‘Between stimulus and response lies the space where there is ultimate freedom’
‘ಪ್ರಚೋದನೆ ಮತ್ತು ಪ್ರತಿಕ್ರಿಯೆಗಳ ನಡುವಿನ ಅವಕಾಶದಲ್ಲಿ ಅಂತಿಮ ಸ್ವಾತಂತ್ರ್ಯವಿದೆ’ ಎನ್ನುವ ಮಾತನ್ನ ಸ್ಟೀವನ್ ಕೋವಿ (Steven Covey) ಯ Seven Habits of Highly Successful People ಪುಸ್ತಕದಲ್ಲಿ ನೀವೂ ಓದಿರಬಹುದು, ಅಥವಾ ಓದಿರುವವರು ಹೇಳಿದ್ದನ್ನ ಕೇಳಿರಬಹುದು. ಅಲ್ಲಿ ಸ್ವಾತಂತ್ರ್ಯವಿರುವದು ಯಾವುದಕ್ಕೆ ಅಂತ ಪ್ರಶ್ನಿಸಿದರೆ ಉತ್ತರ, ‘to choose’. ಪ್ರಚೋದನೆಗೆ ನಮ್ಮ ಪ್ರತಿಕ್ರಿಯೆ ಏನು ಎನ್ನುವದನ್ನ ಆಯ್ದುಕೊಳ್ಳುವ ಸ್ವಾತಂತ್ರ್ಯ ಅಲ್ಲಿದೆ. ಆ ಅವಕಾಶದಲ್ಲಿ ನಮ್ಮ ಪ್ರತಿಕ್ರಿಯೆಯನ್ನ ನಾವು ಆಯ್ದುಕೊಂಡರೆ ಮನುಷ್ಯರು. ಇಲ್ಲದಿದ್ದರೆ? ಪಾವ್ಲಾವನ ನಾಯಿ ಆಗಬಹುದೇನೋ. ಗಂಟೆ ಬಾರಿಸಿದಾಗ ಊಟ ಬರುವದು ಎಂದು ಜೊಲ್ಲು ಸುರಿಸುವದು, ಅಥವಾ ಅಂಗೈಯ ಐ-ಫೋನು ಡಿಂಗ್ ಅಂದಿತು ಅಂತ ಮಧ್ಯರಾತ್ರಿಯಲ್ಲಿ ಫೇಸ್ಬುಕ್ಕಿನ ಲೇಟೆಸ್ಟ್ ಕಮೆಂಟು ನೋಡುವದು!
ನಿಮಿಷಕ್ಕೊಮ್ಮೆ ಮೇಲ್ ನೋಡಬೇಕು, ಚಾಟ್ ವಿಂಡೋದಲ್ಲಿ ಯಾರದ್ದಾದರೂ ಮೆಸೇಜ್ ಬಂತಾ ನೋಡಬೇಕು, ಟ್ವಿಟರಿನಲ್ಲಿ ಹೊಸತೇನು ನೋಡಬೇಕು, ಕೋಡ್ ಕಂಪೈಲ್ ಆಗುವಷ್ಟರಲ್ಲಿ ಅಂತರಜಾಲದ ಸುತ್ತೊಂದ ಹಾಕಬೇಕು. ಪ್ರತಿ ಕ್ಷಣವೂ ಕುಳಿತಲ್ಲಿಂದಲೇ ಕನೆಕ್ಟೆಡ್ ಇರಬೇಕು. ಎಲ್ಲಿ ಏನು ಹೊಸತಾಯಿತೋ ಎನ್ನುವದನ್ನು ತಿಳಿಯುತ್ತಿರಬೇಕು ಎಂದು ಬಯಸುವ ಗೆಳೆಯರೆ, ಪ್ರಚೋದನೆ ಮತ್ತು ಪ್ರತಿಕ್ರಿಯೆಗಳ ನಡುವಿನ ಅವಕಾಶದಲ್ಲಿ ಸ್ವಾತಂತ್ರ್ಯವಿರುವದು. ಸ್ವಾತಂತ್ರ್ಯ ಯಾರಿಗೆ ಬೇಡ? ಆ ಸ್ವಾತಂತ್ರ್ಯದ ಚಲಾವಣೆ ಯಾರಿಗೆ ಬೇಡ? ಬನ್ನಿ ಹಾಗಾದರೆ ನಮ್ಮ ನಮ್ಮ ಐ-ಫೋನು, ಐ-ಪಾಡು, ಆಂಡ್ರಾಯ್ಡುಗಳನ್ನು ಬಳಸೋಣ. ಪುಶ್ ನೋಟಿಫಿಕೇಶನ್ನುಗಳನ್ನ ಎನೇಬಲ್ ಮಾಡೋಣ. ಔಟ್ ಲುಕ್ಕಾದಿ ಇ-ಮೇಲ್ ಕ್ಲೈಂಟುಗಳು ಎ-ಮೇಲು ಬರ್ತಿದ್ದಂತೆಯೇ ತೆರೆಯ ಮೇಲೆ ಅದರ ತುಣುಕ ಮಿಂಚಿಸಲಿ, ಬೇಕಿದ್ದರೆ ಸದ್ದು ಮಾಡಿ ಗಮನವನ್ನು ಸೆಳೆಯಲಿ. ಕ್ಷಣ ಕ್ಷಣವೂ ಪ್ರಚೋದನೆಗಳಿಗೆ ಒಡ್ಡಿಕೊಳ್ಳೋಣ, ಪ್ರತಿ ಪ್ರಚೋದನೆಯಲ್ಲಿ ನಮ್ಮ ಸ್ವಾತಂತ್ರ್ಯವನ್ನು ಚಲಾಯಿಸೋಣ.
ಈ ಎಲ್ಲ ಪ್ರಚೋದನೆಗಳು ಬೇರೆ ಬೇರೆ ಕಡೆ ಬರುತ್ತಿವೆಯೆ? ಅವು ಬಂದಿರುವದು ನಿಮಗೆ ಗೊತ್ತಾಗುತ್ತಿಲ್ಲವಾದ್ದರಿಂದ ನೀವು ಕ್ಷಣ ಕ್ಷಣಕ್ಕೂ ಅಲ್ಟ್-ಟ್ಯಾಬ್ ಬಳಸುವಿರಾ? ಹಾಗಿದ್ದರೆ ಇಕೋ ನೋಡಿ ಇಲ್ಲಿದೆ ಉಪಾಯ. ನಿಮಗೆ ಬೇಕಾಗಿರುವದು ಒಂದು ದೊಡ್ಡ ಮಾನಿಟರ್, ಒಂದು ಸಾಲದಿದ್ದರೆ ಎರಡು, ಇಲ್ಲಾ ನಾಲ್ಕು. ನಿಮ್ಮ ಎಲ್ಲ ಅಪ್ಲಿಕೇಶನ್ನುಗಳನ್ನು ನಿಮ್ಮ ಕಣ್ಣಳತೆಯಲ್ಲೇ ಇಟ್ಟುಕೊಳ್ಳಿ. ಅವು ಸಂದೇಶ ಕೊಡುತ್ತಿದ್ದಂತೆಯೇ ಕಣ್ಣಂಚಿನಲ್ಲಿಯೇ ನೋಡಿ, ನಿಮ್ಮ ಸ್ವಾತಂತ್ರ್ಯವನ್ನು ಚಲಾಯಿಸಿ!









