರು ಮಾಡಿದ ಯಂತ್ರೋದ್ಧಾರಕ ಸ್ತೋತ್ರ:

ನಮಾಮಿ ದೂತಂ ರಾಮಸ್ಯ ಸುಖದಂ ಚ ಸುರದ್ರುಮಮ್
ಪೀನವೃತ್ತ ಮಹಾಬಾಹುಮ್ ಸರ್ವ ಶತ್ರು ನಿವಾರಣಮ್ ||

ನಾನಾ ರತ್ನ ಸಮಾಯುಕ್ತಾ ಕುಂಡಲಾದಿ ವಿರಾಜಿತಮ್
ಸರ್ವದಾಭೀಷ್ಟ ದಾತಾರಮ್ ಸತಾಮ್ ವೈಧೃಢಮಾಹವೇ ||

ವಾಸಿನಾಮ್ ಚಕ್ರತೀರ್ಥಸ್ಯ ದಕ್ಷಿಣಸ್ಯ ಗಿರೌ ಸದಾ
ತುಂಗಾಂಬೋಧಿ ತರಂಗಸ್ಯ ವಾತೇನ ಪರಿಶೋಭಿತೆ ||

ನಾನಾದೇಶಗತೈಃ ಸದ್ಭಿಃ ಸೇವ್ಯಮಾನಮ್ ನೃಪೋತ್ತಮೈಃ
ಧೂಪದೀಪಾದಿ ನೈವೇದ್ಯಃ ಪಂಚಖಾದ್ಯೈಶ್ಚ ಶಕ್ತಿತಃ ||

ಭಜಾಮಿ ಶ್ರೀ ಹನುಮಂತಮ್ ಹೇಮಕಾಂತಿ ಸಮಪ್ರಭಮ್
ಶ್ರೀಮದ್ವ್ಯಾಸತೀರ್ಥ ಯತೀಂದ್ರಾಣಾಮ್ ಪೂಜಿತಮ್ ಪ್ರಣೀಧಾನಿತಃ ||

ತ್ರಿವಾರೆ ಯಃಪಠೇತ್ ನಿತ್ಯಮ್ ಸ್ತೋತ್ರಮ್ ಭಕ್ತ್ಯಾ ದ್ವಿಜೋತ್ತಮಃ
ವಾಂಛಿತಮ್ ಲಭತೇಭೀಷ್ಠಮ್ ಷಣ್ಮಾಸಾಭ್ಯಂತರೇ ಖಲು ||

ಪುತ್ರಾರ್ಥಿ ಲಭತೇ ಪುತ್ರಮ್ ವಿದ್ಯಾರ್ಥಿ ಲಭತೇ ವಿದ್ಯಾ
ಯಶೋರ್ಥೀ ಲಭತೇ ಯಶಃ ಧನಾರ್ಥೀ ಲಭತೇ ಧನಮ್ ||

ಸರ್ವಥಾ ನಾಸ್ತಿ ಸಂದೇಹಃ ಹರಿಃ ಸಾಕ್ಷಾತ್ ಜಗತ್ಪತಿಃ
ಯಃ ಕರೋತ್ಯತ್ರ ಸಂದೇಹಮ್ ಸಃ ಯಾತಿ ನರಕಮ್ ಧ್ರುಮಮ್ ||

||ಶ್ರೀಮದ್ವ್ಯಾಸ ತೀರ್ಥ ಕೃತ ಯಂತ್ರೋದ್ಧಾರಕ ಸ್ತೋತ್ರಮ್ ಸಂಪೂರ್ಣಮ್ ಶ್ರೀ ಕೃಷ್ಣಾರ್ಪಣಮಸ್ತು ||

(ಚಿತ್ರವನ್ನು ಈ ತಾಣದಿಂದ ಇಳಿಸಿಕೊಂಡಿದ್ದೇನೆ. ಅವರ ಒಪ್ಪಿಗೆ ಪಡೆಯದೆ ಇಲ್ಲಿ ಹಾಕಿಕೊಂಡಿದ್ದಕ್ಕೆ ಕ್ಷಮೆ ಕೋರುತ್ತ… ಹಾಗೇ ಇಷ್ಟು ಸೊಗಸಾದ ಚಿತ್ರಕ್ಕಾಗಿ ಅನಂತ ಧನ್ಯವಾದಗಳನ್ನೂ ಅರ್ಪಿಸುತ್ತ..)

Advertisements

7 thoughts on “ನಮಾಮಿ ದೂತಂ ರಾಮಸ್ಯ…

 1. ಅನಿಲ್

  ಆಸಕ್ತಿ ಹುಟ್ಟಿಸಿತು ಈ ಕಥೆ. ಎರಡನೇ ಕಥೆಯದ್ದೇ ಇನ್ನೊಂದು ರೂಪ- ಕೋಳೂರು ಕೊಡಗೂಸು ಕಥೆಯಲ್ಲಿ ಕೇಳಿದ್ದೆ. ಮಧ್ವನವರಾತ್ರಿ ಅನ್ನುವ ಆಚರಣೆ ಇದೆ ಅನ್ನುವುದೂ ಕೂಡ ನನಗೆ ತಿಳಿದಿರಲಿಲ್ಲ! ಈ ಚಕ್ರತೀರ್ಥ ಅನ್ನುವುದೇನು ಪುಷ್ಕರಿಣಿಯೇ? ಅಥವಾ ತುಂಗಭದ್ರಾ ನದಿಯಲ್ಲಿಯೇ ಇರುವ ಸುಳಿಯೇ?

  • ರಾಮಪ್ರಸಾದ್,
   ಮಧ್ವನವರಾತ್ರಿ ಬಗ್ಗೆ ನನಗೆ ಗೊತ್ತಾದದ್ದೂ ಕೆಲವು ವರ್ಷಗಳ ಮುಂಚೆಯಷ್ಟೇ 🙂
   ಕೋಳೂರು ಕೊಡಗೂಸು ಕಥೆ ಏನು, ನಾನು ಕೇಳಿದಂತಿಲ್ಲ.
   ತುಂಗಭದ್ರಾ ನದಿಯಲ್ಲಿನ ಸುಳಿಯನ್ನೇ ಚಕ್ರತೀರ್ಥ/ಚಕ್ರತೀರ್ಥದ ಮಡು ಅನ್ನುತ್ತಾರೆ. ಇದರಲ್ಲಿ ಸಿಲುಕಿದರೆ ಹೊರಬರುವದು ಅತೀ ಕಷ್ಟವಂತೆ. ಭೂತಯ್ಯನ ಮಗ ಅಯ್ಯು ಚಿತ್ರದ ಕೊನೆಯ ದೃಶ್ಯದ ಚಿತ್ರೀಕರಣ ಇದೇ ಮಡುವಿನ ಹತ್ತಿರ ಆದದ್ದೆಂದೂ, ನಟ ವಿಷ್ಣುವರ್ಧನ ಅದರಲ್ಲಿ ಬಿದ್ದು ಅಪಾಯಕ್ಕೆ ಸಿಲುಕಿದ್ದನೆಂದೂ ಕೇಳಿದ್ದೇನೆ ತುಂಬಾ ಹಿಂದೆ. ನಿಜವೋ ಅಂತೆ ಕಂತೆಯ ಕತೆಯೋ ಗೊತ್ತಿಲ್ಲ… ಚಕ್ರತೀರ್ಥದ ಮಡು, ಪುರಂದರ ದಾಸರು ಹಾಗೂ ಅವರ ಕೊನೆ ಮಗ ಮಧ್ವಪತಿಯನ್ನೊಳಗೊಂಡ ಕತೆಯೊಂದಿದೆ (ಪರಶೂ ಶಿಲೆಗೆ ಸಂಬಂಧಿಸಿದ ಕತೆ) ಕೇಳಿದ್ದೀರಾ ?


   ಅನಿಲ

  • ಧನ್ಯವಾದಗಳು ವಿಜಯೇಂದ್ರ ಅವರಿಗೆ. ಉತ್ತರ ಬರೀಲಿಕ್ಕೆ ಸ್ವಲ್ಪ ತಡಾ ಆತು ಕ್ಷಮಿಸಿ. ನೀವು ಮಳ್ಳಿಯವರೇ? ದುಮ್ಮದ್ರಿಯ ಹಳ್ಳೇರಾಯನ ಸ್ಥಳ ಪುರಾಣ ನಿಮಗೆ ಚನ್ನಾಗಿ ಗೊತ್ತಿದ್ದರೆ ಅದನ್ನ ಇಂಟರ್ನೆಟ್ಟಿನಲ್ಲಿ ಹಾಕುವಿರಾ?

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s