ಮನಸೇ ಥೋಡಿ ಅನಬನ ರಖನಾ

ಚಂಚಲಂ ಹಿ ಮನಮ್ ಕೃಷ್ಣ ಪ್ರಮಾಥೀನಿ ಬಲವದ್ಧೃಢಮ್
ತಸ್ಯಾಹಂ ನಿಗ್ರಹಂ ಮನ್ಯೇ ವಾಯೋರಿವ ಸುದುಷ್ಕರಮ್ ॥ ಗೀತಾ ೬.೩೪
(ಚಂಚಲವೀ ಮನವು ಕೃಷ್ಣ ಮದ್ದಾನೆಯ ಬಲವುಳ್ಳದ್ದು
ಗಾಳಿಯ ಹಿಡಿದಷ್ಟೇ ಕಷ್ಟವು ಮನವ ತಡೆಯುವದು)

ರಾಹತ್ ಫತೇ ಅಲೀಖಾನ್ ಹಾಡುಗಾರಿಕೆಗೆ ಮೊದಲು ಸೋತದ್ದು ‘ದಿಲ್ ತೋ ಬಚ್ಚಾ ಹೈ ಜೀ’ ಹಾಡನ್ನು ಕೇಳಿದಾಗ. ಗುಲ್ಜಾರ್ ಬರೆದ ಆ ಹಾಡಿನ ಸಾಲುಗಳು ಮತ್ತು ಅವುಗಳ ಅರ್ಥವನ್ನು ಹೊಮ್ಮಿಸುವ ರಾಹತ್ ಫತೇ ಅಲೀಖಾನನ ಹಾಡುಗಾರಿಕೆ ಒಂದಕ್ಕೊಂದು ಪೂರಕವಾಗಿ ಆ ಹಾಡನ್ನ ಮತ್ತೆ ಮತ್ತೆ ಕೇಳುವಂತೆ ಮಾಡಿದವು. ನಂತರದ ದಿನಗಳಲ್ಲಿ ದಬಂಗಿನ ‘ತೆರೆ ಮಸ್ತ್ ಮಸ್ತ್ ದೋ ನೈನ್’ ಕೂಡ ಮನಸೆಳೆದಿತ್ತು. ಯೂಟ್ಯೂಬಿನಲ್ಲಿ ಅದನ್ನು ಹುಡುಕಿ ಎಷ್ಟೋ ಸಲ ಕೇಳಿದೆ.

ರಾಹತ್ ಹಾಡಿರುವ ಹಾಡುಗಳನ್ನೇ ಹುಡುಕಿಕೊಂಡು ಹೋದಾಗ ಸಿಕ್ಕ ಹಾಡು ‘ಆಕ್ರೋಶ್’ ಸಿನೆಮಾದ ‘ಮನ್ ಕೆ ಮತ್ ಪೆ ಮತ್ ಚಲಿಯೆ’. ಇತ್ತೀಚಿನ ದಿನಗಳಲ್ಲಿ ಬಹಳಷ್ಟು ಬಾರಿ ಕೇಳಿರುವ, ಕೇಳುತ್ತಿರುವ ಹಾಡು.

ಮನ್ ಕಿ ಮಂಡಿ ಮನ್ ವ್ಯಪಾರಿ ಮನ ಹಿ ಮನಕಾ ಮೋಲ್ ಕರೆ
ಭೂಲಭಾಲಕೆ ನಫಾ ಮುನಾಫಾ ನೈನ್ ತರಾಜು ತೋಲ ಕರೆ
(ಮನದಂಗಡಿ ಮನವ್ಯಾಪಾರಿ ಮನವೇ ಮನವನಳೆಯುವದು
ಲಾಭಾಲಾಭಗಳ ತಕ್ಕಡಿ ಕಣ್ಣಳತೆಯಲೆ ತೂಗುವದು)

ಎನ್ನುವ ಸಾಲುಗಳು ತಲೆದೂಗಿಸಿದರೆ, ಮುಂದೆ ಬರುವ ಸಾಲುಗಳು ಸೆರೆ ಹಿಡಿದವು.

ಮನ ಕಿ ಮತ ಮೆ ಪ್ಯಾರ್ ಹೈ ಮೆಹೆಂಗಾ ಪ್ರಾನ್ ಟಕೆ ರೂಹ್ ಹೈ ಸಸ್ತೆ
(ಮನಸಿನ ಲೆಕ್ಕದಿ ಒಲವಿಗೆ ಬೆಲೆ ಜೀವಕೆ ಕಾಸು ಆತುಮ ಸೋವಿ)

ಈ ಮುಂದಿನ ಸಾಲುಗಳ ಗುಂಗು ಬಿಡುವದೇ ಇಲ್ಲವೇನೋ!

ಮನಸೇ ಥೋಡಿ ಅನಬನ ರಖನಾ
ಮನಕೆ ಆಗೆ ದರಪನ ರಖನಾ
ಮನವಾ ಶಕಲ ಛುಪಾಲೇಗಾ
(ಮನಸಿಗೆ ಅಂಟದೆ ಬಿಡು
ಮನಸಿನ ಮುಂದೆ ಕನ್ನಡಿ ಇಡು
ಮನಸೆ ಮುಖ ತಪ್ಪಿಸುವದು)

‘ಅನಬನ’ ಶಬ್ದ ನನಗೆ ಹೊಸತು. ಹಾಡಿದ ಸಂದರ್ಭಕ್ಕೆ ಹೊಂದಿಸಿಕೊಂಡು ಅದು ‘detachment’ ಎಂಬರ್ಥದಲ್ಲಿ ಪ್ರಯೋಗವಾಗಿರಬೇಕು ಅನಿಸಿದರೂ ಗೂಗಲೇಶ್ವರನ ಬೆನ್ನು ಹತ್ತಿ ಅದರ ಅರ್ಥವನ್ನು confirm ಮಾಡಿಕೊಳ್ಳುವವರೆಗೂ ಸಮಾಧಾನವಾಗಲಿಲ್ಲ.

ಹಾಡು ಹತ್ತಿಸಿದ ಗುಂಗಿನಿಂದಾಗಿ ಬಹುಷಃ ಸಿನೆಮಾ ಕೂಡ ಚನ್ನಾಗಿರಬಹುದು ಅನಿಸಿ ಆಕ್ರೋಶ್ ಸಿನೆಮಾ ನೋಡಿದೆ. ಮೊದಲ ಹತ್ತು ನಿಮಿಷದಲ್ಲೆ ಇದು ‘Mississipi Burning’ ಚಿತ್ರದ ಭಾರತೀಯ ಅವತರಿಣಿಕೆ ಇದ್ದಂತಿದೆಯಲ್ಲ ಎಂಬ ಅನಿಸಿಕೆ ಮುಂದಿನ ಫ್ರೇಮು ಫ್ರೇಮಿನಲ್ಲೂ ಗಟ್ಟಿಯಾಗತೊಡಗಿದಂತೆ ಆ ಚಿತ್ರದ ಬಗ್ಗೆ ಪಿಚ್ಚೆನಿಸಿತು (ಕತೆಯ ಹಂದರ ಚನ್ನಾಗಿದೆ ಆದರೆ ಅದನ್ನು ಇಂಗ್ಲಿಷ ಸಿನೆಮಾದ ಅವತರಿಣಿಕೆಯಾಗದೆಯೂ ಒಂದು ಒಳ್ಳೆ ಚಿತ್ರವನ್ನಾಗಿ ಮಾಡಬಹುದಿತ್ತು ಅನಿಸಿತು).

ಕೊ.: ಹಾಡಿನ ಸಾಹಿತ್ಯ ಮತ್ತು ಇಂಗ್ಲೀಷ್ ಅನುವಾದ ಇಲ್ಲಿದೆ, ಹಾಡಿನ ಸಾಹಿತ್ಯ ಇರ್ಷಾದ್ ಕಮಿಲ್ ಅವರದು. ಕೊ.ಕೊ.: ಇದನ್ನು ಓದಿದ ನನ್ನ ಹೆಂಡತಿಯ ಅನಿಸಿಕೆಯಂತೆ ಮೊದಲಿಗೆ ಹಾಕಿದ ಗೀತೆಯ ಶ್ಲೋಕದ ಭಾವಾರ್ಥವನ್ನೂ ನನಗೆ ತಿಳಿದ ಮಟ್ಟಿಗೆ ಬರೆದಿರುವೆ.

ಗೋಳಗುಮ್ಮಟ

ರಜನೀಗಂಧಾ ಫೂಲ್ ತುಮ್ಹಾರೆ …’, ಬಹಳ ವರ್ಷಗಳ ಹಿಂದೆ ಟಿವಿಯಲ್ಲಿ ನೋಡಿ/ಕೇಳಿದ ಹಾಡು.  ಆ ಚಿತ್ರ ನೋಡಿದ್ದೆನೋ ಇಲ್ಲವೊ ನೆನಪಿಲ್ಲ ಆದರೆ ಅಮೂಲ್ ಪಾಲೇಕರ್ ಒಳ್ಳೆ ಖುಷಿ ಮೂಡಿನಲ್ಲಿ ಹೂವಿನ ಗೊಂಚಲು ಹಿಡಿದುಕೊಂಡು ಬಂದು ತನ್ನ ಗೆಳತಿಯ ಮನೆಯ ಹೂದಾನಿಯಲ್ಲಿ ಇಡುವ ದೃಶ್ಯ ಮತ್ತು ಹಾಗೇ ಹಿನ್ನೆಯಲ್ಲಿ ಕೇಳಿ ಬರುವ ಆ ಹಾಡು ಅದು ಹೇಗೋ ನೆನಪಿನಲ್ಲುಳಿದುಬಿಟ್ಟಿವೆ. ಇತ್ತೀಚೆಗೆ ಸ್ಯಾನ್ ಹೋಸೆ ಲೈಬ್ರರಿಯಲ್ಲಿ ’ರಜನೀಗಂಧಾ’ ಡಿವಿಡಿ ಸಿಕ್ಕಾಗ ಮನೆಗೆ ತಂದು ನೋಡಿದೆ. ನಾಯಕಿಯ ಸುತ್ತ ಸುತ್ತುವ ಕತೆ ಇಷ್ಟ ಆಯಿತು.

ಕಾಲೇಜು ದಿನಗಳ ಒಬ್ಬ ಗೆಳೆಯ ತನಗೂ ಮನೆಯವರಿಗೂ ಹತ್ತಿರವಾಗಿ ತನ್ನ ಮದುವೆ ಮಾಡಿಕೊ ಎಂದಾಗ ಮನಸ್ವಿ ’ಹೂಂ’ ಅಂದಿದ್ದಾಳೆ. ಯಾವುದೋ ಇಂಟರ್ವ್ಯೂಗೆಂದು ಮುಂಬೈಗೆ ಹೋದವಳಿಗೆ ಅವಳ ’ಮೊದಲ ಪ್ರೇಮ’ವಾಗಿದ್ದ ಹುಡುಗ ಸಿಗುತ್ತಾನೆ. ಎಷ್ಟೋ ದಿನಗಳಿಂದ ಮಾತಿಲ್ಲದಿದ್ದರೂ ಅದೆಲ್ಲ ನೆನಪಿನಲ್ಲಿ ಇಲ್ಲ ಎನ್ನುವಂತೆ ಅವಳೊಡನೆ ವ್ಯವಹರಿಸುತ್ತಾನೆ. ಪ್ರೇಮಿಯಾಗಿದ್ದಾಗಿನ ದಿನದ ಸಲಿಗೆ ತೋರುವದಿಲ್ಲವಾದರೂ ಅರಿಯದ ಊರಿನಲ್ಲಿ ಅವಳ ದೇಖರೇಖಿ ನೋಡಿಕೊಳ್ಳುವದರಲ್ಲಿ ಯಾವುದೇ ಕಸುರು ಉಳಿಸುವದಿಲ್ಲ. ರೆಗ್ಯುಲರ್ ಆಗಿ ಅವಳಿದ್ದ ಇನ್ನೊಬ್ಬ ಗೆಳತಿಯ ಮನೆಗೆ ಬರುತ್ತಾನೆ, ಹೇಳಿದ ಸಮಯಕ್ಕೆ ಬರುತ್ತಾನೆ, ಅವಳ ಕಡೆ ಗಮನ ಕೊಡುತ್ತಾನೆ, ಅವಳಿಗೆ ಊರು ಸುತ್ತಿಸುತ್ತಾನೆ, ಅವಳ ಇಂಟರ್ವ್ಯೂಗೆ ವಶೀಲಿ ಹಚ್ಚುವದನ್ನೂ ಮಾಡುತ್ತಾನೆ. ಇದೆಲ್ಲ ನೋಡುತ್ತ ನಾಯಕಿಯ ಮನಸ್ಸಿನಲ್ಲಿ ಹಳೆಯ ಪ್ರೇಮ ಮತ್ತೆ ಹೊಸದಾಗತೊಡಗುತ್ತದೆ.  ಹಳೆಯ ಪ್ರೇಮಿಯ ಇಂದಿನ ನಡೆಯಲ್ಲಿ ಅಂದಿನ ಪ್ರೇಮವನ್ನು ಕಾಣಲಾರಂಭಿಸುತ್ತಾಳೆ. ಯಾವ ಕ್ಷಣದಲ್ಲಿ ಅವನು ಮತ್ತೆ ತನ್ನನ್ನು ಪ್ರೇಮಿಸುತ್ತಿರುವದಾಗಿ ಹೇಳುತ್ತಾನೋ ಎಂದು ಕಾಯತೊಡಗುತ್ತಾಳೆ. ಅವನ ಒಂದು ಪ್ರೇಮದ ಮಾತಿಗೆ ನಿರ್ಧರಿಸಿದ ಮದುವೆಯನ್ನೂ ಬಿಟ್ಟು ಬರಲು ಸಿದ್ಧವಾಗಿ ಕೂತಿರುತ್ತಾಳೆ. ಕೊನೆಯ ಕ್ಷಣದವರೆಗೂ, ಅವಳಿದ್ದ ರೈಲು ಮುಂಬೈ ಬಿಟ್ಟು ಮತ್ತೆ ದಿಲ್ಲಿಗೆ ಹೊರಡುವ ಕ್ಷಣದವರೆಗೂ ಕಾಯುತ್ತಾಳೆ, ಅವಳೇ ಎಲ್ಲಿ ಹೇಳಿ ಬಿಡುತ್ತಾಳೊ ಅನಿಸುವಂತೆ ಕಾಯುತ್ತಾಳೆ. ಆದರೆ ಅವನು ಹೇಳುವದಿಲ್ಲ.

ಅವನಿಗೂ ಇಷ್ಟವಿತ್ತೆ? ನಮಗೆ ಗೊತ್ತಾಗುವದಿಲ್ಲ. ಎಲ್ಲ ರೀತಿಯ ಕೇರ್ ತೆಗೆದುಕೊಂಡರೂ ಪ್ರೇಮವಿದೆಯೇ ಎಂಬ ಸುಳಿವು ಕೊಡುವದಿಲ್ಲ, ಬಾಯಿ ಬಿಟ್ಟು ಹೇಳುವದಿಲ್ಲ. ಅವಳಿಗಾಗಿ ಅಷ್ಟು ಸಮಯ ಮೀಸಲಿಟ್ಟಿದ್ದೇಕೆ? ಮುಂಬೈಗೆ ಬಂದ ಹಳೆಯ ಗೆಳತಿಗೆ ತೊಂದರೆಯಾಗದಂತೆ ನೋಡಿಕೊಳ್ಳುವ ಕರ್ತವ್ಯವನ್ನಷ್ಟೇ ನೆರವೇರಿಸಿದನೆ? ಬಹುಷಃ.

ರಜನೀಗಂಧಾದ ನಾಯಕಿಯ ತೊಳಲಾಟವನ್ನ ನೋಡುವಾಗ ಖಾಸನೀಸರ ಕತೆ ’ಮಂದಿಯ ರಹಸ್ಯ’ದ ಮಂದಾಕಿನಿ ನೆನಪಾದಳು. ಚಿಕ್ಕಂದಿನಿಂದ ತನ್ನ ತಾಯಿಯ ತಮ್ಮ ವಾಸು ಬಗ್ಗೆ ಕನಸು ಕಾಣುತ್ತ ಬೆಳೆದ ಮಂದಾಕಿನಿಯ ತಲೆಯಲ್ಲಿ ಯಾವಾಗಲೂ ಅವನದೇ ಧ್ಯಾನ. ಯಾವುದೇ ಪ್ರೇಮ ಕತೆಯನ್ನು ಕೇಳುವಾಗಲೂ ಅದು ತನ್ನ ಮತ್ತು ಅವನ ಕತೆಯಾಗಿಯೇ ತೋರುವದು. ಅವಳಪ್ಪನಿಗೆ ಬಿಜಾಪುರಕ್ಕೆ ವರ್ಗವಾದ ಮೇಲೆ ಅಲ್ಲಿನ ಗೋಳಗುಮ್ಮಟ ಅವಳ ಮೆಚ್ಚಿನ ಸ್ಥಳವಾಗಿದೆ. ಮನೆಯವರೆಲ್ಲರ ಜೊತೆಗೆ ಅಲ್ಲಿಗೆ ಹೋದಾಗ ವಾಸುವೂ ಬಂದಿದ್ದ.  ನುಡಿದದ್ದನ್ನ ತಿರು ತಿರುಗಿ ಮಾರ್ನುಡಿಯುವ ಆ ಗುಮ್ಮಟದಲ್ಲಿ ಅವನ ಹೆಸರನ್ನ ಕರೆದಿದ್ದಾಳೆ. ನೋಡಲು ಅಷ್ಟೇನು ಸುಂದರಿಯಲ್ಲದ, ಓದು ಬರಹದಲ್ಲೂ ಹಿಂದುಳಿದ, ಹಳ್ಳಿಯ ಹುಡುಗಿ ಮಂದಿಯನ್ನ ಮದುವೆಯಾಗಲು ಮುಂಬೈ ನಗರವಾಸಿಯಾದ ವಾಸು ಒಪ್ಪುವದಿಲ್ಲ.

ಇಲ್ಲದ್ದನ್ನ ಊಹಿಸಿಕೊಂಡು ಅದೇ ನಿಜವಾಗಲಿ ಎಂದು ಆಶಿಸುವ ಇಬ್ಬರ ಕತೆಯ ಎಳೆ ಒಂದೇ ರಿತಿಯದ್ದು. ಚಿಕ್ಕ ಚಿಕ್ಕ ಘಟನೆಗಳ ಮೂಲಕ ಇಬ್ಬರ ಮನಸ್ಸಿನಲ್ಲಿ ಪ್ರೇಮ ಪಲ್ಲವವಾಗುತ್ತ ಹೋಗುತ್ತದೆ. ತಮ್ಮನ್ನು ತಾವೇ ಪ್ರೋಗ್ರಾಮ್ ಮಾಡಿಕೊಳ್ಳುತ್ತ ಹೋಗುತ್ತಾರೆ. ಬೆಳೆಯುವ ದಿನಗಳಲ್ಲಿನ ಸಾಮಾನ್ಯವೆನಿಸುವ ಘಟನೆಗಳ ಮೂಲಕ ವಾಸು ಮಂದಾಕಿನಿಯ ಮನಸ್ಸಿನಲ್ಲಿ ನಿಂತರೆ, ರಜನೀಗಂಧಾದ ದೀಪಾಳ ಮನಸ್ಸಿನಲ್ಲಿ ಹಳೆಯ ಪ್ರೇಮಿ ನವೀನ್ ಈಗಣ ಸಂಜಯನಿಗಿಂತ ಮೇಲಾಗಿ ಕಾಣುತ್ತ ಹೋಗುತ್ತಾನೆ. ಗೆಳೆಯರು ಸಿಕ್ಕರೆ ಎಲ್ಲೆಂದರಲ್ಲಿ ತನ್ನನ್ನು ಮರೆಯುವ, ತಾನು ಮುತುವರ್ಜಿಯಿಂದ ಮಾಡಿಕೊಂಡ ಅಲಂಕಾರಕ್ಕಾಗಿ ತನಗೊಂದು ಚಿಕ್ಕ ಕಾಂಪ್ಲಿಮೆಂಟನ್ನೂ ಕೊಡದ ಸಂಜಯ ಗೌಣವಾಗುತ್ತ ಹೋಗುತ್ತಾನೆ. ಒಟ್ಟಾರೆ ಇಬ್ಬರೂ ತಾವು ಕಾಣಬೇಕು ಅಂದುಕೊಂಡಿದ್ದನ್ನಷ್ಟೇ ಕಾಣುತ್ತ ಅದರಲ್ಲೇ ಮುಳುಗಿರುತ್ತಾರೆ. ಚಿತ್ರದ ದೀಪಾಳಿಗಾಗಿ ಸಂಜಯ ಇನ್ನೂ ಇರುತ್ತಾನೆ ಆದರೆ ಮಂದಾಕಿನಿ “ಗೋಳಗುಮ್ಮಟದಲ್ಲಿ ಒಂದು ಧ್ವನಿ ಹತ್ತಾದರೆ ತಪ್ಪು ಅದರದ್ದೇ ಹೊರತು ಮಾತನಾಡಿದವರದಲ್ಲ” ಎನ್ನುವದನ್ನ ಮಾತ್ರ ಕಂಡುಕೊಳ್ಳುತ್ತಾಳೆ.